|ಜಗದೀಶ ಬುರ್ಲಬಡ್ಡಿ
ಹವಾಮಾನ ಬದಲಾವಣೆಯ ಭೀತಿಯ ನಡುವೆಯೇ ಯೂಕ್ರೇನ್- ರಷ್ಯಾದ ಯುದ್ಧವು ಕಚ್ಚಾ ತೈಲ, ಖಾದ್ಯ ತೈಲ ಮತ್ತು ಗೋಧಿಯ ಜಾಗತಿಕ ಬೆಲೆಗಳಲ್ಲಿ ಅಗಾಧವಾದ ಹೆಚ್ಚಳಕ್ಕೆ ಕಾರಣವಾಗಿದೆ. ರಷ್ಯಾ- ಯೂಕ್ರೇನ್ ಯುದ್ಧವು ಮುಂದುವರಿಯುತ್ತಿರುವುದರಿಂದ ಹಲವಾರು ಅಭಿವೃದ್ಧಿ ಹೊಂದಿದ ದೇಶಗಳ ಆರ್ಥಿಕತೆಯು ಹಿಂಜರಿತದ ಪ್ರವೃತ್ತಿ ಎದುರಿಸುತ್ತಿದೆ. ಅನಿಶ್ಚಿತತೆಯ ಈ ಸನ್ನಿವೇಶದಲ್ಲಿ ಭಾರತದ ರಫ್ತು ಕೂಡ ಕುಸಿಯುತ್ತಿದೆ. ಹೀಗಾಗಿ, ಅನುದಾನ ಹಂಚಿಕೆಯಲ್ಲಿ ಕೃಷಿಗೆ ಆದ್ಯತೆ ಸಿಗುವುದೇ ಎಂಬ ಪ್ರಶ್ನೆ ಎದುರಾಗಿದೆ.
2022-23ರ ಬಜೆಟ್​ನಲ್ಲಿ ಪಿಎಂ ಕಿಸಾನ್​ಗೆ 65,000 ಕೋಟಿ ರೂ.ಗಳನ್ನು ಮೀಸಲಿಡಲಾಗಿತ್ತು. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಗೆ (ಪಿಎಂಎಫ್​ಬಿವೈ) 16,000 ಕೋಟಿ ರೂ.ಗಳಷ್ಟು ಪ್ರೀಮಿಯಂ ಸಬ್ಸಿಡಿ ಒದಗಿಸಲಾಗಿತ್ತು. ಅಲ್ಪಾವಧಿ ಸಾಲಗಳ ಮೇಲಿನ ಬಡ್ಡಿ ಸಬ್ಸಿಡಿಗಾಗಿ 19,468 ಕೋಟಿ ರೂ. ಮಂಜೂರು ಮಾಡಲಾಗಿತ್ತು. 2023-24ನೇ ಸಾಲಿನ ಬಜೆಟ್​ನಲ್ಲಿ ಈ ಯೋಜನೆಗಳ ಹಂಚಿಕೆಯಲ್ಲಿ ಕಡಿತವಾಗುವ ಸಾಧ್ಯತೆಯಿಲ್ಲ.
2022-23ರಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಭತ್ತ ಮತ್ತು ಗೋಧಿ ಬೆಳೆಗಳು ಹಾನಿಗೊಳಗಾಗಿದ್ದವು. ಇದರ ಪರಿಣಾಮವಾಗಿ ಆರ್ಥಿಕತೆಗೆ ಕೃಷಿ ಕೊಡುಗೆ ಇಳಿಮುಖವಾಗಿದೆ. ಕೃಷಿ ಕ್ಷೇತ್ರದ ಒಟ್ಟಾರೆ ಆರ್ಥಿಕತೆಯಲ್ಲಿ ಬೆಳೆ ವಲಯದ ಪಾಲು ಶೇ. 55.3ರಷ್ಟು ಇದ್ದರೆ, ಬೆಳೆಯೇತರ ವಲಯ ಶೇ. 44.7ರಷ್ಟು ಕೊಡುಗೆ ನೀಡಿದೆ. ಬಜೆಟ್​ನಲ್ಲಿ ಇದನ್ನು ಗಣನೆಗೆ ತೆಗೆದುಕೊಂಡು ಬೆಳೆಯೇತರ ವಲಯವಾದ ತೋಟಗಾರಿಕೆ, ಮೀನುಗಾರಿಕೆ, ಕೋಳಿ, ಪಶುಸಂಗೋಪನೆ ಮತ್ತು ಮಾಂಸ ಉಪ ವಲಯಗಳಿಗೆ ಹೆಚ್ಚಿನ ಅನುದಾನ ಒದಗಿಸಬೇಕಾಗಿದೆ ಎಂಬುದು ತಜ್ಞರ ಅಭಿಮತ.
ಕೃಷಿ ಕ್ಷೇತ್ರದಲ್ಲಿ ಬೆಳೆಯೇತರ ಪಾಲು ವರ್ಧನೆ ಆಗುತ್ತಿರುವುದು ಗ್ರಾಮೀಣ ಭಾರತದ ಕುಟುಂಬಗಳ ಕೃಷಿ ಮನೆಗಳು, ಭೂಮಿ ಮತ್ತು ಜಾನುವಾರು ಹಿಡುವಳಿಗಳ ಪರಿಸ್ಥಿತಿ ಮೌಲ್ಯಮಾಪನ ಸಮೀಕ್ಷೆ 2019 ರಲ್ಲಿಯೂ ಖಚಿತವಾಗಿದೆ. ಈ ಸಮೀಕ್ಷೆ ಪ್ರಕಾರ, ಒಂದು ಕೃಷಿ ಕುಟುಂಬವು ಸರಾಸರಿಯಾಗಿ ತಿಂಗಳಿಗೆ ರೂ 10,218 ಗಳಿಸಿದೆ. ಇದರಲ್ಲಿ 3,798 ರೂ. ಬೆಳೆ ಉತ್ಪಾದನೆಯಿಂದ ಬಂದಿದ್ದರೆ, ಪಶುಸಂಗೋಪನೆಯಿಂದ 1,582 ರೂ. ದೊರೆತಿದೆ. ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಪ್ರವರ್ತನೆ ಮತ್ತು ಅನುಕೂಲ) ಕಾಯ್ದೆ 2020 ರ ಜಾರಿಯ ಉದ್ದೇಶಗಳಲ್ಲಿ ಪ್ರಮುಖವಾದುದು ಎಪಿಎಂಸಿಗಳ ಹೊರಗೆ ಕೃಷಿ ಉತ್ಪನ್ನಗಳ ವ್ಯಾಪಾರವನ್ನು ಸುಗಮಗೊಳಿಸುವುದು ಮತ್ತು ಪೋ›ತ್ಸಾಹಿಸುವುದು ಆಗಿತ್ತು. ತೀವ್ರ ವಿರೋಧ ಹಾಗೂ ಹೋರಾಟದ ಹಿನ್ನೆಲೆಯಲ್ಲಿ ಈ ಕಾನೂನನ್ನು ರದ್ದುಗೊಳಿಸಲಾಗಿದೆ. 2006ರಲ್ಲಿ ಎಪಿಎಂಸಿಗಳನ್ನು ರದ್ದುಪಡಿಸಿದ ಬಿಹಾರ ರಾಜ್ಯ ಕೂಡ ಕೃಷಿ ಉತ್ಪನ್ನಗಳಿಗಾಗಿ ಎಪಿಎಂಸಿಗಳನ್ನು ಸ್ಥಾಪಿಸಲು ಕಾನೂನನ್ನು ಜಾರಿಗೆ ತರಲು ಯೋಚಿಸುತ್ತಿದೆ ಎನ್ನಲಾಗಿದೆ.
ಇದರರ್ಥ, ರೈತರಿಗೆ ನ್ಯಾಯಯುತ ಬೆಲೆ ಒದಗಿಸುವಲ್ಲಿ ಎಪಿಎಂಸಿಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ ಎಂದು ರಾಜ್ಯ ಸರ್ಕಾರಗಳು ಭಾವಿಸುತ್ತವೆ ಎಂಬುದು. ಹೀಗಾಗಿ, ಎಪಿಎಂಸಿಗಳಲ್ಲಿ ಮೂಲಸೌಕರ್ಯಗಳನ್ನು ನವೀಕರಿಸಲು ಹೂಡಿಕೆ ಮಾಡುವ ಅಗತ್ಯವಿದೆ. ಕೆಲವು ರಾಜ್ಯಗಳಲ್ಲಿ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಅಡಿಯಲ್ಲಿ ಪರೀಕ್ಷಿಸುವ, ಒಣಗಿಸುವ ಯಂತ್ರಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರಗಳು ಎಪಿಎಂಸಿಗಳಿಗೆ ಹಣವನ್ನು ಒದಗಿಸಿವೆ. ಆದರೆ, ಅಭಿವೃದ್ಧಿ ಹೊಂದಿದ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿ ಸಹ ಡ್ರೖೆಯರ್​ಗಳು, ವಿಂಗಡಣೆ ಯಂತ್ರಗಳು ಮತ್ತು ಪರೀಕ್ಷಾ ಉಪಕರಣಗಳು ಲಭ್ಯವಿಲ್ಲ. ಕೆಲವೇ ಎಪಿಎಂಸಿಗಳು ಕೋಲ್ಡ್ ಸ್ಟೋರೇಜ್ ಸೌಲಭ್ಯಗಳನ್ನು ಹೊಂದಿವೆ. ಈ ಬಜೆಟ್​ನಲ್ಲಿ ಎಪಿಎಂಸಿಗಳಿಗೆ ಮೂಲಸೌಕರ್ಯಗಳನ್ನು ಸುಧಾರಿಸಲು ಯೋಜನೆಯನ್ನು ಪ್ರಕಟಿಸುವ ಭರವಸೆ ಇದೆ.
ಮೀನುಗಾರಿಕೆ, ಮಾಂಸ ಮತ್ತು ಕೋಳಿಗಳಿಗೆ, ಅವುಗಳ ವ್ಯಾಪಾರ ನಡೆಯುವ ಹೆಚ್ಚಿನ ಮಂಡಿಗಳಲ್ಲಿ ಮೂಲಸೌಕರ್ಯಗಳು ತುಂಬಾ ಕಳಪೆಯಾಗಿವೆ. ಮೀನುಗಾರಿಕೆ ಇಲಾಖೆಯು ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿಎಂಎಂಎಸ್​ವೈ) ಜಾರಿಗೊಳಿಸಿದೆ. ಇದರ ಅಡಿಯಲ್ಲಿ 2020-21 ರಿಂದ 2024-25 ರವರೆಗಿನ 5 ವರ್ಷಗಳ ಅವಧಿಯಲ್ಲಿ 20,050 ಕೋಟಿ ರೂ.ಗಳನ್ನು ಒದಗಿಸುವುದಾಗಿ ಘೊಷಿಸಲಾಗಿದೆ. 2018-19 ರಲ್ಲಿ 1.375 ಕೋಟಿ ಮೆಟ್ರಿಕ್ ಟನ್​ಗಳಿಂದ 2024-25 ರ ವೇಳೆಗೆ 2.2 ಕೋಟಿ ಮೆಟ್ರಿಕ್ ಟನ್​ಗಳಿಗೆ ಮೀನು ಉತ್ಪಾದನೆ ಹೆಚ್ಚಿಸುವುದು ಇದರ ಉದ್ದೇಶವಾಗಿತ್ತು. ಜಲಕೃಷಿಯ ಉತ್ಪಾದಕತೆಯನ್ನು ಪ್ರತಿ ಹೆಕ್ಟೇರ್​ಗೆ 3 ಟನ್​ಗಳಿಂದ 5 ಟನ್​ಗಳಿಗೆ ಹೆಚ್ಚಿಸಲು ಪ್ರಯತ್ನಿಸಲಾಯಿತು. ಈ ಕ್ರಮಗಳು ತಲಾ ಮೀನಿನ ಬಳಕೆ 5 ಕೆಜಿಯಿಂದ 12 ಕೆಜಿಗೆ ಹೆಚ್ಚಿಸುವ ನಿರೀಕ್ಷೆಯಿದೆ. ಮೀನುಗಾರಿಕೆ ಕ್ಷೇತ್ರವು 2.8 ಕೋಟಿ ಜನರಿಗೆ ಜೀವನೋಪಾಯವನ್ನು ಒದಗಿಸುತ್ತಿದೆ.
ಭಾರತದ ಕೃಷಿ ವಲಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡಲಾಗುತ್ತಿಲ್ಲ. ಭಾರತದ ಒಟ್ಟಾರೆ ಕೃಷಿ ಆದಾಯದ ಪೈಕಿ ಸಂಶೋಧನೆಗೆ ವ್ಯಯ ಮಾಡುತ್ತಿರುವುದು ಶೇ. 0.35ಕ್ಕಿಂತ ಕಡಿಮೆ. ಚೀನಾದಲ್ಲಿ ಇದು ಶೇ. 0.8ರಷ್ಟು ಇದೆ. ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹಣ ಹೂಡಿದರೆ ಕೃಷಿ ಆದಾಯ ಗಮನಾರ್ಹವಾಗಿ ಹೆಚ್ಚುತ್ತದೆ ಎಂಬುದಕ್ಕೆ ಚೀನಾ ಉದಾಹರಣೆಯಾಗಿದೆ. ಜಗತ್ತಿನಲ್ಲಿ ಅತಿಹೆಚ್ಚು ಆಹಾರ ಉತ್ಪಾದನೆ ಹಾಗೂ ಕೃಷಿ ಆದಾಯ ಗಳಿಸುವುದರಲ್ಲಿ ಚೀನಾ ಮೊದಲ ಸ್ಥಾನದಲ್ಲಿದೆ. ಜಗತ್ತಿನ ಒಟ್ಟಾರೆ ಬಿತ್ತನೆ ಕ್ಷೇತ್ರದಲ್ಲಿ ಚೀನಾದ ಪಾಲು ಶೇ. 10ರಷ್ಟಿದೆ. ಆದರೆ, ಒಟ್ಟಾರೆ ಜಾಗತಿಕ ಕೃಷಿ ಆದಾಯದಲ್ಲಿ ಅದರ ಪಾಲು ಶೇ. 25ಕ್ಕಿಂತ ಅಧಿಕವಾಗಿದೆ. ಚೀನಾದ ಒಟ್ಟು ಬಿತ್ತನೆಯ ಪ್ರದೇಶವು 16.6 ಕೋಟಿ ಹೆಕ್ಟೇರ್ ಇದ್ದರೆ, ಭಾರತದ ಒಟ್ಟು ಬಿತ್ತನೆ ಪ್ರದೇಶ 19.8 ಕೋಟಿ ಹೆಕ್ಟೇರ್ ಇದೆ. ಆದರೆ, ಚೀನಾವು ವಾರ್ಷಿಕವಾಗಿ 1,367 ಶತಕೋಟಿ ಡಾಲರ್ (1,11,46,210 ಕೋಟಿ ರೂಪಾಯಿ) ಮೌಲ್ಯದ ಕೃಷಿ ಉತ್ಪಾದನೆ ಮಾಡಿದರೆ, ಭಾರತದ ಕೃಷಿ ಉತ್ಪಾದನೆ 407 ಶತಕೋಟಿ ಡಾಲರ್ (33,18,586 ಕೋಟಿ ರೂಪಾಯಿ) ಮಾತ್ರವಾಗಿದೆ.
ಕೃಷಿ ಕ್ಷೇತ್ರದ ಬೆಳವಣಿಗೆ ಬರೀ ಶೇ. 3.5:ಈಗಲೂ ದೇಶದ ಶೇ. 58ರಷ್ಟು ಜನರ ಜೀವನೋಪಾಯವು ಕೃಷಿ ಕ್ಷೇತ್ರವನ್ನು ಅವಲಂಬಿಸಿದೆೆ. ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಅಡಿಯಲ್ಲಿ ರಾಷ್ಟ್ರೀಯ ಅಂಕಿಅಂಶ ಕಚೇರಿ ಈಚೆಗೆ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಪ್ರಸಕ್ತ ಹಣಕಾಸು ವರ್ಷದಲ್ಲಿ ಕೃಷಿ ವಲಯ (ಅರಣ್ಯ ಮತ್ತು ಮೀನುಗಾರಿಕೆ ಸೇರಿದಂತೆ) 3.5 ಪ್ರತಿಶತದಷ್ಟು ಬೆಳೆಯುವ ನಿರೀಕ್ಷೆಯಿದೆ. 2021-22 ನೇ ಹಣಕಾಸು ವರ್ಷದಲ್ಲಿ ಇದು ಶೇ. 3ರಷ್ಟು ಬೆಳವಣಿಗೆ ಕಂಡಿದೆ. ಆದರೆ, 2022-23ನೇ ಸಾಲಿನಲ್ಲಿ ಒಟ್ಟಾರೆ ಜಿಡಿಪಿ (ಒಟ್ಟು ದೇಶೀಯ ಉತ್ಪನ್ನ) ಬೆಳವಣಿಗೆ ಶೇ. 6.8 ಎಂದು ಅಂದಾಜಿಸಲಾಗಿದೆ. ಇತರೆ ವಲಯಗಳಿಗೆ ಹೋಲಿಸಿದರೆ ಕೃಷಿ ಕ್ಷೇತ್ರ ಪ್ರಗತಿ ಕಡಿಮೆ ಇದೆ. ಕನಿಷ್ಠ ಬೆಂಬಲ ಬೆಲೆಗಳ ಮೂಲಕ ಕೃಷಿ ಕ್ಷೇತ್ರಕ್ಕೆ ಸರ್ಕಾರ ಪ್ರೋತ್ಸಾಹ ನೀಡುತ್ತಿದ್ದರೂ ನಿರೀಕ್ಷಿತ ಬೆಳವಣಿಗೆ ಕಂಡುಬರುತ್ತಿಲ್ಲ.
ರಸಗೊಬ್ಬರ ಸಬ್ಸಿಡಿಯಲ್ಲಿ ಹೆಚ್ಚಳ:ನೀರಾವರಿ ಸೌಲಭ್ಯಗಳ ಅಭಿವೃದ್ಧಿ ಮತ್ತು ಬೆಳೆ ವಿಮೆ ಯೋಜನೆಗೆ ಹೆಚ್ಚುವರಿ ಬಜೆಟ್ ಸಂಪನ್ಮೂಲವನ್ನು ಕೇಂದ್ರ ಬಜೆಟ್​ನಲ್ಲಿ ಒದಗಿಸುವ ಸಾಧ್ಯತೆಯಿದೆ. ಪ್ರಸಕ್ತ ವರ್ಷದಲ್ಲಿ ಹೆಚ್ಚಿನ ಕೃಷಿ ಸಾಲ ವಿತರಿಸಲು ಬ್ಯಾಂಕ್​ಗಳು ಮುಂದಾಗುವ ಸಾಧ್ಯತೆಯೂ ಇದೆ. ಜಾಗತಿಕ ರಸಗೊಬ್ಬರ ಬೆಲೆಗಳ ಏರಿಕೆಯ ನಡುವೆ, ಪ್ರಸ್ತುತ ಕೇಂದ್ರ ಬಜೆಟ್​ನಲ್ಲಿ ರಸಗೊಬ್ಬರಗಳ ಸಬ್ಸಿಡಿ ತೀವ್ರವಾಗಿ ಹೆಚ್ಚಾಗುವ ಸಾಧ್ಯತೆಯಿದೆ. ರಸಗೊಬ್ಬರ ವಲಯದ ಸಬ್ಸಿಡಿಯು ಪ್ರಸ್ತುತ 2022-23ನೇ ಸಾಲಿನಲ್ಲಿ 2.5 ಲಕ್ಷ ಕೋಟಿ ರೂಪಾಯಿ ತಲುಪುವ ನಿರೀಕ್ಷೆಯಿದೆ. ಇದು ಹಿಂದಿನ ವರ್ಷಕ್ಕಿಂತ ಅಂದಾಜು ಶೇ. 55ರಷ್ಟು ಹೆಚ್ಚಾಗಿದೆ. ರಸಗೊಬ್ಬರಕ್ಕೆ ಪರ್ಯಾಯವಾದ ಹಾಗೂ ಪರಿಸರ ಸ್ನೇಹಿಯಾದ ನ್ಯಾನೊ ರಸಗೊಬ್ಬರವನ್ನು ದೇಶೀಯವಾಗಿ ಉತ್ಪಾದಿಸಲು ಸರ್ಕಾರ ಪ್ರೋತ್ಸಾಹ ನೀಡಲಿದೆ. ನ್ಯಾನೊ ರಸಗೊಬ್ಬರವು ಮಿತವ್ಯಯಿ ಆಗಿರುವುದರಿಂದ ದೀರ್ಘಕಾಲದಲ್ಲಿ ಬಜೆಟ್ ಹೊರೆಯನ್ನು ತಗ್ಗಿಸಬಹುದಾಗಿದೆ.
ಕೃಷಿ ಉದ್ಯಮದ ನಿರೀಕ್ಷೆಗಳು:ರಸಗೊಬ್ಬರ ಮತ್ತು ಕೃಷಿ; ರಾಸಾಯನಿಕಗಳ ಮೇಲೆ ಹೆಚ್ಚಿನ ಸಬ್ಸಿಡಿ, ಪಶುಸಂಗೋಪನಾ ಕ್ಷೇತ್ರಕ್ಕೆ ಅಗ್ಗದ ಸಾಲ; ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಹೆಚ್ಚಿನ ಅನುದಾನ, ಖಾಸಗಿ ಸಹಭಾಗಿತ್ವದಲ್ಲಿ ಉಗ್ರಾಣ, ಕೋಲ್ಡ್ ಸ್ಟೋರೇಜ್, ಪ್ಯಾಕಿಂಗ್ ಹೌಸ್ ಸ್ಥಾಪನೆಗೆ ಉತ್ತೇಜನ; ಹವಾಮಾನ ಪರಿಸ್ಥಿತಿ, ಅಖಿಲ ಭಾರತ ಬೆಲೆ ಮುಂತಾದ ಮಾಹಿತಿಯ ತ್ವರಿತ ಹಂಚಿಕೆಗೆ ತಂತ್ರಜ್ಞಾನ ಬಳಕೆ.
ಜ. 30ರಿಂದ ಮೂರು ವಾರ ಕಾಲ ಮಾಂಸ ಮಾರಾಟ ನಿಷೇಧ, ಮಾಂಸಾಹಾರಿ ಹೋಟೆಲ್​ಗಳೂ ಕ್ಲೋಸ್; ಎಲ್ಲಿ, ಯಾಕೆ?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 3 =
Remember me
