ನವದೆಹಲಿ:ದೇಶದಲ್ಲಿ ಕರೊನಾ ಪ್ರಕರಣ 10 ಲಕ್ಷ ದಾಟಿರುವ ನಡುವೆಯೇ ಹೊಸ ಆಶಾಕಿರಣವೊಂದು ಮೂಡಿದೆ. ಮೊದಲ ಸ್ವದೇಶಿ ನಿರ್ವಿುತ ಕರೊನಾ ಲಸಿಕೆ ‘ಕೊವ್ಯಾಕ್ಸಿನ್’ ಕ್ಲಿನಿಕಲ್ ಟ್ರಯಲ್​ಗೆ ಸೋಮವಾರ ಚಾಲನೆ ಸಿಗಲಿದೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ನೇತೃತ್ವದ ಯೋಜನೆ ಇದಾಗಿರುವ ಕಾರಣ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗುವ ಭರವಸೆ ಹೆಚ್ಚಿದೆ.
ಭಾರತ್ ಬಯೋಟೆಕ್, ಐಸಿಎಂಆರ್, ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್​ಐವಿ) ಸಹಯೋಗದಲ್ಲಿ ತಯಾರಿಸಿರುವ ಈ ಲಸಿಕೆಯನ್ನು ಮಾನವರ ಮೇಲೆ ಪ್ರಯೋಗ ನಡೆಸಲು ದೆಹಲಿಯ ಏಮ್ಸ್​ನ ಸಮಿತಿ ಭಾನುವಾರ ಅನುಮೋದನೆ ನೀಡಿದೆ. ಪ್ರಯೋಗಕ್ಕೆ ಒಳಪಡಲು ಸ್ವಯಂಸೇವಕರನ್ನು ಆಹ್ವಾನ ಮಾಡಲಾಗಿದೆ. ಸೋಮವಾರದಿಂದ ನೋಂದಣಿ ಆರಂಭವಾಗಲಿದೆ. ಕರೊನಾ ಸೋಂಕು ಇಲ್ಲದ, 18 ರಿಂದ 55 ವರ್ಷದ ನಡುವಿನ ಆರೋಗ್ಯಕರ ವ್ಯಕ್ತಿಗಳನ್ನು ಪ್ರಯೋಗಕ್ಕೆ ಆಯ್ಕೆ ಮಾಡಲಾಗುತ್ತದೆ. ಮೊದಲ ಹಂತದಲ್ಲಿ 375 ಸ್ವಯಂಸೇವಕರ ಮೇಲೆ ಔಷಧ ಪ್ರಯೋಗ ನಡೆಸಲಾಗುತ್ತಿದ್ದು, ಅವರಲ್ಲಿ ಗರಿಷ್ಠ 100 ಮಂದಿ ಏಮ್ಸ್​ನವರೇ ಆಗಿರುತ್ತಾರೆ ಎನ್ನಲಾಗಿದೆ. ಆಗಸ್ಟ್ 15ರ ವೇಳೆಗೆ ಲಸಿಕೆ ಲಭ್ಯವಾಗಲಿದೆ ಎಂದು ಐಸಿಎಂಆರ್ ಈ ಹಿಂದೆ ಹೇಳಿತ್ತು.
ಆರೋಗ್ಯವಂತರ ಮೇಲೆ ಪ್ರಯೋಗ:ಕರೊನಾ ವೈರಸ್ ನಿವಾರಣೆಗಾಗಿ ದೇಶಿಯವಾಗಿ ಸಿದ್ಧಪಡಿಸುತ್ತಿರುವ ‘ಕೊವ್ಯಾಕ್ಸಿನ್’ನ ಮಾನವರ ಮೇಲಿನ ಪ್ರಯೋಗಕ್ಕೆ ಜೀವನರೇಖಾ ಆಸ್ಪತ್ರೆ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಇನ್ನು ಒಂದು ವಾರದೊಳಗೆ ಆಸ್ಪತ್ರೆಯಲ್ಲಿ ಸುಮಾರು 200 ಜನರ ಮೇಲೆ ಕೊವ್ಯಾಕ್ಸಿನ್ ಪ್ರಯೋಗ ನಡೆಯಲಿದೆ. ಇದರ ಪ್ರಯೋಗಕ್ಕೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ದೇಶದ 12 ವೈದ್ಯಕೀಯ ಕೇಂದ್ರಗಳನ್ನು ಆಯ್ಕೆ ಮಾಡಿಕೊಂಡಿದೆ. ಸೋಮವಾರದಿಂದ ಮೊದಲ ಹಂತದಲ್ಲಿ ದೆಹಲಿ, ಪಟನಾ ಹಾಗೂ ಚಂಡಿಗಢದಲ್ಲಿ ಪ್ರಯೋಗ ನಡೆಯಲಿದ್ದು, 2ನೇ ಹಂತದಲ್ಲಿ ಬೆಳಗಾವಿಯ ಜೀವನರೇಖಾ ಆಸ್ಪತ್ರೆಯಲ್ಲಿ ಪ್ರಯೋಗ ಶುರುವಾಗಲಿದೆ. ಐಸಿಎಂಆರ್​ನಿಂದ ಕೊವ್ಯಾಕ್ಸಿನ್ ಬರಲಿದ್ದು, ಶೀಘ್ರದಲ್ಲೇ ನಮ್ಮ ಆಸ್ಪತ್ರೆಯಲ್ಲಿ 200 ಆರೋಗ್ಯವಂತ ಜನರ ಮೇಲೆ ಪ್ರಯೋಗ ನಡೆಯಲಿದೆ. ‘ಕೊವ್ಯಾಕ್ಸಿನ್’ನ ಪ್ರಯೋಗದಿಂದ ಆ ವ್ಯಕ್ತಿಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿದೆಯೇ ಎಂದು ಪರಿಶೀಲಿಸಿ ಬಳಿಕವೇ ಕರೊನಾ ಸೋಂಕಿತರ ಮೇಲೆ ಪ್ರಯೋಗ ಮಾಡುವ ಕುರಿತು ಮುಂದಿನ ಹಂತದ ಪ್ರಕ್ರಿಯೆ ನಡೆಯಲಿವೆ ಎಂದು ಜೀವನರೇಖಾ ಆಸ್ಪತ್ರೆ ನಿರ್ದೇಶಕ ಡಾ. ಅಮಿತ ಭಾತೆ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ನಾಲ್ಕು ಹಂತಗಳು:ಕರೊನಾ ಲಸಿಕೆಯನ್ನು ನಾಲ್ಕು ಹಂತಗಳಲ್ಲಿ ಪರೀಕ್ಷಿಸಲಾಗುತ್ತದೆ. ಪ್ರಾರಂಭಿಕ ಹಂತದಲ್ಲಿ ಪ್ರಾಣಿಗಳ ಮೇಲೆ ಪೂರ್ವ ಕ್ಲಿನಿಕಲ್ ಪ್ರಯೋಗ ನಡೆಸಲಾಗುತ್ತದೆ. 2ನೇ ಹಂತದಲ್ಲಿ ಲಸಿಕೆಯ ಸುರಕ್ಷತೆಯನ್ನು ಪರೀಕ್ಷಿಸಲು ಸಣ್ಣ ಪ್ರಮಾಣದಲ್ಲಿ ಮಾನವರ ಮೇಲೆ ಕ್ಲಿನಿಕಲ್ ಪ್ರಯೋಗ ನಡೆಸಲಾಗುತ್ತದೆ. 3ನೇ ಹಂತದಲ್ಲಿ ಲಸಿಕೆಯ ಸುರಕ್ಷತೆಯನ್ನು ತಿಳಿದುಕೊಳ್ಳಲು ಮೊದಲಿಗಿಂತ ಹೆಚ್ಚು ಜನರ ಮೇಲೆ ಕ್ಲಿನಿಕಲ್ ಪ್ರಯೋಗ ನಡೆಸಲಾಗುತ್ತದೆ. ಬಳಿಕ ಸಾವಿರಾರು ಜನರ ಮೇಲೆ ಪರೀಕ್ಷಿಸುವ ಮೂಲಕ ನಾಲ್ಕನೇ ಹಂತದ ಕ್ಲಿನಿಕಲ್ ಪರೀಕ್ಷೆ ನಡೆಸಲಾಗುತ್ತದೆ. ಜಗತ್ತಿನಾದ್ಯಂತ ತಯಾರಿಸಲಾಗುತ್ತಿರುವ ಸುಮಾರು 140 ಲಸಿಕೆಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲು್ಯಎಚ್​ಒ) ಮಾಹಿತಿ ಪಡೆದಿದ್ದು, ಅದರಲ್ಲಿ ಸುಮಾರು 12 ಲಸಿಕೆಗಳು ಮಾನವನ ಮೇಲಿನ ಕ್ಲಿನಿಕಲ್ ಪರೀಕ್ಷೆಯ ವಿವಿಧ ಹಂತಗಳಲ್ಲಿವೆ.
ಆಕ್ಸ್​ಫರ್ಡ್ ಲಸಿಕೆ ವರದಿ ಬಿಡುಗಡೆ:ಆಕ್ಸ್​ಫರ್ಡ್ ವಿಶ್ವವಿದ್ಯಾಲಯ ಮತ್ತು ಅಸ್ಟ್ರಾಜೆನೆಕಾ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕರೊನಾ ಲಸಿಕೆಯ ಮಾನವನ ಮೇಲಿನ ಪ್ರಯೋಗಗಳ ಆರಂಭಿಕ ಹಂತದ ವರದಿಯನ್ನು ಸೋಮವಾರ ಬಿಡುಗಡೆ ಮಾಡಲಿದೆ. ಆಕ್ಸ್​ಫರ್ಡ್ ವಿಶ್ವವಿದ್ಯಾಲಯದ ಲಸಿಕೆ ಸದ್ಯ ಬ್ರೆಜಿಲ್​ನಲ್ಲಿ ಮೂರನೇ ಹಂತದ ಪರೀಕ್ಷೆಗೆ ಒಳಪಡುತ್ತಿದೆ.
ಮರಣ ಪ್ರಮಾಣ ಶೇ.2.50ಕ್ಕಿಂತ ಕಡಿಮೆ:ಕರೊನಾ ರೋಗಿಗಳ ಚಿಕಿತ್ಸೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗೊಂಡ ಕ್ರಮಗಳಿಂದಾಗಿ ಸೋಂಕಿತರ ಮರಣ ಪ್ರಮಾಣ ಶೇ. 2.50ಕ್ಕಿಂತಲೂ ಕಡಿಮೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ದೇಶದಲ್ಲಿ ಸದ್ಯ ಮರಣ ಪ್ರಮಾಣ ಶೇ.2.49 ಇದ್ದು, ಇದು ಜಗತ್ತಿನ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ. ಅಮೆರಿಕ, ಬ್ರೆಜಿಲ್, ಪೆರು, ರಷ್ಯಾ, ಇರಾನ್, ಪಾಕಿಸ್ತಾನ, ಸ್ಪೇನ್​ಗೆ ಹೋಲಿಸಿದರೆ ಭಾರತದಲ್ಲಿನ ಸೋಂಕಿತರ ಪ್ರಮಾಣ 8 ಪಟ್ಟು ಕಡಿಮೆ ಇದ್ದು, ಮರಣ ಪ್ರಮಾಣ ಸುಮಾರು 14 ಪಟ್ಟು ಕಡಿಮೆ ಇದೆ ಎಂದು ಹೇಳಿದೆ.
ದೇಶದಲ್ಲಿ ನಡೆಯುತ್ತಿರುವ ಲಸಿಕೆ ಸಂಶೋಧನೆಗಳು
* ಭಾರತ್ ಬಯೋಟೆಕ್:ಮಾನವರ ಮೇಲಿನ 1 ಮತ್ತು 2ನೇ ಹಂತದ ಕ್ಲಿನಿಕಲ್ ಪ್ರಯೋಗಕ್ಕೆ ಈಗಾಗಲೇ ಅನುಮೋದನೆ ಸಿಕ್ಕಿದೆ. ಪ್ರಸ್ತುತ ರೋಹ್ಟಕ್​ನ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಕೋವಾಕ್ಸಿನ್ ಲಸಿಕೆ ಪ್ರಯೋಗ ನಡೆಸಲಾಗುತ್ತಿದೆ.
* ಸೀರಮ್ ಇನ್​ಸ್ಟಿಟ್ಯೂಟ್:ಈ ವರ್ಷದ ಅಂತ್ಯದ ವೇಳೆಗೆ ಲಸಿಕೆ ಅಭಿವೃದ್ಧಿಪಡಿಸುವ ಗುರಿ ಹೊಂದಿದೆ. ಆಕ್ಸ್​ಫರ್ಡ್​ನ ಸಹಯೋಗದಲ್ಲಿ ಕಾರ್ಯ ನಡೆದಿದೆ. ಮಾನವನ ಮೇಲಿನ ಮೂರನೇ ಹಂತದ ಪ್ರಯೋಗಗಳನ್ನು ಆಗಸ್ಟ್ ವೇಳೆಗೆ ಪ್ರಾರಂಭಿಸುತ್ತೇವೆ ಎಂದು ಸಂಸ್ಥೆ ತಿಳಿಸಿದೆ.
* ಜೈಡುಸ್ ಕ್ಯಾಡಿಲಾ:ಲಸಿಕೆಯ ಕ್ಲಿನಿಕಲ್ ಪ್ರಯೋಗಗಳನ್ನು ಏಳು ತಿಂಗಳಲ್ಲಿ ಪೂರ್ಣಗೊಳಿಸುವುದಾಗಿ ಕಂಪನಿ ಹೇಳಿದೆ. ಕಳೆದ ವಾರದಿಂದ ಮಾನವನ ಮೇಲಿನ ಪ್ರಯೋಗ ಪ್ರಾರಂಭಿಸಿದೆ. ಅಧ್ಯಯನದ ಫಲಿತಾಂಶಗಳು ಪರಿಣಾಮಕಾರಿಯಾದರೆ, ಲಸಿಕೆ ಸಿದ್ಧವಾಗಲು ಏಳು ತಿಂಗಳ ಸಮಯ ಬೇಕಾಗಬಹುದು ಎಂದು ಕಂಪನಿ ತಿಳಿಸಿದೆ.
* ಪ್ಯಾನೇಸಿಯಾ ಬಯೋಟೆಕ್:ಅಮೆರಿಕ ಮೂಲದ ರೆಫಾನಾ ಇಂಕ್ ಸಂಸ್ಥೆ ಸಹಭಾಗಿತ್ವದಲ್ಲಿ ಸುಮಾರು 500 ಮಿಲಿಯನ್ ಡೋಸ್ ಕರೊನಾ ಲಸಿಕೆಗಳನ್ನು ತಯಾರಿಸುವ ಗುರಿ ಹೊಂದಲಾಗಿದ್ದು, ಮುಂದಿನ ವರ್ಷದ ಆರಂಭದ ವೇಳೆಗೆ 40 ಮಿಲಿಯನ್ ಡೋಸ್​ಗಳು ಮಾರುಕಟ್ಟೆಗೆ ತರಲು ಲಭ್ಯವಾಗಲಿವೆ ಎಂದು ಸಂಸ್ಥೆ ತಿಳಿಸಿದೆ.
* ನ್ಯಾಷನಲ್ ಡೈರಿ ಡೆವಲಪ್​ವೆುಂಟ್ ಬೋರ್ಡ್​ನ(ಎನ್​ಡಿಡಿಬಿ) ಅಂಗಸಂಸ್ಥೆಯಾದ ಇಂಡಿಯನ್ ಇಮ್ಯುನೊಲಾಜಿಕಲ್ಸ್ ಫಾರ್ಮಾ, ಆಸ್ಟ್ರೇಲಿಯಾದ ಗ್ರಿಫಿತ್ ವಿಶ್ವವಿದ್ಯಾಲಯದೊಂದಿಗೆ ಲಸಿಕೆ ಅಭಿವೃದ್ಧಿಪಡಿಸಲು ಒಪ್ಪಂದ ಮಾಡಿಕೊಂಡಿದೆ.
ದೇಶೀಯ ಕರೊನಾ ಲಸಿಕೆ ಪ್ರಯೋಗಕ್ಕೆ ಸಿದ್ಧರಿದ್ದೀರಾ? ಈ ಸಂಖ್ಯೆಗೆ ಕರೆ ಮಾಡಿ ನೋಂದಾಯಿಸಿಕೊಳ್ಳಿ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:20 + 19 =
Remember me
