ನವದೆಹಲಿ: ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ ಸೇರಿ ಒಟ್ಟು 8 ರಾಜ್ಯಗಳಲ್ಲಿ ದೇಶದ ಶೇ. 90 ಸಕ್ರಿಯ ಕರೊನಾ ಪ್ರಕರಣಗಳಿವೆ. ಶೇ. 80 ಪ್ರಕರಣಗಳು 49 ಜಿಲ್ಲೆಗಳಿಂದ ವರದಿಯಾಗವೆ ಎಂದು ಕರೊನಾ ಸಂಬಂಧ ರಚಿಸಲಾಗಿರುವ ಕೇಂದ್ರ ಸಚಿವರ ಸಮಿತಿ ತಿಳಿಸಿದೆ.
ಅತಿ ಹೆಚ್ಚು ಕರೊನಾ ಪ್ರಕರಣಗಳನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ, ತಮಿಳುನಾಡು, ದೆಹಲಿ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಉತ್ತರ ಪ್ರದೇಶ ಮತ್ತು ಗುಜರಾತ್ ಇವೆ. 6 ರಾಜ್ಯಗಳಿಂದ ದೇಶದ ಶೇ. 86 ಸಾವುಗಳು ವರದಿಯಾಗಿವೆ. ಮಹಾರಾಷ್ಟ್ರ, ದೆಹಲಿ, ಗುಜರಾತ್, ತಮಿಳುನಾಡು, ಉತ್ತರಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಅತೀ ಹೆಚ್ಚು ಮಂದಿ ಕರೊನಾಗೆ ಬಲಿಯಾಗಿದ್ದಾರೆ. ಕೇವಲ 32 ಜಿಲ್ಲೆಗಳಲ್ಲೇ ಶೇ. 80 ಸಾವುಗಳು ಸಂಭವಿಸಿವೆ ಎಂದು ಸಮಿತಿ ವರದಿ ನೀಡಿದೆ.
ಪರಿಸ್ಥಿತಿ ನಿಯಂತ್ರಣದಲ್ಲಿ:ಕರೊನಾಗೆ ಅತೀ ಹೆಚ್ಚು ಬಾಧಿತವಾಗಿರುವ ಐದು ದೇಶಗಳ ಡೇಟಾವನ್ನು ಭಾರತದ ಪರಿಸ್ಥಿತಿಗೆ ಹೋಲಿಕೆ ಮಾಡಿ ಅವಲೋಕಿಸಲಾಗಿದ್ದು, ದೇಶದಲ್ಲಿ ಕರೊನಾ ಸಮುದಾಯಿಕ ಪ್ರಸರಣ ಹಂತಕ್ಕೆ ಹೋಗಿಲ್ಲ ಎಂದು ಹರ್ಷವರ್ಧನ್ ತಿಳಿಸಿದ್ದಾರೆ. ಕೆಲವು ಸ್ಥಳಗಳಲ್ಲಿ ಕರೊನಾ ಪ್ರಕರಣಗಳು ಹೆಚ್ಚಿರಬಹುದು, ಆದರೆ ಪರಿಸ್ಥಿತಿ ಸಮುದಾಯಿಕ ಪ್ರಸರಣ ಹಂತದಲ್ಲಿಲ್ಲ. ಪರಿಸ್ಥತಿ ಸಂಪೂರ್ಣ ನಿಯಂತ್ರಣದಲ್ಲಿದ್ದು, ಜನರು ಕರೊನಾ ಪರಿಸ್ಥಿತಿಯನ್ನು ಸರಿಯಾದ ದೃಷ್ಟಿಕೋನದಲ್ಲಿ ನೋಡಬೇಕು ಎಂದಿದ್ದಾರೆ. ನಾವು ವಿಶ್ವದ ಎರಡನೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶವಾಗಿದ್ದರೂ ಪ್ರತಿ 10 ಲಕ್ಷ ಮಂದಿಯಲ್ಲಿ ಈವರೆಗೆ 538 ಜನರಿಗೆ ಸೋಂಕು ತಗುಲಿದ್ದು, 15 ಮಂದಿ ಕರೊನಾಗೆ ಬಲಿಯಾಗಿದ್ದಾರೆ. ಈ ಪ್ರಮಾಣವನ್ನು ಜಾಗತಿಕ ಮಟ್ಟಕ್ಕೆ ಹೋಲಿಸಿದರೆ ಪ್ರತಿ 10 ಲಕ್ಷ ಮಂದಿಗೆ 1,453 ಜನರಿಗೆ ಸೋಂಕು ತಗುಲಿದ್ದು, 68.7 ಮಂದಿ ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಸೋಂಕಿತರ ಸಂಖ್ಯೆ 8 ಲಕ್ಷ ಸನಿಹಕ್ಕೆ:ದೇಶದಲ್ಲಿ ಕರೊನಾ ಸೋಂಕಿತರ ಸಂಖ್ಯೆ 8 ಲಕ್ಷದ ಗಡಿ ಸಮೀಪಿಸಿದೆ. ಕಳೆದ 24 ತಾಸಿನಲ್ಲಿ 20 ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣಗಳು ಬೆಳಕಿಗೆ ಬಂದಿದ್ದು, ಸೋಂಕಿತರ ಸಂಖ್ಯೆ 7.90ಲಕ್ಷಕ್ಕೆ ಏರಿಕೆಯಾಗಿದೆ. ಮೃತರ ಸಂಖ್ಯೆ 21,500ಕ್ಕೇರಿದೆ. ಈವರೆಗೆ 4.79 ಲಕ್ಷ ರೋಗಿಗಳು ಗುಣಮುಖರಾಗಿದ್ದು, ಇನ್ನೂ 2.72 ಲಕ್ಷ ಸಕ್ರಿಯ ಪ್ರಕರಣಗಳಿವೆ.
ದೇಶದಲ್ಲಿ ಕರೊನಾ ಚಿಕಿತ್ಸಾ ಸೌಲಭ್ಯ
* 3,914 – ಕರೊನಾ ಆಸ್ಪತ್ರೆಗಳು ಮತ್ತು ಕೇಂದ್ರಗಳು
* 3,77,737 – ಹಾಸಿಗೆ
* 39,820 – ಐಸಿಯು ಹಾಸಿಗೆ
* 1,42,415 – ಆಕ್ಸಿಜನ್ ವ್ಯವಸ್ಥೆ ಸಹಿತ ಹಾಸಿಗೆ
* 20,047 – ಹಾಸಿಗೆಗಳಿಗೆ ವೆಂಟಿಲೇಟರ್ ವ್ಯವಸ್ಥೆ
ಹಳ್ಳಿಗೆ 25 ಕಮಾಂಡೋ ಕಾವಲು:ಕೇರಳದ ತಿರುವನಂತಪುರ ಬಳಿಯ ಪೂಂಟುರಾ ಗ್ರಾಮದಲ್ಲಿ ಕರೊನಾ ಸೋಂಕು ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಗ್ರಾಮದ ಸುತ್ತ 25 ಕಮಾಂಡೋಗಳನ್ನು ಕಾವಲಿಗೆ ನಿಯೋಜಿಸಲಾಗಿದೆ. ಆರೋಗ್ಯ ತಜ್ಞರ ಪ್ರಕಾರ, ಈ ಒಂದೇ ಹಳ್ಳಿಯಲ್ಲಿ ಅನೇಕ ಸೂಪರ್ ಸ್ಪ್ರೇಡರ್​ಗಳು ಇದ್ದಾರೆ ಎಂದು ತಿಳಿದುಬಂದಿದೆ. ಗ್ರಾಮದಲ್ಲಿ ಕಮಾಂಡೋ ವಾಹನಗಳು, ಆಯಬುಲೆನ್ಸ್​ಗಳು ಸತತವಾಗಿ ಗಸ್ತು ತಿರುಗುತ್ತಿದ್ದು, ಯಾರಾದರೂ ಅನಗತ್ಯವಾಗಿ ಮನೆಯಿಂದ ಆಚೆ ಬಂದರೆ ಅವರನ್ನು ಕರೊನಾ ಕೇಂದ್ರಕ್ಕೆ ರವಾನಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ಅಮೆರಿಕ -ಭಾರತ ಜಂಟಿ ಪ್ರಯೋಗ:ಕರೊನಾ ವಿರುದ್ಧ ಆಯುರ್ವೆದ ಔಷಧ ಜಂಟಿ ಕ್ಲಿನಿಕಲ್ ಪ್ರಯೋಗಗಳನ್ನು ಪ್ರಾರಂಭಿಸಲು ಭಾರತ ಮತ್ತು ಅಮೆರಿಕದಲ್ಲಿನ ಆಯುರ್ವೆದ ವೈದ್ಯರು ಮತ್ತು ಸಂಶೋಧಕರು ಚಿಂತನೆ ನಡೆಸುತ್ತಿದ್ದಾರೆ ಎಂದು ಅಮೆರಿಕದ ಭಾರತೀಯ ರಾಯಭಾರಿ ತಾರಂಜಿತ್ ಸಿಂಗ್ ಸಂಧು ತಿಳಿಸಿದ್ದಾರೆ. ಈ ಕುರಿತು ಉಭಯ ದೇಶಗಳ ಆಯರ್ವೆದ ತಜ್ಞರು ಮತ್ತು ವಿಜ್ಞಾನಿಗಳ ಜತೆಗೆ ತಾರಂಜಿತ್ ವಿಡಿಯೋ ಕಾನ್ಪ್​ರೆನ್ಸ್ ಮೂಲಕ ಸಭೆ ನಡೆಸಿದ್ದಾರೆ.
ಕರೊನಾ ಪಸರಿಸುವಿಕೆ ದರ ಹೆಚ್ಚಳ:ಭಾರತದಲ್ಲಿ ಕರೊನಾ ಸೋಂಕು ಪಸರಿಸುವಿಕೆ ದರ ಮಾರ್ಚ್ ಬಳಿಕ ಇದೇ ಮೊದಲ ಬಾರಿ ಏರಿಕೆಯಾಗಿದೆ ಎಂದು ಚೆನ್ನೈನ ಗಣಿತ ವಿಜ್ಞಾನ ಸಂಸ್ಥೆಯ ಹೊಸ ಅಧ್ಯಯನವೊಂದು ಹೇಳಿದೆ. ಒಬ್ಬ ಸೋಂಕಿತ ವ್ಯಕ್ತಿಯಿಂದ ಸೋಂಕಿತರಾದ ಜನರ ಸಂಖ್ಯೆಯನ್ನು ಕರೊನಾ ಪಸರಿಸುವಿಕೆ ದರ ಎನ್ನಲಾಗುತ್ತದೆ. ದೇಶದಲ್ಲಿ ಕಳೆದ ಮಾರ್ಚ್ 4ರಿಂದ ಇಳಿಕೆ ಹಾದಿಯಲ್ಲಿದ್ದ ಪಸರಿಸುವಿಕೆ ದರ ಜುಲೈ ಮೊದಲ ವಾರದಲ್ಲಿ ಏರಿಕೆ ಕಂಡಿದೆ. ಮಾರ್ಚ್​ನಲ್ಲಿ ಕರೊನಾ ಪಸರಿಸುವಿಕೆ ದರ 1.83 ಇತ್ತು. ಅಂದರೆ ಓರ್ವ ವ್ಯಕ್ತಿ ಇತರರಿಗೆ ಸೋಂಕು ಹರಡಿರಬಹುದಾದ ಸಾಧ್ಯತೆ 1.83 ಇತ್ತು. ಇದು ವುಹಾನ್​ನಲ್ಲಿ 2.14, ಇಟಲಿಯಲ್ಲಿ 2.73 ಇತ್ತು. ದೇಶದಲ್ಲಿ ಏಪ್ರಿಲ್ 6ರಿಂದ 11ರ ಅವಧಿಯಲ್ಲಿ ಈ ದರ 1.55ಕ್ಕೆ ಇಳಿಕೆಯಾಗಿತ್ತು. ಬಳಿಕ 1.49 ಹಾಗೂ ಜೂನ್ 26ರ ವೇಳೆಗೆ 1.1ಕ್ಕೆ ಇಳಿಕೆಯಾಗಿತ್ತು. ಆದರೆ ಜುಲೈ ಮೊದಲ ವಾರದಲ್ಲಿ ಈ ಪ್ರಮಾಣ ಮತ್ತೆ ಏರಿಕೆ ಕಂಡು 1.19 ತಲುಪಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಕರ್ನಾಟಕ, ಕೇರಳ ಮತ್ತು ಆಂಧ್ರಪ್ರದೇಶ ಕ್ರಮವಾಗಿ 1.66, 1.65, 1.32 ಸೋಂಕು ಪಸರಿಸುವಿಕೆ ದರ ಹೊಂದಿವೆ.
ರಾಹುಲ್ ಗಾಂಧಿಯವರ ಮಾಜಿ ಕ್ಷೇತ್ರ ಅಮೇಠಿಯ ಗೌರಿಗಂಜ್​​ ರೈಲ್ವೆ ನಿಲ್ದಾಣದ ಚಿತ್ರ ಅಂದು-ಇಂದು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 5 =
Remember me
