ಜಾಗತಿಕ ಕರೊನಾ ಪ್ರಕರಣಗಳಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಜನಸಂಖ್ಯೆ ಕಾರಣಕ್ಕಾಗಿ, ವಿಶೇಷವಾಗಿ ಮಹಾನಗರಗಳಲ್ಲಿ ಪ್ರಕರಣಗಳ ಸಂಖ್ಯೆ ಇನ್ನಷ್ಟು ಹೆಚ್ಚುವ ಆತಂಕದ ನಡುವೆಯೇ ಅನ್ಯ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಚೇತರಿಕೆ ಪ್ರಮಾಣ ಹುಬ್ಬೇರಿಸುವಂತಿದೆ ಮತ್ತು ಭರವಸೆದಾಯಕವಾಗಿದೆ. ಅಲೋಪಥಿ, ಆಯುರ್ವೆದ, ಹೋಮಿಯೋಪಥಿ ಜತೆ ಮನೆಮದ್ದುಗಳಿಂದಲೂ ಕರೊನಾ ವಿರುದ್ಧ ಹೋರಾಟ ನಡೆಸಲಾಗುತ್ತಿದೆ ಮತ್ತು ಇದಕ್ಕೆ ಪೂರಕ ಫಲಿತಾಂಶವೂ ಸಿಕ್ಕಿದೆ. 8.2 ಲಕ್ಷದಲ್ಲಿ 5.1 ಲಕ್ಷ ಸೋಂಕಿತರು ಗುಣಮುಖರಾಗಿರುವುದೇ ಇದಕ್ಕೆ ಸಾಕ್ಷಿ. ದೇಶದ ಪ್ರಮುಖ ನಗರಗಳಲ್ಲಿ ಕರೊನಾ ಸ್ಥಿತಿಗತಿ ಹೇಗಿದೆ ಎಂಬುದರ ಸಂಕ್ಷಿಪ್ತ ಚಿತ್ರಣ ಇಲ್ಲಿದೆ.
ರಾಘವ ಶರ್ಮ ನಿಡ್ಲೆ, ನವದೆಹಲಿ
ಗೌತಮಬುದ್ಧ ನಗರ:ದೆಹಲಿಗೆ ಅಂಟಿಕೊಂಡಿರುವ ನೋಯ್ಡಾದ ಹಲವು ಭಾಗಗಳನ್ನು ಹೊಂದಿರುವ ಉತ್ತರ ಪ್ರದೇಶದ ಗೌತಮಬುದ್ಧ ನಗರ ಜಿಲ್ಲೆಯಲ್ಲಿ ಅತ್ಯಧಿಕ ಕರೊನಾ ಕೇಸುಗಳು (3260) ಪತ್ತೆಯಾಗಿವೆ. ಮಾರ್ಚ್ ತಿಂಗಳಲ್ಲಿ ದಿನಕ್ಕೊಂದರಂತಿದ್ದ ಪ್ರಕರಣಗಳು ಜುಲೈ ಮೊದಲ ವಾರದಲ್ಲಿ ನಿತ್ಯವೂ ಸರಾಸರಿ 90 ಕೇಸುಗಳಿಗೇರಿದೆ. ಜಿಲ್ಲೆಯಲ್ಲಿ ಗುಣಮುಖ ಪ್ರಮಾಣ ಶೇ.67ರಷ್ಟಿದ್ದು, ಟೆಸ್ಟ್​ಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿರುವುದರಿಂದ ಕೇಸುಗಳ ಸಂಖ್ಯೆಯೂ ಹೆಚ್ಚಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. 2863 ಕೇಸುಗಳೊಂದಿಗೆ ಗಾಜಿಯಾಬಾದ್ 2ನೇ ಸ್ಥಾನದಲ್ಲಿದ್ದರೆ, 3ನೇ ಸ್ಥಾನದಲ್ಲಿರುವ ರಾಜಧಾನಿ ಲಖನೌದಲ್ಲಿ ಒಟ್ಟು ಪತ್ತೆಯಾದ ಕೇಸುಗಳು 2012. ಜನಸಂಖ್ಯೆಯಲ್ಲಿ ಅತಿ ದೊಡ್ಡ ರಾಜ್ಯವಾಗಿದ್ದರೂ, ಸಿಎಂ ಯೋಗಿ ಆದಿತ್ಯನಾಥರ ಪರಿಣಾಮಕಾರಿ ಕ್ರಮಗಳಿಂದಾಗಿ ಕೇಸುಗಳು ಸಂಖ್ಯೆ 33 ಸಾವಿರಕ್ಕೆ ಸೀಮಿತಗೊಂಡಿವೆ.
ದೆಹಲಿ:ಕರೊನಾ ಅಬ್ಬರದಿಂದ ತತ್ತರಿಸಿದ ರಾಜಧಾನಿ ದೆಹಲಿಗೆ ಈಗ ಕೊಂಚ ಸಮಾಧಾನ. ಸಂಪೂರ್ಣ ಸಜ್ಜಾಗಿದ್ದೇವೆ ಎಂದು ಆರಂಭಶೂರತ್ವ ಮೆರೆದಿದ್ದ ಸಿಎಂ ಅರವಿಂದ ಕೇಜ್ರಿವಾಲ್​ಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಮಧ್ಯಪ್ರವೇಶ ವರವಾಗಿ ಪರಿಣಮಿಸಿತು. ಇಲ್ಲಿ 20 ದಿನಗಳ ಹಿಂದೆ ದಿನಕ್ಕೆ ಸರಾಸರಿ 2900 ಕೇಸುಗಳು ಪತ್ತೆಯಾಗುತ್ತಿದ್ದವು. ಈಗಿನ ಪ್ರಮಾಣ ದಿನಕ್ಕೆ 1500ಕ್ಕಿಂತ ಕಡಿಮೆ. ಮುಂದಿನ ದಿನಗಳಲ್ಲಿ ಮತ್ತಷ್ಟು ತಗ್ಗುವ ಭರವಸೆಯಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ದೆಹಲಿಯ ಛತ್ತರ್​ಪುರದಲ್ಲಿ 10 ಸಾವಿರ ಬೆಡ್​ಗಳ ಬೃಹತ್ ಸರ್ದಾರ್ ಪಟೇಲ್ ಕೋವಿಡ್ ಕೇರ್ ಕೇಂದ್ರವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಂಟಿಯಾಗಿ ಸಿದ್ಧಪಡಿಸಿ, ಜನರಲ್ಲಿ ಆತಂಕವನ್ನು ತಕ್ಕಮಟ್ಟಿಗೆ ದೂರ ಮಾಡಲಾಗಿದೆ. ಹಾಗಿದ್ದರೂ, ಖಾಸಗಿ ಆಸ್ಪತ್ರೆಗಳು ರೋಗಿಗಳಿಂದ ಲಕ್ಷಾಂತರ ರೂಪಾಯಿ ಲೂಟಿ ಹೊಡೆಯುವುದು ನಿಂತಿಲ್ಲ. ಒಟ್ಟು 1,09,140 ಕೇಸುಗಳಲ್ಲಿ 21146 ಸಕ್ರಿಯ ಪ್ರಕರಣಗಳಿದ್ದು, 3300 ಜನರು ಮೃತಪಟ್ಟಿದ್ದಾರೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಸಾವಿನ ಸಂಖ್ಯೆ ಏಳೆಂಟು ಸಾವಿರ ದಾಟಿದೆ ಎಂಬ ಮಾತೂ ಇದೆ.
ಮುಂಬೈ:ದೇಶದಲ್ಲಿ ಅತ್ಯಧಿಕ ಕರೊನಾ ಕೇಸುಗಳುಳ್ಳ ನಗರ ಕುಖ್ಯಾತಿ ಜತೆಗೆ ಸಾವಿನ ಸಂಖ್ಯೆಯಲ್ಲಿ (5205) ಚೀನಾವನ್ನೂ ಮೀರಿಸಿದ ಅಪಖ್ಯಾತಿಗೀಗ ಮುಂಬೈ ತುತ್ತಾಗಿದೆ. ನಗರದಲ್ಲಿ ನಿತ್ಯವೂ ಅಂದಾಜು 5000 ಕೇಸುಗಳು ದಾಖಲಾಗುತ್ತಿದ್ದು, ಶಿವಸೇನೆ-ಕಾಂಗ್ರೆಸ್-ಎನ್ಸಿಪಿ ಮೈತ್ರಿ ಸರ್ಕಾರ ಪರಿಸ್ಥಿತಿ ನಿಭಾಯಿಸುವಲ್ಲಿ ವಿಫಲವಾಗಿದ್ದೇ ಈ ದುಸ್ಥಿತಿಗೆ ಕಾರಣ ಎಂಬ ಆರೋಪಗಳಿವೆ. ಈವರೆಗಿನ ಒಟ್ಟು ಕೇಸುಗಳ ಸಂಖ್ಯೆ 90,461 ಆಗಿದ್ದು, ವಿಶ್ವದಲ್ಲೇ ಅತಿ ಹೆಚ್ಚು ಕೇಸುಗಳುಳ್ಳ ಐದನೇ ನಗರ ಎನಿಸಿಕೊಂಡಿದೆ. ಏತನ್ಮಧ್ಯೆ, ಏಷ್ಯಾದ ಅತಿದೊಡ್ಡ ಕೊಳೆಗೇರಿ ಧಾರಾವಿಯಲ್ಲಿ ಕರೊನಾ ಹರಡುವಿಕೆ ನಿಯಂತ್ರಿಸುವಲ್ಲಿ ನಗರಾಡಳಿತ ಯಶಸ್ವಿಯಾಗಿರುವುದಕ್ಕೆ ವಿಶ್ವ ಆರೋಗ್ಯ ಸಂಸ್ಥೆಯೂ ಮೆಚ್ಚುಗೆ ವ್ಯಕ್ತಪಡಿಸಿದೆ. ಒಟ್ಟು 2,38,461 ಕೇಸುಗಳುಳ್ಳ ಮಹಾರಾಷ್ಟ್ರದಲ್ಲಿ 9863 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ಚೆನ್ನೈ:ತಮಿಳುನಾಡಿನ ಕರೊನಾ ಹಾಟ್​ಸ್ಪಾಟ್ ಚೆನ್ನೈನಲ್ಲಿ ನಿಧಾನವಾಗಿ ಕೇಸುಗಳ ಸಂಖ್ಯೆಯಲ್ಲಿ ಇಳಿಮುಖವಾಗಿದ್ದು, ದಿನನಿತ್ಯದ ಸರಾಸರಿ ಪ್ರಕಾರ ಕಳೆದೈದು ದಿನದಲ್ಲಿ ಶೇ.60ರಷ್ಟು ಪ್ರಕರಣಗಳು ತಗ್ಗಿವೆ. ವಾರದ ಹಿಂದೆ ದಿನಕ್ಕೆ 2000ಕ್ಕಿಂತಲೂ ಹೆಚ್ಚು ಕೇಸುಗಳು ದಾಖಲಾಗುತ್ತಿದ್ದ ನಗರದಲ್ಲಿ ಈಗ 1200ಕ್ಕಿಂತ ಕಡಿಮೆ ಪ್ರಕರಣಗಳು ಕಂಡುಬರುತ್ತಿವೆ. ಅದಲ್ಲದೆ, ಮರಣ ಪ್ರಮಾಣವೂ ತಗ್ಗಿದ್ದು, ಫೀವರ್ ಕ್ಲಿನಿಕ್​ಗಳನ್ನು ತೆರೆದ ಪರಿಣಾಮ ಕರೊನಾವನ್ನು ಆರಂಭದಲ್ಲೇ ಪತ್ತೆಹಚ್ಚಲು ಸಾಧ್ಯವಾಗುತ್ತಿದೆ. ನಗರದ ಒಟ್ಟು 74969 ಕೇಸುಗಳಲ್ಲಿ 18620 ಕೇಸುಗಳು ಸಕ್ರಿಯವಾಗಿದ್ದು, 1193 ಮಂದಿ ಮೃತಪಟ್ಟಿದ್ದಾರೆ.
ಅಹ್ಮದಾಬಾದ್:ರಾಜ್ಯದ 40155 ಕೇಸುಗಳಲ್ಲಿ ಅಹ್ಮದಾಬಾದ್ ನಗರದಲ್ಲೇ 22745 ಕರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಇದರಲ್ಲಿ 3571 ಸಕ್ರಿಯ ಕೇಸುಗಳಿದ್ದು, 17663 ಮಂದಿ ಗುಣಮುಖರಾಗಿರುವುದು ಸಮಾಧಾನಕರ ಅಂಶ. ಸೋಂಕಿತರನ್ನು ನಿರ್ವಹಿಸಲು ಖಾಸಗಿ ಆಸ್ಪತ್ರೆ ಹಾಗೂ ಹೋಮ್ ಕೇರ್ ಸೆಂಟರ್​ಗಳಿಗೆ ಹೆಚ್ಚಿನ ಅವಕಾಶ ನೀಡಿದ್ದರಿಂದ ಸರ್ಕಾರದ ಹೊರೆ ಕಡಿಮೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹೋಮ್ ಕೇರ್ ಸೆಂಟರ್​ಗಳ ಬಗ್ಗೆ ಸೋಂಕಿತರು ಹಾಗೂ ಕುಟುಂಬಸ್ಥರೂ ಸಮಾಧಾನ ಹೊಂದಿದ್ದು, ದುಬಾರಿ ವೆಚ್ಚಕ್ಕೆ ಕಡಿವಾಣ ಬೀಳುವ ಜತೆಗೆ, ಕುಟುಂಬಸ್ಥರೂ ವಿಶೇಷ ನಿಗಾ ವಹಿಸುತ್ತಾರೆ. ಇದು ರೋಗದಿಂದ ಶೀಘ್ರ ಗುಣಮುಖರಾಗಲೂ ನೆರವಾಗಿದೆ ಎಂದು ಹೇಳುತ್ತಿದ್ದಾರೆ.
ಕೊಲ್ಕತ್ತಾ:ಕೊಲ್ಕತ್ತಾದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಕರೊನಾ ಬೆಡ್​ಗಳೇ ಇಲ್ಲದ ಸ್ಥಿತಿ ನಿರ್ವಣವಾಗಿದೆ. ಸೋಂಕಿತರನ್ನು ದಾಖಲಿಸಿಕೊಳ್ಳಲು ಆಸ್ಪತ್ರೆಗಳು ಹಿಂದೇಟು ಹಾಕುತ್ತಿದ್ದು, ಮನೆಯಲ್ಲಿಯೇ ಸ್ವಯಂ ದಿಗ್ಬಂಧನಕ್ಕೊಳಪಟ್ಟು ಚಿಕಿತ್ಸೆ ಪಡೆದುಕೊಳ್ಳುವಂತೆ ಸಲಹೆ ನೀಡುತ್ತಿದ್ದಾರೆ. ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದ ವೈಫಲ್ಯ ಎದ್ದುಕಾಣುತ್ತಿದೆ. ಏತನ್ಮಧ್ಯೆ, ಪೊಲೀಸ್ ಸಿಬ್ಬಂದಿ ಪಾಸಿಟಿವ್ ಆಗುತ್ತಿರುವ ಹಿನ್ನೆಲೆಯಲ್ಲಿ ಈಡನ್ ಗಾರ್ಡನ್ ಕ್ರಿಕೆಟ್ ಸ್ಟೇಡಿಯಂನ್ನು ಕೋವಿಡ್ ಕೇರ್ ಆಸ್ಪತ್ರೆಯನ್ನಾಗಿ ಮಾರ್ಪಾಡು ಮಾಡಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ರಾಜ್ಯದಲ್ಲಿ ಈವರೆಗೆ 27109 ಕೇಸುಗಳು ಪತ್ತೆಯಾಗಿವೆ. ಕೊಲ್ಕತ್ತಾದ ಒಟ್ಟು 8742 ಕೇಸುಗಳಲ್ಲಿ 470 ಮಂದಿ ಮೃತಪಟ್ಟಿದ್ದಾರೆ. ನಿತ್ಯವೂ ಸಾವಿರದಷ್ಟು ಮಂದಿಯಲ್ಲಿ ಕರೊನಾ ಪಾಸಿಟಿವ್ ಕಂಡುಬರುತ್ತಿದೆ.
ಗುರುಗ್ರಾಮ:ಕರೊನಾ ಹರಡುವಿಕೆಯ ಅತ್ಯಂತ ಕೆಟ್ಟ ಹಂತಗಳಿಗೆ ಸಾಕ್ಷಿಯಾಗಿದ್ದ ಹರಿಯಾಣದ ಗುರುಗ್ರಾಮದಲ್ಲೀಗ ಶೇ.83ರಷ್ಟು ಗುಣಮುಖ ಪ್ರಮಾಣ ಕಂಡುಬಂದಿದೆ. ಕಳೆದೆರಡು ವಾರಗಳಲ್ಲಿ ಕರೊನಾ ಪರೀಕ್ಷೆ, ಪತ್ತೆಹಚ್ಚುವಿಕೆ, ಚಿಕಿತ್ಸೆ ನಿರ್ವಹಣೆ ಮತ್ತಷ್ಟು ಪರಿಣಾಮಕಾರಿ ಎನಿಸಿದೆ. ಆರಂಭದಲ್ಲಿ ಅಂದಾಜು 300 ಪರೀಕ್ಷೆಗಳನ್ನು ನಡೆಸುತ್ತಿದ್ದ ನಗರವೀಗ ದಿನಕ್ಕೆ ಸುಮಾರು 3000ದಷ್ಟು ಮಂದಿಗೆ ಟೆಸ್ಟಿಂಗ್ ನಡೆಸುತ್ತಿದೆ. ಇದನ್ನು 4000ಕ್ಕೆ ಏರಿಸುವ ಗುರಿ ಹೊಂದಿದ್ದೇವೆ ಎಂದು ಗುರುಗ್ರಾಮ ಪಾಲಿಕೆ ಆಯುಕ್ತ ಹೇಳಿದ್ದಾರೆ. ರಾಜ್ಯದಲ್ಲಿ ಪತ್ತೆಯಾದ ಒಟ್ಟು 20381 ಕೇಸುಗಳಲ್ಲಿ 6703 ಪ್ರಕರಣಗಳು ಗುರುಗ್ರಾಮದಲ್ಲಿ ದಾಖಲಾಗಿದ್ದವು. 5198 ಕೇಸುಗಳುಳ್ಳ ಫರಿದಾಬಾದ್ ನಂತರದ ಸ್ಥಾನದಲ್ಲಿದೆ. ಎರಡೂ ನಗರಗಳಲ್ಲಿ ಒಟ್ಟು 201 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.
ಹೈದರಾಬಾದ್:ನಗರದ 25038 ಕರೊನಾ ಪ್ರಕರಣಗಳಲ್ಲಿ 24710 ಕೇಸುಗಳು ಈಗಲೂ ಸಕ್ರಿಯವಾಗಿವೆ. ಕರೊನಾ ವ್ಯಾಪಕವಾಗಿ ಹರಡುತ್ತಿದ್ದರೂ, ಗುಣಮುಖ ಪ್ರಮಾಣ ಮಾತ್ರ ತೀರಾ ಕಡಿಮೆಯಿದ್ದು, 305 ಮಂದಿ ಮಾತ್ರ ಚೇತರಿಕೆ ಕಂಡಿದ್ದಾರೆ. ಹೈದಾರಾಬಾದ್​ನಲ್ಲಿ ಹೋಮ್ ಕ್ವಾರಂಟೈನ್​ಗೆ ಸೂಚಿಸಲಾದ ವ್ಯಕ್ತಿಗಳು ಹೊರಬಂದು ಹೊಟೇಲ್, ಕಾಫಿ ಬಾರ್​ಗಳಿಗೆ ಭೇಟಿ ನೀಡುತ್ತಿರುವ ದೂರುಗಳು ಹೆಚ್ಚುತ್ತಿವೆ. ಕ್ವಾರಂಟೈನ್ ನಿಯಮಗಳನ್ನು ಸರಿಯಾಗಿ ಪಾಲಿಸದ ಕಾರಣ ಕೇಸುಗಳೂ ಹೆಚ್ಚುತ್ತಿವೆ. ಕರೊನಾ ಹಾವಳಿ ಆರಂಭಗೊಂಡು ನಾಲ್ಕು ತಿಂಗಳು ಪೂರ್ಣಗೊಳ್ಳುತ್ತಿದ್ದರೂ ತೆಲಂಗಾಣದಲ್ಲಿ ದಿನಕ್ಕೆ 2500ದಷ್ಟು ಕರೊನಾ ಪರೀಕ್ಷೆಗಳನ್ನಷ್ಟೇ ನಡೆಸಲಾಗುತ್ತಿದೆ ಎನ್ನುವುದು ದುಸ್ಥಿತಿಗೆ ಹಿಡಿದ ಕನ್ನಡಿ.
ಕೇರಳದ ಬಂಗಾರಿ ಬೆಂಗಳೂರಿನಲ್ಲಿ ಅರೆಸ್ಟ್​: ಸ್ವಪ್ನಾ ಸುರೇಶ್ ಎನ್​ಐಎ ಕಸ್ಟಡಿಗೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + six =
Remember me
