ಕಾರಿನ ಸುರಕ್ಷತೆ ಪರೀಕ್ಷೆಯ ಕ್ರ್ಯಾಶ್ ಟೆಸ್ಟ್ ಇನ್ನು ಮುಂದೆ ಭಾರತದಲ್ಲಿಯೇ ನಡೆಯಲಿದೆ. ಭಾರತ ತನ್ನದೇ ಆದ ಕ್ರಾ್ಯಶ್ ಟೆಸ್ಟ್ ರೇಟಿಂಗ್ ಮೌಲ್ಯಮಾಪನ ವ್ಯವಸ್ಥೆ ರೂಪಿಸಿದೆ. ಈ ಮೂಲಕ ಇಂತಹ ವ್ಯವಸ್ಥೆ ಹಾಗೂ ಮಾನದಂಡಗಳನ್ನು ಹೊಂದಿರುವ ಅರ್ಧ ಡಜನ್ ದೇಶಗಳ ಸಾಲಿಗೆ ಈಗ ಭಾರತ ಸೇರುತ್ತಿದೆ. ಭಾರತ್ ನ್ಯೂ ಕಾರ್ ಅಸೆಸ್​ವೆುಂಟ್ ಪ್ರೋಗ್ರಾಂ (ಭಾರತ್ ಎನ್​ಸಿಎಪಿ) ಅಡಿಯಲ್ಲಿ ಈ ಕುರಿತಂತೆ ಹೊಸ ನಿಯಮಗಳು ಅಕ್ಟೋಬರ್ 1ರಿಂದ ಜಾರಿಗೆ ಬರಲಿವೆ.
ಇಲ್ಲಿಯವರೆಗೆ ಕಾರು ತಯಾರಕರು ಸುರಕ್ಷತೆ ಪರೀಕ್ಷೆ ಮತ್ತು ಸ್ಟಾರ್ ಗ್ರೇಡಿಂಗ್​ಗಾಗಿ ಕಾರುಗಳನ್ನು ವಿದೇಶಗಳಿಗೆ ಸಾಗಿಸುತ್ತಿದ್ದರು. ಇದು ದುಬಾರಿ ಅಷ್ಟೇ ಅಲ್ಲ, ಸಾಕಷ್ಟು ಸಮಯ ತೆಗೆದುಕೊಳ್ಳುವ ಪ್ರಕ್ರಿಯೆಯಾಗಿತ್ತು. ಈ ಪರೀಕ್ಷೆಗಳು ಬಹುತೇಕವಾಗಿ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳಿಗೆ ಸೀಮಿತವಾಗಿತ್ತು. ಆದರೆ, ಭಾರತ್ ಎನ್​ಸಿಎಪಿ ಅಡಿಯಲ್ಲಿ ಪೆಟ್ರೋಲ್, ಡೀಸೆಲ್ ಕಾರುಗಳು ಮಾತ್ರವಲ್ಲದೆ, ಸಿಎನ್​ಜಿ ಮತ್ತು ಎಲೆಕ್ಟ್ರಿಕ್ ವಾಹನಗಳನ್ನು ಕೂಡ ಪರೀಕ್ಷಿಸಲಾಗುತ್ತದೆ.
ಕ್ರ್ಯಾಶ್​ ಟೆಸ್ಟ್ ಎನ್ನುವುದು ವಾಹನದ ಸುರಕ್ಷತಾ ರೇಟಿಂಗ್ ನಿರ್ಣಯಿಸುವ ನಿಟ್ಟಿನಲ್ಲಿ ನಿಯಂತ್ರಿತ ಪರಿಸರದಲ್ಲಿ ಕೈಗೊಳ್ಳುವ ಘರ್ಷಣೆ. ಭಾರತ್ ಎನ್​ಸಿಎಪಿ ಹೊಸ ನಿಯಮವು, ಗರಿಷ್ಠ ಎಂಟು ಆಸನಗಳಿರುವ, 3.5 ಟನ್​ಗಳಿಗಿಂತ ಕಡಿಮೆ ತೂಕವಿರುವ ಹಾಗೂ ದೇಶದಲ್ಲಿ ತಯಾರಿಸಲಾದ ಅಥವಾ ಮಾರಾಟ ಮಾಡಲಾಗುವ ಮೋಟಾರು ವಾಹನಗಳ ಸುರಕ್ಷತಾ ಮಾನದಂಡಗಳನ್ನು ವ್ಯಾಖ್ಯಾನಿಸುತ್ತದೆ.
ಅಪಘಾತವಾದ ಸಂದರ್ಭದಲ್ಲಿ ವಾಹನಗಳು ಎಷ್ಟು ಸುರಕ್ಷತೆಯನ್ನು ಹೊಂದಿರುತ್ತವೆ ಎಂಬ ಬಗೆಗೆ ವಸ್ತುನಿಷ್ಠ ಮಾಹಿತಿಯನ್ನು ಈ ಸುರಕ್ಷತಾ ರೇಟಿಂಗ್​ಗಳ ಮೂಲಕ ಒದಗಿಸಲಾಗುತ್ತದೆ. ಗ್ರಾಹಕರು ವಾಹನ ಖರೀದಿಸುವ ಮುಂಚಿತವಾಗಿ ಸುರಕ್ಷತೆ ಕುರಿತು ಪರಿಶೀಲಿಸಲು ಅನುಕೂಲವಾಗುತ್ತದೆ. ಅಲ್ಲದೆ, ಸುರಕ್ಷತಾ ಅಂಶಗಳನ್ನು ಇನ್ನಷ್ಟು ಸುಧಾರಿಸಿಕೊಳ್ಳಲು ವಾಹನ ತಯಾರಕರಿಗೂ ಈ ರೇಟಿಂಗ್ ನೆರವಾಗುತ್ತದೆ. ಭಾರತ್ ಎನ್​ಸಿಎಪಿ ಪರೀಕ್ಷಾ ಮಾನದಂಡಗಳನ್ನು ಜಾಗತಿಕ ಕ್ರಾ್ಯಶ್ ಟೆಸ್ಟ್ ಮಾನದಂಡಗಳೊಂದಿಗೆ ಸಮೀಕರಿಸಲಾಗಿದ್ದು, 1 ರಿಂದ 5 ಸ್ಟಾರ್​ಗಳವರೆಗೆ ರೇಟಿಂಗ್​ಗಳನ್ನು ನೀಡಲಾಗುತ್ತದೆ. ಎನ್​ಸಿಎಪಿ ಅಂಕಗಳು (ಸ್ಟಾರ್​ಗಳು) ಹೆಚ್ಚಾದಷ್ಟೂ ಕಾರು ಹೆಚ್ಚು ಸುರಕ್ಷಿತವಾಗಿರುತ್ತದೆ ಎಂಬುದನ್ನು ಸೂಚಿಸುತ್ತದೆ. ದೇಶದಲ್ಲಿ ಮಾರಾಟವಾಗುವ ಕಾರುಗಳ ಗುಣಮಟ್ಟ ಸುಧಾರಿಸಲು ಮತ್ತು ಭಾರತದಲ್ಲಿ ನಿರ್ವಿುತ ವಾಹನಗಳ ರಫ್ತು ಯೋಗ್ಯತೆ ಹೆಚ್ಚಿಸಲು ಭಾರತ ಎನ್​ಸಿಎಪಿ ಮಾನದಂಡಗಳು ಕಾರಣವಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಭಾರತದಲ್ಲಿ ಪ್ರತಿ ವರ್ಷ ರಸ್ತೆ ಅಪಘಾತಗಳಲ್ಲಿ ಅಂದಾಜು 1.5 ಲಕ್ಷ ಜನ ಸಾವನ್ನಪು್ಪತ್ತಾರೆ. ರಸ್ತೆ ಅಪಘಾತಗಳಲ್ಲಿ ವಿಶ್ವದಲ್ಲಿಯೇ ಅತಿ ಹೆಚ್ಚು ಸಾವು ಸಂಭವಿಸುವ ದೇಶ ಭಾರತವಾಗಿದೆ. ಸ್ಟಾಕ್​ಹೋಮ್ ಘೊಷಣೆಯ ಅನುಸಾರ, 2030ರ ವೇಳೆಗೆ ರಸ್ತೆ ಅಪಘಾತದ ಸಾವು-ನೋವುಗಳ ಸಂಖ್ಯೆಯನ್ನು ಶೇಕಡಾ 50ರಷ್ಟು ಕಡಿಮೆ ಮಾಡಲು ಭಾರತ ಬದ್ಧವಾಗಿದೆ. ಅಪಘಾತದ ಸಂದರ್ಭದಲ್ಲಿ ಸಾವು-ನೋವು ಪ್ರಮಾಣ ತಗ್ಗಿಸಲು ವಾಹನ ಸುರಕ್ಷತೆಗೆ ಒತ್ತು ನೀಡುವ ನಿಟ್ಟಿನಲ್ಲಿ ಕ್ರ್ಯಾಶ್ ಟೆಸ್ಟ್ ಮಹತ್ವದ್ದಾಗಿದೆ.
ವಾಹನಗಳ ಸುರಕ್ಷತಾ ಮೌಲ್ಯಮಾಪನಕ್ಕಾಗಿ ವಯಸ್ಕ ಪ್ರಯಾಣಿಕರ ರಕ್ಷಣೆ, ಪ್ರಯಾಣಿಸುವ ಮಕ್ಕಳ ರಕ್ಷಣೆ ಮತ್ತು ಸುರಕ್ಷತಾ ಸಹಾಯಕ ತಂತ್ರಜ್ಞಾನಗಳ ಅಳವಡಿಕೆ- ಈ ಮೂರು ಸಂಗತಿಗಳಿಗೆ ಸಂಬಂಧಿಸಿದಂತೆ ಮೂರು ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಇದಕ್ಕಾಗಿ, ಮುಂಭಾಗದ ಅಪಘಾತ ಪರಿಣಾಮ ಪರೀಕ್ಷೆ (ಎಒಪಿ), ಪಾರ್ಶ್ವ ಅಪಘಾತದ ಪರಿಣಾಮ ಪರೀಕ್ಷೆ (ಸಿಒಪಿ) ಮತ್ತು ಪಕ್ಕದ ಕಂಬಕ್ಕೆ ಅಪಘಾತದ ಪರಿಣಾಮ ಪರೀಕ್ಷೆ ಎಂಬ ಮೂರು ಪರೀಕ್ಷೆಗಳನ್ನು ಕೈಗೊಳ್ಳಲಾಗುತ್ತದೆ. ಈ ಪರೀಕ್ಷೆಗಳಲ್ಲಿ ವಾಹನದ ಕಾರ್ಯಕ್ಷಮತೆಯ ಆಧಾರದ ಮೇಲೆ ಎಒಪಿ ಮತ್ತು ಸಿಒಪಿಗಾಗಿ ಪ್ರತ್ಯೇಕ ಸ್ಟಾರ್ ರೇಟಿಂಗ್​ಗಳನ್ನು ನೀಡಲಾಗುತ್ತದೆ. ಮುಂಭಾಗದ ಪರಿಣಾಮ ಪರೀಕ್ಷೆಯು ಪ್ರತಿ ಗಂಟೆಗೆ 64 ಕಿಮೀ ವೇಗದಲ್ಲಿ ಎದುರಿನ ತಡೆಗೋಡೆಗೆ ಡಿಕ್ಕಿ ಹೊಡೆಯುವುದಾಗಿರುತ್ತದೆ. ಪಕ್ಕದ ಕಂಬಕ್ಕೆ ಅಪಘಾತದ ಪರಿಣಾಮ ಪರೀಕ್ಷೆಯನ್ನು 3 ಸ್ಟಾರ್ ಮತ್ತು ಅದಕ್ಕಿಂತ ಹೆಚ್ಚಿನ ಭದ್ರತೆ ಪಡೆಯಲು ಬಯಸುವ ಕಾರ್​ಗಳಿಗೆ ಮಾತ್ರ ಕೈಗೊಳ್ಳಲಾಗುತ್ತದೆ. ಅಲ್ಲದೆ, 3 ಸ್ಟಾರ್ ಅಥವಾ ಹೆಚ್ಚಿನ ರೇಟಿಂಗ್ ಪಡೆದುಕೊಳ್ಳಲು ಮುಂದಾಗುವ ಕಾರ್​ಗಳು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಎಲೆಕ್ಟ್ರಾನಿಕ್ ಸ್ಥಿರತೆ ನಿಯಂತ್ರಣ) ಮತ್ತು ಫ್ರಂಟ್ ಸೀಟ್ ಬೆಲ್ಟ್ ರಿಮೈಂಡರ್​ಗಳನ್ನು (ಮುಂದಿನ ಆಸನದಲ್ಲಿರುವವರು ಸೀಟು ಬೆಲ್ಟ್ ಧರಿಸುವುದನ್ನು ನೆನಪಿಸುವ ವ್ಯವಸ್ಥೆ) ಹೊಂದಿರಬೇಕಾಗುತ್ತದೆ.
ವಾಹನ ತಯಾರಕರು ಕ್ರಾ್ಯಶ್ ಪರೀಕ್ಷೆಗಾಗಿ ವಾಹನ ಮಾದರಿಯನ್ನು ನೀಡಿದ ನಂತರ ಭಾರತ್ ಎನ್​ಸಿಎಪಿ ತಂಡ ಉತ್ಪಾದನಾ ಘಟಕಕ್ಕೆ ಭೇಟಿ ನೀಡುತ್ತದೆ. ಈ ತಂಡ ಅಲ್ಲಿ ಯಾದೃಚ್ಛಿಕ (ರ್ಯಾಂಡಮ್ ವಿಧಾನದ ಮೂಲಕ ಕ್ರ್ಯಾಶ್ ಟೆಸ್ಟ್​ಗೆ ಕಾರೊಂದನ್ನು ಆಯ್ಕೆ ಮಾಡಿಕೊಳ್ಳುತ್ತದೆ. ಈ ವಾಹನವನ್ನು ಭಾರತ್ ಎನ್​ಸಿಎಪಿ ಪರೀಕ್ಷಾ ಕೇಂದ್ರಕ್ಕೆ ಕೊಂಡೊಯ್ದು, ಕಾರು ತಯಾರಕರ ಪ್ರತಿನಿಧಿಗಳ ಸಮ್ಮುಖದಲ್ಲಿ ಕ್ರಾ್ಯಶ್ ಟೆಸ್ಟ್ ನಡೆಸಲಾಗುತ್ತದೆ. ಭಾರತ್ ಎನ್​ಸಿಎಪಿ ಸ್ಥಾಯಿ ಸಮಿತಿಯು ಸಂಪೂರ್ಣ ಪ್ರಕ್ರಿಯೆಯನ್ನು ಅನುಮೋದಿಸಿದ ನಂತರ, ಕ್ರಾ್ಯಶ್ ಟೆಸ್ಟ್ ಫಲಿತಾಂಶಗಳು ಮತ್ತು ಆ ವಾಹನದ ಸ್ಟಾರ್ ರೇಟಿಂಗ್ ಪ್ರಕಟಿಸಲಾಗುತ್ತದೆ. ಕಾರಿನ ರಚನಾತ್ಮಕ ಸಮಗ್ರತೆಯ ಮೌಲ್ಯಮಾಪನ, ಸುರಕ್ಷತಾ ಸಹಾಯ ತಂತ್ರಜ್ಞಾನಗಳ ಸೌಲಭ್ಯ, ವಾಹನದಲ್ಲಿ ವಯಸ್ಕ ಮತ್ತು ಮಕ್ಕಳ ಪ್ರಯಾಣಿಕರ ಸುರಕ್ಷತೆ, ವಾಹನದ ಒಟ್ಟಾರೆ ಪಾದಚಾರಿ-ಸ್ನೇಹಿ ವಿನ್ಯಾಸ ಈ ಎಲ್ಲ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಅಂತಿಮ ರೇಟಿಂಗ್ ನಿರ್ಧರಿಸಲಾಗುತ್ತದೆ.
ಭಾರತ್ ಎನ್​ಸಿಎಪಿ ಈಗಾಗಲೇ 30ಕ್ಕೂ ಹೆಚ್ಚು ಪರೀಕ್ಷಾ ವಿನಂತಿಗಳನ್ನು ಸ್ವೀಕರಿಸಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಭಾರತ್ ಎನ್​ಸಿಎಪಿ ಕಾರ್ಯಕ್ರಮದ ಅಡಿಯಲ್ಲಿ ಕಾರನ್ನು ಪರೀಕ್ಷಿಸಲು ಅಂದಾಜು 60 ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ಆದರೆ, ವಿದೇಶದಲ್ಲಿ ಇದೇ ರೀತಿಯ ಪರೀಕ್ಷೆಗೆ ಅಂದಾಜು 2.5 ಕೋಟಿ ರೂಪಾಯಿ ವೆಚ್ಚವಾಗುತ್ತದೆ ಎಂದೂ ಅವರು ವಿವರಿಸಿದ್ದಾರೆ.
ಪುಣೆಯಲ್ಲಿರುವ ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾದ (ಎಆರ್​ಎಐ) ಪ್ರಯೋಗಾಲಯದಲ್ಲಿ ಭಾರತ್ ಎನ್​ಸಿಎಪಿ ಪರೀಕ್ಷೆ ಕೈಗೊಳ್ಳಲಾಗುತ್ತದೆ.
ಅಪಘಾತ ಸುರಕ್ಷತೆಯ ಆಧಾರದ ಮೇಲೆ ಕಾರುಗಳನ್ನು ರೇಟಿಂಗ್ ನೀಡುವ ಪ್ರಕ್ರಿಯೆಯು 1970ರ ದಶಕದ ಅಂತ್ಯದಲ್ಲಿ ಅಮೆರಿಕದಲ್ಲಿ ಪ್ರಾರಂಭವಾಯಿತು. ತರುವಾಯ ಇದನ್ನು ಬೇರೆ ದೇಶಗಳಲ್ಲಿ ಅನುಸರಿಸಲಾಯಿತು. ಹಲವು ದೇಶಗಳಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದು, ಈಗ ಈ ಸಾಲಿಗೆ ಭಾರತ ಎನ್​ಸಿಎಪಿ ಸೇರಲಿದೆ. 2011ರಲ್ಲಿ ಟುವರ್ಡ್ಸ್ ಝೀರೋ ಫೌಂಡೇಶನ್ ಎಂಬ ಬ್ರಿಟನ್ ಮೂಲದ ಧರ್ವರ್ಥ ಸಂಸ್ಥೆಯು ವಿವಿಧ ಎನ್​ಸಿಎಪಿಗಳ ನಡುವೆ ಸಮನ್ವಯ ಸುಧಾರಿಸಲು ಗ್ಲೋಬಲ್ ಎನ್​ಸಿಎಪಿ ರಚಿಸಿದೆ. ಭಾರತ್ ಎನ್​ಸಿಎಪಿ ಮಾನದಂಡಗಳು ಗ್ಲೋಬಲ್ ಎನ್​ಸಿಎಪಿಯ ಸ್ವರೂಪದೊಂದಿಗೆ ಜೋಡಿಸಲ್ಪಟ್ಟಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + twenty =
Remember me
