ಬೆಂಗಳೂರು:ಭಾರತದ ಮೋಸ್ಟ್ ವಾಟೆಂಡ್ ಕ್ರಿಮಿನಲ್ ರವಿ ಪ್ರಕಾಶ್ ಪೂಜಾರಿ ಅಲಿಯಾಸ್ ರವಿ ಪೂಜಾರಿ ಸೆನೆಗಲ್​ನಲ್ಲಿ ಸಮಾಜ ಸೇವಕನಾಗಿದ್ದ…! ದೇಶದಲ್ಲಿ ಕೊಲೆ, ಕೊಲೆ ಯತ್ನ, ಬೆದರಿಕೆ, ಹಫ್ತಾ ಸೇರಿ 97 ಅಪರಾಧ ಕೃತ್ಯ ಎಸಗಿದ್ದ ರವಿ ಪೂಜಾರಿ, ಪಶ್ಚಿಮ ಆಫ್ರಿಕಾ ದೇಶಗಳಾದ ಬುರ್ಕಿನಾ ಫಾಸೋ ಮತ್ತು ಸೆನಗಲ್​ನಲ್ಲಿ ಬಡವರ ಬಂಧುವಾಗಿ ಮುಖವಾಡ ಧರಿಸಿಕೊಂಡಿದ್ದ.
ನವರಾತ್ರಿ ವೇಳೆ ಬಡ ಜನರಿಗೆ ಬಟ್ಟೆ, ಧವಸ ಧಾನ್ಯ ವಿತರಿಸುತ್ತಿದ್ದ. ಬರಡು ಭೂಮಿಗೆ ಕೊಳವೆ ಬಾವಿ, ಕುಡಿಯುವ ನೀರಿನ ಸೌಲಭ್ಯ ಸೇರಿ ಇನ್ನಿತರ ಸಮಾಜ ಸೇವೆ ಮಾಡಿಕೊಂಡು ಒಳ್ಳೆಯ ಉದ್ಯಮಿಯ ಸೋಗಿನಲ್ಲಿ ಬದುಕುತ್ತಿದ್ದ. ಕರ್ನಾಟಕ ಪೊಲೀಸರು ಬಂಧಿಸಿದ ಮೇಲೆ ಸೆನಗಲ್ ಪ್ರಜೆಗಳ ಮುಂದೆ ರವಿ ಪೂಜಾರಿಯ ಮುಖವಾಡ ಬಯಲಾಗಿದೆ.
ಸೋಮವಾರ ರಾಜ್ಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಮರ್ ಕುಮಾರ್ ಪಾಂಡೆ, ರವಿ ಪೂಜಾರಿ ಬಂಧನದ ವಿವರ ಬಿಚ್ಚಿಟ್ಟರು.
ಭೂಗತ ಪಾತಕಿ ಚೋಟಾ ರಾಜನ್​ನ ಬಲಗೈ ಬಂಟನಾಗಿದ್ದ ರವಿ ಪೂಜಾರಿ, 1994ರಲ್ಲಿ ಕೊಲೆ ಪ್ರಕರಣದಲ್ಲಿ ಮುಂಬೈ ಪೊಲೀಸರ ಬಲೆಗೆ ಬಿದ್ದಿದ್ದ. ಜಾಮೀನಿನ ಮೇಲೆ ಹೊರ ಬಂದು ಕೊಲೆ, ಸುಲಿಗೆ, ಹಫ್ತಾ ಅಪರಾಧ ಕೃತ್ಯ ಶುರು ಮಾಡಿದ್ದ. ಮುಂಬೈ ಪೊಲೀಸರು ಬಂಧನಕ್ಕೆ ಬೆನ್ನತ್ತಿದ ವಿಷಯ ತಿಳಿದ ರವಿ ಪೂಜಾರಿ, ನಕಲಿ ಪಾಸ್ ಪೋರ್ಟ್ ಪಡೆದು ನೇಪಾಳ ಮಾರ್ಗವಾಗಿ ಬ್ಯಾಂಕಾಕ್​ಗೆ ಜಿಗಿದು ಅಲ್ಲಿಂದ ಉಗಾಂಡ ತಲುಪಿದ್ದ. ಅರಬ್ ದೇಶಗಳನ್ನು ಸುತ್ತಾಡಿ ಬುರ್ಕಿನ ಫಾಸೋಗೆ ತೆರಳಿ ಸ್ಥಳೀಯ ಯುವತಿಯನ್ನು ಮದುವೆ ಆಗಿ ಹೋಟೆಲ್, ರಿಯಲ್ ಎಸ್ಟೇಟ್, ಸಲೂನ್ ಶಾಪ್ ಉದ್ಯಮ ಆರಂಭಿಸಿ 12 ವರ್ಷಗಳ ಕಾಲ ಜೀವನ ನಡೆಸಿದ್ದ. ಸ್ಥಳೀಯ ನಾಗರಿಕತ್ವವನ್ನು ಪಡೆದಿದ್ದ.
ಮತ್ತೆ ಸೆನಗಲ್​ನ ರಾಜಧಾನಿ ಡಕರ್​ನಲ್ಲಿ ಉದ್ಯಮ ಮುಂದುವರಿಸಿ ಅಲ್ಲಿಯೂ ಸ್ಥಳೀಯವಾಗಿ ಸಮಾಜಸೇವೆ ಮಾಡುತ್ತಾ ಜನರ ಪ್ರೀತಿ ಗಳಿಸಿದ್ದ. ದಾನಧರ್ಮಕ್ಕೆ ತನ್ನ ಕೈಯಿಂದ ಹಣ ವಿನಿಯೋಗ ಮಾಡುತ್ತಿರಲಿಲ್ಲ. ಬದಲಿಗೆ ಪ್ರಯೋಜಕತ್ವ ಮತ್ತು ಭಾರತದಿಂದ ವಸೂಲಿ ಮಾಡುತ್ತಿದ್ದ ಹಫ್ತಾವನ್ನು ಬಳಸುತ್ತಿದ್ದ. ಈತನ ವಿರುದ್ಧ ಯಾವುದೇ ಸಣ್ಣ ಅಪರಾಧ ಪ್ರಕರಣಗಳು ಸಹ ಇರಲಿಲ್ಲ. ಮತ್ತೊಂದೆಡೆ ಭಾರತದಲ್ಲಿ ತನ್ನದೇ ಗ್ಯಾಂಗ್ ಜತೆ ಇಂಟರ್​ನೆಟ್ ಸಂಪರ್ಕದಲ್ಲಿ ಸದಾಕಾಲ ಸಕ್ರಿಯನಾಗಿ ಬಿಲ್ಡರ್, ರಿಯಲ್ ಎಸ್ಟೇಟ್ ಉದ್ಯಮಿಗಳು, ಸಿನಿಮಾ ರಂಗ, ಉದ್ಯಮಿಗಳಿಗೆ, ರಾಜಕೀಯ ವ್ಯಕ್ತಿಗಳಿಗೆ ಬೆದರಿಕೆವೊಡ್ಡಿ ಹಫ್ತಾ ವಸೂಲಿ ಮಾಡುತ್ತಿದ್ದ.
ನಕಲಿ ಪಾಸ್​ಪೋರ್ಟ್:ಮಂಗಳೂರಿನಲ್ಲಿ ಹುಟ್ಟಿದ ಹೆಸರು ರವಿ ಪ್ರಕಾಶ್ ಪೂಜಾರಿ. ಮುಂಬೈ ಭೂಗತ ಲೋಕಕ್ಕೆ ಕಾಲಿಟ್ಟಾಗ ಚೋಟಾ ರಾಜನ್, ತನ್ನ ಬಂಟನಿಗೆ ಆಂಟೋನಿ ಫರ್ನಾಂಡಿಸ್ ಎಂದು ಹೆಸರು ಬದಲಾಯಿಸಿದ್ದ. ಬಳಿಕ ಸೆನಗಲ್​ಗೆ ತೆರಳಿದ ರವಿ ಪೂಜಾರಿ, ಸೋನಿರಾಕಿ ಫರ್ನಾಂಡಿಸ್ ಎಂದು ಹೇಳಿಕೊಂಡಿದ್ದ.
ಪತ್ನಿ, ಮಕ್ಕಳ ಜತೆ ವಾಸ:ಡಕರ್​ನ ಕಚೇರಿ ಬಳಿಯ ಅಪಾರ್ಟ್​ವೆುಂಟ್​ನಲ್ಲಿ ಪತ್ನಿ, ಇಬ್ಬರು ಮಕ್ಕಳ ಜತೆಗೆ ನೆಲೆಸಿದ್ದ. 2019ರ ಜನವರಿಯಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡಿ ಬಹುಮಾನ ವಿತರಣೆಗೆಂದು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದ. ಭಾರತೀಯ ಪೊಲೀಸರ ಸೂಚನೆ ಮೇರೆಗೆ ರವಿ ಪೂಜಾರಿ ಮೇಲೆ ಕಣ್ಣಿಟ್ಟಿದ್ದ ಡಕರ್ ಪೊಲೀಸರು 4 ಬಸ್​ಗಳಲ್ಲಿ ಪೊಲೀಸರು ತೆರಳಿ ಆತನ ಕಚೇರಿ ಮತ್ತು ಮನೆ ಸುತ್ತುವರೆದು ಬಂಧಿಸಿದ್ದರು.
ಸುಳ್ಳು ವಂಚನೆ ಕೇಸ್:ಮೈಸೂರಿನ ವಿಳಾಸದಲ್ಲಿ ನಕಲಿ ಪಾಸ್​ಪೋರ್ಟ್ ಪಡೆದು ಬುರ್ಕಿನ ಫಾಸೋಗೆ ತೆರಳಿದ್ದ ರವಿ ಪೂಜಾರಿ, ನಾಗರಿಕತ್ವ ಪಡೆದಿದ್ದ. ಇದರ ಆಧಾರದ ಮೇಲೆ ಹೊಸ ಪಾಸ್​ಪೋರ್ಟ್ ಪಡೆದು ಸೆನಗಲ್​ಗೆ ಬಂದಿದ್ದ. ತಿಲಕನಗರ ಕೊಲೆ ಪ್ರಕರಣ ರೆಡ್ ಕಾರ್ನರ್ ನೋಟಿಸ್ ಮೇಲೆ ರವಿ ಪೂಜಾರಿಯನ್ನು ಸೆನೆಗಲ್ ಪೊಲೀಸರು 2019ರ ಜ.19ರಂದು ಬಂಧಿಸಿದ್ದರು.
ಹೆದರಿದ ಈತ ತನ್ನ ವಿರುದ್ಧ ಸುಳ್ಳು ವಂಚನೆ ಕೇಸ್ ದಾಖಲಿಸಿಕೊಂಡಿದ್ದ. ಈ ಕೇಸು ಮುಗಿಯುವವರೆಗೂ ಭಾರತಕ್ಕೆ ಹಸ್ತಾಂತರ ಮಾಡದಂತೆ ವಕೀಲರ ಮೂಲಕ ವಾದ ಮಂಡಿಸಿದ್ದ. ಆದರೆ, ವಂಚನೆ ಪ್ರಕರಣವನ್ನು ಕೋರ್ಟ್ ವಜಾ ಮಾಡಿತ್ತು. ಜಾಮೀನಿಗೂ ಅರ್ಜಿ ಸಲ್ಲಿಸಿದ್ದ. ಅದನ್ನು ಸಹ ಸುಪ್ರೀಂ ಕೋರ್ಟ್ ವಜಾ ಮಾಡಿತ್ತು. ಇದಾದ ಮೇಲೆ ಭಾರತ ಮತ್ತು ಸೆನಗಲ್ ನಡುವೆ ರಾಜತಾಂತ್ರಿಕ ಒಪ್ಪಂದ ಇರಲಿಲ್ಲ. ತುರ್ತಾಗಿ ಕೇಂದ್ರ ಸರ್ಕಾರ ಒಪ್ಪಂದ ಮಾಡಿಕೊಂಡು ಫೆ.22ಕ್ಕೆ ಆರೋಪಿಯನ್ನು ಭಾರತ ಸರ್ಕಾರಕ್ಕೆ ಒಪ್ಪಿಸಿದೆ.
ಅಮೆರಿಕ ಭೇಟಿ:ಬುರ್ಕಿನ ಫಾಸೋ ದೇಶದ ಪಾಸ್​ಪೋರ್ಟ್ ಪಡೆದಿದ್ದ ರವಿ ಪೂಜಾರಿ, ಅಮೆರಿಕಗೆ ಭೇಟಿ ಕೊಟ್ಟಿದ್ದ. ಜತೆಗೆ ಮಲೇಷ್ಯಾ, ಇಂಡೋನೇಷ್ಯಾಗೆ ಬಂದು ಹೋಗಿದ್ದ. ಭಾರತಕ್ಕೆ ಬಂದಿರಲಿಲ್ಲ.
ತನಿಖೆಗೆ ವಿಶೇಷ ತಂಡ:ಕರ್ನಾಟಕದಲ್ಲಿ ದಾಖಲಾಗಿರುವ ಅಪರಾಧ ಪ್ರಕರಣಗಳ ತನಿಖೆಗೆ ಡಿಜಿ-ಐಜಿಪಿ ಪ್ರವೀಣ್ ಸೂದ್ ಅವರು, ವಿಶೇಷ ತಂಡ ರಚಿಸಲಿದ್ದಾರೆ. ಆ ತಂಡದ ಮೂಲಕ ಎಲ್ಲ ಪ್ರಕರಣಗಳ ವಿಚಾರಣೆ ನಡೆಸಿ ಕೋರ್ಟ್​ಗೆ ಹೆಚ್ಚುವರಿ ಚಾರ್ಜ್​ಶೀಟ್ ಸಲ್ಲಿಸಲಾಗುತ್ತದೆ. ಜತೆಗೆ ತಲೆಮರೆಸಿಕೊಂಡಿರುವ ರವಿ ಪೂಜಾರಿ ಸಹಚರರ ಬಂಧನ ಕಾರ್ಯಾಚರಣೆ ಮುಂದುವರೆಯಲಿದೆ.
6 ತಿಂಗಳಲ್ಲಿಯೇ ಪತ್ತೆ
ಸಿನಿಮಾ ರಂಗ ಮತ್ತು ರಾಜಕೀಯ ಕ್ಷೇತ್ರದ ಪ್ರಭಾವಿ ವ್ಯಕ್ತಿಗೆ ಬೆದರಿಕೆ ಒಡ್ಡಿದ್ದ ರವಿ ಪೂಜಾರಿಯನ್ನು ಬಂಧಿಸಲೇ ಬೇಕೆಂದು ಅಂದಿನ ಸರ್ಕಾರ 2018ರ ಜು.19ರಂದು ಗುಪ್ತಚರ ಇಲಾಖೆ ಎಡಿಜಿಪಿ ಅಮರ್​ಕುಮಾರ್ ಪಾಂಡೆಗೆ ವಹಿಸಿತ್ತು. ಇದನ್ನು ಸವಾಲಾಗಿ ಸ್ವೀಕರಿಸಿದ ಪಾಂಡೆ, ಭೂಗತ ಪಾತಕಿ ಪತ್ತೆಗೆ ಬಲೆಬೀಸಿದ್ದರು. ಈ ನಡುವೆ ದಕ್ಷಿಣ  ಆಫ್ರಿಕಾದಲ್ಲಿ ಭಾರತೀಯ ಹೆಸರಿನಲ್ಲಿ ಉದ್ಯಮಿಯಾಗಿದ್ದ ಸುಳಿವು ಲಭ್ಯವಾಗಿತ್ತು. ಜತೆಗೆ ಕ್ರಿಕೆಟ್ ಪಂದ್ಯಾವಳಿಗೆ ಬಹುಮಾನ ವಿತರಿಸಲು ಬಂದಿದ್ದ ಫೋಟೋ ಸುಳಿವು ಸಿಕ್ಕಿದಾಗ ಆಯೋಜಕರು ಮತ್ತು ರಾ ಅಧಿಕಾರಿಗಳ ಸಹಾಯದಿಂದ 2019 ಜ.19ಕ್ಕೆ ಬಂಧಿಸಿದರು.
ಈ ಕುರಿತು ಮಾತನಾಡಿದ ಅಮರ್​ಕುಮಾರ್ ಪಾಂಡೆ, ತನಗೆ ವಹಿಸಿದ್ದ ಟಾಸ್ಕ್ ಫೆ.22ರ ತಡರಾತ್ರಿ 12.35ಕ್ಕೆ ಮುಗಿದಿದ್ದು, ತನಗೆ ವೃತ್ತಿ ಜೀವನದಲ್ಲಿ ತೃಪ್ತಿ ತಂದಿದೆ. ತನ್ನ ತಂಡದ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಇನ್​ಸ್ಪೆಕ್ಟರ್​ಗಳಾದ ಮಲ್ಲಪ್ಪ ಸಿದ್ದಪ್ಪ ಬೋಳೆತ್ತಿನ ಮತ್ತು ಜಯಪ್ರಕಾಶ್​ಗೆ ಅಭಿನಂದನೆಗಳನ್ನು ತಿಳಿಸಿದರು.
ಇಂಡಿಯಾ ಸೇ ಆಯೇ ಹೋ ಕ್ಯಾ?
ಕರ್ನಾಟಕ ಪೊಲೀಸರನ್ನು ಮೊದಲ ಬಾರಿಗೆ ನೋಡಿದ ರವಿ ಪೂಜಾರಿ, ‘ಇಂಡಿಯಾ ಸೇ ಆಯೇ ಹೋ ಕ್ಯಾ? ಎಂದು ನಡುಕ ಧ್ವನಿಯಲ್ಲಿ ಪ್ರಶ್ನಿಸಿದ್ದ. ಎಡಿಜಿಪಿ ಅಮರ್ ಕುಮಾರ್ ಪಾಂಡೆ, ತುಮ್ ಇಂಡಿಯಾ ಆವೋಗೇ?’ ಎಂದು ಮರು ಪ್ರಶ್ನಿಸಿದಾಗ ಪೂಜಾರಿ ಮುಖದಲ್ಲಿ ಭಯ, ಒತ್ತಡ ಹೆಚ್ಚಾಗಿತ್ತು. ವಿಮಾನದಲ್ಲಿ ಬರುವಾಗ ಮಾರ್ಗ ಮಧ್ಯೆ ಕರ್ನಾಟಕ ಪೊಲೀಸರು ಎಂಬುದು ಪೂಜಾರಿಗೆ ಗೊತ್ತಾಯಿತು.
30 ಲಕ್ಷ ರೂಪಾಯಿ ಲಾಭ
ಡಕರ್​ನಲ್ಲಿ ಮಹಾರಾಜ ರೆಸ್ಟೋರೆಂಟ್, ಎಜೆನ್ಸ್ ಆಂಬಿಯನ್ಸ್ ರಿಯಲ್ ಎಸ್ಟೇಟ್ ಕಂಪನಿ ಹಾಗೂ ಐಷಾರಾಮಿ ಆಂಬಿಯನ್ಸ್ ಸಲೂನ್ ಶಾಪ್ ತೆರೆದಿದ್ದ. ವರ್ಷಕ್ಕೆ 20 ರಿಂದ 30 ಲಕ್ಷ ರೂ. ಸಂಪಾದನೆ ಮಾಡುತ್ತಿದ್ದ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + three =
Remember me
