ಬೆಂಗಳೂರು:ಪ್ರತಿಪಕ್ಷ ಕಾಂಗ್ರೆಸ್ ಎರಡನೇ ಅಭ್ಯರ್ಥಿಯನ್ನು ಸ್ಪರ್ಧಾಕಣದಿಂದ ಹಿಂಪಡೆಯದಿರುವುದರಿಂದ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯ ತುರುಸು ಹೆಚ್ಚಿದೆ. ಅದರೊಂದಿಗೆ ಮೂರು ಪಕ್ಷಗಳಲ್ಲಿಯೂ ಆತಂಕ ಮನೆಮಾಡಿದ್ದು, ಮತಗಳನ್ನು ಸೆಳೆಯಲು ತಂತ್ರ-ಪ್ರತಿತಂತ್ರ ರೂಪಿಸುವುದರಿಂದ ಕುದುರೆ ವ್ಯಾಪಾರದ ಸಾಧ್ಯತೆ ದಟ್ಟವಾಗಿ ಗೋಚರಿಸಿದೆ.
ಬಿಜೆಪಿಯಿಂದ ಮೂವರು, ಕಾಂಗ್ರೆಸ್​ನಿಂದ ಇಬ್ಬರು ಹಾಗೂ ಜೆಡಿಎಸ್​ನಿಂದ ಒಬ್ಬರು ಸಲ್ಲಿಸಿದ ನಾಮಪತ್ರಗಳು ಅಂಗೀಕಾರವಾಗಿವೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಶುಕ್ರವಾರ ಯಾರೂ ಉಮೇದುವಾರಿಕೆಯಿಂದ ಹಿಂದೆ ಸರಿದಿಲ್ಲ.
ನಾಲ್ಕು ಸ್ಥಾನಗಳಿಗೆ ಆರು ಅಭ್ಯರ್ಥಿಗಳು ಸ್ಪರ್ಧಿಸಿದ್ದು, ನಿಗದಿಯಾದಂತೆ ಜೂ.10ರಂದು ಮತದಾನ ನಡೆಯಲಿದೆ ಎಂದು ಚುನಾವಣಾಧಿಕಾರಿಯೂ ಆದ ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ತಿಳಿಸಿದ್ದಾರೆ.
‘ಅಡ್ಡ’ ಮತದಾನದ ಆತಂಕ:ಸಂಖ್ಯಾಬಲ, ಮತಮೌಲ್ಯದ ಲೆಕ್ಕಾಚಾರದ ಪ್ರಕಾರ ಮೂರೂ ಪಕ್ಷಗಳಿಗೆ ನಾಲ್ಕನೇ ಅಭ್ಯರ್ಥಿಯನ್ನು ಗೆಲ್ಲಿಸಲು ಬೇಕಾದ ಮತಗಳಿಲ್ಲ. ಈ ಕೊರತೆ ಸರಿದೂಗಿಸುವ ಕಸರತ್ತು ‘ಅಡ್ಡ’ ಮತದಾನಕ್ಕೆ ದಾರಿ ಮಾಡಿಕೊಡಲಿದೆ ಎನ್ನುವ ಆತಂಕ ತ್ರಿವಳಿ ಪಕ್ಷಗಳಲ್ಲಿದೆ.
ಗೆಲ್ಲಲೇಬೇಕೆಂಬ ಹಠಕ್ಕೆ ಬಿದ್ದಿರುವುದರಿಂದ ಚುನಾವಣೆಯಲ್ಲಿ ಕುದುರೆ ವ್ಯಾಪಾರ ಜೋರಾಗಿಯೇ ನಡೆಯಬಹುದೆಂದು ಹೇಳಲಾಗುತ್ತಿದೆ. ಬೇರೆ ಬೇರೆ ತಂತ್ರಗಳನ್ನು ಪಕ್ಷಗಳು ರೂಪಿಸುತ್ತಿರುವುದರಿಂದ ಹೆಚ್ಚು ಬಂಡವಾಳ ಹೂಡುವವರು ಗೆಲುವಿನ ದಡ ಮುಟ್ಟಿದರೂ ಅಚ್ಚರಿಯಿಲ್ಲ. ಬಿಜೆಪಿಯಿಂದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ನಟ ಜಗ್ಗೇಶ್, ಕಾಂಗ್ರೆಸ್​ನಿಂದ ಹಾಲಿ ಸದಸ್ಯ ಜೈರಾಮ್ ರಮೇಶ್ ಪುನರಾಯ್ಕೆ ಖಚಿತವಾಗಿದ್ದರೆ, ಜೆಡಿಎಸ್ ಅಭ್ಯರ್ಥಿ ರಾಜ್ಯಸಭೆ ಮಾಜಿ ಸದಸ್ಯ ಕುಪೇಂದ್ರರೆಡ್ಡಿ ಗೆಲುವಿಗೆ 13 ಮತಗಳ ಕೊರತೆಯಿದೆ. ಪಕ್ಷದ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನವಾಗಿ ಕಾಂಗ್ರೆಸ್ ‘ವಿಪ್’ ಜಾರಿ ಮಾಡಿದ್ದರೆ, ಬಿಜೆಪಿ ಹಾಗೂ ಜೆಡಿಎಸ್ ಇದೇ ದಾರಿ ಹಿಡಿಯಲಿವೆ. ಮುಂಬರುವ ಚುನಾವಣೆಗಳ ದೃಷ್ಟಿಯಿಂದ ಮೂರೂ ಪಕ್ಷಗಳು ‘ಒಮ್ಮತ’ದ ಅಗ್ನಿಪರೀಕ್ಷೆಗೆ ಒಳಗಾಗಿವೆ.
ಒಗ್ಗಟ್ಟಿನ ಮಂತ್ರ:ಬಿಜೆಪಿಗೆ 3ನೇ ಗೆಲುವಿನ ಅವಕಾಶ ತಪ್ಪಿಸುವ ಉದ್ದೇಶದಿಂದ ಕಾಂಗ್ರೆಸ್​ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ದೆಹಲಿಯಲ್ಲಿ ಪಕ್ಷದ ಹೈಕಮಾಂಡ್ ಮನವೊಲಿಸಲು ಪ್ರಯತ್ನಿಸಿದರಾದರೂ ಫಲ ನೀಡಲಿಲ್ಲ. ಪಕ್ಷದ ಎರಡನೇ ಅಭ್ಯರ್ಥಿ ಮನ್ಸೂರ್ ಖಾನ್​ರನ್ನು ಸ್ಪರ್ಧೆಯಿಂದ ಹಿಂದಕ್ಕೆ ಸರಿಸಿ, ‘ಆಪ್ತ’ರಾದ ಕುಪೇಂದ್ರ ರೆಡ್ಡಿ ಗೆಲುವು ಸುಗಮಗೊಳಿಸಲು ಈ ಕಸರತ್ತು ನಡೆಸಿದರು ಎಂದು ಹೇಳಲಾಗಿದೆ.
ಮುಸ್ಲಿಂ ಅಭ್ಯರ್ಥಿ ನಾಮಪತ್ರ ಹಿಂತೆಗೆಸಿದರೆ ತಪು್ಪ ಸಂದೇಶ ರವಾನೆಯಾಗಲಿದೆ ಎಂಬ ದಿಗಿಲು, ಜೆಡಿಎಸ್​ಗೆ ಬಿಟ್ಟುಕೊಡಬಾರದು ಎನ್ನುವ ಒತ್ತಡ ಹೈಕಮಾಂಡ್​ಗೆ ವೇದ್ಯವಾಯಿತು. ಎರಡನೇ ಅಭ್ಯರ್ಥಿ ಸೋತರೂ ಪರವಾಗಿಲ್ಲ ಒಗ್ಗಟ್ಟು ಮುಖ್ಯ. ಮತಗಳು ಚದುರಿಹೋಗದಂತೆ ನೋಡಿಕೊಳ್ಳಬೇಕು ಎಂದು ಕಾಂಗ್ರೆಸ್ ವರಿಷ್ಠರು ಸ್ಪಷ್ಟ ನಿಲುವು ತಳೆದರು ಎಂದು ಮೂಲಗಳು ತಿಳಿಸಿವೆ. ನಾಮಪತ್ರ ಹಿಂಪಡೆಯಲು ಒಂದೂವರೆ ತಾಸು ಉಳಿದಿರುವಾಗಲೇ ಶಾಸಕರಿಗೆ ‘ವಿಪ್’ ನೀಡುವ ಮೂಲಕ ಕಾಂಗ್ರೆಸ್ ತನ್ನ ನಿರ್ಧಾರವೇನೆಂದು ಜೆಡಿಎಸ್​ಗೆ ಸ್ಪಷ್ಟಪಡಿಸಿತು.
ರಣತಂತ್ರಕ್ಕೆ ಚಾಲನೆ:ಒಂದು ಸ್ಥಾನಕ್ಕೆ ತ್ರಿಕೋನ ಸ್ಪರ್ಧೆ ನಿಚ್ಚಳವಾಗಿರುವ ಕಾರಣ ಪಕ್ಷಗಳ ನಾಯಕರು ರಣತಂತ್ರ ರೂಪಿಸುತ್ತಿದ್ದಾರೆ. ಕೈ-ದಳ ಪೈಪೋಟಿಯಿಂದ ಗೆಲುವು ಸುಲಭದ ತುತ್ತು ಎಂದು ಬಿಂಬಿತ ವಾಗಿದ್ದರೂ ಆಡಳಿತ ಬಿಜೆಪಿ ನಾಯಕರು ‘ಅತಿಯಾದ ಆತ್ಮವಿಶ್ವಾಸ’ ಬಿಟ್ಟು ತಂತ್ರಗಾರಿಕೆ ಹೆಣೆಯಲಾರಂಭಿಸಿದ್ದಾರೆ. 2ನೇ ಅಭ್ಯರ್ಥಿ ಗೆಲ್ಲುತ್ತಾರೆ ಎಂಬ ವಿಶ್ವಾಸ ದಿಂದಲೇ ಸ್ಪರ್ಧೆಗೆ ಇಳಿಸಿದ್ದೇವೆ. ಮನ್ಸೂರ್ ಖಾನ್ ಅವರನ್ನು ಮನಸಾಕ್ಷಿ ಮತಗಳು ಗೆಲ್ಲಿಸಲಿವೆ ಎಂದು ಸಿದ್ದರಾಮಯ್ಯ ನೀಡಿದ ಹೇಳಿಕೆ ಕುತೂಹಲಕ್ಕೆ ಎಡೆಮಾಡಿದೆ. ಮೊದಲ ಪ್ರಾಶಸ್ಱದ ಮತ ಪಡೆದು ಮೂರನೇ ಅಭ್ಯರ್ಥಿ ಲೆಹರ್​ಸಿಂಗ್ ಸಿರೋಯಾ ಜಯ ಗಳಿಸುವಂತೆ ಮಾಡುವ ಪ್ರಯತ್ನ ನಡೆದಿದೆ.
ವಿಪ್​ಗೇನು ಬೆಲೆ?:ಮೂರೂ ಪಕ್ಷಗಳು ತಮ್ಮ ಶಾಸಕರಿಗೆ ವಿಪ್ ನೀಡುತ್ತಿವೆ. ಆದರೆ, ಆ ವಿಪ್​ಗೆ ಎಷ್ಟು ಬೆಲೆ ಇದೆ ಎಂಬ ಪ್ರಶ್ನೆ ಇದೆ. ಏಕೆಂದರೆ ಚುನಾವಣೆ ವಿಧಾನಸಭೆಯ ಸಭಾಂಗಣದಲ್ಲಿ ನಡೆಯುವುದಿಲ್ಲ. ಅಡ್ಡ ಮತದಾನ ಮಾಡುವ ಶಾಸಕರನ್ನು ಅಮಾನತು ಮಾಡಬಹುದು ಅಷ್ಟೇ ಹೊರತು ಸ್ಪೀಕರ್​ಗೆ ದೂರು ನೀಡಿದರೂ ಅದರೊಂದಿಗೆ ನೀಡಲು ದಾಖಲೆಯ ಕೊರತೆ ಇರುತ್ತದೆ. ಚುನಾವಣಾಧಿಕಾರಿ ಮತಪತ್ರ ನೀಡುವುದಿಲ್ಲ. ಆದ್ದರಿಂದ ವಿಪ್ ನೀಡಿದರೂ ಉಲ್ಲಂಘನೆ ಮಾಡಲು ಕೆಲ ಶಾಸಕರು ಮುಂದಾದರೂ ಆಶ್ಚರ್ಯಪಡಬೇಕಾಗಿಲ್ಲ.
ಬಿಜೆಪಿ ಬಯಕೆ:ಎರಡು ಅಭ್ಯರ್ಥಿಗಳನ್ನು ಗೆಲ್ಲಿಸಿದ ನಂತರ ಬಿಜೆಪಿ ಬಳಿ ಇರುವ 32 ಹೆಚ್ಚುವರಿ ಮತಗಳ ಜತೆಗೆ ಎರಡನೇ ಪ್ರಾಶಸ್ಱದ 90 ಮತಗಳಿಂದ ಜಯ ಸುಲಭ ಸಾಧ್ಯ ಎಂದು ಹೇಳಲಾಗುತ್ತಿದೆ. ಆದರೂ, ಜೆಡಿಎಸ್ ಮತಬುಟ್ಟಿಗೆ ಕೈಹಾಕಲು ಮುಂದಾಗಿರುವುದು ಗಮನಾರ್ಹ. ಬಿಜೆಪಿಯಲ್ಲಿಯೂ ಕೆಲ ಶಾಸಕರಿಗೆ ಅಸಮಾಧಾನ ಇದ್ದೇ ಇದೆ. ಅಂತಹ ಶಾಸಕರು ಅಡ್ಡಮತದಾನ ಮಾಡದಿದ್ದರೂ ಮತ ಅಸಿಂಧು ಮಾಡಿದರೆ? ಎಂಬ ಆತಂಕ ಪಕ್ಷದ ನಾಯಕರಲ್ಲಿದೆ. ಅದಕ್ಕಾಗಿಯೇ ಸಮಾಧಾನ ಮಾಡುವ ಪ್ರಯತ್ನಕ್ಕೂ ನಾಯಕರು ಮುಂದಾಗಿದ್ದಾರೆ.
ಜೆಡಿಎಸ್​ಗೆ ಸವಾಲು:ಒಂದು ಕಾಲು ಹೊರಗಿಟ್ಟಿರುವ ಹಲವು ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಜತೆಗೆ ಕೊರತೆ ಬೀಳುವ 13 ಮತಗಳನ್ನು ತುಂಬಿಸಿಕೊಳ್ಳುವ ಸವಾಲು ದಳಪತಿಗಳ ಮುಂದಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಎರಡೂ ರಾಷ್ಟ್ರೀಯ ಪಕ್ಷಗಳು ಉರುಳಿಸಿರುವ ದಾಳಕ್ಕೆ ಪಕ್ಷದ ಶಾಸಕರನ್ನು ಬೀಳದಂತೆ ನೋಡಿಕೊಳ್ಳುವುದು ‘ರಾಜಕೀಯ ತಂತ್ರಗಾರಿಕೆ’ ನಿಪುಣರಿಗೆ ಬಿಸಿತುಪ್ಪವಾಗಿದೆ. ಕಟುವಾಸ್ತವವನ್ನು ತಿಳಿದೇ ಕೋಮುವಾದಿಗಳನ್ನು ದೂರವಿಡಬೇಕು ಎಂಬ ನೆಪವೊಡ್ಡಿ ಕಾಂಗ್ರೆಸ್ ಬೆಂಬಲ ಗಿಟ್ಟಿಸಿಕೊಳ್ಳಲು ಹವಣಿಸಿದರು. ಕಾಂಗ್ರೆಸ್ ಮತ್ತು ಬಿಜೆಪಿ ಹೆಗಲ ಮೇಲೆ ‘ನೆಪ’ದ ಬಂದೂಕು ಇಟ್ಟು ಗುರಿ ಸಾಧಿಸಿಕೊಳ್ಳುತ್ತಿದ್ದ ಜೆಡಿಎಸ್​ಗೆ ಈ ಚುನಾವಣೆ ಪರೀಕ್ಷೆ ಒಡ್ಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಕಾಂಗ್ರೆಸ್ ಲೆಕ್ಕ:ಕಾಂಗ್ರೆಸ್​ನಲ್ಲಿ ಎರಡನೇ ಅಭ್ಯರ್ಥಿಗೆ ಎರಡನೇ ಪ್ರಾಶಸ್ಱದ 45 ಮತಗಳು ಸಿಗಲಿವೆ. ಆದರೆ, ಬಿಜೆಪಿಯಲ್ಲಿ ಎರಡನೇ ಪ್ರಾಶಸ್ಱ ಮತಗಳ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ಬಿಜೆಪಿ ಗೆಲ್ಲದಂತೆ ಮಾಡಲು ಜೆಡಿಎಸ್ ಮತಬುಟ್ಟಿಗೆ ಕೈ ಹಾಕಲು ಮುಂದಾಗಿದ್ದಾರೆ. ಜೆಡಿಎಸ್​ನಿಂದ ಕನಿಷ್ಠ ಎಂಟು ಶಾಸಕರನ್ನು ಸೆಳೆಯಬೇಕೆಂದು ಲೆಕ್ಕಾಚಾರ ಹಾಕಿಕೊಂಡಿದ್ದಾರೆ. ಇವರೊಂದಿಗೆ ಎರಡನೇ ಪ್ರಾಶಸ್ಱ ಮತಗಳನ್ನು ಸೇರಿಸಿ ಗೆಲುವು ಸುಲಭವಾಗಲಿದೆ ಎಂದು ತಂತ್ರ ರೂಪಿಸುತ್ತಿದ್ದಾರೆ. ಆದರೆ, ಪಕ್ಷದ ಮತಗಳು ಚೆದುರದಂತೆ ನೋಡಿಕೊಳ್ಳುವುದು ಮಾತ್ರ ನಾಯಕರ ಉದ್ದೇಶವೆಂಬ ಮಾತೂ ಕೇಳಿಬರುತ್ತಿದೆ.

ನವದೆಹಲಿ:ಕಾಂಗ್ರೆಸ್​ನ ಪಿ.ಚಿದಂಬರಂ, ರಾಜೀವ್ ಶುಕ್ಲಾ, ಬಿಜೆಪಿಯ ಸುಮಿತ್ರಾ ವಾಲ್ಮೀಕಿ, ಕವಿತಾ ಪಾಟೀದಾರ್, ಕಾಂಗ್ರೆಸ್​ನ ಮಾಜಿ ನಾಯಕ ಕಪಿಲ್ ಸಿಬಲ್, ಆರ್​ಜೆಡಿಯ ಮಿಸಾ ಭಾತಿ, ಆರ್​ಎಲ್​ಡಿಯ ಜಯಂತ್ ಚೌಧರಿ ಸೇರಿ 41 ಅಭ್ಯರ್ಥಿಗಳು ಶುಕ್ರವಾರ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉತ್ತರಪ್ರದೇಶದ ಎಲ್ಲ 11 ಅಭ್ಯರ್ಥಿಗಳು, ತಮಿಳುನಾಡಿನಲ್ಲಿ ಆರು, ಬಿಹಾರದಲ್ಲಿ ಐದು, ಆಂಧ್ರಪ್ರದೇಶದಲ್ಲಿ ನಾಲ್ಕು, ಮಧ್ಯಪ್ರದೇಶ ಮತ್ತು ಒಡಿಶಾಗಳಲ್ಲಿ ತಲಾ ಮೂರು, ಛತ್ತೀಸ್​ಗಢ, ಪಂಜಾಬ್, ತೆಲಂಗಾಣ, ಜಾರ್ಖಂಡ್​ಗಳಲ್ಲಿ ತಲಾ ಇಬ್ಬರು, ಉತ್ತರಾಖಂಡದಲ್ಲಿ ಒಬ್ಬರು ಅವಿರೋಧವಾಗಿ ಆಯ್ಕೆಯಾದರು.
ಅವಿರೋಧ ಆಯ್ಕೆಯಾದ 41 ಅಭ್ಯರ್ಥಿಗಳ ಪೈಕಿ ಬಿಜೆಪಿಯ 14, ಕಾಂಗ್ರೆಸ್ ಮತ್ತು ವೈಎಸ್​ಆರ್ ಕಾಂಗ್ರೆಸ್​ನ ತಲಾ 4, ಡಿಎಂಕೆ ಮತ್ತು ಬಿಜೆಡಿಯ ತಲಾ ಮೂವರು, ಎಎಪಿ, ಆರ್​ಜೆಡಿ, ಟಿಆರ್​ಎಸ್, ಎಐಎಡಿಎಂಕೆಯ ತಲಾ ಇಬ್ಬರು, ಜೆಎಂಎಂ, ಜೆಡಿಯು, ಎಸ್​ಪಿ ಮತ್ತು ಆರ್​ಎಲ್​ಡಿಯ ತಲಾ ಒಬ್ಬರು ಮತ್ತು ಸ್ವತಂತ್ರ ಅಭ್ಯರ್ಥಿ ಸಿಬಲ್ ಸೇರಿದ್ದಾರೆ.
ಮಹಾರಾಷ್ಟ್ರದ ಆರು, ರಾಜಸ್ಥಾನ ಮತ್ತು ಕರ್ನಾಟಕದ ತಲಾ ನಾಲ್ಕು, ಹರಿಯಾಣದ ಎರಡು ಸ್ಥಾನಗಳಿಗೆ ಜೂನ್ 10ರಂದು ಚುನಾವಣೆ ನಡೆಯಲಿದೆ. ಫಲಿತಾಂಶ ಅದೇ ದಿನ ಘೋಷಣೆ ಆಗಲಿದೆ. ತಮಿಳುನಾಡಿನಲ್ಲಿ ಬಹಳ ವರ್ಷಗಳ ನಂತರ ಕಾಂಗ್ರೆಸ್ ಗೆಲುವು ಕಂಡಿದೆ. ಚಿದಂಬರಂ ರಾಜ್ಯಸಭೆಗೆ ಆಯ್ಕೆಯಾಗಿರುವುದು ಇದಕ್ಕೆ ಕಾರಣ. 2016ರಲ್ಲಿ ಮಹಾರಾಷ್ಟ್ರದಿಂದ ಚಿದಂಬರಂ ರಾಜ್ಯಸಭೆ ಪ್ರವೇಶಿಸಿದ್ದರು.
ನಾನು ಏನು ಹೇಳುತ್ತೇನೋ ಅದನ್ನು ಮಾತ್ರ ಮಾಡುತ್ತೇನೆ… ಶುರುವಾಯ್ತು ಉಪ್ಪಿ ‘UI’

ಶಿವನ ಪಾತ್ರಧಾರಿಯ ಕೊರಳಲ್ಲಿ ಜೀವಂತ ನಾಗರಹಾವು!; ಬೆರಗಾಗಿ ನಾಟಕ ನೋಡಿದ ಪ್ರೇಕ್ಷಕರು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 4 =
Remember me
