ಲಖನೌ:ಉತ್ತರಪ್ರದೇಶದ ಹಾಥರಸ್​ನಲ್ಲಿ ಮಂಗಳವಾರ ಸತ್ಸಂಗ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ನೂರಕ್ಕೂ ಅಧಿಕ ಜನರು ಸಾವಿಗೀಡಾದ ಪ್ರಕರಣ ಸಂಬಂಧ ಆಯೋಜಕರ ನಿರ್ಲಕ್ಷ್ಯ, ನಿಯಮ ಉಲ್ಲಂಘನೆ ಸೇರಿದಂತೆ ಬುಧವಾರ ಮತ್ತಷ್ಟು ವಿಷಯಗಳು ಬೆಳಕಿಗೆ ಬಂದಿವೆ.
ಈ ಸತ್ಸಂಗಕ್ಕೆ 80 ಸಾವಿರ ಜನರಿಗೆ ಸೇರಲಷ್ಟೇ ಅನುಮತಿ ನೀಡಲಾಗಿದ್ದರೂ ಅಂದಾಜು 2.5 ಲಕ್ಷ ಮಂದಿ ಜಮಾಯಿಸಿದ್ದರು. ಆಯೋಜಕರು ಅನುಮತಿ ಪಡೆಯುವಾಗ ನಿರೀಕ್ಷಿತ ಜನಸಂಖ್ಯೆ ಕುರಿತು ತಪು್ಪ ಮಾಹಿತಿ ನೀಡಿದ್ದಲ್ಲದೆ, ಸಂಚಾರ ನಿರ್ವಹಣೆ ಹೊಣೆಗಾರಿಕೆಯನ್ನೂ ನಿರ್ಲಕ್ಷಿಸಿದ್ದರು. ಕಾಲ್ತುಳಿದ ಬಳಿಕ ಸಾಕ್ಷ್ಯನಾಶಕ್ಕೂ ಯತ್ನಿಸಿದ್ದರು ಎಂಬುದನ್ನು ಆಯೋಜಕರ ವಿರುದ್ಧ ದಾಖಲಿಸಿದ ಎಫ್​ಐಆರ್​ನಲ್ಲಿ ಉಲ್ಲೇಖಿಸಲಾಗಿದೆ. ಸತ್ಸಂಗದ ಮುಖ್ಯ ಸೇವಾಕರ್ತ ದೇವಪ್ರಕಾಶ್ ಮಧುಕರ್ ಮತ್ತಿತರ ಆಯೋಜಕರ ವಿರುದ್ಧ ಸಿಕಂದರಾ ರಾವ್ ಠಾಣೆ ಪೊಲೀಸರು ಈ ಎಫ್​ಐಆರ್ ದಾಖಲಿಸಿದ್ದಾರೆ. ಸಿಕಂದರಾ ರಾವ್ ಪ್ರದೇಶದ ಜಿ.ಟಿ.ರಸ್ತೆಯ ಫುಲ್ರಾಯ್ ಮತ್ತು ಮುಗಲ್​ಗರ್ಹಿ ನಡುವೆ ಈ ದೇವಪ್ರಕಾಶ್ ಮಧುಕರ್ ಮತ್ತಿತರರು ಈ ಸತ್ಸಂಗ ಆಯೋಜಿಸಿದ್ದರು ಎಂದು ದೂರುದಾರ ಬ್ರಿಜೇಶ್ ಪಾಂಡೆ ಹೇಳಿಕೆ ನೀಡಿರುವುದು ಎಫ್​ಐಆರ್​ನಲ್ಲಿ ದಾಖಲಾಗಿದೆ. ಭಾರತೀಯ ನ್ಯಾಯಸಂಹಿತೆಯ ವಿವಿಧ ಸೆಕ್ಷನ್​ಗಳ ಅನ್ವಯ ಕೇಸು ದಾಖಲಿಸಿಕೊಳ್ಳಲಾಗಿದೆ. ಪೊಲೀಸರು ಹಾಗೂ ಸ್ಥಳೀಯಾಡಳಿತ ಲಭ್ಯ ಸಂಪನ್ಮೂಲಗಳ ಮೂಲಕ ಏನೆಲ್ಲ ಸಾಧ್ಯವೋ ಅವೆಲ್ಲವನ್ನೂ ಕೈಗೊಂಡಿದ್ದು, ಅವರದ್ದು ಇದರಲ್ಲಿ ಯಾವುದೇ ದೋಷವಿಲ್ಲ ಎಂಬುದಾಗಿಯೂ ಎಫ್​ಐಆರ್​ನಲ್ಲಿ ಉಲ್ಲೇಖಿಸಲಾಗಿದೆ.
ವರದಿಯಲ್ಲಿ ಪ್ರಸ್ತಾಪ:ಹಾಥರಸ್ ಕಾಲ್ತುಳಿತ ಉಂಟಾಗಲು ಭಕ್ತರು ಭೋಲೆ ಬಾಬಾ ಪಾದದ ಬಳಿಯ ಮಣ್ಣನ್ನು ಸಂಗ್ರಹಿಸಲು ಮುಗಿಬಿದ್ದಿದ್ದು ಕಾರಣ ಎಂದು ಮಂಗಳವಾರ ಪ್ರಾಥಮಿಕ ಮಾಹಿತಿಯಲ್ಲಿ ತಿಳಿದುಬಂದಿತ್ತು. ಘಟನೆ ವೇಳೆ ಸ್ಥಳದಲ್ಲಿದ್ದ ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ ಬುಧವಾರ ಸಲ್ಲಿಸಿದ್ದ ವರದಿಯಲ್ಲೂ ಅದೇ ವಿಚಾರ ಪ್ರಸ್ತಾಪಗೊಂಡಿದೆ. ಸತ್ಸಂಗ ಪೆಂಡಾಲ್​ನಲ್ಲಿ 2 ಲಕ್ಷಕ್ಕೂ ಅಧಿಕ ಭಕ್ತರು ಜಮಾಯಿಸಿದ್ದರು. ಸತ್ಸಂಗದ ಕೊನೆಯಲ್ಲಿ ಭೋಲೆ ಬಾಬಾ (ನಾರಾಯಣ್ ಸಾಕಾರ್ ಹರಿ) ತಮ್ಮ ವಾಹನದತ್ತ ಸಾಗುತ್ತಿದ್ದಾಗ ಕಾಲಿಗೆರಗಿ ಅವರ ಪಾದದ ಬಳಿಯ ಮಣ್ಣನ್ನು ಸಂಗ್ರಹಿಸಲು ಮುಗಿಬಿದ್ದರು. ಬಾಬಾ ಅವರ ಖಾಸಗಿ ಭದ್ರತಾ ಸಿಬ್ಬಂದಿ ಜನರನ್ನು ದೂಡಿ ನಿಯಂತ್ರಿಸಲು ಯತ್ನಿಸಿದರೂ ಮತ್ತಷ್ಟು ನೂಕಾಟ ಉಂಟಾಯಿತು. ಜಾರುತ್ತಿದ್ದ ನೆಲದಲ್ಲಿ ಜೋರಾದ ನೂಕುನುಗ್ಗಲಿನಿಂದಾಗಿ ಒಬ್ಬರ ಮೇಲೊಬ್ಬರು ಬಿದ್ದು ಉಸಿರುಗಟ್ಟಿ ಸಾವು-ನೋವುಗಳು ಹೆಚ್ಚಾದವು. ಅದರಲ್ಲೂ ಕೆಲವರು ಬಾಬಾ ಹೊರಡುತ್ತಿದ್ದಂತೆ ಅವರ ಕಾರಿನ ಚಕ್ರದಡಿಯ ಮಣ್ಣನ್ನೂ ಸಂಗ್ರಹಿಸಲು ಮುಂದಾಗಿದ್ದರು ಎಂದು ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ ರವೀಂದ್ರ ಕುಮಾರ್ ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಸ್ಥಳದಲ್ಲಿ ಭದ್ರತೆ ಮತ್ತು ಶಿಸ್ತುಪಾಲನೆ ಸಲುವಾಗಿ ಅಂದಾಜು 40 ಪೊಲೀಸರಷ್ಟೇ ಇದ್ದರು. ಆದರೆ ಕಾಲ್ತುಳಿತ ಉಂಟಾಗುತ್ತಿದ್ದಂತೆ ಪರಿಸ್ಥಿತಿ ಅವರ ಕೈಮೀರಿ ಹೋಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ನ್ಯಾಯಾಂಗ ತನಿಖೆ:ಹಾಥರಸ್ ಸತ್ಸಂಗದಲ್ಲಿನ ಕಾಲ್ತುಳಿತ ದುರಂತ ಸಂಬಂಧ ನ್ಯಾಯಾಂಗ ತನಿಖೆ ನಡೆಸಲಾಗುವುದು ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಬುಧವಾರ ಘೋಷಿಸಿದ್ದಾರೆ. ಮೃತಪಟ್ಟವರಲ್ಲಿ 6 ಮಂದಿ ನಮ್ಮ ರಾಜ್ಯದವರು, ನಾಲ್ವರು ಹರಿಯಾಣದವರು ಹಾಗೂ ಮಧ್ಯಪ್ರದೇಶ ಮತ್ತು ರಾಜಸ್ಥಾನದಿಂದ ತಲಾ ಒಬ್ಬರು ಎಂದು ಅವರು ಮಾಹಿತಿ ನೀಡಿದ್ದಾರೆ. ಸ್ಥಳೀಯಾಡಳಿತ ಮತ್ತು ಪೊಲೀಸರು ಕೂಡ ನ್ಯಾಯಾಂಗ ತನಿಖೆಯ ಭಾಗವಾಗಿರಲಿದ್ದು, ಪ್ರಕರಣಕ್ಕೆ ಯಾರು ಕಾರಣ ಇಲ್ಲವೇ ಅದು ಪಿತೂರಿಯೇ ಎಂಬಿತ್ಯಾದಿ ಹಿನ್ನೆಲೆಯಲ್ಲಿ ತನಿಖೆ ನಡೆಯಲಿದೆ ಎಂದರು.
ಲೈಂಗಿಕ ದೌರ್ಜನ್ಯ ಆರೋಪಿ:ಸತ್ಸಂಗ ನಡೆಸುತ್ತಿದ್ದ ಸ್ವಯಂಘೋಷಿತ ದೇವಮಾನ ಭೋಲೆ ಬಾಬಾ, ನಾರಾಯಣ್ ಸಾಕಾರ್ ಹರಿ ಎಂದೂ ಕರೆಯಲ್ಪಡುವ ಸೂರಜ್ ಪಾಲ್ ವಿವಾದಿತ ವ್ಯಕ್ತಿಯಾಗಿದ್ದು, ಈತನ ವಿರುದ್ಧ ಲೈಂಗಿಕ ದೌರ್ಜನ್ಯ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ. ಆಗ್ರಾ, ಇಟಾ, ಕಸ್​ಗಂಜ್, ಫಾರೂಕ್​ಬಾದ್ ಮತ್ತು ರಾಜಸ್ಥಾನಗಳಲ್ಲಿ ಈತನ ವಿರುದ್ಧ ಹಲವಾರು ಕೇಸ್​ಗಳಿದ್ದರೂ ಈತ ಆಧ್ಯಾತ್ಮಿಕತೆಯ ಹೆಸರಿನಲ್ಲಿ ದೊಡ್ಡ ಜನಸಮೂಹವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದ.
ಕಣ್ಣೆದುರೇ ಮಗಳ ಸಾವು, ಮೊಮ್ಮಗ ಕಣ್ಮರೆ:ಈ ಸತ್ಸಂಗಕ್ಕೆ ರಾಯ್ಬರೇಲಿ ಜಿಲ್ಲೆಯಿಂದ ಮಿತಿಮೀರಿ ಜನರನ್ನು ತುಂಬಿದ್ದ 2 ಬಸ್​ಗಳು ಬಂದಿದ್ದವು. ಅದರಲ್ಲಿನ ಛೇಡಿ ಲಾಲ್(65) ಅವರ ಪುತ್ರಿ ರೂಬಿ (34) ಕಣ್ಣೆದುರೇ ಕಾಲ್ತುಳಿತಕ್ಕೆ ಸಿಲುಕಿ ಸತ್ತರೆ, ಐದು ವರ್ಷದ ಮೊಮ್ಮಗ ಜನಜಂಗುಳಿಯಲ್ಲಿ ಕಾಣೆ ಆಗಿದ್ದಾನೆ. ನನ್ನ ಮಗಳು ಕಣ್ಣೆದುರೇ ಕಾಲ್ತುಳಿತಕ್ಕೆ ಸಿಲುಕಿ ತೀವ್ರ ಗಾಯಗೊಂಡಳು, ಅವಳಿಗೆ ಚಿಕಿತ್ಸೆ ಕೊಡಿಸಿದರೂ ಬದುಕಲಿಲ್ಲ, ಮೊಮ್ಮಗ ಕಾಣೆಯಾಗಿದ್ದು, ಎಲ್ಲಿದ್ದಾನೋ ಹೇಗಿದ್ದಾನೋ ಗೊತ್ತಿಲ್ಲ. ಈ ಸತ್ಸಂಗಕ್ಕೆ ನಾನು ಇದೇ ಮೊದಲ ಸಲ ಬಂದಿದ್ದು, ಬರಬಾರದಿತ್ತು ಎಂದು ಶವಾಗಾರ ಬಳಿ ಇದ್ದ ಛೇಡಿ ಲಾಲ್ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × two =
Remember me
