ಸ್ಟಾಕ್​ಹೋಂ:ಜಾಗತಿಕ ಮಿಲಿಟರಿ ವೆಚ್ಚ 2021ರಲ್ಲಿ ಸಾರ್ವಕಾಲಿಕ ಗರಿಷ್ಠ 2.1 ಟ್ರಿಲಿಯನ್ ಡಾಲರ್ ತಲುಪಿತ್ತು ಎಂದು ಸ್ಟಾಕ್​ಹೋಂ ಅಂತಾರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆ (ಎಸ್​ಐಪಿಆರ್​ಐ-ಸಿಪ್ರಿ) ಸೋಮವಾರ ಹೇಳಿದೆ. ಅಮೆರಿಕ, ಚೀನಾ ಮತ್ತು ಭಾರತ ಅತಿ ಹೆಚ್ಚು ಮಿಲಿಟರಿ ವೆಚ್ಚ ಮಾಡುವ ಮೂರು ದೇಶಗಳಾಗಿವೆ ಎಂದೂ ಅದು ತಿಳಿಸಿದೆ.
ಜಗತ್ತಿನ ವಿವಿಧ ಸರ್ಕಾರಗಳು ಆಹಾರ, ಶಿಕ್ಷಣ, ವಸತಿ ಮುಂತಾದ ಜೀವನಾವಶ್ಯಕ ಅಂಶಗಳಿಗಿಂತ ಹೆಚ್ಚಾಗಿ ವಿನಾಶಕಾರಿ ಯುದ್ಧಗಳ ತಯಾರಿಗೇ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಈ ಮಾಹಿತಿಯಿಂದ ಬಯಲುಗೊಂಡಿದೆ.
2021ರಲ್ಲಿ ಜಾಗತಿಕ ಮಿಲಿಟರಿ ವೆಚ್ಚ ಶೇಕಡ 0.7ರಷ್ಟು ಏರಿಕೆಯಾಗಿ 2,113 ಬಿಲಿಯನ್ ಡಾಲರ್​ಗೆ ತಲುಪಿತ್ತು. ಅಮೆರಿಕ, ಚೀನಾ, ಭಾರತ, ಬ್ರಿಟನ್ ಮತ್ತು ರಷ್ಯಾ 2021ರಲ್ಲಿ ಮಿಲಿಟರಿಗಾಗಿ ಅತಿ ಹೆಚ್ಚು ಹಣ ವ್ಯಯಿಸಿದ ಐದು ದೇಶಗಳಾಗಿವೆ. ಈ ಐದು ದೇಶಗಳ ವೆಚ್ಚ ಒಟ್ಟು ಜಾಗತಿಕ ಮಿಲಿಟರಿ ವೆಚ್ಚದ ಶೇಕಡ 62ರಷ್ಟಾಗುತ್ತದೆ ಎಂದು ಸಿಪ್ರಿ ವಿವರಿಸಿದೆ.
ಹಣದುಬ್ಬರದಿಂದಾಗಿ ವಾಸ್ತವ ಬೆಳವಣಿಗೆ ದರದಲ್ಲಿ ಇಳಿಕೆಯಾಗಿದೆ. ಆದರೆ, ಮಿಲಿಟರಿ ವೆಚ್ಚ ಶೇಕಡ 6.1ರಷ್ಟು ಏರಿಕೆಯಾಗಿದೆ ಎಂದು ಸಿಪ್ರಿಯ ಮಿಲಿಟರಿ ವೆಚ್ಚ ಹಾಗೂ ಶಸ್ತ್ರಾಸ್ತ್ರ ಉತ್ಪಾದನಾ ಕಾರ್ಯಕ್ರಮದ ಹಿರಿಯ ಸಂಶೋಧಕ ಡಿಯಾಗೊ ಲೋಪ್ಸ್ ಡ ಸಿಲ್ವಾ ವಿವರಿಸಿದ್ದಾರೆ. ಕರೊನಾ ಮಹಾಮಾರಿಯಿಂದ ಆರ್ಥಿಕತೆ ಚೇತರಿಸಿಕೊಂಡ ಪರಿಣಾಮವಾಗಿ ಜಾಗತಿಕ ಜಿಡಿಪಿಯ ಶೇಕಡ 2.2ರಷ್ಟು ಮೊತ್ತ ರಕ್ಷಣಾ ಬಾಬ್ತಿಗಾಗಿ ಬಳಕೆಯಾಗಿದೆ. 2020ರಲ್ಲಿ ಅದು ಶೇಕಡ 2.3 ಆಗಿತ್ತು.
ಭಾರತದ ವೆಚ್ಚ 76.6 ಬಿಲಿಯನ್ ಡಾಲರ್:76.6 ಬಿಲಿಯನ್ ಡಾಲರ್​ನೊಂದಿಗೆ ಭಾರತದ ಮಿಲಿಟರಿ ವೆಚ್ಚ ಜಗತ್ತಿನಲ್ಲೇ ಮೂರನೇ ಅತ್ಯಧಿಕ ಮಿಲಿಟರಿ ಖರ್ಚಾಗಿದೆ. 2020ಕ್ಕೆ ಹೋಲಿಸಿದರೆ ಇದು ಶೇ. 0.9ರಷ್ಟು ಏರಿಕೆಯಾಗಿದೆ. 2012ಕ್ಕೆ ಹೋಲಿಸಿದರೆ ಶೇಕಡ 33ರಷ್ಟು ಹೆಚ್ಚಳವಾಗಿದೆ.
ದೇಶೀಯ ಉತ್ಪಾದನೆಗೆ ಒತ್ತು:ದೇಶೀಯವಾಗಿ ಶಸ್ತ್ರಾಸ್ತ್ರ ಉತ್ಪಾದನೆ ಯನ್ನು ಬಲಿಷ್ಠಪಡಿಸುವ ಪ್ರಕ್ರಿಯೆಯ ಅಂಗವಾಗಿ, ಭಾರತ ಸರ್ಕಾರ 2021ರ ಮಿಲಿಟರಿ ಬಜೆಟ್​ನಲ್ಲಿ ಶೇಕಡ 64ರಷ್ಟು ಹಣ ವನ್ನು ದೇಶೀಯವಾಗಿ ನಿರ್ವಿುತ ಶಸ್ತ್ರಾಸ್ತ್ರಗಳ ಖರೀದಿಗೆ ಮೀಸಲಿಟ್ಟಿತ್ತು.
ಚೀನಾದ ವೆಚ್ಚವೆಷ್ಟು?:ಜಾಗತಿಕ ಮಿಲಿಟರಿ ವೆಚ್ಚದಲ್ಲಿ ಎರಡನೇ ಸ್ಥಾನದಲ್ಲಿರುವ ಚೀನಾ, 2020ಕ್ಕೆ ಹೋಲಿಸಿದರೆ ಶೇಕಡ 4.7ರಷ್ಟು ಅಧಿಕ ವೆಚ್ಚ ಮಾಡಿದ್ದು ಅದು ಒಟ್ಟು 293 ಬಿಲಿಯ ಡಾಲರ್ ಆಗಿದೆ. ಬ್ರಿಟನ್ ಕಳೆದ ವರ್ಷ 68.4 ಬಿಲಿಯನ್ ಡಾಲರ್ ಮಿಲಿಟರಿ ಖರ್ಚು ಮಾಡಿದ್ದು 2020ಕ್ಕಿಂತ ಶೇಕಡ 3 ಏರಿಕೆಯಾಗಿದೆ. ಐದನೇ ಸ್ಥಾನದಲ್ಲಿರುವ ರಷ್ಯಾ 2021ರಲ್ಲಿ 65.9 ಬಿಲಿಯನ್ ಡಾಲರ್ ಖರ್ಚು ಮಾಡಿದೆ. ಯೂಕ್ರೇನ್ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾ, ಅದಕ್ಕೆ ತಯಾರಿ ಎನ್ನುವಂತೆ ಸತತ ಮೂರು ವರ್ಷಗಳಿಂದ ಮಿಲಿಟರಿ ವೆಚ್ಚದಲ್ಲಿ ಏರಿಕೆ ಮಾಡುತ್ತಲೇ ಬಂದಿದೆ. 2021ರಲ್ಲಿ ರಷ್ಯಾದ ಮಿಲಿಟರಿ ವೆಚ್ಚ ಜಿಡಿಪಿಯ ಶೇಕಡ 4.1 ಆಗಿತ್ತು.
ಕೋವಿಡ್ ಮಹಾ ಮಾರಿಯಿಂದಾಗಿ ಉಂಟಾದ ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಜಗತ್ತಿನ ಮಿಲಿಟರಿ ಖರ್ಚು ಸಾರ್ವಕಾಲಿಕ ಎತ್ತರಕ್ಕೆ ತಲುಪಿದೆ.
|ಡಿಯಾಗೊ ಲೋಪ್ಸ್ ಡ ಸಿಲ್ವಾಸಿಪ್ರಿಯಹಿರಿಯ ಸಂಶೋಧಕ
ಸಂಶೋಧನೆಗೆ ಅಮೆರಿಕ ಒತ್ತು:2021ರಲ್ಲಿ ಅಮೆರಿಕ ಮಿಲಿಟರಿ ಉದ್ದೇಶಗಳಿಗೆ 801 ಬಿಲಿಯನ್ ಡಾಲರ್ ಹಣ ಖರ್ಚು ಮಾಡಿದೆ. ಅದು 2020ಕ್ಕಿಂತ ಶೇಕಡ 1.4ರಷ್ಟು ಕಡಿಮೆಯಾಗಿತ್ತು ಎಂದು ಸಿಪ್ರಿ ತಿಳಿಸಿದೆ. 2012-2021ರ ಅವಧಿಯಲ್ಲಿ ಅಮೆರಿಕ ಸರ್ಕಾರ ಮಿಲಿಟರಿ ಸಂಶೋಧನೆ ಮತ್ತು ಅಭಿವೃದ್ಧಿ ವೆಚ್ಚವನ್ನು ಶೇಕಡ 24ರಷ್ಟು ಹೆಚ್ಚಿಸಿದೆ. ಶಸ್ತ್ರಾಸ್ತ್ರ ಖರೀದಿ ವೆಚ್ಚವನ್ನು ಶೇ. 6.4ರಷ್ಟು ತಗ್ಗಿಸಿದೆ.
ಸೇನೆಗೆ ಇಸ್ರೇಲ್ ಕ್ಷಿಪಣಿ:ಇಸ್ರೇಲ್ ತಂತ್ರಜ್ಞಾನ ಹೊಂದಿರುವ ಆಂಟಿ ಟ್ಯಾಂಕ್ ಕ್ಷಿಪಣಿಗಳನ್ನು ಸೇನೆಗೆ ನಿಯೋಜನೆಗೊಳಿಸಲು ಸಿದ್ಧತೆ ನಡೆಯುತ್ತಿದೆ. ತುರ್ತು ಖರೀದಿ ಯೋಜನೆ ಅಡಿ ಈ ಕ್ಷಿಪಣಿಗಳನ್ನು ಖರೀದಿ ಮಾಡಲಾಗಿದೆ. ಈ ಕ್ಷಿಪಣಿಗಳು ಹೆಚ್ಚು ದೂರ ಹಾಗೂ ಅಧಿಕ ಪ್ರಮಾಣದ ಸ್ಪೋಟಕಗಳನ್ನು ಹೊತ್ತು ದಾಳಿ ನಡೆಸುವ ಸಾಮರ್ಥ್ಯ ಹೊಂದಿವೆ. ಲಡಾಖ್ ಗಡಿ ವಿಚಾರವಾಗಿ ಚೀನಾ ಜತೆಗೆ ಕಳೆದ ಎರಡು ವರ್ಷಗಳಿಂದ ತಿಕ್ಕಾಟ ನಡೆಯುತ್ತಿರುವ ಬೆನ್ನಲ್ಲೇ, ಈ ಕ್ಷಿಪಣಿಗಳನ್ನು ಸೇನೆಗೆ ನಿಯೋಜನೆ ಗೊಳಿಸುತ್ತಿರುವುದು ಮಹತ್ವದ ಸಂಗತಿಯಾಗಿದೆ.
ಸತತ 27ನೇ ವರ್ಷವೂ ಏರಿಕೆ:ಚೀನಾದ ಮಿಲಿಟರಿ ವೆಚ್ಚದಲ್ಲಿ ಸತತ 27ನೇ ವರ್ಷವೂ ಏರಿಕೆ ದಾಖಲಾಗಿದೆ. ಚೀನಾದ 2021ರ ಬಜೆಟ್ 14ನೇ ಪಂಚವಾರ್ಷಿಕ ಯೋಜನೆಯಡಿಯ ಬಜೆಟ್ ಆಗಿದೆ. 14ನೇ ಪಂಚವಾರ್ಷಿಕ ಯೋಜನೆ 2025ರ ವರೆಗೆ ಅನುಷ್ಠಾನದಲ್ಲಿರುತ್ತದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − nine =
Remember me
