ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಧ್ಯಂತರ ಕೇಂದ್ರ ಬಜೆಟ್ ಮಂಡಿಸಲು ಸಿದ್ಧರಾಗಿದ್ದಾರೆ. ಈ ವರ್ಷ ಲೋಕಸಭಾ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ, ಮಧ್ಯಂತರ ಬಜೆಟ್ ಮಂಡನೆಗೊಳ್ಳಲಿದೆ. ಆದರೆ ಈ ಬಾರಿಯ ಬಜೆಟ್​ನಲ್ಲಿ ರಕ್ಷಣಾ ವಲಯ ಮತ್ತು ಏರೋಸ್ಪೇಸ್ ವಲಯದ ನಿರೀಕ್ಷೆಗಳೇನು ಎಂಬುದನ್ನು ಅವಲೋಕಿಸೋಣ.
| ಗಿರೀಶ್ ಲಿಂಗಣ್ಣ
ಭಾರತದ ರಕ್ಷಣಾ ವಲಯ ಪ್ರಸ್ತುತ ಸನ್ನಿವೇಶದಲ್ಲಿ ಮಹತ್ವದ ಹಂತದಲ್ಲಿದೆ. ಜಗತ್ತಿನಾದ್ಯಂತ ಜಾಗತಿಕ ರಾಜಕಾರಣದ ಉದ್ವಿಗ್ನತೆಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ, ಭಾರತ ತನ್ನ ರಕ್ಷಣಾ ಕಾರ್ಯತಂತ್ರ, ತಂತ್ರಜ್ಞಾನದಲ್ಲಿ ಸ್ವಾವಲಂಬನೆ ಸಾಧಿಸುವ ಅವಶ್ಯಕತೆ ಹೆಚ್ಚಿದೆ. ಇದೆಲ್ಲದರೊಡನೆ, ಭಾರತೀಯ ಸೇನೆ ಚೀನಾ ಮತ್ತು ಪಾಕಿಸ್ತಾನದ ಗಡಿಗಳಿಂದ ಎದುರಾಗಬಹುದಾದ ಯಾವುದೇ ಅಪಾಯವನ್ನು ಎದುರಿಸಲು ಸದಾ ಸನ್ನದ್ಧವಾಗಿರಬೇಕಾಗುತ್ತದೆ. ಪಾಕಿಸ್ತಾನ ಮತ್ತು ಚೀನಾ ಜೊತೆಗಿನ ಗಡಿ ಚಕಮಕಿಗಳು ಕೆಲವೊಮ್ಮೆ ಸಶಸ್ತ್ರ ಕಾದಾಟದ ಹಂತಕ್ಕೆ ತಿರುಗುವುದರಿಂದ, ಭಾರತ ತನ್ನ ಸೇನಾಪಡೆಗಳನ್ನು ಆಧುನೀಕರಿಸುವ, ಆಯುಧ ಉತ್ಪಾದನೆಯಲ್ಲಿ ವಿಶೇಷವಾಗಿ ಮೇಕ್ ಇನ್ ಇಂಡಿಯಾ ಯೋಜನೆಯಡಿ ಸ್ವಾವಲಂಬನೆ ಸಾಧಿಸುವ ತುರ್ತು ಅಗತ್ಯವಿದೆ.
ರಷ್ಯಾ 2022ರಲ್ಲಿ ಯೂಕ್ರೇನ್ ಮೇಲೆ ನಡೆಸಿದ ಆಕ್ರಮಣ ಭಾರತೀಯ ಸೇನೆಯ ಯೋಜನಾ ಮತ್ತು ಹಣಕಾಸಿನ ಆಲೋಚನೆಗಳನ್ನು ಬದಲಾಗುವಂತೆ ಮಾಡಿತು. ಭಾರತ ಅಲ್ಲಿಯ ತನಕ ಕೇವಲ ಸಣ್ಣ ಅವಧಿಯ, ಆದರೆ ತೀಕ್ಷ ್ಣ ಸಮರಕ್ಕೆ ಸಿದ್ಧತೆ ನಡೆಸಿಕೊಂಡಿತ್ತು. ಭಾರತೀಯ ಸೇನಾ ಪಡೆಗಳನ್ನು ಸಾಗಿಸುವ, ಬಳಸುವ ವಿಧಾನವೂ 10ಐ (ಹತ್ತು ದಿನಗಳ ತೀಕ್ಷ ್ಣ ಕಾರ್ಯಾಚರಣೆ) ಯುದ್ಧ ಪರಿಸ್ಥಿತಿಗೆ ಪೂರಕವಾಗಿತ್ತು. ಅದನ್ನು ಬಳಿಕ 40ಐ ಮಾದರಿಗೆ ಅಭಿವೃದ್ಧಿ ಪಡಿಸಲಾಯಿತು. ಆದರೆ, ಇನ್ನೂ ಮುಂದುವರಿದಿರುವ ಯೂಕ್ರೇನ್ ಯುದ್ಧ ಮತ್ತು ಇಸ್ರೇಲ್- ಹಮಾಸ್ ಯುದ್ಧಗಳು 40ಐ ಮಾದರಿಯ ಸಿದ್ಧತೆಯೂ ಸಾಕಾಗುವುದಿಲ್ಲ ಎಂದು ಸಾಬೀತುಪಡಿಸಿವೆ.
ಖರೀದಿ ಪ್ರಕ್ರಿಯೆಗಳಿಗೆ ಹಸಿರು ನಿಶಾನೆ:ಕೇಂದ್ರದ 2023-24ನೇ ಸಾಲಿನ ಬಜೆಟ್ ಸಂದರ್ಭದಲ್ಲಿ, ರಕ್ಷಣಾ ಸಂಸದೀಯ ಸಮಿತಿ ಭಾರತದ ಜಿಡಿಪಿಯ ದಾಖಲೆಯ ಪ್ರಮಾಣವನ್ನು ರಕ್ಷಣೆಗೆ ಮೀಸಲಿಡುವಂತೆ ಶಿಫಾರಸು ಮಾಡಿತ್ತು. ಕಳೆದ ಬಾರಿಯ ಬಜೆಟ್ ಗಾತ್ರ ಒಟ್ಟು 4,503,097 ಕೋಟಿ ರೂ. ಆಗಿತ್ತು. ರಕ್ಷಣಾ ಸಚಿವಾಲಯಕ್ಕೆ ಕೇಂದ್ರ ಬಜೆಟ್​ನಲ್ಲಿ ಶೇ.13.18 ಮೊತ್ತವನ್ನು ಒದಗಿಸಲಾಗಿತ್ತು. ಇದು 593,537.64 ಕೋಟಿ ರೂ. ಆಗಿದ್ದು, 2022-23ರ ಬಜೆಟ್​ಗಿಂತ 68,371.49 ಕೋಟಿ ರೂ. ಹೆಚ್ಚಳವಾಗಿತ್ತು. ಆದರೆ 2024-25ನೇ ಹಣಕಾಸು ವರ್ಷಕ್ಕೆ ಅಡಿಯಿಡುವ ಸಂದರ್ಭದಲ್ಲಿ, ಭಾರತದ ರಕ್ಷಣಾ ವಲಯ ಯಾಕೋ ಮೌನವಾಗಿರುವಂತೆ ತೋರುತ್ತಿದೆ.
ರಕ್ಷಣಾ ವಲಯ ಈ ಬಾರಿಯ ಬಜೆಟ್​ನಲ್ಲಿ ಸಣ್ಣಪುಟ್ಟ ಕೊಡುಗೆಗಳು, ಹೊಂದಾಣಿಕೆಗಳನ್ನು ಮಾತ್ರವೇ ಎದುರು ನೋಡುತ್ತಿದೆ. ಈಗಾಗಲೇ ಚಾಲ್ತಿಯಲ್ಲಿರುವ ಖರೀದಿ ಪ್ರಕ್ರಿಯೆಗಳಿಗೆ ಹಸಿರು ನಿಶಾನೆ ಮುಂದುವರಿಯುವ ಸಾಧ್ಯತೆಗಳಿದ್ದು, ಇದರಲ್ಲಿ 40 ಸಾವಿರ ಕೋಟಿ ರೂ. ಮೊತ್ತದಲ್ಲಿ ಭಾರತದ ಎರಡನೇ ಸ್ವದೇಶೀ ನಿರ್ವಣದ ವಿಮಾನ ವಾಹಕ ನೌಕೆಯ ನಿರ್ವಣ, 97 ತೇಜಸ್ ಮಾರ್ಕ್-1ಎ ವಿಮಾನಗಳ ಖರೀದಿಗಳು ಸೇರಿವೆ.
ಒಟ್ಟು ಬಂಡವಾಳ ಹೂಡಿಕೆಯಲ್ಲಿ ತಜ್ಞರು ಕೇವಲ ಶೇ.5ರಿಂದ 7ರಷ್ಟು ಹೆಚ್ಚಳವನ್ನು ನಿರೀಕ್ಷಿಸಿದ್ದು, ಅವುಗಳು ಭಾರತದ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸುವ ಕಡೆ ಗಮನ ಹರಿಸಲಿವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇದು ಭಾರತೀಯ ಸೇನಾಪಡೆಗಳು, ಅವುಗಳ ವಿಭಾಗಗಳಾದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್​ಡಿಓ), ಕೋಸ್ಟ್ ಗಾರ್ಡ್ ಮತ್ತು ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (ಬಿಆರ್​ಒ) ಗಳು ನೀಡಿರುವ ಎಲ್ಲ ಪ್ರಸ್ತಾವನೆಗಳನ್ನು ಈಡೇರಿಸಲು ಸಾಧ್ಯವಿಲ್ಲ. ಮುಂದಿನ ರಕ್ಷಣಾ ಬಜೆಟ್ ಕೆಲವು ವಿಚಾರಗಳಿಗೆ ಸಂಬಂಧಿಸಿದಂತೆ ನಿಖರ ಉತ್ತರಗಳನ್ನು ಕಂಡುಕೊಳ್ಳಲೇಬೇಕಿದೆ:
ಚೀನಾ ಮತ್ತು ಪಾಕಿಸ್ತಾನದಿಂದ ಭಾರತಕ್ಕೆ ಅಪಾಯ ಇರುವುದು ನಿಜವಾಗಿದ್ದು, ಅವುಗಳು ಭಾರತಕ್ಕೆ ಸಂಕಷ್ಟ ತಂದೊಡ್ಡುವ ಪ್ರಮಾಣದಲ್ಲಿ ಜಾಗತಿಕ ರಾಜಕಾರಣದ ಮಟ್ಟದಲ್ಲಿಯೂ (ಉದಾಹರಣೆಗೆ: ಮಾಲ್ದೀವ್ಸ್, ಹಿಂದೂ ಮಹಾಸಾಗರ ಪ್ರದೇಶ, ದಕ್ಷಿಣ ಚೀನಾ ಸಮುದ್ರ) ಮತ್ತು ಸಾಂಪ್ರದಾಯಿಕ ಸಮಸ್ಯೆಗಳಾದ ಗಡಿ ಉದ್ವಿಗ್ನತೆಗಳ ರೂಪದಲ್ಲೂ ಹೆಚ್ಚಾಗುತ್ತಿವೆ. ಅಕ್ಸಾಯ್ ಚಿನ್ ಪ್ರದೇಶದ ಮೂಲಕ ಸಾಗುವ ಚೀನಾದ ಎರಡನೇ ಹೆದ್ದಾರಿ ಗಲ್ವಾನ್ ಕಣಿವೆ ಮತ್ತು ಪಾಂಗಾಂಗ್ ತ್ಸೋಗಳಿಗೆ ಅಪಾಯಕಾರಿ ಎನಿಸುವಷ್ಟು ಹತ್ತಿರದಿಂದ ಸಾಗುತ್ತಿದೆ. ಚೀನಾ ತನ್ನ ಆಕ್ರಮಣಕಾರಿ ಉದ್ದೇಶಗಳಿಗೆ ಪೂರಕವಾಗುವಂತೆ ನೇಪಾಳಕ್ಕೂ ಎಕ್ಸ್​ಪ್ರೆಸ್ ವೇ ರಸ್ತೆ ನಿರ್ವಿುಸುತ್ತಿದೆ. ವಾಸ್ತವ ಸ್ಥಿತಿಯನ್ನು ಗಮನಿಸುವುದಾದರೆ, ಚೀನಾದ ಪೀಪಲ್ಸ್ ಲಿಬರೇಶನ್ ಆರ್ವಿು (ಪಿಎಲ್​ಎ) ಅತ್ಯಾಧುನಿಕ ಹೈಪರ್​ಸಾನಿಕ್ ಕ್ಷಿಪಣಿಗಳು, ಯುಎವಿಗಳು ಮತ್ತು ಇಲೆಕ್ಟ್ರೋಮ್ಯಾಗ್ನೆಟಿಕ್ ಮತ್ತು ಸ್ಪೇಸ್/ನಿಯರ್ ಸ್ಪೇಸ್ ಆಧಾರಿತ ಆಯುಧಗಳನ್ನು ಹೊಂದಿದ್ದು, ತಾಂತ್ರಿಕವಾಗಿ ಭಾರತಕ್ಕಿಂತ ಹಲವು ದಶಕಗಳಷ್ಟು ಮುಂದಿದೆ.
ಬಾಹ್ಯಾಕಾಶ ವಲಯ:ಈ ವರ್ಷ ಭಾರತೀಯ ಬಾಹ್ಯಾಕಾಶ ಅನ್ವೇಷಣೆಗೆ ಆರ್ಥಿಕವಾಗಿ ಅಷ್ಟೊಂದು ಪೂರಕವಾಗಿರುವಂತೆ ಕಾಣುತ್ತಿಲ್ಲ. ಇಸ್ರೋ 2024ನೇ ವರ್ಷವನ್ನು ‘ಗಗನಯಾನದ ವರ್ಷ’ ಎಂದು ಪರಿಗಣಿಸಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಮುಖ್ಯಸ್ಥರಾದ ಎಸ್.ಸೋಮನಾಥ್ ಅವರು ಗಗನಯಾನ ಯೋಜನೆಯ ವೇಳಾಪಟ್ಟಿಯನ್ನು ವಿವರಿಸುತ್ತ ಹೇಳಿದ್ದಾರೆ. ಈ ಮಹತ್ತರವಾದ ಯೋಜನೆಯನ್ನು ಜಾರಿಗೊಳಿಸುವ ಘಟ್ಟದಲ್ಲಿ, ಇಸ್ರೋ ಈ ವರ್ಷಾದ್ಯಂತ ಅದಕ್ಕೆ ಸಂಬಂಧಿಸಿದ ಪರೀಕ್ಷೆಗಳನ್ನು ನಡೆಸುವುದಾಗಿ ತಿಳಿಸಿದೆ. ನಾಸಾ ಮತ್ತು ಇಸ್ರೋ ಸಂಸ್ಥೆಗಳ ನಡುವಿನ ಜಂಟಿ ಯೋಜನೆಯಾದ ನಾಸಾ-ಇಸ್ರೋ ಸಿಂಥೆಟಿಕ್ ಅಪರ್ಚರ್ ರೇಡಾರ್ (ನಿಸಾರ್) ಯೋಜನೆಯೂ 2024ರಲ್ಲಿ ಉಡಾವಣೆಗೊಳ್ಳುವ ನಿರೀಕ್ಷೆಗಳಿವೆ.
ನಿಸಾರ್ ಯೋಜನೆಯಲ್ಲದೆ, ಇಸ್ರೋ ಬಹಳಷ್ಟು ಮಹತ್ವಾಕಾಂಕ್ಷಿ ಯೋಜನೆಗಳನ್ನು ರೂಪಿಸುತ್ತಿದೆ. ಇಂಡಿಯನ್ ನ್ಯಾಷನಲ್ ಸ್ಯಾಟಲೈಟ್ ಸಿಸ್ಟಮ್ ಸರಣಿಯಲ್ಲಿ ಸಂವಹನ ಉಪಗ್ರಹವಾದ, ಹವಾಮಾನಶಾಸ್ತ್ರ ಮತ್ತು ವಿಪತ್ತು ನಿರ್ವಹಣೆಗೆ ಸಂಬಂಧಿಸಿದಂತೆ ನೆರವಾಗುವ ಇನ್ಸಾಟ್-3ಡಿಎಎಸ್ ಉಪಗ್ರಹ ಉಡಾವಣೆಗೊಳ್ಳಲಿದೆ. ಭಾರತದ ರಿಮೋಟ್ ಸೆನ್ಸಿಂಗ್ ಸಾಮರ್ಥ್ಯವನ್ನು ವೃದ್ಧಿಸುವ ಆರ್​ಐಸ್ಯಾಟ್-1ಬಿ ಮತ್ತು ರಿಸೋರ್ಸ್​ಸ್ಯಾಟ್-3 ಉಪಗ್ರಹಗಳು ಅಭಿವೃದ್ಧಿ ಹೊಂದುತ್ತಿವೆ. ಟಿಡಿಎಸ್01 ಮತ್ತು ಸ್ಪೇಡ್​ಎಕ್ಸ್ ಉಪಗ್ರಹಗಳು ಚಂದ್ರ ಅನ್ವೇಷಣಾ ಯೋಜನೆಗಳಿಗೆ ಸಂಬಂಧಿಸಿದ ತಾಂತ್ರಿಕ ಸಂಶೋಧನೆಗಳು ಮತ್ತು ಪ್ರಯೋಗಗಳಿಗೆ ನೆರವಾಗುವ ನಿರೀಕ್ಷೆಗಳಿವೆ.
ಶೇಕಡ 6-8 ಅಭಿವೃದ್ಧಿ ದರ:ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಜಿತೇಂದ್ರ ಸಿಂಗ್ ಅವರು ಮಾಹಿತಿ ನೀಡುತ್ತ, ‘ಭಾರತೀಯ ಬಾಹ್ಯಾಕಾಶ ವಲಯ ಮುಂದಿನ ವರ್ಷದಲ್ಲಿ ಶೇಕಡ 6ರಿಂದ 8ರ ದರದಲ್ಲಿ ಅಭಿವೃದ್ಧಿ ಹೊಂದಲಿದೆ’ ಎಂದು ಅಭಿಪ್ರಾಯ ಪಟ್ಟಿದ್ದರು.
ಜಿತೇಂದ್ರ ಸಿಂಗ್ ಅವರು ಲೋಕಸಭೆಯಲ್ಲಿ ನೀಡಿದ ಲಿಖಿತ ಉತ್ತರವೊಂದರಲ್ಲಿ, ಬಾಹ್ಯಾಕಾಶ ಇಲಾಖೆಗೆ ಒದಗಿಸಿದ ಮೊತ್ತ 2023-2024ರಲ್ಲಿ 12,543.91 ಕೋಟಿ ರೂ.ಗಳಾಗಿದ್ದು, 2013-14ಕ್ಕೆ ಹೋಲಿಸಿದರೆ ಎರಡು ಪಟ್ಟು ಹೆಚ್ಚಾಗಿದೆ. 2003ರಿಂದ 2013ರ ನಡುವೆ ಉಪಗ್ರಹಗಳ ಉಡಾವಣೆಯಿಂದ ಬಂದ ಆದಾಯ 15 ಮಿಲಿಯನ್ ಡಾಲರ್. ಆದರೆ 2014ರಿಂದ 2023ರ ನಡುವೆ 396 ವಿದೇಶೀ ಉಪಗ್ರಹಗಳು ಮತ್ತು 70 ದೇಶೀಯ ಉಪಗ್ರಹಗಳ ಉಡಾವಣೆ ನಡೆಸುವ ಮೂಲಕ 157 ಮಿಲಿಯನ್ ಡಾಲರ್ ಆದಾಯ ಗಳಿಸಲಾಗಿದೆ. 2025ರ ವೇಳೆಗೆ, ಉಪಗ್ರಹ ಸೇವಾ ವಿಭಾಗ ಭಾರತದ ಬಾಹ್ಯಾಕಾಶ ಆರ್ಥಿಕತೆಯ 35% ಪಾಲು ಹೊಂದುವ ನಿರೀಕ್ಷೆಗಳಿವೆ. ಇನ್ನು ಭೂ ವಿಭಾಗ 31%, ಉಪಗ್ರಹ ಉತ್ಪಾದನಾ ವಿಭಾಗ 25% ಮತ್ತು ಉಡಾವಣಾ ಸೇವಾ ವಿಭಾಗ 8.15% ಪಾಲು ಹೊಂದುವ ನಿರೀಕ್ಷೆಗಳಿವೆ.
ಖಾಸಗಿ ವಲಯ ಮತ್ತು ನವೋದ್ಯಮಗಳ ಹೆಚ್ಚಿನ ಪಾಲ್ಗೊಳ್ಳುವಿಕೆಯ ಕಾರಣದಿಂದ, ಭಾರತೀಯ ಬಾಹ್ಯಾಕಾಶ ವಲಯದ ಪಾಲುದಾರರು ಕೆಲವೊಮ್ಮೆ 40%ರಷ್ಟು ತಗಲುವ ಕಸ್ಟಮ್ಸ್ ಸುಂಕದಿಂದ ಬಾಹ್ಯಾಕಾಶ ವಲಯಕ್ಕೆ ವಿನಾಯಿತಿ ನೀಡುವಂತೆಯೂ ಮನವಿ ಮಾಡಿಕೊಂಡಿದ್ದಾರೆ. ಇದರಿಂದಾಗಿ 2024-25ನೇ ಸಾಲಿನ ಮಧ್ಯಂತರ ಬಜೆಟ್​ನಲ್ಲಿ ಯೋಜನೆಗಳಿಗೆ ಮುಖ್ಯವಾದ ಉತ್ಪನ್ನಗಳು, ಬಿಡಿಭಾಗಗಳು, ಉಪ ವ್ಯವಸ್ಥೆಗಳು ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ವಿಶೇಷ ನಿಧಿಗಳನ್ನು ಒದಗಿಸುವುದು ಕಷ್ಟಕರವಾಗುತ್ತದೆ.
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕರು)
ವಿಜಯಲಕ್ಷ್ಮೀ ವಿರುದ್ಧ ಪವಿತ್ರಾ ತಿರುಗಿಬೀಳಲು ಪ್ರಚೋದನೆ ಕೊಟ್ಟಿದ್ಯಾರು? ಇಲ್ಲಿದೆ ಅಚ್ಚರಿಯ ಸಂಗತಿ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:15 − six =
Remember me
