ದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ ಮತ್ತು ಬಿಜೆಪಿ ಸೆಣಸಾಟ ಜೋರಾಗುತ್ತಿರುವ ಮಧ್ಯೆಯೇ ಕಾಂಗ್ರೆಸ್ ಧ್ವನಿ ಕಳೆದುಕೊಂಡಿದೆ. 2015ರ ಹೀನಾಯ ಸೋಲಿನಿಂದ ಕಾಂಗ್ರೆಸ್ ಇನ್ನೂ ಎದ್ದುಬಂದಿಲ್ಲ. ಹಿರಿಯ ನಾಯಕರೆಲ್ಲರೂ ಪ್ರಚಾರದಿಂದ ದೂರವುಳಿದಿದ್ದಾರೆ. ಈ ಬಾರಿಯೂ ಸೋಲು ಕಟ್ಟಿಟ್ಟಬುತ್ತಿ ಎಂದು ಗೊತ್ತಿರುವಾಗ ಪ್ರಚಾರ ಕಣದಲ್ಲಿದ್ದು ಮಾಡುವುದಾದರೂ ಏನು ಅಲ್ಲವೇ? ಬಹುಶಃ ಇದೇ ಕಾರಣಕ್ಕೇನೋ ರಾಹುಲ್ ಗಾಂಧಿಯಲ್ಲೂ ಚುನಾವಣಾ ಯುದ್ಧೋತ್ಸಾಹ ಕಂಡಿಲ್ಲ.
1998, 2003 ಮತ್ತು 2008ರ ವಿಧಾನಸಭೆ ಚುನಾವಣೆಗಳಲ್ಲಿ ಗೆಲುವು ಸಾಧಿಸಿ ಹ್ಯಾಟ್ರಿಕ್ ಸಾಧನೆ ಮಾಡಿದ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಈಗಿಲ್ಲ. ಅಧಿಕಾರಾವಧಿಯ ಹದಿನೈದು ವರ್ಷಗಳಲ್ಲಿ ದಿಲ್ಲಿಯ ಚಹರೆಯನ್ನೇ ಬದಲಿಸಿದ ಶೀಲಾ, ರಾಜಧಾನಿಗೆ ಹೊಸ ಮೆರುಗನ್ನು ತಂದವರಲ್ಲಿ ಪ್ರಮುಖರು. ಆದರೆ 15 ವರ್ಷಗಳ ಆಡಳಿತದ ಬಳಿಕ ಶೀಲಾ ಎದುರಿಸಿದ ಜನವಿರೋಧಿ ಅಲೆ ಮತ್ತು ಕಾಂಗ್ರೆಸ್ ಮೈಗಂಟಿದ್ದ ಭ್ರಷ್ಟಾಚಾರದ ಕಳಂಕ ಆಮ್ ಆದ್ಮಿ ಪಾರ್ಟಿಯ ಜನನಕ್ಕೆ ಕಾರಣವಾಯಿತು.
ಬಹುಶಃ ಬಿಜೆಪಿ, ಕಾಂಗ್ರೆಸ್ ಹೊರತುಪಡಿಸಿದ ಪಕ್ಷವೊಂದು ದಿಲ್ಲಿಯಲ್ಲಿ ಹುಟ್ಟಿಕೊಳ್ಳುವ ಕಲ್ಪನೆ ಎರಡೂ ಪಕ್ಷಗಳಿಗಿದ್ದಿರಲಿಕ್ಕಿಲ್ಲ. ಆದರೆ, 2013 ಮತ್ತು 2015ರಲ್ಲಿ ನಡೆದದ್ದು ಬೇರೆಯೇ ಆಗಿತ್ತು. ಕಾಂಗ್ರೆಸ್ ಪತನ ಶುರುವಾಗಿದ್ದು ಕೂಡ ಅಲ್ಲಿಂದಲೇ.
2013ರ ಸೋಲಿನ ಬಳಿಕವೂ ದೀಕ್ಷಿತ್, ಅಜಯ್ ಮಾಕೆನ್ ದಿಲ್ಲಿ ಕಾಂಗ್ರೆಸ್ ಅನ್ನು ಮರುಸಂಘಟಿಸುವ ಸಾಹಸ ಮಾಡಿದರೂ ಮತದಾರ ಮಾತ್ರ ಕಾಂಗ್ರೆಸ್, ಬಿಜೆಪಿ ಹೊರತುಪಡಿಸಿದ ಆಮ್ ಆದ್ಮಿ ನಾಯಕತ್ವವನ್ನೇ ಬಯಸಿದ. 2013ರ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿಗೆ ಪೂರ್ಣ ಬಹುಮತವಿರಲಿಲ್ಲ. ಕಾಂಗ್ರೆಸ್ ನೆಚ್ಚಿಕೊಂಡು ಅಧಿಕಾರ ನಡೆಸಿದರೂ 1 ವರ್ಷಕ್ಕಿಂತ ಹೆಚ್ಚು ಕಾಲ ಸರ್ಕಾರ ಬಾಳಲಿಲ್ಲ.
2015ರಲ್ಲಿ ಕೇಜ್ರಿವಾಲ್ 67 ಸೀಟುಗಳನ್ನು ಬಾಚಿಕೊಂಡು ದಿಗ್ವಿಜಯ ಸಾಧಿಸಿ 5 ವರ್ಷಗಳ ಜನಸ್ನೇಹಿ ಸರ್ಕಾರ ನೀಡಿದ್ದಾರೆ. 2015ರ ಗೆಲುವು ಈಗ ಇತಿಹಾಸವಿರಬಹುದು. ಆದರೆ ಈ ಇತಿಹಾಸದ ಪುನರಾವರ್ತನೆ ತಡೆಯಲು ಕಾಂಗ್ರೆಸ್ಸಿನಲ್ಲಿ ನಾಯಕತ್ವದ ಶಕ್ತಿಯುಕ್ತಿ, ಸಂಘಟನಾ ಬಲ, ಸಂಪನ್ಮೂಲ ಯಾವುದೂ ಇಲ್ಲದಿರುದುವುದು ಆ ಪಕ್ಷದ ದುಸ್ಥಿತಿಗೆ ಹಿಡಿದ ಕನ್ನಡಿ.
2015ರಲ್ಲಿ ವಿಪಕ್ಷದಲ್ಲಿ ಕೂರಲು ಅರ್ಹತೆ ಪಡೆಯದ ಕಾಂಗ್ರೆಸ್ಸಿಗರು ಈ ಬಾರಿ ಶೀಲಾ ದೀಕ್ಷಿತ್ ಬಳುವಳಿ ಹೆಸರಲ್ಲಿ ಮತ ಕೇಳುತ್ತಿದ್ದಾರೆ. ದಿಲ್ಲಿಯಲ್ಲಿ ಶೀಲಾ ಹೆಸರು ಬಿಟ್ಟರೆ ಹೇಳಿಕೊಳ್ಳಲು ಕಾಂಗ್ರೆಸ್ಸಿಗರಲ್ಲಿ ಏನೂ ಇಲ್ಲ. ಸ್ಥಳಿಯ ನಾಯಕರಲ್ಲಿ ಒಬ್ಬರ ಮುಖ ನೋಡಿದರೆ ಮತ್ತೊಬ್ಬರಿಗಾಗದು. ಇದು ರಾಷ್ಟ್ರೀಯ ಪಕ್ಷ ಕಾಂಗ್ರೆಸ್ಸಿನ ಹಾಲಿ ಸ್ಥಿತಿ.
ದಿಲ್ಲಿಯ ಆರ್ಯಭಟ!: ‘ವಿಶ್ವಕ್ಕೆ ಶೂನ್ಯವನ್ನು (0) ಪರಿಚಯಿಸಿದ್ದು ವಿಜ್ಞಾನಿ ಆರ್ಯಭಟ. ಆದರೆ ದಿಲ್ಲಿಗೆ ರಾಜಕೀಯಕ್ಕೆ ಸೀಮಿತವಾಗಿ ಶೂನ್ಯವನ್ನು ಕಂಡುಹಿಡಿದಿದ್ದು ಯಾರು’ ಎಂದು ಆಪ್ ನಾಯಕರು ಕಾಂಗ್ರೆಸ್ಸಿಗರನ್ನು ಗೇಲಿ ಮಾಡುವುದುಂಟು. 2015ರ ಚುನಾವಣೆ ವೇಳೆ ಮಾಜಿ ಕೇಂದ್ರ ಸಚಿವ ಅಜಯ್ ಮಾಕೆನ್ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು.
ಕೇಜ್ರಿವಾಲ್ ಅಲೆಯಲ್ಲಿ ಮಾಕೆನ್ ಸೇರಿ ಎಲ್ಲ ಅಭ್ಯರ್ಥಿಗಳೂ ಪರಾಭವಗೊಂಡರು. 2017ರ ಪಾಲಿಕೆ ಚುನಾವಣೆಯಲ್ಲೂ ಮಾಕೆನ್ ನೇತೃತ್ವ ವಹಿಸಿದ್ದರು. ಆದರೆ ‘ದಿಲ್ಲಿ ಕಾಂಗ್ರೆಸ್ಸಿನ ಆರ್ಯಭಟ’ ಎಂಬ ಆಪ್ ಲೇವಡಿ ಮಾತುಗಳಿಂದ ಮಾಕೆನ್ ಕುಗ್ಗಿದ್ದರು. ‘ಪಕ್ಷದಲ್ಲಿನ ಆಂತರಿಕ ಗುಂಪುಗಾರಿಕೆ ಹಾಗೂ ಬಲಹೀನ ಸಂಘಟನೆ ಕಟ್ಟಿಕೊಂಡು ನನ್ನಿಂದೇನೂ ಮಾಡಲು ಸಾಧ್ಯವಿಲ್ಲ’ ಎಂದುಕೊಂಡ ಮಾಕೆನ್ ನಿಧಾನವಾಗಿ ಪಕ್ಷದ ಚಟುವಟಿಕೆಗಳಿಂದ ದೂರವಾದರು. ಈ ಚುನಾವಣೆಯಲ್ಲೂ ಮಾಕೆನ್ ಕಾಣಿಸಿಕೊಂಡಿಲ್ಲ.
ಹೀಗಾಗಿ ಅಧ್ಯಕ್ಷ ಸ್ಥಾನವನ್ನು ಸುಭಾಷ್ ಚೋಪ್ರಾ ಹೆಗಲಿಗೇರಿಸಲಾಯಿತು. ವಿಪರ್ಯಾಸ ಎಂದರೆ, ಚೋಪ್ರಾ ಯಾರೆಂದೇ ಬಹುಪಾಲು ಮತದಾರರಿಗೆ ಗೊತ್ತಿಲ್ಲ.
2013ರ ವೇಳೆಗೆ ಕೇಂದ್ರದಲ್ಲಿ ಕಾಂಗ್ರೆಸ್ ಮೇಲಿದ್ದ ಆಡಳಿತ ವಿರೋಧಿ ಅಲೆ ಹಾಗೂ ಅರವಿಂದ ಕೇಜ್ರಿವಾಲ್​ರ ಭ್ರಷ್ಟಾಚಾರ ವಿರೋಧಿ ಅಭಿಯಾನ ಜಂಟಿಯಾಗಿ ದಿಲ್ಲಿಯಲ್ಲಿ ಶೀಲಾ ದೀಕ್ಷಿತ್ ಇಮೇಜ್​ಗೆ ಕಂಟಕಪ್ರಾಯವಾಗಿ ಪರಿಣಮಿಸಿದವು. 2010ರ ಕಾಮನ್​ವೆಲ್ತ್ ಗೇಮ್ಸ್ ಹಗರಣವೂ ಕಾಂಗ್ರೆಸ್ ಸರ್ಕಾರದ ಪತನಕ್ಕೆ ದಾರಿ ಮಾಡಿತು.
2013ರ ಫಲಿತಾಂಶದ ಬಳಿಕ ಆಪ್ ಜತೆಗೆ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚನೆ ಮಾಡಿದ ಕಾಂಗ್ರೆಸ್, ತನ್ನ ಹಿನ್ನಡೆಗೆ ತಾನೇ ಕಾರಣವಾಯಿತು. ಶೀಲಾ ದೀಕ್ಷಿತ್ ರಾಜಕೀಯ ಬದುಕೂ ಅಲ್ಲಿಗೆ ಅಂತ್ಯ ಕಂಡಿತು. ಕೇರಳದ ಗವರ್ನರ್ ಹುದ್ದೆಯಿಂದ ವಾಪಸಾಗಿ ಪಕ್ಷದ ಪುನರ್ ಸಂಘಟನೆಗೆ ಕೈ ಹಾಕಿದರೂ ದೀಕ್ಷಿತ್​ರನ್ನು ಒಪ್ಪಿಕೊಳ್ಳುವ ಮನಸ್ಸು ದಿಲ್ಲಿ ಜನರಲ್ಲಿ ಇರಲಿಲ್ಲ.
ವೋಟು ಲೆಕ್ಕಾಚಾರ: 2014ರ ಲೋಕಸಭೆ ಚುನಾವಣೆಗೆ ಹೋಲಿಸಿದರೆ 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತಗಳಿಕೆ ಪ್ರಮಾಣ 22.46% ಆಗಿತ್ತು. 2019ರಲ್ಲಿ ಇದನ್ನು ಶೇ.7.36ರಷ್ಟು ಏರಿಸಿಕೊಂಡಿತು. ಆದರೆ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯನ್ನು ವರ್ಗೀಕರಿಸಿ ನೋಡುವ ಮತದಾರನ ಜಾಣತನ ಈಚಿನ ವರ್ಷಗಳಲ್ಲಿ ಹೆಚ್ಚಾಗಿರುವುದಕ್ಕೆ ಫಲಿತಾಂಶಗಳೇ ನಿದರ್ಶನ. ಸ್ಥಳೀಯ ನಾಯಕತ್ವ, ಜನಪ್ರಿಯ ಮುಖಗಳಿಲ್ಲದ ಕಾಂಗ್ರೆಸ್ ಹಾಲಿ ವಿಧಾನಸಭೆ ಚುನಾವಣೆಯಲ್ಲಿ ಭರವಸೆಯ ನಿರ್ವಹಣೆ ತೋರುವ ಕುರಿತ ಆಶಾಭಾವ ಕಾರ್ಯಕರ್ತರಲ್ಲಂತೂ ಕಾಣುತ್ತಿಲ್ಲ.
7 ಚುನಾವಣೆಗಳು: 1952ರಿಂದ ಈವರೆಗೆ ದಿಲ್ಲಿಯಲ್ಲಿ 7 ವಿಧಾನಸಭೆ ಚುನಾವಣೆಗಳು ನಡೆದಿವೆ. 1952ರ ಚುನಾವಣೆ ಬಳಿಕ ದಿಲ್ಲಿ ವಿಧಾನಸಭೆ ರದ್ದುಗೊಳಿಸಲಾಗಿತ್ತು. 1993ರಲ್ಲಿ ಮತ್ತೆ ಅಸ್ತಿತ್ವಕ್ಕೆ ಬಂದ ವಿಧಾನಸಭೆಗೆ ಚುನಾವಣೆ ನಡೆದು ಬಿಜೆಪಿ ಅಧಿಕಾರಕ್ಕೆ ಬಂದಿತ್ತು. 5 ವರ್ಷಗಳಲ್ಲಿ ಮದನ್ ಲಾಲ್ ಖುರಾನಾ, ಸಾಹಿಬ್ ಸಿಂಗ್ ವರ್ವ ಮತ್ತು ಸುಷ್ಮಾ ಸ್ವರಾಜ್ ಹೀಗೆ ಮೂವರು ಮುಖ್ಯಮಂತ್ರಿಗಳನ್ನು ದಿಲ್ಲಿ ಕಂಡಿತ್ತು.
ಈರುಳ್ಳಿ ಬೆಲೆ ಗಗನಕ್ಕೇರಿದ್ದರಿಂದ 1998ರ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ 15 ವರ್ಷ ಹಿಂದಿರುಗಿ ನೋಡಿರಲಿಲ್ಲ. 2013ರಲ್ಲಿ ಡಾ. ಹರ್ಷವರ್ಧನ್ ನಾಯಕತ್ವದಲ್ಲಿ ಬಿಜೆಪಿಗೆ 34 ಸೀಟುಗಳು ಸಿಕ್ಕರೂ ಸರ್ಕಾರ ರಚಿಸಲು ಸಾಧ್ಯವಿರಲಿಲ್ಲ. ಹೀಗಾಗಿ, 28 ಸ್ಥಾನ ಗೆದ್ದಿದ್ದ ಅರವಿಂದ ಕೇಜ್ರಿವಾಲ್ ಕಾಂಗ್ರೆಸ್ಸಿನಿಂದ (9 ಸೀಟು) ಬಾಹ್ಯಬೆಂಬಲ ಪಡೆದು ಸರ್ಕಾರ ರಚಿಸಿದ್ದರು.
ಒಂದೇ ವರ್ಷದಲ್ಲಿ ಸರ್ಕಾರದಿಂದ ಹೊರಬಂದ ಕೇಜ್ರಿವಾಲ್, ‘ದಿಲ್ಲಿ ಜನರು ನನ್ನನ್ನು ಕ್ಷಮಿಸಬೇಕು’ ಎಂದು ಅಭಿಯಾನ ನಡೆಸಿ 2015ರ ಚುನಾವಣೆಯಲ್ಲಿ ಹೊಸ ದಾಖಲೆ ಬರೆದರು. ಅಲ್ಲಿಂದ ಶುರುವಾದ ಕಾಂಗ್ರೆಸ್ ಕರಾಳ ದಿನಗಳು ಭವಿಷ್ಯದಲ್ಲೂ ಮುಂದುವರಿಯುವ ಲಕ್ಷಣಗಳು ಗೋಚರಿಸಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × three =
Remember me
