ನವದೆಹಲಿ:ಪ್ರತಿಪಕ್ಷಗಳ ಭಾರಿ ವಿರೋಧಕ್ಕೆ ಕಾರಣವಾಗಿರುವ ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶ (ತಿದ್ದುಪಡಿ) ಮಸೂದೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಷಾ ಗುರುವಾರ ಲೋಕಸಭೆಯಲ್ಲಿ ಮಂಡಿಸಿದ್ದು, ಪ್ರತಿಭಟನೆಯ ನಡುವೆಯೇ ಅಂಗೀಕಾರಗೊಂಡಿದೆ.
ರಾಷ್ಟ್ರ ರಾಜಧಾನಿಗೆ ಕಾನೂನು ರೂಪಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ಇದೆ ಎಂದು ಅಮಿತ್ ಷಾ ಬಲವಾಗಿ ಸಮರ್ಥನೆ ಮಾಡಿಕೊಂಡಿದ್ದಾರೆ. ಎಎಪಿ ತನ್ನ ಭ್ರಷ್ಟಾಚಾರವನ್ನು ಮರೆಮಾಚುವ ಏಕೈಕ ಉದ್ದೇಶದಿಂದ ದೆಹಲಿ ಸೇವಾ ಮಸೂದೆಯನ್ನು ವಿರೋಧಿಸುತ್ತಿದೆ. ದೆಹಲಿ ಸರ್ಕಾರ ಜನರ ಕಲ್ಯಾಣದ ಬಗ್ಗೆ ಯೋಚಿಸಬೇಕೇ ಹೊರತು ಹೊಸ ಮೈತ್ರಿಕೂಟದ ಬಗ್ಗೆ ಅಲ್ಲ ಎಂದು ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು.
ಈ ಹಿಂದೆ ಬಿಜೆಪಿ ಮತ್ತು ಕಾಂಗ್ರೆಸ್ ಯಾವುದೇ ಸಮಸ್ಯೆ ಇಲ್ಲದೇ ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರ ನಡೆಸಿವೆ. ಆದರೆ 2015ರಲ್ಲಿ ಎಎಪಿ ಸರ್ಕಾರ ಬಂದ ನಂತರವೇ ಈ ಸಮಸ್ಯೆ ಉದ್ಭವಿಸಿದೆ. ಎಎಪಿ ಸರ್ಕಾರಕ್ಕೆ ಜನಸೇವೆ ಮಾಡುವ ಉದ್ದೇಶವಿಲ್ಲ. ಆದರೆ ಕೇಂದ್ರದೊಂದಿಗೆ ಹೋರಾಡಲು ಮಾತ್ರ ಉತ್ಸಾಹ ಇದೆ ಎಂದು ಅವರು ತರಾಟೆಗೆ ತೆಗೆದುಕೊಂಡರು. ಸಂವಿಧಾನ 239ಎಎ ವಿಧಿಯ ಅಡಿಯಲ್ಲಿ ಕೇಂದ್ರ ಸರ್ಕಾರಕ್ಕೆ ಅಧಿಕಾರಗಳನ್ನು ನೀಡಿದೆ. ಆದರೆ ಈ ಅಧಿಕಾರವನ್ನು ಪ್ರತಿಪಕ್ಷಗಳು ಪ್ರಶ್ನಿಸುತ್ತಿವೆ. ಅಧಿಕಾರಿಗಳ ವರ್ಗಾವಣೆ ಮತ್ತು ಪೋಸ್ಟಿಂಗ್ ನಿಯಂತ್ರಣದ ಬಗ್ಗೆ ಎಎಪಿಗೆ ಸಮಸ್ಯೆ ಇಲ್ಲ. ಕೋಟ್ಯಂತರ ಮೌಲ್ಯದ ಬಂಗಲೆಯ ಸತ್ಯವನ್ನು ಮರೆಮಾಚಲು, ಭ್ರಷ್ಟಾಚಾರ ಪ್ರಕರಣ ಹೊರಬರದಂತೆ ತಡೆಯಲು ಎಎಪಿ ಯತ್ನಿಸುತ್ತಿದೆ ಎಂದು ಷಾ ವಾಗ್ದಾಳಿ ನಡೆಸಿದರು.
ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು, ಬಾಬಾಸಾಹೇಬ್ ಅಂಬೇಡ್ಕರ್, ಸರ್ದಾರ್ ಪಟೇಲ್, ಸಿ. ರಾಜಗೋಪಾಲಚಾರಿ, ರಾಜೇಂದ್ರ ಪ್ರಸಾದ್ ಕೂಡ ದೆಹಲಿಗೆ ಸಂಪೂರ್ಣ ರಾಜ್ಯ ಸ್ಥಾನಮಾನದ ಪ್ರಸ್ತಾಪವನ್ನು ವಿರೋಧಿಸಿದ್ದರು ಎಂದು ಅಮಿತ್ ಷಾ ಹೇಳಿದರು.
ಎಎಪಿ ನೇತೃತ್ವದ ದೆಹಲಿ ಸರ್ಕಾರವು ರಾಷ್ಟ್ರೀಯ ರಾಜಧಾನಿ ಪ್ರದೇಶದ ಆಡಳಿತದಲ್ಲಿ ಗ್ರೂಪ್-ಎ ಅಧಿಕಾರಿಗಳ ನಿಯಂತ್ರಣಕ್ಕೆ ಯತ್ನಿಸುತ್ತಿದೆ. ಈ ಸಂಬಂಧ ಕೇಂದ್ರದೊಂದಿಗೆ ಸಂಘರ್ಷ ನಡೆಸಿಕೊಂಡು ಬಂದಿದೆ. ಎನ್​ಸಿಟಿ ಆಡಳಿತದಲ್ಲಿ ಸೇವೆಗಳ ನಿಯಂತ್ರಣವನ್ನು ದೆಹಲಿ ಸರ್ಕಾರಕ್ಕೆ ಹಸ್ತಾಂತರಿಸುವಂತೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ತೀರ್ಪು ನೀಡಿತ್ತು. ಇದರ ವಿರುದ್ಧ ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶ (ತಿದ್ದುಪಡಿ) ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಕೇಂದ್ರ ಸರ್ಕಾರ ಅಧಿಕಾರವನ್ನು ತನ್ನ ಬಳಿಯೇ ಇಟ್ಟುಕೊಂಡಿತು. ಈಗ ಇದು ಕಾನೂನಾಗಿ ಮಾರ್ಪಡಬೇಕಿದೆ. ಇದಕ್ಕೆ ಎಎಪಿ ಸಹಿತ ಪ್ರತಿಪಕ್ಷಗಳ ಮೈತ್ರಿಕೂಟ ಭಾರಿ ವಿರೋಧ ವ್ಯಕ್ತಪಡಿಸುತ್ತಿದೆ.
ಚುನಾವಣೆ ಗೆಲ್ಲುವ ಉದ್ದೇಶದಿಂದ ಶಾಸನವನ್ನು ಬೆಂಬಲಿಸುವ ಅಥವಾ ವಿರೋಧಿಸುವ ರಾಜಕೀಯ ಮಾಡಬಾರದು. ಹೊಸ ಮೈತ್ರಿಗಳನ್ನು ನಿರ್ವಿುಸಲು ಹಲವು ಮಾರ್ಗಗಳಿವೆ. ಮಸೂದೆ ಗಳು ಮತ್ತು ಕಾನೂನುಗಳನ್ನು ಜನರ ಅನುಕೂಲಕ್ಕಾಗಿ ರೂಪಿಸಲಾ ಗುತ್ತದೆ. ಮೈತ್ರಿಗಾಗಿ ಜನರ ಹಿತಾಸಕ್ತಿಗಳನ್ನು ಬಲಿಕೊಡಬೇಡಿ. ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಯುಪಿಎ ಸರ್ಕಾರದ 10 ವರ್ಷಗಳ ಅವಧಿಯಲ್ಲಿ 12 ಲಕ್ಷ ಕೋಟಿ ರೂ. ಭ್ರಷ್ಟಾಚಾರ ನಡೆದಿದೆ. ಮೈತ್ರಿಗಾಗಿ ದೆಹಲಿ ಸರ್ಕಾರದ ಭ್ರಷ್ಟಾಚಾರವನ್ನು ಪ್ರತಿಪಕ್ಷಗಳು ಬೆಂಬಲಿಸುತ್ತಿವೆ. ಮುಂದಿನ ಚುನಾವಣೆಯಲ್ಲಿ ಜನರು ನಿರ್ಧಾರ ಕೈಗೊಳ್ಳುತ್ತಾರೆ ಎಂದು ಷಾ ಹೇಳಿದರು. ಮಸೂದೆ ಮಂಡನೆಯಾಗು ತ್ತಿದ್ದ ವೇಳೆ ಭಾರಿ ಗದ್ದಲ ಉಂಟು ಮಾಡಿ, ಅನುಚಿತವಾಗಿ ವರ್ತನೆ ಮಾಡಿದ ಕಾರಣಕ್ಕೆ ಎಎಪಿ ಸಂಸದ ಸುಶಿಲ್ ಕುಮಾರ್ ರಿಂಕು ಅವರನ್ನು ಮುಂಗಾರು ಅಧಿವೇಶನದ ಕಲಾಪದಿಂದ ಅಮಾನತು ಮಾಡಲಾಗಿದೆ.
ಮಸೂದೆಯನ್ನು ವಿರೋಧಿಸಿದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಸುಪ್ರೀಂ ಕೋರ್ಟ್ ಹೇಳಿಕೆ ಯನ್ನು ಉಲ್ಲೇಖಿಸಿದರು. ದೆಹಲಿಯಲ್ಲಿ ನಾಗರಿಕ ಸೇವೆಗಳಿಗೆ ಸಂಬಂಧಿಸಿದಂತೆ ನಿರ್ಧಾರಗಳನ್ನು ತೆಗೆದುಕೊಳ್ಳಲು ವಿಧಾನಸಭೆಗೆ ಅಧಿಕಾರ ಇದೆ. ಮಸೂದೆ ಅಂಗೀಕಾರಗೊಂಡರೆ ರಾಜ್ಯಗಳ ಚುನಾಯಿತ ವಿಧಾನಸಭೆಯ ಅಧಿಕಾರ ರದ್ದುಗೊಳ್ಳಲಿದೆ. ಅಧಿಕಾರಶಾಹಿಗಳೇ ಸರ್ಕಾರವನ್ನು ನಡೆಸುವುದಾದರೆ ಸಂಸದರು ಮತ್ತು ಶಾಸಕರನ್ನು ಆಯ್ಕೆ ಮಾಡಿ ಏನು ಪ್ರಯೋಜನ? ಎಂದು ಚೌಧರಿ ಪ್ರಶ್ನಿಸಿದರು.
ಮಣಿಪುರ ವಿಚಾರವಾಗಿ ರಾಜ್ಯಸಭೆಯಲ್ಲಿ ಪ್ರತಿಪಕ್ಷ ಮತ್ತು ಆಡಳಿತ ಪಕ್ಷದ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆಯುತ್ತಿತ್ತು. ‘ ನೀವು ಏಕೆ ಕೋಪಗೊಂಡಿದ್ದೀರಿ?’ ಎಂದು ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸಭಾಪತಿ ಜಗದೀಪ್ ಧನಕರ್ ಅವರನ್ನು ಪ್ರಶ್ನಿಸಿದರು. ತಕ್ಷಣ ಸಭಾಪತಿ, ನನಗೆ 45 ವರ್ಷದ ಹಿಂದೆಯೇ ಮದುವೆಯಾಗಿದೆ. ಹೀಗಾಗಿ ನಾನು ಎಂದಿಗೂ ಕೋಪಗೊಳ್ಳುವುದಿಲ್ಲ ಎಂದು ಚಟಾಕಿ ಹಾರಿಸಿದರು. ಆಗ ಇಡೀ ಸದನ ಕೆಲಕಾಲ ನಗೆಗಡಲಲ್ಲಿ ಮುಳುಗಿತು. ಬಿಸಿಯಾಗಿದ್ದ ವಾತಾವರಣ ತಣ್ಣಗಾಯಿತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 1 =
Remember me
