ದೆಹಲಿಯ ಇಂದರ್​ಪುರಿಯಅಗರ್​ವಾಲ್ ಜನರಲ್ ಸ್ಟೋರ್​ನಲ್ಲಿ ‘ಪ್ಲಾಸ್ಟಿಕ್ ನಿಷೇಧಿಸಲಾಗಿದೆ’ ಎಂಬ ಬೋರ್ಡನ್ನು ಸದಾ ನೇತುಹಾಕಲಾಗಿರುತ್ತದೆ. ನಿತ್ಯವೂ ಇಲ್ಲಿಗೆ ಸಾವಿರಾರು ಗ್ರಾಹಕರು ಬಂದು ಹಾಲು, ಆಹಾರ, ತಿಂಡಿ, ತಿನಿಸುಗಳನ್ನು ಖರೀದಿಸುತ್ತಾರೆ. ‘ಪ್ಲಾಸ್ಟಿಕ್​ನಲ್ಲಿ ಸಾಮಗ್ರಿಗಳನ್ನು ನೀಡುವುದು ನನ್ನ ಆದ್ಯತೆಯಲ್ಲ. ಜನರೇ ಬಟ್ಟೆಯ ಬ್ಯಾಗ್ ತರಬೇಕು. ಆದರೆ, ಖಾಲಿ ಕೈಯಲ್ಲಿ ಬಂದು ನಾಲ್ಕೈದು ಸಾಮಗ್ರಿಗಳನ್ನು ಖರೀದಿಸಿ, ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ ಕೊಡಿ ಎಂದಾಗ ನಾನೇನು ಮಾಡಬೇಕು ಹೇಳಿ’ ಎನ್ನುವುದು ಮಾಲೀಕ ದೀಪೇಂದರ್ ಅವರ ಅಸಹಾಯಕ ನುಡಿ.
ಕಳೆದ ಅಕ್ಟೋಬರ್ 2ರ ಗಾಂಧಿ ಜಯಂತಿಯಿಂದ ದೇಶಾದ್ಯಂತ ಏಕಬಳಕೆ ಪ್ಲಾಸ್ಟಿಕ್ ನಿಷೇಧಿಸಲಾಗುತ್ತದೆ ಎಂದು ಮೋದಿ ಸರ್ಕಾರ ಘೊಷಿಸಿತ್ತು. ಅಂತೆಯೇ ರಾಜಧಾನಿ ದೆಹಲಿಯಲ್ಲಿ 2-3 ದಿನಗಳ ಕಾಲ ಪ್ಲಾಸ್ಟಿಕ್ ಬ್ಯಾಗ್​ಗಳು ಮಾಯವಾಗಿ, ಬಟ್ಟೆ ಚೀಲಗಳು ರಾರಾಜಿಸುತ್ತಿದ್ದವು. ಆದರೆ ದಿನಗಳೆದಂತೆ ಮತ್ತದೇ ಪ್ಲಾಸ್ಟಿಕ್ ಬ್ಯಾಗ್​ಗಳೇ ಅಂಗಡಿಗಳಲ್ಲಿ ತುಂಬಿಕೊಂಡಿವೆ! ‘ಕೇಂದ್ರ ಸರ್ಕಾರ ಪ್ಲಾಸ್ಟಿಕ್ ಬ್ಯಾನ್ ಮಾಡಿದೆ. ಹಾಗಿದ್ದರೂ ಇದನ್ನು ಯಾಕೆ ಬಳಸುತ್ತೀರಿ?’ ಎಂದು ಅಂಗಡಿ ಮಾಲೀಕರನ್ನು ಕೇಳಿದರೆ, ಪ್ಲಾಸ್ಟಿಕ್ ಉತ್ಪಾದನೆ ನಿಷೇಧವಿಲ್ಲದೆ ಬಳಕೆ ನಿಲ್ಲಿಸಲು ಸಾಧ್ಯವಿಲ್ಲ ಎನ್ನುತ್ತಾರೆ. ಅಂದರೆ, ಜನರು ಸ್ವಯಂಪ್ರೇರಣೆಯಿಂದ ಪ್ಲಾಸ್ಟಿಕ್ ಬಳಕೆ ನಿಲ್ಲಿಸುವುದಿಲ್ಲ ಎಂದಾಯಿತು! ಅಂಗಡಿ ಮಾಲೀಕನ ವಾದ ಒಂದರ್ಥದಲ್ಲಿ ರ್ತಾಕವಾದದ್ದೇ. ಪ್ಲಾಸ್ಟಿಕ್ ನಿಷೇಧಿಸಿ ಎನ್ನುವ ಸರ್ಕಾರ ಪ್ಲಾಸ್ಟಿಕ್ ಉತ್ಪಾದನೆ ಮೇಲೆ ಕಡಿವಾಣ ಹಾಕಿಲ್ಲವೇಕೆ?
ಹಲವು ದಶಕಗಳಿಂದ ದಿಲ್ಲಿಯಲ್ಲಿ ಜಲ ಮತ್ತು ವಾಯು ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿರುವುದು ಅನಿಯಮಿತ ಪ್ಲಾಸ್ಟಿಕ್ ಬಳಕೆ. ಮಳೆ ಬಂದಾಗಲಂತೂ ಈ ಪ್ಲಾಸ್ಟಿಕ್​ಗಳು ಚರಂಡಿಗಳಲ್ಲಿ ಸೇರಿಕೊಂಡು ರಾಜಧಾನಿಯಾದ್ಯಂತ ಪ್ರವಾಹ ಪರಿಸ್ಥಿತಿ ನಿರ್ವಿುಸಿಬಿಡುತ್ತವೆ. ಹಾಗಿದ್ದರೂ, ದಿಲ್ಲಿ ಜನ ಮಾತ್ರ ಪ್ಲಾಸ್ಟಿಕ್​ವುುಕ್ತ ರಾಜಧಾನಿ ಕಲ್ಪನೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ದಿಲ್ಲಿ ಸರ್ಕಾರದಿಂದ ಉಚಿತವಾಗಿ ಏನು ಸಿಗುತ್ತದೆ ಎಂಬ ಬಗ್ಗೆ ಚಿಂತೆ ಮಾಡಿದಷ್ಟು ಮಾಲಿನ್ಯಮುಕ್ತ ಪರಿಸರದ ಬಗ್ಗೆ ಕಾಳಜಿ ಪ್ರದರ್ಶಿಸಿಲ್ಲ.
ಸ್ವಚ್ಛ ಭಾರತ ಯೋಜನೆ ಅನುಷ್ಠಾನಗೊಂಡು 6 ವರ್ಷಗಳಾದರೂ, ದೆಹಲಿ (ರಾಜತಾಂತ್ರಿಕ ಪ್ರದೇಶ ಹೊರತುಪಡಿಸಿ) ಮಾತ್ರ ಎಲ್ಲೆಂದರಲ್ಲಿ ಕಸದ ರಾಶಿಗಳಿಂದ ಗಬ್ಬು ನಾರುತ್ತಿದೆ. ಸಂಸತ್ತಿನಿಂದ ಕೂಗಳತೆ ದೂರದಲ್ಲಿರುವ, ಕೇಂದ್ರ ಸಚಿವಾಲಯಗಳಿರುವ ಶಾಸ್ತ್ರಿ ಭವನದ ಮುಂಭಾಗ, ಅಕ್ಕ-ಪಕ್ಕ ಕಸದ ರಾಶಿಗಳಿಂದ ಕಂಗೊಳಿಸುತ್ತಿರುವ ಪರಿಸರಗಳೇ ಸ್ವಚ್ಛತೆ ಕುರಿತ ನಮ್ಮ ಅಧಿಕಾರಶಾಹಿ, ಆಡಳಿತಶಾಹಿಗಿರುವ ನಿಷ್ಕಾಳಜಿಯನ್ನು ಸಾರಿ ಹೇಳುತ್ತವೆ. ಸ್ವಚ್ಛ ಭಾರತ ಕೇಂದ್ರ ಸರ್ಕಾರದ ಯೋಜನೆಯಾಗಿದ್ದರೂ, ಸ್ಥಳೀಯ ಸರ್ಕಾರಗಳು ಮತ್ತು ಸಾರ್ವಜನಿಕರ ಸಹಕಾರವಿಲ್ಲದೆ ಯಶಸ್ಸು ಕಾಣದು. ಮುಖ್ಯವಾಗಿ, ನಾಗರಿಕರ ಇಚ್ಛಾಶಕ್ತಿ ಪ್ರಮುಖವಾದುದು.
‘ವೋಟು ಕೇಳಲೆಂದು ಮನೆಮನೆಗೆ ಬರುವ ಅಭ್ಯರ್ಥಿಗಳಲ್ಲಿ ಏನೇನೋ ಬೇಡಿಕೆಗಳನ್ನಿಡುವ ಜನರು, ನನ್ನ ಪರಿಸರ ಉಳಿಸಲು ನೀವೇನು ಮಾಡುತ್ತೀರಿ? ಎಂದು ಪ್ರಶ್ನಿಸಬೇಕಿದೆ. ಪಕ್ಷಗಳಿಗೆ ಪರಿಸರ ರಕ್ಷಣೆಯ ನೈಜ ಕಾಳಜಿಯಿಲ್ಲ. ಇದು ದೇಶದ ರಾಜಧಾನಿ ಎನ್ನಲು ನಾಚಿಕೆಯಾಗುತ್ತದೆ. ಇಲ್ಲಿನ ಮೂರೂ ಪಕ್ಷಗಳಿಗೆ ವೋಟು ಹಾಕಲು ಮನಸ್ಸಿಲ್ಲ. ಏನು ಮಾಡುವುದೆಂದೇ ತೋಚುತ್ತಿಲ್ಲ’ ಎಂದು ದೆಹಲಿಯ ಪೂಸಾ ಕ್ಯಾಂಪಸ್​ನಲ್ಲಿ ಕೃಷಿ ವಿಜ್ಞಾನದಲ್ಲಿ ಎಂಎಸ್ಸಿ ಮಾಡುತ್ತಿರುವ ಚೇತನ್ ಆಕ್ರೋಶ ಹೊರಹಾಕುತ್ತಾರೆ.
ಕಳೆದ ಸೆಪ್ಟೆಂಬರ್-ಡಿಸೆಂಬರ್ ನಡುವಿನ ವಾಯು ಮಾಲಿನ್ಯಕ್ಕೆ ದಿಲ್ಲಿಯ ಸಾವಿರಾರು ಮಂದಿ ಶ್ವಾಸಕೋಶ ಸಮಸ್ಯೆಗೆ ತುತ್ತಾಗಿದ್ದಾರೆ. ರಾಮ ಮನೋಹರ್ ಲೋಹಿಯಾ, ಏಮ್್ಸ, ಸಫ್ದರ್ ಜಂಗ್ ಆಸ್ಪತ್ರೆಗಳು ಮಲಿನ ಪೀಡಿತರಿಂದಲೇ ತುಂಬಿಹೋಗಿದ್ದವು. ಇದೇ ಕಾರಣಕ್ಕೆ ಈ ಸಲದ ದಿಲ್ಲಿ ಚುನಾವಣೆಯ ಪ್ರಣಾಳಿಕೆಗಳಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಆಡಳಿತಾರೂಡ ಆಮ್ ಆದ್ಮಿ ಪಕ್ಷಗಳು ಮಾಲಿನ್ಯಮುಕ್ತ ಪರಿಸರ ನಿರ್ವಣದ ಬಗ್ಗೆ ಭರವಸೆಗಳ ಮಹಾಪೂರವನ್ನೇ ಹರಿಸಿವೆ.
ದಿಲ್ಲಿಗೆ ಮಾಲಿನ್ಯ ಹೊಸತಲ್ಲ. ಆದರೆ, ಕಳೆದ 3-4 ವರ್ಷಗಳಿಂದ ವಾಯು ಮಾಲಿನ್ಯದಿಂದಾಗಿ ಆರೋಗ್ಯ ತುರ್ತು ಪರಿಸ್ಥಿತಿ ನಿರ್ವಣವಾಗಿದೆ. ಅತಿಯಾದ ಮಾಲಿನ್ಯವಿರುವ ವಿಶ್ವದ ಪ್ರಮುಖ ನಗರಗಳಲ್ಲಿ ದಿಲ್ಲಿ ಅಗ್ರಸ್ಥಾನಿಯಾಗಲು ಹೆಚ್ಚು ದಿನಗಳು ಬೇಕಿಲ್ಲ! ಕಳೆದ ಅಕ್ಟೋಬರ್, ನವೆಂಬರ್ ನಲ್ಲಿ ದಿಲ್ಲಿ ವಾಯು ಗುಣಮಟ್ಟ ಪ್ರಮಾಣ 500ರ ಗಡಿಯಲ್ಲಿತ್ತು. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಗುಣಮಟ್ಟ ಪ್ರಮಾಣ 25 ದಾಟುವುದೇ ಅಪಾಯಕಾರಿ. 2018ರಲ್ಲಿ 900ನ್ನು ತಲುಪಿದ್ದಿದೆ. ಇದು ದಿನಕ್ಕೆ 45 ಸಿಗರೇಟ್ ಸೇದುವುದಕ್ಕೆ ಸಮ. ಅಂದರೆ ದಿಲ್ಲಿ ಜನರ ಪರಿಸ್ಥಿತಿ ಹೇಗಿರಬೇಡ?
‘ವಾಯು ಮಾಲಿನ್ಯದಿಂದ ಶ್ವಾಸಕೋಶ ಸಮಸ್ಯೆ ಮಾತ್ರವಲ್ಲ, ಅವಧಿಪೂರ್ವ ಹೆರಿಗೆ, ಕ್ಯಾನ್ಸರ್ ಸೇರಿದಂತೆ ಅನೇಕ ಕಾಯಿಲೆಗಳು ಬರುತ್ತವೆ. ಹಿಂದಿನ 2-3 ಮೂರು ದಶಕಗಳಿಗೆ ಹೋಲಿಸಿದರೆ ಕ್ಯಾನ್ಸರ್ ಪ್ರಮಾಣ ಈಗ ಶೇ.300ರಷ್ಟು ಹೆಚ್ಚಿದೆ. ಪ್ಲಾಸ್ಟಿಕ್ ಅಂಶಗಳು ಬೆರೆತ ಆಹಾರವನ್ನು ನಿರಂತರವಾಗಿ ಸೇವಿಸುತ್ತಿರುವುದೂ ಕ್ಯಾನ್ಸರ್​ಗೆ ಕಾರಣ. ದಿಲ್ಲಿಯ ಅನೇಕ ಶಿಕ್ಷಿತ ಮತದಾರರಿಗೂ ಮಾಲಿನ್ಯ ಮತ್ತು ಆರೋಗ್ಯದ ಅಂತರ್ ಸಂಬಂಧದ ಬಗ್ಗೆ ಅರಿವಿಲ್ಲ. ಸ್ವಚ್ಛತೆ ಕಾಪಾಡಿಕೊಳ್ಳಿ ಎಂದು ಹೇಳುವ ಸರ್ಕಾರಗಳು, ಮಾಲಿನ್ಯದಿಂದ ನಾವು ಯಾವ್ಯಾವ ರೀತಿಯ ಕಾಯಿಲೆಗಳಿಗೆ ತುತ್ತಾಗುತ್ತೇವೆ ಎನ್ನುವುದನ್ನು ಮನೆ ಮನೆಗೆ ಹೋಗಿಯೋ, ನಿರಂತರ ಸಾರ್ವಜನಿಕ ಸಭೆಗಳಿಂದಲೋ ಜನರಲ್ಲಿ ಅರಿವು ಮೂಡಿಸಬೇಕು. ಹೀಗಿದ್ದಾಗ ಮಾತ್ರ ಪ್ಲಾಸ್ಟಿಕ್ ನಿಷೇಧವನ್ನು ಜನ ಗಂಭೀರವಾಗಿ ಪರಿಗಣಿಸುತ್ತಾರೆ’ ಎನ್ನುವುದು ದೆಹಲಿಯ ವೈದ್ಯ ಡಾ. ಸಚಿತ್ ಶೆಟ್ಟಿ ಅಭಿಪ್ರಾಯ.
ಪರಿಸರ ರಕ್ಷಣೆ, ಶುದ್ಧ ಗಾಳಿಯ ಬದ್ಧತೆಯನ್ನು ಆಮ್ ಆದ್ಮಿ ಪಕ್ಷ ತನ್ನ ‘ಗ್ಯಾರಂಟಿ ಕಾರ್ಡ್’ನಲ್ಲೂ ಘೊಷಿಸಿದೆ. ಯಮುನಾ ನದಿ ಪುನರುಜ್ಜೀವನದ ಬಗ್ಗೆ ಈ ಹಿಂದಿನ ಸರ್ಕಾರಗಳು ಹತ್ತಾರು ಹುಸಿ ಭರವಸೆಗಳನ್ನು ನೀಡುತ್ತಲೇ, ದಿಲ್ಲಿಯ ಕಾರ್ಖಾನೆ, ಚರಂಡಿಗಳ ನೀರನ್ನು ನೇರವಾಗಿ ಹರಿಸಿ ನದಿಯ ಪತನಕ್ಕೆ ನಾಂದಿ ಹಾಡಿದವು. ಕಳೆದೈದು ವರ್ಷದಲ್ಲಿ ಆಮ್ ಆದ್ಮಿ ಪಕ್ಷವೂ ಯಮುನಾ ಸಂರಕ್ಷಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದಂತಿಲ್ಲ. ಕೇಂದ್ರ ಸರ್ಕಾರ, ದಿಲ್ಲಿ ಪೊಲೀಸ್, ಲೆಫ್ಟಿನಂಟ್ ಗವರ್ನರ್ ವಿರುದ್ಧ ಸರಣಿ ಧರಣಿ ಕೂತಿದ್ದ ಕೇಜ್ರಿವಾಲ್ ಯಮುನಾ ಉಳಿಸಲು ಮಾತ್ರ ಧರಣಿ ಮಾಡಲಿಲ್ಲ!
ಮಾಲಿನ್ಯಕ್ಕಿಂತ ಶಹೀನ್ ಭಾಗ್ ಮುಖ್ಯವೇ?
ಪೌರತ್ವ ತಿದ್ದುಪಡಿ ಕಾನೂನಿಗೂ ದೆಹಲಿ ಚುನಾವಣೆಗೂ ಸಂಬಂಧವಿಲ್ಲ. ಆದರೆ, ಶಹೀನ್ ಭಾಗ್ ನಲ್ಲಿ ಈ ಕಾನೂನು ವಿರೋಧಿಸಿ ನಡೆಸುತ್ತಿರುವ ಹೋರಾಟಗಳ ಬಗ್ಗೆಯೇ ಚುನಾವಣೆಯಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ. ಆಮ್ ಆದ್ಮಿ ಪಕ್ಷದ ಮುಖಂಡರು ಹೆಚ್ಚು ಪ್ರತಿಕ್ರಿಯೆ ನೀಡದಿದ್ದರೂ, ಬಿಜೆಪಿ ಮಾತ್ರ ಜಾಮಿಯಾ ಮಿಲಿಯಾ ಯುನಿವರ್ಸಿಟಿ ಮತ್ತು ಶಹೀನ್ ಭಾಗ್ ಪ್ರತಿಭಟನೆ, ಹಿಂಸಾಚಾರಗಳನ್ನು ಗಮನಿಸಿಯೇ ಜನ ಮತ ಹಾಕಬೇಕು ಎಂದು ಪ್ರಚಾರ ಮಾಡುತ್ತಿದೆ. ಕಾಂಗ್ರೆಸ್ ಕೂಡ ಮುಸ್ಲಿಂ ವೋಟ್ ಬ್ಯಾಂಕ್ ರಕ್ಷಣೆಗೆಂದು ಶಹೀನ್ ಭಾಗ್​ಗೆ ಪಕ್ಷದ ಮುಖಂಡರನ್ನು ಕಳುಹಿಸಿಕೊಡುತ್ತಿದೆ. ಮನುಷ್ಯನ ಬದುಕನ್ನೇ ಬುಡಮೇಲು ಮಾಡುತ್ತಿರುವ ಮಾಲಿನ್ಯವೇ ದಿಲ್ಲಿ ಚುನಾವಣೆಯಲ್ಲಿ ಅತ್ಯಂತ ಮಹತ್ವದ, ಆದ್ಯತೆಯ ವಿಷಯವಾಗಬೇಕಿತ್ತು. ಆದರೆ, ಶಹೀನ್ ಭಾಗ್ ಮತ್ತು ಆಮ್ ಆದ್ಮಿ ಪಕ್ಷ ಒದಗಿಸುತ್ತಿರುವ ಉಚಿತ ಭಾಗ್ಯಗಳೇ ಪ್ರಚಾರಾಭಿಯಾನಗಳನ್ನು ಆವರಿಸಿಬಿಟ್ಟಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 1 =
Remember me
