ನವದೆಹಲಿ:ದೆಹಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ವಾಯುಮಾಲಿನ್ಯ ತಡೆಗಟ್ಟುವ ಬದಲು ಕಾರ್ಯಾಂಗ ಜಡತ್ವ ಪ್ರದರ್ಶಿಸುತ್ತಿದೆ. ಇದರಿಂದಾಗಿ ಪ್ರಬಲ ನೀತಿಗಳ ಕೊರತೆ ವಿಪರೀತವಾಗಿ ಕಾಡುತ್ತಿದೆ ಎಂದು ಸುಪ್ರೀಂಕೋರ್ಟ್ ತೀವ್ರ ಅಸಮಾಧಾನ ಹೊರಹಾಕಿದ್ದು, ಮಾಲಿನ್ಯಕ್ಕೆ ಕಡಿವಾಣ ಹಾಕಲು ಕೇಂದ್ರ ಮತ್ತು ದಿಲ್ಲಿ ಸರ್ಕಾರ ಎರಡೂ ವಿಫಲವಾಗಿವೆ ಎಂದು ಪರೋಕ್ಷವಾಗಿ ಅತೃಪ್ತಿ ಹೊರಹಾಕಿದೆ.
ದೆಹಲಿ ಮತ್ತು ಅಕ್ಕಪಕ್ಕದ ಪ್ರದೇಶಗಳ ವಾಯುಮಾಲಿನ್ಯಕ್ಕೆ ಸಂಬಂಧಿಸಿದಂತೆ 17 ವರ್ಷದ ದೆಹಲಿ ವಿದ್ಯಾರ್ಥಿ ಆದಿತ್ಯ ದುಬೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಅಭಿಪ್ರಾಯ ಹೊರಹಾಕಿದ ಸಿಜೆಐ, ಹಿಂದೆ ಅಡ್ವೊಕೇಟ್ ಜನರಲ್ ಮತ್ತು ಈಗ ಓರ್ವ ನ್ಯಾಯಮೂರ್ತಿಯಲ್ಲಿ ನಾನು ನೋಡಿರುವಂತೆ ಅಧಿಕಾರಶಾಹಿಯಲ್ಲಿ ಜಡತ್ವ ಬಲವಾಗಿ ಬೇರೂರಿಬಿಟ್ಟಿದೆ. ನ್ಯಾಯಾಲಯವೇ ಎಲ್ಲವನ್ನೂ ಮಾಡಬೇಕೆಂದು ಬಯಸುತ್ತಿದೆ. ನಾವು ನಿರ್ದೇಶನಗಳನ್ನು ನೀಡುತ್ತಿರಬೇಕು ಮತ್ತು ನಂತರ ನೀವು ಕ್ರಮ ಕೈಗೊಳ್ಳಬೇಕು. ಅಂದರೆ ಎಲ್ಲವನ್ನೂ ನಾವು ಹೇಳಿಯೇ ಮಾಡಬೇಕಾದ ಪರಿಸ್ಥಿತಿ ನಿರ್ವಣವಾಗಿದೆ ಎಂದು ವಾದಿ/ಪ್ರತಿವಾದಿ ವಕೀಲರನ್ನು ಉದ್ದೇಶಿಸಿ ಹೇಳಿದ್ದಾರೆ. ನಾವು ಏನನ್ನೂ ಮಾಡುವುದಿಲ್ಲ. ನ್ಯಾಯಾಲಯವು ನಿರ್ದೇಶನಗಳನ್ನು ನೀಡಲಿ ಮತ್ತು ನ್ಯಾಯಾಲಯ ನಿರ್ದೇಶಿಸಿದೆ ಎಂದು ನಾವು ಸರಳವಾಗಿ ಸಹಿ ಹಾಕುತ್ತೇವೆ ಎಂಬ ಮನಸ್ಥಿತಿ ಅಧಿಕಾರಶಾಹಿಯದ್ದು ಎಂದು ನ್ಯಾ.ಡಿ.ವೈ. ಚಂದ್ರಚೂಡ್ ಮತ್ತು ನ್ಯಾ. ಸೂರ್ಯಕಾಂತ್ ಅವರನ್ನೊಳಗೊಂಡ ತ್ರಿಸದಸ್ಯ ನ್ಯಾಯಪೀಠ ಕಿಡಿಕಾರಿದೆ.
ಟಿವಿ ಚರ್ಚೆಗಳಿಂದ ಹೆಚ್ಚು ಮಾಲಿನ್ಯ:ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದ ಕಾನೂನು ಮತ್ತು ನ್ಯಾಯಾಲಯದ ವಿಚಾರಣೆ ಕುರಿತು ಟಿವಿ ಚರ್ಚೆಗಳು ನಡೆಯುತ್ತಿರುವ ರೀತಿಗೂ ನ್ಯಾಯಪೀಠ ಕೆಂಡಕಾರಿದೆ. ಟಿವಿ ವಾಹಿನಿಗಳು ಸಮಸ್ಯೆಗಳನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಿವೆ. ಈ ವಿಷಯದ ಬಗ್ಗೆ ನಾವು ಮಾಡಿದ್ದ ಸಣ್ಣ ಅವಲೋಕನವನ್ನು ವಿವಾದಕ್ಕೀಡುಮಾಡಲಾಯಿತು. ಟಿವಿಯಲ್ಲಿನ ಚರ್ಚೆಗಳು ಎಲ್ಲರಿಗಿಂತ ಹೆಚ್ಚು ಮಾಲಿನ್ಯವನ್ನು ಸೃಷ್ಟಿಸುತ್ತಿವೆ ಎಂದು ಸಿಜೆಐ ಮಾಧ್ಯಮಗಳ ಬೇಜವಾಬ್ದಾರಿಗೆ ಬೇಸರ ವ್ಯಕ್ತಪಡಿಸಿದರು. ರಾಜಧಾನಿಯ ವಾಯುಮಾಲಿನ್ಯಕ್ಕೆ ಕೃಷಿ ತ್ಯಾಜ್ಯ ಸುಡುವಿಕೆ ಕಾರಣವಾಗುತ್ತಿರುವ ಬಗ್ಗೆ ದೆಹಲಿ ಸರ್ಕಾರದ ಪರ ವಕೀಲ ಡಾ. ಅಭಿಷೇಕ್ ಮನು ಸಿಂಘಿ ವಾದ ಮಂಡಿಸಿದ ಸಂದರ್ಭದಲ್ಲಿ ಸಿಜೆಐ ವಿಷಯ ಪ್ರಸ್ತಾಪಿಸಿದರು.
ವಾಯುಮಾಲಿನ್ಯಕ್ಕೆ ಕೃಷಿ ತಾಜ್ಯದ ಕೊಡುಗೆ ಬಗ್ಗೆ ನಾನು ನ್ಯಾಯಾಲಯದ ದಾರಿ ತಪ್ಪಿಸಿದ್ದೇನೆ ಎಂದು ಟಿವಿಗಳಲ್ಲಿ ಚರ್ಚೆಯಾಗಿದೆ ಎಂದು ವಕೀಲ ಸಿಂಘಿ ನ್ಯಾಯಾಲಯದ ಗಮನಸೆಳೆದಾಗ, ಈ ನ್ಯಾಯಾಲಯವನ್ನು ಯಾರೂ ತಪ್ಪುದಾರಿಗೆ ಎಳೆದಿಲ್ಲ. ನೀವು ಶೇ 10ರಷ್ಟು ಕೂಳೆ ಸುಡುವಿಕೆ ನಡೆದಿದೆ ಎಂದಿದ್ದೀರಿ. ಅದು ಶೇಕಡಾ 30 ರಿಂದ 40 ರಷ್ಟಿದೆ ಎಂದು ಅಫಿಡವಿಟ್​ನಲ್ಲಿ ದಾಖಲಿಸಲಾಗಿದೆ. ಈ ರೀತಿಯ ಟೀಕೆಗಳು ಸದಾ ಕೇಳುತ್ತಿರುತ್ತೇವೆ. ನಮ್ಮ ಆತ್ಮಸಾಕ್ಷಿ ಸ್ಪಷ್ಟವಾಗಿದ್ದು ನಾವು ಸಮಾಜದ ಏಳಿಗೆಗಾಗಿ ಕೆಲಸ ಮಾಡುತ್ತೇವೆ ಎಂದು ಸಿಜೆಐ ತಿಳಿಸಿದರು. ಇದೇ ವೇಳೆ ಕೃಷಿ ತ್ಯಾಜ್ಯ ಸುಡುವಿಕೆ ತಡೆಯಲು ಶಾಶ್ವತ ನೀತಿ ಜಾರಿಗೊಳಿಸುವ ಅಗತ್ಯವನ್ನು ಒತ್ತಿ ಹೇಳಿದ ಅಭಿಷೇಕ್ ಸಿಂಘಿ, ಪ್ರತಿವರ್ಷ ಅಕ್ಟೋಬರ್, ನವೆಂಬರ್​ನಲ್ಲಿ ಮಾಲಿನ್ಯ ಏರಲು ಇದೇ ಪ್ರಮುಖ ಕಾರಣವಾಗಿದೆ ಎಂದರು.
ನ.21ಕ್ಕೆ ವಿಚಾರಣೆಯನ್ನು ಮುಂದೂಡಿದ ಸುಪ್ರೀಂ ಕೋರ್ಟ್, ನಾವು ಯಾವುದೇ ನಿರ್ದೇಶನವನ್ನು ನೀಡುತ್ತಿಲ್ಲ ಎಂಬ ಕಾರಣಕ್ಕೆ ನಿಮ್ಮ ಜವಾಬ್ದಾರಿ ಕಡಿಮೆಯಾಯಿತು ಎಂದರ್ಥವಲ್ಲ ಎಂದು ಕೇಂದ್ರದ ವಕೀಲ ತುಷಾರ್ ಮೆಹ್ತಾರನ್ನು ಉದ್ದೇಶಿಸಿ ಹೇಳಿತು. ಈ ವಿಷಯದಲ್ಲಿ ಕೇಂದ್ರ ಸರ್ಕಾರದಿಂದ ಹೆಚ್ಚನ್ನು ನಿರೀಕ್ಷಿಸುತ್ತಿದ್ದೇವೆ. ಕಚೇರಿ ಗಳಲ್ಲಿ ತನ್ನ ಉದ್ಯೋಗಿಗಳ ಬಲ ಕಡಿಮೆ ಮಾಡುವ ಜತೆಗೆ, ಸಿಬ್ಬಂದಿ ವರ್ಗ ಒಂದು ವಾಹನದಲ್ಲಿ ಒಟ್ಟಾಗಿ ಬರುವಂತೆ ನೋಡಿಕೊಳ್ಳಬೇಕು. ಖಾಸಗಿ ವಾಹನದಲ್ಲಿ ಪ್ರತ್ಯೇಕವಾಗಿ ಬರುವುದನ್ನು ತಡೆಯಬೇಕು ಎಂದು ಸಲಹೆ ನೀಡಿತು.
ಶಾಲೆ, ಕಾಲೇಜು ಬಂದ್:ವಾಯು ಮಾಲಿನ್ಯ ಹಿನ್ನೆಲೆಯಲ್ಲಿ ಶಾಲೆ-ಕಾಲೇಜು, ಹೊರಗಿನಿಂದ ಬರುವ ವಾಹನಗಳ (ಅಗತ್ಯ ಸೇವೆ ಹೊರತುಪಡಿಸಿ) ಪ್ರವೇಶ ನಿಷೇಧಿಸಲು ಸರ್ಕಾರ ನಿರ್ಧರಿಸಿದೆ ಎಂದು ದೆಹಲಿ ಪರಿಸರ ಸಚಿವ ಗೋಪಾಲ್ ರಾಯ್ ಹೇಳಿದ್ದಾರೆ. ಸರ್ಕಾರಿ ನೌಕರರು ಮನೆಯಿಂದ ಕೆಲಸ ಮಾಡಲಿದ್ದಾರೆ. ಭಾನುವಾರದ ತನಕ ಯಾವುದೇ ಕಾಮಗಾರಿ ಚಟುವಟಿಕೆ ನಡೆಯುವುದಿಲ್ಲ. ಒಟ್ಟು 1,000 ಖಾಸಗಿ ಸಿಎನ್​ಜಿ ಬಸ್​ಗಳನ್ನು ಬಾಡಿಗೆಗೆ ಪಡೆಯಲಾಗುವುದು. ಗುರುವಾರ ದಿಂದಲೇ ಇದು ಅನುಷ್ಠಾನಗೊಳ್ಳಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
|ನ್ಯಾ. ಸೂರ್ಯಕಾಂತ್ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠದ ಸದಸ್ಯ
ಕೇಂದ್ರದ ಅಫಿಡವಿಟ್:ದೆಹಲಿ ಮಾಲಿನ್ಯ ನಿಯಂತ್ರಣದ ಬಗ್ಗೆ ವಾಯು ಗುಣಮಟ್ಟ ನಿರ್ವಹಣಾ ಆಯೋಗದ ನಿರ್ದೇಶನಗಳನ್ನು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್​ಗೆ ಸಲ್ಲಿಸಿದ ಅಫಿಡವಿಟ್​ನಲ್ಲಿ ವಿವರಿಸಿದೆ. ನ. 15ರಂದು ನಡೆದ ಸಭೆಯಲ್ಲಿ ಆಯೋಗವು ದೆಹಲಿ, ಹರ್ಯಾಣ, ಪಂಜಾಬ್, ಉತ್ತರ ಪ್ರದೇಶ ರಾಜ್ಯಗಳಿಗೆ ಪಾಲಿಸಬೇಕಾದ ಕೆಲ ಸೂಚನೆಗಳನ್ನು ನೀಡಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × three =
Remember me
