ನವದೆಹಲಿ:ಗುಪ್ತಚರ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಅಂಕಿತ್ ಶರ್ಮ ನನ್ನ ಕಣ್ಣ ಮುಂದೆಯೇ ಬೆಳೆದ ಹುಡುಗ. ಆತನಿಗೆ ಚೂರಿ ಹಾಕಿ ಮೃತದೇಹವನ್ನು ಪಾಪಿಗಳು ಅಲ್ಲೇ ಕಾಣುತ್ತಿರುವ ಚರಂಡಿಗೆ ಎಸೆದಿದ್ದಾರೆ. ಇವರೇನು ಮನುಷ್ಯರಾ? ಶರ್ಮ ಕುಟುಂಬಕ್ಕೆ ಇನ್ನು
ಯಾರು ದಿಕ್ಕು?
ಚಾಂದ್​ಭಾಗ್​ನಲ್ಲಿರುವ ಆಮ್ ಆದ್ಮಿ ಪಕ್ಷದ ಕಾರ್ಪೆರೇಟರ್ ತಾಹಿರ್ ಹುಸೇನ್ ಮನೆ ಎದುರಿದ್ದ ಅಂಗಡಿಯೊಂದರಲ್ಲಿ ಅಂಕಿತ್ ಇನ್ನಿಲ್ಲ ಎಂಬುದನ್ನು ಗ್ರಹಿಸಿಕೊಂಡಾಗ ಮಧ್ಯ ವಯಸ್ಸಿನ ಮನೋಜ್ ಶರ್ಮರ ಕಣ್ಣಾಲಿಗಳು ಒದ್ದೆಯಾಗಿದ್ದವು. ತಾಹಿರ್ ಹುಸೇನ್ ಮತ್ತವರ ಗೂಂಡಾ ಬೆಂಬಲಿಗರು ಇಲ್ಲದಿರುತ್ತಿದ್ದರೆ ಅಂಕಿತ್ ಬದುಕಿರುತ್ತಿದ್ದ. ಅಂಕಿತ್​ಗೆ ತಾಹಿರ್ ಚೂರಿ ಹಾಕಿದ್ದಾನೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ಆತನನ್ನು ಬಂಧಿಸಿ, ತನಿಖೆ ಮಾಡಲೇಬೇಕು ಎಂದು ಮನೋಜ್ ಆಗ್ರಹಿಸಿದರು. ತಾಹಿರ್ ಹುಸೇನ್ ಮನೆ ಸದಾ ರಾಜಕೀಯ ಚಟುವಟಿಕೆಗಳಿಂದ ಗಿಜಿಗುಡುತ್ತಿರುತ್ತದೆ. ಮುಸ್ಲಿಮರ ಮಧ್ಯೆ ಪ್ರಭಾವಿ ವ್ಯಕ್ತಿ. ಪೊಲೀಸರು ಈಗ ಬಂದಿಲ್ಲಿ ತನಿಖೆ ನಡೆಸುತ್ತಿದ್ದರು. ನಿನ್ನೆ ಆತ ನಿರಾತಂಕವಾಗಿ ಮಾಧ್ಯಮಕ್ಕೆ ಮಾತನಾಡುತ್ತಿದ್ದ. ಈಗ ನಾಪತ್ತೆಯಾಗಿದ್ದಾನೆ. ನಿನ್ನೆ ಈ ಪೊಲೀಸರು ನಿದ್ದೆ ಮಾಡುತ್ತಿದ್ದರೇ ಎಂದು ಅದೇ ದಿನಸಿ ಅಂಗಡಿ ಮಾಲೀಕ ಪ್ರಶ್ನಿಸಿದರು.
ಚಾಂದ್​ಭಾಗ್ ನ ಬಹುಪಾಲು ಹಿಂದುಗಳು ಅಂಕಿತ್ ಹತ್ಯೆಗೆ ತಾಹಿರ್ ಮತ್ತವನ ಗೂಂಡಾಗಳೇ ಕಾರಣ ಎಂದು ದೂರುತ್ತಾರೆ. ಮೃತದೇಹ ಪತ್ತೆಯಾದ ಕ್ಷಣದಿಂದ ಅಂಕಿತ್ ಹೆತ್ತವರು ಕೂಡ ಇದೇ ವಾದ ಮುಂದಿಟ್ಟಿದ್ದಾರೆ. ವಿಜಯವಾಣಿ ತಂಡ ತಾಹಿರ್ ನಿವಾಸದ ಬಳಿ ತೆರಳಿದ್ದ ವೇಳೆ ವಿಶೇಷ ತನಿಖಾ ದಳ, ದಿಲ್ಲಿ ಪೊಲೀಸ್ ಕ್ರೖೆಮ್ ಬ್ರಾಂಚ್ ಮತ್ತು ಫಾರೆನ್ಸಿಕ್ ತಜ್ಞರು ಸ್ಥಳ ಪರಿಶೀಲನೆ ನಡೆಸುತ್ತಿದ್ದರು. ತಾಹಿರ್ ನಿವಾಸದ ಸುತ್ತ ಬ್ಯಾರಿಕೇಡ್ ಗಳನ್ನು ಹಾಕಲಾಗಿತ್ತು. ಆಮ್ ಆದ್ಮಿ ಪಕ್ಷ ಆತನನ್ನು ಪಕ್ಷದಿಂದ ವಜಾಗೊಳಿಸಿದ ಕ್ಷಣದಿಂದ ಆತ ಕಾಣೆಯಾಗಿದ್ದಾನೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕುತ್ತಿದ್ದರು. ಇವೆಲ್ಲಕ್ಕೆ ಪೂರಕವಾಗಿ ತಾಹಿರ್ ತನ್ನ ಮನೆಯ ಮೇಲ್ಛಾವಣಿಯಲ್ಲಿ ನಿಂತು ಯುವಕರ ಗುಂಪನ್ನು ಪ್ರಚೋದಿಸುತ್ತಿದ್ದ ದೃಶ್ಯಾವಳಿಗಳನ್ನೂ ಸ್ಥಳೀಯರು ಅಲ್ಲಿದ್ದ ಪತ್ರಕರ್ತರಿಗೆ ತೋರಿಸುತ್ತಿದ್ದರು. ದಳ್ಳುರಿ, ಹಲ್ಲೆ, ಗಲಭೆಯಿಂದ ಛಿದ್ರಗೊಂಡಿರುವ ಚಾಂದ್ ಭಾಗ್ ಸ್ಮಶಾನದಂತೆ ಕಂಡುಬಂದಿತ್ತು. ಗಲ್ಲಿಗಳಲ್ಲಿ ನೆಲೆ ಕಂಡುಕೊಂಡಿರುವ ಮಂದಿ ಮನೆಯಿಂದ ಹೊರಬರಲು ಹೆದರುತ್ತಿದ್ದರು.
ಚಾಂದ್​ಭಾಗ್ ಪ್ರವೇಶಿಸುವ ರಸ್ತೆಯ ಮೊದಲಿಗೆ ಕಾಣುವ ಹಣ್ಣಿನ ಅಂಗಡಿ ಮತ್ತು ಗೌಸ್ ಚಿಕನ್ ಸೆಂಟರ್ ಸಂಪೂರ್ಣ ಭಸ್ಮಗೊಂಡಿದೆ. ಅಂಗಡಿಗಳ ಮೇಲ್ಭಾಗದಲ್ಲಿ ಮಾಲೀಕ ಮಹಮ್ಮದ್ ಗೌಸ್ ತನ್ನ ಸೋದರರೊಂದಿಗೆ ಮನೆ ಕಟ್ಟಿಕೊಂಡಿದ್ದ. ಆದರೆ, ಆತನಿಗೀಗ ಮನೆಯೂ ಇಲ್ಲ, ಅಂಗಡಿಯೂ ಇಲ್ಲ. ಮಕ್ಕಳು ಮತ್ತು ಪತ್ನಿ ಸಂಬಂಧಿಕರ ಮನೆಗೆ ಕಳುಹಿಸಿರುವ ಆತ ತನ್ನ ಅಂಗಡಿ ಎದುರು ಕೂತು ಭವಿಷ್ಯದ ಬಗ್ಗೆ ಚಿಂತಿತನಾಗಿದ್ದ. ಹಿಂದಿನ ತಲೆಮಾರಿನಿಂದ ಬಳುವಳಿಯಾಗಿ ಸಿಕ್ಕಿದ್ದ ಅಂಗಡಿ, ವ್ಯಾಪಾರ ಎಲ್ಲವೂ ದುಷ್ಕರ್ವಿುಗಳ ಅಟ್ಟಹಾಸಕ್ಕೆ ಬಲಿಯಾಗಿದೆ. ಅಂಗಡಿ ಸಾಮಗ್ರಿ, ಮನೆಯಲ್ಲಿದ್ದ ಚಿನ್ನ, ಹಣ ಸೇರಿ ಸುಮಾರು 1 ಕೋಟಿ ರೂ.ನಷ್ಟವಾಗಿದೆ. ಪುನರ್ ನಿರ್ವಣಕ್ಕೆ ದುಡ್ಡು ಯಾರು ಕೊಡುತ್ತಾರೆ? ಮಕ್ಕಳ ಶಾಲೆ, ವಿದ್ಯಾಭ್ಯಾಸದ ಕತೆ ಏನು ಎಂಬೆಲ್ಲಾ ಪ್ರಶ್ನೆಗಳೇ ಆತನನ್ನು ಕಾಡುತ್ತಿದ್ದವು. ನಾವು ವ್ಯಾಪಾರಿಗಳು ಮತ್ತು ಪರಸ್ಪರ ಸಹಕಾರ-ಸಹಬಾಳ್ವೆಯಿಂದ ಬದುಕುತ್ತಿದ್ದೆವು. ಗ್ರಾಹಕರಿಂದಲೇ ನನ್ನ ಜೀವನ. ಯಾರನ್ನು ಏಕೆ ನಾನು ದ್ವೇಷಿಸಲಿ? ನನ್ನ ಅಂಗಡಿ ಬಳಿಕ ಹಿಂದುಗಳ ಐದಾರು ಅಂಗಡಿಗಳಿವೆ. ಅವರೆಲ್ಲರೂ ನನ್ನ ಸ್ನೇಹಿತರು, ಸಹಾಯಕ್ಕೆ ನೆರವಾಗುತ್ತಾರೆ. ಮೊನ್ನೆ ನನ್ನ ಅಂಗಡಿ ಬೆಂಕಿ ಭಸ್ಮವಾಗುವುದನ್ನು ತಡೆಯಲಾಗಲಿಲ್ಲ. ಆದರೆ ಅವರ ಅಂಗಡಿಗಳಿಗೆ ಹೊತ್ತಿ ಉರಿಯದಂತೆ ನೋಡಿಕೊಂಡೆವು. ಬೇರೆಲ್ಲೋ ಹೊರ ಭಾಗದಿಂದ ಬಂದಿದ್ದ ಕಿಡಿಗೇಡಿಗಳು ನಮ್ಮ ಐಕ್ಯತೆ ಕೆಡಿಸಲು ಯತ್ನಿಸಿದರು ಎಂದ ಮಹಮ್ಮದ್ ಗೌಸ್ ನನ್ನ ಮೂರೂ ಅಂಗಡಿಗಳ ಸ್ಥಿತಿ ಹೇಗಾಗಿದೆ ನೋಡಿ ಬೇಸರ ಹೊರಹಾಕಿದ.
ಗೋಕುಲ್ ಪುರಿಯಲ್ಲೂ ವಾಹನ, ಸಾರ್ವಜನಿಕ ಆಸ್ತಿ-ಪಾಸ್ತಿ ಸುಟ್ಟು ಕರಕಲಾದ ದೃಶ್ಯ ಕಣ್ಣಿಗೆ ರಾಚುತ್ತಿತ್ತು. ಗೋಕುಲ್ ಪುರಿ ಪ್ರವೇಶದ್ವಾರದಿಂದ ಕೊಂಚ ದೂರದಲ್ಲಿರುವ ಕುಲ್ ದೀಪ್ ದಾನರ್ ಎಂಬವರ ಸ್ಯಾಮ್ ಸಂಗ್ ಮೊಬೈಲ್ ಶಾಪ್ ನೊಂದಿಗೆ ಇಸ್ಲಾಂ ಮಂಜಿಲ್ ಅಂಟಿಕೊಂಡಿದೆ. ಇಸ್ಲಾಂ ಮಂಜಿಲ್ ಸಂಪೂರ್ಣ ಹೊತ್ತಿ ಉರಿದಿದ್ದು, ಮನೆಯೊಳಗಿದ್ದ ವಸ್ತುಗಳೆಲ್ಲವೂ ಸುಟ್ಟು ಕರಕಲಾಗಿದೆ. ಮನೆಯೊಳಗೆ ನಾಲ್ಕೈದು ಗ್ಯಾಸ್ ಸಿಲಿಂಡರ್​ಗಳಿದ್ದವು. ದುಷ್ಕರ್ವಿುಗಳು ದಾಳಿ ಮಾಡಿದ ನಂತರ ನಾವು ಮನೆಯವರನ್ನು ಹೊರಗೆ ಕರೆ ತಂದೆವು ಮತ್ತು ಗ್ಯಾಸ್ ಸಿಲಿಂಡರ್ ಗಳನ್ನು ಹೊರತಂದು ಪ್ರಾಣಾಪಾಯದಿಂದ ಪಾರು ಮಾಡಿದೆವು. ಒಂದು ವೇಳೆ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡಿದ್ದರೆ ಇಡೀ ಅಂಗಡಿ ಸಾಲುಗಳೇ ಈಗ ನೆಲಕ್ಕುರುಳುತ್ತಿದ್ದವು ಎಂದು ಜನರಲ್ ಸ್ಟೋರ್ಸ್ ಮಾಲೀಕ ಅಶೋಕ್ ವರ್ಮ ವಿಜಯವಾಣಿಗೆ ತಿಳಿಸಿದರು. ದಂಗೆಕೋರರಿಗೆ ಜಾತಿ-ಧರ್ಮ ಎನ್ನುವುದಿಲ್ಲ. ಅಮಾಯಕರನ್ನು ಹಿಂಸಿಸುವುದೇ ಅವರ ಉದ್ದೇಶ. ನಾನು ಈ ಗಲ್ಲಿಯಲ್ಲಿ ಅನೇಕ ವರ್ಷದಿಂದ ವಾಸವಾಗಿ, ಸರ್ಕಾರೇತರ ಸಂಸ್ಥೆ ನಡೆಸುತ್ತೇನೆ. ಹಿಂದುಗಳ ಜತೆ ಐದು ಮುಸ್ಲಿಂ ಬಾಲಕರನ್ನೂ ನಾವು ಪೋಷಿಸುತ್ತಿದ್ದೇವೆ. ನಮ್ಮಲ್ಲಿ ಯಾರಿಗೂ ಹಿಂದು-ಮುಸ್ಲಿಂ ಪ್ರತ್ಯೇಕ ಭಾವನೆ ಮೂಡಿಲ್ಲ. ತಮ್ಮ ಮುಖಕ್ಕೆ ಬಟ್ಟೆ ಮುಚ್ಚಿಕೊಂಡಿದ್ದ ಯುವಕರು ಖಂಡಿತಾ ಸ್ಥಳೀಯರಲ್ಲ. ಪಕ್ಕಾ ಪ್ಲಾನ್ ಮಾಡಿ ದಾಳಿ ಮಾಡಿದ್ದಾರೆ ಎಂದರು ದಿನೇಶ್ ಚಂದ್.
ಗೋಕುಲ್ ಪುರಿಯ ಗಂಗಾ ವಿಹಾರದಲ್ಲಿ ಸುಮಾರು 25 ಮುಸ್ಲಿಂ ನಿವಾಸಿಗರನ್ನು ಹಿಂದುಗಳು ರಕ್ಷಿಸಿದ್ದಾರೆ. ನಾವು ದಶಕಗಳಿಂದ ಒಟ್ಟಾಗಿ ಬದುಕುತ್ತಿದ್ದೇವೆ. ಅವರು ವೇದನೆಯಲ್ಲಿದ್ದಾಗ ಹೇಗೆ ಸುಮ್ಮನಿರಬೇಕು? ಅವರಿಗೆ ನೆರವಾಗುವುದು ನಮ್ಮ ಧರ್ಮ ಎಂದು ವೃದ್ಧಾಪ್ಯದಲ್ಲಿದ್ದ ಮೀನಾದೇವಿ ಹೇಳುತ್ತಾರೆ. ಗಲಭೆಪೀಡಿತ ಇಂದ್ರಾ ವಿಹಾರ್​ನಲ್ಲೂ ಹಿಂದು-ಮುಸ್ಲಿಂ ಸಹಬಾಳ್ವೆಯ ದೃಶ್ಯಗಳು ಕಂಡುಬಂದವು. ಬಹುಪಾಲು ಹಿಂದುಗಳು ಹಲ್ಲೆಗೊಳಗಾಗಿ, ವಾಸ್ತವ್ಯಕ್ಕಾಗಿ ಬೇರೆಡೆಗೆ ತೆರಳಿದ್ದಾರೆ. ಈಗ ಇಲ್ಲಿರುವ ಸಣ್ಣ ಮಂದಿರಕ್ಕೆ ಮುಸ್ಲಿಮರೇ ಕಾವಲುಗಾರರು! ದಂಗೆಕೋರರ ದಾಳಿ ಬಳಿಕ ಮೂರು ದಿನಗಳಿಂದ ಮುಸ್ಲಿಂ ನಿವಾಸಿಗಳು ಮಂದಿರದ ಎದುರು ಭಾಗದಲ್ಲಿ ಕುಳಿತು ಯಾರೂ ದಾಳಿ ಮಾಡದಂತೆ ಕಾಯುತ್ತಿದ್ದಾರೆ. ನಮ್ಮ ಸ್ನೇಹಿತರು ಇಲ್ಲಿನ ಪರಿಸ್ಥಿತಿ ತಿಳಿಗೊಂಡ ಬಳಿಕ ವಾಪಸಾಗುತ್ತಾರೆ. ಅಲ್ಲಿವರೆಗೆ ನಾವೇ ಎಚ್ಚರದಿಂದ ಕಾಯುತ್ತೇವೆ ಎಂದರು ಸ್ಥಳೀಯರು.
ಐಬಿ ಅಧಿಕಾರಿಗೆ 250 ಬಾರಿ ಇರಿತ!
ಹಿಂಸಾಚಾರದಲ್ಲಿ ಸಾವನ್ನಪ್ಪಿರುವ ಬೇಹುಗಾರಿಕೆ ದಳದ (ಐಬಿ) ಅಧಿಕಾರಿ ಅಂಕಿತ್ ಶರ್ಮಾ ಮರಣೋತ್ತರ ವರದಿ ಅವರ ಸಾವಿನ ಕ್ರೂರತೆಯನ್ನು ತೆರೆದಿಟ್ಟಿದೆ. ಅಂಕಿತ್ ದೇಹಕ್ಕೆ ಸುಮಾರು ಚೂಪಾದ ಮಾರಕಾಸ್ತ್ರಗಳಿಂದ 250ಕ್ಕೂ ಹೆಚ್ಚು ಬಾರಿ ಇರಿಯಲಾಗಿದ್ದು, ಅವರ ಕರಳು ಕೂಡ ಹೊರಬಂದಿತ್ತು. ಸುಮಾರು ನಾಲ್ಕು ತಾಸುಗಳ ಕಾಲ ಅಂಕಿತ್ ಮೇಲೆ ಹಲ್ಲೆ ನಡೆಸಲಾಗಿದ್ದು, ಅವರ ದೇಹದಲ್ಲಿ ಗಾಯವಿಲ್ಲದೇ ಯಾವ ಭಾಗವೂ ಉಳಿದಿಲ್ಲ ಎಂದು ತಿಳಿದುಬಂದಿದೆ.
ದಂಗೆಗೆ ಭೀಮ್ ಆರ್ವಿು ಪ್ರಚೋದನೆ?
ಭಾನುವಾರ ಮಧ್ಯಾಹ್ನ ಈಶಾನ್ಯ ದೆಹಲಿಯ ಮೌಜ್​ಪುರ್ ಚೌಕ್​ನಲ್ಲಿ ಪೌರತ್ವ ತಿದ್ದುಪಡಿ ಕಾನೂನು ವಿರೋಧಿಸಿ ಚಂದ್ರಶೇಖರ ಆಜಾದ್ ನೇತೃತ್ವದ ಭೀಮ್ ಆರ್ವಿು ಬೆಂಬಲಿಗರು ಹಾಗೂ ಸಿಎಎ ಪರ ಘೊಷಣೆ ಕೂಗುತ್ತಿದ್ದ ಗುಂಪಿನ ಮಧ್ಯೆ ನಡೆದ ಕಲ್ಲು ತೂರಾಟವೇ ದೆಹಲಿ ಹಿಂದೆಂದೂ ಕಾಣದ ದಳ್ಳುರಿಗೆ ಸಾಕ್ಷಿಯಾಯಿತು ಎಂದು ದಿಲ್ಲಿ ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ಕಂಡುಕೊಂಡಿರುವ ಬಗ್ಗೆ ಮೂಲಗಳಿಂದ ತಿಳಿದುಬಂದಿದೆ. ಭೀಮ್ ಆರ್ವಿು ಸಂಘಟನೆಯ ಬೆಂಬಲಿಗರೊಬ್ಬರು ಸಿಎಎ ಪರ ಘೊಷಣೆ ಕೂಗುತ್ತಿದ್ದ ಗುಂಪಿನ ಮೇಲೆ ಕಲ್ಲನ್ನು ಎಸೆಯುತ್ತಿದ್ದಂತೆಯೇ ಕಪಿಲ್ ಮಿಶ್ರಾ ಬೆಂಬಲಿಗ ಗುಂಪು ಸಿಎಎ ವಿರೋಧಿ ಗುಂಪನ್ನು ಅಟ್ಟಾಡಿಸಿಕೊಂಡು ಹೋಗಿತ್ತು. ಭೀಮ್ ಆರ್ವಿು ದೆಹಲಿ ಅಧ್ಯಕ್ಷ ಹಿಮಾಂಶು ವಾಲ್ಮೀಕಿ ಸಂಜೆ ವೇಳೆಗೆ ಮತ್ತಷ್ಟು ಬೆಂಬಲಿಗರನ್ನು ಸೇರಿಸಿ ಸಿಎಎ ಪರ ಗುಂಪಿನ ವಿರುದ್ಧ ಬೀದಿ ಕಾಳಗಕ್ಕೆ ಸಜ್ಜುಗೊಳಿಸಿದ್ದರು ಎನ್ನಲಾಗಿದೆ. ಸೋಮವಾರ ಮತ್ತು ಮಂಗಳವಾರ ಈಶಾನ್ಯ ದೆಹಲಿಯ ಬಹುತೇಕ ಭಾಗಗಳು ಹೊತ್ತಿ ಉರಿದಿದ್ದು ಹೇಗೆ ಎಂಬುದನ್ನು ಇಡೀ ದೇಶವೇ ನೋಡಿದೆ.
ಮೃತರ ಸಂಖ್ಯೆ 42ಕ್ಕೆ ಏರಿಕೆ
ದೆಹಲಿ ಈಗ ಶಾಂತ ಸ್ಥಿತಿಗೆ ಮರಳಿದೆ. ಆದರೆ ಗಲಭೆಯಲ್ಲಿ ಮೃತಪಟ್ಟವರ ಸಂಖ್ಯೆ 42ಕ್ಕೆ ಏರಿಕೆಯಾಗಿದ್ದು, 300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮೃತಪಟ್ಟವರಲ್ಲಿ 30 ಜನರ ಗುರುತು ಪತ್ತೆಯಾಗಿದ್ದು, ಉಳಿದ ಮೃತದೇಹಗಳ ಪರೀಕ್ಷೆ ನಡೆಸಲಾಗುತ್ತಿದೆ. ಮೃತರಲ್ಲಿ ಕಾರ್ವಿುಕರು, ಉದ್ಯಮಿಗಳು, ಆಟೋ ಚಾಲಕರು, ವ್ಯಾಪಾರಸ್ಥರು, ವಯೋವೃದ್ಧರು ಇದ್ದಾರೆ ಎಂದು ತಿಳಿದುಬಂದಿದೆ. ಶುಕ್ರವಾರ ಕೆಲವೆಡೆ ಅಂಗಡಿಗಳು ಬಾಗಿಲು ತೆರೆದಿದ್ದು, ಕೆಲ ವಾಹನಗಳು ರಸ್ತೆಗಿಳಿದಿದ್ದವು. ಈಶಾನ್ಯ ದೆಹಲಿ ಬಹುತೇಕ ಶಾಂತವಾಗಿದೆ.
ದೆಹಲಿಗೆ ನೂತನ ಪೊಲೀಸ್ ಮುಖ್ಯಸ್ಥ
ಐಪಿಎಸ್ ಅಧಿಕಾರಿ ಎಸ್.ಎನ್. ಶ್ರೀವಾಸ್ತವ್​ಗೆ ದೆಹಲಿ ಪೊಲೀಸ್ ನೂತನ ಮುಖ್ಯಸ್ಥರಾಗಿ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ. ದೆಹಲಿ ಹಿಂಸಾಚಾರ ನಿಯಂತ್ರಣಕ್ಕೆ ಶ್ರೀವಾತ್ಸವ್​ರನ್ನು ವಿಶೇಷ ಆಯುಕ್ತರನ್ನಾಗಿ ನೇಮಿಸಿದ್ದ ಗೃಹ ಸಚಿವಾಲಯ ಈಗ ಮುಖ್ಯ ಪೊಲೀಸ್ ಆಯುಕ್ತರಾಗಿ ಬಡ್ತಿ ನೀಡಿದೆ. ಹಾಲಿ ಪೊಲೀಸ್ ಆಯುಕ್ತ ಅಮೂಲ್ಯ ಪಟ್ನಾಯಕ್ ಶನಿವಾರ ನಿವೃತ್ತಿ ಹೊಂದಲಿದ್ದು, ಮಾ. 1ರಂದು ಶ್ರೀವಾತ್ಸವ್ ಅಧಿಕಾರ ಸ್ವೀಕರಿಸಲಿದ್ದಾರೆ.
ತಾಹಿರ್ ನಾಪತ್ತೆ
ಅಕಿಂತ್ ಶರ್ಮಾ ಹತ್ಯೆ ಆರೋಪ ಎದುರಿಸುತ್ತಿರುವ ಆಮ್ ಆದ್ಮಿ ಪಕ್ಷದ ಮುಖಂಡ ತಾಹಿರ್ ಹುಸೇನ್ ಕಾಣೆಯಾಗಿದ್ದಾರೆ. ತಾಹಿರ್ ಮನೆಯ ಟೆರೆಸ್ ಮೇಲೆ ಪೆಟ್ರೋಲ್ ಬಾಂಬ್, ಕಲ್ಲು, ಮಾರಕಾಸ್ತ್ರ ಗಳು ಲಭ್ಯ ವಾಗಿರುವ ಸಂಬಂಧ ಅವರ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಚಾಂದ್​ಬಾಗ್​ನಲ್ಲಿನ ಚರಂಡಿಯೊಂದರಲ್ಲಿ ಕಳೆದ ಮಂಗಳವಾರ ಅಂಕಿತ್​ರ ಮೃತದೇಹ ಪತ್ತೆಯಾಗಿತ್ತು.
| ರಾಘವ ಶರ್ಮ ನಿಡ್ಲೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 18 =
Remember me
