ಕರೊನಾ ವೈರಸ್ ವ್ಯಾಪಕವಾಗಿ ಹಬ್ಬಿರುವ ರಾಜ್ಯಗಳಲ್ಲಿ ತಮಿಳುನಾಡಿಗೆ 5ನೇ ಸ್ಥಾನ. ಈವರೆಗೆ 1629 ವೈರಾಣು ಸೋಂಕಿತರು ರಾಜ್ಯದಲ್ಲಿ ಪತ್ತೆಯಾಗಿದ್ದು, ಬಹುತೇಕ ಮಂದಿ (ಶೇ.85) ದೆಹಲಿಯ ತಬ್ಲಿಘಿ ಜಮಾತ್ ಧಾರ್ವಿುಕ ಸಭೆಯ ಪರಿಣಾಮದಿಂದಾಗಿ ಸೋಂಕನ್ನು ತಗುಲಿಸಿ ಕೊಂಡಿದ್ದಾರೆ. ಮಾರ್ಚ್ 7ರಂದು ಮೊದಲ ಕೇಸು ಪತ್ತೆಯಾದ ತಮಿಳುನಾಡಿನಲ್ಲಿ ವೈರಾಣು ಈವರೆಗೆ 18 ಜನರನ್ನು ಬಲಿ ತೆಗೆದುಕೊಂಡಿದೆ. 663 ಮಂದಿ ಗುಣಮುಖರಾಗಿದ್ದಾರೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಗುಣಮುಖ ಸಂಖ್ಯೆ ಹೆಚ್ಚಿರುವುದು ಸಮಾಧಾನಕರ ಬೆಳವಣಿಗೆ.
ರಾಜ್ಯದ 38 ಜಿಲ್ಲೆಗಳ ಪೈಕಿ 35 ಜಿಲ್ಲೆಗಳಲ್ಲಿ ವೈರಸ್ ಹರಡಿಕೊಂಡಿದ್ದು, ಚೆನ್ನೈ ಮತ್ತು ಕೊಯಮತ್ತೂರಿನಲ್ಲಿ ಅತಿ ಹೆಚ್ಚು ಕೇಸು ದಾಖಲಾಗಿವೆ. ದೇಶದ ಅತಿ ಹೆಚ್ಚು ಕರೊನಾ ಹಾಟ್ ಸ್ಪಾಟ್ ಜಿಲ್ಲೆಗಳಿರುವ ರಾಜ್ಯ ಎಂಬ ಕುಖ್ಯಾತಿಗೆ ತ.ನಾಡು ಗುರಿಯಾಗಿದೆ. ಓಮಾನ್​ನಿಂದ ವಾಪಸಾಗಿದ್ದ ಕಾಂಚಿಪುರಂ ಮೂಲದ ವ್ಯಕ್ತಿಗೆ ಮಾರ್ಚ್ 7ರಂದು ಸೋಂಕಿರುವುದು ದೃಢವಾಗುವ ಮೂಲಕ ಇಲ್ಲಿ ವೈರಸ್ ಹಾವಳಿ ಆರಂಭವಾಗಿತ್ತು. ಇದಾದ ಬಳಿಕ ದೆಹಲಿಯಿಂದ ರೈಲಿನ ಮೂಲಕ ಚೆನ್ನೈಗೆ ಬಂದಿದ್ದ ವ್ಯಕ್ತಿಯಲ್ಲಿ ಕರೊನಾ ಸೋಂಕಿರುವುದು ಮಾರ್ಚ್ 18ರಂದು ಖಾತರಿಯಾಗಿತ್ತು. ಏಪ್ರಿಲ್ 1ರಂದು ಒಂದೇ ದಿನ 110 ಕೇಸು ಪತ್ತೆಯಾಗಿದ್ದವು ಮತ್ತು ಎಲ್ಲವೂ ತಬ್ಲಿಘಿ ಜಮಾತ್ ಸಭೆ ಹಿನ್ನೆಲೆಯನ್ನೇ ಹೊಂದಿದ್ದವು. ಏಪ್ರಿಲ್ 22ರಂದು 33 ಕೇಸು ಪತ್ತೆಯಾಗಿದ್ದು, ರಾಜ್ಯ ಸರ್ಕಾರ ಹೇಳುವ ಪ್ರಕಾರ ರಾಜ್ಯದಲ್ಲಿ ಸೋಂಕಿತರ ಪ್ರಮಾಣ ನಿಧಾನವಾಗಿ ಕಡಿಮೆಯಾಗುತ್ತಿದೆ. ಆರಂಭದಲ್ಲಿ ಕರೊನಾ ಟೆಸ್ಟ್​ಗಳನ್ನು ನಡೆಸಲು ಸರ್ಕಾರದ ಬಳಿಕ ಕೇವಲ ನಾಲ್ಕು ಪ್ರಯೋಗಾಲಯಗಳಿದ್ದವು. ಮಾರ್ಚ್ 16ರ ವೇಳೆಗೆ ಕೇರಳ ಮತ್ತು ಕರ್ನಾಟಕ ರಾಜ್ಯಗಳು ತಲಾ 1500 ಮತ್ತು 700 ಟೆಸ್ಟಿಂಗ್ ಸ್ಯಾಂಪಲ್​ಗಳನ್ನು ಪ್ರಯೋಗಾಲಯಕ್ಕೆ ಕಳಿಸಿದ್ದವು. ಆದರೆ, ತಮಿಳುನಾಡಿನಲ್ಲಿ ಆ ವೇಳೆಗೆ ಕೇವಲ 90 ಪರೀಕ್ಷೆಗಳನ್ನಷ್ಟೇ ನಡೆಸಲಾಗಿತ್ತು. ಏಪ್ರಿಲ್ 18ರಂದು 31 ಪ್ರಯೋಗಾಲಯಗಳನ್ನು ಸರ್ಕಾರ ಸಿದ್ಧಪಡಿಸಿದೆ. 10 ಖಾಸಗಿ ಪ್ರಯೋಗಾಲಯಗಳಿದ್ದು, ಪ್ರತಿ ಟೆಸ್ಟ್​ಗೆ 4,500 ರೂ. ವಿಧಿಸಲಾಗುತ್ತಿದೆ. ಆದರೆ ಈ ವೆಚ್ಚವನ್ನು ಸರ್ಕಾರ ಭರಿಸುವುದಾಗಿ ತಿಳಿಸಲಾಗಿದೆ. ಧರ್ಮಪುರಿ, ಕೃಷ್ಣಗಿರಿ, ಮಯಿಲದುತುರೈ ಜಿಲ್ಲೆಗಳು ಗಡಿ ಜಿಲ್ಲೆಗಳಾಗಿದ್ದರೂ, ಈವರೆಗೆ ಯಾವುದೇ ಕೇಸು ಪತ್ತೆಯಾಗಿಲ್ಲ.
ಜಮಾತ್ ಸಭೆಗೆ ಸಂಬಂಧಿಸಿದ ಶಂಕಿತರನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನಾಲ್ಕು ವಿಭಾಗಗಳನ್ನು ಮಾಡಿತ್ತು. ಜಮಾತ್ ಸಭೆಯಲ್ಲಿ ಪಾಲ್ಗೊಂಡ ವಿದೇಶಿಯರು, ತಮಿಳುನಾಡಿನಿಂದ ವಿದೇಶಕ್ಕೆ ಹೋಗಿ ಧಾರ್ವಿುಕ ಸಭೆಗಳಲ್ಲಿ ಪಾಲ್ಗೊಂಡವರು, ದೆಹಲಿ ಜಮಾತ್ ಸಭೆಯಲ್ಲಿ ಪಾಲ್ಗೊಂಡ ಇತರೆ ರಾಜ್ಯದವರಾಗಿದ್ದು, ತಮಿಳುನಾಡಿಗೆ ಬಂದವರು ಮತ್ತು ಕೊನೆಯದಾಗಿ ಜಮಾತ್ ಸಭೆಯಲ್ಲಿದ್ದ ತಮಿಳುನಾಡು ನಿವಾಸಿಗರು ಎಂಬ ನಾಲ್ಕು ವಿಂಗಡಣೆ ಮಾಡಿ ಎಲ್ಲರನ್ನೂ ಕ್ವಾರಂಟೈನ್​ಗೆ ಒಳಪಡಿಸಲಾಯ್ತು. ಸೋಂಕಿತರಲ್ಲಿ ಕೆಲವರು ಈಗ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಏತನ್ಮಧ್ಯೆ, ತಮಿಳುನಾಡಿನಲ್ಲಿ ಸೋಂಕಿನಿಂದ ಗುಣಮುಖರಾದವರು ಪ್ಲಾಸ್ಮಾ ಥೆರಪಿಗೆ ತಮ್ಮ ರಕ್ತ ನೀಡಿ ಸಹಕರಿಸಬೇಕು. ಇದರಿಂದ ಸೋಂಕಿತರು ಕಾಯಿಲೆಯಿಂದ ಗುಣಮುಖರಾಗಲು ನೆರವಾಗಲಿದೆ ಎಂದು ಜಮಾತ್ ಮುಖ್ಯಸ್ಥ ಮೌಲಾನ ಮಹಮ್ಮದ್ ಸಾದ್ ತಮ್ಮ ಧರ್ಮದವರಲ್ಲಿ ಕೇಳಿಕೊಂಡಿದ್ದಾರೆ.
ಕಡಿಮೆಯಾಗುತ್ತಿದೆಯೇ?: ರಾಜ್ಯದಲ್ಲಿ ಹಿಂದಿನ ವೇಗಕ್ಕೆ ಹೋಲಿಸಿದರೆ ಶೇ.10 ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಕಾರ್ಯದರ್ಶಿ ಬೀಲ ರಾಜೇಶ್ ಹೇಳಿದ್ದಾರೆ. ಲಾಕ್​ಡೌನ್​ನಿಂದಾಗಿ ಎಲ್ಲರೂ ಮನೆಯಲ್ಲಿ ಇದ್ದಾರೆ ಮತ್ತು ದೈಹಿಕ ಅಂತರ ಕಾಯ್ದುಕೊಂಡಿದ್ದಾರೆ. ಎಲ್ಲಾ ಜಿಲ್ಲೆಗಳಲ್ಲಿ ರ್ಯಾಪಿಡ್ ಟೆಸ್ಟ್​ಗಳನ್ನು ನಡೆಸಲಾಯಿತು. ಕಳೆದ 2 ವಾರಗಳಲ್ಲಿ ಸುಮಾರು 50000 ಸ್ಯಾಂಪಲ್​ಗಳನ್ನು ಸಂಗ್ರಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ತರಕಾರಿ ಮಾರುಕಟ್ಟೆಯಾದ ಬಸ್​ಸ್ಟಾ್ಯಂಡ್: ಮಾರುಕಟ್ಟೆ ಗಳಲ್ಲಿ ಜನರ ಓಡಾಟ ತಪ್ಪಿಸಲು ನಗರ ಹಾಗೂ ಪಟ್ಟಣಗಳ ಬಸ್ ನಿಲ್ದಾಣಗಳನ್ನೇ ತರಕಾರಿ ಮಾರುಕಟ್ಟೆಗಳನ್ನಾಗಿ ಸರ್ಕಾರ ಪರಿವರ್ತಿಸಿದೆ. ಚೆನ್ನೈನಲ್ಲಿ ಪಾಲಿಕೆ ಹಾಗೂ ಹೈನುಗಾರಿಕೆ ಇಲಾಖೆ ಸಿಬ್ಬಂದಿಯೇ ಮನೆ ಮನೆಗೆ ಹೋಗಿ ಅಗತ್ಯ ಸಾಮಗ್ರಿಗಳನ್ನು ಪೂರೈಸುತ್ತಿದ್ದಾರೆ. ಅಮ್ಮ ಕ್ಯಾಂಟಿನ್ ಎಂದಿನಂತೆ ಯಶಸ್ವಿಯಾಗಿ ನಡೆಯುತ್ತಿದೆ.
ಪತ್ರಕರ್ತರಿಗೆ ಸೋಂಕು
ತಮಿಳುನಾಡಿನ ಖಾಸಗಿ ಸುದ್ದಿವಾಹಿನಿಯ 27 ಮಂದಿಗೆ ಕರೊನಾ ಸೋಂಕಿರುವುದು ಮಂಗಳವಾರ ದೃಢವಾಗಿತ್ತು. ಇದಾದ ಬಳಿಕ ಮತ್ತೆ ಮೂವರಲ್ಲಿ ವೈರಾಣು ಕಂಡುಬಂದಿದೆ. ಈ ಮೂಲಕ ಕರೊನಾ ಸೋಂಕಿತ ಪತ್ರಕರ್ತರ ಸಂಖ್ಯೆ 30 ದಾಟಿದೆ. ಕರೊನಾ ಕುರಿತ ಸುದ್ದಿ ಸಂಗ್ರಹಕ್ಕಾಗಿ ತೆರಳಿದ್ದ ವೇಳೆ ಸೋಂಕಿತರ ಸಂಪರ್ಕದಿಂದಾಗಿ ಪತ್ರಕರ್ತರಿಗೂ ಸೋಂಕು ತಗುಲಿದೆ ಎಂದು ವೈದ್ಯರು ತಿಳಿಸಿದ್ದಾರೆ. ತಮಿಳುನಾಡು ಘಟನೆ ಬಳಿಕ ಬೇರೆ ರಾಜ್ಯಗಳು ಸಹ ಪತ್ರಕರ್ತರಿಗೆ ಕರೊನಾ ಪರೀಕ್ಷೆಗಳನ್ನು ಆರಂಭಿಸಿವೆ. ದೆಹಲಿ, ಕರ್ನಾಟಕ ಸರ್ಕಾರಗಳೂ ಈ ನಿಟ್ಟಿನಲ್ಲಿ ಕ್ರಮ ಕೈಗೊಂಡಿವೆ.
ಠಾಣೆಗೇ ಸೀಲ್
ಕರೊನಾ ಕಾರಣದಿಂದಾಗಿ ತಮಿಳುನಾಡಿನ ವಾನಂಬಾಡಿ ನಗರದ ಪೊಲೀಸ್ ಠಾಣೆಯನ್ನು ಸೀಲ್ ಮಾಡಲಾಗಿದೆ. ಠಾಣೆಯ ಮಹಿಳಾ ಇನ್​ಸ್ಪೆಕ್ಟರ್​ಗೆ ಸೋಂಕು ತಗುಲಿದ ಕಾರಣ ಅಲ್ಲಿದ್ದ ಎಲ್ಲ ಪೊಲೀಸರು, ಸಿಬ್ಬಂದಿಯನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ.
ಕೊವಿಡ್​​ನಿಂದಾದ ನಷ್ಟದ ಮೊತ್ತದ ಬಿಲ್​​ನ್ನು ಚೀನಾಕ್ಕೆ ಕಳಿಸಿದೆಯಾ ಜರ್ಮನಿ? ಮಾಧ್ಯಮವೊಂದರ ವರದಿಯ ಹೆಡ್​ಲೈನ್ ಎಡವಟ್ಟು..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − 2 =
Remember me
