ಕರೊನಾ ಸಾಂಕ್ರಾಮಿಕತೆಯ 2ನೇ ಅಲೆಯ ತೀವ್ರತೆ ಭಾರತದಲ್ಲಿ ಕಡಿಮೆಯಾಗುತ್ತಿರುವಾಗ ಏಷ್ಯಾ-ಪೆಸಿಫಿಕ್ ವಲಯದಲ್ಲಿ ಡೆಲ್ಟಾ ಪ್ರಭೇದದ ಹಾವಳಿ ಹೆಚ್ಚುತ್ತಿದ್ದು ಇದನ್ನು ಕಟ್ಟಿ ಹಾಕಲು ಹಲವು ದೇಶಗಳಲ್ಲಿ ಮತ್ತೆ ಲಾಕ್​ಡೌನ್ ಮುಂತಾದ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಗುತ್ತಿದೆ. ಇಲ್ಲವೇ ಈಗಾಗಲೇ ಜಾರಿಯಲ್ಲಿರುವ ಲಾಕ್​ಡೌನ್ ವಿಸ್ತರಿಸಲಾಗುತ್ತಿದೆ. ಸೋಂಕಿಗೆ ಇದುವರೆಗೆ ಜಗತ್ತಿನಾದ್ಯಂತ ಸುಮಾರು 40 ಲಕ್ಷ ಜನರು ಬಲಿಯಾಗಿದ್ದಾರೆ. ಕಳವಳಕಾರಿಯಾಗಿರುವ ಡೆಲ್ಟಾ ಪ್ರಭೇದ, 85 ದೇಶಗಳಲ್ಲಿ ಹಾವಳಿ ನಡೆಸುತ್ತಿದೆ. ಆಗ್ನೇಯ ಏಷ್ಯಾ ಮತ್ತು ಆಸ್ಟ್ರೇಲಿಯಾದಲ್ಲಿ ಸೋಂಕು ಮತ್ತೆ ತಲೆ ಎತ್ತಿದ್ದು ಅಧಿಕಾರಿಗಳು ಹಲವು ಕಠಿಣ ನಿಯಂತ್ರಣ ಕ್ರಮಗಳಿಗೆ ಮುಂದಾಗಿದ್ದಾರೆ. ಯುರೋಪ್​ನ ಬಹುತೇಕ ಭಾಗ ಮತ್ತು ಅಮೆರಿಕದಲ್ಲಿ ದೈನಂದಿನ ಚಟುವಟಿಕೆಗಳ ಮೇಲಿನ ನಿರ್ಬಂಧಗಳನ್ನು ಸಡಿಲಿಸಲಾಗುತ್ತಿದೆ. ಲಸಿಕೆ ಅಭಿಯಾನ ಫಲ ನೀಡಿದ್ದೇ ಇದಕ್ಕೆ ಕಾರಣ.
ರಷ್ಯಾದಲ್ಲಿ ಆಸ್ಪೋಟ:ರಷ್ಯಾದಲ್ಲಿ ಸೋಂಕು ಮತ್ತೆ ಆಸ್ಪೋಟ ಗೊಂಡಿದೆ. ರಷ್ಯಾ ರಾಜಧಾನಿ ಮಾಸ್ಕೊ ಭಾನು ವಾರ ಹೆಚ್ಚಿನ ಕರೊನಾ ಸಾವುಗಳಿಗೆ ಸಾಕ್ಷಿಯಾಗಿದ್ದು, 144 ಜನರು ಮೃತಪಟ್ಟಿದ್ದಾರೆ. ರಷ್ಯಾದಲ್ಲಿ ಜೂನ್ ಮಧ್ಯ ಭಾಗದಿಂದಲೂ ಡೆಲ್ಟಾ ಪ್ರಭೇದದಿಂದ ಹೆಚ್ಚಿನ ಸಮಸ್ಯೆ ಸೃಷ್ಟಿಯಾಗಿದೆ.
ಇಂಡೋನೇಷ್ಯಾದಲ್ಲಿ ದಾಖಲೆ ಕೇಸ್:ಇಂಡೋನೇಷ್ಯಾದಲ್ಲಿ 21,000ಕ್ಕೂ ಹೆಚ್ಚು ದೈನಿಕ ಕೇಸ್ ವರದಿಯಾಗಿವೆ. ರಾಜಧಾನಿ ಜಕಾರ್ತಾ ಮತ್ತು ಇತರ ಕರೊನಾ ಹಾಟ್​ಸ್ಪಾಟ್​ಗಳಲ್ಲಿನ ಆಸ್ಪತ್ರೆಗಳು ಕೋವಿಡ್ ರೋಗಿಗಳಿಂದ ತುಂಬಿ ಹೋಗಿವೆ. ಈ ಹಿನ್ನೆಲೆಯಲ್ಲಿ ಜನಸಂಚಾರದ ಮೇಲೆ ತಾತ್ಕಾಲಿಕವಾಗಿ ಮತ್ತೆ ನಿರ್ಬಂಧಗಳನ್ನು ವಿಧಿಸಲಾಗಿದೆ. ರಾಜಧಾನಿ ಬ್ಯಾಂಕಾಕ್​ನಲ್ಲಿ ಸೋಮವಾರಿಂದ ರೆಸ್ಟೋರೆಂಟ್ ಮತ್ತು ನಿರ್ಮಾಣ ಚಟುವಟಿಕೆಗಳ ಮೇಲೆ ನಿರ್ಬಂಧ ವಿಧಿಸಲು ಥಾಯ್ಲೆಂಡ್ ನಿರ್ಧರಿಸಿದೆ.
ಬಿಕೋ ಎನ್ನುತ್ತಿದೆ ಸಿಡ್ನಿ:ಆಸ್ಟ್ರೇಲಿಯಾದಲ್ಲಿ ಜನಸಂಖ್ಯೆ ಆಧಾರದಲ್ಲಿ 5ನೇ ಅತಿ ದೊಡ್ಡ ನಗರವಾದ ಸಿಡ್ನಿಯಲ್ಲಿ ಜುಲೈ 9ರವರೆಗೆ ಲಾಕ್​ಡೌನ್ ವಿಸ್ತರಣೆ ಮಾಡಲಾಗಿದೆ. ಅದರ 50 ಲಕ್ಷಕ್ಕೂ ಹೆಚ್ಚಿನ ನಿವಾಸಿಗಳು ಮನೆಯಲ್ಲೇ ಇರುವ ನಿರ್ಬಂಧಕ್ಕೆ ಒಳಗಾಗಿದ್ದಾರೆ. ರೆಸ್ಟೋರೆಂಟ್, ಬಾರ್ ಮತ್ತು ಕೆಫೆಗಳು ಮುಚ್ಚಿವೆ. ಇಡೀ ನಗರ ಜನ ಮತ್ತು ವಾಹನ ಸಂಚಾರವಿಲ್ಲದೆ ಭಣಗುಡುತ್ತಿದೆ. ಸೋಮವಾರ ಇಲ್ಲಿ 150 ಹೊಸ ಪ್ರಕರಣಗಳು ವರದಿಯಾಗಿದ್ದು, ಕೆಲವು ಸಾವು ಸಂಭವಿಸಿವೆ. ಆಸ್ಟ್ರೇಲಿಯಾದಲ್ಲಿ ಒಟ್ಟು 30,500 ಪ್ರಕರಣಗಳಿದ್ದು, 910 ಸಾವು ಸಂಭವಿಸಿವೆ.
ಮಲೇಷ್ಯಾದಲ್ಲಿ ಮುಂದುವರಿಕೆ:ಒಂದು ತಿಂಗಳಿಂದ ಜಾರಿಯಲ್ಲಿರುವ ರಾಷ್ಟ್ರವ್ಯಾಪಿ ಲಾಕ್​ಡೌನ್ ಮುಂದುವರಿ ಯಲಿದೆ ಎಂದು ಮಲೇಷ್ಯಾ ಘೋಷಿಸಿದೆ. ನಿರ್ಬಂಧಗಳನ್ನು ಯಾವಾಗ ತೆರವು ಮಾಡಲಾಗುವುದೆಂದು ಸರ್ಕಾರ ತಿಳಿಸಿಲ್ಲ. ಭಾರತದ ನೆರೆ ದೇಶವಾದ ಬಾಂಗ್ಲಾ ದೇಶ ಕೂಡ ಸೋಮವಾರದಿಂದ ವಾರ ಲಾಕ್​ಡೌನ್ ವಿಧಿಸಲು ಮುಂದಾಗಿದೆ.
ಲಸಿಕೆ ಹಾಕಿಸಿಕೊಳ್ಳಲು ಉತ್ತೇಜನಗಳು:ಅಮೆರಿಕದಲ್ಲಿ ಕಳೆದ ತಿಂಗಳು ಫೈಜರ್ ಲಸಿಕೆಯನ್ನು 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಕೊಡಲು ಅನುಮೋದನೆ ನೀಡಲಾಯಿತು. ನ್ಯೂಯಾರ್ಕ್ ರಾಜ್ಯದ ಗವರ್ನರ್ ಆಂಡ್ರೂ ಕೋಮೊ ಅವರು ಲಸಿಕೆ ಹಾಕಿಕೊಂಡ ಮಕ್ಕಳಲ್ಲಿ ಪ್ರತಿವಾರ ಲಾಟರಿ ತೆಗೆದು ಗೆದ್ದ ಮಕ್ಕಳಿಗೆ ಅವರ ಕಾಲೇಜು ಶಿಕ್ಷಣದ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಘೊಷಿಸಿದ್ದಾರೆ. ಹೀಗಾಗಿ ಪಾಲಕರು ಅತ್ಯುತ್ಸಾಹದಿಂದ ಮಕ್ಕಳಿಗೆ ಲಸಿಕೆ ಕೊಡಿಸಲು ಮುಂದೆ ಬರುತ್ತಿದ್ದಾರೆ. ಹಾಗೆಯೇ ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬರುವ ವಯಸ್ಕರಿಗೆ ನ್ಯೂಯಾರ್ಕ್ ಆಡಳಿತ ಲಾಟರಿ ಟಿಕೆಟ್​ನ್ನು ಉಚಿತವಾಗಿ ಕೊಡುತ್ತಿದೆ. ಈ ಲಾಟರಿಯಲ್ಲಿ 50 ಲಕ್ಷ ಡಾಲರ್ ಮೊತ್ತದ ಬಹುಮಾನವನ್ನು ಗೆಲ್ಲುವ ಅವಕಾಶವಿದೆ. ಈ ಕ್ರಮಗಳಿಂದಾಗಿ ಇತ್ತೀಚಿಗೆ ನ್ಯೂಯಾರ್ಕ್ ರಾಜ್ಯ ಶೇ.70 ವ್ಯಾಕ್ಸಿನೇಷನ್ ಗುರಿ ತಲುಪಿದೆ.
ಸಹಜಸ್ಥಿತಿಗೆ ಮರಳುತ್ತಿದೆ:ಕರೊನ ವೈರಸ್ ಹತೋಟಿಗೆ ಬಂದಿರುವುದರಿಂದ ಅಮೆರಿಕದ ಬಹುತೇಕ ರಾಜ್ಯಗಳು ಸಂಪೂರ್ಣವಾಗಿ ತೆರೆದಿವೆ. ಲಸಿಕೆ ಹಾಕಿಸಿಕೊಂಡ ಜನರು ಕಟ್ಟಡದ ಹೊರಗಾಗಲಿ ಅಥವಾ ಒಳಗಾಗಲಿ ಮಾಸ್ಕನ್ನು ಧರಿಸುವ ಅವಶ್ಯಕತೆ ಇಲ್ಲ. ಕೆಲವು ರಾಜ್ಯಗಳು ಲಸಿಕೆ ಹಾಕಿಸಿಕೊಂಡ ಜನರಿಗೆ ವ್ಯಾಕ್ಸಿನ್ ಪಾಸ್​ಪೋರ್ಟ್ ಕೊಡುತ್ತಿವೆ. ಹೋಟೆಲ್, ಕ್ರೀಡಾಂಗಣ ಮತ್ತು ಸಮಾರಂಭಗಳಲ್ಲಿ ವ್ಯಾಕ್ಸಿನ್ ಪಾಸ್​ಪೋರ್ಟ್ ಇದ್ದವರಿಗೆ ಮಾತ್ರ ಪ್ರವೇಶ ನೀಡಬೇಕೆಂಬ ಯೋಜನೆ ಮಾಡುತ್ತಿದ್ದಾರೆ. ಆದರೆ ಇದನ್ನು ರಿಪಬ್ಲಿಕನ್ ಪಕ್ಷದವರು ವಿರೋಧಿಸುತ್ತಿದ್ದಾರೆ. ಲಸಿಕೆ ಹಾಕಿಸಿಕೊಳ್ಳುವುದು ಅಥವಾ ಬಿಡುವುದು ಜನರ ವೈಯಕ್ತಿಕ ವಿಚಾರವಾಗಿದ್ದು, ಅದರಲ್ಲಿ ಸರ್ಕಾರ ಮಧ್ಯೆ ಪ್ರವೇಶಿಸಬಾರದು ಎಂದು ವಾದಿಸುತ್ತಿದ್ದಾರೆ.
|ಸುಬ್ರಹ್ಮಣ್ಯ ಹೆಬ್ಬಾಗಿಲುಕತಾರ್
ಕತಾರ್​ನಲ್ಲಿ ಪರಿಸ್ಥಿತಿ ಬಹುತೇಕ ಸಾಮಾನ್ಯ ಸ್ಥಿತಿಗೆ ಬಂದಿದೆ. ಕಳೆದ ತಿಂಗಳು ಪ್ರತಿದಿನ 350-400 ಹೊಸ ಸೋಂಕಿತರು ಪತ್ತೆಯಾಗುತ್ತಿದ್ದರು ಹಾಗೂ 3-4 ಸೋಂಕಿತರು ಪ್ರಾಣ ಕಳೆದುಕೊಳ್ಳುತ್ತಿದ್ದರು. ಶೇಕಡ 60-70 ನಾಗರಿಕರಿಗೆ ಲಸಿಕೆ ನೀಡಲಾಗಿತ್ತು. ಈಗ ಶೇ.80 ಜನರಿಗೆ ಲಸಿಕೆ ನೀಡಲಾಗಿದ್ದು, ಅದಕ್ಕೆ ಅನುಗುಣವಾಗಿ ಸೋಂಕು ಪ್ರಸರಣ ನಿಯಂತ್ರಣಕ್ಕೆ ಬಂದಿದೆ. ಸದ್ಯ ಪ್ರತಿದಿನ 100-125 ಹೊಸ ಸೋಂಕಿತರು ಪತ್ತೆಯಾಗುತ್ತಿದ್ದು, ವಾರಕ್ಕೆ 1-2 ಸೋಂಕಿತರು ನಿಧನರಾಗುತ್ತಿದ್ದಾರೆ. ಜೂನ್ 28ರ ಅಂಕಿ-ಅಂಶದಂತೆ 118 ಸೋಂಕಿತರು ಪತ್ತೆಯಾಗಿದ್ದು, ಮರಣ ಸಂಖ್ಯೆ ಶೂನ್ಯ. ಒಟ್ಟು ನಾಲ್ಕು ಹಂತಗಳಲ್ಲಿ ಕೋವಿಡ್-19 ನಿರ್ಬಂಧಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಮೇ 28ರಿಂದ ಚಾಲನೆ ನೀಡಲಾಯಿತು. ಜೂನ್ 18ರಿಂದ ಎರಡನೇ ಹಂತದ ಲಾಕ್​ಡೌನ್ ತೆರವು ಚಾಲ್ತಿಯಲ್ಲಿದೆ. ಜುಲೈ 9ರಿಂದ ಮೂರನೇ ಹಾಗೂ ಜುಲೈ 30ರಂದು ಅಂತಿಮ ಹಂತದ ನಿರ್ಬಂಧ ತೆರವು ಆರಂಭವಾಗಲಿದೆ. ಒಟ್ಟಿನಲ್ಲಿ, ಕತಾರ್ ಕರೊನಾ ವಿರುದ್ಧ ಹೋರಾಟದಲ್ಲಿ ಜಯದ ಹಾದಿಯಲ್ಲಿ ಸಾಗಿದೆ.
|ಬೆಂಕಿ ಬಸಣ್ಣನ್ಯೂಯಾರ್ಕ್
ಅಧ್ಯಕ್ಷ ಜೋ ಬೈಡನ್ ಅಮೆರಿಕ ಸ್ವಾತಂತ್ರ್ಯ ದಿನೋತ್ಸವವಾದ ಜುಲೈ 4ರ ಒಳಗೆ ಶೇಕಡ 70 ವಯಸ್ಕ ಜನರಿಗೆ ಕರೊನಾ ಲಸಿಕೆಯನ್ನು ಹಾಕುವ ಯೋಜನೆಯನ್ನು ಹಮ್ಮಿಕೊಂಡಿದ್ದರು. ಅವರ ನಿರಂತರ ಶ್ರಮದ ಹೊರತಾಗಿಯೂ ಆ ಗುರಿಯನ್ನು ಮುಟ್ಟುವ ಸಾಧ್ಯತೆ ಕಡಿಮೆ. ಬಹುಶಃ ಜುಲೈ ತಿಂಗಳ ಕೊನೆಗೆ ಈ ಗುರಿ ಮುಟ್ಟಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಿದ್ದಾರೆ. 32 ಕೋಟಿ ಜನಸಂಖ್ಯೆಯಿರುವ ಅಮೆರಿಕದಲ್ಲಿ ಇದೀಗ 15 ಕೋಟಿ ಜನರು ಲಸಿಕೆಯ ಎರಡೂ ಡೋಸ್​ಗಳನ್ನು ಪಡೆದಿದ್ದಾರೆ. 18ರಿಂದ 26 ವರ್ಷದೊಳಗಿನವರು ಕಡಿಮೆ ಸಂಖ್ಯೆಯಲ್ಲಿ ಲಸಿಕೆ ಪಡೆದಿದ್ದಾರೆ. ಅದರಲ್ಲೂ ಬಡ ರಾಜ್ಯಗಳಲ್ಲಿ ವ್ಯಾಕ್ಸಿನೇಷನ್ ಪ್ರಮಾಣ ತುಂಬ ಕಡಿಮೆ. ಲಸಿಕೆ ಹಾಕಿಸಿಕೊಳ್ಳಲು ಅನುಕೂಲವಾಗುವಂತೆ ಮನೆ-ಮನೆಗೆ ತೆರಳಿ ಲಸಿಕೆ ಹಾಕುವ ಯೋಜನೆ, ಚರ್ಚ್, ಶಾಪಿಂಗ್ ಸೆಂಟರ್, ರ್ಪಾಂಗ್ ಲಾಟ್, ಮೊಬೈಲ್ ಕ್ಲಿನಿಕ್ ಮುಂತಾದ ವಿಧಾನಗಳ ಮೂಲಕ ಶೇ.70 ಗುರಿಯನ್ನು ಮುಟ್ಟುವ ಪ್ರಯತ್ನ ನಡೆದಿದೆ. ವ್ಯಾಕ್ಸಿನ್ ಹಾಕಿಸಿಕೊಳ್ಳುವಂತೆ ಉತ್ತೇಜಿಸುವ ಜಾಹೀರಾತುಗಳನ್ನು ಸೆಲೆಬ್ರಿಟಿಗಳಿಂದ ಬಿಡುಗಡೆ ಮಾಡಿಸಲಾಗುತ್ತಿದೆ.
|ಡಾ. ನೀರಜ್ ಪಾಟೀಲ್ಲಂಡನ್
ಬ್ರಿಟನ್ನಿನಲ್ಲಿ ಮೂರನೇ ಅಲೆಯನ್ನು ಎದುರಿಸುತ್ತಿರುವ ಸರ್ಕಾರ ಹಾಗೂ ನಾಗರಿಕರು, ಲಸಿಕೆ ಅಭಿಯಾನದಿಂದ ಜಯ ಸಿಕ್ಕಿತು ಎಂಬ ಸಂತಸದಲ್ಲಿದ್ದಾರೆ. ದೇಶದಲ್ಲಿ ಇಲ್ಲಿವರೆಗೆ 47.55 ಲಕ್ಷ ಜನರಲ್ಲಿ ಸೋಂಕು ದೃಢಪಟ್ಟಿದೆ. 1.28 ಲಕ್ಷ ಜನರು ಕರೊನಾದಿಂದ ಮೃತಪಟ್ಟಿದ್ದಾರೆ. 2021ರ ಜನವರಿಯಲ್ಲಿ ಕರೊನಾ ಸೋಂಕಿನ ತೀವ್ರತೆ, ಸಾವಿನ ಸಂಖ್ಯೆ ಹೆಚ್ಚಳವಾಗಿತ್ತು. ಸೋಂಕನ್ನು ಹಿಮ್ಮೆಟ್ಟಿಸಲು ಲಸಿಕೆಯೊಂದೇ ಅಂತಿಮ ಅಸ್ತ್ರ ಎಂಬುದನ್ನು ಇಲ್ಲಿನ ಸರ್ಕಾರ ಮನಗಂಡಿತು. ವ್ಯಾಪಕ ಪ್ರಮಾಣದಲ್ಲಿ ಲಸಿಕೆ ಅಭಿಯಾನ ನಡೆಸಲಾಯಿತು. ಭಾರತದಲ್ಲಿ ತಯಾರಾಗುವ ಕೋವಿಶೀಲ್ಡ್ ಲಸಿಕೆಯೇ ಹೆಚ್ಚಿನ ಜನರಿಗೆ ತಲುಪಿದೆ. ಉಳಿದಂತೆ ಫೈಸರ್ ಸಹ ಇದೆ. ಲಸಿಕೆ ಅಭಿಯಾನದ ಫಲ ಈಗ ಗೋಚರಿಸಲು ಆರಂಭವಾಗಿದೆ. ಸಾವಿನ ಸಂಖ್ಯೆ ಬಹುತೇಕ ಕಡಿಮೆಯಾಗಿದೆ. ಪ್ರತಿದಿನ 2-3 ಸಾವುಗಳು ಸಂಭವಿಸುತ್ತಿವೆ.
ನಾನು ಅಪಘಾತ ಮತ್ತು ತುರ್ತು ವೈದ್ಯಕೀಯ ವಿಭಾಗದ ಕನ್ಸಲ್ಟೆಂಟ್ ಆಗಿ ಕಾರ್ಯನಿರ್ವಹಿಸುವ ಡಾರೆಂಟ್ ವ್ಯಾಲಿ ಆಸ್ಪತ್ರೆಯಲ್ಲಿ ಜನವರಿಯಲ್ಲಿ 300ರಷ್ಟಿರುತ್ತಿದ್ದ ಸೋಂಕಿತರ ಸಂಖ್ಯೆ ಈಗ ಕೇವಲ 4ಕ್ಕೆ ಇಳಿದಿದೆ. ಈ ಮಧ್ಯೆ, ಡೆಲ್ಟಾ ವೇರಿಯೆಂಟ್​ನಿಂದ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಜೂನ್ 29ರಂದು ಸರ್ಕಾರ ಪ್ರಕಟಿಸಿದ ಅಂಕಿ-ಅಂಶಗಳ ಆಧಾರದಲ್ಲಿ, 24 ಗಂಟೆಯಲ್ಲಿ 22,868 ಹೊಸ ಸೋಂಕಿತರು ಪತ್ತೆಯಾಗಿದ್ದರು. ಇದು, ಜನವರಿಯಲ್ಲಿ ಒಂದು ದಿನದ ಅವಧಿಯಲ್ಲಿ ದಾಖಲಾಗಿದ್ದ ಸೋಂಕನ್ನೂ ಮೀರಿಸಿದೆ. ಆದರೆ ಸಮಾಧಾನದ ಸಂಗತಿ ಎಂದರೆ, ಆಸ್ಪತ್ರೆಗೆ ದಾಖಲಾಗುವ ಸೋಂಕಿತರ ಸಂಖ್ಯೆ ತೀರಾ ಕಡಿಮೆ ಇದೆ. ಹೋಮ್ ಕ್ವಾರಂಟೈನ್​ನಲ್ಲೆ ಹೆಚ್ಚಿನ ಜನರು ಚಿಕಿತ್ಸೆ ಪಡೆದು ಗುಣಮುಖರಾಗುತ್ತಿದ್ದಾರೆ. ಮುಖ್ಯವಾಗಿ ಹಿರಿಯ ನಾಗರಿಕರಿಗೆ ಬಹುತೇಕ ಲಸಿಕೆ ಪೂರ್ಣವಾಗಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ ಎನ್ನಬಹುದು. 50 ವರ್ಷದೊಳಗಿನವರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆಯಾದರೂ ತೀವ್ರತೆ ಕಡಿಮೆ ಇದೆ. ಒಟ್ಟಾರೆ ಹೇಳಬೇಕು ಎಂದರೆ ಕರೊನಾ ನಿಯಂತ್ರಣದಲ್ಲಿದೆ. ಇದೆಲ್ಲದರ ಕಾರಣದಿಂದ, ಜುಲೈ 19ರಿಂದ ಸಂಪೂರ್ಣ ಲಾಕ್​ಡೌನ್ ತೆರವು ಮಾಡುವುದಾಗಿ ಸರ್ಕಾರ ಘೋಷಿಸಿದೆ. ಆದರೆ ಸಾರ್ವಜನಿಕವಾಗಿ ಕೆಲವೆಡೆ ಮಾಸ್ಕ್ ಧರಿಸುವುದು, ವೈಯಕ್ತಿಕ ಅಂತರದಂತಹ ನಿಯಮಾವಳಿ ಪಾಲನೆ ಮಾಡಬೇಕು. ಅಂತಾರಾಷ್ಟ್ರೀಯ ವಿಮಾನ ಸಂಚಾರದಲ್ಲಿ ಯಥಾಸ್ಥಿತಿ ಮುಂದುವರಿಯಲಿದೆ. ಸೋಂಕಿನ ತೀವ್ರತೆ ಆಧಾರದಲ್ಲಿ ಮೂರು ವಿಭಾಗಗಳಾಗಿ ದೇಶಗಳನ್ನು ವಿಂಗಡಿಸಲಾಗಿದೆ. ಹಸಿರು ಪಟ್ಟಿಯಲ್ಲಿರುವ ಪೋರ್ಚುಗಲ್​ನಂತಹ ಅನೇಕ ದೇಶಗಳಿಂದ ವಿಮಾನ ಸಂಚಾರದಲ್ಲಿ ಯಾವುದೇ ನಿರ್ಬಂಧವಿಲ್ಲ. ಅಲ್ಲಿಂದ ಬಂದವರಿಗೆ ಕ್ವಾರಂಟೈನ್ ಅವಶ್ಯಕತೆ ಇಲ್ಲ. ಅಂಬರ್ ಬಣ್ಣದಲ್ಲಿರುವ ದುಬೈ, ಸ್ಪೇನ್​ನಂತಹ ದೇಶಗಳಿಂದ ಬಂದವರು 10 ದಿನ ಹೋಮ್ ಕ್ವಾರಂಟೈನ್​ನಲ್ಲಿರಬೇಕು. ಭಾರತ, ಪಾಕಿಸ್ತಾನ ಸೇರಿ ಅನೇಕ ದೇಶಗಳನ್ನು ಕೆಂಪು ಪಟ್ಟಿಯಲ್ಲಿ ಸೇರಿಸಿದ್ದು, ಈ ದೇಶಗಳಿಂದ ಬಂದವರು 10 ದಿನ ಸಾಂಸ್ಥಿಕ ಕ್ವಾರಂಟೈನ್​ನಲ್ಲಿರಬೇಕು. ಕರೊನಾ ವಿರುದ್ಧ ಸೆಣೆಸಲು ಲಸಿಕೆಯೊಂದೇ ಪರಿಹಾರ ಎಂಬುದು ಸಾಬೀತಾಗಿದೆ.




ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − eight =
Remember me
