| ಜಗದೀಶ ಬುರ್ಲಬಡ್ಡಿ
ಮಳೆ ಕೊರತೆ ಹಿನ್ನೆಲೆಯಲ್ಲಿ ಉತ್ಪಾದನೆ ಕುಂಠಿತಗೊಳ್ಳುವ ಭೀತಿಯ ಕಾರಣಕ್ಕಾಗಿ ಅಕ್ಕಿ ಬೆಲೆ ಏರಿಕೆ ನಿಯಂತ್ರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ರಫ್ತು ನಿರ್ಬಂಧ, ಸಂಗ್ರಹ ಮಿತಿ ಹೇರಿಕೆ ಮತ್ತು ಭವಿಷ್ಯದ ವ್ಯಾಪಾರದ (ಫ್ಯೂಚರ್ ಟ್ರೇಡಿಂಗ್) ಮೇಲೆ ನಿಷೇಧ ಒಳಗೊಂಡಂತೆ ಹಲವಾರು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ. ರಾಜ್ಯ ಸರ್ಕಾರಗಳಿಗೆ ಗೋಧಿ- ಅಕ್ಕಿ ನೀಡದಿರಲು ಮತ್ತು ಖಾಸಗಿ ವ್ಯಾಪಾರಕ್ಕಾಗಿ ಹರಾಜಿನ ಅಡಿಯಲ್ಲಿ ವೈಯಕ್ತಿಕ ಬಿಡ್​ದಾರರಿಗೆ ಖರೀದಿ ಪ್ರಮಾಣ ಕಡಿಮೆ ಮಾಡುವ ತೀರ್ವನವನ್ನೂ ಕೈಗೊಂಡಿದೆ.
ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ- ದೇಶೀಯ (ಒಎಮ್​ಸ್ಎಸ್-ಡಿ) ಅಡಿಯಲ್ಲಿ ಭಾರತೀಯ ಆಹಾರ ನಿಗಮದಿಂದ (ಎಫ್​ಸಿಐ) ಪ್ರತಿ ಕ್ವಿಂಟಲ್​ಗೆ 3400 ರೂ. ದರದಲ್ಲಿ ಅಕ್ಕಿ ಖರೀದಿಸಲು ಸಿದ್ಧವಾದರೂ ಕರ್ನಾಟಕ ಸರ್ಕಾರಕ್ಕೆ ಅಕ್ಕಿ ಪೂರೈಕೆ ಮಾಡಲು ನಿರಾಕರಿಸಲಾಗಿದೆ. ಅನ್ನ ಭಾಗ್ಯ ಯೋಜನೆಯಡಿ ಬಿಪಿಎಲ್ ಪಡಿತರ ಚೀಟಿದಾರರಿಗೆ 5 ಕೆಜಿ ಅಕ್ಕಿಯನ್ನು ಉಚಿತವಾಗಿ ವಿತರಿಸುವುದಕ್ಕಾಗಿ ಕರ್ನಾಟಕ ಸರ್ಕಾರ ಅಕ್ಕಿ ಪೂರೈಸುವಂತೆ ಎಫ್​ಸಿಐಗೆ ಕೇಳಿತ್ತು. ಆದರೆ, ಇದೇ ವೇಳೆ ಪೆಟ್ರೋಲ್​ನಲ್ಲಿ ಮಿಶ್ರಣ ಮಾಡುವುದಕ್ಕಾಗಿ ಎಥೆನಾಲ್ ಉತ್ಪಾದಿಸಲು ಎಫ್​ಸಿಐನಿಂದ ಕ್ವಿಂಟಲ್​ಗೆ ರೂ 2,000 ದರದಲ್ಲಿ ಅಕ್ಕಿಯನ್ನು ಡಿಸ್ಟಿಲರಿಗಳಿಗೆ ಪೂರೈಸುವುದು ನಿರಂತರವಾಗಿ ಮುಂದುವರಿದಿದೆ. ಅಲ್ಲದೆ, ಕಳೆದೆರಡು ತಿಂಗಳುಗಳಲ್ಲಿ ದಾಖಲೆ ಪ್ರಮಾಣದ ಅಕ್ಕಿಯನ್ನು ಎಥೆನಾಲ್ ತಯಾರಿಕೆಗೆ ಸರಬರಾಜು ಮಾಡಲಾಗಿದೆ.
ಭಾರತದಲ್ಲಿ ಬಹುಪ್ರಮಾಣದ ಎಥೆನಾಲ್ ತಯಾರಾಗುವುದು ಸಕ್ಕರೆ ಕಾರ್ಖಾನೆಗಳಲ್ಲಿನ ಕಾಕಂಬಿಯಿಂದ. ಇತ್ತೀಚಿನ ವರ್ಷಗಳಲ್ಲಿ ಅಕ್ಕಿ ಹಾಗೂ ಇತರ ಧಾನ್ಯಗಳಿಂದಲೂ ಎಥೆನಾಲ್ ಉತ್ಪಾದನೆ ಮಾಡಲಾಗುತ್ತಿದೆ. ಇದಕ್ಕೆ ಅಗತ್ಯವಿರುವ ಅಕ್ಕಿಯನ್ನು ಸಬ್ಸಿಡಿ ದರದಲ್ಲಿ ಭಾರತೀಯ ಆಹಾರ ನಿಗಮ (ಎಫ್​ಸಿಐ) ಒದಗಿಸುತ್ತದೆ. ಎಥೆನಾಲ್ ತಯಾರಿಸುವುದಕ್ಕಾಗಿ ಮಾಸಿಕ ಅಕ್ಕಿ ಪೂರೈಕೆಯು 2023ರ ಮೇ ಮತ್ತು ಜೂನ್ ತಿಂಗಳುಗಳಲ್ಲಿ ದಾಖಲೆ ಪ್ರಮಾಣ ತಲುಪಿದೆ. ಈ ಮೂಲಕ ಡಿಸ್ಟಿಲರಿಗಳಿಗೆ ಸರಬರಾಜು ಮಾಡಿದ ಅಕ್ಕಿಯ ಒಟ್ಟಾರೆ ಪ್ರಮಾಣ ಮೂರು ವರ್ಷಗಳಲ್ಲಿ 24 ಲಕ್ಷ ಟನ್ ತಲುಪಿದೆ.
ಇತ್ತೀಚಿನ ಮಾಹಿತಿಯ ಪ್ರಕಾರ. ಜೂನ್ 2023ರಲ್ಲಿ 2,77,419.98 ಟನ್ ಅಕ್ಕಿಯನ್ನು ಈ ಉದ್ದೇಶಕ್ಕಾಗಿ ಪೂರೈಸಲಾಗಿದೆ. 2022ರಲ್ಲಿ ಇದೇ ತಿಂಗಳಲ್ಲಿ 87,778.81 ಟನ್ ಅಕ್ಕಿಯನ್ನು ಡಿಸ್ಟಿಲ್ಲರಿಗಳಿಗೆ ನೀಡಲಾಗಿತ್ತು. ಇದಕ್ಕೆ ಹೋಲಿಸಿದರೆ, ಈ ತಿಂಗಳಲ್ಲಿ ಶೇಕಡಾ 216ರಷ್ಟು ಹೆಚ್ಚಳವಾಗಿದೆ. 2023ರ ಮೇ ತಿಂಗಳಲ್ಲಿ ಎಥೆನಾಲ್ ತಯಾರಿಕೆಗಾಗಿ ಸರಬರಾಜು ಮಾಡಲಾದ ಅಕ್ಕಿಯ ಮಾಸಿಕ ಪ್ರಮಾಣವು 2.95 ಲಕ್ಷ ಟನ್ ಆಗಿತ್ತು. ಕೇಂದ್ರ ಸರ್ಕಾರ ತನ್ನ ಬಳಿ ದಾಸ್ತಾನಿರುವ ಹೆಚ್ಚುವರಿ ಅಕ್ಕಿಯನ್ನು ಎಥೆನಾಲ್ ಆಗಿ ಪರಿವರ್ತಿಸಲು ಡಿಸ್ಟಿಲ್ಲರಿಗೆ ಪೂರೈಕೆ ಮಾಡುವುದನ್ನು 2020-21ರ ಹಣಕಾಸು ವರ್ಷದಲ್ಲಿ ಆರಂಭಿಸಿದೆ.
ಅಗ್ಗದ ದರ:ಮಾರ್ಚ್ 2020ರಲ್ಲಿ, ಒಎಮ್​ಸ್ಎಸ್-ಡಿ ಅಡಿಯಲ್ಲಿ ಪ್ರತಿ ಕ್ವಿಂಟಲ್​ಗೆ 2,250 ರೂಪಾಯಿ ದರದಂತೆ ಡಿಸ್ಟಿಲರಿಗಳಿಗೆ ಅಕ್ಕಿಯನ್ನು ಪೂರೈಸಲು ಕೇಂದ್ರ ನಿರ್ಧರಿಸಿತ್ತು. ಡಿಸೆಂಬರ್ 2020ರಲ್ಲಿ ದರವನ್ನು ಪ್ರತಿ ಕ್ವಿಂಟಾಲ್​ಗೆ 2,000 ರೂಪಾಯಿಗೆ ಇಳಿಸಲಾಗಿದ್ದು, ಇದೇ ದರದಲ್ಲಿ ಪೂರೈಕೆಯನ್ನು ಈಗಲೂ ಮುಂದುವರಿಸಲಾಗಿದೆ. ಸಂಗ್ರಹಣೆ ಮತ್ತು ಶೇಖರಣಾ ಕಾರ್ಯಾಚರಣೆಗಳ ಮೇಲೆ ಎಫ್​ಸಿಐ ಮಾಡುವ ಆರ್ಥಿಕ ವೆಚ್ಚಕ್ಕೆ ಹೋಲಿಸಿದರೆ ಎಥೆನಾಲ್​ಗೆ ಸರಬರಾಜು ಮಾಡುವ ಅಕ್ಕಿಯ ಬೆಲೆ ತುಂಬಾ ಕಡಿಮೆಯಾಗಿದೆ. ಈ ವೆಚ್ಚಗಳು ಪ್ರತಿ ಕ್ವಿಂಟಲ್​ಗೆ 2020-21ರಲ್ಲಿ 3,939.26 ರೂ.; 2021-22ರಲ್ಲಿ ರೂ 3,562.49; 2022-23 ರಲ್ಲಿ ರೂ 3,858.19; ಮತ್ತು 2023-24ರಲ್ಲಿ 3,918.05 ರೂ. ಆಗಿದೆ.
ಪೆಟ್ರೋಲ್​ನಲ್ಲಿ ಮಿಶ್ರಣವೇಕೆ?:ಅತಿಹೆಚ್ಚು ತೈಲೋತ್ಪನ್ನಗಳನ್ನು ಆಮದು ಮಾಡಿಕೊಳ್ಳುವ ದೇಶಗಳ ಪೈಕಿ ಭಾರತ ಮೂರನೇ ಸ್ಥಾನದಲ್ಲಿದೆ. 158 ಶತಕೋಟಿ ಡಾಲರ್ (12,99,704 ಕೋಟಿ ರೂಪಾಯಿ) ಮೊತ್ತದ ತೈಲವನ್ನು 2022-23ನೇ ಹಣಕಾಸು ವರ್ಷದಲ್ಲಿ ಭಾರತ ಆಮದು ಮಾಡಿಕೊಂಡಿದೆ. ತೈಲ ಆಮದು ಅವಲಂಬನೆ ತಗ್ಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಪೆಟ್ರೋಲ್​ನಲ್ಲಿ ಎಥೆನಾಲ್ ಮಿಶ್ರಣ ಮಾಡುವ ಯೋಜನೆಯನ್ನು ಹಲವು ವರ್ಷಗಳ ಹಿಂದೆಯೇ ಜಾರಿಗೊಳಿಸಿದೆ. 2003ರ ಜನವರಿಯಲ್ಲಿ ಶೇಕಡಾ 5ರಷ್ಟು ಎಥೆನಾಲನ್ನು ಪೆಟ್ರೋಲ್​ನಲ್ಲಿ ಮಿಶ್ರಣ ಮಾಡುವುದಕ್ಕೆ ಚಾಲನೆ ನೀಡಲಾಯಿತು. ನಂತರ ಈ ಪ್ರಮಾಣವನ್ನು ಶೇಕಡಾ 10ಕ್ಕೆ ಹೆಚ್ಚಿಸಿ 2022ರ ನವೆಂಬರ್​ನಲ್ಲಿ ಪೂರ್ಣ ಪ್ರಮಾಣದಲ್ಲಿ ಈ ಗುರಿ ತಲುಪಲಾಯಿತು. 2023ರ ಫೆಬ್ರುವರಿ 6ರಂದು 11 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಆಯ್ದ ಪೆಟ್ರೋಲ್ ಬಂಕ್​ಗಳಲ್ಲಿ ಶೇ. 20 ಎಥೆನಾಲ್ ಮಿಶ್ರಿತ ಪೆಟ್ರೋಲ್ ಮಾರಾಟಕ್ಕೆ ಚಾಲನೆ ನೀಡಲಾಗಿದ್ದು, 2025ರ ವೇಳೆಗೆ ದೇಶದೆಲ್ಲೆಡೆ ಪೂರ್ಣಪ್ರಮಾಣದಲ್ಲಿ ಇದನ್ನು ಸಾಧಿಸುವ ಗುರಿ ಹಾಕಿಕೊಳ್ಳಲಾಗಿದೆ. ಪೆಟ್ರೋಲ್​ನಲ್ಲಿ ಶೇಕಡಾ 10ರಷ್ಟು ಎಥೆನಾಲ್ ಮಿಶ್ರಣದಿಂದಾಗಿ ಭಾರತ ಇದುವರೆಗೆ 53,894 ಕೋಟಿ ರೂಪಾಯಿಯಷ್ಟು ವಿದೇಶಿ ವಿನಿಮಯ ಉಳಿತಾಯ ಮಾಡಿದ್ದು, ಈ ಕ್ರಮದಿಂದಾಗಿ ರೈತರಿಗೆ ಸಾಕಷ್ಟು ಲಾಭವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಕೇಂದ್ರ ಸರ್ಕಾರದ ಸ್ಪಷ್ಟನೆ:ಇತ್ತೀಚೆಗೆ ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳು ಒಎಮ್​ಸ್ಎಸ್-ಡಿ ಅಡಿಯಲ್ಲಿ ಅಕ್ಕಿಯನ್ನು ಪೂರೈಸಲು ಕೇಂದ್ರವನ್ನು ವಿನಂತಿಸಿರುವ ಸಮಯದಲ್ಲಿಯೇ ಎಥೆನಾಲ್​ಗಾಗಿ ಮಾಸಿಕ ಅಕ್ಕಿ ಪೂರೈಕೆಯಲ್ಲಿ ಹೆಚ್ಚಳವಾಗಿರುವುದು ಗಮನಾರ್ಹವಾಗಿದೆ. ಜೂನ್ 13, 2023ರಿಂದ ಜಾರಿಗೆ ಬರುವಂತೆ ಒಎಮ್​ಸ್ಎಸ್-ಡಿ ಅಡಿಯಲ್ಲಿ ರಾಜ್ಯಗಳಿಗೆ ಅಕ್ಕಿ ಮತ್ತು ಗೋಧಿ ಮಾರಾಟವನ್ನು ಕೇಂದ್ರ ಸ್ಥಗಿತಗೊಳಿಸಿದೆ. ‘ಭಾರತದ ಹವಾಮಾನ ಇಲಾಖೆಯು ಅಂದಾಜಿಸಿರುವಂತೆ ಎಲ್ ನಿನೊ ಪರಿಣಾಮ ಮಳೆ ಕೊರತೆಯುಂಟಾಗಿ, ದೇಶದಲ್ಲಿ ಮುಂಗಾರು ಬೆಳೆ ಉತ್ಪಾದನೆಗೆ ಕುಂಠಿತವಾಗುವ ಶಂಕೆ ಇದೆ. ಈ ಹಿನ್ನೆಲೆಯಲ್ಲಿ ಬೆಲೆ ಏರಿಕೆ ಪ್ರವೃತ್ತಿ ನಿಯಂತ್ರಿಸಲು ಮತ್ತು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅಡಿಯಲ್ಲಿ ವಿತರಣೆಗಾಗಿ ಹಾಗೂ ಇತರ ಕಲ್ಯಾಣ ಯೋಜನೆಗಳಿಗಾಗಿ ಕೇಂದ್ರ ಸರ್ಕಾರವು ಸಾಕಷ್ಟು ದಾಸ್ತಾನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಒಎಮ್​ಸ್ಎಸ್-ಡಿ ಅಡಿಯಲ್ಲಿ ರಾಜ್ಯ ಸರ್ಕಾರಗಳಿಗೆ ಗೋಧಿ ಮತ್ತು ಅಕ್ಕಿ ಮಾರಾಟವನ್ನು ಜೂನ್ 13ರಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಲಾಗಿದೆ’ ಎಂದು ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣೆ ರಾಜ್ಯ ಸಚಿವೆ ಸಾಧಿ್ವ ನಿರಂಜನ್ ಜ್ಯೋತಿ ತಿಳಿಸಿದ್ದಾರೆ. ಕರ್ನಾಟಕ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ರಾಜ್ಯ ಸರ್ಕಾರಗಳು ಒಎಮ್​ಸ್ಎಸ್​ಡಿ ಅಡಿಯಲ್ಲಿ ಗೋಧಿ ಮತ್ತು ಅಕ್ಕಿಗಾಗಿ ವಿನಂತಿಸಿದ್ದು, 2023ರ ಒಎಮ್​ಸ್ಎಸ್-ಡಿ ಅಡಿಯಲ್ಲಿ ರಾಜ್ಯಗಳಿಗೆ ಗೋಧಿ ಮತ್ತು ಅಕ್ಕಿ ಮಾರಾಟವನ್ನು ನಿಲ್ಲಿಸಿದ ಕಾರಣ ಈ ಮನವಿಯನ್ನು ಒಪ್ಪಿಕೊಳ್ಳಲಾಗಿಲ್ಲ ಎಂದೂ ಅವರು ಹೇಳಿದ್ದಾರೆ.
ಹೆಚ್ಚಿನ ಬೆಲೆಗೆ ಬೇಡಿಕೆ:ಎಥೆನಾಲ್ ತಯಾರಿಕೆಗೆ ಪ್ರತಿ ಕೆಜಿಗೆ -ಠಿ;20 ದರದಲ್ಲಿ ಎಫ್​ಸಿಐ ಹೆಚ್ಚುವರಿ ಅಕ್ಕಿಯನ್ನು ಪೂರೈಸುತ್ತದೆ. ತೈಲ ಮಾರುಕಟ್ಟೆ ಕಂಪನಿಗಳು ಧಾನ್ಯದಿಂದ ಉತ್ಪಾದಿಸುವ ಎಥೆನಾಲ್ ಅನ್ನು ಪ್ರತಿ ಲೀಟರ್​ಗೆ -ಠಿ; 58.50 ರೂಪಾಯಿ ದರದಲ್ಲಿ ಖರೀದಿಸುತ್ತವೆ. ಮುಕ್ತ ಮಾರುಕಟ್ಟೆಯಿಂದ ಖರೀದಿಸಲಾದ ಹಾನಿಗೊಳಗಾದ ಅಕ್ಕಿಯಿಂದ ಉತ್ಪಾದಿಸಲಾದ ಎಥೆನಾಲ್ ಅನ್ನು ಪ್ರತಿ ಲೀಟರ್​ಗೆ -ಠಿ;55.54 ದರಲ್ಲಿ ಖರೀದಿಸಲಾಗುತ್ತದೆ. ಹಾಳಾದ ಧಾನ್ಯದಿಂದ ತಯಾರಿಸಿದ ಎಥೆನಾಲ್ ಬೆಲೆ ಹೆಚ್ಚಿಸಬೇಕೆಂದು ಡಿಸ್ಟಿಲ್ಲರಿಗಳು ಒತ್ತಾಯಿಸುತ್ತಿವೆ.
ಧಾನ್ಯದಿಂದ ಶೇ. 45:ನೀತಿ ಆಯೋಗವು ಸಿದ್ಧಪಡಿಸಿರುವ ‘ಭಾರತದಲ್ಲಿ ಎಥೆನಾಲ್ ಮಿಶ್ರಣಕ್ಕಾಗಿ ಮಾರ್ಗಸೂಚಿ 2020-25’ ವರದಿ ಆಧರಿತವಾಗಿ ಎಥೆನಾಲ್​ಗಾಗಿ ಅಕ್ಕಿ ಹಂಚಿಕೆಯ ನೀತಿಯನ್ನು ಕೇಂದ್ರ ಸರ್ಕಾರ ರೂಪಿಸಿದೆ. 2025-26 ರ ವೇಳೆಗೆ ಪೆಟ್ರೋಲ್​ನಲ್ಲಿ ಶೇಕಡಾ 20ರಷ್ಟು ಎಥೆನಾಲ್ ಮಿಶ್ರಣವನ್ನು ದೇಶಾದ್ಯಂತ ಸಾಧಿಸಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ ಎಥೆನಾಲ್ ಅಗತ್ಯವು ಅಂದಾಜು 10.16 ಶತಕೋಟಿ ಲೀಟರ್ ಎಂದು ಅಂದಾಜಿಸಲಾಗಿದೆ. ಈ ಅಗತ್ಯದ ಶೇಕಡಾ 45ರಷ್ಟು (4.66 ಶತಕೋಟಿ ಲೀಟರ್) ಎಫ್​ಸಿಐನಿಂದ ಅಥವಾ ಮುಕ್ತ ಮಾರುಕಟ್ಟೆಯಿಂದ ಪಡೆದ ಧಾನ್ಯಗಳಿಂದ ಲಭ್ಯವಾಗುತ್ತದೆ ಎಂದು ಅಂದಾಜಿಸಲಾಗಿದೆ.
ಮತ್ತಷ್ಟು ಹೆಚ್ಚಳ ಸಾಧ್ಯತೆ:ಎಥೆನಾಲ್ ಪೂರೈಕೆ ವರ್ಷವಾದ (ಎಥೆನಾಲ್ ಪೂರೈಕೆ ವರ್ಷವು ಡಿಸೆಂಬರ್ 1ರಿಂದ ಆರಂಭವಾಗಿ ಅದರ ಮುಂದಿನ ವರ್ಷ ನವೆಂಬರ್ 31 ರವರೆಗೆ ವ್ಯಾಪಿಸಿದೆ.) 2022-23ರಲ್ಲಿ ಎಥೆನಾಲ್​ಗಾಗಿ 32 ಲಕ್ಷ ಟನ್ ಅಕ್ಕಿ ನೀಡಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ಇದರಲ್ಲಿ ಜೂನ್​ವರೆಗೆ 13 ಲಕ್ಷ ಟನ್ ೆ ಸರಬರಾಜು ಮಾಡಲಾಗಿದೆ. ಉಳಿದ 19 ಲಕ್ಷ ಟನ್ ಅಕ್ಕಿಯನ್ನು ಈ ವರ್ಷ ನವೆಂಬರ್ ಒಳಗೆ ಪೂರೈಕೆಯಾಗಬೇಕಿದೆ. ಹೀಗಾಗಿ, ಡಿಸ್ಟಿಲರಿಗಳಿಗೆ ಪೂರೈಕೆಯಾಗುವ ಮಾಸಿಕ ಅಕ್ಕಿ ಪ್ರಮಾಣವು ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − fifteen =
Remember me
