|ಜಗದೀಶ ಬುರ್ಲಬಡ್ಡಿ
ಚಿನ್ನದ ಬೆಲೆ ಈಗ ಗಗನಮುಖಿಯಾಗಿದೆ. ಮಾರ್ಚ್ 9 ಮತ್ತು ಮಾರ್ಚ್ 24ರ ನಡುವೆ ಚಿನ್ನದ ದರವು 10 ಗ್ರಾಂಗೆ ಶೇ. 8.2ರಷ್ಟು ಏರಿಕೆಯಾಗಿ 59,545 ರೂಪಾಯಿಗೆ ತಲುಪಿತ್ತು. ಕೇವಲ 15 ದಿನಗಳಲ್ಲಿ ಬಂಗಾರ ದರ ಇಷ್ಟೊಂದು ಹೆಚ್ಚಳ ಕಂಡಿರುವುದು ಅಚ್ಚರಿಗೆ ಕಾರಣವಾಯಿತು. ಬ್ಯಾಂಕ್ ಉಳಿತಾಯ ಖಾತೆಯಲ್ಲಿ ವರ್ಷಕ್ಕೆ ಶೇ. 3ರಿಂದ 4ರಷ್ಟು ಬಡ್ಡಿ ದೊರೆಯುತ್ತದೆ. ಬ್ಯಾಂಕ್​ಗಳು ಒಂದು ವರ್ಷದ ಸ್ಥಿರ ಠೇವಣಿಗಳಿಗೆ ಪ್ರಸ್ತುತ ಶೇ. 7ರಷ್ಟು ಬಡ್ಡಿ ಪಾವತಿಸುತ್ತವೆ. ಹಾಗಾದರೆ, ಚಿನ್ನದಲ್ಲಿ ಹೂಡಿಕೆ ಮಾಡಲು ಇದು ಸರಿಯಾದ ಸಮಯವೇ ಎಂಬ ಪ್ರಶ್ನೆಗೆ ಮಾತ್ರ ಉತ್ತರ ಸರಳವಲ್ಲ.
ಏಕೆಂದರೆ, ಬ್ಯಾಂಕ್​ಗಳಲ್ಲಿ ಹೂಡಿಕೆಗೆ ಆದಾಯವು ನಿಶ್ಚಿತವಾಗಿದ್ದರೆ, ಚಿನ್ನದ ಮೇಲಿನ ಹೂಡಿಕೆಗೆ ದೊರೆಯುವ ಆದಾಯದಲ್ಲಿ ಮಾತ್ರ ಯಾವುದೇ ಗ್ಯಾರಂಟಿ ಇರುವುದಿಲ್ಲ. ಚಿನ್ನದ ಬೆಲೆಯ ಬಗ್ಗೆ ಮಾತನಾಡಬೇಕಾದರೆ ಹಲವು ವರ್ಷಗಳ ಹಿಂದಿನ ಪರಿಸ್ಥಿತಿ ಗಮನಿಸಬೇಕಾಗುತ್ತದೆ. ಹಣಕಾಸಿನ ವ್ಯವಸ್ಥೆಯು ನಿಜವಾಗಿಯೂ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಮತ್ತು ಚಿನ್ನದ ಬೆಲೆಯ ಮೇಲೆ ಇದು ಬೀರುವ ಪ್ರಭಾವವನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ.
ಈ ತಿಂಗಳ ಅವಧಿಯಲ್ಲಿ, ಕೆಲವು ಸಣ್ಣ ಮತ್ತು ಮಧ್ಯಮ ಗಾತ್ರದ ಅಮೆರಿಕದ ಬ್ಯಾಂಕ್​ಗಳು ತೊಂದರೆಗೆ ಸಿಲುಕಿರುವುದು ಜಗತ್ತಿಗೆ ತಿಳಿದಿರುವ ವಿಚಾರವೇ ಆಗಿದೆ. ಈ ಬ್ಯಾಂಕ್ ಬಿಕ್ಕಟ್ಟಿನ ಸೋಂಕು ಇತರ ಬ್ಯಾಂಕ್​ಗಳಿಗೆ ಹರಡುವ ಅಪಾಯವೂ ಇದೆ. ಈ ಹಣಕಾಸು ವ್ಯವಸ್ಥೆಯ ಅಸ್ಥಿರತೆಯು ಶ್ರೀಮಂತ ಜಗತ್ತಿನಾದ್ಯಂತ ಅಸ್ತಿತ್ವದಲ್ಲಿದೆ ಎಂಬುದನ್ನು ಪ್ರಸ್ತುತ ಬಿಕ್ಕಟ್ಟು ತೋರಿಸುತ್ತದೆ.
ಇಂತಹ ಸನ್ನಿವೇಶದಲ್ಲಿ, ಕಳೆದ ಕೆಲವು ವಾರಗಳಲ್ಲಿ ಹಣವು ಚಿನ್ನಕ್ಕೆ ಸ್ಥಳಾಂತರಗೊಂಡಿದೆ ಮತ್ತು ಅದರ ಬೆಲೆಯನ್ನು ಹೆಚ್ಚಿಸಿದೆ. ಶತಮಾನಗಳಿಂದ ಚಿನ್ನವನ್ನು ಸುರಕ್ಷಿತ ನೆಲೆಯಾಗಿ ಪರಿಗಣಿಸಲಾಗಿದೆ. ಹಣಕಾಸಿನ ವ್ಯವಸ್ಥೆಯಲ್ಲಿ ಸಂಕಷ್ಟ ತಲೆದೋರಿದಾಗಲೆಲ್ಲ ಹಣವು ಚಿನ್ನದತ್ತ ಧಾವಿಸುತ್ತದೆ. ಈಗಲೂ ಇದೇ ಆಗಿದ್ದು ಹಣವು ಚಿನ್ನದತ್ತ ಹರಿದುಬಂದಿದೆ. ಬಂಗಾರದ ಬೆಲೆ ಗಗನದತ್ತ ಸಾಗಿದೆ.
ಹಣ ಮುದ್ರಣ: 2020ರ ಆರಂಭದಲ್ಲಿ ಕೋವಿಡ್ ಸಾಂಕ್ರಾಮಿಕ ಕೋವಿಡ್ ಭುಗಿಲೆದ್ದಿತು. ಸಾಕಷ್ಟು ಉದ್ಯೋಗ ನಷ್ಟ ಸಂಭವಿಸಿತು. ಜನರ ಆದಾಯವು ಸಾಕಷ್ಟು ಕುಸಿಯಿತು. ಅಮೆರಿಕದ ಫೆಡರಲ್ ರಿಸರ್ವ್ ಸೇರಿದಂತೆ ಪ್ರಪಂಚದಾದ್ಯಂತದ ವಿವಿಧ ದೇಶಗಳ ಕೇಂದ್ರೀಯ ಬ್ಯಾಂಕ್​ಗಳು ಗ್ರಾಹಕರು, ದೊಡ್ಡ ಕಂಪನಿಗಳಿಗೆ ಮತ್ತು ಸರ್ಕಾರಗಳಿಗೆ ನೆರವಾಗುವ ಉದ್ದೇಶದೊಂದಿಗೆ ಬಡ್ಡಿ ದರಗಳನ್ನು ಕಡಿಮೆ ಮಾಡಲು ಹಣವನ್ನು ಮುದ್ರಿಸಿ ಹಣಕಾಸು ವ್ಯವಸ್ಥೆಗೆ ಪೂರೈಕೆ ಮಾಡಿದವು.
ಇದರ ಪರಿಣಾಮವಾಗಿ, ಅಮೆರಿಕ ಸರ್ಕಾರವು ಬಹುತೇಕ ಶೂನ್ಯ ಬಡ್ಡಿ ದರದಲ್ಲಿ ಸಾಲವನ್ನು ಪಡೆಯಿತು. ಈ ಹಣದಲ್ಲಿ ಒಂದಿಷ್ಟನ್ನು ನೇರವಾಗಿ ಜನರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಯಿತು. ಕಷ್ಟದ ಸಮಯದಲ್ಲಿ ಜನರಿಗೆ ಸಹಾಯ ಮಾಡುವ ಆಲೋಚನೆ ಇದಾಗಿತ್ತು. ಆದರೆ, ಇದು ಅನೇಕ ಸಮಸ್ಯೆಗಳನ್ನು ಸೃಷ್ಟಿಸಿತು.
ಹಣದುಬ್ಬರ: ಅಮೆರಿಕದ ಆರ್ಥಿಕತೆಯು 1980ರ ದಶಕದ ಆರಂಭದಿಂದಲೂ ಕಡಿಮೆ ಹಣದುಬ್ಬರವನ್ನು (ಅಂದರೆ ಬೆಲೆಯೇರಿಕೆ) ಹೊಂದಿದೆ. ವಾಸ್ತವವಾಗಿ, ಫೆಬ್ರವರಿ 2012 ಮತ್ತು ಡಿಸೆಂಬರ್ 2020ರ ನಡುವಿನ ಅವಧಿಯಲ್ಲಿ ಚಿಲ್ಲರೆ ಹಣದುಬ್ಬರವು ಎಂದಿಗೂ ಶೇಕಡಾ 3ರಷ್ಟನ್ನು ದಾಟಿರಲಿಲ್ಲ. ಆದರೀಗ ಅಮೆರಿಕದ ಫೆಡರಲ್ ರಿಸರ್ವ್ ಬಹಳಷ್ಟು ಹಣವನ್ನು ಮುದ್ರಿಸಿದೆ ಮತ್ತು ಸರ್ಕಾರವು ಆ ಹಣವನ್ನು ಜನರ ಕೈಗೆ ನೀಡಿದೆ. ಈ ನಡುವೆ ಕೋವಿಡ್ ಸಾಂಕ್ರಾಮಿಕ ಹರಡುವಿಕೆಯಿಂದಾಗಿ ಪೂರೈಕೆ ಸರಪಳಿ ಸಮಸ್ಯೆಗಳು ತಲೆದೋರಿದವು. ಇದು ಸರಕುಗಳ ಕೊರತೆ ತಲೆದೋರಿತು. ಆಮದು ಅವಲಂಬಿತ ಅಮೆರಿಕದ ಆರ್ಥಿಕತೆಯಲ್ಲಿ ಬೆಲೆಗಳು ಹೆಚ್ಚಾಗಲು ಕಾರಣವಾಯಿತು. ಡಿಸೆಂಬರ್ 2020ರಲ್ಲಿ ಚಿಲ್ಲರೆ ಹಣದುಬ್ಬರವು ಶೇ. 1.3ರಷ್ಟಿತ್ತು. ಜೂನ್ 2022 ರ ಹೊತ್ತಿಗೆ, ಇದು ಹಲವು ದಶಕಗಳ ಗರಿಷ್ಠ ಪ್ರಮಾಣವಾದ ಶೇ. 8.9ಕ್ಕೆ ತ್ವರಿತವಾಗಿ ತಲುಪಿತು.
2022ರ ಮಾರ್ಚ್ ಹೊತ್ತಿಗೆ ಫೆಡರಲ್ ರಿಸರ್ವ್, ಪರಿಸ್ಥಿತಿಯ ಗಂಭೀರತೆಯನ್ನು ಒಪ್ಪಿಕೊಂಡು ಬಡ್ಡಿ ದರಗಳನ್ನು ಹೆಚ್ಚಿಸಲು ಪ್ರಾರಂಭಿಸಿತು. ಬಡ್ಡಿ ದರಗಳು ಹೆಚ್ಚಾದರೆ, ಜನರು ಕಡಿಮೆ ಖರ್ಚು ಮಾಡುತ್ತಾರೆ; ಇದರಿಂದಾಗಿ ವಸ್ತುಗಳಿಗೆ ಬೇಡಿಕೆ ಕಡಿಮೆಯಾಗುತ್ತದೆ. ಈ ಮೂಲಕ ಹಣದುಬ್ಬರವು ನಿಯಂತ್ರಣಕ್ಕೆ ಬರುತ್ತದೆ ಎಂಬ ತರ್ಕವು ಬಡ್ಡಿ ದರ ಹೆಚ್ಚಳದ ಹಿಂದಿತ್ತು. ಆದರೆ, ಈ ಕ್ರಮವು ಬ್ಯಾಂಕಿಂಗ್ ವಲಯಕ್ಕೆ ದೊಡ್ಡ ಪೆಟ್ಟು ನೀಡಿತು.
ಠೇವಣಿ ಹೆಚ್ಚಳ: ಡಿಸೆಂಬರ್ 2020 ರ ಹೊತ್ತಿಗೆ, ಅಮೆರಿಕದ ವಾಣಿಜ್ಯ ಬ್ಯಾಂಕುಗಳ ಒಟ್ಟು ಠೇವಣಿ 16.1 ಲಕ್ಷ ಡಾಲರ್ (1324 ಲಕ್ಷ ಕೋಟಿ ರೂಪಾಯಿ) ಆಗಿತ್ತು. ಫೆಡರಲ್ ರಿಸರ್ವ್ ಹಣವನ್ನು ಮುದ್ರಿಸಿದಂತೆ ಮತ್ತು ಸರ್ಕಾರವು ಆ ಹಣವನ್ನು ಜನರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಿದ್ದರಿಂದ ಠೇವಣಿಗಳು ಬಹಳ ಬೇಗನೆ ಏರಿಕೆ ಕಂಡವು. 2022ರ ಏಪ್ರಿಲ್ ಮಧ್ಯದ ಹೊತ್ತಿಗೆ, ಠೇವಣಿಯು 18.1 ಲಕ್ಷ ಕೋಟಿ ಡಾಲರ್​ಗೆ (1489 ಲಕ್ಷ ಕೋಟಿ ರೂಪಾಯಿ) ತಲುಪಿತು.
ಬ್ಯಾಂಕ್​ಗಳು ತಮ್ಮಲ್ಲಿ ಠೇವಣಿಯಾದ ಹಣದ ಮೂಲಕ ಜನರಿಗೆ ಸಾಲ ನೀಡಿದವು. ಅಲ್ಲದೆ, ಬಾಂಡ್​ಗಳಲ್ಲಿಯೂ ಹೂಡಿಕೆ ಮಾಡಿದವು. ಡಿಸೆಂಬರ್ 2020 ರ ಹೊತ್ತಿಗೆ, ಅಮೆರಿಕದ ವಾಣಿಜ್ಯ ಬ್ಯಾಂಕುಗಳು ಸರ್ಕಾರಿ ಖಜಾನೆ ಬಾಂಡ್​ಗಳು ಮತ್ತು ಏಜೆನ್ಸಿ ಸೆಕ್ಯುರಿಟೀಸ್​ಗಳಲ್ಲಿ ಅಂದಾಜು 3 ಲಕ್ಷ ಕೋಟಿ ಡಾಲರ್ (246 ಲಕ್ಷ ಕೋಟಿ ರೂಪಾಯಿ) ಹೂಡಿಕೆ ಮಾಡಿದವು. ಹಣಕಾಸಿನ ಕೊರತೆ ನೀಗಿಸಿಕೊಳ್ಳಲು ಅಮೆರಿಕದ ಸರ್ಕಾರವು ಖಜಾನೆ ಬಾಂಡ್​ಗಳನ್ನು ಜಾರಿ ಮಾಡುತ್ತವೆ. ಏಜೆನ್ಸಿ ಸೆಕ್ಯುರಿಟಿಗಳು ಸಾಮಾನ್ಯವಾಗಿ ಅಮೆರಿಕ ಸರ್ಕಾರದ ಪ್ರಾಯೋಜಿತ ಉದ್ಯಮದಿಂದ ನೀಡಲಾದ ಹಣಕಾಸಿನ ಭದ್ರತೆಗಳಾಗಿವೆ.
ಮುದ್ರಿತ ಹಣವು ವಾಣಿಜ್ಯ ಬ್ಯಾಂಕ್​ಗಳಿಗೆ ಠೇವಣಿ ರೂಪದಲ್ಲಿ ಬರತೊಡಗಿದಂತೆ, ಖಜಾನೆ ಬಾಂಡ್​ಗಳು ಮತ್ತು ಏಜೆನ್ಸಿ ಸೆಕ್ಯುರಿಟಿಗಳಲ್ಲಿನ ಬ್ಯಾಂಕ್​ಗಳ ಹೂಡಿಕೆಗಳು ಬಹಳ ಬೇಗನೆ ಏರಿತು. 2022ರ ಫೆಬ್ರವರಿ ವೇಳೆಗೆ ಈ ಹೂಡಿಕೆ ಮೊತ್ತವು 4.7 ಲಕ್ಷ ಕೋಟಿ ಡಾಲರ್ (386 ಲಕ್ಷ ಕೋಟಿ ರೂಪಾಯಿ) ತಲುಪಿತು. ಡಿಸೆಂಬರ್ 2020ಕ್ಕೆ ಹೋಲಿಸಿದರೆ ಈ ಹೂಡಿಕೆಯು ಶೇ. 57ರಷ್ಟು ಹೆಚ್ಚಳವಾಯಿತು.
ಬ್ಯಾಂಕ್​ಗಳಿಗೆ ನಷ್ಟ: ಆದರೀಗ, ಬ್ಯಾಂಕ್ ಬಡ್ಡಿ ದರಗಳು ಮತ್ತು ಬಾಂಡ್ ಬೆಲೆಗಳು ವಿಲೋಮ ಅನುಪಾತದಲ್ಲಿವೆ. ಬಡ್ಡಿ ದರಗಳು ಹೆಚ್ಚಾಗಿ ಬಾಂಡ್ ಬೆಲೆಗಳು ಕುಸಿದಿವೆ. ಹಣದುಬ್ಬರ ನಿಯಂತ್ರಿಸುವ ಸಲುವಾಗಿ ಫೆಡರಲ್ ರಿಸರ್ವ್, ಬಡ್ಡಿ ದರಗಳನ್ನು ಹೆಚ್ಚಿಸಿದಂತೆಯೇ ವಾಣಿಜ್ಯ ಬ್ಯಾಂಕುಗಳು ಹೊಂದಿರುವ ಬಾಂಡ್​ಗಳ ಬೆಲೆಗಳು ಕುಸಿದಿವೆ. ಹೀಗಾಗಿ, ಬ್ಯಾಂಕ್​ಗಳು ಅಪಾರ ನಷ್ಟ ಅನುಭವಿಸಿವೆ. ಸಾಮಾನ್ಯವಾಗಿ ಬ್ಯಾಂಕುಗಳು ಠೇವಣಿಗಳ ಮೂಲಕ ಅಲ್ಪಾವಧಿಗೆ ಹಣ ಪಡೆದು, ಗ್ರಾಹಕರಿಗೆ ದೀರ್ಘಾವಧಿಗೆ ಸಾಲ ನೀಡುತ್ತವೆ. ಇದರಿಂದಾಗಿ, ಕಡಿಮೆ ಅವಧಿಯಲ್ಲಿ ಪಕ್ವವಾಗುವ ಠೇವಣಿಗಳಿಗೆ ಪಾವತಿಸಲು ಬ್ಯಾಂಕ್​ಗಳಿಗೆ ಹಣದ ಅಗತ್ಯ ಬೀಳುತ್ತಿದೆ. ಇದಕ್ಕಾಗಿ ಬೆಲೆ ಕುಸಿದಿರುವ ಬಾಂಡ್​ಗಳನ್ನು ಮಾರಾಟ ಮಾಡಿ ನಷ್ಟಕ್ಕೆ ಒಳಗಾಗುವ ಪರಿಸ್ಥಿತಿ ಬ್ಯಾಂಕ್​ಗಳಿಗೆ ತಲೆದೋರಿದೆ. ಈ ರೀತಿ ನಷ್ಟಕ್ಕೊಳಗಾದುದು ಸಿಲಿಕಾನ್ ವ್ಯಾಲಿ ಬ್ಯಾಂಕ್. ಸಿಗ್ನೇಚರ್ ಬ್ಯಾಂಕ್, ಫಸ್ಟ್ ರಿಪಬ್ಲಿಕ್ ಬ್ಯಾಂಕ್ ಮೊದಲಾದವು ಕೂಡ ಇಂತಹುದೆ ತೊಂದರೆಯಲ್ಲಿ ಸಿಲುಕಿದವು. ಬ್ಯಾಂಕ್​ಗಳು ನಷ್ಟ ಅನುಭವಿಸುತ್ತಿದ್ದಂತೆಯೇ ಠೇವಣಿ ಇಟ್ಟವರು ಹಣವನ್ನು ಹಿಂತೆದುಕೊಳ್ಳಲು ಬ್ಯಾಂಕ್​ಗಳಿಗೆ ದೌಡಾಯಿಸಿದ್ದರಿಂದ ಬ್ಯಾಂಕ್​ಗಳಲ್ಲಿ ವಹಿವಾಟಿಗೆ ಹಣವಿಲ್ಲದೆ ಬೀಗ ಹಾಕುವಂತಾಯಿತು. ಬ್ಯಾಂಕ್​ಗಳಿಂದ ಹೊರಬಂದ ಹಣವು ಚಿನ್ನದತ್ತ ಹೆಜ್ಜೆ ಹಾಕಿತು. ಹೀಗೆ ಸೃಷ್ಟಿಯಾದ ಅಸ್ಥಿರತೆಯು ಚಿನ್ನದ ಬೆಲೆಯನ್ನು ಹೆಚ್ಚಿಸಿದೆ.
2006ರಿಂದ ಚಿನ್ನದ ಬೆಲೆಯನ್ನು ಗಮನಿಸೋಣ. ಭಾರತದಲ್ಲಿ 10 ಗ್ರಾಂ ಚಿನ್ನದ ಬೆಲೆಯು 8205 ರೂಪಾಯಿ ಇತ್ತು. ಅಮೆರಿಕದಲ್ಲಿ ಒಂದು ಟ್ರಾಯ್ ಔನ್ಸ್ (31.1 ಗ್ರಾಂ) ಚಿನ್ನದ ಬೆಲೆಯು 568.8 ಡಾಲರ್ ಇತ್ತು. ಇದುವರೆಗಿನ 17 ವರ್ಷಗಳ ಅವಧಿಯಲ್ಲಿ ಚಿನ್ನದ ಬೆಲೆಯು ವಾರ್ಷಿಕವಾಗಿ ರೂಪಾಯಿಗಳಲ್ಲಿ ಶೇ. 12.3ರಷ್ಟು ಹೆಚ್ಚಳ ಕಂಡಿದೆ. ಇದೇ ಅವಧಿಯಲ್ಲಿ ಡಾಲರ್​ಗಳಲ್ಲಿ ಇದು ವರ್ಷಕ್ಕೆ ಶೇ. 7.5ರಷ್ಟು ಮಾತ್ರ ಏರಿಕೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಮಾರಾಟ ಮತ್ತು ಖರೀದಿಯು ಡಾಲರ್​ನಲ್ಲಿಯೇ ನಡೆಯುವುದರಿಂದ ಈ ರೀತಿಯಾಗಿದೆ. ಡಾಲರ್ ಎದುರು ರೂಪಾಯಿ ಮೌಲ್ಯವನ್ನು ಕಳೆದುಕೊಂಡ ಕಾರಣ ಡಾಲರ್​ಗಿಂತ ರೂಪಾಯಿಯಲ್ಲಿ ಚಿನ್ನಕ್ಕೆ ಹೆಚ್ಚಿನ ಬೆಲೆ ಬಂದಿದೆ. 2006ರ ಆರಂಭದಲ್ಲಿ ಒಂದು ಡಾಲರ್ ಮೌಲ್ಯವು 45 ರೂಪಾಯಿ ಇತ್ತು. ಈಗ ಇದು 82 ರೂಪಾಯಿ ದಾಟಿದೆ. ಹೀಗಾಗಿ, ರೂಪಾಯಿಯಲ್ಲಿ ಚಿನ್ನಕ್ಕೆ ಹೂಡಿಕೆ ಮಾಡಿದ ಭಾರತೀಯರಿಗೆ ಹೆಚ್ಚು ಲಾಭವಾದಂತಾಗಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 1 =
Remember me
