|ಉಮೇಶ್ ಕುಮಾರ್ಶಿಮ್ಲಡ್ಕ
ಕೋವಿಡ್- 19 ಸಂಕಷ್ಟದ ಆರಂಭಿಕ ಆಘಾತದ ಹೊರತಾಗಿಯೂ ಭಾರತದ ಷೇರುಪೇಟೆ ಉತ್ತಮ ಸಾಧನೆಯನ್ನು ಪ್ರದರ್ಶಿಸುತ್ತ ಮುನ್ನಡೆದಿದೆ. ಬಾಂಬೆ ಸ್ಟಾಕ್ ಎಕ್ಸೆ ್ಚೕಂಜ್ (ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್ 54,000 ಅಂಶದ ಗಡಿ ದಾಟಿದರೆ, ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ (ಎನ್​ಎಸ್​ಇ) ಸೂಚ್ಯಂಕ ನಿಫ್ಟಿ50 ಕೂಡ 16,000ದ ಗಡಿ ದಾಟಿ ಮುನ್ನಡೆದಿದೆ. ಇದೇ ರೀತಿ ಸಾರ್ವಜನಿಕರ ಹೂಡಿಕೆದಾರರಿಂದ ನಿಧಿ ಸಂಗ್ರಹಿಸುವುದಕ್ಕಾಗಿ ಕಂಪನಿಗಳು ಐಪಿಒಗಳನ್ನು ಬಿಡುಗಡೆ ಮಾಡುವ ಪರಿಪಾಠ 1977ರಿಂದಲೇ ಶುರುವಾಗಿದೆ. ಈ ವರ್ಷವಂತೂ 54 ಕಂಪನಿಗಳು ಐಪಿಒ ಬಿಡುಗಡೆ ಮಾಡುವುದಾಗಿ ಘೊಷಿಸಿದ್ದು, ಒಟ್ಟು 1 ಲಕ್ಷ ಕೋಟಿ ರೂಪಾಯಿಗೂ ಅಧಿಕ ನಿಧಿ ಸಂಗ್ರಹದ ನಿರೀಕ್ಷೆಯಲ್ಲಿವೆ. ಈಗಾಗಲೇ ಏಳು ತಿಂಗಳ ಅವಧಿಯಲ್ಲಿ 28 ಕಂಪನಿಗಳು ಐಪಿಒ ಬಿಡುಗಡೆ ಮಾಡಿ 42,000 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಹೂಡಿಕೆದಾರರಿಂದ ಸಂಗ್ರಹಿಸಿವೆ. ಇನ್ನೂ 26 ಕಂಪನಿಗಳ ಐಪಿಒ ಬಿಡುಗಡೆಗೆ ಸಿದ್ಧವಾಗಿದ್ದು, 36,000 ಕೋಟಿ ರೂಪಾಯಿಯಷ್ಟು ನಿಧಿ ಸಂಗ್ರಹಿಸುವುದಕ್ಕೆ ಯೋಜನೆ ರೂಪಿಸಿಕೊಂಡಿವೆ.2017ರಲ್ಲಿ 36 ಕಂಪನಿಗಳು ಐಪಿಒ ಬಿಡುಗಡೆ ಮಾಡಿದ್ದು, ಇದುವರೆಗಿನ ಗರಿಷ್ಠ 67,147.44 ಕೋಟಿ ರೂ. ನಿಧಿ ಸಂಗ್ರಹಿಸಿದ್ದವು. ಈ ವರ್ಷ ಬಿಡುಗಡೆಯಾದ ಐಪಿಒಗಳ ಪೈಕಿ ಜೊಮ್ಯಾಟೊ ಎಂಬ ಇಂಟರ್​ನೆಟ್ ಪ್ಲಾಟ್​ಫಾರಂ ಕಂಪನಿ ನಿರೀಕ್ಷೆ ಮೀರಿ ಷೇರುಮೌಲ್ಯದಲ್ಲಿ ಶೇಕಡ 80ರಷ್ಟು ಬೆಳವಣಿಗೆ ದಾಖಲಿಸಿದೆ. 1993ರಲ್ಲಿ ಇನ್ಪೋಸಿಸ್ ಕಂಪನಿಯ ಐಪಿಒ ಬಂದಾಗ ಕೂಡ ಈ ರೀತಿ ಬೆಳವಣಿಗೆ ತೋರಿರಲಿಲ್ಲ.
ಸದ್ಯ ಐಪಿಒ ಮಾರುಕಟ್ಟೆ ವಹಿವಾಟು ಉತ್ತುಂಗ ದಲ್ಲಿದೆ. ಹೊಸ ಹೂಡಿಕೆದಾರರು ಬೃಹತ್ ಸಂಖ್ಯೆಯಲ್ಲಿ ಐಪಿಒಗಳ ಮೇಲೆ ಹೂಡಿಕೆ ಮಾಡ ಲಾರಂಭಿಸಿದ್ದಾರೆ. 1977ರಲ್ಲಿ ಧೀರೂಭಾಯ್ ಅಂಬಾನಿ ಮಾಲಿಕತ್ವದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಂಪನಿ ಮೊಟ್ಟಮೊದಲ ಐಪಿಒ ಬಿಡುಗಡೆ ಮಾಡಿತ್ತು. ಅಂದು 2.82 ಕೋಟಿ ರೂಪಾಯಿ ನಿಧಿ ಸಂಗ್ರಹಿಸಿತ್ತು. ಇದಾದ ಬಳಿಕ ಇಂದಿನ ತನಕವೂ ಸಕ್ರಿಯವಾಗಿರುವ ಕಂಪನಿ ರಿಲಯನ್ಸ್ ಒಂದೇ. 1991ರಲ್ಲಿ ಜಾಗತೀಕರಣ, ಖಾಸಗೀಕರಣ ಮತ್ತು ಉದಾರೀಕರಣ ನೀತಿಗಳಿಗೆ ಭಾರತದ ಅರ್ಥವ್ಯವಸ್ಥೆ ತೆರೆದುಕೊಂಡ ಆರಂಭಿಕ 5 ವರ್ಷದ ಅವಧಿಯಲ್ಲಿ ಧೀರೂಭಾಯ್ ಅಂಬಾನಿ ಮತ್ತೆ ನಾಲ್ಕು ದೊಡ್ಡ ಐಪಿಒಗಳನ್ನು ಬಿಡುಗಡೆ ಮಾಡಿದರು. ಐಪಿಒಕ್ಕೆ ಹೆಚ್ಚಿನ ಪ್ರತಿಕ್ರಿಯೆ ಸಿಕ್ಕಿತಾದರೂ ಬಳಿಕ ಹೂಡಿಕೆದಾರರಿಗೆ ಇದು ಹೆಚ್ಚಿನ ಪ್ರಯೋಜನ ನೀಡಲಿಲ್ಲ. ಕೊನೆಗೆ ಕೆಲವು ಕಂಪನಿಗಳನ್ನು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್​ನಲ್ಲಿ ವಿಲೀನಗೊಳಿಸಲಾಗಿದೆ.
ಐಪಿಒ ಎಂಬುದು ಇನಿಷಿಯಲ್ ಪಬ್ಲಿಕ್ ಆಫರಿಂಗ್​ನ ಸಂಕ್ಷಿಪ್ತ ರೂಪ. ಇದನ್ನು ಸರಳ ವಾಗಿ ಹೇಳಬೇಕು ಎಂದರೆ ಕಂಪನಿಯೊಂದು ತನ್ನ ಷೇರುಗಳನ್ನು ಮೊದಲ ಬಾರಿಗೆ ಸಾರ್ವಜನಿಕರಿಗೆ ಮಾರಾಟ ಮಾಡುವ ಪ್ರಕ್ರಿಯೆ. ಹೀಗಾಗಿ ಇದಕ್ಕೆ ಐಪಿಒ ಎಂದು ಹೆಸರು. ಈ ಪ್ರಕ್ರಿಯೆ ಮೂಲಕ ಖಾಸಗಿ ಕಂಪನಿಯೊಂದು ಪಬ್ಲಿಕ್ ಕಂಪನಿಯಾಗಿ ಮಾರ್ಪಾಡಾಗುತ್ತದೆ. ಈ ಪ್ರಕ್ರಿಯೆ ನಡೆಸುವುದಕ್ಕೆ ಸೆಬಿ ಅಂತಿಮ ಅನುಮತಿ ನೀಡಿದ 12 ತಿಂಗಳ ಒಳಗೆ ಐಪಿಒ ಬಿಡುಗಡೆ ಮಾಡಬೇಕು. ಅಕಸ್ಮಾತ್ ಹಾಗೆ ಮಾಡಲಾಗದೇ ಇದ್ದರೆ ಕಂಪನಿ ಐಪಿಒ ಬಿಡುಗಡೆ ಮಾಡಲು ಪುನಃ ಸೆಬಿಯ ಅನುಮತಿ ಪಡೆಯಬೇಕಾಗುತ್ತದೆ.
ದೇಶದ ಅರ್ಥವ್ಯವಸ್ಥೆ ಉದಾರೀಕರಣ, ಜಾಗತೀ ಕರಣ, ಖಾಸಗೀಕರಣ ನೀತಿಗೆ ಒಳಪಟ್ಟ ಬೆನ್ನಿಗೆ, ‘ಸೆಕ್ಯುರಿಟೀಸ್ ಆಂಡ್ ಚೇಂಜ್ ಬೋರ್ಡ್ ಆಫ್ ಇಂಡಿಯಾ’ (ಸೆಬಿ) ರಚನೆಯಾಗಿತ್ತು. ಇದಾಗಿ ನಾಲ್ಕು ತಿಂಗಳಿಗೆ ಕ್ಯಾಪಿಟಲ್ ಕಂಟ್ರೋಲರ್ ಆಫ್ ಪಾಯಿಂಟ್ಸ್ ರದ್ದುಗೊಂಡಿತು. ಇದರ ಪರಿಣಾಮ ಬೆಲೆ ನಿಗದಿ ಮುಕ್ತಗೊಂಡಿತು. ಕಂಪನಿಗಳು ಇದರ ಪ್ರಯೋಜನ ಪಡೆದುಕೊಂಡವು. 1990ರ ದಶಕದ ಪೂರ್ವಾರ್ಧದ ವರ್ಷಗಳಲ್ಲಿ ಗರಿಷ್ಠ ದಾಖಲೆಯ 1,402 ಐಪಿಒಗಳು ಬಿಡುಗಡೆಯಾದವು. ಪ್ರಮೋಟರ್ಸ್​ಗೆ ಭಾರಿ ಲಾಭವಾಯಿತು. ಹೂಡಿಕೆದಾರರು ಬಹಳ ನಷ್ಟ ಅನುಭವಿಸಿದ್ದು ದಾಖಲೆಯಾಗಿ ಉಳಿದಿದೆ.
ಐಪಿಒ ಮಾರುಕಟ್ಟೆಯಲ್ಲಿ 2005ರ ವೇಳೆಗೆ ದೊಡ್ಡ ಹಗರಣ ಒಂದು ಬೆಳಕಿಗೆ ಬಂತು. ಅದನ್ನು ‘ಐಪಿಒ ಡಿಮ್ಯಾಟ್ ಹಗರಣ’ ಎಂದು ಗುರುತಿಸಲಾಗಿದೆ. ಕೆಲವು ಕಂಪನಿಗಳು ಫೇಕ್ ಡಿಮ್ಯಾಟ್ ಅಕೌಂಟ್​ಗಳ ಮೂಲಕ ಐಪಿಒ ಹಂಚಿಕೆ ಮಾಡುತ್ತಿರುವುದು ಬೆಳಕಿಗೆ ಬಂದಿತ್ತು. ಬಳಿಕ ಸೆಬಿ ಇದಕ್ಕೆ ಕಡಿವಾಣ ಹಾಕಿತು. ಪಬ್ಲಿಕ್ ಷೇರುಗಳಿಗೆ ಕನಿಷ್ಠ ಮಿತಿ ನಿಗದಿ ಮಾಡಿದ ಕಾರಣ ಸಾಮಾನ್ಯ ಹೂಡಿಕೆದಾರರಿಗೂ ಷೇರುಗಳು ಲಭ್ಯವಾಗತೊಡಗಿತು. ಸಾಂಸ್ಥಿಕ ಹೂಡಿಕೆದಾರರಿಗೂ ಷೇರು ಮತ್ತು ಐಪಿಒ ಗಳಲ್ಲೂ ಪಾಲು ಹಂಚಿಕೆ ಮಾಡಲಾಯಿತು.
ಸೆಂಟ್ರಲ್ ಡೆಪಾಸಿಟರಿ ಸರ್ವೀ ಸಸ್ ಲಿಮಿಟೆಡ್ (ಸಿಡಿಎಸ್​ಎಲ್) ಪ್ರಕಾರ 2020ರ ಜನವರಿಯಲ್ಲಿ ಹೂಡಿಕೆದಾರರ ಖಾತೆ ಅಂದರೆ ಡಿಮ್ಯಾಟ್ ಖಾತೆ 2.01 ಕೋಟಿ ಇತ್ತು. ಕಳೆದ ಹದಿನೇಳು ತಿಂಗಳಲ್ಲಿ ಅಂದರೆ 2021ರ ಜೂನ್ 30ರ ಪ್ರಕಾರ, ಇದು ಬಹುತೇಕ ದುಪ್ಪಟ್ಟು ಆಗಿದ್ದು 3.96 ಕೋಟಿ ತಲು ಪಿದೆ. 2021ರ ಜನವರಿ1 ರಿಂದ ಜೂನ್ 30ರ ನಡುವೆ 1.07 ಕೋಟಿ ಹೊಸ ಖಾತೆಗಳು ತೆರೆಯಲ್ಪಟ್ಟಿವೆ.
ಇಂಡಿಗೋ ಪೇಂಟ್ಸ್, ಜೊಮ್ಯಾಟೊ ಸೇರಿ ಈಗಾಗಲೇ 28 ಐಪಿಒಗಳು ಬಿಡುಗಡೆಯಾಗಿವೆ. ಕೆಲವು ಉತ್ತಮ ಪ್ರತಿಕ್ರಿಯೆ ಮತ್ತು ವಹಿವಾಟು ಮುಂದುವರಿಸಿವೆ. ಇನ್ನು ಹಲವು ಋಣಾತ್ಮಕ ಪ್ರಯಾಣ ಮುಂದುವರಿಸಿವೆ. ಈ ನಡುವೆ, ಇನ್ನೂ 13 ದೊಡ್ಡ ಕಂಪನಿ ಗಳು ಸೆಬಿ ಅನುಮತಿಯೊಂದಿಗೆ ಐಪಿಒ ಬಿಡುಗಡೆಗೆ ಸಿದ್ಧತೆ ನಡೆಸಿವೆ. ಬಜಾಜ್ ಎನರ್ಜಿ 5,450 ಕೋಟಿ ರೂಪಾಯಿ, ನಿರ್ವ ಗ್ರೂಪ್​ನ ನುವೊಕೊ ವಿಸ್ಟಾಸ್ ಕಾರ್ಪೆರೇಶನ್ 5,000 ಕೋಟಿ ರೂಪಾಯಿ ಮೌಲ್ಯದ ಐಪಿಒ ಬಿಡುಗಡೆಗೆ ಚಿಂತನೆ ನಡೆಸಿವೆ. ಇವಲ್ಲದೆ, ಕಾರ್​ಟ್ರೇಡ್ ಟೆಕ್ (ಕಾರ್​ವಾಲೆ), ಉತ್ಕರ್ಷ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಪುರಾಣಿಕ್ ಬಿಲ್ಡರ್ಸ್, ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಸ್ಮಹಿ ಹೋಟೆಲ್ಸ್ ಕೂಡ ತಲಾ 1,000 ಕೋಟಿ ರೂಪಾಯಿ ಸಂಗ್ರಹಿಸುವ ಉದ್ದೇಶದಿಂದ ಐಪಿಒ ಬಿಡುಗಡೆಗೆ ಸಿದ್ಧವಾಗಿವೆ. ಇನ್ನು ಮಾರುಕಟ್ಟೆ ಪ್ರವೇಶಿಸಲಿರುವ ಐಪಿಒಗಳ ಪೈಕಿ ಫೋನ್ ಪೇ, ಪೇಟಿಎಂ, ಪಾಲಿಸಿಬಜಾರ್, ಮೊಬಿಕ್​ವಿಕ್, ಗ್ರೋಫರ್ಸ್ ಹೆಚ್ಚು ಗಮನಸೆಳೆಯತೊಡಗಿವೆ.
ಮಾರುಕಟ್ಟೆಯಲ್ಲಿ ಐಪಿಒಗಳು ಯಾಕೆ ಇಷ್ಟು ಸದ್ದು ಮಾಡುತ್ತಿವೆ? ಅವುಗಳಿಗೆ ಯಾಕೆ ಪ್ರಾಮುಖ್ಯ ಸಿಗುತ್ತದೆ ಎಂಬುದು ಸಾಮಾನ್ಯರ ಸಹಜ ಕುತೂಹಲ. ಕಾರಣ ಇಷ್ಟೆ – ಪ್ರತಿಯೊಬ್ಬರೂ ಕ್ಷಿಪ್ರವಾಗಿ ಹಣ ಹೂಡಿಕೆ ಮಾಡಿದ್ದನ್ನು ದುಪ್ಪಟ್ಟು ಮಾಡಿಕೊಳ್ಳುವುದಕ್ಕೆ ಇದೊಂದು ಅವಕಾಶ. ಇತ್ತೀಚೆಗೆ ಬಿಡುಗಡೆಯಾದ ತತ್ವ ಚಿಂತನ್ ಫಾರ್ವ ಕಂಪನಿಯ ಐಪಿಒದ ಡೇಟಾ ವನ್ನೊಮ್ಮೆ ಗಮನಿಸಿ. ಹೂಡಿಕೆದಾರರಿಗೆ ಈ ಕಂಪನಿಯ ಐಪಿಒ ಕೇವಲ ಎರಡು ವಾರದ ಅವಧಿಯಲ್ಲಿ ಹೂಡಿಕೆ ಹಣವನ್ನು ದುಪ್ಪಟ್ಟುಗೊಳಿಸಿ ಕೊಟ್ಟಿದೆ. ವಿತರಣಾ ದರಕ್ಕಿಂತ ಲಿಸ್ಟ್ ಆದಾಗ ಸಿಕ್ಕ ದರ ಶೇಕಡ 112ಕ್ಕೂ ಹೆಚ್ಚು. ಇದೇ ರೀತಿ ಜೊಮ್ಯಾಟೊ ಕೂಡ 10 ದಿನಗಳ ಅವಧಿಯಲ್ಲಿ ಹೂಡಿಕೆದಾರರ ಹಣವನ್ನು ದುಪ್ಪಟ್ಟು ಮಾಡಿಕೊಟ್ಟಿದೆ. ಈ ವರ್ಷ ಐಪಿಒ ಬಿಡುಗಡೆ ಮಾಡಿದ 26 ಕಂಪನಿಗಳ ಪೈಕಿ ಮೂರು ಕಂಪನಿಗಳ ಷೇರು ಮೌಲ್ಯ ಮಾತ್ರ ಐಪಿಒ ದರಕ್ಕಿಂತ ಕಡಿಮೆ ಇದೆ. ಆರು ಕಂಪನಿಗಳ ಷೇರು ಮೌಲ್ಯ ಶೇಕಡ 100ಕ್ಕಿಂತ ಅಧಿಕ ದರದಲ್ಲಿ ವಹಿವಾಟು ಮುಂದುವರಿಸಿವೆ. 12 ಕಂಪನಿಗಳ ಷೇರು ಮೌಲ್ಯಕ್ಕಿಂತ ಹೆಚ್ಚು ಅಂದರೆ ಶೇಕಡ 40-100ರ ನಡುವೆ ವಹಿವಾಟು ನಡೆಸಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + twenty =
Remember me
