ಆ ಕಾಲಕ್ಕೆ ಹೋಲಿಸಿದರೆ, ಇವತ್ತಿನ ಫುಟ್​ಬಾಲ್ ಅಭಿಮಾನಿಗಳೇ ಭಾಗ್ಯಶಾಲಿಗಳು. ಏಕೆಂದರೆ, ಆಧುನಿಕ ಫುಟ್​ಬಾಲ್​ನ ಸೂಪರ್​ಸ್ಟಾರ್​ಗಳಾದ ಲಿಯೊನೆಲ್ ಮೆಸ್ಸಿ ಮತ್ತು ಕ್ರಿಶ್ಚಿಯಾನೊ ರೊನಾಲ್ಡೊ ಆಟದ ಶ್ರೇಷ್ಠತೆಯನ್ನು ಟಿವಿ ನೇರಪ್ರಸಾರಗಳಲ್ಲಿ, ಮರುಪ್ರಸಾರಗಳಲ್ಲಿ, ಹೈಲೈಟ್ಸ್ ವೀಡಿಯೋಗಳ ಮೂಲಕ ಪದೇ ಪದೇ ನೋಡಿ ಕಣ್ತುಂಬಿಕೊಳ್ಳುವ, ಉಭಯ ಆಟಗಾರರ ಆಟ ಹೋಲಿಕೆ ಮಾಡಿ ಖುಷಿ ಪಡುವ ಅವಕಾಶ ಜಗದಗಲದ ಅಭಿಮಾನಿಗಳಿಗಿದೆ. ಆದರೆ, ಡೀಗೊ ಮರಡೋನಾ ಆಡುತ್ತಿದ್ದ ದಿನಗಳಲ್ಲಿ ಫಿಫಾ ವಿಶ್ವಕಪ್ ಪಂದ್ಯಗಳನ್ನು ಮಾತ್ರ ಟಿವಿಯಲ್ಲಿ ನೋಡಿ ಆನಂದಿಸಬಹುದಿತ್ತೇ ಹೊರತು ಉಳಿದಂತೆ ಹೆಚ್ಚಿನ ಅವಕಾಶಗಳಿರಲಿಲ್ಲ. 1982, 84, 90 ಹಾಗೂ 94ರ ವಿಶ್ವಕಪ್​ಗಳಲ್ಲಿ ಆಡಿದ್ದ ಮರಡೋನಾ, ಯುರೋಪಿನಲ್ಲಿ ಸ್ಪೇನ್​ನ ಬಾರ್ಸಿಲೋನಾ, ಇಟಲಿಯ ನೆಪೋಲಿ ಕ್ಲಬ್​ಗಳ ಪರ ದೀರ್ಘಕಾಲ ಆಡಿದರಾದರೂ, ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸಿದವರನ್ನು ಬಿಟ್ಟರೆ, ಉಳಿದವರಿಗೆ ಮರಡೋನಾ ಆಟದ ವಿಡಿಯೋಗಳನ್ನು ಆಸ್ವಾದಿಸುವ ಅವಕಾಶಗಳೂ ಇಲ್ಲ. ಫುಟ್​ಬಾಲ್ ಒಂದು ತಂಡ ಕ್ರೀಡೆಯಾದರೂ, ಮರಡೋನಾ ಆಡುವಾಗ ಅವರೇ ಒಂದು ತಂಡ ಎಂಬಂತೆ ಸರ್ವವ್ಯಾಪಿಯಾಗಿ ಆಡುತ್ತಿದ್ದವರು. ಎದುರಾಳಿಗಳು ಆ ದಿನಗಳಲ್ಲಿ ತಂಡದ ವಿರುದ್ಧ ಆಡುವುದಕ್ಕಿಂತ ಹೆಚ್ಚಾಗಿ ಮರಡೋನಾ ವಿರುದ್ಧ ಆಡುತ್ತಿದ್ದರು! ಅಂತೆಯೇ ಮರಡೋನಾ ಸಾಧಾರಣ ಗುಣಮಟ್ಟದ ಸಾಧಾರಣ ತಂಡಗಳ ಪರ ಆಡಿ ವಿಶೇಷ ಸಾಧನೆ ಮಾಡಿದವರು. ಇಟಲಿ ಲೀಗ್​ನಲ್ಲಿ ನೆಪೋಲಿ ಕ್ಲಬ್​ನ ಉತ್ಥಾನದ ರೂವಾರಿಯಾಗಿದ್ದವರು ಮರಡೋನಾ. ಮರಡೋನಾ ಸಾರಥ್ಯದಲ್ಲಿ 2 ಫಿಫಾ ವಿಶ್ವಕಪ್ ಫೈನಲ್ ತಲುಪಿ ಒಮ್ಮೆ ಟ್ರೋಫಿ ಗೆದ್ದ ಅರ್ಜೆಂಟೀನಾ ತಂಡ ಸ್ವಲ್ಪಮಟ್ಟಿಗೆ ಗುಣಮಟ್ಟ ಹೊಂದಿತ್ತು. ಆದರೂ, ಮರಡೋನಾ ಸಾಹಸವೇ ತಂಡದ ಯಶಸ್ಸಿನಲ್ಲಿ ಪ್ರಧಾನವಾಗಿತ್ತು. ಸದ್ಯ ಮೆಸ್ಸಿ ಮತ್ತು ರೊನಾಲ್ಡೊ ಯುರೋಪಿಯನ್ ಕ್ಲಬ್ ತಂಡಗಳಲ್ಲಿ ವಿಶ್ವದರ್ಜೆಯ ಆಟಗಾರರ ಪೈಪೋಟಿಯ ನಡುವೆ ಆಡುತ್ತಿದ್ದಾರೆ. ಅತ್ಯುತ್ತಮ ತಂಡಗಳ ವಿರುದ್ಧ, ಅತ್ಯುನ್ನತ ತಂತ್ರಜ್ಞಾನಗಳ ನೆರವು ಪಡೆದು, ಹೈಟೆಕ್ ಸೌಲಭ್ಯಗಳನ್ನು ಪಡೆದು ಆಡುತ್ತಿದ್ದಾರೆ. ಆದರೆ, ಪೀಲೆ, ಮರಡೋನಾ ಆಡುತ್ತಿದ್ದ ಕಾಲದಲ್ಲಿ ಅಂಥದ್ದೇನೂ ಇರಲಿಲ್ಲ. ಬಿದ್ದರೆ ಮೈಕೈ ತರಚುವಂಥ ಒರಟು ಕ್ರೀಡಾಂಗಣಗಳಲ್ಲಿ ಅವರು ಅಪ್ರತಿಮ ಕೌಶಲ ಮೆರೆದವರು. ಮರಡೋನಾ ರಂತೂ ಸಾಧಾರಣ ತಂಡಗಳ ಪರ ಆಡಿ ಅಸಾಧಾರಣ ಪ್ರದರ್ಶನ ಮೆರೆದರು.

ಜಾಗತಿಕ ಜನಪ್ರಿಯತೆ ಹೊಂದಿದ್ದ ಫುಟ್​ಬಾಲ್ ದಿಗ್ಗಜ ಡೀಗೊ ಮರಡೋನಾ. ಫುಟ್​ಬಾಲ್ ಮೈದಾನದಲ್ಲಿ ನಮಗೆ ಹಲವು ಸ್ಮರಣೀಯ ಕ್ಷಣಗಳನ್ನು ನೀಡಿದ್ದಾರೆ. ಅವರ ಈ ಅಕಾಲಿಕ ನಿಧನ ನಮಗೆಲ್ಲರಿಗೂ ದುಃಖ ತಂದಿದೆ.
|ನರೇಂದ್ರ ಮೋದಿಪ್ರಧಾನಿ
‘ದಿ ಹ್ಯಾಂಡ್ ಆಫ್ ಗಾಡ್’ ಖ್ಯಾತಿಯ ಮರಡೋನಾ ನಮ್ಮನ್ನು ಅಗಲಿದ್ದಾರೆ. 1986ರಲ್ಲಿ ಇಬ್ಬರೂ ಒಟ್ಟಿಗೆ ನಮ್ಮ ಕ್ರೀಡೆಗಳಲ್ಲಿ ಚಾಂಪಿಯನ್​ಪಟ್ಟ ಅಲಂಕರಿಸಿದ್ದೆವು. ಪ್ರತಿಯೊಬ್ಬರೂ ನಮ್ಮನ್ನು ಪರಸ್ಪರ ಹೋಲಿಕೆ ಮಾಡುತ್ತಿದ್ದರು. ನನ್ನ ಜೀವನದ ಹೀರೋ, ನನ್ನ ಆತ್ಮೀಯ ಸ್ನೇಹಿತ ನಮ್ಮೆಲ್ಲರನ್ನು ಬಿಟ್ಟು ಅಗಲಿದ್ದಾರೆ.
|ಮೈಕ್ ಟೈಸನ್ಬಾಕ್ಸರ್

ಈ ಇಂಟರ್ನೆಟ್ ಸೃಷ್ಟಿಸುವ ಅವಾಂತರಗಳು ಒಂದೆರಡಲ್ಲ. ಬುಧವಾರ ರಾತ್ರಿ ಮರಡೋನಾ ನಿಧನರಾಗುತ್ತಿದ್ದಂತೆಯೇ ಜಗತ್ತಿನ ಮೂಲೆಮೂಲೆಯ ಅಭಿಮಾನಿಗಳು ಶೋಕಿಸ ತೊಡಗಿದರು. ಟ್ವಿಟರ್​ನಲ್ಲಿ ಮರಡೋನಾ ಹೆಸರು ಟ್ರೆಂಡ್ ಆಗುತ್ತಿದ್ದಂತೆಯೇ ಕೆಲವರ ನಿರ್ಲಕ್ಷ್ಯ ಹಾಗೂ ಅಜ್ಞಾನದಿಂದಾಗಿ ಪಾಪ್ ತಾರೆ ಮಡೋನಾ ಹೆಸರು ಕೂಡ ಟ್ರೆಂಡ್ ಆಗತೊಡಗಿತು. ಫುಟ್​ಬಾಲ್ ಹಾಗೂ ಮರಡೋನಾ ಬಗ್ಗೆ ಹೆಚ್ಚಿನ ಆಸ್ಥೆ ಹೊಂದಿಲ್ಲದ ಕೆಲವರು ಮಡೋನಾ ಸತ್ತಿದ್ದಾರೆ ಎಂದು ಭಾವಿಸಿ ಅವರಿಗೇ ಸಂತಾಪ ಪ್ರಕಟಿಸತೊಡಗಿದರು.
ದೇಶದ ಫುಟ್​ಬಾಲ್ ದಿಗ್ಗಜ ಮರಡೋನಾ ವಿಧಿವಶರಾದ ಹಿನ್ನೆಲೆಯಲ್ಲಿ ಅರ್ಜೆಂಟೀನಾದಲ್ಲಿ 3 ದಿನಗಳ ಶೋಕಾಚರಣೆಯನ್ನು ಅಧ್ಯಕ್ಷ ಅಲ್ಬರ್ಟೆ ಫೆರ್ನಾಂಡೆಜ್ ಘೋಷಣೆ ಮಾಡಿದ್ದಾರೆ. ‘ಜಗತ್ತಿಗೆ ಅರ್ಜೆಂಟೀನಾ ಎಂದರೆ ಮರಡೋನಾ. ಜಗತ್ತಿನೆಲ್ಲೆಡೆ ಅವರಿಂದಲೇ ಅರ್ಜೆಂಟೀನಾವನ್ನು ಗುರುತಿಸುತ್ತಾರೆ. ಅವರು ನಮಗೆ ಅಪಾರ ಆನಂದ ನೀಡಿದ್ದಾರೆ. ನಾವು ಎಂದೆಂದಿಗೂ ಅದನ್ನು ಅವರಿಗೆ ಮರಳಿಸಲು ಸಾಧ್ಯವಿಲ್ಲ. ನಾವು ಅವರಿಗೆ ಗೌರವಯುತ ಬೀಳ್ಕೊಡುಗೆ ನೀಡುತ್ತೇವೆ. ಅವರು ಅದಕ್ಕೆ ಅರ್ಹರು’ ಎಂದು ಫೆರ್ನಾಂಡೆಜ್ ಹೇಳಿದ್ದಾರೆ.
ಮರಡೋನಾ ಹಾಗೂ ಫುಟ್​ಬಾಲ್​ಗೂ ಅವಿನಾಭಾವ ನಂಟು. ಅವರಿಗೆ ಫುಟ್​ಬಾಲ್ ಮೇಲಿದ್ದ ಪ್ರೀತಿ ಹೇಳ ತೀರದು. ಫುಟ್​ಬಾಲ್ ಆಕಾರದಲ್ಲಿ ಸಿದ್ಧಪಡಿಸಲಾಗಿದ್ದ ಕೇಕ್ ಕತ್ತರಿಸಲು ಹಿಂದೇಟು ಹಾಕಿದ್ದರು. ಭಾರತದ ಫುಟ್​ಬಾಲ್ ಮಾಂತ್ರಿಕ ಎಂದೇ ಹೆಸರಾಗಿರುವ ಐಎಂ ವಿಜಯನ್ ಈ ಘಟನೆ ಮೆಲುಕು ಹಾಕಿ ದ್ದಾರೆ. 2012ರಲ್ಲಿ ಖಾಸಗಿ ಕಾರ್ಯಕ್ರಮದ ನಿಮಿತ್ತ ಕೇರಳದ ಕಣ್ಣೂರಿಗೆ ಮರಡೋನಾ ಆಗಮಿಸಿದ್ದರು. ಐಎಂ ವಿಜಯನ್ ಕೂಡ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಸಂಘಟಕರು ಫುಟ್​ಬಾಲ್ ಆಕಾರದ ಕೇಕ್ ಕತ್ತರಿಸಲು ಆಹ್ವಾನಿಸಿದಾಗ, ಮರಡೋನಾ ಅದನ್ನು ತಿರಸ್ಕರಿಸಿದ್ದರು ಎಂದು 51 ವರ್ಷದ ವಿಜಯನ್ ಸ್ಮರಿಸಿಕೊಂಡಿದ್ದಾರೆ. ಬಳಿಕ ಕೇಕ್​ನ ಹೊರಭಾಗ ಕತ್ತರಿಸಲಷ್ಟೇ ಒಪ್ಪಿಕೊಂಡರಂತೆ. ಎರಡು ನಿಮಿಷಗಳ ಕಾಲ ಅವರೊಂದಿಗೆ ಫುಟ್​ಬಾಲ್ ಆಡಿದ್ದು, ನನ್ನ ಜೀವನದ ಶ್ರೇಷ್ಠ ಕ್ಷಣ ಎಂದು ಹೇಳಿಕೊಂಡಿದ್ದಾರೆ.

ಮರಡೋನಾ ಸಾವಿನ ಸುದ್ದಿ ಕೇಳುತ್ತಿದ್ದಂತೆ ಅರ್ಜೆಂಟೀನಾ ಫುಟ್​ಬಾಲ್ ಪ್ರೇಮಿಗಳು ಕಣ್ಣೀರಲ್ಲಿ ಮುಳುಗಿದ್ದರು. ಅವರ ಮನೆಯ ಎದುರು ಸಾವಿರಾರು ಜನರು ಜಮಾಯಿಸಿದ್ದರು. ‘ಡೀಗೊ ಎಂದಿಗೂ ಸಾಯುವುದಿಲ್ಲ. ಇಂದು ಮರಡೋನಾ ಎಂಬ ರೂಪಕ ಕಥೆಯ ಉದಯವಾಗಿದೆ. ಅವರು ಅರ್ಜೆಂಟೀನಾದ ಗುರುತು ಎಂದು ಅಭಿಮಾನಿಗಳು ಹೇಳುತ್ತಿದ್ದರು. ದೇಶದೆಲ್ಲೆಡೆಯ ಫುಟ್​ಬಾಲ್ ಕ್ರೀಡಾಂಗಣಕ್ಕೆ ತೆರಳಿದ್ದ ಅಭಿಮಾನಿಗಳು, ಕ್ಯಾಂಡಲ್ ಬೆಳಗುವ ಮತ್ತು ಹೂವುಗಳನ್ನು ಇಡುವ ಮೂಲಕ ಗೌರವ ಸಲ್ಲಿಸಿದರು. ಮರಡೋನಾ ಫುಟ್​ಬಾಲ್ ಕಲಿತ ವಿಲ್ಲಾ ಫಿಯೊರಿಟೊದಲ್ಲಿ ಸೇರಿದ್ದ ಅಭಿಮಾನಿಗಳು ಕಣ್ಣೀರು ಹಾಕದೆ, ‘ಒಲೆ ಒಲೆ ಡೀಗೋ ಡೀಗೋ’ ಎಂದು ಹಾಡುತ್ತಿದ್ದರು. ‘ಡೀಗೋ ಸರ್ವಶ್ರೇಷ್ಠ. ಅವರು ದೇಶದ ಹೆಮ್ಮೆ’ ಎಂಬ ಘೋಷಣೆಗಳನ್ನೂ ಕೂಗುತ್ತಿದ್ದರು.
ಹೃದಯಾಘಾತದಿಂದ ನಿಧನ ಹೊಂದಿದ ಫುಟ್​ಬಾಲ್ ದಿಗ್ಗಜ ಡೀಗೊ ಮರಡೋನಾ ಮೃತದೇಹದ ಅಂತ್ಯಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಗುರುವಾರ ಬ್ಯೂನಸ್ ಐರಿಸ್​ನ ಪ್ರೆಸಿಡೆನ್ಶಿಯಲ್ ಪ್ಯಾಲೆಸ್​ನಲ್ಲಿ ನೆರವೇರಿತು. ಕುಟುಂಬದ ಸದಸ್ಯರ ಜತೆಗೆ ಮಾಜಿ ಸಹ-ಆಟಗಾರರು ಕೂಡ ಪಾಲ್ಗೊಂಡಿದ್ದರು. ಕರೊನಾ ಭೀತಿಯ ನಡುವೆಯೂ ಸಾವಿರಾರು ಜನರು ಗವರ್ನಮೆಂಟ್ ಹೌಸ್​ನಲ್ಲಿ ಅಂತಿಮ ದರ್ಶನ ಪಡೆದರು. ಶವಪೆಟ್ಟಿಗೆಯ ಮೇಲೆ ಅರ್ಜೆಂಟೀನಾದ ಧ್ವಜದ ಜತೆಗೆ ರಾಷ್ಟ್ರೀಯ ತಂಡದ 10 ನಂಬರ್​ನ ಜೆರ್ಸಿಯನ್ನೂ ಇಡಲಾಗಿತ್ತು. ಈ ವೇಳೆ ಎಲ್ಲರಿಗೂ ಮಾಸ್ಕ್ ಧರಿಸಿ ಬರಲು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸರ್ಕಾರ ಸೂಚಿಸಿತ್ತು. ಆದರೂ ಜನರ ನೂಕುನುಗ್ಗಲಿನಿಂದ ಪೊಲೀಸರ ಜತೆಗೆ ಘರ್ಷಣೆಯೂ ನಡೆಯಿತು. ಅರ್ಜೆಂಟೀನಾದ 7 ಅಧ್ಯಕ್ಷರ ಸಮಾಧಿ ಇರುವ ಸ್ಥಳದಲ್ಲೇ ಫುಟ್​ಬಾಲ್ ದಿಗ್ಗಜನ ಅಂತ್ಯಕ್ರಿಯೆ ನಡೆಸಲು ಅವಕಾಶ ಕಲ್ಪಿಸಲಾಯಿತು. ಇದಕ್ಕಿಂತ ದೇಶದ ಮತ್ತೋರ್ವ ಕ್ರೀಡಾ ದಿಗ್ಗಜರಾಗಿದ್ದ 5 ಬಾರಿಯ ಎಫ್1 ಚಾಂಪಿಯನ್ ಜುವಾನ್ ಮ್ಯಾನ್ಯುಯೆಲ್ ಫಾಗ್ನಿಯೋಗೂ 1995ರಲ್ಲಿ ಈ ಗೌರವ ಲಭಿಸಿತ್ತು.
ಮರಡೋನಾ ವೃತ್ತಿಜೀವನದ ಕಪ್ಪುಚುಕ್ಕೆ ಹ್ಯಾಂಡ್ ಆಫ್ ಗಾಡ್ ಗೋಲು. 1986ರ ಫಿಫಾ ವಿಶ್ವಕಪ್ ಕ್ವಾರ್ಟರ್​ಫೈನಲ್​ನಲ್ಲಿ ಮರಡೋನಾ ಕೈನಲ್ಲಿ ಹೊಡೆದು ಗಳಿಸಿದ ಈ ಗೋಲು ಕುಖ್ಯಾತವಾದರೂ, ಅವರಿಗೆ ಅದರ ಬಗ್ಗೆ ಖೇದವೇನೂ ಇರಲಿಲ್ಲ. ಅದೊಂದು ಆಕಸ್ಮಿಕ ಎಂದು ಅವರು ಹೇಳುತ್ತಿದ್ದರು. ಆ ದಿನ ಪಂದ್ಯದ ಪೂರ್ವಾರ್ಧದಲ್ಲಿ ಇಂಗ್ಲೆಂಡ್- ಅರ್ಜೆಂಟೀನಾ ಗೋಲು ಗಳಿಸಲು ವಿಫಲವಾಗಿದ್ದವು. 51ನೇ ನಿಮಿಷದಲ್ಲಿ ಮರಡೋನಾ ತಮ್ಮ ಜೊತೆಗಾರ ಜಾರ್ಜ್ ವಾಲ್ಡಾನೊ ಜತೆ ಜುಗಲ್ಬಂದಿಯಲ್ಲಿ ಚೆಂಡನ್ನು ಇಂಗ್ಲೆಂಡ್ ಆವರಣದೊಳಗೆ ನುಗ್ಗಿಸಿದರು. ಈ ಸಂದರ್ಭದಲ್ಲಿ ಇಂಗ್ಲಿಷ್ ಡಿಫೆಂಡರ್ ಸ್ಟೀವ್ ಹಾಜ್ ಪೆನಾಲ್ಟಿ ಆವರಣದಿಂದ ಚೆಂಡನ್ನು ಹೊರದಬ್ಬುವ ಯತ್ನದಲ್ಲಿ ಎಡವಿದರು. ಚೆಂಡು ಮೇಲಕ್ಕೆ ಚಿಮ್ಮಿತು. ಈ ಸಂದರ್ಭದಲ್ಲಿ ಮರಡೋನಾ ಇಂಗ್ಲಿಷ್ ಗೋಲಿ ಪೀಟರ್ ಶಿಲ್ಟನ್​ರನ್ನು ವಂಚಿಸಿ ಮೇಲಕ್ಕೆ ಜಿಗಿದು ಚೆಂಡನ್ನು ಎಡಗೈನಿಂದ ಗುದ್ದಿ ಗೋಲುಪೆಟ್ಟಿಗೆಯೊಳಗೆ ಸೇರಿಸಿದರು. ತೀವ್ರ ತುರುಸಿನ ಹೋರಾಟದ ಈ ಕ್ಷಣದಲ್ಲಿ ಮರಡೋನಾರ ಕೈ ಪ್ರಯೋಗವನ್ನು ರೆಫ್ರಿ ಅಲಿ ಬಿನ್ ನಾಸರ್ ಗಮನಿಸಲಿಲ್ಲ. ಹಾಗಾಗಿ ಗೋಲನ್ನು ಮಾನ್ಯ ಮಾಡಿದರು. ಇಂಗ್ಲೆಂಡ್ ಪ್ರತಿಭಟಿಸಿದರೂ ಪ್ರಯೋಜನವಾಗಲಿಲ್ಲ. ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಕುರಿತ ಪ್ರಶ್ನೆಗೆ ತಮಾಷೆಯಾಗಿ ಉತ್ತರಿಸಿದ ಮರಡೋನಾ, ’ಆ ಗೋಲನ್ನು ಸ್ವಲ್ಪ ಮರಡೋನಾ ತಲೆಯಿಂದ, ಸ್ವಲ್ಪ ದೇವರ ಕೈ ನೆರವಿನಿಂದ ಗಳಿಸಿದರು’ ಎಂದರು. ಅವರ ದೇವರ ಕೈ ಉಲ್ಲೇಖ ಇತಿಹಾಸಪ್ರಸಿದ್ಧವಾಗಿ ಉಳಿದುಹೋಯಿತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 10 =
Remember me
