ನವದೆಹಲಿ:ಗಣರಾಜ್ಯೋತ್ಸವದ ದಿನದಂದು ಕರ್ತವ್ಯಪಥದಲ್ಲಿ ನಡೆಯಲಿರುವ ಸೇನಾಪಡೆಗಳ ಆಕರ್ಷಕ ಪಥ ಸಂಚಲನದಲ್ಲಿ ಭಾರತೀಯ ನೌಕಾದಳದ ತುಕಡಿಯನ್ನು ಮಂಗಳೂರು ಮೂಲದ ನೌಕಾಪಡೆಯ ಲೆಫ್ಟಿನೆಂಟ್ ಕಮಾಂಡರ್ ದಿಶಾ ಅಮೃತ್ ಮುನ್ನಡೆಸಲಿದ್ದಾರೆ. ರಾಜಪಥ ಕರ್ತವ್ಯಪಥವಾಗಿ ಬದಲಾದ ಬಳಿಕ ನಡೆಯುತ್ತಿರುವ ಮೊದಲ ಗಣರಾಜ್ಯೋತ್ಸವ ಇದಾಗಿದೆ.
ಅಂಡಮಾನ್ ನಿಕೋಬಾರ್ ಕಮಾಂಡ್​ನಲ್ಲಿ ನಿಯೋಜನೆಗೊಂಡಿರುವ ನೌಕಾ ವಾಯು ಕಾರ್ಯಾಚರಣೆಯ ಅಧಿಕಾರಿ ಲೆಫ್ಟಿನೆಂಟ್ ಕಮಾಂಡರ್ ದಿಶಾ ಅಮೃತ್ (29) ಒಟ್ಟು 144 ಸದಸ್ಯರ ಯುವ ನಾವಿಕರ ತಂಡವನ್ನು ಮುನ್ನಡೆಸಲಿದ್ದಾರೆ. ಇದರಲ್ಲಿ ಮೂವರು ಮಹಿಳೆಯರು ಮತ್ತು ಐವರು ಪುರುಷರು ಅಗ್ನಿವೀರರಾಗಿ ತರಬೇತಿ ಪಡೆಯುತ್ತಿದ್ದಾರೆ. ಮತ್ತೊಬ್ಬ ಮಹಿಳಾ ಅಧಿಕಾರಿ ಸಬ್ -ಲೆಫ್ಟಿನೆಂಟ್ ಎಸ್. ವಲ್ಲಿ ಮೀನಾ ಮೂರು ದಳದ ಕಮಾಂಡರ್​ಗಳಲ್ಲಿ ಒಬ್ಬರಾಗಿರುತ್ತಾರೆ.
ನಾರಿಶಕ್ತಿ:ನೌಕಾದಳದ ಸ್ತಬ್ಧಚಿತ್ರವು ‘ನಾರಿಶಕ್ತಿ’ಯನ್ನು ಧ್ಯೇಯವಾಗಿ ಹೊಂದಿದೆ. ಮೇಕ್ ಇನ್ ಇಂಡಿಯಾದಡಿ ತಯಾರಿಸಿದ ಸ್ಕಾರ್ಪೀನ್, ಕಲ್ವರಿ ಜಲಾಂತರ್ಗಾಮಿ ನೌಕೆಗಳು ಸೇರಿದಂತೆ ನೌಕಾಪಡೆಯ ಬಹು ಆಯಾಮದ ಸಾಮರ್ಥ್ಯ ಪರೇಡ್​ನಲ್ಲಿ ಪ್ರದರ್ಶನಗೊಳ್ಳಲಿದೆ. ಮುಂಚೂಣಿಯ ಯುದ್ಧ ನೌಕೆಗಳಲ್ಲಿ ಅಂದಾಜು 30 ಮಹಿಳಾ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ನೌಕಾಪಡೆಯು ಮಹಿಳೆಯರನ್ನು ವಿಮಾನ, ಹೆಲಿಕಾಪ್ಟರ್ ಪೈಲಟ್​ಗಳು ಮತ್ತು ವಾಯು ಕಾರ್ಯಾಚರಣೆಯ ಅಧಿಕಾರಿಗಳನ್ನಾಗಿ ನೇಮಿಸಿಕೊಳ್ಳುತ್ತದೆ. ಆದರೆ, ಲೆಫ್ಟಿನೆಂಟ್ ದಿಶಾ ‘ಮಹಿಳಾ ಅಧಿಕಾರಿ’ ಎಂದು ಕರೆಸಿಕೊಳ್ಳುವ ಬದಲು ‘ಅಧಿಕಾರಿ’ ಎಂದು ಕರೆಸಿಕೊಳ್ಳಲು ಇಷ್ಟಪಡುತ್ತಾರೆ ಎಂದು ವಾಯುಪಡೆ ಮೂಲಗಳು ತಿಳಿಸಿವೆ. ‘ನಾನು ಪುರುಷ ಸಹೋದ್ಯೋಗಿಗಳಷ್ಟೇ ಸಮನಾಗಿದ್ದೇನೆ. ಅದನ್ನು ಸಾಬೀತು ಕೂಡ ಮಾಡಿದ್ದೇನೆ. ನೌಕಾಪಡೆಯ ಕವಾಯತು ತಂಡವನ್ನು ಮುನ್ನಡೆಸುವುದು ನನ್ನ ಜೀವಮಾನದ ಅದ್ಭುತ ಅವಕಾಶ’ ಎಂದು ದಿಶಾ ಹೇಳಿದ್ದಾರೆ.
ವಿದ್ಯಾರ್ಥಿಯಾಗಿಯೂ ಪರೇಡ್​ನಲ್ಲಿ ಭಾಗಿ:ದಿಶಾ ಅಮೃತ್ ಮಂಗಳೂರಿನ ಬೋಳೂರಿನ ತಿಲಕ್​ನಗರದವರು. ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ತಂದೆ ಅಮೃತ್​ಕುಮಾರ್ ಮತ್ತು ತಾಯಿ ಲೀಲಾ. ಬಾಲ್ಯದಿಂದಲೇ ನೌಕಾಪಡೆಯ ಅಧಿಕಾರಿಯಾಗಬೇಕೆಂಬ ಆಸೆ ಹೊಂದಿದ್ದ ದಿಶಾ, ಶಾಲೆಯಲ್ಲಿ ಕಲಿಯುತ್ತಿರುವಾಗಲೇ ದಿಲ್ಲಿಯ ಗಣರಾಜ್ಯೋತ್ಸವ ಪರೇಡ್​ಗೆ ಆಯ್ಕೆಯಾಗಿದ್ದರು.
ಇಂಜಿನಿಯರಿಂಗ್ ವ್ಯಾಸಂಗ ಮಾಡುವಾಗಲೇ ನೌಕಾಪಡೆಯ ವಿವಿಧ ಅರ್ಹತಾ ಪರೀಕ್ಷೆಗಳನ್ನು ಎದುರಿಸಿದ್ದರು. ಕೆಲವು ಬಾರಿ ಇದರಲ್ಲಿ ವಿಫಲರಾದರೂ ಛಲ ಬಿಡದೆ ನೌಕಾಪಡೆಯ ವಿಶೇಷ ಅಧಿಕಾರಿಯಾಗಿ ನೇಮಕಗೊಂಡರು. 2016ರಲ್ಲಿ ನೌಕಾಪಡೆಗೆ ಸೇರಿದ ದಿಶಾ, 2017ರಲ್ಲಿ ತರಬೇತಿಯನ್ನು ಪೂರ್ಣಗೊಳಿಸಿದ ನಂತರ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಕರ್ತವ್ಯಕ್ಕೆ ನಿಯೋಜಿತರಾಗಿದ್ದಾರೆ.
2008ರಿಂದಲೇ ಸಶಸ್ತ್ರ ಪಡೆಗಳ ಗಣರಾಜ್ಯೋತ್ಸವ ದಿನದ ತುಕಡಿಯ ಭಾಗವಾಗುವ ಕನಸು ಹೊಂದಿದ್ದೆ. ನನ್ನ ತಂದೆ ಕೂಡ ಸಶಸ್ತ್ರ ಪಡೆಯ ಭಾಗವಾಗಲು ಬಯಸಿದ್ದರು. ಆದರೆ ಅವರಿಗೆ ಸಾಧ್ಯವಾಗಲಿಲ್ಲ. ನಾನು ನೌಕಾಪಡೆಯ ಭಾಗವಾಗಿರುವುದಕ್ಕೆ ಹೆಮ್ಮೆಇದೆ. ಸಂಪೂರ್ಣ ಉತ್ಸಾಹ ಮತ್ತು ಸಮರ್ಪಣೆಯೊಂದಿಗೆ ಸೇವೆ ಮುಂದುವರಿಸುತ್ತೇನೆ’ ಎಂದು ದಿಶಾ ಹೇಳಿದ್ದಾರೆ.
ನಾಯಿಯನ್ನು ನಾಯಿ ಎಂದ ಪಕ್ಕದ ಮನೆಯವನನ್ನು ಕೊಂದೇ ಬಿಟ್ಟ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − one =
Remember me
