ನ್ಯೂಯಾರ್ಕ್:‘ಚಿಕಿತ್ಸೆಗೆ ಸ್ಪಂದಿಸದೆ ಇನ್ನೇನು ಸಾವಿನ ಅಂತಿಮ ಕ್ಷಣದಲ್ಲಿದ್ದಾರೆಂಬುದು ತಿಳಿದ ತಕ್ಷಣವೇ ಅವರ ಕುಟುಂಬಸ್ಥರಿಗೆ ವಿಡಿಯೋ ಕಾಲ್ ಮಾಡುತ್ತೇವೆ. ಸೋಂಕಿತರ ಕಿವಿ, ಕಣ್ಣು ವಿಡಿಯೋ ಕಾಲ್​ನತ್ತ ಗಮನ ಹರಿಸಿದ್ದರೆ ಕೈಗಳು ಮಾತ್ರ ನಮ್ಮನ್ನು ಬಿಗಿಯಾಗಿ ಹಿಡಿದಿರುತ್ತವೆ. ಕೈ ಹಿಡಿದೇ ಕೊನೆಯುಸಿರೆಳೆಯುತ್ತಾರೆ. ಜೀವನ ಪೂರ್ತಿ ಜತೆಗಿದ್ದವರನ್ನೂ ಸಾವಿನ ಕ್ಷಣದಲ್ಲಿ ಹತ್ತಿರಕ್ಕೆ ಬರಲು ಅವಕಾಶ ನೀಡದ ಈ ಕರೊನಾ ಕ್ರೌರ್ಯ ಕಂಡು ಬೇಸರವಾಗುತ್ತದೆ….’
ಕರೊನಾಗೆ ಅತಿ ಹೆಚ್ಚು ಸಂಕಷ್ಟ ಅನುಭವಿಸಿರುವ ಅಮೆರಿಕದ ವಾಣಿಜ್ಯ ನಗರಿ ನ್ಯೂಯಾರ್ಕ್​ನಲ್ಲಿ ಕಳೆದೆರಡು ತಿಂಗಳಿಂದ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ, ಖುದ್ದು ಸೋಂಕಿಗೆ ಒಳಗಾಗಿ ಸಾವನ್ನೇ ಗೆದ್ದು ಬಂದಿರುವ ಕನ್ನಡತಿ ಡಾ.ಜೆ.ಒ. ನೀಮಾ ಅವರ ವಿಷಾದದ ನುಡಿಗಳಿವು. ತುಮಕೂರಿನ ಇಂಜಿನಿಯರ್ ಜೆ.ಪಿ. ಓಂಕಾರ ಮೂರ್ತಿ ಅವರ ಪುತ್ರಿ ನೀಮಾ ಬೆಂಗಳೂರಿನ ಕೆಂಪೇಗೌಡ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪೂರ್ಣಗೊಳಿಸಿ ಇದೀಗ ಕೊಲಂಬಿಯಾ ವಿಶ್ವವಿದ್ಯಾಲಯಕ್ಕೆ ಒಳಪಟ್ಟ ಸಾರ್ವಜನಿಕ ಆಸ್ಪತ್ರೆಯೊಂದರಲ್ಲಿ ಜನರಲ್ ಮೆಡಿಸಿನ್ ಕೋರ್ಸ್​ನ
ಪ್ರಥಮ ವರ್ಷದ ವಿದ್ಯಾರ್ಥಿನಿಯಾಗಿದ್ದಾರೆ. ಕರೊನಾ ಪೀಡಿತರ ಕರುಣಾಜನಕ ಕತೆಗಳನ್ನು ಅವರದೇ ಮಾತುಗಳಲ್ಲಿ ಕೇಳಿ… ‘ಕೇವಲ ದ್ವಿತೀಯ ಮತ್ತು ತೃತೀಯ ವರ್ಷದ ವಿದ್ಯಾರ್ಥಿಗಳಷ್ಟೇ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಬೇಕು.
ಪ್ರಥಮ ವರ್ಷದವರು ಅವರಿಗೆ ಸಹಾಯಕರಾಗಷ್ಟೇ ಇರಬೇಕು ಎಂದು ಮಾರ್ಚ್ ಪ್ರಾರಂಭದಲ್ಲಿ ತಿಳಿಸಿದ್ದರು. ಆದರೆ ನ್ಯೂಯಾರ್ಕ್ ಆಸ್ಪತ್ರೆಗಳ ಸಾಮರ್ಥ್ಯಕ್ಕಿಂತಲೂ ದುಪ್ಪಟ್ಟು ಸೋಂಕಿತರು ದಾಖಲಾಗುತ್ತಲೇ ಪ್ರಥಮ, ದ್ವಿತೀಯ, ತೃತೀಯ ಎಂಬ ಅಂತರವಿಲ್ಲದೆ ಎಲ್ಲರನ್ನೂ ಚಿಕಿತ್ಸೆಯಲ್ಲಿ ತೊಡಗಿಸಲಾಯಿತು. ವೈರಸ್ ಕುರಿತು ಅಲ್ಲಿವರೆಗಿದ್ದ ಮಾಹಿತಿ ಆಧಾರದಲ್ಲಿ ಪ್ರತಿನಿತ್ಯ ಹೊಸ ಪ್ರೋಟೋಕಾಲ್ ನೀಡುತ್ತಿದ್ದರು. ವಾರಕ್ಕೊಮ್ಮೆ ವಿಡಿಯೋ ಕಾನ್ಪರೆನ್ಸ್ ಮೂಲಕ ಚಿಕಿತ್ಸಾ ವಿಧಾನದ ಕುರಿತು ಮಾರ್ಗದರ್ಶನ ಮಾಡುತ್ತಿದ್ದರು.
ಪ್ರಥಮ ವರ್ಷದ ವಿದ್ಯಾರ್ಥಿಗಳಿಗೂ ಇಂತಿಷ್ಟು ರೋಗಿಗಳನ್ನು ನಿಗದಿಪಡಿಸಿ ಚಿಕಿತ್ಸೆ ನೀಡಲು ಸೂಚಿಸಿದರು. ಪ್ರಾರಂಭದಲ್ಲೇ ಐಸಿಯು ಹೊಣೆ ನೀಡಿದರು. ಅಲ್ಲಿ 12 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದರು. ಕೆಲ ದಿನಗಳ ನಂತರ ಸಣ್ಣಗೆ ಜ್ವರ ಕಾಣಿಸಿಕೊಂಡಿತು. ಆ ಸಮಯದಲ್ಲಿ ನ್ಯೂಯಾರ್ಕ್​ನಲ್ಲಿ ಪರೀಕ್ಷಾ ಕಿಟ್ ಹೆಚ್ಚಾಗಿ ಲಭ್ಯವಿರಲಿಲ್ಲ. ಮನೆಯಲ್ಲಿ ಆರೇಳು ದಿನ ವಿಶ್ರಾಂತಿ ಪಡೆಯಿರಿ, ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡರೆ ಸಂರ್ಪಸಿ ಎಂದು ತಿಳಿಸಿದರು. ನಾಲ್ಕೈದು ದಿನದಲ್ಲಿ ಜ್ವರ ಕಡಿಮೆಯಾಯಿತು, ಕರ್ತವ್ಯಕ್ಕೆ ಹಾಜರಾದೆ. ಆಗ ಪರೀಕ್ಷೆ ನಡೆಸಲಾಯಿತು, ನನಗೂ ಕರೊನಾ ಸೋಂಕು ಹರಡಿರುವುದು ದೃಢಪಟ್ಟಿತ್ತು. ಆದರೂ ಮನೆಗೆ ಕಳಿಸಿ ಕ್ವಾರಂಟೈನ್ ಮಾಡಲೂ ಸಾಧ್ಯವಿರಲಿಲ್ಲ. ಅಷ್ಟು ಪ್ರಮಾಣದಲ್ಲಿ ಸೋಂಕಿತರು ದಾಖಲಾಗುತ್ತಿದ್ದರು. ಸೋಂಕಿತರ ನೋವನ್ನು ನೋಡುವುದೇ ಪ್ರಾರಂಭದಲ್ಲಿ ಅಸಾಧ್ಯವಾಗಿತ್ತು. ಸೋಂಕಿತರು ನಿಧನರಾದ ನಿಧನರಾದ ನಂತರ ಮತ್ತೆ ಅವರ ಕುಟುಂಬಸ್ಥರಿಗೆ ಕರೆ ಮಾಡಿ ಅವರಿಗಿಷ್ಟವಾದ ಚಿತಾಗಾರವನ್ನು ಆಯ್ಕೆ ಮಾಡಲು ತಿಳಿಸುತ್ತೇವೆ. ಅವರೆಲ್ಲ ಅಲ್ಲಿ ಬಂದೇ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಬೇಕು. ಪ್ರತಿನಿತ್ಯ 10-12 ಗಂಟೆ, ಕೆಲವೊಮ್ಮೆ ಅದಕ್ಕೂ ಹೆಚ್ಚು ಸಮಯ ಕರ್ತವ್ಯ ನಿರ್ವಹಿಸುವ ಸನ್ನಿವೇಶ ಎದುರಾಗಿತ್ತು.
ರೋಗಿಗಳನ್ನು ವಿವಿಧ ಔಷಧ ಸಂಯೋಜನೆಯ ಮೂಲಕ ಉಪಚರಿಸಲಾಗುತ್ತಿದ್ದು, ಯಾವ ಔಷಧಿ ಹೆಚ್ಚು ಪರಿಣಾಮಕಾರಿ ಎಂಬ ಸಂಶೋಧನೆ ನಡೆದಿದೆ. ಆದರೆ ತಾವು ಇಲ್ಲಿವರೆಗೆ ಚಿಕಿತ್ಸೆ ನೀಡಿದ್ದರ ಆಧಾರದಲ್ಲಿ Sarilumab ಹಾಗೂ Tociluzumab ಎಂಬ ಔಷಧಗಳ ಸಂಯೋಜನೆಯಿಂದ ಗುಣಮುಖರಾಗುವವರ ಸಂಖ್ಯೆ ಹೆಚ್ಚಿದೆ ಎಂದು ನೀಮಾ ಹೇಳುತ್ತಾರೆ.
ಚೀನಾದಲ್ಲಿ ಸೋಂಕು ಕಾಣಿಸಿಕೊಂಡಾಗ ಅದು ಅಮೆರಿಕಕ್ಕೂ ಹರಡಬಹುದೆಂಬ ಅಂದಾಜು ಇಲ್ಲಿನವರಿಗೆ ಇರಲಿಲ್ಲ. ಮುಂಬೈನಂತೆಯೇ ಅತ್ಯಂತ ಜನನಿಬಿಡ, ಪ್ರವಾಸಿಗರಿಂದ ತುಂಬಿರುವ, ಅತಿ ಹೆಚ್ಚು ಸಮೂಹ ಸಾರಿಗೆ ಮೇಲೆ ಅವಲಂಬಿತವಾಗಿರುವ ನ್ಯೂಯಾರ್ಕ್​ನಲ್ಲಿ ಮನೆಯಿಲ್ಲದವರ ಸಂಖ್ಯೆಯೂ ಬಹುದೊಡ್ಡದು. ಲಾಕ್​ಡೌನ್ ಎಂದಾಕ್ಷಣ ಭಾರತದಂತೆ ಎಲ್ಲವನ್ನೂ ಬಂದ್ ಮಾಡಲಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಂಡು ಪಾರ್ಕ್ ಸೇರಿದಂತೆ ಸಾರ್ವಜನಿಕ ಸ್ಥಳ ಮುಕ್ತವಾಗಿತ್ತು. ಹೋಟೆಲ್​ನಲ್ಲಿ ಪಾರ್ಸೆಲ್ ನೀಡುತ್ತಿದ್ದರು. ಅಂತಾರಾಷ್ಟ್ರೀಯ ವಿಮಾನಗಳನ್ನೂ ಬೇಗನೆ ನಿರ್ಬಂಧಿಸಲಿಲ್ಲ. ಆದರೆ ಭಾರತದಲ್ಲಿ ಪ್ರಾರಂಭಿಕ ಹಂತದಲ್ಲೇ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ನಿರ್ಬಂಧ ವಿಧಿಸಿದರು, ಲಾಕ್​ಡೌನ್ ಜಾರಿ ಮಾಡಿದರು. ಭಾರತದಲ್ಲಿ ಸೋಂಕು ತೀರಾ ಏರದಿರಲು ಬಹುಶಃ ಇದೇ ಪ್ರಮುಖ ಕಾರಣ ಎಂಬುದು ನೀಮಾ ಅಭಿಪ್ರಾಯ.
ಭಾರತದ ಕೆಂಪು ದೀಪದ ಹಿಂದಿದೆ ಕರೊನಾ ಭಯಂಕರ ರಹಸ್ಯ- ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಎಂದಿದೆ ಅಮೆರಿಕ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:2 × three =
Remember me
