ವಿಪಕ್ಷಗಳು ಪಾಕಿಸ್ತಾನದ ಸಂಸತ್ತಿನಲ್ಲಿ ಮಂಡಿಸಿರುವ ಅವಿಶ್ವಾಸ ಗೊತ್ತುವಳಿ ಎದುರಿಸಬೇಕಿರುವ ಸವಾಲಿನ ಮಧ್ಯೆ ಪಾಕಿಸ್ತಾನ ಪ್ರಧಾನಿ, ಪಾಕಿಸ್ತಾನ ತೆಹರಿಕ್ ಇನ್ಸಾಫ್ (ಪಿಟಿಐ) ಪಕ್ಷದ ನಾಯಕ ಇಮ್ರಾನ್ ಖಾನ್​ಗೆ ಸ್ವಪಕ್ಷೀಯರ ಬಂಡಾಯವೇ ದೊಡ್ಡ ತಲೆನೋವಾಗಿ ಕಾಡುತ್ತಿದೆ. ವಿಪಕ್ಷಗಳು ಮಾರ್ಚ್ 21ರಂದು ಅವಿಶ್ವಾಸ ಗೊತ್ತುವಳಿ ಮಂಡಿಸುವ ಸಾಧ್ಯತೆಯಿದ್ದು, ಮಾರ್ಚ್ 28ರಂದು ಮತದಾನ ನಡೆಯಬಹುದು ಎನ್ನಲಾಗಿದೆ.
‘ದೇಶದ ಆರ್ಥಿಕ ಬಿಕ್ಕಟ್ಟು ಹಾಗೂ ಬೆಲೆ ಏರಿಕೆಗೆ ಹಾಲಿ ಸರ್ಕಾರದ ಅರಾಜಕ ನೀತಿಗಳೇ ಕಾರಣವಾಗಿದ್ದು, ಜನವಿರೋಧಿ ಸರ್ಕಾರ ದೇಶಕ್ಕೆ ಬೇಕಿಲ್ಲ’ ಎಂದು ಅವಿಶ್ವಾಸ ಗೊತ್ತುವಳಿ ಮಂಡಿಸಲು ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಮತ್ತು ಪಾಕಿಸ್ತಾನ ಮುಸ್ಲಿಂ ಲೀಗ್ ನವಾಜ್ (ಪಿಎಂಎಲ್-ಎನ್) ನಿರ್ಧರಿಸಿವೆ. ಇಮ್ರಾನ್ ಖಾನ್ ಪಾಕಿಸ್ತಾನದ ಮೈತ್ರಿಕೂಟ ಸರ್ಕಾರ ಮುನ್ನಡೆಸುತ್ತಿದ್ದಾರೆ.
ಸ್ವಪಕ್ಷೀಯರ ವಿರೋಧ:ಸರ್ಕಾರದ ಪಾಲುದಾರ ಪಕ್ಷಗಳು ವಿಪಕ್ಷಗಳ ಜತೆ ಕೈಜೋಡಿಸುವ ಲಕ್ಷಣ ಕಂಡುಬಂದಿರುವ ಮಧ್ಯೆ ಪಿಎಂ ಇಮ್ರಾನ್ ಖಾನ್ ವಿರುದ್ಧ ಅವರದ್ದೇ ಪಕ್ಷದ 24 ಸಂಸದರು ತಿರುಗಿಬಿದ್ದಿರುವುದು ಹೊಸ ಬೆಳವಣಿಗೆ. ಹೀಗಾಗಿ, ಅವಿಶ್ವಾಸ ಗೊತ್ತುವಳಿಯಲ್ಲಿ ಖಾನ್ ಸರ್ಕಾರ ಪರಾಭವಗೊಳ್ಳುವ ಸಾಧ್ಯತೆ ಹೆಚ್ಚಿದೆ. ಮೇಲಾಗಿ, ‘ಇಮ್ರಾನ್ ಸರ್ಕಾರದ ವಿರುದ್ಧವೇ ನಾವು ಮತ ಹಾಕಲಿದ್ದೇವೆ’ ಎಂದು ಬಂಡಾಯ ನಾಯಕರು ಘೊಷಿಸಿದ್ದಾರೆ. ‘ಬೆಲೆ ಏರಿಕೆ ತಡೆಯುವಲ್ಲಿ ಖಾನ್ ವಿಫಲರಾಗಿದ್ದಾರೆ’ ಎಂದು ಪಿಟಿಐ ಸಂಸದ ರಾಜಾ ರಿಯಾಜ್ ಹೇಳಿದ್ದರೆ, ‘ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಖಾನ್​ಗೆ ಸಾಧ್ಯವಾಗಲೇ ಇಲ್ಲ’ ಎಂದು ಮತ್ತೋರ್ವ ಸಂಸದ ನೂರ್ ಆಲಂ ಖಾನ್ ಅಭಿಪ್ರಾಯಪಟ್ಟಿದ್ದಾರೆ. ಈ ಇಬ್ಬರು ಸಂಸದರು ಕೂಡ 24 ಸಂಸದರ ಬಂಡಾಯ ಗುಂಪಿನಲ್ಲಿದ್ದಾರೆ.
ಬಂಡಾಯ ಗುಂಪು ಇಸ್ಲಾಮಾಬಾದ್​ನ ಸಿಂಧ್ ಹೌಸ್​ನಲ್ಲಿ ವಾಸ್ತವ್ಯ ಹೂಡಿದೆ. ಸಿಂಧ್ ಹೌಸ್ ಆಸ್ತಿ ಸಿಂಧ್ ಸರ್ಕಾರಕ್ಕೆ ಸೇರಿದ್ದು, ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಆಡಳಿತ ನೋಡಿಕೊಳ್ಳುತ್ತಿದೆ. ‘ಇಮ್ರಾನ್ ಖಾನ್ ಸರ್ಕಾರದ ಕೆಲವರು ನನಗೆ ಬೆದರಿಕೆ ಹಾಕಿದ್ದರು. ಹೀಗಾಗಿ, ಸಿಂಧ್ ಹೌಸ್​ನಲ್ಲಿ ಆಶ್ರಯ ಕೇಳಿದೆ’ ಎಂದು ಬಂಡಾಯ ಸಂಸದ ಡಾ. ರಮೇಶ್​ಕುಮಾರ್ ವಂಕ್ವಾನಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ಆರೋಪ ತಳ್ಳಿಹಾಕಿರುವ ಪಾಕ್ ಸರ್ಕಾರ, ಆಡಳಿತ ಪಕ್ಷದ ಸಂಸದರಿಗೆ ಭಾರೀ ಪ್ರಮಾಣದ ದುಡ್ಡಿನ ಅಮಿಷವೊಡ್ಡಿ ಖರೀದಿ ಮಾಡಲಾಗಿದೆ ಎಂದು ಕಿಡಿಕಾರಿದೆ.
ಬಂಡಾಯಗಾರರ ವಿರುದ್ಧ ಕ್ರಮ?:ಬಂಡಾಯ ಸಂಸದರನ್ನು ಅನರ್ಹಗೊಳಿಸುವ ಬಗ್ಗೆ ಇಮ್ರಾನ್ ಖಾನ್ ಯೋಚಿಸುತ್ತಿದ್ದು, ಈ ಬಗ್ಗೆ ಕಾನೂನು ಪಂಡಿತರ ಮೊರೆ ಹೋಗಿದ್ದಾರೆ. ಪಕ್ಷದ ನಾಯಕರ ನಿರ್ದೇಶನ ಉಲ್ಲಂಘಿಸಿ ಸರ್ಕಾರದ ವಿರುದ್ಧ ಮತ ಹಾಕಿದರೆ ಅಂಥವರ ವಿರುದ್ಧ ಪಕ್ಷವಿರೋಧಿ ನಡೆ ಅಡಿಯಲ್ಲಿ ಕ್ರಮ ಕೈಗೊಳ್ಳುವ ಅವಕಾಶ ಇದೆ ಎನ್ನಲಾಗಿದೆ. ಪ್ರಧಾನಿ ಬಲಹೀನಗೊಂಡಿದ್ದಾರೆ ಎಂಬ ಅಭಿಪ್ರಾಯ ಗಟ್ಟಿಯಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಮತ್ತು ಪಕ್ಷದ ಬಲಪ್ರದರ್ಶನಕ್ಕೂ ಮುಂದಾಗಿರುವ ಇಮ್ರಾನ್, ಮಾರ್ಚ್ 27ರಂದು ಇಸ್ಲಾಮಾಬಾದ್​ನಲ್ಲಿ ಬೃಹತ್ ಸಮಾವೇಶ ಆಯೋಜಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಮಾರ್ಚ್ 25ರಂದು ವಿಪಕ್ಷಗಳು ಇಸ್ಲಾಮಾಬಾದ್​ನಲ್ಲಿ ಸಂಸತ್ತಿನ ಎದುರು ಭಾಗದಲ್ಲಿರುವ ಡಿ-ಚೌಕ್​ನಲ್ಲಿ ಜಮಾವಣೆಗೊಳ್ಳುವಂತೆ ತಮ್ಮ ಕಾರ್ಯಕರ್ತರಿಗೆ ಸೂಚನೆ ಕೊಟ್ಟಿವೆ.
342 ಸಂಸದರು:ಪಾಕಿಸ್ತಾನದ ಸಂಸತ್ (ನ್ಯಾಷನಲ್ ಅಸೆಂಬ್ಲಿ) ಒಟ್ಟು 342 ಸದಸ್ಯರನ್ನು ಹೊಂದಿದ್ದು, ಹಾಲಿ ಸರ್ಕಾರವನ್ನು ಕೆಳಗಿಳಿಸಲು ವಿಪಕ್ಷಗಳು 272 ಮತಗಳನ್ನು ಗಳಿಸಬೇಕು. 2018ರಲ್ಲಿ ಅಧಿಕಾರಕ್ಕೆ ಬಂದ ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಪಕ್ಷ 155 ಸಂಸದರನ್ನು ಹೊಂದಿದ್ದು, ಇತರ ಪಕ್ಷಗಳ 23 ಸಂಸದರು ಬೆಂಬಲ ಸರ್ಕಾರಕ್ಕಿದೆ. ಆದರೆ, ಮಿತ್ರಪಕ್ಷಗಳು ವಿಪಕ್ಷಗಳೊಂದಿಗೆ ಕೈಜೋಡಿಸಿ ತೆರೆಮರೆಯಲ್ಲೇ ಖಾನ್ ಸರ್ಕಾರದ ವಿರುದ್ಧ ಕಾರ್ಯತಂತ್ರ ರೂಪಿಸಿವೆ.
ಮೌನವಾಗಿದೆ ಸೇನೆ:ಈ ಎಲ್ಲ ಬಿಕ್ಕಟ್ಟುಗಳ ಮಧ್ಯೆ ಪಾಕಿಸ್ತಾನ ಸೇನೆ ಮಾತ್ರ ಮೌನವಾಗಿದ್ದು, ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಈ ವಿಷಯದಲ್ಲಿ ಸೇನೆ ತಟಸ್ಥ ಧೋರಣೆ ತಳೆದಿದೆ ಎಂದು ಸೇನೆಯ ವಕ್ತಾರ ತಿಳಿಸಿರುವುದೂ ಇಮ್ರಾನ್ ಖಾನ್ ಅತೃಪ್ತಿ ಹೆಚ್ಚಿಸಿದೆ. ಖೈಬರ್ ಪಖ್ತುಂಕ್ವಾದಲ್ಲಿ ನಡೆಸಿದ್ದ ರ್ಯಾಲಿಯಲ್ಲಿ ಸೇನೆ ವಿರುದ್ಧ ವಾಗ್ದಾಳಿ ನಡೆಸಿದ್ದ ಖಾನ್, ‘ಮನುಷ್ಯರಾದವರು ನಾವು ಯಾರ ಪರ ಇದ್ದೇವೆ ಎಂದು ಖಚಿತಪಡಿಸುತ್ತಾರೆ. ತಟಸ್ಥ ಎನ್ನುವವರು ಪ್ರಾಣಿಗಳು’ ಎಂದು ಸೇನೆಯ ಅಧಿಕಾರಿಗಳನ್ನು ಪ್ರಾಣಿಗಳಿಗೆ ಹೋಲಿಸಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − four =
Remember me
