|ರಾಘವ ಶರ್ಮ ನಿಡ್ಲೆವಾರಾಣಸಿ (ಉತ್ತರ ಪ್ರದೇಶ)
ಉತ್ತರ ಪ್ರದೇಶದಲ್ಲಿ 7 ಸುತ್ತಿನ ಮತದಾನ ಅಂತ್ಯಗೊಂಡಿದೆ. ರಾಜಕೀಯ ಪಕ್ಷಗಳು ಮಾರ್ಚ್ 10ರ ಫಲಿತಾಂಶವನ್ನು ಕುತೂಹಲದಿಂದ ಎದುರು ನೋಡುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಜನಪ್ರಿಯತೆಯೇ ಆಡಳಿತಾರೂಢ ಬಿಜೆಪಿಗೆ ಭರವಸೆಯ ಆಶಾಕಿರಣ. ಇಬ್ಬರ ಜನಪ್ರಿಯತೆಯ ಅಲೆಗೆ ವ್ಯತಿರಿಕ್ತವಾಗಿ ಶಾಸಕರ ಮೇಲಿನ ವಿರೋಧಿ ಅಲೆಯೇ ಸಮಾಜವಾದಿ ನೇತೃತ್ವದ ಮೈತ್ರಿಕೂಟಕ್ಕೆ ಹಲವೆಡೆ ಲಾಭ ತರುವ ಸಾಧ್ಯತೆಗಳಿವೆ.
ಬೆಲೆ ಏರಿಕೆ ಮತ್ತು ನಿರುದ್ಯೋಗ ಪ್ರಮಾಣ ಹೆಚ್ಚಳದ ಅಸಮಾಧಾನದ ದನಿಗಳ ಮಧ್ಯೆಯೂ ಪ್ರಧಾನಿ ನರೇಂದ್ರ ಮೋದಿ ಈಗಲೂ ಅತಿದೊಡ್ಡ ರಾಜ್ಯದಲ್ಲಿ ತಮ್ಮ ಜನಪ್ರಿಯತೆ ಕಾಯ್ದುಕೊಂಡಿರುವುದು ವಿಶೇಷವೇ ಸರಿ. ಅದೇ ರೀತಿ, ಮುಖ್ಯಮಂತ್ರಿಯಾಗಿ ರಾಜ್ಯವನ್ನು ಅಭಿವೃದ್ಧಿಯ ಹಾದಿಯಲ್ಲಿ ಕೊಂಡೊಯ್ಯುತ್ತಿರುವ ‘ಬುಲ್ಡೋಜರ್ ಬಾಬಾ’ ಯೋಗಿ ಆದಿತ್ಯನಾಥ ಕೂಡ ಜನಮನ ಗೆದ್ದಿದ್ದಾರೆ.
ಸ್ವಾರ್ಥಸಾಧನೆ, ಸ್ವಜನಪಕ್ಷಪಾತ, ಭ್ರಷ್ಟಾಚಾರಗಳಿಂದ ದೂರವಿರುವ ಬಾಬಾ ಜೀ ಆಡಳಿತಶೈಲಿಯನ್ನು ರಾಜ್ಯದ ಜನತೆ ನೆಚ್ಚಿಕೊಂಡಂತಿದೆ. ಜನರ ಬಗ್ಗೆ ನೈಜ ಕಾಳಜಿ ಹೊಂದಿದ್ದಾರೆ ಎಂಬ ಸದಭಿಪ್ರಾಯ ಕೆಲವು ಮುಸ್ಲಿಂ ಧರ್ವಿುಯರಲ್ಲೂ ಕಂಡುಬಂದಿರುವುದು ಹೊಸ ಬೆಳವಣಿಗೆ. ಆದರೆ, ಇವೆಲ್ಲವೂ ಎಷ್ಟರಮಟ್ಟಿಗೆ ಮತಗಳಾಗಿ ಪರಿವರ್ತನೆಯಾಗುತ್ತವೆ ಎನ್ನುವ ಸಹಜ ಪ್ರಶ್ನೆ ಅನೇಕರಲ್ಲಿದೆ. ಏಕೆಂದರೆ, ಕಳೆದ 40 ವರ್ಷಗಳಿಂದ ಉತ್ತರ ಪ್ರದೇಶದಲ್ಲಿ ಪ್ರತಿ ಚುನಾವಣೆಗೆ ಸರ್ಕಾರಗಳು ಬದಲಾಗಿವೆ. ಬಿಜೆಪಿಯ ಕಲ್ಯಾಣ್ ಸಿಂಗ್, ರಾಜನಾಥ್ ಸಿಂಗ್, ಸಮಾಜವಾದಿ ಪಾರ್ಟಿಯ ಮುಲಾಯಂ ಸಿಂಗ್ ಯಾದವ್, ಅಖಿಲೇಶ್ ಯಾದವ್, ಬಿಎಸ್​ಪಿಯ ಮಾಯಾವತಿಗೆ ಸತತ ಎರಡನೇ ಬಾರಿಗೆ ಚುನಾವಣೆ ಗೆಲ್ಲಲಾಗಿಲ್ಲ. ಅವರೆಲ್ಲರಿಗೆ ಅಸಾಧ್ಯವಾಗಿದ್ದನ್ನು ಯೋಗಿ ಸಾಧ್ಯವಾಗಿಸಿದಲ್ಲಿ ದೇಶದ ಅತಿದೊಡ್ಡ ರಾಜ್ಯ ಹೊಸ ರಾಜಕೀಯ ಇತಿಹಾಸಕ್ಕೆ ಸಾಕ್ಷಿಯಾಗಲಿದೆ.
ಮೋದಿ-ಯೋಗಿ ಗಳಿಸಿದ ಪ್ರಸಿದ್ಧಿಯನ್ನು ಉ.ಪ್ರ.ದ ಆಡಳಿತಾರೂಢ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಗಳಿಸದಿರುವುದು ಬಿಜೆಪಿಗೆ ಹಾನಿ ಮಾಡಿದೆ. ಇದಕ್ಕೊಂದು ಸಣ್ಣ ಉದಾಹರಣೆ ವಾರಾಣಸಿ ದಕ್ಷಿಣ ಕ್ಷೇತ್ರ. ಕಾಶಿ ವಿಶ್ವನಾಥ ಕಾರಿಡಾರ್ ನಿರ್ಮಾಣ ಮಾಡಿ ಹಿಂದೂ ಶ್ರದ್ಧಾಳುಗಳ ಮೆಚ್ಚುಗೆಗೆ ಪಿಎಂ ಮೋದಿ ಪಾತ್ರರಾದರೂ, ಇದೇ ವಿಶ್ವನಾಥ ದೇಗುಲ ಬರುವ ವಾರಾಣಸಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ನೀಲಕಾಂತ್ ತಿವಾರಿ ಬಗ್ಗೆ ಮತದಾರರಿಗೆ ತೀವ್ರ ಆಕ್ರೋಶವಿದೆ. ‘ನಮಗೆ ಮೋದಿ-ಯೋಗಿ ಬಗ್ಗೆ ಯಾವುದೇ ಅಸಮಾಧಾನಗಳಿಲ್ಲ. ಆದರೆ, ಕಣ್ಣಿಗೇ ಕಾಣದ, ಜನರ ಬಗ್ಗೆ ಕಾಳಜಿ ತೋರದ ತಿವಾರಿಯವರನ್ನು ಮತ್ತೊಮ್ಮೆ ಏಕೆ ಗೆಲ್ಲಿಸಬೇಕು’ ಎಂಬ ಮತದಾರರ ಪ್ರಶ್ನೆಗಳು ಬಿಜೆಪಿಯ ದುಗುಡ ಹೆಚ್ಚಿಸಿದೆ. ಇದೇ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ವಾರಾಣಸಿ ವ್ಯಾಪ್ತಿಯಲ್ಲಿ ಮೂರು ದಿನಗಳನ್ನು ಕಳೆದು, ಬೃಹತ್ ರ್ಯಾಲಿಗಳನ್ನು ನಡೆಸಿದರು. ಕಾರ್ಯಕರ್ತರು, ಜನರೊಂದಿಗೆ ಬೆರೆತರು, ಚಹಾ ಸವಿದರು.
2017ರ ವಿಧಾನಸಭೆ ಚುನಾವಣೆಯಲ್ಲಿ ವಾರಾಣಸಿಯ 8 ಕ್ಷೇತ್ರಗಳನ್ನು ಗೆದ್ದಿದ್ದ ಬಿಜೆಪಿಗೆ ಮತ್ತೊಮ್ಮೆ ಈ ಸಾಧನೆ ಪುನರಾವರ್ತಿಸುವುದು ಪ್ರತಿಷ್ಠೆಯ ವಿಷಯ. ಒಂದುವೇಳೆ, ನೀಲಕಾಂತ್ ತಿವಾರಿ ಗೆದ್ದರೆ ಅದು ಮೋದಿ-ಯೋಗಿ ಕಾರಣಕ್ಕಾಗಿಯೇ ವಿನಾ ಅದರಲ್ಲಿ ತಿವಾರಿ ಪಾತ್ರ ಶೂನ್ಯ! ಈ ಮಾತು ಅಯೋಧ್ಯೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೇದಪ್ರಕಾಶ್​ಗೂ ಅನ್ವಯ. ಪೂರ್ವ ಉತ್ತರ ಪ್ರದೇಶದ ಸೋನ್​ಭದ್ರ ಜಿಲ್ಲೆಯ ರಾಬರ್ಟ್ಸ್​ಗಂಜ್ ಕ್ಷೇತ್ರದ ಬಿಜೆಪಿ ಶಾಸಕ ಭೂಪೇಶ್ ಚೌಬೆ ಚುನಾವಣಾ ರ್ಯಾಲಿಯೊಂದರಲ್ಲಿ ಕುರ್ಚಿ ಮೇಲೆ ಬಸ್ಕಿ ತೆಗೆಯುತ್ತ, ‘ನನ್ನಿಂದ ತಪ್ಪಾಗಿದೆ, ನೀವು ಕ್ಷಮಿಸಿ ಮತಹಾಕಬೇಕು’ ಎಂದು ಕೇಳಿಕೊಂಡಿದ್ದ ದೃಶ್ಯಗಳು ಎಲ್ಲೆಡೆ ವೈರಲ್ ಆಗಿದ್ದವು. ಹೀಗೆ, ಕೇಂದ್ರ ಮತ್ತು ಪೂರ್ವ ಉತ್ತರ ಪ್ರದೇಶದಲ್ಲಿ ಬಿಜೆಪಿ ಶಾಸಕರ ಬಗ್ಗೆ ಜನಾಕ್ರೋಶವಿರುವ ಹಲವು ಕ್ಷೇತ್ರಗಳಿದ್ದು, ವಿರೋಧಿ ಮತಗಳು ಸಮಾಜವಾದಿ ಪಾಲಾಗುವ ಲಕ್ಷಣಗಳಿವೆ. ಹೀಗಾಗಿ, ಇಂಥ ಕ್ಷೇತ್ರಗಳ ಅಭ್ಯರ್ಥಿಗಳೆಲ್ಲರೂ ಬರೀ ಮೋದಿ-ಯೋಗಿ ಹೆಸರಲ್ಲೇ ಮತ ಯಾಚಿಸಿದ್ದಾರೆ.
ಶಾಸಕರ ವೈಫಲ್ಯದಿಂದಾಗಿಯೇ ಬಿಜೆಪಿ ಈ ಬಾರಿ ದೊಡ್ಡ ಸಂಖ್ಯೆಯಲ್ಲಿ ಹೊಸಬರಿಗೆ ಟಿಕೆಟ್ ನೀಡಲು ಉದ್ದೇಶಿಸಿತ್ತು. ಆದರೆ, ಟಿಕೆಟ್ ತಪು್ಪವ ಸುಳಿವು ಸಿಗುತ್ತಿದ್ದಂತೆಯೇ ಕೆಲ ಜಾತಿಗಳ ಪ್ರಭಾವಿ ಸಚಿವ, ಶಾಸಕರ ರಾಜೀನಾಮೆ ಪ್ರಸಂಗ ಚರ್ಚೆಗೆ ಗ್ರಾಸವಾಯಿತು. ಹೀಗಾಗಿ, ವಿರೋಧಿ ಅಲೆ ಎದುರಿಸುತ್ತಿದ್ದ ಕೆಲವು ಶಾಸಕರನ್ನೇ ಅಭ್ಯರ್ಥಿಯನ್ನಾಗಿ ಮುಂದುವರಿಸಲು ಬಿಜೆಪಿ ನಾಯಕರು ತೀರ್ವನಿಸಿದರು. ಅಂಥವರ ಪಟ್ಟಿಗೆ ಈ ನೀಲಕಾಂತ್ ತಿವಾರಿ, ಭೂಪೇಶ್ ಚೌಬೆ ಮತ್ತು ವೇದಪ್ರಕಾಶ್ ಕೂಡ ಬರುತ್ತಾರೆ.
ರಾಜ್ಯದ ಜನರನ್ನು ನೇರವಾಗಿ ತಲುಪುವ ಮೋದಿ ಕಾರ್ಯತಂತ್ರವೇ ಅವರನ್ನು ಇತರ ನಾಯಕರಿಗಿಂತ ಭಿನ್ನವಾಗಿಸಿದೆ. ಉದಾಹರಣೆಗೆ, ಮೋದಿ ತಮ್ಮ ಬಹುತೇಕ ರ್ಯಾಲಿಗಳಲ್ಲಿ ಭಾಷಣ ಅಂತ್ಯಗೊಳಿಸುವ ವೇಳೆಗೆ, ‘ಭಾಯಿಯೋ ಬೆಹೆನೋ ಆಪ್ ಲೋಗ್ ಮೇರಾ ಏಕ್ ಕಾಮ್ ಕರೋಗೇ’ ಎನ್ನುತ್ತ ವಿಚಾರವೊಂದನ್ನು ಮುಂದಿಡುತ್ತಿದ್ದರು. ‘ನೀವು ನಿಮ್ಮ ಊರಿಗೆ ಮರಳುತ್ತಿದ್ದಂತೆಯೇ ಪ್ರತಿಯೊಬ್ಬರ ಮನೆಗೆ ತೆರಳಿ ಮೋದಿ ನಿಮಗೆ ಪ್ರಣಾಮ ತಿಳಿಸಿದ್ದಾರೆ ಮತ್ತು ನಿಮ್ಮಿಂದ ಆಶೀರ್ವಾದ ಕೋರಿದ್ದಾರೆ ಎಂದು ತಿಳಿಸಬೇಕು. ಅವರ ಆಶೀರ್ವಾದ ನನ್ನ ಹುಮ್ಮಸ್ಸು ದುಪ್ಪಟ್ಟುಗೊಳಿಸಲಿದೆ ಮತ್ತು ನಿಮಗಾಗಿ ಹೆಚ್ಚೆಚ್ಚು ಕೆಲಸ, ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತದೆ’ ಎಂದು ಜನಸ್ತೋಮಕ್ಕೆ ತಿಳಿಸುತ್ತಿದ್ದರು. ಸಹಜವಾಗಿಯೇ ಪ್ರಧಾನಿಯವರ ಈ ಮಾತುಗಳು ಗ್ರಾಮೀಣ ಭಾಗದ ಜನಮನ ಸೆಳೆಯುತ್ತವೆ ಮತ್ತು ಅವರಲ್ಲಿ ‘ಈತ ನಿಜವಾಗಿಯೂ ನಮ್ಮ ನಾಯಕ’ ಎಂಬ ಭಾವನೆ ದುಪ್ಪಟ್ಟಾಗುತ್ತದೆ. ಇದೇ ಕಾರಣಕ್ಕೆ ‘ಮೋದಿ ಜೀ ಗರೀಬ್ ಕಾ ದರ್ದ್ ಸಮಜ್ ಥಾ ಹೇ’ (ಬಡವನ ನೋವು ಮೋದಿಯವರಿಗೆ ಅರ್ಥವಾಗುತ್ತದೆ) ಎಂಬ ಮಾತುಗಳು ವಿಜಯವಾಣಿ ಪ್ರವಾಸ ಮಾಡಿದ್ದ ರಾಜ್ಯದ ಹಲವಾರು ಗ್ರಾಮೀಣ ಭಾಗಗಳಲ್ಲಿ ಕೇಳಿಬಂದವು. ‘ಕರೊನಾ ಕಾಲದಲ್ಲಿ ಗರೀಬ್ ಕಲ್ಯಾಣ ಯೋಜನೆಯಡಿಯಲ್ಲಿ ಬಡವರಿಗೆ ರೇಷನ್ ವಿತರಿಸಿದ ಮೋದಿ ಜೀ ನಮ್ಮ ಕಷ್ಟಕ್ಕಾದರು’ ಎಂಬ ‘ಋಣ’ದ ಮಾತುಗಳು ಹಾಗೂ ‘ಪಿಎಂ ಆವಾಸ್ ಯೋಜನೆ’ಯಲ್ಲಿ ಮನೆ ಕಟ್ಟಲು ಹಣಕಾಸು ನೆರವು ಸಿಕ್ಕಿ ಎಷ್ಟೋ ವರ್ಷಗಳ ಕನಸು ನನಸಾಗುತ್ತಿದೆ ಎಂಬ ನೂರಾರು ಕುಟುಂಬಗಳ ಸಂಭ್ರಮ ಹಾಲಿ ಚುನಾವಣೆಯಲ್ಲಿ ಬಿಜೆಪಿ ಪಾಲಿಗೆ ವರದಾನವಾಗಬಲ್ಲವು. ಈ ಯೋಜನೆಗಳ ‘ಲಾಭಾರ್ಥಿ’ಗಳು ಮೋದಿ-ಯೋಗಿ ಬಗ್ಗೆ ವಿಶ್ವಾಸದ ಮಾತುಗಳನ್ನಾಡುವುದರಿಂದಲೇ ಉ.ಪ್ರ. ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸ ಬಿಜೆಪಿ ನಾಯಕರಲ್ಲಿದೆ. ಆದರೆ, ಬೆಲೆ ಏರಿಕೆ, ನಿರುದ್ಯೋಗ, ಶಾಸಕರ ಮೇಲಿನ ಆಕ್ರೋಶ, ಜಾತಿ ಸಮೀಕರಣಗಳಿಂದ ಸಮಾಜವಾದಿ ‘ಲೆಹರ್’ ವೃದ್ಧಿಯಾಗಿದೆ.
ಕರ್ತವ್ಯದಲ್ಲಿ ಪ್ರಾಮಾಣಿಕತೆಯೇ ಯೋಗಿಯ ಪ್ಲಸ್ ಪಾಯಿಂಟ್. ವರ್ಗಾವಣೆ ದಂಧೆ, ಯೋಜನೆ, ಟೆಂಡರ್​ಗಳಲ್ಲಿ ದುಡ್ಡು ಹೊಡೆಯುವುದು, ನೇಮಕಾತಿಯಲ್ಲಿ ಭ್ರಷ್ಟಾಚಾರದಂಥ ಕಳಂಕ ಮೆತ್ತಿಕೊಳ್ಳುವ ಜಾಯಮಾನದವರಲ್ಲ ಈ ಯೋಗಿ. ತಮ್ಮನ್ನು ಭೇಟಿ ಮಾಡುವ ಶಾಸಕರು, ವಿಷಯವನ್ನು ಸ್ಪಷ್ಟವಾಗಿ ತಿಳಿಸಿ, ಬೇಗನೇ ಜಾಗ ಖಾಲಿಮಾಡಬೇಕು ಎಂದು ನಿರೀಕ್ಷಿಸುವ ಅವರು, ಅನಗತ್ಯ ಒತ್ತಡ ಹಾಕಿ ಫೈಲ್ ಕ್ಲಿಯರ್ ಮಾಡಿಸಿಕೊಳ್ಳಲು ಬಂದರೆ, ವ್ಯಕ್ತಿಯ ವರ್ಚಸ್ಸು, ಪ್ರಭಾವವನ್ನೂ ಲೆಕ್ಕಿಸದೆ ಬಯ್ಯುತ್ತಾರೆಂದು ಹಿರಿಯ ಅಧಿಕಾರಿಗಳೇ ಹೇಳುತ್ತಾರೆ. ವಾಸ್ತವದಲ್ಲಿ, ಯೋಗಿ ‘ಅತಿ ಪ್ರಾಮಾಣಿಕತೆ’ಯಿಂದಲೇ ಶಾಸಕರು ಅಸಮಾಧಾನಗೊಂಡಿದ್ದಾರೆಂಬ ಮಾತುಗಳು ಉತ್ತರ ಪ್ರದೇಶದಲ್ಲಿ ಕೇಳಿಬಂದಿದೆ. 2017ರವರೆಗೆ ರಾಜ್ಯದಲ್ಲಿ ಮೆರೆದಾಡುತ್ತಿದ್ದ ಮಾಫಿಯಾ, ರೌಡಿ, ಗ್ಯಾಂಗ್​ಸ್ಟರ್​ಗಳ ಹೆಡೆಮುರಿ ಕಟ್ಟಿರುವ ಸಿಎಂ ಯೋಗಿ, ಮಹಿಳೆಯರಲ್ಲಿ ಸುರಕ್ಷತಾ ಭಾವ ಗಟ್ಟಿಗೊಳಿಸಿದ್ದಾರೆ. ರಾಜ್ಯದ ಯಾವುದೇ ಭಾಗದ ಮಹಿಳೆಯನ್ನು ಮಾತನಾಡಿಸಿದರೂ, ಈ ಸರ್ಕಾರದಿಂದಾಗಿ ನಾವು ಸುರಕ್ಷಿತರಾಗಿದ್ದಾರೆ ಎಂದೇ ಹೇಳುತ್ತಾರೆ.
ಮುಸ್ಲಿಂ ಕಂದಾಯ ಅಧಿಕಾರಿ:ಯೋಗಿ ಆದಿತ್ಯನಾಥ ಅಧ್ಯಕ್ಷತೆಯ ಗೋರಖ ನಾಥ ಪೀಠದ ಮಂದಿರದಲ್ಲಿ ಕಂದಾಯ ವಿಭಾಗದ ಉಸ್ತುವಾರಿಯಾಗಿರುವುದು ಝಾಕೀರ್ ಅಲಿ ವಾರ್ಸಿ. 2004ರಿಂದ ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ‘ಯೋಗಿಯವರು ಎಂದಿಗೂ ನನ್ನನ್ನು ಮುಸ್ಲಿಂ ಎಂಬ ಪ್ರತ್ಯೇಕಭಾವದಿಂದ ನೋಡಿಲ್ಲ. ಗೋರಖ್​ಪುರದ ಜನತಾ ದರ್ಬಾರ್​ನಲ್ಲಿ ಹಿಂದೂ-ಮುಸ್ಲಿಂರನ್ನು ಅವರು ಭೇದಭಾವದಿಂದ ಕಾಣುತ್ತಾರಾ ಎಂದು ಸ್ಥಳೀಯರಲ್ಲೇ ಕೇಳಿ ನೋಡಿ. ನಿಮಗೇ ನಿಜ ಗೊತ್ತಾಗುತ್ತದೆ. ಸ್ವಾಮಿ ಅವೈದ್ಯನಾಥರು ನನ್ನನ್ನು ಕೆಲಸಕ್ಕೆ ಸೇರಿಸಿಕೊಂಡಿದ್ದರು, ಯೋಗಿ ಅವರೂ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ’ ಎಂದು ವಿಜಯವಾಣಿ ಜತೆ ವಾರ್ಸಿ ಮಾಹಿತಿ ಹಂಚಿಕೊಂಡರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + three =
Remember me
