|ರಾಘವ ಶರ್ಮ ನಿಡ್ಲೆಅಮೃತಸರ (ಪಂಜಾಬ್)
ಅಮೃತಸರ ಲೋಕಸಭೆ ಕ್ಷೇತ್ರದಿಂದ 2004ರಲ್ಲಿ ಬಿಜೆಪಿಯಿಂದ ಆಯ್ಕೆಯಾಗಿ ರಾಜಕೀಯ ಇನಿಂಗ್ಸ್ ಶುರುಮಾಡಿದ ಮಾಜಿ ಕ್ರಿಕೆಟ್ ಆಟಗಾರ ನವಜೋತ್ ಸಿಂಗ್ ಸಿಧು, ಕಳೆದ 18 ವರ್ಷಗಳಲ್ಲಿ ಮಾತಿನಲ್ಲೇ ಜನರನ್ನು ಮೋಡಿ ಮಾಡಿದ್ದು ಬಿಟ್ಟರೆ, ಜನಪ್ರತಿನಿಧಿಯಾಗಿ ಕ್ಷೇತ್ರದ ಅಭಿವೃದ್ಧಿಗೆ ಕೊಡುಗೆ ನೀಡಿದ್ದೇನು ಎನ್ನುವುದನ್ನು ದುರ್ಬೀನು ಹಾಕಿ ಹುಡುಕಬೇಕು. ಅಮೃತಸರ ಪೂರ್ವ ವಿಧಾನಸಭೆ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಮುಂದಾಗಿರುವ ಸಿಧುವಿಗೆ ಶಿರೋಮಣಿ ಅಕಾಲಿದಳದ ನಂ.2 ಲೀಡರ್ ವಿಕ್ರಂ ಸಿಂಗ್ ಮಜೀತಿಯಾ ನಿದ್ದೆಗೆಡಿಸಿದ್ದಾರೆ.
2012ರಲ್ಲಿ ಈ ಕ್ಷೇತ್ರದಿಂದ ಸಿಧು ಪತ್ನಿ ನವಜೋತ್ ಕೌರ್ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದರು. 2017ರಲ್ಲಿ ಸಿಧು ಇಲ್ಲಿ 40 ಸಾವಿರ ಮತಗಳ ಅಂತರದಿಂದ ಗೆದ್ದು ಕ್ಯಾಪ್ಟನ್ ಆಮರಿಂದರ್ ಸಿಂಗ್ ಸರ್ಕಾರದಲ್ಲಿ ಮಂತ್ರಿಯಾದರು. ಆದರೆ, ಜನಸೇವೆ ಮಾಡುವ ಬದಲು ನಿತ್ಯವೂ ಕ್ಯಾಪ್ಟನ್ ವಿರುದ್ಧ ಕತ್ತಿ ಮಸೆಯುತ್ತಿದ್ದ ಸಿಧು, ನಂತರದಲ್ಲಿ ಡ್ರಗ್ ಮಾಫಿಯಾ ಆರೋಪಿ ವಿಕ್ರಂ ಸಿಂಗ್ ಮಜೀತಿಯಾ ವಿರುದ್ಧ ಅಸ್ತ್ರ ಪ್ರಯೋಗಿಸಲು ಮುಂದಾದರು. ಅಕಾಲಿದಳ ಡಾನ್​ಗಳ ವಿರುದ್ಧ ಖುದ್ದು ತಮ್ಮ ಸರ್ಕಾರವೇ ಮೌನವಾಗಿದೆ ಎಂದು ಬಂಡೆದ್ದರು. ಹಾಲಿ ಸಿಎಂ ಚರಣ್ ಜಿತ್ ಚನ್ನಿ ವಿರುದ್ಧವೂ ಟೀಕೆ ಟಿಪ್ಪಣಿ ಮಾಡುತ್ತಾ, ಪಂಜಾಬ್ ಸುಧಾರಣೆಗೆ ತಮ್ಮನ್ನು ಬಿಟ್ಟು ಬೇರೆ ಯಾರೂ ಯೋಗ್ಯರಲ್ಲ ಎಂಬಂತೆ ವಾದಿಸಿದರು. ಇವೆಲ್ಲವನ್ನೂ ಸಿಎಂ ಕುರ್ಚಿಗಾಗಿಯೇ ಮಾಡುತ್ತಿದ್ದರು ಎನ್ನುವುದು ಗುಟ್ಟಿನ ವಿಷಯವೇನಲ್ಲ. ರಾಜಕಾರಣಿಯಾದವನಿಗೆ ತಾಳ್ಮೆ, ಸಂಯಮ ಅತಿ ಮುಖ್ಯ. ಮೇಲಾಗಿ, ಪಕ್ಷ ಸೇರಿದ ಕೂಡಲೇ ಸಿಎಂ ಕುರ್ಚಿ ಬೇಕೆಂದು ಹಠಕ್ಕಿಳಿದರೆ ಉಳಿದವರು ಸುಮ್ಮನೆ ಕೂರುತ್ತಾರಾ?
2014ರಲ್ಲಿ ಅಮೃತಸರದಿಂದ ಅರುಣ್ ಜೇಟ್ಲಿ ಸ್ಪರ್ಧಿಸಿದ್ದಾಗಲೂ ಸಿಧು ಪ್ರಚಾರ ಮಾಡದೇ ಬಿಜೆಪಿಯನ್ನು ಮುಜುಗರದಲ್ಲಿ ಸಿಲುಕಿಸಿದ್ದರು. 2016ರಲ್ಲಿ ಅವರು ಆಮ್ ಆದ್ಮಿ ಪಾರ್ಟಿ ಸೇರುವ ಮುನ್ಸೂಚನೆ ಸಿಕ್ಕಿದ್ದರಿಂದ ಬಿಜೆಪಿ ಅವರನ್ನು ರಾಜ್ಯಸಭೆ ಸದಸ್ಯರನ್ನಾಗಿ ಮಾಡಿತು. ಆದರೆ ಕೆಲವೇ ತಿಂಗಳಲ್ಲಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ಆವಾಜ್-ಇ-ಪಂಜಾಬ್ ಪಕ್ಷ ಸ್ಥಾಪಿಸಿದರು. ಹೆಚ್ಚು ಫಲಕಾರಿಯಾಗದ್ದರಿಂದ 2017ರಲ್ಲಿ ಕಾಂಗ್ರೆಸ್ ಸೇರಿ ಅಮೃತಸರ ಪೂರ್ವ ಕ್ಷೇತ್ರದಿಂದ ಶಾಸಕನಾಗಿ ಆಯ್ಕೆಯಾದರು. ಸಿಧು ಸೇರ್ಪಡೆಗೆ ಕ್ಯಾಪ್ಟನ್ ಬಣದ ಒಪ್ಪಿಗೆ ಇರಲಿಲ್ಲ. ಆದರೆ, ರಾಹುಲ್, ಪ್ರಿಯಾಂಕಾ ಸಮ್ಮತಿಯಿದ್ದುದರಿಂದ ತಡೆಯಲಾಗಲಿಲ್ಲ. ರಾಜ್ಯದ ಮುಖ್ಯಮಂತ್ರಿಯಾಗಬೇಕೆಂದು ಕಳೆದೈದು ವರ್ಷಗಳಿಂದ ಅಹರ್ನಿಶಿ ಹೋರಾಟ ಮಾಡಿದ ಸಿಧು, ಈಗ ಕಾಂಗ್ರೆಸ್​ನಲ್ಲೇ ಮೂಲೆ ಗುಂಪಾದವರಂತೆ ಕಾಣುತ್ತಿದ್ದಾರೆ. ಮಾತು ಮನೆ ಕೆಡಿಸಿತು ಎಂಬಂತೆ ಸಿಧು ಉತ್ಸಾಹದ ಮಾತುಗಳಿಂದ ಕಾಂಗ್ರೆಸ್​ಗೂ ತೊಂದರೆಯಾಗಿದ್ದಲ್ಲದೇ, ಅಮೃತಸರ ಪೂರ್ವದಲ್ಲಿ ಮತದಾರನ ಆಕ್ರೋಶವನ್ನೂ ಎದುರಿಸಬೇಕಾಗಿದೆ.
ವಿಜಯವಾಣಿ ಕ್ಷೇತ್ರಕ್ಕೆ ಭೇಟಿ ನೀಡಿದ ವೇಳೆ ಬಹುತೇಕ ಮಂದಿ, ಸಿಧುವನ್ನು ನಾವು ಟಿವಿಯಲ್ಲಷ್ಟೇ ನೋಡುವುದು. ಹೆಸರಿಗಷ್ಟೇ ನಮ್ಮ ಶಾಸಕರು ಎಂದೇ ದೂರಿದರು. ಆದರೂ, ಮಜೀತಿಯಾಗೆ ಹೋಲಿಸಿದರೆ ಸಿಧು ಪ್ರಾಮಾಣಿಕ. ಮಜೀತಿಯಾ ಗೆದ್ದರೆ ಇಲ್ಲಿನ ಬಹುತೇಕ ಯುವಕರು ಡ್ರಗ್ ನಶೆಯಲ್ಲಿ ಬದುಕನ್ನೇ ಹಾಳು ಮಾಡಿಕೊಳ್ಳಲಿದ್ದಾರೆ ಎಂದೂ ಆತಂಕ ವ್ಯಕ್ತಪಡಿಸಿದರು. ಅಕಾಲಿದಳ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್ ಸೋದರ ಸಂಬಂಧಿಯಾಗಿರುವ ಮಜೀತಿಯಾ, ಹಣಬಲ ತೋಳ್ಬಲ ರಾಜಕಾರಣದ ಮೂಲಕವೇ ರಕ್ಷಣೆ ಪಡೆದಿದ್ದಾರೆ. ಪವನ್ ನಗರದ ನಿವಾಸಿ, ಮಾಜಿ ಸರ್ಕಾರಿ ಅಧಿಕಾರಿ ಸರ್ದಾರಿ ಲಾಲ್ ಸರೀನ್, ‘ಜನರಿಗೆ ಪ್ರಯೋಜನವಾಗದ ಪ್ರಾಮಾಣಿಕತೆ ಇದ್ದರೆಷ್ಟು ಬಿಟ್ಟರೆಷ್ಟು? ಐದು ವರ್ಷದಲ್ಲಿ ಒಮ್ಮೆಯೂ ಆ ಸಿಧುವನ್ನು ಇಲ್ಲಿ ನೋಡಿಲ್ಲ. ಸಿಧು ಸೋಲು ನಿಶ್ಚಿತ’ ಎನ್ನುತ್ತಾರೆ.
ಜನ ತನ್ನ ಬಗ್ಗೆ ಸಿಟ್ಟಾಗಿದ್ದಾರೆ ಎನ್ನುವುದು ಕೊನೆಗೂ ಸಿಧು ಅರಿವಿಗೆ ಬಂದಿದೆ. ಸಿಧು ಪರ ಪ್ರಚಾರ ಮಾಡುತ್ತಿದ್ದ ಪತ್ನಿ ಮುಖಕ್ಕೆ ಗುದ್ದುವ ರೀತಿಯಲ್ಲೇ ಜನ ಅತೃಪ್ತಿ ಹೊರಹಾಕಿದ್ದಾರೆ. ಹೀಗಾಗಿ, ಸಿಧು ‘ನಾನು ಇಲ್ಲಿಗೆ ಬಾರದೆ ತಪ್ಪು ಮಾಡಿದೆ’ ಎಂದು ಕ್ಷಮೆ ಯಾಚಿಸಿದ್ದಾರೆ. ಸಿಎಂ ಚನ್ನಿ ಆಡಳಿತ ನೀತಿಗಳು ಸರಿಯಿಲ್ಲ ಎಂದು ಜರಿಯುತ್ತಿದ್ದ ಸಿಧು, ಈಗ ಚನ್ನಿ ಜನಸ್ನೇಹಿ ನೀತಿಗಳಿಂದ ನಿಮಗೂ ಲಾಭವಾಗಿದೆ, ವಿದ್ಯುತ್ ಬಿಲ್​ನಲ್ಲಿ ವಿನಾಯಿತಿ, ತೈಲ ಬೆಲೆ ಇಳಿಸಿದ್ದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಅಕಾಲಿದಳ ಅಭ್ಯರ್ಥಿ ವಿಕ್ರಂ ಮಜೀತಿಯಾ ಮೇಲೆ ಏನೇ ಆರೋಪಗಳಿರಬಹುದು. ಆದರೆ ಅವರು ಈ ಹಿಂದೆ ಗೆದ್ದ ಮಜೀತಿಯಾ ಕ್ಷೇತ್ರ ಜಬರ್​ದಸ್ತ್ ಅಭಿವೃದ್ಧಿ ಕಂಡಿದೆ. ಇಲ್ಲಿಂದ ಮಜೀತಿಯಾ ಪತ್ನಿ ಸ್ಪರ್ಧಿಸುತ್ತಿದ್ದರೂ, ಗೆಲುವಿನ ವಿಶ್ವಾಸದಲ್ಲಿರುವ ದಂಪತಿ ಅಮೃತಸರ ಪೂರ್ವದಲ್ಲೇ ಪ್ರಚಾರ ನಡೆಸುತ್ತಾ, ಸಿಧು ಸೋಲಿಸಲು ಪಣತೊಟ್ಟಿದ್ದಾರೆ. ಮೇಲ್ನೋಟಕ್ಕೆ ಸಿಧು ್ಖಖ ಮಜೀತಿಯಾ ಎಂಬ ವಾತಾವರಣ ಇದ್ದರೂ ಸೈಲೆಂಟ್ ವೋಟರ್​ಗಳು ಆಪ್ ಪರ ಇದ್ದಂತಿದೆ.
‘ಕಾಂಗ್ರೆಸ್ ಮತ್ತು ಅಕಾಲಿದಳ ಬಿಟ್ಟು ಪಕ್ಷ ಸೇರಿದ 35 ಮಂದಿಗೆ ಆಪ್ ಟಿಕೆಟ್​ನೀಡಿದೆ. ಹಾಗಾದರೆ, ಇವರನ್ನು ನಾವು ಆಮ್ ಆದ್ಮಿ ಎಂದು ನಂಬುವುದು ಹೇಗೆ’ ಎಂದು ಪ್ರಶ್ನಿಸುತ್ತಾರೆ ಯುವಕ ಸೋನು ಠಾಕೂರ್. ಆಪ್​ನಿಂದ ಜೀವನ್ ಜೋತ್ ಕಣದಲ್ಲಿದ್ದರೆ ಬಿಜೆಪಿ ಮಾಜಿ ಐಎಎಸ್ ಅಧಿಕಾರಿ ಜಗ್ ಮೋಹನ್ ರಾಜು ಎಂಬವರಿಗೆ ಟಿಕೆಟ್ ನೀಡಿದೆ. 2012ರಲ್ಲಿ ಸಿಧು ಪತ್ನಿ ಮತ್ತು 2017ರಲ್ಲಿ ಸಿಧು ವಿರುದ್ಧ ಪ್ರಬಲ ಎದುರಾಳಿಗಳಿರಲಿಲ್ಲ. ಆದರೆ ಈಗ ಮಜೀತಿಯಾ ಸ್ಪರ್ಧೆ ಜತೆಗೆ ಆಪ್ ಬಗ್ಗೆ ಹೆಚ್ಚಿರುವ ಒಲವಿನಿಂದ ಸಿಧು ಹಾದಿ ಕಠಿಣಗೊಂಡಿದೆ. ಸಿಎಂ ಸ್ಥಾನದ ಅಭ್ಯರ್ಥಿಯಲ್ಲ ಎನ್ನುವುದು ಖಚಿತವಾದ ಮೇಲೆ ಜನಪ್ರಿಯತೆ ಮತ್ತಷ್ಟು ಕುಸಿದಿದೆ.
ಕ್ರಿಕೆಟ್ ಸಾಥಿಗಳಾದ ಸಿಧು ಮತ್ತು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸ್ನೇಹ ಗುಟ್ಟಿನ ವಿಷಯವೇನಲ್ಲ. ತಮ್ಮ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಇಮ್ರಾನ್ ಸಿಧುಗೆ ಆಹ್ವಾನ ನೀಡಿದ್ದರು. ಆದರೆ, ಗುರುನಾನಕರ 550ನೇ ಜನ್ಮದಿನಕ್ಕೆ ಮುನ್ನ ಕರ್ತಾರ್​ಪುರ ಕಾರಿಡಾರ್ ಉದ್ಘಾಟನೆಯಾಗುವುದಕ್ಕೆ ಇಮ್ರಾನ್​ರನ್ನು ಸಿಧು ಮನವೊಲಿಸಿದ್ದರು ಎಂದು ಇಲ್ಲಿ ಅನೇಕರು ಹೇಳುತ್ತಾರೆ. ಆದರೆ ಪುಲ್ವಾಮ ಉಗ್ರ ದಾಳಿ ಹಾಗೂ ಬಾಲಾಕೋಟ್ ಪ್ರತಿದಾಳಿ ಬಗ್ಗೆ ಸೇನೆಯನ್ನು ಪ್ರಶ್ನಿಸುವಂಥ ಅಪ್ರಬುದ್ಧ ಮಾತುಗಳು ಕಾಂಗ್ರೆಸ್​ಗೆ ಹಾನಿ ಮಾಡಿರುವುದು ಸುಳ್ಳೇನಲ್ಲ. ಫಿರೋಜ್​ಪುರದಿಂದ 10 ಕಿಮೀ ದೂರದಲ್ಲಿರುವ ಹುಸೈನಿವಾಲಾದ ಇಂಡೋ-ಪಾಕ್ ಗಡಿಯಲ್ಲಿ ನಿಯೋಜನೆಗೊಂಡ ಉತ್ತರ ಪ್ರದೇಶ ಮೂಲದ ಯೋಧರೊಬ್ಬರು ವಿಜಯವಾಣಿ ಜತೆ ಮಾತನಾಡುತ್ತಾ, ‘ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಸೇನೆಗೆ ಹೆಚ್ಚು ಸ್ವಾತಂತ್ರ್ಯ ಸಿಕ್ಕಿದೆ. ಜಮ್ಮು ಕಾಶ್ಮೀರದಲ್ಲಿ ರಾಜಕೀಯ ಕಾರಣಕ್ಕಾಗಿ ಸೇನೆಯ ಕೈ ಕಟ್ಟಿ ಹಾಕಲಾಗುತ್ತಿತ್ತು. ಆದರೆ, 370ನೇ ವಿಧಿ ನಿಷ್ಕ್ರಿಯಗೊಂಡ ಬಳಿಕ ಅಲ್ಲಿ ಯಾರೂ ಬಾಲ ಬಿಚ್ಚುತ್ತಿಲ್ಲ. ಬಾಲಾಕೋಟ್ ದಾಳಿಯ ಅಗತ್ಯವಿತ್ತು. ಇದೆಲ್ಲ ಟಿವಿ ಮುಂದೆ ಅರಚುವವರಿಗೆ ಎಲ್ಲಿ ಅರ್ಥವಾಗುತ್ತೆ’ ಎಂದು ನಸುನಕ್ಕರು.
ಸೋಲಿಸಲು ಕಾಂಗ್ರೆಸ್ಸಿಗರದೇ ಪ್ಲ್ಯಾನ್?:ಸಿಧು ಚಂಚಲ ಚಿತ್ತದಿಂದ ಹೈರಾಣಾಗಿರುವ ಕಾಂಗ್ರೆಸ್ಸಿಗರೇ ಅವರನ್ನು ಸೋಲಿಸಲು ಅಕಾಲಿದಳ ಜತೆಗೆ ಕೈಜೋಡಿಸಿದ್ದಾರೆ ಎಂಬ ಮಾತು ಸ್ಥಳೀಯರಲ್ಲಿದೆ. ಸಿಧುವನ್ನು ಸೋಲಿಸಿ, ಅವರನ್ನು ಕಾಂಗ್ರೆಸ್ ನಿಂದ ಶಾಶ್ವತವಾಗಿ ಹೊರಗಟ್ಟಬೇಕೆಂದಿರುವ ಪ್ರಬಲ ಗುಂಪು, ಮಜೀತಿಯಾ ಗೆಲುವಿಗೆ ಶ್ರಮಿಸುತ್ತಿದೆ. ಸಿಧುವಿಗೆ ಪ್ರಿಯಾಂಕಾ, ರಾಹುಲ್ ಗಾಂಧಿ ಬಿಟ್ಟರೆ ಬೇರೆ ಯಾರ ಬೆಂಬಲವೂ ಇಲ್ಲ.
ಅಪ್ಪು ಜನ್ಮದಿನದಂದು ‘ಜೇಮ್ಸ್​’ ಉತ್ಸವ; 31 ಕಟೌಟ್ಸ್​, ಹೆಲಿಕಾಪ್ಟರ್​​ನಲ್ಲಿ ಹೂಮಳೆ; ಇನ್ನೇನಿರಲಿದೆ ಅಲ್ಲಿ?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − twelve =
Remember me
