|ರಾಘವ ಶರ್ಮ ನಿಡ್ಲೆನವದೆಹಲಿ
ಸಮವಸ್ತ್ರ ಸಂಹಿತೆ ಅಳವಡಿಸಿಕೊಂಡ ಸರ್ಕಾರಿ ಶಿಕ್ಷಣ ಸಂಸ್ಥೆಗೆ ವಿದ್ಯಾರ್ಥಿನಿಯರು ಸ್ವ-ಇಚ್ಛೆಯ ಉಡುಪುಗಳನ್ನು ಧರಿಸಿ ಬರಬಹುದೇ? ಸಮವಸ್ತ್ರ ನಿಯಮ ಅಳವಡಿಸಿಕೊಂಡ ಮಾತ್ರಕ್ಕೆ ಮಕ್ಕಳ ಶಿಕ್ಷಣ ಹಕ್ಕನ್ನು ಕಿತ್ತುಕೊಂಡಂತಾಗುತ್ತದೆಯೇ ಎಂದು ಸುಪ್ರೀಂಕೋರ್ಟ್​ನ ನ್ಯಾ. ಹೇಮಂತ್ ಗುಪ್ತಾ ಮತ್ತು ನ್ಯಾ.ಸುಧಾಂಶು ಧುಲಿಯಾ ದ್ವಿಸದಸ್ಯ ಪೀಠ ಪ್ರಶ್ನಿಸಿದೆ.
ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್​ಗೆ ನಿಷೇಧ ಹೇರಿದ ಹೈಕೋರ್ಟ್ ತೀರ್ಪು ಮತ್ತು ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್​ಗೆ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ಕೈಗೆತ್ತಿಕೊಂಡ ವೇಳೆ ಈ ಪ್ರಶ್ನೆಗಳನ್ನು ಕೇಳಿದ ನ್ಯಾಯಪೀಠ, ಶಿಕ್ಷಣ ಸಂಸ್ಥೆಗಳು ನಿಯಮಗಳನ್ನು ಹೇರುವಂತಿಲ್ಲ ಎನ್ನುತ್ತೀರಿ. ಸಮವಸ್ತ್ರ ಸಂಹಿತೆ ಉಲ್ಲಂಘನೆಯಾದಾಗ ಏನು ಮಾಡಬೇಕು? ವಿದ್ಯಾರ್ಥಿನಿಯರು ಮಿನಿಸ್ಕರ್ಟ್, ಮಿಡಿ ಅಥವಾ ತಮಗೆ ತೋಚಿದ್ದನ್ನು ಧರಿಸಿ ಬರಬಹುದೇ? ಪ್ರತಿಯೊಬ್ಬರಿಗೂ ಧಾರ್ವಿುಕ ಹಕ್ಕಿದೆ. ಹಾಗಂತ, ಸಮವಸ್ತ್ರ ಸಂಹಿತೆ ನಿಯಮ ಅಳವಡಿಸಿಕೊಂಡ ಶಾಲೆಯ ಆವರಣದೊಳಗೂ ಧಾರ್ವಿುಕ ಹಕ್ಕನ್ನು ಚಲಾಯಿಸಲು ಅವಕಾಶವಿರಬೇಕೆ? ಹಿಜಾಬ್, ಸ್ಕಾರ್ಫ್ ಧರಿಸಬೇಕೆಂದು ನಿಮಗನಿಸಬಹುದು. ಆದರೆ, ನಿರ್ದಿಷ್ಟ ನಿಯಮಕ್ಕೆ ಒಳಪಟ್ಟ ನೀವು (ವಿದ್ಯಾರ್ಥಿನಿಯರು) ಸಮವಸ್ತ್ರ ಧರಿಸಿಕೊಂಡೇ ಬನ್ನಿ ಎಂದಷ್ಟೇ ರಾಜ್ಯ ಸರ್ಕಾರ ಹೇಳುತ್ತಿದೆ. ಹೀಗೆ ಹೇಳುವ ಮೂಲಕ ಸರ್ಕಾರ ವಿದ್ಯಾರ್ಥಿನಿಯರ ಶಿಕ್ಷಣದ ಹಕ್ಕನ್ನೇನೂ ಕಿತ್ತುಕೊಂಡಿಲ್ಲ ಎಂದು ಮೇಲ್ನೋಟಕ್ಕೆ ಅನಿಸುತ್ತಿದೆ ಎಂದು ತಿಳಿಸಿತು.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಸಂಜಯ್ ಹೆಗಡೆ, ಹಿಜಾಬ್ ಬಗ್ಗೆ ರಾಜ್ಯ ಏಕಪಕ್ಷೀಯ ತೀರ್ಮಾನ ತೆಗೆದುಕೊಂಡಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಸ್ಥಳೀಯ ಶಾಸಕರೇ ಸಮಿತಿ ಅಧ್ಯಕ್ಷರಾಗಿದ್ದು, ಅವರು ಹಿಜಾಬ್ ವಿರೋಧಿಧೋರಣೆ ಹೊಂದಿದ್ದಾರೆ. ಇಂಥವರಿಂದ ಪಾರದರ್ಶಕತೆ ನಿರೀಕ್ಷಿಸಲು ಸಾಧ್ಯವಿಲ್ಲ. ಹಿಜಾಬ್ ವಿರುದ್ಧ ಅಭಿಯಾನ ಮಾಡಿ, ವಿದ್ಯಾರ್ಥಿನಿ ಯರ ಬಳಿ ಒತ್ತಾಯದಿಂದ ಹಿಜಾಬ್ ಧರಿಸಿ ಬರುವುದಿಲ್ಲ ಎಂದು ಸಹಿ ಮಾಡಿಕೊಂಡಿದ್ದಾರೆ. ಈ ಹಿಂದೆಯೂ ವಿದ್ಯಾರ್ಥಿನಿ ಯರು ಹಿಜಾಬ್ ಧರಿಸಿ ಶಾಲೆಗೆ ಬರುತ್ತಿದ್ದರು ಮತ್ತು ಅದಕ್ಕೆ ದಾಖಲೆಗಳಿವೆ ಎಂದು ವಿವರಿಸಿದರು.
ಈ ಮಧ್ಯೆ ವಕೀಲರು ಗಾಲ್ಪ್ ಆಡಬೇಕೆಂದಾಗ ಗಾಲ್ಪ್​ಕೋರ್ಸ್​ಗೆ ತಮ್ಮ ಕರಿಕೋಟ್ ಹಾಕಿಕೊಂಡು ಹೋಗುತ್ತಾರೆಯೇ? ಪ್ರತಿ ಸಾರ್ವಜನಿಕ ಸಂಸ್ಥೆಗೂ ತನ್ನದೇ ಡ್ರೆಸ್​ಕೋಡ್ ಇರುತ್ತದೆಯಲ್ಲವೇ ಎಂದು ನ್ಯಾ. ಹೇಮಂತ್ ಗುಪ್ತಾ ವಕೀಲರನ್ನು ಪ್ರಶ್ನಿಸಿದರು. ಗಾಲ್ಪ್​ಕೋರ್ಸ್ ಖಾಸಗಿ ಜಾಗ ಎಂಬ ವಕೀಲರ ವಾದ ತಳ್ಳಿಹಾಕಿದ ನ್ಯಾ. ಸುಧಾಂಶು ಧುಲಿಯಾ, ಗಾಲ್ಪ್ ಕೋರ್ಸ್ ಸಾರ್ವಜನಿಕ ಸ್ಥಳ ಎಂದರು. ಹಿಂದೊಮ್ಮೆ ಮಹಿಳಾ ವಕೀಲರೊಬ್ಬರು ನ್ಯಾಯಾಲಯಕ್ಕೆ ಜೀನ್ಸ್ ಧರಿಸಿ ಬಂದಿದ್ದಕ್ಕೆ ಆಕ್ಷೇಪಿಸಿ, ನೀವು ಜೀನ್ಸ್ ಧರಿಸಿ ನ್ಯಾಯಪೀಠದ ಮುಂದೆ ಬರುವಂತಿಲ್ಲ ಎಂದು ಅವರಿಗೆ ತಿಳಿಸಲಾಗಿತ್ತು. ಇದನ್ನು ವಿರೋಧಿಸಿ ಮಹಿಳಾ ವಕೀಲೆ, ನನಗೆ ತೋಚಿದ ಉಡುಪು ಧರಿಸಿ ಬರುತ್ತೇನೆ ಎಂದು ಮಹಿಳೆ ವಾದಿಸಬಹುದು. ಆದರೆ ಅದನ್ನು ಒಪ್ಪಲಾಗುತ್ತದೆಯೇ ಎಂದು ನ್ಯಾ. ಗುಪ್ತಾ ಕೇಳಿದರು. ಇದಕ್ಕೆ, ನಿಮ್ಮ ಉಡುಪಿನ ಕಾರಣಕ್ಕಾಗಿ ನಿಮಗೆ ಕೋರ್ಟ್​ಗೆ ಪ್ರವೇಶವಿಲ್ಲವೆಂದು ಮಹಿಳೆಗೆ ಹೇಳಬಹುದೇ ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರದ ಪರ ವಾದಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ್, ಶಿಕ್ಷಣ ಸಂಸ್ಥೆ ಅಳವಡಿಸಿಕೊಂಡ ಶಿಸ್ತಿನ ಕ್ರಮವೇ ಅರ್ಜಿದಾರರಿಗೆ ಸಮಸ್ಯೆಯುಂಟುಮಾಡಿದೆ. ಅದನ್ನು ಅನುಸರಿಸುವುದು ಅವರಿಗೆ ಬೇಕಿಲ್ಲ ಎಂದರು.
ಹಿಜಾಬ್ ಕುರಿತ ಆದೇಶ ಜಾರಿಗೆ ವಿವರಣೆ ನೀಡಿದ ರಾಜ್ಯದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವಡಗಿ, ವಿದ್ಯಾರ್ಥಿನಿಯರು ಹಿಜಾಬ್ ಧರಿಸಿದ್ದರಿಂದ ಕೆಲ ವಿದ್ಯಾರ್ಥಿಗಳು ಕೇಸರಿ ಶಾಲುಗಳನ್ನು ಧರಿಸಿಕೊಂಡು ಬಂದರು. ಇದು ಶಾಲೆಯಲ್ಲಿ ಅಶಾಂತಿಗೆ ಕಾರಣವಾಗಿದ್ದರಿಂದ ರಾಜ್ಯ ಸರ್ಕಾರದಿಂದ ಸೂಕ್ತ ಮಾರ್ಗದರ್ಶನ ಕೋರಿ ಶಾಲೆ ಅಧಿಕಾರಿಗಳು ಪತ್ರ ಬರೆದರು. ಸಮವಸ್ತ್ರ ನೀತಿ ಅಳವಡಿಕೆ ಬಗ್ಗೆ ರಾಜ್ಯ ಸರ್ಕಾರ ಯಾವುದೇ ನಿಯಮ ಹೇರಿಲ್ಲ ಎಂದರು. ಹಿಜಾಬ್​ಗೆ ಅನುಮತಿಸಲು ಅಲ್ಪಸಂಖ್ಯಾತ ಸಂಸ್ಥೆಗಳಿಗೆ ಸ್ವಾತಂತ್ರ್ಯವಿದೆಯೇ ಎಂಬ ಪೀಠದ ಪ್ರಶ್ನೆಗೆ ಉತ್ತರಿಸಿದ ಅವರು, ಅನುಮತಿ ನೀಡಬಹುದು ಮತ್ತು ಸರ್ಕಾರ ಅದರಲ್ಲಿ ಹಸ್ತಕ್ಷೇಪ ಮಾಡಿಲ್ಲ. ಕ್ರಿಶ್ಚಿಯನ್ ಶಿಕ್ಷಣ ಸಂಸ್ಥೆಗಳು ಹಿಜಾಬ್​ಗೆ ಅನುಮತಿ ನೀಡಿಲ್ಲ ಎಂದು ತಿಳಿಸಿದರು.
ಸರ್ಕಾರಿ ಶಿಕ್ಷಣ ಸಂಸ್ಥೆಯಲ್ಲಿ ನೀವು ಧರ್ಮಕ್ಕೆ ಸಂಬಂಧಿಸಿದ ಬಟ್ಟೆ ಹಾಕಲು ಅನುಮತಿ ಕೇಳುತ್ತಿದ್ದೀರಿ. ಜಾತ್ಯತೀತ ರಾಷ್ಟ್ರದ ಸರ್ಕಾರಿ ಸಂಸ್ಥೆಯಲ್ಲಿ ಧಾರ್ವಿುಕ ಬಟ್ಟೆ ಧರಿಸಬೇಕು ಎಂದು ಹೇಳಬಹುದೇ ಎಂದು ನ್ಯಾ. ಹೇಮಂತ್ ಗುಪ್ತಾ ಪ್ರಶ್ನಿಸಿದರು.
ಈ ಪ್ರಕರಣದಲ್ಲಿ ಹಿಜಾಬ್ ಧರಿಸುವುದು ಇಸ್ಲಾಂನ ಅಗತ್ಯ ಆಚರಣೆಯ ಭಾಗವೇ ಅಲ್ಲವೇ ಎಂಬ ಪ್ರಮುಖ ಸಾಂವಿಧಾನಿಕ ಪ್ರಶ್ನೆಯಿದೆ ಎಂದ ಅರ್ಜಿದಾರರ ಪರ ಹಿರಿಯ ವಕೀಲ ರಾಜೀವ್ ಧವನ್, ನಿಗದಿತ ವಸ್ತ್ರಸಂಹಿತೆಯಿದ್ದಾಗ ಪೇಟವನ್ನು (ಟರ್ಬನ್) ಧರಿಸಬಹುದೇ? ನಿಮ್ಮ ಸುತ್ತಲೂ ನೋಡಿ ಮೈಲಾರ್ಡ್ ಕೋರ್ಟ್ ಹಾಲ್ 2ರಲ್ಲಿ ಪಗಡಿ ಧರಿಸಿರುವ ನ್ಯಾಯಮೂರ್ತಿಯೊಬ್ಬರ ಚಿತ್ರವಿದೆ ಎಂದು ಅಚ್ಚರಿ ಮೂಡಿಸಿದರು. ಇದಕ್ಕುತ್ತರಿಸಿದ ನ್ಯಾ. ಹೇಮಂತ್ ಗುಪ್ತಾ, ಪಗಡಿ ಧಾರ್ವಿುಕ ಸಂಕೇತವಲ್ಲ. ನನ್ನ ಅಜ್ಜ ಕಾನೂನು ಅಭ್ಯಾಸ ಮಾಡುವಾಗ ಅದನ್ನು ಧರಿಸುತ್ತಿದ್ದರು. ಅದನ್ನು ಧರ್ಮದೊಂದಿಗೆ ಸಮೀಕರಿಸಬೇಡಿ ಎಂದರು.
ಹಿಜಾಬ್ ವಿಚಾರ ಮುಸ್ಲಿಂ ಹೆಣ್ಣುಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರುವುದರಿಂದ ಮತ್ತು ಕಾನೂನಾತ್ಮಕ ಪ್ರಶ್ನೆಗಳಿರುವುದರಿಂದ ಈ ವಿಷಯ ವನ್ನು ವಿಸõತ ಪೀಠಕ್ಕೆ ವರ್ಗಾಯಿಸಬೇಕು. ಸ್ಕಾರ್ಫ್ ಒಂದೇ ಬಣ್ಣದ ಸಮವಸ್ತ್ರವಾಗಿರಬೇಕು ಎಂದು ಸೂಚಿಸಲಾಗಿದೆ. ಈ ನ್ಯಾಯಾಲಯದಲ್ಲಿಯೂ ಕೆಲ ಮಹಿಳೆಯರು ಅದನ್ನು ಧರಿಸುತ್ತಾರೆ. ಶಾಲೆಗಳಲ್ಲಿ ಅದನ್ನು ತೆಗೆದುಹಾಕಬೇಕೆಂದು ಹೇಳಬಹುದೇ? ಹಿಜಾಬ್ ಬಗ್ಗೆ ಕೇರಳ ಮತ್ತು ಕರ್ನಾಟಕ ಭಿನ್ನ ಭಿನ್ನ ತೀರ್ಪಗಳನ್ನು ನೀಡಿವೆ. ಹೀಗಾಗಿ ಸುಪ್ರೀಂಕೋರ್ಟ್ ನಿಲುವು ಮಹತ್ವದ್ದಾಗಲಿದೆ ಎಂದು ಧವನ್ ವಾದಿಸಿದರು. ವಿಚಾರಣೆಯನ್ನು ಬುಧವಾರ ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಗಿದೆ.
ನಿದ್ರೆ ಬರುತ್ತಿಲ್ಲ ಎಂದು ಬೇಸತ್ತು ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × two =
Remember me
