ನವದೆಹಲಿ:ರಾಜ್ಯಸಭೆಯ 57 ಸ್ಥಾನಗಳಿಗೆ ಚುನಾವಣೆ ನಡೆದರೂ, 16 ಸ್ಥಾನಗಳ ಫಲಿತಾಂಶ ಭಾರಿ ಕುತೂಹಲ ಕೆರಳಿಸಿತ್ತು. ಈ 16ರಲ್ಲಿ 8 ಸೀಟುಗಳನ್ನು ತನ್ನದಾಗಿಸಿಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದ್ದು, ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ಎದುರಾಳಿ ಪಕ್ಷಗಳಿಗೆ ಭಾರಿ ಮುಖಭಂಗ ಉಂಟಾಗಿದೆ. ಹೀಗಿದ್ದರೂ ಈ ಫಲಿತಾಂಶದ ನಂತರದಲ್ಲಿ ರಾಜ್ಯಸಭೆಯಲ್ಲಿ ಬಿಜೆಪಿ ಸಂಖ್ಯೆ 95 ರಿಂದ 92ಕ್ಕೆ ಇಳಿದಿದೆ. ಹರಿಯಾಣದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗೆದ್ದಿರುವುದರಿಂದ ಒಟ್ಟು ಸಂಖ್ಯೆ 93 ಎನ್ನಲಡ್ಡಿಯಿಲ್ಲ. ಕಾಂಗ್ರೆಸ್ ಸದಸ್ಯರ ಸಂಖ್ಯೆ 29 ರಿಂದ 31ಕ್ಕೆ ಏರಿದೆ. ಚುನಾವಣೆ ನಡೆದ 57 ರಾಜ್ಯಸಭೆ ಸ್ಥಾನಗಳಲ್ಲಿ 24 ಹೊಂದಿದ್ದ ಬಿಜೆಪಿ, ವಿಧಾನಸಭೆಗಳಲ್ಲಿನ ಬಲಾಬಲದ ಪ್ರಕಾರ 20 ಸೀಟುಗಳನ್ನು ಉಳಿಸಿಕೊಳ್ಳಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ತಂತ್ರಗಾರಿಕೆಯಲ್ಲಿ ಒಂದು ಹೆಜ್ಜೆ ಮುಂದಿದ್ದ ಬಿಜೆಪಿ 22 ಸೀಟುಗಳನ್ನು ತನ್ನದಾಗಿಸಿಕೊಳ್ಳುವ ಜತೆಗೆ ಸ್ವತಂತ್ರ ಅಭ್ಯರ್ಥಿಯೊಬ್ಬರ ಗೆಲುವು ಖಚಿತಪಡಿಸಿಕೊಂಡಿತು. ಕಾಂಗ್ರೆಸ್ ಒಟ್ಟು ಒಂಬತ್ತು ಸೀಟುಗಳನ್ನು ಗೆದ್ದುಕೊಂಡಿದೆ.
ರಾಷ್ಟ್ರಪತಿ ಚುನಾವಣೆಗೆ ಲೆಕ್ಕಾಚಾರ:ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿಯ ನಿರ್ವಹಣೆ ಮುಂದಿನ ರಾಷ್ಟ್ರಪತಿ ಚುನಾವಣೆಗೆ ಉತ್ತೇಜನಕಾರಿಯಾಗಿದ್ದು, ವಿಪಕ್ಷಗಳಿಗೆ ಹಿನ್ನಡೆಯಾಗಿದೆ. ಮುಖ್ಯವಾಗಿ ಮಹಾರಾಷ್ಟ್ರದಲ್ಲಿ ಆಡಳಿತ ಮೈತ್ರಿಕೂಟದ ಒಳಗಿನ ಭಿನ್ನಾಭಿಪ್ರಾಯ ಮತ್ತು ಒಗ್ಗಟ್ಟಿನ ಕೊರತೆಯನ್ನು ಈ ಫಲಿತಾಂಶ ಎತ್ತಿ ತೋರಿಸಿದೆ. ರಾಷ್ಟ್ರಪತಿ ಚುನಾವಣೆಗೆ ಬೇಕಿರುವ ಮತಮೌಲ್ಯಗಳನ್ನು ಹೆಚ್ಚಿಸುವ ಸಲುವಾಗಿ ಪ್ರಾದೇಶಿಕ ಪಕ್ಷ ಮತ್ತು ಪಕ್ಷೇತರರ ಮನವೊಲಿಸುವಲ್ಲಿ ಬಿಜೆಪಿಗೆ ಈ ಫಲಿತಾಂಶ ಸಹಕಾರಿಯಾಗಲಿದೆ.
ಮಾಕೇನ್​ಗೆ ಅಚ್ಚರಿಯ ಸೋಲು:ಹರ್ಯಾಣದಿಂದ ರಾಜ್ಯಸಭೆ ಪ್ರವೇಶ ಬಯಸಿದ್ದ ಕಾಂಗ್ರೆಸ್​ನ ಮಾಜಿ ಕೇಂದ್ರ ಸಚಿವ ಅಜಯ್ ಮಾಕೇನ್ ಗೆದ್ದು ಸಂಭ್ರಮಿಸಿದ ಬಳಿಕ ಸೋಲಿನ ಕಹಿ ಉಂಡಿದ್ದಾರೆ! ಎರಡು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಒಂದನ್ನು ಬಿಜೆಪಿಯ ಕೃಷ್ಣ ಲಾಲ್ ಪನ್ವಾರ್ ಗೆದ್ದರೆ, ಮತ್ತೊಂದನ್ನು ಬಿಜೆಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಕಾರ್ತಿಕೇಯ ಶರ್ಮ ಗೆದ್ದುಕೊಂಡಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿಗೆ ಗೆಲ್ಲುವ ಎಲ್ಲ ಸಾಧ್ಯತೆಯಿತ್ತಾದರೂ, ಪಕ್ಷೇತರ ಅಭ್ಯರ್ಥಿಯೊಬ್ಬರು ಮತದಾನದಿಂದ ದೂರವುಳಿದದ್ದು ಮತ್ತು ಹರ್ಯಾಣ ಕಾಂಗ್ರೆಸ್ ಶಾಸಕ ಕುಲ್​ದೀಪ್ ಬಿಷ್ಣೋಯ್ ಅಡ್ಡ ಮತದಾನ ಮಾಡಿದ್ದರಿಂದಾಗಿ ಕಾರ್ತಿಕೇಯ ಶರ್ಮ ನಾಟಕೀಯ ರೀತಿಯಲ್ಲಿ ಮಾಕೇನ್​ರನ್ನು ಸೋಲಿಸಿದರು. ಕೃಷ್ಣಲಾಲ್ ಪನ್ವಾರ್ 36 ಮತಗಳನ್ನು ಪಡೆದರೆ, ಶರ್ಮ 23 ಮೊದಲ ಪ್ರಾಶಸ್ಱದ ಮತಗಳನ್ನು ಪಡೆದಿದ್ದರು. ಈ ವೇಳೆ 6.6 ಮತಗಳನ್ನು ಬಿಜೆಪಿಯಿಂದ ಇವರಿಗೆ ವರ್ಗಾಯಿಸಲಾಯಿತು. ಇದರಿಂದಾಗಿ ಇವರ ಒಟ್ಟು ಮತ ಪ್ರಮಾಣ 29.6ಕ್ಕೆ ತಲುಪಿತ್ತು. ಮಾಕೇನ್ 29 ಮತಗಳನ್ನು ಪಡೆದಿದ್ದರು. ಕೇವಲ 0.66 ಹೆಚ್ಚು ಮತಮೌಲ್ಯದ ಅಂತರದಲ್ಲಿ ಕಾರ್ತಿಕೇಯ ಶರ್ಮ ಮಾಕೇನ್​ರನ್ನು ಹಿಂದಿಕ್ಕಿ ರಾಜ್ಯಸಭೆ ಪ್ರವೇಶಿಸಿದರು. ಅಡ್ಡ ಮತದಾನ ಮಾಡಿದ ಶಾಸಕ ಬಿಷ್ಣೋಯ್ರನ್ನು ಕಾಂಗ್ರೆಸ್ ಉಚ್ಚಾಟಿಸಿದೆ.
ರಾಜ್ಯವಾರು ಸ್ಥಾನಗಳು:ರಾಜ್ಯಸಭೆಯಲ್ಲಿ 15 ರಾಜ್ಯಗಳ 57 ಸ್ಥಾನಗಳು ತೆರವಾಗಿದ್ದವು. ಉತ್ತರಪ್ರದೇಶದಿಂದ 11, ಮಹಾರಾಷ್ಟ್ರ ಮತ್ತು ತಮಿಳುನಾಡು ತಲಾ 6, ಬಿಹಾರ 5, ಕರ್ನಾಟಕ, ರಾಜಸ್ಥಾನ ಮತ್ತು ಆಂಧ್ರಪ್ರದೇಶದಲ್ಲಿ ತಲಾ 4, ಮಧ್ಯಪ್ರದೇಶ ಮತ್ತು ಒಡಿಶಾ ತಲಾ 3, ಪಂಜಾಬ್, ಜಾರ್ಖಂಡ್, ಹರಿಯಾಣ, ಛತ್ತೀಸ್​ಗಢ ಮತ್ತು ತೆಲಂಗಾಣದಲ್ಲಿ ತಲಾ 2 ಮತ್ತು ಉತ್ತರಾಖಂಡದಿಂದ ಒಬ್ಬರು ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. 41 ಅವಿರೋಧ ಆಯ್ಕೆಯಾಗಿದ್ದರೆ, 16 ಸ್ಥಾನಗಳಿಗೆ ಚುನಾವಣೆ ನಡೆದಿತ್ತು.
ಪ್ರಾದೇಶಿಕ ಪಕ್ಷಗಳ ಸ್ಥಿತಿ:ರಾಜ್ಯಸಭೆಯಲ್ಲಿ ಪ್ರಾದೇಶಿಕ ಪಕ್ಷಗಳ ಪೈಕಿ ಆಂಧ್ರಪ್ರದೇಶದ ವೈಎಸ್​ಆರ್-ಕಾಂಗ್ರೆಸ್​ನ ಬಲ 6ರಿಂದ 9ಕ್ಕೇರಿದೆ. ದೆಹಲಿ ಮತ್ತು ಪಂಜಾಬ್​ನಲ್ಲಿ ಅಧಿಕಾರದಲ್ಲಿರುವ ಆಮ್ ಆದ್ಮಿ ಪಕ್ಷದ ರಾಜ್ಯಸಭೆಯ ಒಟ್ಟು ಸದಸ್ಯರ ಬಲ 10ಕ್ಕೆ ಹಿಗ್ಗಿದೆ. ತಮಿಳುನಾಡಿನ ಡಿಎಂಕೆ, ಒಡಿಶಾದ ಬಿಜು ಜನತಾ ದಳ, ತೆಲಂಗಾಣ ರಾಷ್ಟ್ರ ಸಮಿತಿ, ಬಿಹಾರದ ಜೆಡಿಯು, ಎನ್​ಸಿಪಿ ಮತ್ತು ಶಿವಸೇನೆ ಸಂಖ್ಯೆಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಡಿಎಂಕೆ 10 ಸದಸ್ಯರನ್ನು ಹೊಂದಿದ್ದರೆ, ಬಿಜೆಡಿ ಒಂಬತ್ತು, ಟಿಆರ್​ಎಸ್ ಏಳು, ಜೆಡಿಯು ಐದು, ಎನ್​ಸಿಪಿ ನಾಲ್ಕು ಮತ್ತು ಶಿವಸೇನೆ ಮೂರು ಸದಸ್ಯರನ್ನು ಹೊಂದಿವೆ. ತೃಣಮೂಲ ಕಾಂಗ್ರೆಸ್​ನ 13 ಮತ್ತು ಎಡಪಕ್ಷಗಳ 5 ಸದಸ್ಯರಿದ್ದಾರೆ. ಸಮಾಜವಾದಿ ಪಕ್ಷವು ಸ್ವತಂತ್ರ ಅಭ್ಯರ್ಥಿ ಕಪಿಲ್ ಸಿಬಲ್ ಮತ್ತು ಆರ್​ಎಲ್​ಡಿಯ ಜಯಂತ್ ಚೌಧರಿಯನ್ನು ಬೆಂಬಲಿಸಿದ್ದರಿಂದ ಸಮಾಜವಾದಿ ಸಂಖ್ಯೆ 5ರಿಂದ 3ಕ್ಕೆ ಇಳಿದಿದೆ. 3 ಸದಸ್ಯರಿದ್ದ ಬಹುಜನ ಸಮಾಜವಾದಿ ಪಕ್ಷಕ್ಕೀಗ ರಾಜ್ಯಸಭೆಯಲ್ಲಿ ಉಳಿದಿರುವುದು ಓರ್ವ ಪ್ರತಿನಿಧಿ ಮಾತ್ರ. ಕಳೆದ ಪಂಜಾಬ್ ಚುನಾವಣೆಯಲ್ಲಿ ಹೀನಾಯ ಸೋಲುಂಡಿದ್ದ ಶಿರೋಮಣಿ ಅಕಾಲಿದಳದ ಎಲ್ಲ ಸದಸ್ಯರು ನಿವೃತ್ತಿಯಾಗಿದ್ದಾರೆ.
ಮಹಾರಾಷ್ಟ್ರದ 6 ಸೀಟುಗಳಲ್ಲಿ ಶಿವಸೇನೆ, ಎನ್​ಸಿಪಿ ಮತ್ತು ಕಾಂಗ್ರೆಸ್ ಒಳಗೊಂಡ ಮೈತ್ರಿಕೂಟ ಸರ್ಕಾರ 3 ಸೀಟು ಗೆಲ್ಲುವ ಜತೆಗೆ 6ನೇ ಸೀಟನ್ನೂ ತನ್ನದಾಗಿಸಿಕೊಳ್ಳುವ ತವಕದಲ್ಲಿತ್ತು. ಆದರೆ, ಬಿಜೆಪಿ ನಾಯಕರು ಪಕ್ಷೇತರ ಹಾಗೂ ಸಣ್ಣಪುಟ್ಟ ಪಕ್ಷಗಳ ಶಾಸಕರನ್ನು ತಮ್ಮೆಡೆಗೆ ಸೆಳೆದುಕೊಳ್ಳುವ ಮೂಲಕ 6ರಲ್ಲಿ ಮೂರು ಸೀಟನ್ನು ಗೆಲ್ಲುವ ಮೂಲಕ ಆಡಳಿತಾರೂಢ ಮೈತ್ರಿ ಸರ್ಕಾರಕ್ಕೆ ಆಘಾತ ನೀಡಿದ್ದಾರೆ. ಕೇಂದ್ರ ಸಚಿವ ಪಿಯೂಷ್ ಗೋಯೆಲ್, ಅನಿಲ್ ಬೋಂಡೆ ಗೆಲ್ಲುವುದು ನಿಶ್ಚಿತವಾಗಿತ್ತು. ಆದರೆ, ಮಾಜಿ ಸಂಸದ ಧನಂಜಯ ಮಹಾದಿಕ್ ಶಿವಸೇನೆಯ ಸಂಜಯ್ ಪವಾರ್​ರನ್ನು ಸೋಲಿಸಿದ್ದು, ಆ ಮೂಲಕ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ರಾಜಕೀಯ ಹಿನ್ನಡೆ ಅನುಭವಿಸಿದೆ. ಕಾಂಗ್ರೆಸ್​ನ ಯುವ ನಾಯಕ ಇಮ್ರಾನ್ ಪ್ರತಾಪ್​ಗಢಿ ಚುನಾವಣೆ ಗೆದ್ದು ರಾಜ್ಯಸಭೆ ಪ್ರವೇಶಿಸಲಿದ್ದಾರೆ. ಉಳಿದಂತೆ ಶಿವಸೇನೆಯಿಂದ ಸಂಜಯ್ ರಾವತ್ ಮತ್ತು ಎನ್​ಸಿಪಿಯಿಂದ ಪ್ರಫುಲ್ ಪಟೇಲ್ ರಾಜ್ಯಸಭೆ ಸದಸ್ಯರಾಗಿ ಮರು ಆಯ್ಕೆಯಾಗಿದ್ದಾರೆ. ‘ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಪಕ್ಷೇತರ ಶಾಸಕರನ್ನು ತಮ್ಮ ಕಡೆಗೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಶಿವಸೇನೆ ಅಭ್ಯರ್ಥಿ ಸೋತಿರುವುದು ಆಘಾತಕಾರಿ ಸಂಗತಿಯೇನಲ್ಲ’ ಎಂದು ಎನ್​ಸಿಪಿ ನಾಯಕ ಶರದ್ ಪವಾರ್ ಪ್ರತಿಕ್ರಿಯಿಸಿದ್ದಾರೆ. ಮೈತ್ರಿಕೂಟದ ಅಭ್ಯರ್ಥಿಗಳು ಶಾಸಕರ ಸಂಖ್ಯೆಗೆ ಅನುಗುಣವಾಗಿ ಮತಗಳನ್ನು ಪಡೆದರು. ವಿವಿಧ ವಿಧಾನಗಳನ್ನು ಬಳಸಿಕೊಂಡು ಸ್ವತಂತ್ರ ಶಾಸಕರು ಮತ್ತು ಸಣ್ಣ ಪಕ್ಷಗಳ ಶಾಸಕರನ್ನು ನಮ್ಮಿಂದ ದೂರವಿಡುವಲ್ಲಿ ಬಿಜೆಪಿ ಯಶಸ್ವಿಯಾಗಿದೆ ಎಂದಿದ್ದಾರೆ.
ಅಡ್ಡ ಮತದಾನ ಮಾಡಿದ ಶಾಸಕನನ್ನು ಪಕ್ಷದಿಂದ ಉಚ್ಚಾಟಿಸಿದ ಕಾಂಗ್ರೆಸ್​
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × five =
Remember me
