ಬೆಂಗಳೂರು:ವಿದೇಶದಲ್ಲಿ ಕುಳಿತು 25 ವರ್ಷಗಳ ಕಾಲ ಗಣ್ಯರಿಗೆ ಇಂಟರ್​ನೆಟ್ ಕರೆ ಮಾಡಿ ಹಫ್ತಾ ವಸೂಲಿ ಮಾಡುತ್ತಿದ್ದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ರವಿ ಪೂಜಾರಿಯನ್ನು ಮಡಿವಾಳ ಎಫ್​ಎಸ್​ಎಲ್ ಕೇಂದ್ರದಲ್ಲಿ ಸಿಸಿಬಿ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಈತನ ಸಹಚರರ ಬಂಧನಕ್ಕೂ ವಿಶೇಷ ತಂಡ ಬಲೆ ಬೀಸಿದೆ.
ರವಿ ಪೂಜಾರಿ ಧ್ವನಿ ಮಾದರಿ ಮತ್ತು ಹಫ್ತಾ ವಸೂಲಿಗೆ ಮಾಡಿದ್ದ ಕರೆಗಳ ಮಾದರಿಯನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದು, ಈ ಎರಡೂ ಧ್ವನಿಯಲ್ಲಿ ಸಾಮ್ಯತೆ ಬಗ್ಗೆ ವರದಿ ಕೋರಿದ್ದಾರೆ. ಎಫ್​ಎಸ್​ಎಲ್ ತಜ್ಞರು ನೀಡುವ ವರದಿ ರವಿ ಪೂಜಾರಿಯ 97 ಪ್ರಕರಣಗಳಿಗೆ ಪ್ರಮುಖ ಸಾಕ್ಷಿ ಆಗಲಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ಕೊನೆಯ ಬಾರಿಗೆ 1994ರಲ್ಲಿ ಮಹಾರಾಷ್ಟ್ರ ಪೊಲೀಸರು ಕೊಲೆ ಪ್ರಕರಣದಲ್ಲಿ ರವಿ ಪೂಜಾರಿಯ ಬೆರಳಚ್ಚು ಮತ್ತು ಮುಖ ಚಹರೆ ಸಂಗ್ರಹಿಸಿದ್ದರು. ಇದಾದ ಮೇಲೆ ಪೊಲೀಸರಿಗೆ ಸಿಕ್ಕಿರಲಿಲ್ಲ. ಅದಕ್ಕಾಗಿ ಇತ್ತೀಚಿನ ಫೋಟೋ ಮತ್ತು ಬೆರಳಚ್ಚು ಸಹ ಸಂಗ್ರಹಿಸಲಾಗಿದೆ. ಭಾರತದಲ್ಲಿ ಕುಳಿತು ಉದ್ಯಮಿಗಳ, ಸಿನಿಮಾ ರಂಗ, ಬಿಲ್ಡರ್, ರಿಯಲ್ ಎಸ್ಟೇಟ್ ಉದ್ಯಮಿಗಳು, ರಾಜಕಾರಣಿಗಳು ಸೇರಿ ಗಣ್ಯರ ಮೊಬೈಲ್ ನಂಬರ್ ಸಂಗ್ರಹಿಸಿ ರವಿ ಪೂಜಾರಿಗೆ ನೀಡುತ್ತಿದ್ದ ಸಹಚರರ ಬಂಧನಕ್ಕೆ ವಿಶೇಷ ತಂಡ ಬಲೆ ಬೀಸಿದೆ.
2007ರ ಫೆ.15ರ ಮಧ್ಯಾಹ್ನ 2.45ರಲ್ಲಿ ಜಯನಗರ 9ನೇ ಬ್ಲಾಕ್ ಈಸ್ಟ್ ಎಂಡ್ ಡಿ ಕ್ರಾಸ್​ನಲ್ಲಿರುವ ಶಬನಮ್ ಡೆವಲಪರ್ಸ್ ಕಚೇರಿಗೆ ನುಗ್ಗಿದ ಪೂಜಾರಿ ಸಹಚರರು ಕಚೇರಿ ಸಿಬ್ಬಂದಿ ರವಿ ಮತ್ತು ಶೈಲಜಾ ಅವರನ್ನು ಪಿಸ್ತೂಲ್​ನಿಂದ ಗುಂಡು ಹಾರಿಸಿ ಕೊಂದಿದ್ದ ಪ್ರಕರಣದ ತನಿಖೆ ನಡೆಸಲಾಗುತ್ತಿದೆ. ಇದರಲ್ಲಿ ಈಗಾಗಲೇ 17 ಮಂದಿಯನ್ನು ಬಂಧಿಸಿದ್ದು, ಪ್ರಮುಖ ಆರೋಪಿ ಸೂರ್ಯ ಪೂಜಾರಿ ಸಿಗಬೇಕಿದೆ. ಆತ ಸೆರೆಸಿಕ್ಕರೆ ಮತ್ತಷ್ಟು ಮಂದಿಯ ಸುಳಿವು ಸಿಗುವ ನಿರೀಕ್ಷೆ ಇದೆ. ಈ ಕೇಸಿನಲ್ಲಿ ಆರೋಪಪಟ್ಟಿ ಸಲ್ಲಿಸಿದ್ದು, ತನಿಖೆ ಮುಗಿದ ಮೇಲೆ ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸಲಾಗುತ್ತದೆ. ಆ ನಂತರ ಉಳಿದ ಪ್ರಕರಣಗಳ ತನಿಖೆ ಕೈಗೊಳ್ಳಲಾಗುತ್ತದೆ. ರವಿ ಪೂಜಾರಿ ಮತ್ತು ಈತನ ಸಹಚರರ ವಿರುದ್ಧ ಬೆದರಿಕೆ ಮತ್ತು ಹಫ್ತಾ ವಸೂಲಿ ದೂರು ನೀಡಿದ್ದ ರಾಜಕಾರಣಿಗಳು, ಉದ್ಯಮಿಗಳು, ಸಿನಿಮಾ ರಂಗದವರು ಮತ್ತು ಗಣ್ಯರನ್ನು ಒಬ್ಬೊಬ್ಬರಾಗಿ ಕರೆದು ಹೇಳಿಕೆ ದಾಖಲಿಸಿಕೊಳ್ಳಲು ತಯಾರಿ ನಡೆಸುತ್ತಿದ್ದಾರೆ. ಈ ಸಲುವಾಗಿ ರಾಜ್ಯದಲ್ಲಿ ದಾಖಲಾಗಿರುವ 97 ಪ್ರಕರಣಗಳ ದಾಖಲೆಗಳನ್ನು ಸಂಗ್ರಹಿಸುತ್ತಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
97 ಪ್ರಕರಣ ತನಿಖೆಗೆ ವಿಶೇಷ ತಂಡ:ಸಂಸದ ಡಿ.ಕೆ. ಸುರೇಶ್, ಮಾಜಿ ಶಾಸಕ ವಿನಯ್ ಕುಲಕರ್ಣಿ, ಮಾಜಿ ಸಚಿವ ಯು.ಟಿ. ಖಾದರ್ ಸೇರಿ ಇನ್ನಿತರ ರಾಜಕಾರಣಿಗಳಿಗೆ ಬಂದಿದ್ದ ಬೆದರಿಕೆ ಕರೆಗಳು, ಮಂತ್ರಿ ಡೆವಲಪರ್ಸ್ ಮೇಲೆ ದಾಳಿ ಸೇರಿ ಎಲ್ಲವೂ ಗಣ್ಯರ ಪ್ರಕರಣಗಳೇ ಆಗಿವೆ. ಅದಕ್ಕಾಗಿ ತನಿಖೆ ವೇಳೆ ಲೋಪ ಆಗದಂತೆ ಮತ್ತು ರವಿ ಪೂಜಾರಿಗೆ ಭದ್ರತೆ ಒದಗಿಸುವ ಸಲುವಾಗಿ 97 ಪ್ರಕರಣಗಳ ತನಿಖೆಗೆ ವಿಶೇಷ ತಂಡ ರಚಿಸಲು ಪೊಲೀಸ್ ಇಲಾಖೆ ಮುಂದಾಗಿದೆ. ಈ ನಿಟ್ಟಿನಲ್ಲಿ ಡಿಜಿ-ಐಜಿಪಿ ಪ್ರವೀಣ್ ಸೂದ್, ಗುರುವಾರ ಹಿರಿಯ ಅಧಿಕಾರಿಗಳ ಸಭೆ ಕರೆದಿದ್ದು, ವಿಶೇಷ ತಂಡದ ರೂಪುರೇಷೆಗಳು ಸಿಗಲಿದೆ ಎಂದು ಮೂಲಗಳು ತಿಳಿಸಿವೆ.
ತಪ್ಪಿಸಿಕೊಳ್ಳಲು ಸೆನೆಗಲ್ ಕಾನೂನು ಬಳಕೆ ಯತ್ನ
2019ರ ಜನವರಿ 19ರಂದೇ ರವಿ ಪೂಜಾರಿ ಸೆನೆಗಲ್ ರಾಜಧಾನಿ ಡಕರ್​ನಲ್ಲಿ ಸೆರೆಸಿಕ್ಕಿದ್ದ. ಆದರೆ, ಭಾರತಕ್ಕೆ ಕರೆ ತರಲು 1 ವರ್ಷವೇ ಬೇಕಾಯಿತು. ಇದಕ್ಕೆ ಪ್ರಮುಖ ಕಾರಣ ರವಿ ಪೂಜಾರಿ ತನ್ನ ಪರ ವಕೀಲರಿಂದ ಅಲ್ಲಿನ ಕಾನೂನನ್ನು ಬಳಸಿ ಕೊಂಡು ತಪ್ಪಿಸಿಕೊಳ್ಳಲು ಯತ್ನಿಸಿದ್ದು. ಭಾರತ ಮತ್ತು ಸೆನೆಗಲ್ ರಾಜತಾಂತ್ರಿಕ ಒಪ್ಪಂದ ಆಗಿರಲಿಲ್ಲ. ಅದೇ ವೇಳೆಗೆ 2019ರ ಫೆಬ್ರವರಿಯಲ್ಲಿ ಸೆನೆಗಲ್ ಅಧ್ಯಕ್ಷೀಯ ಚುನಾವಣೆ ಘೋಷಣೆ ಆಗಿತ್ತು. ಅಧ್ಯಕ್ಷರ ಒಪ್ಪಿಗೆ ಬೇಕಾಗಿದ್ದ ಕಾರಣ ಕೆಲ ತಿಂಗಳು ಮುಂದೂಡಲಾಗಿತ್ತು. ಸೆನೆಗಲ್ ಕಾನೂನಿನಲ್ಲಿ ಗಲ್ಲು ಶಿಕ್ಷೆ, ಕಲ್ಲು ಹೊಡೆದು ಕೊಲ್ಲುವುದು, ಗುಂಡಿಟ್ಟು ಹತ್ಯೆ ಮಾಡುವ ರಾಷ್ಟ್ರಕ್ಕೆ ಕೈದಿಯನ್ನು ಹಸ್ತಾಂತರಿಸಲು ಆಕ್ಷೇಪವಿದೆ. ಇದನ್ನೇ ಬಳಸಿಕೊಂಡ ರವಿ ಪೂಜಾರಿ ಪರ ವಕೀಲರು, ಭಾರತದಲ್ಲಿ ಗಲ್ಲು ಶಿಕ್ಷೆ ಪ್ರಸ್ತಾಪಿಸಿ ಜಾಮೀನಿಗೆ ಒತ್ತಾಯಿಸಿದ್ದರು. ಕೊನೆಗೆ ಭಾರತದ ವಾದ ಆಲಿಸಿ ಫೆ.20ಕ್ಕೆ ರವಿ ಅರ್ಜಿ ವಜಾ ಮಾಡಿ ಹಸ್ತಾಂತರಕ್ಕೆ ಗ್ರೀನ್ ಸಿಗ್ನಲ್ ನೀಡಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 3 =
Remember me
