ಅಹ್ಮದಾಬಾದ್:ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಮನಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೊಟ್ಟ ಮೊದಲ ಬಾರಿಗೆ ಅಮೆರಿಕದ ಅಧ್ಯಕ್ಷರೊಬ್ಬರನ್ನು ಕಂಡೂ ಕೇಳರಿಯದ ರೀತಿಯಲ್ಲಿ ಸ್ವಾಗತಿಸಲು ಭಾರತ ಸಜ್ಜಾಗಿದ್ದು, ಮಹಾತ್ಮ ಗಾಂಧಿ ಹುಟ್ಟಿದ ನಾಡಲ್ಲಿ ದೇಶದ ವೈವಿಧ್ಯತೆ, ಶಕ್ತಿ ಹಾಗೂ ಸಾಮರ್ಥ್ಯದ ಅನಾವರಣಕ್ಕೂ ವೇದಿಕೆ ಸಜ್ಜುಗೊಂಡಿದೆ.
ಆರ್ಥಿಕತೆ ಹಾಗೂ ರಕ್ಷಣೆಯ ವಿಷಯದಲ್ಲಿ ಅಮೆರಿಕ ವಿಶ್ವದ ದೊಡ್ಡಣ್ಣ ಎನಿಸಿಕೊಂಡಿದ್ದರೂ, ಭಾರತ ಅಮೆರಿಕಕ್ಕೆ ಸರಿ ಸಮನಾಗಿ ನಿಲ್ಲಲು ಯತ್ನಿಸುತ್ತಿದೆ ಮತ್ತು ನಿಮ್ಮೊಂದಿಗೆ ಒಟ್ಟಾಗಿ ಹೆಜ್ಜೆ ಹಾಕುತ್ತಿದ್ದೇವೆ. ಅಭಿವೃದ್ಧಿಯ ದಿಶೆಯಲ್ಲಿ ನಾವೂ ಮುನ್ನುಗ್ಗುತ್ತಿದೆ. ಜಗತ್ತಿನ ಇತರೆ ಬಲಶಾಲಿ ರಾಷ್ಟ್ರಗಳಂತೆ ನಾವೂ ಶಕ್ತಿ ಸಾಮರ್ಥ್ಯ ಉಳ್ಳವರೇ ಆಗಿದ್ದೇವೆ. ಇದನ್ನು ಜಗತ್ತಿನ ಮುಂದೆ ಸಾರಿ ಹೇಳುವುದು ನಮಸ್ತೆ ಟ್ರಂಪ್ ಕಾರ್ಯಕ್ರಮದ ಮೂಲ ಉದ್ದೇಶವೂ ಆಗಿದೆ ಎಂಬುದಕ್ಕೆ ಅಹ್ಮದಾಬಾದ್ ನಗರ ಮತ್ತು ಮೊಟೆರಾದ ಕ್ರಿಕೆಟ್ ಸ್ಟೇಡಿಯಂ ಸಜ್ಜುಗೊಂಡಿರುವ ರೀತಿಯೇ ಸಾಕ್ಷಿ. ಹಿಂದೆ ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ಕೂಡ ಅಹ್ಮದಾಬಾದ್​ಗೆ ಭೇಟಿ ನೀಡಿದ್ದರು. ಆದರೆ ಅದನ್ನೂ ಮೀರಿದ ರೀತಿಯಲ್ಲಿ ಅಮೆರಿಕದ ಅಧ್ಯಕ್ಷರಿಗೆ ಸಿಗುತ್ತಿರುವ ಸ್ವಾಗತ ಕೇವಲ ಚೀನಾ ಮಾತ್ರವಲ್ಲ, ಜಗತ್ತನ್ನೇ ನಿಬ್ಬೆರಗಾಗಿಸುವಂತಿದೆ. ನಮಸ್ತೆ ಟ್ರಂಪ್ ಕಾರ್ಯಕ್ರಮದ ಖರ್ಚುವೆಚ್ಚಗಳ ಬಗ್ಗೆ ವಿಪಕ್ಷಗಳು ಏನೇ ಹೇಳಿದರೂ, ಅಮೆರಿಕ ಅಧ್ಯಕ್ಷರನ್ನು ವೈಭವದಿಂದ ಸ್ವಾಗತಿಸುವ ಮೂಲಕ ನಮ್ಮ ನಾಯಕತ್ವ
ಎಲ್ಲರಿಗಿಂತ ಭಿನ್ನ ಎಂಬ ಸಂದೇಶ ಕಳುಹಿಸುವುದೂ ಪ್ರಧಾನಿ ಮೋದಿ ಉದ್ದೇಶ. ಅಲ್ಲದೇ, ಜಾಗತಿಕ ಶಕ್ತಿಗಳು ಟ್ರಂಪ್ ಭಾರತ ಭೇಟಿಯನ್ನು ಕುತೂಹಲದಿಂದ ಎದುರು ನೋಡುತ್ತಿವೆ ಮತ್ತು ನಮಸ್ತೆ ಟ್ರಂಪ್ ಅಂತಾರಾಷ್ಟ್ರೀಯ ಮಾಧ್ಯಮ ದಲ್ಲೂ ಸದ್ದು ಮಾಡಿದೆ. ತಮ್ಮ ಕಾರ್ಯಾವಧಿಯಲ್ಲಿ ಟ್ರಂಪ್ ಈಗಾಗಲೇ ಕೊರಿಯಾ, ಚೀನಾ ಸೇರಿದಂತೆ ಅನೇಕ ದೇಶಗಳಿಗೆ ಭೇಟಿ ನೀಡಿದ್ದಾರೆ. ಆದರೆ ಆ ಎಲ್ಲಾ ದೇಶಗಳಿಗೆ ಮೀರಿದ ಮಟ್ಟದಲ್ಲಿ ಅವರಿಗೆ ಭಾರತದಲ್ಲಿ ಸ್ವಾಗತ ಸಿಗುತ್ತಿದೆ. ಉಭಯ ದೇಶಗಳ ಸಹಭಾಗಿತ್ವ ಹಾಗೂ ದ್ವಿಪಕ್ಷೀಯ ಸಂಬಂಧ ವೃದ್ಧಿಯಲ್ಲಿ ಇದು ಮಹತ್ವದ ಪಾತ್ರವಹಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.
ಭಾರತದ ಪಾರಂಪರಿಕ ನಗರ ಅಹ್ಮದಾಬಾದ್ ನಲ್ಲಿ ದೇಶದ ವೈವಿಧ್ಯತೆ ಸೌಂದರ್ಯವೂ ಅಮೆರಿಕ ಅಧ್ಯಕ್ಷರ ಮುಂದೆ ಅನಾವರಣಗೊಳ್ಳುತ್ತಿದೆ. ಪ್ರತಿಯೊಂದು ರಾಜ್ಯ, ಪ್ರಾಂತ್ಯಗಳ ವಿಶೇಷತೆಯನ್ನು ಪ್ರತಿಬಿಂಬಿಸಲೆಂದೇ ಪ್ರತ್ಯೇಕವಾಗಿ 50 ವೇದಿಕೆಗಳನ್ನು ನಿರ್ಮಾಣ ಮಾಡಲಾಗಿದ್ದು, ಇಲ್ಲಿ ಆಯಾ ರಾಜ್ಯಗಳ ಕಲಾವಿದರು ನೃತ್ಯ ಪ್ರದರ್ಶನಗಳನ್ನು ಮಾಡುವ ಜತೆಗೆ ತಮ್ಮ ಸಂಸ್ಕೃತಿ, ಪರಂಪರೆಗಳ ಚಿತ್ರಣ ನೀಡಲಿದ್ದಾರೆ. ಭಾರತದ ಸಮಗ್ರತೆಯನ್ನು ರೋಡ್ ಶೋನಲ್ಲಿ ತೋರಿಸುವ ಜತೆಗೆ ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂನಲ್ಲಿ ದೇಶದ 1.10 ಲಕ್ಷ ಜನಸಮೂಹಕ್ಕೂ ಅಮೆರಿಕದ ಅಧ್ಯಕ್ಷರನ್ನು ನೇರವಾಗಿ ನೋಡುವ ಅವಕಾಶವನ್ನು ಕಲ್ಪಿಸಲಾಗಿದೆ. ಭಾರತದ ಮಟ್ಟಿಗೆ ಇದು ಹೆಗ್ಗಳಿಕೆ ಎನ್ನುವುದು ಉತ್ಪ್ರೇಕ್ಷೆಯ ಮಾತೇನಲ್ಲ. ಟ್ರಂಪ್ ಆಗಮನವನ್ನು ಭಾರತ ಎದುರು ನೋಡುತ್ತಿರುವ ಮಧ್ಯೆ ಇಲ್ಲಿನ ರೋಡ್ ಷೋ ಸಾಕಷ್ಟು ಕುತೂಹಲ ಕೆರಳಿಸಿದೆ. ಟ್ರಂಪ್-ಮೋದಿ ಒಂದೇ ಕಾರಿನಲ್ಲಿ ತೆರಳುತ್ತಾರಾ ಅಥವಾ ಬೇರೆ ಬೇರೆ ಕಾರಿನಲ್ಲಿರುತ್ತಾರಾ? ಟ್ರಂಪ್ ಕಾರಿನಲ್ಲಿ ಅವರ ಕುಟುಂಬದ ಸದ್ಯಸ್ಯರೂ ಇರುತ್ತಾರಾ? ತೆರೆದ ವಾಹನದಲ್ಲಿ ರೋಡ್ ಶೋ ಮಾಡದಿದ್ದರೆ ರಸ್ತೆಯ ಎರಡೂ ಬದಿಯಲ್ಲಿ ನಿಂತಿರುವ ಸಾವಿರಾರು ಜನರಿಗೆ ಕೈ ಬೀಸುವುದು ಹೇಗೆ? ನೃತ್ಯ ಕಾರ್ಯಕ್ರಮಗಳ ಮೂಲಕ ಸ್ವಾಗತ ಕೋರುವ ಕಲಾತಂಡಗಳನ್ನು ವೀಕ್ಷಿಸುವುದು ಹೇಗೆ… ಹೀಗೆ ಇಂಥದ್ದೇ ಪ್ರಶ್ನೆಗಳು ಇಲ್ಲಿನ ಜನರನ್ನು ಕಾಡುತ್ತಿದ್ದರೂ ಈ ಬಗೆಗಿನ ಕಿಂಚಿತ್ತು ಮಾಹಿತಿಯನ್ನೂ ಮಾಧ್ಯಮಕ್ಕೆ ಹಂಚಿಕೊಳ್ಳಲಾಗಿಲ್ಲ.
ಗಟ್ಟಿಗೊಳ್ಳುತ್ತಿದೆ ಸಂಬಂಧ
ಭಾರತದ ಜತೆ ಟ್ರಂಪ್ ವ್ಯಾಪಾರ ಒಪ್ಪಂದ ಮಾಡಿಕೊಳ್ಳುತ್ತಾರೋ ಇಲ್ಲವೋ ಎಂಬ ಅಸ್ಪಷ್ಟತೆಯ ನಡುವೆಯೂ ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಹಾಗೂ ಸ್ನೇಹ ಗಟ್ಟಿಯಾಗುತ್ತಿರುವುದಂತೂ ನಿಜ. ಟ್ರಂಪ್ ಭಾರತಕ್ಕೆ ಬರುತ್ತಿರುವುದು ಮೊದಲನೇ ಬಾರಿ. ಹಾಗೆಂದು 2016ರಲ್ಲಿ ಅಮೆರಿಕ ಅಧ್ಯಕ್ಷರಾದ ಬಳಿಕ ಮೋದಿ-ಟ್ರಂಪ್ ಹಲವು ವೇದಿಕೆಗಳಲ್ಲಿ ಭೇಟಿ-ಮಾತುಕತೆ ನಡೆಸಿದ್ದಾರೆ. ಮುಖ್ಯವಾಗಿ, 2019ರಲ್ಲಿ ಮೋದಿ ಪ್ರಚಂಡ ಬಹುಮತದೊಂದಿಗೆ ಭಾರತದ ಪ್ರಧಾನಿಯಾಗಿ ಮರು ಆಯ್ಕೆಯಾದ ಬಳಿಕ ಟ್ರಂಪ್ ರನ್ನು ಐದನೇ ಬಾರಿಗೇ ಭೇಟಿ ಮಾಡಲಿದ್ದಾರೆ. ಈ ಹಿಂದೆ ಮೋದಿ ಒಸಾಕಾ, ಬ್ಯಾರಿಟ್ಜ, ಹ್ಯೂಸ್ಟನ್ ಮತ್ತು ನ್ಯೂಯಾರ್ಕ್​ನಲ್ಲಿ ಟ್ರಂಪ್ ಜತೆ ಮುಖಾಮುಖಿಯಾಗಿದ್ದರು. ಟ್ರಂಪ್-ಮೋದಿ ಸ್ನೇಹ ದೃಢವಾಗಿದೆ ಎಂಬುದು ಸ್ಪಷ್ಟ ಗೋಚರವಾಗಿದ್ದು ಪುಲ್ವಾಮ ದಾಳಿ ಹಾಗೂ ಭಾರತದ ಬಾಲಾಕೋಟ್ ಪ್ರತಿದಾಳಿ ಬಳಿಕ. ವಾಯು ಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಪಾಕ್ ವಶದಲ್ಲಿದ್ದ ಸಂದರ್ಭದಲ್ಲಿ ಅಮೆರಿಕ ಭಾರತದ ನೆರವಿಗೆ ಧಾವಿಸಿದ ಪರಿಣಾಮ ಎರಡೇ ದಿನದಲ್ಲಿ ಅಭಿನಂದನ್ ಭಾರತಕ್ಕೆ ವಾಪಸಾಗಲು ಸಾಧ್ಯವಾಗಿತ್ತು. ಮೇಲಾಗಿ, ಪುಲ್ವಾಮ ದಾಳಿ ನಡೆದ ಕೂಡಲೇ ಭಾರತದ ಮನವಿಯಂತೆ ವಿಶ್ವಸಂಸ್ಥೆ ಭದ್ರತಾ ಸಮಿತಿ ಪಾಕಿಸ್ತಾನದ ಉಗ್ರಗಾಮಿ ಮಸೂದ್ ಅಜರ್​ನನ್ನು ಜಾಗತಿಕ ಭಯೋತ್ಪಾದಕ ಎಂದೂ ಘೊಷಿಸಿತು. ಇದರಲ್ಲಿ ಅಮೆರಿಕದ ಬೆಂಬಲ ಬಹುಮುಖ್ಯ ಪಾತ್ರ ವಹಿಸಿತ್ತು.
ಬಾಹುಬಲಿ ಟ್ರಂಪ್!
‘ಬಾಹುಬಲಿ- 2’ ಸಿನಿಮಾದ ಎಡಿಟ್ ಮಾಡಿದ ವಿಡಿಯೋಗಳನ್ನು ಟ್ರಂಪ್ ರೀಟ್ವೀಟ್ ಮಾಡಿದ್ದಾರೆ. ‘ಜಿಯೊ ರೆ ಬಾಹುಬಲಿ’ ಹಾಡಿನ ದೃಶ್ಯ ಇದ್ದಾಗಿದ್ದು, ಟ್ರಂಪ್ ಪತ್ನಿ ಮೆಲನಿಯಾರ ಚಿತ್ರವನ್ನೂ ಸಿನಿಮಾದ ನಾಯಕಿಯ ಚಿತ್ರಕ್ಕೆ ಜೋಡಿಸಲಾಗಿದೆ. ಪ್ರಧಾನಿ ಮೋದಿಯವರ ಚಿತ್ರ ಕೂಡ ವಿಡಿಯೋದಲ್ಲಿ ಕ್ಷಣಕಾಲ ಮೂಡುತ್ತದೆ. ಈ ಟ್ವೀಟ್​ನ್ನು ಎರಡು ತಾಸಿನಲ್ಲಿ 17 ಸಾವಿರಕ್ಕೂ ಹೆಚ್ಚು ಬಾರಿ ಷೇರ್ ಆಗಿದೆ.
ಭಾರತಕ್ಕೆ ಬಂದ ಅಮೆರಿಕ ಅಧ್ಯಕ್ಷರು
1947ರಿಂದ 2000ದ ತನಕ ಅಮೆರಿಕದ 9 ಅಧ್ಯಕ್ಷರಲ್ಲಿ ಮೂವರು ಮಾತ್ರ ಭಾರತ ಪ್ರವಾಸ ಕೈಗೊಂಡಿದ್ದರು. 2000ದ ಬಳಿಕ ಅಮೆರಿಕದ ಮೂವರು ಅಧ್ಯಕ್ಷರು ಭಾರತಕ್ಕೆ ನಾಲ್ಕು ಬಾರಿ ಭೇಟಿ ಕೊಟ್ಟಿದ್ದಾರೆ. 2000ದಲ್ಲಿ ಬಿಲ್ ಕ್ಲಿಂಟನ್, 2006ರಲ್ಲಿ ಜಾರ್ಜ್ ಡಬ್ಲು್ಯ ಬುಷ್, 2010 ಮತ್ತು 2015ರಲ್ಲಿ ಬರಾಕ್ ಒಬಾಮ ಭಾರತ ಪ್ರವಾಸ ಕೈಗೊಂಡಿದ್ದರು. ಇದು ಕಳೆದ 20 ವರ್ಷಗಳಲ್ಲಿ ಜಾಗತಿಕವಾಗಿ ಭಾರತ ರಾಜತಾಂತ್ರಿಕವಾಗಿ, ಆರ್ಥಿಕವಾಗಿ ಬಲಿಷ್ಠಗೊಂಡಿದೆ ಎನ್ನುವುದರ ದ್ಯೋತಕ.
ಐದು ಒಪ್ಪಂದ ಸಾಧ್ಯತೆ
ಟ್ರಂಪ್ ಭೇಟಿ ವೇಳೆ ಬೌದ್ಧಿಕ ಆಸ್ತಿ ಹಕ್ಕು, ವ್ಯಾಪಾರ ಸೌಲಭ್ಯ, ಆಂತರಿಕ ಭದ್ರತೆಯಲ್ಲಿ ಸಹಕಾರ ಸೇರಿ ಐದು ಒಪ್ಪಂದಗಳು ಏರ್ಪಡುವ ನಿರೀಕ್ಷೆ ಇದೆ. ಉಗ್ರವಾದ ವಿರುದ್ಧ ಹೋರಾಟ, ಹಿಂದು ಮಹಾಸಾಗರ-ಶಾಂತ ಸಾಗರ ವಲಯದಲ್ಲಿ ಭಾಂದವ್ಯ ಹೆಚ್ಚಳ, ರಕ್ಷಣಾ ವ್ಯಾಪಾರ ವೃದ್ಧಿ, ಎಚ್1ಬಿ ವೀಸಾ ಕಠಿಣ ನಿಯಮ ಸಡಿಲಿಕೆ ಕುರಿತು ಚರ್ಚೆ ನಿರೀಕ್ಷೆ ಇದೆ.
ಗರಿಗೆದರಿದ ನಿರೀಕ್ಷೆ
ಟ್ರಂಪ್ ಅಧ್ಯಕ್ಷೀಯ ಚುನಾವಣೆ ಗೆದ್ದ (2026) ಕೆಲವೇ ತಿಂಗಳಲ್ಲಿ ಮೋದಿ ಅಮೆರಿಕಕ್ಕೆ ಭೇಟಿ ನೀಡಿ ಟ್ರಂಪ್​ರನ್ನು ಅಭಿನಂದಿಸಿದ್ದರು. ನನ್ನ ಕಾರ್ಯಾವಧಿ ಮುಕ್ತಾಯಕ್ಕೆ ಖಂಡಿತವಾಗಿಯೂ ನಾನು ಭಾರತ ಪ್ರವಾಸ ಕೈಗೊಳ್ಳುವೆ ಎಂದು ಅಂದೇ ಟ್ರಂಪ್ ಮೋದಿಯವರಿಗೆ ಭರವಸೆ ನೀಡಿದ್ದರು ಮತ್ತು ಅಂತೆಯೇ ಅಧ್ಯಕ್ಷೀಯ ಚುನಾವಣೆಯ ಹೊಸ್ತಿಲಲ್ಲಿ ಭಾರತಕ್ಕೆ ಬರುತ್ತಿದ್ದಾರೆ. ಅಮೆರಿಕದಲ್ಲಿ ನಡೆದಿದ್ದ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಪ್ರಧಾನಿ ಬಹಿರಂಗವಾಗಿ ಅಬ್ ಕೀ ಬಾರ್ ಟ್ರಂಪ್ ಸರ್ಕಾರ್ ಎಂದು ಹೇಳಿದ್ದರು. ಇದು ವಿಪಕ್ಷಗಳ ಟೀಕೆಗೆ ಗುರಿಯಾಗಿದ್ದರೂ, ಟ್ರಂಪ್ ಜತೆಗಿನ ಸ್ನೇಹ ಸಂಬಂಧ ಮೋದಿಯವರನ್ನು ಈ ಹೇಳಿಕೆಗೆ ಪ್ರೇರೇಪಿಸಿತ್ತು. ಈಗ ಅಂಥದ್ದೇ ವಾತಾವರಣ ಅಹ್ಮದಾಬಾದ್ ನಲ್ಲೂ ಕಂಡುಬರುತ್ತಿದೆ ಮತ್ತು ಮೊಟೇರಾದಲ್ಲಿ ಇಬ್ಬರು ಜಾಗತಿಕ ನಾಯಕರ ಭಾಷಣದಲ್ಲಿ ಏನೇನು ಪ್ರಸ್ತಾಪವಾಗಲಿದೆ ಎಂಬ ಬಗೆಗಿನ ನಿರೀಕ್ಷೆಗಳೂ ಗರಿಗೆದರಿವೆ.
11 ಗಂಟೆಗೆ ಮೋದಿ ಅಹ್ಮದಾಬಾದ್​ಗೆ
ಡೊನಾಲ್ಡ್ ಟ್ರಂಪ್ ಅಹ್ಮದಾಬಾದ್​ಗೆ ಬಂದಿಳಿಯುವ 1 ಗಂಟೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಸ್ಥಳೀಯ ವಿಮಾನ ನಿಲ್ದಾಣ ತಲುಪಲಿದ್ದಾರೆ. ದೆಹಲಿಯಿಂದ ನೇರವಾಗಿ ಅಹ್ಮದಾಬಾದ್​ಗೆ ಬರಲಿರುವ ಮೋದಿ ಅಮೆರಿಕ ಅಧ್ಯಕ್ಷರನ್ನು ಬರಮಾಡಿಕೊಳ್ಳಲಿದ್ದಾರೆ.
ಅಮೆರಿಕ ಹೆಲಿಕಾಪ್ಟರ್ ಗಸ್ತು
ಕಳೆದೊಂದು ವಾರದಿಂದ ಅಮೆರಿಕದ 2 ಭದ್ರತಾ ಹೆಲಿಕಾಪ್ಟರ್ ಗಳು ಅಹ್ಮದಾಬಾದ್ ಆಕಾಶದಲ್ಲಿ ಗಸ್ತು ತಿರುಗುತ್ತಿವೆ. ಟ್ರಂಪ್ ರೋಡ್ ಷೋ ನಡೆಸಲಿರುವ ರಸ್ತೆ ಮಾರ್ಗ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಮೇಲೆ ಕಣ್ಣಿಡಲಾಗಿದೆ. ಅಮೆರಿಕದ ಕಾಗೋ ವಿಮಾನವೊಂದಲ್ಲಿ 2 ಹೆಲಿಕಾಪ್ಟರ್​ಗಳು ವಾರಕ್ಕೆ ಮುಂಚೆಯೇ ಅಹ್ಮದಾಬಾದ್​ಗೆ ಬಂದಿಳಿದಿದ್ದವು. ಉಳಿದ ನಾಲ್ಕು ವಿಮಾನಗಳಲ್ಲಿ ಸಶಸ್ತ್ರ ಭದ್ರತಾ ಪಡೆ ಸೇರಿ ಸುಮಾರು 1000 ಸಿಬ್ಬಂದಿ ಕೂಡ ಅಹ್ಮದಾಬಾದ್​ಗೆ ಬಂದಿದ್ದಾರೆ.
ಟ್ರಂಪ್ ಜತೆ ಇಬ್ಬರು ಇಂಡೋ ಅಮೆರಿಕನ್ನರು
ಟ್ರಂಪ್ ಜತೆಗೆ ಅಮೆರಿಕ ಸರ್ಕಾರದ ಅಜಿತ್ ಪೈ ಮತ್ತು ಕಶ್ಯಪ್ ಪಟೇಲ್ ಎಂಬ ಇಬ್ಬರು ಪ್ರಭಾವಿ ಇಂಡೋ ಅಮೆರಿಕನ್ ವ್ಯಕ್ತಿಗಳೂ ಬರಲಿದ್ದಾರೆ. ಅಜಿತ್ ಪೈ ಹುಟ್ಟಿದ್ದು (1971) ಅಮೆರಿಕದಲ್ಲಾದರೂ ಕೊಂಕಣಿ ಭಾಷೆ ಮಾತನಾಡುವ ಅವರ ಹೆತ್ತವರಾದ ವರದರಾಜ ಪೈ ಮತ್ತು ರಾಧಾ ಪೈ ಕರ್ನಾಟಕ ಮೂಲದವರು ಎಂಬುದು ಗಮನಾರ್ಹ. ಅಮೆರಿಕ ಯುವತಿಯೊಬ್ಬರನ್ನು ವಿವಾಹವಾಗಿರುವ ಅಜಿತ್, ತಮ್ಮ ಮಗನಿಗೆ ಅಲೆಕ್ಸಾಂಡರ್ ಮಾಧವ ಪೈ ಎಂಬ ಹೆಸರಿಟ್ಟಿದ್ದಾರೆ. ಅಜಿತ್ ಹೆತ್ತವರಿಬ್ಬರೂ ವೈದ್ಯ ವೃತ್ತಿಯಲ್ಲಿದ್ದರು ಮತ್ತು 1971ರಲ್ಲಿ ಅಮೆರಿಕಕ್ಕೆ ತೆರಳಿ ನೆಲೆಸಿದರು. ಅಮೆರಿಕ ಸರ್ಕಾರದ ಫೆಡರಲ್ ಕಮ್ಯುನಿಕೇಷನ್ ಕಮಿಷನ್ (ಎಫ್.ಸಿ.ಸಿ) ಮುಖ್ಯಸ್ಥರಾಗಿರುವ ಅಜಿತ್ ಪೈ ಟ್ರಂಪ್ ನಿರ್ದೇಶನದ ಮೇರೆಗೆ ಭಾರತಕ್ಕೆ ಬರುತ್ತಿದ್ದಾರೆ. ಕಾನೂನು ವಿಷಯದಲ್ಲಿ ಉನ್ನತ ಶಿಕ್ಷಣ ಪಡೆದಿರುವ ಪೈ ಅವರನ್ನು 2012ರಲ್ಲಿ ಅಂದಿನ ಅಧ್ಯಕ್ಷ ಬರಾಕ್ ಒಬಾಮ ಅವರು ಎಫ್.ಸಿ.ಸಿ. ಮುಖ್ಯಸ್ಥರಾಗಿ ನೇಮಿಸಿದ್ದರು. ದೇಶದ ನೂತನ ಅಧ್ಯಕ್ಷರಾಗಿ ಟ್ರಂಪ್ ಆಯ್ಕೆಯಾದ ಬಳಿಕವೂ ಅಜಿತ್ ರನ್ನು ಎಫ್.ಸಿ.ಸಿ. ಮುಖ್ಯಸ್ಥರಾಗಿ ಮುಂದುವರಿಯುವಂತೆ ಕ್ರಮ ಕೈಗೊಳ್ಳಲಾಯಿತು. ನ್ಯೂಯಾರ್ಕ್​ನಲ್ಲಿ ಜನಿಸಿದ ಕಶ್ಯಪ್ ಪಟೇಲ್ ಗುಜರಾತ್ ಮೂಲದವರಾಗಿದ್ದು, ಅಮೆರಿಕದ ಸರ್ಕಾರದಲ್ಲಿ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪೋಸ್ಟರ್​ಗಳದ್ದೇ ಕಾರುಬಾರು
ಟ್ರಂಪ್ ಅಹ್ಮದಾಬಾದ್ ಭೇಟಿ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಿಂದ ಹಿಡಿದು ಮೊಟೆರಾ ಕ್ರಿಕೆಟ್ ಸ್ಟೇಡಿಯಂವರೆಗೆ ಸುಮಾರು 5000ಕ್ಕಿಂತಲೂ ಹೆಚ್ಚು ದೈತ್ಯ ಗಾತ್ರದ ಪೋಸ್ಟರ್​ಗಳನ್ನು ಹಾಕಲಾಗಿದೆ. ಕೆಲ ಪೋಸ್ಟರ್ ಗಳಲ್ಲಿ ಮೋದಿ-ಟ್ರಂಪ್ ಜತೆಗೆ ಟ್ರಂಪ್ ಪತ್ನಿ ಮೆಲನಿಯಾ ಚಿತ್ರಗಳಿದ್ದರೆ, ಬಹುತೇಕ ಕಡೆ ಮೋದಿ-ಟ್ರಂಪ್ ಒಟ್ಟಾಗಿ ನಡೆದುಕೊಂಡು ಹೋಗುವ ಅಥವಾ ಕೈ ಹಿಡಿದು ನಗುವ ಚಿತ್ರಗಳೇ ಕಾಣುತ್ತವೆ. ವಿಮಾನ ನಿಲ್ದಾಣದಿಂದ ಮೊಟೇರಾ ಸ್ಟೇಡಿಯಂವರೆಗಿನ ರಸ್ತೆಯ ಎರಡೂ ಬದಿಯಲ್ಲಿರುವ ಗೋಡೆಗಳಲ್ಲಿ ಕಾರ್ಯಕ್ರಮದ ಹೆಸರೇ ಹೇಳುವಂತೆ ಎರಡೂ ಕೈಗಳಲ್ಲಿ ನಮಸ್ತೆ ಎಂದು ಬಿಂಬಿಸುವ ಚಿತ್ರವನ್ನು ಕೆಂಪು ಬಣ್ಣದಲ್ಲಿ ಬಿಡಿಸಲಾಗಿದೆ.
| ರಾಘವ ಶರ್ಮ ನಿಡ್ಲೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 14 =
Remember me
