ನವದೆಹಲಿ:ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಮಾಡಿಕೊಂಡಿರುವ ಮೈತ್ರಿಕೂಟಕ್ಕೆ ಬುಧವಾರ ಭಾರಿ ಹೊಡೆತ ಬಿದ್ದಿದೆ. ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಕಾಂಗ್ರೆಸ್ ಜೊತೆಗಿನ ಮೈತ್ರಿ ಯನ್ನು ತಳ್ಳಿಹಾಕಿದ ಬೆನ್ನಲ್ಲೇ ಪಂಜಾಬ್​ನ ಎಲ್ಲಾ ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಆಮ್ ಆದ್ಮಿ ಪಕ್ಷ (ಎಎಪಿ) ಘೊಷಿದೆ. ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವ ಸಂದರ್ಭದಲ್ಲೇ ನಡೆದಿರುವ ಈ ವಿದ್ಯಮಾನ ರಾಜಕೀಯವಾಗಿ ಹೆಚ್ಚು ಮಹತ್ವ ಪಡೆದುಕೊಂಡಿದೆ.
ಬಂಗಾಳದಲ್ಲಿ ಕಾಂಗ್ರೆಸ್ ಜೊತೆ ಯಾವುದೇ ಮೈತ್ರಿ ಇಲ್ಲ. ಚುನಾವಣೆಯ ನಂತರ ರಾಷ್ಟ್ರೀಯ ಮಟ್ಟದಲ್ಲಿ ಮೈತ್ರಿ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಿಎಂ ಮಮತಾ ಬ್ಯಾನರ್ಜಿ ಸ್ಪೋಟಕ ಘೊಷಣೆ ಮಾಡಿದ್ದಾರೆ. ‘ನಾನು ಕಾಂಗ್ರೆಸ್ ಜೊತೆ ಯಾವುದೇ ಚರ್ಚೆ ನಡೆಸಿಲ್ಲ. ಬಂಗಾಳದಲ್ಲಿ ನಾವು ಏಕಾಂಗಿಯಾಗಿ ಹೋರಾಡುತ್ತೇವೆ. ಕಾಂಗ್ರೆಸ್​ಗೆ ಹಲವು ಪ್ರಸ್ತಾಪಗಳನ್ನು ನೀಡಿದ್ದೇನೆ. ಆದರೆ ಅವರು ಅವುಗಳನ್ನು ತಿರಸ್ಕರಿಸಿದರು. ನಾವು ಜಾತ್ಯತೀತ ಪಕ್ಷವಾಗಿದ್ದು, ಬಂಗಾಳದಲ್ಲಿ ಏಕಾಂಗಿಯಾಗಿ ಬಿಜೆಪಿಯನ್ನು ಸೋಲಿಸುತ್ತೇವೆ’ ಎಂದು ಅವರು ಹೇಳಿದ್ದಾರೆ.
ಇನ್ನೊಂದೆಡೆ, ಆಮ್ ಆದ್ಮಿ ಪಕ್ಷವು ಪಂಜಾಬ್​ನ 13 ಲೋಕಸಭಾ ಸ್ಥಾನಗಳಿಗೆ 40 ಅಭ್ಯರ್ಥಿಗಳ ಸಂಭಾವ್ಯ ಪಟ್ಟಿಯನ್ನು ಸಿದ್ದ ಮಾಡಿದೆ. ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಮೊದಲು ನಾವು ಸಮೀಕ್ಷೆ ನಡೆಸುವುದಾಗಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಹೇಳಿದ್ದಾರೆ.
ಚುನಾವಣೆಯ ಸೋಲು ಕಾರಣ?:ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಭಾರಿ ಹಿನ್ನಡೆಯಾದ ಹಿನ್ನೆಲೆಯಲ್ಲಿ ಪ್ರಾದೇಶಿಕ ಪಕ್ಷಗಳು ತಮ್ಮ ಭದ್ರಕೋಟೆಗಳಲ್ಲಿ ನೆಲೆ ಬಿಟ್ಟುಕೊಡುವ ಮನಸ್ಥಿತಿ ಯಲ್ಲಿಲ್ಲ. ಪಂಜಾಬ್​ನಲ್ಲಿ ಎಎಪಿ ಜೊತೆ ಮೈತ್ರಿ ಮಾಡಿ ಕೊಳ್ಳುವ ಕುರಿತು ಹೈಕಮಾಂಡ್​ನಿಂದ ಸಂದೇಶ ಬಂದಿಲ್ಲ. ಪಂಜಾಬ್​ನ ಎಲ್ಲಾ 13 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ ಎಂದು ಅಮರೀಂದರ್ ರಾಜಾ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದರು.
ಮೈತ್ರಿಕೂಟಕ್ಕೆ ಮರಣಶಾಸನ:ಟಿಎಂಸಿ ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಕಣಕ್ಕಿಳಿಯಲು ನಿರ್ಧರಿಸಿ ರುವುದು ಪ್ರತಿಪಕ್ಷಗಳ ಮೈತ್ರಿಕೂಟಕ್ಕೆ ಮರಣಶಾಸನವಾಗಿದೆ ಎಂದು ಬಿಜೆಪಿ ಬುಧವಾರ ಹೇಳಿದೆ. ಮಮತಾ ಬ್ಯಾನರ್ಜಿ ಅವರ ನಿರ್ಧಾರವು ಹತಾಶೆಯ ಸಂಕೇತ ವಾಗಿದೆ. ತನ್ನ ರಾಜಕೀಯ ನೆಲೆಯನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗದೆ ಅವರು ಎಲ್ಲಾ ಸ್ಥಾನಗಳಲ್ಲಿ ಸ್ಪರ್ಧೆ ಮಾಡಲು ಬಯಸುತ್ತಾರೆ. ಪ್ರತಿಪಕ್ಷದ ಮೈತ್ರಿಕೂಟದ ಮುಖವಾಗಿ ಹೊರಹೊಮ್ಮುವ ಆಸೆ ಅವರಿಗಿತ್ತು. ಯಾರೂ ಅವರ ಹೆಸರನ್ನು ಪ್ರಸ್ತಾಪಿಸಲಿಲ್ಲ ಎಂದು ಪಶ್ಚಿಮ ಬಂಗಾಳದ ಬಿಜೆಪಿ ಸಹ-ಪ್ರಭಾರಿ ಮತ್ತು ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವಿಯಾ ಹೇಳಿದ್ದಾರೆ.
ಸಮಸ್ಯೆ ಸರಿಪಡಿಸಲಾಗುವುದು ಎಂದ ಕೆ.ಸಿ ವೇಣುಗೋಪಾಲ್:ಬ್ಯಾನರ್ಜಿ ಅವರ ಆಕ್ರೋಶಕ್ಕೆ ಪ್ರತಿಕ್ರಿಯಿಸಿದ ಹಿರಿಯ ಕಾಂಗ್ರೆಸ್ ನಾಯಕ ಕೆ.ಸಿ ವೇಣುಗೋಪಾಲ್, ಬಂಗಾಳದಲ್ಲಿ ಕಾಂಗ್ರೆಸ್- ತೃಣಮೂಲ ಮೈತ್ರಿ ಇರಲಿದೆ. ಬಿಜೆಪಿ ಸ್ಥಾನಗಳನ್ನು ಕಡಿಮೆ ಮಾಡುವುದು ನಮ್ಮ ಗುರಿಯಾಗಿದೆ. ಟಿಎಂಸಿ ಜೊತೆ ಮಾತನಾಡುತ್ತೇವೆ. ಮಮತಾ ಬ್ಯಾನರ್ಜಿ ಅವರು ಮೈತ್ರಿಕೂಟದಲ್ಲಿ ಹಿರಿಯ ನಾಯಕರು. ಸಣ್ಣ ವ್ಯತ್ಯಾಸಗಳನ್ನು ಪರಿಹರಿಸಲಾಗುವುದು ಎಂದಿದ್ದಾರೆ.
ಭದ್ರಕೋಟೆಯಲ್ಲಿ ಏಕಾಂಗಿ ಸ್ಪರ್ಧೆ:ಪ್ರಾದೇಶಿಕ ಪಕ್ಷಗಳಾದ ತೃಣಮೂಲ ಕಾಂಗ್ರೆಸ್, ಎಎಪಿ ಮತ್ತು ಸಮಾಜ ವಾದಿ ಪಕ್ಷಗಳು ತಮ್ಮ ಭದ್ರಕೋಟೆಗಳಲ್ಲಿ ಏಕಾಂಗಿಯಾಗಿ ಸ್ಪರ್ಧೆ ಮಾಡಲು ಹೆಚ್ಚು ಒಲವು ತೋರುತ್ತಿವೆ. ಆದರೆ ಕಾಂಗ್ರೆಸ್ ದೊಡ್ಡಣ್ಣನಂತೆ ವರ್ತಿಸಿ, ಸೀಟು ಹಂಚಿಕೆಯಲ್ಲಿ ಹೆಚ್ಚಿನ ಪಾಲು ಪಡೆಯಲು ಯತ್ನಿಸುತ್ತಿದೆ ಎಂಬುದು ನಾಯಕರ ಪ್ರಮುಖ ಆರೋಪವಾಗಿದೆ. ಬಂಗಾಳ ಮತ್ತು ಪಂಜಾಬ್ ಎರಡೂ ಕಡೆ ಕೆಲವು ತಿಂಗಳುಗಳಿಂದ ಕಾಂಗ್ರೆಸ್ ಮತ್ತು ಆಡಳಿತ ಪಕ್ಷದ ನಡುವೆ ಘರ್ಷಣೆ ನಡೆಯುತ್ತಲೇ ಇದೆ. ಮೈತ್ರಿಕೂಟದ ಸಭೆಗಳಲ್ಲಿ ಏಕತೆಯ ಪ್ರತಿಪಾದನೆಯ ಹೊರತಾಗಿಯೂ ಪಕ್ಷಗಳ ನಡುವೆ ಹೊಂದಾಣಿಕೆ ಸರಿಯಾಗಿಲ್ಲ. ರಾಜ್ಯ ಕಾಂಗ್ರೆಸ್ ಘಟಕಕ್ಕೆ ಬಂಗಾಳದಲ್ಲಿ ಅಧೀರ್ ರಂಜನ್ ಚೌಧರಿ ಮತ್ತು ಪಂಜಾಬ್​ನಲ್ಲಿ ಅಮರಿಂದರ್ ರಾಜಾ ಸಿಂಗ್ ಮುಖ್ಯಸ್ಥರಾಗಿದ್ದಾರೆ. ಆದರೆ ಇವರು ಆಗಾಗ ಟಿಎಂಸಿ, ಎಎಪಿ ವಿರುದ್ಧ ವಾಗ್ದಾಳಿ ನಡೆಸುತ್ತಿರುವುದು ಮೈತ್ರಿಗೆ ಹಿನ್ನಡೆ ಉಂಟುಮಾಡಿದೆ.
ವರ್ಷದ ಹಿಂದೆಯೇ ಅಸಮಾಧಾನ:ಕಳೆದ ವರ್ಷ ಜೂನ್​ನಲ್ಲಿ ಪಟನಾದಲ್ಲಿ ನಡೆದ ಪ್ರತಿಪಕ್ಷಗಳ ಸಭೆಯಲ್ಲೇ ಕಾಂಗ್ರೆಸ್ ವಿರುದ್ಧ ಎಎಪಿ ಹರಿಹಾಯ್ದಿತ್ತು. ದೆಹಲಿ ಅಧಿಕಾರಿಗಳನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಮುಂದಾಗಿರುವ ವಿರುದ್ಧ ನಡೆಯುವ ಹೋರಾಟವನ್ನು ಕಾಂಗ್ರೆಸ್ ಬೆಂಬಲಿಸಬೇಕೆಂದು ಎಎಪಿ ಬಯಸಿತ್ತು. ಕಾಂಗ್ರೆಸ್ ಈ ಬಗ್ಗೆ ಸ್ಪಷ್ಟ ನಿಲುವು ತಳೆಯದ ಹೊರತು ತಾನು ಇಂಡಿಯಾ ಮೈತ್ರಿಕೂಟದ ಭಾಗವಾಗುವುದಿಲ್ಲ ಎಂದು ಎಎಪಿ ಹೇಳಿತ್ತು.
ಅಸಮಂಜಸ ಬೇಡಿಕೆ:ಕಾಂಗ್ರೆಸ್ ಸೀಟು ಹಂಚಿಕೆ ಮಾತುಕತೆಯನ್ನು ವಿಳಂಬಗೊಳಿಸಿರುವುದು ಮತ್ತು ವಾಸ್ತವತೆಯನ್ನು ಒಪ್ಪಿಕೊಳ್ಳದೆ ಅಸಮಂಜಸವಾದ ಬೇಡಿಕೆಗಳನ್ನು ಇಟ್ಟಿರುವ ಕಾರಣ ಮೈತ್ರಿ ಮುರಿದಿದೆ ಎಂದು ಟಿಎಂಸಿ ಮೂಲಗಳು ಹೇಳಿವೆ. ಮಾತುಕತೆಗೆ ಟಿಎಂಸಿ ಈಗಲೂ ಮುಕ್ತವಾಗಿದೆ. ಆದರೆ ಕಾಂಗ್ರೆಸ್ ಒಪ್ಪಂದಕ್ಕೆ ಬರಲಿದೆ ಎಂಬ ಬಗ್ಗೆ ಯಾವುದೇ ಭರವಸೆ ಉಳಿದಿಲ್ಲ ಎಂದು ನಾಯಕರೊಬ್ಬರು ತಿಳಿಸಿದ್ದಾರೆ. ಇತ್ತೀಚೆಗೆ ಮಮತಾ ಬ್ಯಾನರ್ಜಿಯನ್ನು ‘ಅವಕಾಶವಾದಿ’ ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಟೀಕೆ ಮಾಡಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × three =
Remember me
