ಲಖನೌ/ನವದೆಹಲಿ:ಅಯೋಧ್ಯೆಯಲ್ಲಿ ನಿರ್ವಣವಾಗುತ್ತಿರುವ ಭವ್ಯ ರಾಮ ಮಂದಿರದ ಕಾಮಗಾರಿ ಸುಮಾರು 36 ರಿಂದ 40 ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಗುರುವಾರ ಮಾಹಿತಿ ನೀಡಿದೆ. ಆಗಸ್ಟ್ 5ರಂದು ಪ್ರಧಾನಿ ನರೇಂದ್ರ ಮೋದಿ ಭೂಮಿ ಪೂಜೆ ನೆರವೇರಿಸುವ ಮೂಲಕ ನಿರ್ಮಾಣ ಕಾರ್ಯಕ್ಕೆ ಅಧಿಕೃತ ಚಾಲನೆ ನೀಡಿದ್ದರು. ಈಗ ಕಾಮಗಾರಿಗಳು ಭರದಿಂದ ನಡೆಯುತ್ತಿವೆ.
ಈ ಮೊದಲು 2022ರ ವೇಳೆಗೆ ರಾಮಮಂದಿರ ನಿರ್ವಣವಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಕರೊನಾ ಮಹಾಮಾರಿ ಬಿಕ್ಕಟ್ಟಿನಿಂದಾಗಿ ಮಂದಿರದ ಭೂಮಿಪೂಜೆ ವಿಳಂಬವಾಯಿತು. ಹೀಗಾಗಿ ಮುಂದಿನ 36 ರಿಂದ 40 ತಿಂಗಳಲ್ಲಿ ಅಂದರೆ 2023ರ ವೇಳೆಗೆ ರಾಮಮಂದಿರ ತಲೆ ಎತ್ತಲಿದೆ ಎಂದು ಟ್ರಸ್ಟ್ ಹೇಳಿದೆ.
ಮಂದಿರ ನಿರ್ವಣದ ಸ್ಥಳದಲ್ಲಿ ಕೇಂದ್ರ ಕಟ್ಟಡ ಸಂಶೋಧನಾ ಸಂಸ್ಥೆ (ಸಿಬಿಆರ್​ಐ), ಐಐಟಿ ಮದ್ರಾಸ್ ಮತ್ತು ಎಲ್​ಆಂಡ್​ಟಿ ಸಂಸ್ಥೆಗಳ ಇಂಜಿನಿಯರ್​ಗಳು ಮಣ್ಣನ್ನು ಪರೀಕ್ಷಿಸುತ್ತಿದ್ದಾರೆ. ಮಂದಿರ ಭೂಕಂಪನ ನಿರೋಧಕವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಿಬಿಆರ್​ಐ ಬಳಸಿಕೊಳ್ಳಲಾಗುತ್ತಿದೆ. ಮಂದಿರ ಸಾವಿರಾರು ವರ್ಷಗಳವರೆಗೆ ಸುಭದ್ರವಾಗಿರಲಿದೆ ಎಂದು ಟ್ರಸ್ಟ್​ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹೇಳಿದ್ದಾರೆ. ಮಂದಿರದ ಕಲ್ಲುಗಳನ್ನು ಪರಸ್ಪರ ಬೆಸೆಯಲು ತಾಮ್ರದ ಪ್ಲೇಟ್​ಗಳನ್ನು ಬಳಸಲಾಗುತ್ತಿದೆ. 18 ಇಂಚು ಉದ್ದ, 30 ಮಿ.ಮೀ ಅಗಲ ಮತ್ತು 3 ಮಿ.ಮೀ ದಪ್ಪದ ಸುಮಾರು 10 ಸಾವಿರ ತಾಮ್ರದ ಪ್ಲೇಟ್​ಗಳು ಬೇಕಾಗುತ್ತವೆ. ಮಂದಿರ ನಿರ್ವಣಕ್ಕೆ ಸೇವೆ ಸಲ್ಲಿಸಲು ಇಚ್ಛಿಸುವ ಭಕ್ತರಿಂದ ತಾಮ್ರದ ಪ್ಲೇಟ್​ಗಳನ್ನು ದೇಣಿಗೆ ರೂಪದಲ್ಲಿ ಸ್ವೀಕರಿಸಲಾಗುತ್ತದೆ. ತಾಮ್ರದ ಪ್ಲೇಟ್​ಗಳನ್ನು ನೀಡುವ ಭಕ್ತರು ಅವುಗಳ ಮೇಲೆ ತಮ್ಮ ಕುಟುಂಬದ, ಊರಿನ ಅಥವಾ ಸಮುದಾಯದ ಹೆಸರುಗಳನ್ನೂ ಕೆತ್ತಿಸಬಹುದು. ಇವು ದೇಶದ ಏಕತೆಯನ್ನು ಸಂಕೇತಿಸುವುದರ ಜತೆಗೆ ಮಂದಿರ ನಿರ್ವಣಕ್ಕೆ ಇಡೀ ದೇಶದ ಕೊಡುಗೆಗೆ ಸಾಕ್ಷಿಯಾಗಲಿವೆ ಎಂದು ಚಂಪತ್ ರಾಯ್ ತಿಳಿಸಿದ್ದಾರೆ.
ಮಂದಿರದ ವಿನ್ಯಾಸ
ಅಪಾರ ಭಕ್ತರ ಸಂಖ್ಯೆಯನ್ನು ಗಣನೆಯಲ್ಲಿಟ್ಟುಕೊಂಡು ರಾಮ ಮಂದಿರದ ರೂಪರೇಷೆಯಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದ್ದು, ಈ ಬಗ್ಗೆ ಟ್ರಸ್ಟ್ ಹಿಂದೆಯೇ ಮಾಹಿತಿ ನೀಡಿದೆ. ಮಂದಿರವನ್ನು ನಾಗರ ಶೈಲಿ ವಾಸ್ತುಶಿಲ್ಪದಲ್ಲಿ ನಿರ್ವಿುಸಲಾಗುತ್ತಿದ್ದು, ಮೂಲ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ. 1990ರ ವೇಳೆಯಲ್ಲಿದ್ದ ವಿನ್ಯಾಸದಲ್ಲಿ ಮಂದಿರ ಎರಡು ಅಂತಸ್ತುಗಳನ್ನು ಹೊಂದಿದ್ದು, 141 ಅಡಿ ಎತ್ತರ ಹೊಂದಿತ್ತು. ಈಗ ಅದನ್ನು ಮೂರು ಅಂತಸ್ತಿಗೆ ಹೆಚ್ಚಿಸಲಾಗಿದ್ದು, ಎತ್ತರವನ್ನು 161 ಅಡಿಗಳಿಗೆ ಏರಿಕೆ ಮಾಡಲಾಗಿದೆ. ಜತೆಗೆ ಈ ಮೊದಲು ನಿಗದಿಪಡಿಸಿದ್ದ ಮೂರು ಮಂಟಪಗಳು ಮತ್ತು ಗೋಪುರಗಳ ಸಂಖ್ಯೆಯನ್ನು ಈಗ ಐದಕ್ಕೆ ಹೆಚ್ಚಿಸಲಾಗಿದೆ. 10 ಎಕರೆಯಲ್ಲಿ ಮಂದಿರ ನಿರ್ವಣವಾಗಲಿದ್ದು, ದೇವಾಲಯದ ಸಂಕೀರ್ಣ ಒಟ್ಟು 57 ಎಕರೆಯಷ್ಟು ವಿಸ್ತೀರ್ಣವಾಗಿರಲಿದೆ. ಮೂಲ ವಿನ್ಯಾಸದಲ್ಲಿ 212 ಇದ್ದ ಸ್ತಂಭಗಳ ಸಂಖ್ಯೆಯನ್ನು ಈಗ 360ಕ್ಕೆ ಹೆಚ್ಚಿಸಲಾಗಿದೆ. ಕಳೆದ 30 ವರ್ಷಗಳಿಂದ ದೇಶದ ವಿವಿಧೆಡೆಗಳಿಂದ ಸಂಗ್ರಹಿಸಲಾಗಿರುವ ಸುಮಾರು 2 ಲಕ್ಷ ಇಟ್ಟಿಗೆಗಳನ್ನು ಮಂದಿರ ನಿರ್ಮಾಣ ಕಾಮಗಾರಿಗೆ ಬಳಸಿಕೊಳ್ಳಲಾಗುತ್ತದೆ.
ಕಬ್ಬಿಣ ಬಳಕೆ ಇಲ್ಲ
ಮಂದಿರ ನಿರ್ವಣಕ್ಕೆ ಕಬ್ಬಿಣವನ್ನು ಬಳಸಲಾಗುವುದಿಲ್ಲ ಎಂದು ಟ್ರಸ್ಟ್ ತಿಳಿಸಿದೆ. ಭಾರತದ ಪ್ರಾಚೀನ ಮತ್ತು ಸಾಂಪ್ರದಾಯಿಕ ನಿರ್ಮಾಣ ತಂತ್ರಗಳನ್ನು ಅನುಸರಿಸಿ ದೇವಾಲಯ ನಿರ್ವಿುಸಲಾಗುತ್ತದೆ. ಕಬ್ಬಿಣವನ್ನು ಬಳಸದೆಯೇ ಭೂಕಂಪ, ಬಿರುಗಾಳಿ ಮತ್ತು ಇತರ ನೈಸರ್ಗಿಕ ವಿಪತ್ತುಗಳನ್ನು ಸಹಿಸಿಕೊಳ್ಳುವಷ್ಟು ಸಧೃಢವಾಗಿ ಮಂದಿರವನ್ನು ನಿರ್ವಿುಸಲಾಗುತ್ತದೆ. ಕನಿಷ್ಠ 1 ಸಾವಿರ ವರ್ಷಗಳವರೆಗೆ ಮಂದಿರ ನೈಸರ್ಗಿಕ ವಿಕೋಪಗಳನ್ನು ಸಹಿಸಿಕೊಂಡು ನಿಲ್ಲಲಿದೆ ಎಂದು ಟ್ರಸ್ಟ್ ಹೇಳಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + sixteen =
Remember me
