ನವದೆಹಲಿ:ಪಾಕಿಸ್ತಾನ ಸೇನೆ ಹಾಗೂ ಭಯೋತ್ಪಾದಕ ಸಂಘಟನೆಗಳು ಇತ್ತೀಚೆಗೆ ಡ್ರೋನ್​ಗಳನ್ನು ಬಳಸಿ ಕಣ್ಗಾವಲು ನಡೆಸುತ್ತಿರುವ ಹಾಗೂ ಉಗ್ರರಿಗೆ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುತ್ತಿರುವ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಡ್ರೋನ್ ಪ್ರತಿಬಂಧಕ ವ್ಯವಸ್ಥೆ ಅಭಿವೃದ್ಧಿಗೆ ಭಾರತ ಮುಂದಾಗಿದೆ. ಭಾರತೀಯ ಸಶಸ್ತ್ರ ಪಡೆಗಳಿಗೆ ಡ್ರೋನ್ ಪ್ರತಿಬಂಧಕ ವ್ಯವಸ್ಥೆ ಅಭಿವೃದ್ಧಿಪಡಿಸಿ, ಉತ್ಪಾದಿಸಲು ಭಾರತ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್​ಡಿಒ) ಗುರುತಿಸಿದೆ. ಈ ಯೋಜನೆ ಕುರಿತು ಡಿಆರ್​ಡಿಒ ಮುಖ್ಯಸ್ಥ ಸತೀಶ್ ರೆಡ್ಡಿ ಶೀಘ್ರದಲ್ಲೇ ಭಾರತೀಯ ಸೇನೆಗೆ ಮಾಹಿತಿ ನೀಡಲಿದ್ದಾರೆ.
ಭಯೋತ್ಪಾದಕ ಸಂಘಟನೆಗಳು ಜಮ್ಮು- ಕಾಶ್ಮೀರದ ಗಡಿ ನಿಯಂತ್ರಣ ರೇಖೆ (ಎಲ್​ಒಸಿ) ಹಾಗೂ ಅಂತಾರಾಷ್ಟ್ರೀಯ ಗಡಿ (ಐಬಿ) ಉದ್ದಕ್ಕೂ ಇತ್ತೀಚೆಗೆ ಡ್ರೋನ್ ಹಾರಾಟ ಹೆಚ್ಚಿಸಿವೆ. ಪಂಜಾಬ್ ಗಡಿಯಲ್ಲಿ ಉಗ್ರರಿಗಾಗಿ ಡ್ರೋನ್​ಗಳ ಮೂಲಕ ಅಪಾರ ಶಸ್ತ್ರಾಸ್ತ್ರಗಳನ್ನು ಬೀಳಿಸಿ ಹೋಗಿರುವ ಹಲವು ಪ್ರಕರಣಗಳು ಈಗಾಗಲೇ ವರದಿಯಾಗಿವೆ. ಮಾದಕ ವಸ್ತುಗಳನ್ನೂ ಡ್ರೋನ್​ಗಳ ಮೂಲಕ ಭಾರತಕ್ಕೆ ರವಾನಿಸಲಾಗುತ್ತಿದೆ. ಚೀನಾದ ಹಗುರ ಡ್ರೋನ್​ಗಳನ್ನು ಪಾಕ್ ಬಳಸುತ್ತಿದ್ದು, ಇವು ಸುಮಾರು 10 ಕೆ.ಜಿ ತೂಕದ ವಸ್ತುಗಳನ್ನೂ ಸಾಗಿಸುವ ಸಾಮರ್ಥ್ಯ ಹೊಂದಿವೆ. ಇತ್ತೀಚಿನ ದಿನಗಳಲ್ಲಿ ಕೆಲ ಡ್ರೋನ್​ಗಳು ಗಡಿ ದಾಟಿ ಬಂದು ಹಾರಾಟ ನಡೆಸಿ ಹೋಗುತ್ತಿದ್ದು, ಇವುಗಳನ್ನು ಕಣ್ಗಾವಲು ವ್ಯವಸ್ಥೆಗೆ ಪಾಕ್ ಬಳಸುತ್ತಿರಬಹುದು ಎಂಬ ಆತಂಕವಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲು ಡ್ರೋನ್​ಗಳು ಬಳಸುತ್ತಿರುವುದರಿಂದ ಪ್ರೇರಣೆ ಪಡೆದು ಪಾಕ್ ಈ ಕೃತ್ಯ ಎಸಗುತ್ತಿದೆ. ಈ ಬಗ್ಗೆ ಈಗಾಗಲೇ ಕ್ರಮ ಕೈಗೊಂಡಿರುವ ಭಾರತೀಯ ಸೇನೆ, ಸಶಸ್ತ್ರ ಪಡೆಗಳಿಗೆ ಡ್ರೋನ್​ಗಳನ್ನು ಹೊಡೆದುರುಳಿಸುವ ತರಬೇತಿ ನೀಡುತ್ತಿದೆ. ಆದಾಗ್ಯೂ ರಾತ್ರಿ ವೇಳೆಯಲ್ಲಿ ಮತ್ತು ಡ್ರೋನ್​ಗಳು ದೂರದಲ್ಲಿ ಹಾರಾಟ ನಡೆಸುತ್ತಿದ್ದಾಗ ಅವುಗಳನ್ನು ಹೊಡೆದುರುಳಿಸುವುದು ಕಷ್ಟವಾಗುತ್ತದೆ.
ಗಡಿಯಲ್ಲಿ ಪಾಕ್ ಡ್ರೋನ್ ಹಾರಾಟ:ಜಮ್ಮುವಿನ ಅರ್ನಿಯಾ ಸೆಕ್ಟರ್​ನಲ್ಲಿ ಪಾಕ್​ನ ಡ್ರೋನ್ ಒಂದು ಭಾನುವಾರ ಹಾರಾಟ ನಡೆಸಿದೆ. ಗಡಿ ಭದ್ರತಾ ಪಡೆ (ಬಿಎಸ್​ಎಫ್) ಯೋಧರು ಡ್ರೋನ್ ಕಡೆಗೆ ಗುಂಡು ಹಾರಿಸಿದರಾದರೂ ಅಷ್ಟರಲ್ಲಿ ಅದು ಪಾಕ್​ನ ಗಡಿ ದಾಟಿತ್ತು ಎಂದು ತಿಳಿದುಬಂದಿದೆ. ಉಗ್ರರನ್ನು ಒಳನುಸುಳಿಸುವ ಸಲುವಾಗಿ ಡ್ರೋನ್​ಗಳ ಮೂಲಕ ಭಾರತೀಯ ಸೇನೆಯ ಪೋಸ್ಟ್​ಗಳ ಬಗ್ಗೆ ಪಾಕ್ ಮಾಹಿತಿ ಕಲೆ ಹಾಕುತ್ತಿದೆ ಎನ್ನಲಾಗಿದೆ.
ಡ್ರೋನ್ ಪ್ರತಿಬಂಧಕ ವ್ಯವಸ್ಥೆಯನ್ನು ಪ್ರಧಾನಿ ಮೋದಿಯವರ ನಿವಾಸದ ಸುತ್ತ ಅವರ ಸಾರ್ವಜನಿಕ ಕಾರ್ಯಕ್ರಮದ ವೇಳೆ ಅಳವಡಿಸಲಾಗುತ್ತದೆ ಎಂದು ತಿಳಿದುಬಂದಿದೆ. ಮೋದಿಯವರ ರ್ಯಾಲಿಗಳಲ್ಲಿ ಆರಂಭದಿಂದಲೂ ಡ್ರೋನ್​ಗಳ ಬೆದರಿಕೆ ಇರುವುದರಿಂದಾಗಿ ಭದ್ರತಾ ವ್ಯವಸ್ಥೆಯಲ್ಲಿ ಆಂಟಿ ಡ್ರೋನ್ ಸಿಸ್ಟಮ್ ಕಡ್ಡಾಯಗೊಳಿಸಲಾಗುತ್ತಿದೆ. 2020ರ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಕೆಂಪುಕೋಟೆಯಲ್ಲಿ ಆಂಟಿ ಡ್ರೋನ್ ಸಿಸ್ಟಮ್ ನಿಯೋಜಿಸಲಾಗಿತ್ತು. ಸುಮಾರು 3 ಕಿ.ಮೀ ಕಾರ್ಯ ವ್ಯಾಪ್ತಿ ಹೊಂದಿದ್ದ ಈ ವ್ಯವಸ್ಥೆ ಡ್ರೋನ್ ಕಾರ್ಯಾಚರಣೆಯನ್ನು ಜಾಮ್ ಮಾಡುವ ಹಾಗೂ ಲೇಸರ್ ಮೂಲಕ ಹೊಡೆದುರುಳಿಸುವ ಸಾಮರ್ಥ್ಯ ಹೊಂದಿತ್ತು.
ಶತ್ರು ರಾಷ್ಟ್ರಗಳ ಅಥವಾ ಅನುಮಾನಾಸ್ಪದ ಡ್ರೋನ್​ಗಳು ಮತ್ತು ಅನ್ ಮ್ಯಾಂಡ್ ಏರಿಯಲ್ ವೆಹಿಕಲ್​ಗಳನ್ನು (ಯುಎವಿ) ಹೊಡೆದುರುಳಿಸಲು ಆಂಟಿ ಡ್ರೋನ್ ಸಿಸ್ಟಮ್ ಬಳಸಲಾಗುತ್ತದೆ. ನಿರ್ದಿಷ್ಟ ವ್ಯಾಪ್ತಿಯೊಳಗೆ ಅನುಮತಿ ಇಲ್ಲದೇ ಹಾರಾಟ ನಡೆಸುವ ಡ್ರೋನ್​ಗಳನ್ನು ಹೊಡೆದುರುಳಿಸಲು ಈ ವ್ಯವಸ್ಥೆ ಅವಶ್ಯಕ. ಪ್ರಮುಖ ಕಾರ್ಯಕ್ರಮಗಳು, ವಿಮಾನ ನಿಲ್ದಾಣಗಳು, ಸೇನಾ ನೆಲೆಗಳು ಸೇರಿ ಹಲವು ಕಡೆಗಳಲ್ಲಿ ಅನುಮಾನಾಸ್ಪದ ಡ್ರೋನ್​ಗಳ ಚಲನೆಯನ್ನು ತಪ್ಪಿಸಲು ಇದನ್ನು ಬಳಸಲಾಗುತ್ತದೆ. ಸದ್ಯ ಸೇನೆ ಹಾಗೂ ವಿಮಾನಗಳಲ್ಲಿ ಬಳಸಲಾಗುತ್ತಿರುವ ರೆಡಾರ್ ಸಿಸ್ಟಮ್ ಸಣ್ಣ ಡ್ರೋನ್​ಗಳನ್ನು ನಿಖರವಾಗಿ ಪತ್ತೆ ಮಾಡುವ ಸಾಮರ್ಥ್ಯ ಹೊಂದಿಲ್ಲ. ಪಕ್ಷಿಗಳು ಹಾಗೂ ಇತರ ವಸ್ತುಗಳ ಹಾರಾಟವನ್ನು ಗುರುತಿಸುವಲ್ಲಿ ಇದು ವಿಫಲವಾಗುತ್ತದೆ. ಹೀಗಾಗಿ ಅತ್ಯಾಧುನಿಕ ಆಂಟಿ ಡ್ರೋನ್ ಸಿಸ್ಟಮ್ಲ್ಲಿ ವೈವಿಧ್ಯಮಯ ರೆಡಾರ್ ತಂತ್ರಜ್ಞಾನಗಳನ್ನು ಬಳಸಲಾಗುತ್ತಿದೆ. ಇದು ಡ್ರೋನ್​ಗಳನ್ನು ನಿಖರವಾಗಿ ಗುರುತಿಸುವುದರ ಜತೆಗೆ ಸುಲಭವಾಗಿ ಹೊಡೆದುರುಳಿಸಬಲ್ಲದು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 6 =
Remember me
