ಬೆಂಗಳೂರು:ಬರಗಾಲದಂತಹ ಗಂಭೀರ ವಿಷಯವಾಗಿ ಪರಸ್ಪರ ಕೆಸರೆರಚಾಟ ಬಾಧಿತರಲ್ಲಿ ‘ಅಭಾವ ವೈರಾಗ್ಯ’ ಮೂಡಿಸಿದ್ದು, ಶಾಸಕರಲ್ಲಿ ವಿಳಂಬದ ಬೇಗುದಿ ಹೆಚ್ಚಿಸಿದೆ.
ಉನ್ನತ ಮೂಲವೊಂದರ ಪ್ರಕಾರ ಅಧ್ಯಯನ ತಂಡದ ವರದಿ ಕೇಂದ್ರ ಸರ್ಕಾರದ ಕೈಸೇರಿಸಿದೆ. ಆದರೆ ವರದಿಯನ್ನು ಪರಾಮಶಿಸುವ ಉನ್ನತಮಟ್ಟದ ಸಮಿತಿ ಸಭೆಯೇ ಸೇರಿಲ್ಲ. ಎನ್​ಡಿಆರ್​ಎಫ್ ನಿಯಮಾವಳಿ ಪ್ರಕಾರ ಸಮಿತಿ ಶಿಫಾರಸಿನ ನಂತರ ಪರಿಹಾರದ ಮೊತ್ತ ಬಿಡುಗಡೆಯಾಗಲಿದ್ದು, ರಾಜ್ಯದ ನೆರವು ಯಾಚನೆ ವಿಷಯದಲ್ಲಿ ಕೇಂದ್ರ ಸರ್ಕಾರ ತಟಸ್ಥವಾಗಿರುವ ಭಾವನೆ ಮೂಡಿಸಿದೆ. ಮಳೆ ಕೊರತೆ, ಶುಷ್ಕ ವಾತಾವರಣ, ನದಿಗಳ ಹರಿವು, ಜಲಾಶಯಗಳ ನೀರಿನಮಟ್ಟ ಇತ್ಯಾದಿ ಅಂಶಗಳನ್ನು ಒಳಗೊಂಡ ಬರ ಕೈಪಿಡಿಯ ಎರಡು ಹಂತದ ಮಾನದಂಡಗಳನ್ನು ಆಧರಿಸಿ, ರಾಜ್ಯದ 236 ತಾಲೂಕುಗಳ ಪೈಕಿ 223 ಬರ ಪೀಡಿತ ಎಂದು ಘೋಷಿಸಲಾಗಿದೆ.
ಆರಂಭಿಕ ಉತ್ಸಾಹ ತಣ್ಣಗೆ:ರಾಜ್ಯ ಸರ್ಕಾರದ ಮೊದಲ ಹಂತದಲ್ಲಿ ಸಲ್ಲಿಸಿದ ಮನವಿಗೆ ಕೇಂದ್ರ ಸರ್ಕಾರ ತಕ್ಷಣ ಸ್ಪಂದಿಸಿತು. ವಸ್ತುಸ್ಥಿತಿ ಅಧ್ಯಯನ ಮಾಡಿದ ಕೇಂದ್ರ ತಂಡದ ಅಧಿಕಾರಿಗಳು ದೆಹಲಿಗೆ ಹಿಂತಿರುಗಿದ ನಂತರ ವರದಿ ಸಲ್ಲಿಸಿಯಾಗಿದೆ. ಹಾಗೆ ನೋಡಿದರೆ ಮನವಿ ಸಲ್ಲಿಕೆಯಾಗುವ ಮುನ್ನವೇ ರಾಜ್ಯಕ್ಕೆ ತಂಡವನ್ನು ಕಳುಹಿಸುವ ಉತ್ಸಾಹವನ್ನು ಕೇಂದ್ರ ಸಚಿವರೊಬ್ಬರು ವ್ಯಕ್ತಪಡಿಸಿದ್ದರು. ಆದರೆ ರಾಜ್ಯ ಸಚಿವರೊಬ್ಬರು ಸದ್ಯಕ್ಕೆ ಹಸಿರು ಪರಿಸ್ಥಿತಿಯಿದೆ ಎಂದು ಮಾಡಿಕೊಂಡ ಮನವಿಗೆ ಓಗೊಟ್ಟು ಮನವಿ ಸಲ್ಲಿಕೆಯಾದ ನಂತರ ತಂಡವನ್ನು ಕಳುಹಿಸಲಾಗಿದೆ. ಕೇಂದ್ರ ಸರ್ಕಾರ ತೋರಿದ್ದ ಆರಂಭಿಕ ಉತ್ಸಾಹ ಇದ್ದಕ್ಕಿದ್ದಂತೆ ತಣ್ಣಗಾದದ್ದು ನಿಗೂಢವಾಗಿದೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸಿಎಂ ಸಿದ್ದರಾಮಯ್ಯ ಆರಂಭಿಸಿದ ಅಭಿಯಾನವು ರಾಜ್ಯಕ್ಕೆ ಮಗ್ಗಲು ಮುಳ್ಳಾಗಿಯಿತೆ? ಎಂಬ ಸಂಶಯ ವ್ಯಕ್ತವಾಗಿದೆ.
17,910 ಕೋಟಿ ರೂ.ಗೆ ಬೇಡಿಕೆ:ಬರ ಪರಿಸ್ಥಿತಿ ಗಮನಿಸಿ ಹೆಚ್ಚುವರಿ ವರದಿ ಸಲ್ಲಿಸಲು ಅವಕಾಶವಿದೆ ಎಂಬ ಕೇಂದ್ರ ಅಧ್ಯಯನ ತಂಡದ ಸಲಹೆ ಮೇರೆಗೆ ರಾಜ್ಯ ಸರ್ಕಾರ ಹೆಚ್ಚುವರಿ ಕೋರಿ ಮತ್ತೊಂದು ಮನವಿ ಸಲ್ಲಿಸಿದೆ. ಸಚಿವತ್ರಯರು ದೆಹಲಿಗೆ ಹೋಗಿ ಸಂಬಂಧಿಸಿದ ಅಧಿಕಾರಿಗಳನ್ನು ಭೇಟಿ ಮಾಡಿ ವಸ್ತುಸ್ಥಿತಿ ವಿವರಿಸಿದ್ದಾರೆ. ಒಟ್ಟು 33,710 ಕೋಟಿ ರೂ. ಮೌಲ್ಯದ ಬೆಳೆ ಹಾನಿಯಾಗಿದೆ. ಎನ್​ಡಿಆರ್​ಎಫ್ ನಿಯಮಾವಳಿ ಪ್ರಕಾರ 17,910 ಕೋಟಿ ರೂ. ಪರಿಹಾರಕ್ಕೆ ಬೇಡಿಕೆಯಿಟ್ಟಿದ್ದಾರೆ.

ಒತ್ತಡ ತಂತ್ರ, ಉಭಯ ಸಂಕಟ:ಬೆಳೆ ನಷ್ಟದಿಂದ ರೈತರು ತತ್ತರಿಸಿದ್ದಾರೆ. ಕೃಷಿ ಕೂಲಿಕಾರರು ಕೆಲಸ ಅರಸಿ ಗುಳೆ ಹೋಗುತ್ತಿದ್ದಾರೆ. ಕೇಂದ್ರದ ನೆರವಿಗೆ ಕಾಯದೆ ಯುದ್ಧೋಪಾದಿಯಲ್ಲಿ ಪರಿಹಾರ ನಿರ್ವಹಿಸಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿವೆ. ಇದು ಸಾಲದೆಂಬಂತೆ ಪ್ರತಿಪಕ್ಷ ಬಿಜೆಪಿ ಬರ ಅಧ್ಯಯನಕ್ಕೆ ಇಳಿದಿದ್ದು, ಜೆಡಿಎಸ್ ಸಜ್ಜಾಗಿದೆ. ಪ್ರತಿಪಕ್ಷಗಳ ಒತ್ತಡತಂತ್ರ ರಾಜ್ಯ ಸರ್ಕಾರವನ್ನು ಉಭಯ ಸಂಕಟಕ್ಕೆ ಸಿಲುಕಿಸಿದೆ. ಜಾರಿಯಲ್ಲಿರುವ ನಾಲ್ಕು ಗ್ಯಾರಂಟಿಗಳ ವೆಚ್ಚ, ಬಾಕಿ ಬಿಲ್ ಪಾವತಿ, ಚಾಲ್ತಿ ಕಾಮಗಾರಿ ಮುಂದುವರಿಕೆಗೆ ಬೇಕಾದ ಆರ್ಥಿಕ ಸಂಪನ್ಮೂಲ ಕ್ರೋಡೀಕರಿಸಲು ಏದುಸಿರು ಬಿಡುತ್ತಿದೆ. ಒತ್ತಡದ ಪರಿಸ್ಥಿತಿಯಿಂದ ತಾತ್ಪೂರ್ತಿಕವಾಗಿ ಪಾರಾಗಲು ಎಸ್​ಡಿಆರ್​ಎಫ್ ಅಡಿ 324 ಕೋಟಿ ರೂ. ಬಿಡುಗಡೆ ಮಾಡಿ, ಜಿಲ್ಲಾವಾರು ಹಂಚಿಕೆಯೊಂದಿಗೆ ಆಯಾ ಡಿಸಿಗಳಿಗೆ ಸೂಕ್ತ ನಿರ್ದೇಶನ ನೀಡಿದೆ.
ಸಿದ್ದರಾಮಯ್ಯ ಕಸರತ್ತು:ಪ್ರತಿಪಕ್ಷಗಳು ಅಹವಾಲು, ಚರ್ಚೆಗೆ ಮುಂದಾಗುತ್ತಲೇ ಸಂಕಷ್ಟಕ್ಕೆ ತುತ್ತಾದ ಜನರ ಸಿಟ್ಟು, ರೋಷಾವೇಷ ಭುಗಿಲೆದ್ದು ಸರ್ಕಾರದ ವಿರುದ್ಧ ಕಿಡಿಕಾರುವುದು ಸಹಜ. ಈ ಕಾರಣಕ್ಕೆ ಬರ ನಿರ್ವಹಣೆ ಖುದ್ದು ವೀಕ್ಷಿಸಲು ಜಿಲ್ಲಾ ಉಸ್ತುವಾರಿ ಸಚಿವರಿಗೆ ಸೂಚಿಸಿದ್ದಾರೆ.
ಜೆಡಿಎಸ್​ಗೆ ಕೊಂಕು:ನಾಡಿನ ಬರ ಪರಿಸ್ಥಿತಿಯ ವೀಕ್ಷಣೆಗೆ ಜೆಡಿಎಸ್ ‘ರೈತ ಸಾಂತ್ವನ ಯಾತ್ರೆ’ ಕೈಗೊಳ್ಳುವುದನ್ನು ಸ್ವಾಗತಿಸುವೆ. ಯಾತ್ರೆಯ ನಂತರ ಅವರು ಕೊಡುವ ವರದಿಯನ್ನು ನಮ್ಮ ಸರ್ಕಾರ ಗಂಭೀರವಾಗಿ ಪರಿಶೀಲಿಸಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಬಿಜೆಪಿ ಜತೆ ಮೈತ್ರಿಗೆ ಎಚ್.ಡಿ.ಕುಮಾರಸ್ವಾಮಿ ಮುಂದಾಗಿದ್ದಾರೆ. ರಾಜ್ಯದ ಬಿಜೆಪಿ ನಾಯಕರನ್ನು ದೂರವಿಟ್ಟಿರುವ ಪ್ರಧಾನಿ ಮೋದಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಕುಟುಂಬ ಸದಸ್ಯರ ಜತೆ ಆತ್ಮೀಯ ಸಂಬಂಧ ಇಟ್ಟುಕೊಂಡಿದ್ದಾರೆ ಎಂದು ಪರೋಕ್ಷವಾಗಿ ಕೊಂಕು ನುಡಿದಿದ್ದಾರೆ. ಸೌಹಾರ್ದ ಸಂಬಂಧವನ್ನು ಬಳಸಿಕೊಂಡು ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿ ನ್ಯಾಯ ದೊರಕಿಸಿಕೊಟ್ಟರೆ ಕನ್ನಡಿಗರು ಋಣಿಯಾಗಿರುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಬರ ಪರಿಹಾರಕ್ಕಾಗಿ ಪ್ರಧಾನಿಯವರಿಗೆ ಮನವಿ ಮಾಡಲು ನಮ್ಮ ಸರ್ಕಾರ ಸರ್ವಪಕ್ಷಗಳ ನಿಯೋಗ ಕರೆದೊಯ್ಯಲು ಸಿದ್ಧವಿದೆ. ತಮ್ಮದೇ ಪಕ್ಷದ ಪ್ರಧಾನಮಂತ್ರಿ ಭೇಟಿ ಮಾಡುವ ಧೈರ್ಯ ರಾಜ್ಯ ಬಿಜೆಪಿ ನಾಯಕರಲ್ಲಿ ಇಲ್ಲವೆಂದು ಕುಟುಕಿರುವ ಸಿದ್ದರಾಮಯ್ಯ, ಕೇಂದ್ರದ ನಾಯಕರು ಕೂಡಾ ರಾಜ್ಯದ ನಾಯಕರನ್ನು ಲೆಕ್ಕಕ್ಕೆ ಇಟ್ಟುಕೊಂಡಿಲ್ಲ. ಈ ವಿಷಯದಲ್ಲಿ ಎಚ್.ಡಿ.ದೇವೇಗೌಡ ಮತ್ತು ಅವರ ಪಕ್ಷದ ಹೆಚ್ಚಿನ ಮುತುವರ್ಜಿವಹಿಸಿದರೆ ಸಾಧ್ಯವಾಗಬಹುದು ಎಂದು ‘ನೆರವು ಕೋರಿಕೆ’ ಚೆಂಡು ಜೆಡಿಎಸ್ ಅಂಗಳಕ್ಕೆ ತಳ್ಳಿದ್ದಾರೆ.
ತೆಲಂಗಾಣಕ್ಕೆ ಅರ್ಧ ಸರ್ಕಾರ ಶಿಫ್ಟ್:ನಾಡಿನ ಜನರಿಗೆ ಬರಗಾಲದ ಬವಣೆಯ ಚಿಂತೆಯಾದರೆ ಆಡಳಿತ ಕಾಂಗ್ರೆಸ್​ಗೆ ನೆರೆಯ ತೆಲಂಗಾಣ ವಿಧಾನಸಭೆ ಚುನಾವಣೆ ಟೆನ್ಷನ್ ಶುರುವಾಗಿದೆ. 10 ಸಚಿವರು ಹಾಗೂ 48 ಶಾಸಕರಿಗೆ ತೆಲಂಗಾಣ ಚುನಾವಣೆ ಜವಾಬ್ದಾರಿ ಒಪ್ಪಿಸಲಾಗಿದ್ದು, ಅರ್ಧ ಸರ್ಕಾರವೇ ಶಿಫ್ಟ್ ಆಗಲಿದೆ. ಆಯಾ ಜಿಲ್ಲೆಗೆ ತೆರಳಿ ಬರ ಪರಿಸ್ಥಿತಿ ವೀಕ್ಷಿಸಿ, ಪರಿಹಾರ ನಿರ್ವಹಣೆ ಗಮನಿಸಿ ವರದಿ ಸಲ್ಲಿಸಬೇಕು ಎಂದು ಸಿದ್ದರಾಮಯ್ಯ ಸೂಚಿಸಿದ್ದಾರೆ.
ಬೆಂಗಳೂರು:ಬರಗಾಲ ಪೀಡಿತ ಪ್ರದೇಶದ ಬೆಳೆ ಖುದ್ದು ವೀಕ್ಷಿಸಿ, ಜನರ ಬವಣೆಗೆ ಕಿವಿಯಾಗಲು ಬಿಜೆಪಿ ತಂಡಗಳು ಅಧ್ಯಯನ ಪ್ರವಾಸ ಶುರು ಮಾಡಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಾಥ್ ನೀಡಲಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ ಸೋಮವಾರ ಮತ್ತು ಮಂಗಳವಾರ ಪ್ರವಾಸ ಮಾಡಲಿದ್ದಾರೆ. ತುಮಕೂರು ಗ್ರಾಮಾಂತರ ವಿಧಾನಸಭೆ ಕ್ಷೇತ್ರದ ಬರ ಪೀಡಿತ ಪ್ರದೇಶಗಳಿಗೆ ಸೋಮವಾರ ಭೇಟಿ ನೀಡಿ, ರೈತರೊಂದಿಗೆ ಸಂವಾದ ನಡೆಸಲಿದ್ದಾರೆ. ತುಮಕೂರು ಜಿಲ್ಲೆಯ ಗುಬ್ಬಿ ಮರತ್ತು ಸಿರಾ ವಿಧಾನಸಭೆ ಕ್ಷೇತ್ರಗಳ ಬರ ಪೀಡಿತ ಪ್ರದೇಶಗಳಿಗೆ ಮಂಗಳವಾರ ಭೇಟಿ ನೀಡಿ, ರೈತರ ಜತೆಗೆ ಮುಖಾಮುಖಿ ಚರ್ಚೆ ನಡೆಸಲಿದ್ದಾರೆ.
ತೇವಾಂಶ ಸಾಲದೆ ಒಣಗಿದ ಬೆಳೆ, ಮಳೆ ಕೈಕೊಟ್ಟಿದ್ದರಿಂದ ಜನ-ಜಾನುವಾರುಗಳಿಗೆ ಕುಡಿಯುವ ನೀರು, ಮೇವಿನ ಅಭಾವ ಹಾಗೂ ಸರ್ಕಾರ ಕೈಗೊಂಡ ಪರಿಹಾರ ನಿರ್ವಹಣೆ ಬಗ್ಗೆ ಮಾಹಿತಿ ಸಂಗ್ರಹಿಸಲಿದ್ದಾರೆ. ಎರಡು ಕಡೆ ರೈತರೊಂದಿಗೆ ಸಂವಾದ ನಡೆಸಲಿರುವುದು ಬಿಎಸ್​ವೈ ಬರ ಅಧ್ಯಯನ ಪ್ರವಾಸದ ಮುಖ್ಯಾಂಶವಾಗಿದೆ. ತತ್ತರಿಸಿದ ರೈತರ ಅಹವಾಲು ಆಲಿಸಿ, ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಲಿದ್ದಾರೆ. ಬಿಜೆಪಿ ಆಡಳಿತ ಕಾಲದಲ್ಲಿ ಕೇಂದ್ರದ ನೆರವಿಗೆ ಕಾಯುತ್ತಾ ಕುಳಿತುಕೊಳ್ಳದೆ ತುರ್ತಾಗಿ ಪ್ರಕೃತಿ ವಿಕೋಪ ಪರಿಹಾರ ನಿರ್ವಹಿಸಿದ್ದನ್ನು ನೆನಪಿಸಿ, ಬಾಧಿತರಲ್ಲಿ ಆತ್ಮವಿಶ್ವಾಸ ತುಂಬಲಿದ್ದಾರೆ.
10ರವರೆಗೆ ಅಧ್ಯಯನ:ಪಕ್ಷದ ರಾಜ್ಯಾಧ್ಯಕ್ಷ, ಮಾಜಿ ಸಚಿವರು ಮತ್ತು ಶಾಸಕರನ್ನು ಒಳಗೊಂಡ ತಂಡಗಳು ಶನಿವಾರದಿಂದ ಬರ ಅಧ್ಯಯನ, ಹೊಲಗಳಿಗೆ ಭೇಟಿಯಿತ್ತು, ಜನರ ಬವಣೆ ಆಲಿಸುವರು. ಬರಪೀಡಿತ 223 ತಾಲೂಕುಗಳ ಪೈಕಿ ಬಹುಪಾಲು ತಾಲೂಕುಗಳಿಗೆ ತಂಡಗಳು ಭೇಟಿ ನೀಡುವ ರೀತಿಯಲ್ಲಿ ಮಾರ್ಗಪಥ ಸಿದ್ಧಪಡಿಸಿಕೊಂಡಿದೆ. ನ.10ರವರೆಗೆ ಅಧ್ಯಯನ, ಸಂಗ್ರಹಿಸಿದ ಮಾಹಿತಿ ಕ್ರೋಡೀಕರಣ ಕಾರ್ಯ ನಡೆಯಲಿದೆ.
ಮೈಸೂರು:ರಾಜ್ಯದ ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಭೇಟಿ ನೀಡಿ, ಬರ ಪರಿಸ್ಥಿತಿ ಅಧ್ಯಯನ ಮಾಡಿ, ನ. 15ರೊಳಗೆ ವರದಿ ನೀಡುವಂತೆ ತಿಳಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಬರದ ಕುರಿತು ಅಧ್ಯಯನ ಮಾಡಿ ವರದಿ ನೀಡುವಂತೆ ಈಗಾಗಲೇ ಪತ್ರ ಬರೆಯಲಾಗಿದೆ. ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲವೆಂದು ಯಾವುದೇ ಕೆಲಸ ನಿಲ್ಲಿಸಿಲ್ಲ. ಬರ ಪರಿಹಾರ ಕಾರ್ಯಗಳಿಗೆ 900 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಪರಿಹಾರ ಕಾರ್ಯಗಳು ಪ್ರಾರಂಭವಾಗಿವೆ. ಕುಡಿಯುವ ನೀರು, ಉದ್ಯೋಗ ನೀಡುವುದು ಇದ್ಯಾವುದೂ ನಿಂತಿಲ್ಲ ಎಂದರು.
ಸಿದ್ದರಾಮಯ್ಯ ಆಡಳಿತದಲ್ಲಿ ರೈತರ ಆತ್ಮಹತ್ಯೆ ಪ್ರಕರಣ ಹೆಚ್ಚಾಗಿದ್ದು, ಇಡೀ ಸಂಪುಟ ಗ್ಯಾರಂಟಿಗಳಲ್ಲಿ ಮುಳುಗಿದ್ದರಿಂದ ಸರ್ಕಾರ ರೈತರ ಬಗ್ಗೆ ಕಾಳಜಿ ತೋರುತ್ತಿಲ್ಲ.
| ಬಿ.ಸಿ.ಪಾಟೀಲ, ಮಾಜಿ ಸಚಿವ
ಕೇಂದ್ರಕ್ಕೆ ಪತ್ರ ಬರೆದ ಮೇಲೆ ನರೇಗಾ ಯೋಜನೆಯಡಿ ನೆನ್ನೆಯಷ್ಟೇ 600 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಮಾರ್ಗಸೂಚಿ ಪ್ರಕಾರ 17,900 ಕೋಟಿ ರೂ. ಬಿಡುಗಡೆ ಮಾಡುವಂತೆ ಕೋರಿದ್ದೇವೆ. ರಾಜ್ಯದ ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಕೃಷಿ ಸಚಿವರನ್ನು ದೆಹಲಿಗೆ ಕಳುಹಿಸಲಾಗಿತ್ತು. ಆದರೆ ನಮ್ಮ ಸಚಿವರ ಭೇಟಿಗೆ ಕೇಂದ್ರದ ಮಂತ್ರಿಗಳು ಅವಕಾಶ ನೀಡಿಲ್ಲ. ಪ್ರಧಾನಮಂತ್ರಿಯೂ ಸಮಯಾವಕಾಶ ನೀಡಿಲ್ಲದ ಕಾರಣ ಅವರ ಕಾರ್ಯದರ್ಶಿ ಗಳನ್ನು ಭೇಟಿ ಮಾಡಿ ಬರುವ ಪರಿಸ್ಥಿತಿ ಬಂದಿದೆ. ರಾಜ್ಯದ ಬಿಜೆಪಿ ನಾಯಕರಿಗೆ ಜನರ ಬಗ್ಗೆ ಕಾಳಜಿ ಇದ್ದರೆ ದೆಹಲಿಗೆ ತೆರಳಿ ಅನುದಾನ ಬಿಡುಗಡೆ ಮಾಡಿಸಲಿ. ಅದು ಬಿಟ್ಟು ರಾಜ್ಯದಲ್ಲಿ ಪ್ರವಾಸ ಮಾಡಿ ಏನು ಮಾಡುತ್ತಾರೆ ಎಂದರು.
16 ದಿನ ಮನೆಯಲ್ಲಿ ಯಾರೂ ಇರಲಿಲ್ಲ, ಆದ್ರೂ ಬಂತು ಕರೆಂಟ್ ಬಿಲ್ ಮೂರುಪಟ್ಟು!

ವಿಶ್ವಕಪ್ ಕ್ರಿಕೆಟ್​: ಭಾರತದ ಇಂದಿನ ಭರ್ಜರಿ ಗೆಲುವನ್ನು ‘ಕಾಪಿ-ಪೇಸ್ಟ್’ ಎಂದಿದ್ದೇಕೆ ಗೂಗಲ್?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − 3 =
Remember me
