ಮುಂದಿನ ಪೀಳಿಗೆಯ ವಾಹನ ಎಂದರೆ ಅದು ವಿದ್ಯುತ್​ಚಾಲಿತ ವಾಹನ. ನವೀಕರಿಸಲಾಗದ ಇಂಧನ ಮೂಲಗಳ ಮೇಲಿನ ಅವಲಂಬನೆಯಿಂದ ಭವಿಷ್ಯದಲ್ಲಿ ತೊಂದರೆಯಾಗುತ್ತದೆ, ವೆಚ್ಚ ಹೆಚ್ಚಳವಾಗುತ್ತದೆ ಎನ್ನುವುದರ ಜತೆಗೆ ಏರುತ್ತಿರುವ ಜಾಗತಿಕ ತಾಪಮಾನಕ್ಕೆ ಮತ್ತಷ್ಟು ಒತ್ತು ನೀಡಿದಂತಾಗುತ್ತದೆ. ಹೀಗಾಗಿ ವಿದ್ಯುತ್ ಚಾಲಿತ ವಾಹನಗಳ (ಎಲೆಕ್ಟ್ರಿಕ್ ವೆಹಿಕಲ್-ಇವಿ) ಸಂಶೋಧನೆ ಸಾಕಷ್ಟು ಅಭಿವೃದ್ಧಿಯಾಗಿದ್ದು, ಸರ್ಕಾರಗಳೂ ಸಹಕಾರ ನೀಡಲು ಮುಂದಾಗಿವೆ. ವಿದ್ಯುತ್ ವಾಹನ ಚಾರ್ಜಿಂಗ್ ಸ್ಟೇಷನ್​ಗಳ ಸ್ಥಾಪನೆಗೆ 1 ಸಾವಿರ ಕೋಟಿ ರೂ. ಮೀಸಲಿಟ್ಟಿರುವ ಕೇಂದ್ರ ಸರ್ಕಾರ ಇದೀಗ ಸಾರ್ವಜನಿಕ ಚಾರ್ಜಿಂಗ್ ಕೇಂದ್ರ(ಪಿಸಿಎಸ್) ಸ್ಥಾಪನೆಗೆ ವಿಸõತ ಮಾರ್ಗಸೂಚಿಯನ್ನು ರಚಿಸಿದೆ. ವಾಹನ ಮಾಲೀಕರಿಗೆ ಅನುಕೂಲದ ಜತೆಗೆ, ಸದ್ಯ ದೇಶದಲ್ಲಿರುವುದಕ್ಕಿಂತ 45 ಪಟ್ಟು ಹೆಚ್ಚು ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆ ಗುರಿಯನ್ನು ಸರ್ಕಾರ ಹೊಂದಿದ್ದು, ಪಂಕ್ಚರ್ ಅಂಗಡಿಗಳು, ವಾಹನ ರಿಪೇರಿ ಉದ್ಯಮದಂತೆಯೇ ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸುವ ಸಾಧ್ಯತೆಯನ್ನೂ ತೆರೆದಿಟ್ಟಿದೆ.
ಚಾರ್ಜಿಂಗ್ ಕೇಂದ್ರಗಳೇ ಸಮಸ್ಯೆ:ಇ-ವಾಹನ ಖರೀದಿಸಲು ಬಹಳ ಜನರಿಗೆ ಆಸಕ್ತಿ ಇದೆ. ಶಬ್ದರಹಿತ ಚಾಲನೆ, ಕಡಿಮೆ ತೂಕ, ಪರಿಸರ ಮಾಲಿನ್ಯ ಇಲ್ಲದಿರುವಿಕೆ ಹಾಗೂ ಸರ್ಕಾರದಿಂದ ದೊರಕುತ್ತಿರುವ ಸಹಾಯಧನವೂ ಇದಕ್ಕೆ ಕಾರಣ. ಆದರೆ ದೊಡ್ಡ ಆತಂಕವೆಂದರೆ ಚಾರ್ಜಿಂಗ್ ಕೇಂದ್ರಗಳ ಅಲಭ್ಯತೆ. ಒಂದು ಬಾರಿ ಚಾರ್ಜ್ ಮಾಡಿದ ವಾಹನ 50-60 ಕಿ.ಮೀ. ಸಂಚರಿಸುತ್ತದೆ ಎಂದು ವಾಹನ ತಯಾರಕರು ತಿಳಿಸುತ್ತಾರೆ. ಮನೆಯಿಂದ ಹೊರಟ ನಂತರ ನಡುವೆ ತುಸು ಹೆಚ್ಚು ದೂರ ಕ್ರಮಿಸಬೇಕೆಂದರೆ ಯೋಚಿಸಬೇಕಾಗುತ್ತದೆ. ನಡುವೆ ಬ್ಯಾಟರಿ ಮುಗಿದರೆ ಪೆಟ್ರೋಲ್ ಪಂಪ್​ಗಳ ರೀತಿ ಚಾರ್ಜಿಂಗ್ ಸ್ಟೇಷನ್​ಗಳಿಲ್ಲ. ಈ ಸಮಸ್ಯೆ ನಿವಾರಿಸಲು ಕೇಂದ್ರ ಇಂಧನ ಸಚಿವಾಲಯ ಮೊದಲಿಗೆ 2019ರ ಅ.1, ನಂತರ 2020ರ ಜೂ.8ರಂದು ‘ವಿದ್ಯುತ್ ಚಾಲಿತ ವಾಹನಗಳ ಚಾರ್ಜಿಂಗ್ ಮೂಲಸೌಕರ್ಯ-ಮಾರ್ಗಸೂಚಿ ಮತ್ತು ಗುಣಮಟ್ಟ’ ರಚಿಸಿತ್ತು. ಇದೀಗ ಸಮಗ್ರ ಮಾರ್ಗಸೂಚಿಯನ್ನು 2022ರ ಜ.14ರಂದು ಪ್ರಕಟಿಸಿದೆ. ಇ-ವಾಹನ ಖರೀದಿಯನ್ನು ಸುರಕ್ಷಿತ, ನಂಬಿಕಾರ್ಹ, ಕೈಗೆಟುಕುವಂತೆ ಮಾಡುವುದು ಹಾಗೂ ಕಡಿಮೆ ವೆಚ್ಚದ ಚಾರ್ಜಿಂಗ್ ಮೂಲಸೌಕರ್ಯ ರೂಪಿಸುವುದು ಈ ನಿಯಮಾವಳಿಗಳ ಮುಖ್ಯ ಉದ್ದೇಶ.
ಮನೆಯಲ್ಲೇ ಚಾರ್ಜ್ ಮಾಡಬಹುದು:ಹೊಸ ನಿಯಮಾವಳಿಯಲ್ಲಿ ಎರಡು ಭಾಗವಿದೆ. ಮೊದಲನೆಯದು, ವೈಯಕ್ತಿಕ ವಾಹನ ಬಳಸುವವರು. ವೈಯಕ್ತಿಕ ವಾಹನಗಳನ್ನು ತಮ್ಮ ಮನೆಯ ಅಥವಾ ಕಚೇರಿಯ ವಿದ್ಯುತ್ ಬಳಸಿ, ಈಗಾಗಲೆ ಇರುವ ಸಾಮಾನ್ಯ ದರದಲ್ಲೆ ಚಾರ್ಜ್ ಮಾಡಿಕೊಳ್ಳಬಹುದು ಎಂದು ತಿಳಿಸಲಾಗಿದೆ. ಮನೆಯ ವಿದ್ಯುತ್​ನಲ್ಲೆ ವಾಹನ ಚಾರ್ಜ್ ಮಾಡಬಹುದು ಎಂಬುದಕ್ಕೆ ಇಲ್ಲಿವರೆಗೆ ಸರ್ಕಾರಿ ನೀತಿಯ ಬೆಂಬಲ ಇರಲಿಲ್ಲ.
ಪರವಾನಗಿ ಅಗತ್ಯವಿಲ್ಲ:ನಿಯಮಾವಳಿಯ ಎರಡನೆಯ ಹಾಗೂ ಮುಖ್ಯ ಅಂಶ ಸಾರ್ವಜನಿಕ ಚಾರ್ಜಿಂಗ್ ಕೇಂದ್ರ(ಪಿಸಿಎಸ್) ಸ್ಥಾಪನೆಗೆ ಒತ್ತು. ಇಂಧನ ದಕ್ಷತೆ ಸಂಸ್ಥೆಯ (ಬಿಇಇ) ಹಾಗೂ ಕೇಂದ್ರ ವಿದ್ಯುತ್ ಪ್ರಾಧಿಕಾರದ(ಸಿಇಎ) ನಿಯಮಾವಳಿ ಹಾಗೂ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿ ಚಾರ್ಜಿಂಗ್ ಕೇಂದ್ರ ಇರಬೇಕು. ಆದರೆ ಇದಕ್ಕಾಗಿ ಯಾವುದೇ ಪರವಾನಗಿಯ ಅಗತ್ಯವಿಲ್ಲ.
ಫೇಮ್ ಇಂಡಿಯಾದಿಂದ ಸಹಾಯಧನ:ವೈಯಕ್ತಿಕ ಹಾಗೂ ಸಾರ್ವಜನಿಕ ಬಳಕೆಯ ವಿದ್ಯುತ್ ವಾಹನಗಳ ಬಳಕೆ ಹೆಚ್ಚಿಸಲು ವಿದ್ಯುತ್ ಮತ್ತು ಹೈಬ್ರಿಡ್ ವಾಹನಗಳ ತ್ವರಿತ ಸ್ವೀಕಾರ ಮತ್ತು ಉತ್ಪಾದನೆ(ಫೇಮ್ ಇಂಡಿಯಾ ಯೋಜನೆ ಮೂಲಕ ಸಹಾಯಧನವನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಮೆಟ್ರೋಪಾಲಿಟನ್ ನಗರಗಳಲ್ಲಿ 7,090 ವಿದ್ಯುತ್​ಚಾಲಿತ ಬಸ್, 5 ಲಕ್ಷ ತ್ರಿಚಕ್ರ ವಾಹನ, 55 ಸಾವಿರ ಪ್ರಯಾಣಿಕರ ಕಾರು ಹಾಗೂ 10 ಲಕ್ಷ ದ್ವಿಚಕ್ರವಾಹನಗಳ ಖರೀದಿಗೆ ಸಹಾಯಧನಕ್ಕೆ ಒಟ್ಟು 10 ಸಾವಿರ ಕೋಟಿ ರೂ. ವ್ಯಯಿಸುವ ಗುರಿ ಹೊಂದಿದೆ. ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆಗೆ -ಠಿ; 1 ಸಾವಿರ ಕೋಟಿ ಮೀಸಲಿಟ್ಟಿದೆ.
ಆನ್​ಲೈನ್ ಬುಕಿಂಗ್:ವಾಹನ ಚಲಾಯಿಸುತ್ತಿರುವಾಗ ನಡುವೆಯೇ ಬ್ಯಾಟರಿ ಮುಗಿಯುತ್ತ ಬಂದರೆ, ಸಮೀಪದಲ್ಲಿ ಎಲ್ಲಿ ಚಾರ್ಜಿಂಗ್ ಕೇಂದ್ರವಿದೆ ಎಂದು ತಿಳಿಯುವ ವ್ಯವಸ್ಥೆಯನ್ನು ಪ್ರಾರಂಭದಿಂದಲೇ ಕಲ್ಪಿಸಲಾಗುತ್ತದೆ. ಜತೆಗೆ ಆ ಕೇಂದ್ರದಲ್ಲಿರುವ ಚಾರ್ಜಿಂಗ್ ಮಾದರಿ, ಸದ್ಯ ಲಭ್ಯವಿರುವ ಸ್ಲಾಟ್ ತಿಳಿಯುವ ಜತೆಗೆ ಸ್ಲಾಟ್ ಬುಕ್ ಮಾಡಿಕೊಳ್ಳುವ ಅವಕಾಶವೂ ಇರಲಿದೆ. ಮೆಟ್ರೊ ನಗರಗಳಲ್ಲಿ 3 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಕನಿಷ್ಠ 1 ಚಾರ್ಜಿಂಗ್ ಕೇಂದ್ರದ ಗುರಿ ಹೊಂದಲಾಗಿದೆ. ಹೈವೇಗಳ ಪ್ರತಿ 25 ಕಿ.ಮೀ. ದೂರದಲ್ಲಿ ಎರಡೂ ಬದಿಯಲ್ಲಿ ತಲಾ ಒಂದು ಕೇಂದ್ರವಿರಬೇಕು. ಎಲೆಕ್ಟ್ರಿಕ್ ಬಸ್, ಲಾರಿಗಳ ಚಾರ್ಜ್ ಮಾಡಲು ಕನಿಷ್ಟ ಪ್ರತಿ 100 ಕಿ.ಮೀ. ವ್ಯಾಪ್ತಿಯ ಎರಡೂ ಬದಿಯಲ್ಲಿ ತಲಾ ಒಂದು ಚಾರ್ಜಿಂಗ್ ಕೇಂದ್ರವಿರಬೇಕೆಂಬ ಗುರಿ ಹೊಂದಲಾಗಿದೆ. ಸಾರ್ವಜನಿಕರು, ಸರ್ಕಾರಿ ಸಂಸ್ಥೆಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಕುರಿತು ಅರಿವು ಹೆಚ್ಚಿಸಲು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು ‘ಗೋ ಎಲೆಕ್ಟ್ರಿಕ್’ ಅಭಿಯಾನವನ್ನು ಆಯೋಜಿಸಲಿವೆ.
ಚಾರ್ಜಿಂಗ್ ಕೇಂದ್ರದ ನಿಯಮ:ಸರ್ಕಾರಿ ಸಂಸ್ಥೆಗಳು ಅಥವಾ ಇಲಾಖೆಗಳು ಚಾರ್ಜಿಂಗ್ ಕೇಂದ್ರ ಸ್ಥಾಪಿಸಲು ಮುಂದಾದರೆ, ಸರ್ಕಾರಿ ಸ್ಥಳಗಳಲ್ಲಿ ಅವಕಾಶ ಮಾಡಿ ಕೊಡಬೇಕು. ಕೇಂದ್ರ ಸ್ಥಾಪಿಸುವ ಸಂಸ್ಥೆಯು ಭೂಮಿ ಒಡೆತನದ ಸಂಸ್ಥೆಗೆ, ಪ್ರತಿ ಕಿ.ವಾ. ಬಳಕೆಗೆ 1 ರೂ.ನಂತೆ ಹಣ ನೀಡಬೇಕು. ಸರ್ಕಾರಿ ಜಾಗದಲ್ಲಿ ಖಾಸಗಿ ವ್ಯಕ್ತಿಗಳು ಚಾರ್ಜಿಂಗ್ ಕೇಂದ್ರ ಸ್ಥಾಪಿ ಸಲೂ ಅವಕಾಶ ನೀಡಬಹುದು. ಪ್ರತಿ ಕಿ.ವಾ. ವಿದ್ಯುತ್ ಬಳಕೆಗೆ 1 ರೂ. ಪ್ರಾರಂಭಿಕ ದರದಿಂದ ಆರಂಭಿಸಿ, ಹರಾಜು ಪ್ರಕ್ರಿಯೆ ಮೂಲಕ ದರ ನಿಗದಿಪಡಿಸಬಹುದು. ಮೆಟ್ರೊ ನಗರಗಳಲ್ಲಾದರೆ ಕೇಂದ್ರ ಸ್ಥಾಪನೆಗೆ ಅರ್ಜಿ ಸಲ್ಲಿಸಿದ 7 ದಿನದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಮುನಿಸಿಪಲ್ ಪ್ರದೇಶಗಳಲ್ಲಿ 15 ದಿನ, ಗ್ರಾಮೀಣ ಪ್ರದೇಶದಲ್ಲಿ 30 ದಿನ ಗಡುವಿದೆ. ವಿದ್ಯುತ್ ಸರಬರಾಜು ಸಂಸ್ಥೆಗಳು ಈ ಕೇಂದ್ರಗಳಿಗೆ ‘ಸರಾಸರಿ ಸರಬರಾಜು ದರ’ಕ್ಕಿಂತ ಹೆಚ್ಚಿನ ದರ ವಿಧಿಸುವಂತಿಲ್ಲ, ಈ ನೀತಿ 2025ರ ಮಾ.31ರವರೆಗೆ ಅನ್ವಯ.
ದೇಶದಲ್ಲಿ ಒಟ್ಟು 8.7 ಲಕ್ಷ ಇವಿಗಳು:ಸರ್ಕಾರದ ಸಹಾಯಧನ ಹಾಗೂ ಸಾರ್ವಜನಿಕರ ಆಸಕ್ತಿಗಳು ಒಟ್ಟುಗೂಡಿ ಇ-ವಾಹನ ಮಾರಾಟ ದಿನೇದಿನೆ ಹೆಚ್ಚುತ್ತಿದೆ. 2021ರ ಡಿ.8ನೇ ತಾರೀಕಿನವರೆಗಿನ ಅಂಕಿ ಅಂಶಗಳಂತೆ ದೇಶದ ಸಾರಿಗೆ ಕಚೇರಿಗಳಲ್ಲಿ ಒಟ್ಟು 8,77,117 ಇವಿಗಳು ನೋಂದಣಿಯಾಗಿವೆ. ಉತ್ತರ ಪ್ರದೇಶ ಮತ್ತು ದೆಹಲಿ ನಂತರ 3ನೇ ಸ್ಥಾನದಲ್ಲಿ ಕರ್ನಾಟಕ ವಿದೆ. ಹೆಚ್ಚು ಸಾಮರ್ಥ್ಯದ ಇವಿಗಳಷ್ಟೆ ನೋಂದಣಿ ಆಗಬೇಕು. ಕಡಿಮೆ ಸಾಮರ್ಥ್ಯದ ಇವಿಗಳಿಗೆ ನೋಂದಣಿ. ಚಾಲನಾ ಪರವಾನಗಿ, ಹೆಲ್ಮೆಟ್ ಯಾವುದೇ ಅವಶ್ಯಕವಿಲ್ಲ.
45 ಪಟ್ಟು ಹೆಚ್ಚಳ ಗುರಿ:ಈಗಿನ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ 1,028 ಪಿಸಿಎಸ್​ಗಳಿವೆ. 10 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ಮುಂಬೈ, ದೆಹಲಿ, ಬೆಂಗಳೂರು, ಹೈದರಾಬಾದ್, ಅಹಮ ದಾಬಾದ್, ಚೆನ್ನೈ, ಕೊಲ್ಕತ, ಸೂರತ್ ಹಾಗೂ ಪುಣೆಯಲ್ಲಿ ಹೆಚ್ಚು ಕೇಂದ್ರಗಳ ಸ್ಥಾಪನೆಗೆ ಒತ್ತು ನೀಡಲಾಗುತ್ತದೆ. 2030ರ ವೇಳೆಗೆ ದೇಶಾದ್ಯಂತ ಕನಿಷ್ಠ 3,263 ಚಾರ್ಜಿಂಗ್ ಕೇಂದ್ರಗಳಾಗಬೇಕು. ಆ ವೇಳೆಗೆ 46,397 ಅಂದರೆ ಈಗಿಗಿಂತ 45 ಪಟ್ಟು ಹೆಚ್ಚು ಕೇಂದ್ರಗಳ ಸ್ಥಾಪನೆ ಗುರಿ ಹೊಂದಲಾಗಿದೆ. ಯಾರು ಬೇಕಾದರೂ ಚಾರ್ಜಿಂಗ್ ಕೇಂದ್ರ ಸ್ಥಾಪನೆ ಮಾಡಬಹುದಾಗಿರುವುದರಿಂದ ದೇಶಾದ್ಯಂತ ಸಾವಿರಾರು ಜನರಿಗೆ ಸ್ವಉದ್ಯೋಗ ಅವಕಾಶ ತೆರೆದುಕೊಳ್ಳುವ ಸಾಧ್ಯತೆ ಇದೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:six − 3 =
Remember me
