ಉತ್ತರಾಖಂಡ ರಾಜ್ಯದ ಗರ್ವಾಲ್ ಜಿಲ್ಲೆಯ ಜೋಶಿಮಠ ಪಟ್ಟಣ ಶತಮಾನಗಳವರೆಗೆ ಟಿಬೆಟ್ ವ್ಯಾಪಾರ ಮಾರ್ಗದಲ್ಲಿ ಸಣ್ಣ ಕುಗ್ರಾಮವಾಗಿತ್ತು; ಬದರಿನಾಥಕ್ಕೆ ಹೆಬ್ಬಾಗಿಲಾಗಿತ್ತು, ಪುರಾತನ ದೇವಾಲಯ, ಮಠದ ತಾಣವಾಗಿತ್ತು. 1960ರ ದಶಕದಲ್ಲಿ ಪಟ್ಟಣದಲ್ಲಿ ಯಾವುದೇ ಕಾಂಕ್ರೀಟ್ ಕಟ್ಟಡಗಳು ಇರಲಿಲ್ಲ. ಹಿಮಾಲಯದ ಅನೇಕ ಪಟ್ಟಣಗಳಂತೆ ಜೋಶಿಮಠವೂ ಕಳೆದ ಕೆಲವು ದಶಕಗಳಲ್ಲಿ ಬೃಹತ್ ನಿರ್ಮಾಣ ಕಾಮಗಾರಿಗಳನ್ನು ಕಂಡಿದೆ. ದುರ್ಬಲವಾದ ಇಳಿಜಾರುಗಳಲ್ಲಿ ಬಹುಮಹಡಿ ಕಟ್ಟಡಗಳು ತಲೆಎತ್ತಿವೆ.
ನಿರ್ಮಾಣ ತಂದ ಆತಂಕ:1970ರಲ್ಲಿ ಅಲಕನಂದಾದಲ್ಲಿ ಸಂಭವಿಸಿದ ಭಾರಿ ಪ್ರವಾಹವು ಈ ಪ್ರದೇಶದ ಇಳಿಜಾರುಗಳನ್ನು ಅಸ್ಥಿರಗೊಳಿಸಿದೆ. ನಂತರ, ಪಟ್ಟಣದಲ್ಲಿ ಭೂಕುಸಿತದ ಘಟನೆಗಳು ವರದಿಯಾಗತೊಡಗಿದವು. ಈ ಹಿನ್ನೆಲೆಯಲ್ಲಿ ಅಧ್ಯಯನಕ್ಕಾಗಿ ಎಂ.ಸಿ. ಮಿಶ್ರಾ ಸಮಿತಿ ರಚಿಸಲಾಯಿತು. ಈ ಸಮಿತಿ 1976ರಲ್ಲಿ ವರದಿ ಸಲ್ಲಿಸಿತು. ಕಟ್ಟಡ ಚಟುವಟಿಕೆಗಳ ಮೇಲೆ ತೀವ್ರ ನಿರ್ಬಂಧಗಳನ್ನು ಹೇರಲು ಸಮಿತಿ ಶಿಫಾರಸು ಮಾಡಿತು. ಆದರೆ, ಇವು ಜಾರಿಗೆ ಬರಲಿಲ್ಲ. ಬದಲಾಗಿ ಸೇನೆ ಮತ್ತು ಐಟಿಬಿಪಿ (ಇಂಡೊ- ಟಿಬೆಟಿಯನ್ ಬಾರ್ಡರ್ ಪೊಲೀಸ್) ಕಟ್ಟಡಗಳು ಸ್ಥಾಪನೆಗೊಂಡವು. ಖಾಸಗಿ ಹೋಟೆಲ್​ಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡವು. ಸುತ್ತಮುತ್ತಲಿನ ಹಳ್ಳಿಗಳ ಜನರು ಇಲ್ಲಿ ನೆಲೆಸುವುದರೊಂದಿಗೆ ಪರಿಸರಕ್ಕೆ ಧಕ್ಕೆಯಾಗುವ ಬೆಳವಣಿಗೆಗಳು ನಡೆದವು.
ಈ ಕಟ್ಟಡಗಳು ಪ್ರದೇಶದ ನೈಸರ್ಗಿಕ ನೀರಿನ ಹರಿವಿಗೆ ಧಕ್ಕೆಯುಂಟು ಮಾಡಿದವು. ಅಲ್ಲದೆ, ತ್ಯಾಜ್ಯ ಹರಿಯುವ ಯಾವುದೇ ವ್ಯವಸ್ಥೆಯನ್ನು ಪಟ್ಟಣದಲ್ಲಿ ರೂಪಿಸಲಿಲ್ಲ. ಹೆಚ್ಚಿನ ಮನೆಗಳ ಶೌಚಗೃಹಗಳು ಸೋಕ್ ಪಿಟ್ ಹೊಂದಿರುವುದು ಭೂಕುಸಿತದ ಅಪಾಯವನ್ನು ಹೆಚ್ಚಿಸುವಂತಾಗಿದೆ ಎಂದು ತಜ್ಞರು ಹೇಳುತ್ತಾರೆ.
ಬೆಳೆಯುತ್ತಿರುವ ಪ್ರವಾಸೋದ್ಯಮದ ಒತ್ತಡದಿಂದಾಗಿ ಹಿಮಾಲಯ ಪ್ರದೇಶದಾದ್ಯಂತ ಸೂಕ್ತ ನಿಯಮಾವಳಿಗಳನ್ನು ಅನುಸರಿಸದೆಯೇ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳುತ್ತಿದ್ದು, ಶಿಮ್ಲಾ, ನೈನಿತಾಲ್ ಮತ್ತು ಇತರೆಡೆಗಳಲ್ಲಿ ಜೋಶಿಮಠದಲ್ಲಿನ ಭೂಕುಸಿತದ ರೀತಿಯ ಘಟನೆಗಳು ವರದಿಯಾಗುತ್ತಿವೆ.
ಯೋಜನೆಗಳ ಸರಮಾಲೆ:ಜೋಶಿಮಠದ ಸುತ್ತ ಮೂರು ಪ್ರಮುಖ ನಿರ್ಮಾಣ ಯೋಜನೆಗಳು ನಡೆಯುತ್ತಿವೆ. ಎನ್​ಟಿಪಿಸಿಯ (ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮ) ತಪೋವನ-ವಿಷ್ಣುಗಡ ಜಲವಿದ್ಯುತ್ ಯೋಜನೆ; ಹೆಲಾಂಗ್-ಮಾರ್ವಾರಿ ಬೈಪಾಸ್ ರಸ್ತೆ; ಚಾರ್​ಧಾಮ್ ರಸ್ತೆ ವಿಸ್ತರಣೆ ಯೋಜನೆ. ರಸ್ತೆ ನಿರ್ವಣಕ್ಕಾಗಿ ಸ್ಪೋಟಕಗಳನ್ನು ಕೂಡ ಬಳಸಲಾಗುತ್ತಿದೆ.
ಹಿಮಾಲಯ ಮತ್ತು ಹಿಂದೂಕುಶ್ ಪ್ರದೇಶದಾದ್ಯಂತ ಎತ್ತರದ ಸ್ಥಳಗಳಲ್ಲಿ 650 ಜಲವಿದ್ಯುತ್ ಯೋಜನೆಗಳನ್ನು ನಿರ್ವಿುಸಲು ಯೋಜಿಸಲಾಗಿದ್ದು, ಇದರಲ್ಲಿ ಒಂದಿಷ್ಟು ಈಗಾಗಲೇ ನಿರ್ಮಾಣ ಹಂತದಲ್ಲಿವೆ. ಇದರಲ್ಲಿ ಸಾಕಷ್ಟು ಯೋಜನೆಗಳು ಹಿಮನದಿಗಳು, ಹಿಮ ಸರೋವರಗಳು ಮತ್ತು ಭೂಕಂಪನ ಸಕ್ರಿಯ ವಲಯಗಳಿಗೆ ಹತ್ತಿರದಲ್ಲಿವೆ. ಉತ್ತರಾಖಂಡ-ನೇಪಾಳದ ಗಡಿಗೆ ಸಮೀಪವಿರುವ 315 ಮೀಟರ್ ಎತ್ತರದ ಬಂಡೆಯಿಂದ ತುಂಬಿರುವ ಪಂಚೇಶ್ವರ ಅಣೆಕಟ್ಟು, ದಿಬಾಂಗ್ ವಿವಿಧೋದ್ದೇಶ ಯೋಜನೆ, ಅರುಣಾಚಲದಲ್ಲಿ ವಿಶ್ವದ ಅತಿ ಎತ್ತರದ ಕಾಂಕ್ರೀಟ್ ಗುರುತ್ವಾಕರ್ಷಣೆಯ ಅಣೆಕಟ್ಟು, 3,097 ಮೆ.ವಾ. ಸಾಮರ್ಥ್ಯದ ಇಟಾಲಿನ್ ಜಲವಿದ್ಯುತ್ ಯೋಜನೆ ಮುಂತಾದವುಗಳು ನೈಸರ್ಗಿಕ ವಿಕೋಪ ಭೀತಿಗೆ ಕಾರಣವಾಗಿವೆ.
ಹವಾಮಾನ ಬದಲಾವಣೆಯು ಹಿಮಾಲಯ ಪರ್ವತ ಪ್ರದೇಶದಲ್ಲಿ ಅಧಿಕವಾಗಿದೆ. ತಾಪಮಾನ ವೇಗವಾಗಿ ಹೆಚ್ಚುತ್ತಿದೆ. ಎರಡು ವರ್ಷಗಳ ಹಿಂದೆಯಷ್ಟೇ ಬೃಹತ್ ಹಿಮನದಿ ಕರಗುವಿಕೆಯಿಂದ ಸಂಭವಿಸಿದ ಪ್ರವಾಹದಿಂದಾಗಿ ಜೋಶಿಮಠಕ್ಕೆ ಸಮೀಪವಿರುವ ರೇಣಿ ಮತ್ತು ಅಸ್ಥೆ ಗ್ರಾಮಗಳು ಹಾಗೂ ಋಷಿಗಂಗಾ ಮತ್ತು ತಪೋವನ-ವಿಷ್ಣುಗಡ ಯೋಜನೆಗಳು ಧ್ವಂಸಗೊಂಡವು. ಅಲ್ಲದೆ, 200 ಜನರು ಸಾವನ್ನಪ್ಪಿದರು.
ಡೇಂಜರ್ ಡಾರ್ಜಿಲಿಂಗ್:ಸಂಭಾವ್ಯ ಭೂಕಂಪ ಮತ್ತು ಭೂಕುಸಿತ ಪ್ರದೇಶವಾದ ಡಾರ್ಜಿಲಿಂಗ್​ನಲ್ಲಿ ರಸ್ತೆ ಮತ್ತು ರೈಲು ಯೋಜನೆಗಳು, ಹಲವಾರು ಜಲವಿದ್ಯುತ್ ಮತ್ತು ಅಣೆಕಟ್ಟು ಯೋಜನೆಗಳ ಅಪಾರ ಒತ್ತಡದಿಂದಾಗಿ ಅವಘಡದ ಭೀತಿ ತಲೆದೋರಿದೆ. ಕಳೆದ ಒಂದು ಶತಮಾನದಲ್ಲಿ ಡಾರ್ಜಿಲಿಂಗ್​ನ ಜನಸಂಖ್ಯೆ ಆರು ಪಟ್ಟು ಹೆಚ್ಚಾಗಿದ್ದು ಒಂದು ಲಕ್ಷ ದಾಟಿದೆ. ಇದರಿಂದಾಗಿ ಬೃಹತ್ ಕಟ್ಟಡಗಳು ತಲೆಎತ್ತಿ, ಸಾಕಷ್ಟು ಅರಣ್ಯನಾಶ, ಭೂಕುಸಿತಗಳಾತಗಿವೆ. ಸಿವೋಕ್-ರಂಗಪೋ ರೈಲು ಮಾರ್ಗ ನಿರ್ವಣಕ್ಕಾಗಿ ಸುರಂಗ ಕೊರೆಯಲಾಗುತ್ತಿದೆ. ಈ ಸಂದರ್ಭದಲ್ಲಿ ಆಗಾಗ್ಗೆ ಭೂಕುಸಿತವಾಗಿ ಕಾರ್ವಿುಕರು ಸಾವನ್ನಪ್ಪಿದ್ದಾರೆ. ಡಾರ್ಜಿಲಿಂಗ್ ಅನ್ನು ಬ್ರಿಟಿಷರು ಸ್ವಾಧೀನಕ್ಕೆ ಪಡೆದುಕೊಂಡ ನಂತರ, ಚಹಾ ತೋಟಗಳ ನಿರ್ವಣಕ್ಕಾಗಿ ಅರಣ್ಯನಾಶ ಮಾಡಿದರು. ನಂತರದಲ್ಲೂ ಅಭಿವೃದ್ಧಿ ಕಾಮಗಾರಿಗಳಾಗಿ ಅರಣ್ಯ ನಾಶವಾಗುತ್ತಿದೆ. ಪರಿಸರ ಪೂರಕ ಸುಸ್ಥಿರ ಅಭಿವೃದ್ಧಿ ಕೈಗೊಳ್ಳದಿದ್ದರೆ ಅವಘಡ ಖಂಡಿತ ಎಂದು ತಜ್ಞರು ಎಚ್ಚರಿಕೆ ನೀಡುತ್ತಾರೆ.
ಅಪಾಯದ ಅಂಚಿನಲ್ಲಿ ಶಿಮ್ಲಾ:ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾ ಕೂಡ ಅಪಾಯದಲ್ಲಿದೆ. ಐತಿಹಾಸಿಕ ಪರ್ವತ ಶ್ರೇಣಿ, ಗ್ರಾ್ಯಂಡ್ ಹೋಟೆಲ್, ಲಕ್ಕರ್ ಬಜಾರ್, ಲಡಾಖಿ ಸೇರಿದಂತೆ ಹಳೆಯ ಶಿಮ್ಲಾದ ಶೇ. 25ಕ್ಕಿಂತ ಹೆಚ್ಚಿನ ಪ್ರಮುಖ ಭಾಗಗಳು ಮುಳುಗಡೆ ವಲಯದಲ್ಲಿವೆ ಎನ್ನಲಾಗಿದೆ. ಅನಿಯಂತ್ರಿತ ನಿರ್ವಣ, ಅರಣ್ಯನಾಶ ಮತ್ತು ಇಳಿಜಾರು ಕಡಿತ ಭೂಕುಸಿತಕ್ಕೆ ಕಾರಣ ಎಂದು ತಜ್ಞರು ಹೇಳುತ್ತಾರೆ. 25 ಸಾವಿರ ಜನಸಂಖ್ಯೆಗಾಗಿ ಸ್ಥಾಪಿತವಾದ ಈ ನಗರ ಈಗ 2.3 ಲಕ್ಷ ಜನಸಂಖ್ಯೆ ಹೊಂದಿದೆ. ಶಿಮ್ಲಾ ನಗರವು ಭೂಕಂಪನ ವಲಯದಲ್ಲಿದ್ದರೂ ಮನೆ ನಿರ್ವಿುಸಿಕೊಳ್ಳಲು 70 ಡಿಗ್ರಿಗಳಷ್ಟು ಇಳಿಜಾರು ಪ್ರದೇಶಗಳಲ್ಲಿ ಕೂಡ ಅನುಮತಿಸಲಾಗಿದೆ. 2000ರ ದಶಕದ ಆರಂಭದಲ್ಲಿ ವಿಶಾಲವಾದ ಪರ್ವತಶ್ರೇಣಿಗಳಲ್ಲಿ ದೊಡ್ಡ ಬಿರುಕುಗಳು ಕಾಣಿಸಿಕೊಂಡು ಮೊದಲ ಎಚ್ಚರಿಕೆಯನ್ನು ರವಾನಿಸಿದ್ದವು. ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು 2017ರಲ್ಲಿ ಶಿಮ್ಲಾದ ಪ್ರಮುಖ ಮತ್ತು ಹಸಿರು ಪ್ರದೇಶಗಳಲ್ಲಿ ಎಲ್ಲಾ ನಿರ್ವಣಗಳನ್ನು ನಿಷೇಧಿಸಲು ಸೂಚಿಸಿದ್ದರೂ ರಾಜ್ಯ ಸರ್ಕಾರ ಇದನ್ನು ಕಡೆಗಣಿಸಿದೆ. ಶಿಮ್ಲಾವು ದುರ್ಬಲ ಮೊಣಕಾಲುಗಳನ್ನು ಹೊಂದಿರುವ ಅಧಿಕ ತೂಕದ ವ್ಯಕ್ತಿಯಂತಾಗಿದೆ. ಅಧಿಕ ಜನಸಂಖ್ಯೆ, ಭೂಕುಸಿತ ಮತ್ತು ಭೂಕಂಪ ಸಂಭವ ಪ್ರದೇಶದ ಕಾರಣದಿಂದಾಗಿ, ಸಣ್ಣ ಅವಘಡ ಉಂಟಾದರೂ ಇಡೀ ನಗರ ಕುಸಿದುಬೀಳಬಹುದಾಗಿದೆ.
ಚಮೊಲಿಯಲ್ಲಿ ಯೋಜನೆ ಭರಾಟೆ:ಉತ್ತರಾಖಂಡದ ಗರ್ವಾಲ್ ಜಿಲ್ಲೆಯಲ್ಲಿ 3,000 ಚದರ ಕಿ.ಮೀ. ಹರಡಿರುವ ಚಮೊಲಿಯು ಸಿಖ್ ದೇವಾಲಯಗಳಲ್ಲಿ ಒಂದಾದ ಹೇಮಕುಂಡ್ ಹಾಗೂ ಚಾರ್​ಧಾಮ್ ಯಾತ್ರಾ ತಾಣವಾದ ಬದರಿನಾಥಕ್ಕೆ ನೆಲೆಯಾಗಿದೆ. ಭೂಕುಸಿತ ಪ್ರದೇಶ ಮತ್ತು ಭೂಕಂಪನ ಸಂಭವ ಪ್ರದೇಶವಾಗಿದೆ. ಜೋಶಿಮಠ ಕೂಡ ಇದೇ ಜಿಲ್ಲೆ ವ್ಯಾಪ್ತಿಗೆ ಬರುತ್ತದೆ. ಈ ಪ್ರದೇಶದಲ್ಲಿ 1999ರಲ್ಲಿ ವಿನಾಶಕಾರಿ ಭೂಕಂಪ ಸಂಭವಿಸಿ 100ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ. ಮುಂದೆ ದೊಡ್ಡ ಭೂಕಂಪ ಸಂಭವಿಸಲಿದೆ ಎಂದು ತಜ್ಞರು ಎಚ್ಚರಿಸಿದ್ದರೂ ಮೂಲಸೌಕರ್ಯ ಯೋಜನೆಗಳ ಭರಾಟೆ ಮುಂದುವರಿದಿದೆ.
2 ಅಡಿಗೂ ಅಧಿಕ ಕುಸಿತ:ಜೋಶಿಮಠದ ಕೆಲವು ಭಾಗಗಳು ಅಂದಾಜು 2.2 ಅಡಿ (70 ಸೆಂ.ಮೀ.) ಮುಳುಗಿರಬಹುದು ಎಂದು ಮೂಲಗಳು ತಿಳಿಸಿವೆ. ಭೂಕುಸಿತ ಪೀಡಿತ ಪ್ರದೇಶಗಳ ವಾಸ್ತವ ಸ್ಥಿತಿಗತಿ ಅಧ್ಯಯನ ಆಧಾರದ ಮೇಲೆ ಈ ಅಂದಾಜನ್ನು ಮಾಡಲಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆಯು (ಇಸ್ರೋ) ಉಪಗ್ರಹ ದತ್ತಾಂಶ ಸಮೀಕ್ಷೆಯನ್ನು ಅನುಸರಿಸಿ 5.4 ಸೆಂ.ಮೀ. ಕುಸಿತವಾಗಿದೆ ಎಂದು ತಿಳಿಸಿತ್ತು.
ಸುಪ್ರೀಂನಲ್ಲಿ ಇಂದು ವಿಚಾರಣೆ:ಜೋಶಿಮಠದಲ್ಲಿನ ಬಿಕ್ಕಟ್ಟನ್ನು ರಾಷ್ಟ್ರೀಯ ವಿಪತ್ತು ಎಂದು ಘೊಷಿಸಲು ನ್ಯಾಯಾಲಯದ ಮಧ್ಯಪ್ರವೇಶವನ್ನು ಕೋರಿ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ನಡೆಸಲಿದೆ. ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ, ಜೆ.ಬಿ. ಪರ್ದಿವಾಲಾ ಅವರು ಈ ನ್ಯಾಯಪೀಠದಲ್ಲಿದ್ದಾರೆ.
‘ಹೆಂಡ್ತಿಯನ್ನು ಚೆನ್ನಾಗಿ ನೋಡಿಕೊ’ ಎಂದ ಸಂಬಂಧಿಕರಿಬ್ಬರಿಗೂ ಇರಿದ; ಒಬ್ಬನ ಸಾವು, ಇನ್ನೊಬ್ಬನ ಪರಿಸ್ಥಿತಿ ಗಂಭೀರ

ಯುವಕನನ್ನು ಕೊಂದು 8 ತುಂಡಾಗಿಸಿ, ಹತ್ಯೆಯ ವಿಡಿಯೋ ಪಾಕಿಸ್ತಾನಕ್ಕೆ ಕಳಿಸಿದ್ರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 2 =
Remember me
