ನವದೆಹಲಿ:ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧನ್ಕರ್ ಅವರನ್ನು ಉಪರಾಷ್ಟ್ರಪತಿ ಚುನಾವಣೆಗೆ ಎನ್​ಡಿಎ ಅಭ್ಯರ್ಥಿಯನ್ನಾಗಿ ಬಿಜೆಪಿ ಸಂಸದೀಯ ಮಂಡಳಿ ಶನಿವಾರ ಸಂಜೆ ಆಯ್ಕೆ ಮಾಡಿದೆ. ರಾಷ್ಟ್ರಪತಿ ಚುನಾವಣೆಗೆ ಜಾರ್ಖಂಡ್​ನ ಮಾಜಿ ರಾಜ್ಯಪಾಲೆ, ಬುಡಕಟ್ಟು ಸಮುದಾಯದ ನಾಯಕಿ ದ್ರೌಪದಿ ಮುಮು ಅವರನ್ನು ಅಭ್ಯರ್ಥಿಯನ್ನಾಗಿಸಿ ಅಚ್ಚರಿ ಮೂಡಿಸಿದಂತೆ ಧನ್ಕರ್ ಆಯ್ಕೆಯೂ ಅನಿರೀಕ್ಷಿತವಾಗಿದೆ. ಧನ್ಕರ್ ಆರಿಸಿಬರುವುದು ಬಹುತೇಕ ನಿಶ್ಚಿತವಾಗಿದೆ. ಧನ್ಕರ್ ಹೆಸರು ಅಂತಿಮ ಗೊಳಿಸುವುದಕ್ಕೂ ಮೊದಲು ಎನ್​ಡಿಎ ಮೈತ್ರಿಕೂಟದ ಪ್ರಮುಖ ಪಕ್ಷವಾದ ಜೆಡಿಯು ಮತ್ತು ಇತರ ಪಕ್ಷಗಳ ಜತೆ ಬಿಜೆಪಿ ಹಿರಿಯ ನಾಯಕರು ಚರ್ಚೆ ನಡೆಸಿದರು ಎಂದು ಮೂಲಗಳು ಹೇಳಿವೆ.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅಮಿತ್ ಷಾ, ರಾಜನಾಥ ಸಿಂಗ್, ನಿತಿನ್ ಗಡ್ಕರಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಇತರರನ್ನು ಒಳಗೊಂಡ ಸಂಸದೀಯ ಮಂಡಳಿ ಬಿಜೆಪಿ ಅತ್ಯುನ್ನತ ನೀತಿ ನಿರ್ಧಾರಕ ಘಟಕವಾಗಿದೆ. ಶನಿವಾರ ಬೆಳಗ್ಗೆ ಧನ್ಕರ್ ಅವರು ಪ್ರಧಾನಿ ಮೋದಿಯವರನ್ನು ಭೇಟಿಯಾಗಿದ್ದರು.
ಚುನಾವಣಾ ಪ್ರಕ್ರಿಯೆ:ಹಾಲಿ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅಧಿಕಾರಾವಧಿ ಆಗಸ್ಟ್ 10ಕ್ಕೆ ಮುಗಿಯಲಿದ್ದು, 16ನೇ ಉಪರಾಷ್ಟ್ರಪತಿ ಆಯ್ಕೆಗೆ ಆ. 6ರಂದು ಚುನಾವಣೆ ನಿಗದಿಯಾಗಿದೆ. ಜುಲೈ 19 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಮರುದಿನ ಪರಿಶೀಲನೆ ಕಾರ್ಯ ನಡೆಯಲಿದೆ. ಜುಲೈ 22 ನಾಮಪತ್ರ ಹಿಂಪಡೆಯಲು ಕಡೆಯ ದಿನ. ಅಗತ್ಯ ಬಿದ್ದರೆ ಆ.6ಕ್ಕೆ ಮತದಾನ ನಡೆಯಲಿದ್ದು, ಅಂದು ಸಂಜೆಯೇ ಎಣಿಕೆ ನಡೆಯಲಿದೆ.
ಉಪರಾಷ್ಟ್ರಪತಿ ಚುನಾವಣೆಗೆ ಉಮೇದುವಾರಿಕೆ ಮಾಡುವವರಿಗೆ 35 ವರ್ಷ ತುಂಬಿರಬೇಕು ಮತ್ತು ರಾಜ್ಯಸಭಾ ಸದಸ್ಯರಾಗಲು ಇರಬೇಕಾದ ಎಲ್ಲ ಅರ್ಹತೆಗಳು ಅವಶ್ಯಕ. ನಾಮಪತ್ರಕ್ಕೆ ತಲಾ 20 ಸಂಸದರು ಸೂಚಕರು ಮತ್ತು ಅನುಮೋದಕರಾಗಿರಬೇಕು. 15 ಸಾವಿರ ರೂಪಾಯಿ ಠೇವಣಿ ಇರಿಸಬೇಕು. ಉಪರಾಷ್ಟ್ರಪತಿ ಪದನಿಮಿತ್ತವಾಗಿ ರಾಜ್ಯಸಭೆಯ ಸಭಾಪತಿಯೂ ಆಗಿರುತ್ತಾರೆ.
ಬಲಾಬಲ:ಲೋಕಸಭೆ ಮತ್ತು ರಾಜ್ಯಸಭೆಗಳ ಎಲ್ಲ ಸದಸ್ಯರು (780) ಮತದಾನದ ಹಕ್ಕು ಹೊಂದಿದ್ದಾರೆ. 390 ಬಹುಮತಕ್ಕೆ ಅಗತ್ಯವಾದ ಸಂಖ್ಯೆಯಾಗಿದ್ದು, ಬಿಜೆಪಿಯೇ 394 ಸಂಸದರನ್ನು ಹೊಂದಿದೆ. ಹೀಗಾಗಿ ಧನ್ಕರ್ ನಿರಾಯಾಸವಾಗಿ ಗೆಲುವು ಸಾಧಿಸಲಿದ್ದಾರೆ.
ದೀದಿ ಜತೆಗೆ ಜಗಳ:ಜಗದೀಪ್ ಧನ್ಕರ್ (71) ರಾಜಸ್ಥಾನ ಮೂಲದವರು. 1951ರ ಮೇ 18ರಂದು ಕಿಥನಾ ಗ್ರಾಮದಲ್ಲಿ ಜನಿಸಿದ ಧನ್ಕರ್ ಚಿತ್ತೋರಗಢದ ಸೈನಿಕ ಶಾಲೆಯಲ್ಲಿ ಆರಂಭಿಕ ಶಿಕ್ಷಣ ಪೂರೈಸಿ, ಜೈಪುರದ ರಾಜಸ್ಥಾನ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿದ್ದಾರೆ. ವಕೀಲಿ ವೃತ್ತಿ ಮಾಡುತ್ತಿದ್ದ ಅವರು, ರಾಜಸ್ಥಾನ ಹೈಕೋರ್ಟ್ ಬಾರ್ ಅಸೋಸಿಯೇಷನ್​ನ ಅಧ್ಯಕ್ಷರೂ ಆಗಿದ್ದರು. ಜನತಾ ದಳದ ಮೂಲಕ ರಾಜಕೀಯ ಪ್ರವೇಶ ಪಡೆದ ಧನ್ಕರ್, ಝುುಂಝುುನು ಕ್ಷೇತ್ರದಿಂದ 9ನೇ ಲೋಕಸಭೆಗೆ (1989-91) ಆಯ್ಕೆ ಆಗಿದ್ದರು. 1993-98ರ ಅವಧಿಯಲ್ಲಿ ರಾಜಸ್ಥಾನದ 10ನೇ ವಿಧಾನಸಭೆಗೆ ಕಿಷನ್​ಗಢದಿಂದ ಚುನಾಯಿತರಾಗಿದ್ದರು. ನಂತರದಲ್ಲಿ ಬಿಜೆಪಿ ಜತೆ ಗುರುತಿಸಿಕೊಂಡ ಅವರನ್ನು 2019ರ ಜುಲೈ 30ರಂದು ಪಶ್ಚಿಮ ಬಂಗಾಳದ ರಾಜ್ಯಪಾಲರನ್ನಾಗಿ ನೇಮಿಸಲಾಯಿತು. ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ರಾಜ್ಯಪಾಲ ಧನ್ಕರ್ ನಡುವೆ ಆರಂಭದಿಂದಲೂ ಜಟಾಪಟಿ ಇದೆ. ರಾಜ್ಯಪಾಲರ ಅಧಿಕಾರ ವ್ಯಾಪ್ತಿಯನ್ನು ಮಮತಾ ಬಹಿರಂಗವಾಗಿಯೇ ಪ್ರಶ್ನಿಸಿದ್ದಾರೆ. ರಾಜ್ಯಪಾಲರು ಪದನಿಮಿತ್ತವಾಗಿ ರಾಜ್ಯದ ಎಲ್ಲ ವಿವಿಗಳ ಕುಲಾಧಿಪತಿಗಳೂ ಆಗಿರುತ್ತಾರೆ. ಆದರೆ, ಇತ್ತೀಚೆಗೆ ಈ ಅಧಿಕಾರವನ್ನು ಕಿತ್ತುಕೊಂಡು, ಮುಖ್ಯಮಂತ್ರಿಯೇ ಎಲ್ಲ ವಿವಿಗಳ ಕುಲಾಧಿಪತಿ ಎಂಬ ತಿದ್ದುಪಡಿ ಮಸೂದೆಗೆ ಟಿಎಂಸಿ ಸರ್ಕಾರ ವಿಧಾನಸಭೆಯಲ್ಲಿ ಅನುಮೋದನೆ ಪಡೆದಿದೆ.
ವಿಪಕ್ಷಗಳ ಅಭ್ಯರ್ಥಿ ಯಾರು?:ವಿರೋಧ ಪಕ್ಷಗಳು ಉಪರಾಷ್ಟ್ರಪತಿ ಚುನಾವಣೆಗೆ ಜಂಟಿ ಅಭ್ಯರ್ಥಿಯನ್ನು ಸ್ಪರ್ಧೆಗಿಳಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದು, ಹೆಸರು ಅಂತಿಮವಾಗಬೇಕಿದೆ.
ಉಪರಾಷ್ಟ್ರಪತಿ ಚುನಾವಣೆಗೆ ಎನ್​ಡಿಎ ಅಭ್ಯರ್ಥಿಯಾಗಿರುವ ‘ರೈತ ಪುತ್ರ’ ಜಗದೀಪ್ ಧನ್ಕರ್​ಗೆ ಅಭಿನಂದನೆ. ವಕೀಲರಾಗಿದ್ದ ಅವರು, ಜನಪ್ರತಿನಿಧಿಯಾಗಿ, ರಾಜ್ಯಪಾಲರಾಗಿ ಸಂಸದೀಯ ವ್ಯವಹಾರಗಳಲ್ಲಿ ಪಳಗಿದವರು. ವಿನಮ್ರ ಸ್ವಭಾವದ ಅವರು, ರೈತರು, ಮಹಿಳೆಯರು, ಅವಕಾಶ ವಂಚಿತರು, ಯುವ ಸಮುದಾಯದ ಏಳ್ಗೆಗೆ ಶ್ರಮಿಸಿದವರು. ಅವರು ರಾಜ್ಯಸಭೆಗೆ ಉತ್ತಮ ರೀತಿಯಲ್ಲಿ ಮಾರ್ಗದರ್ಶನ ನೀಡುತ್ತಾರೆ ಮತ್ತು ಅವರ ಅಧಿಕಾರಾವಧಿಯಲ್ಲಿ ರಾಷ್ಟ್ರದ ಪ್ರಗತಿಗೆ ಪೂರಕವಾದ ಕಾರ್ಯಗಳು ಮೇಲ್ಮನೆಯಲ್ಲಿ ನಡೆಯಲಿದೆ ಎಂಬ ವಿಶ್ವಾಸ ಇದೆ.
|ನರೇಂದ್ರ ಮೋದಿಪ್ರಧಾನಿ
ಇಷ್ಟಪಟ್ಟು ಪುರುಷನ ಜತೆಗಿದ್ದು, ಸಂಬಂಧ ಕೆಟ್ಟಾಗ ರೇಪ್​ ಆಯ್ತು ಅನ್ನೋ ಹಾಗಿಲ್ಲ: ಸುಪ್ರೀಂ ಕೋರ್ಟ್​
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 11 =
Remember me
