ನವದೆಹಲಿ:ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಆಮೂಲಾಗ್ರ ಪರಿವರ್ತನೆ ತರುವತ್ತ ಮಹತ್ವದ ಹೆಜ್ಜೆ ಇರಿಸಿರುವ ಕೇಂದ್ರ ಸರ್ಕಾರ 34 ವರ್ಷಗಳ ಹಿಂದಿನ ಶಿಕ್ಷಣ ನೀತಿಯ ಬದಲಾವಣೆಗೆ ಮುನ್ನುಡಿ ಬರೆದಿದೆ. ಬುಧವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟ ಸಭೆ ಬಹುನಿರೀಕ್ಷಿತ ಹೊಸ ಶಿಕ್ಷಣ ನೀತಿ-2020ಕ್ಕೆ ಅನುಮೋದನೆ ನೀಡಿದೆ. 5ನೇ ತರಗತಿವರೆಗೆ ಪ್ರಾದೇಶಿಕ ಅಥವಾ ಮಾತೃಭಾಷೆಯಲ್ಲಿ ಶಿಕ್ಷಣ ನೀಡಿಕೆ ಕಡ್ಡಾಯ, ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಏಕರೂಪದ ನಿಯಂತ್ರಕ ವ್ಯವಸ್ಥೆ ಜಾರಿ ಮುಂತಾದವು ಹೊಸನೀತಿಯಲ್ಲಿವೆ.
ವಿದ್ಯಾರ್ಥಿಗಳಿಗೆ ಗುಣಮಟ್ಟ, ಕೈಗೆಟುಕುವಿಕೆ ಹಾಗೂ ಉತ್ತರದಾಯಿತ್ವವನ್ನೊಳಗೊಂಡ ಶಿಕ್ಷಣ ಒದಗಿಸಬಲ್ಲ ಸುಭದ್ರ ಅಡಿಪಾಯದ ಶಿಕ್ಷಣ ನೀತಿ ಇದಾಗಿದ್ದು, 2030ರ ಸುಸ್ಥಿರ ಅಭಿವೃದ್ಧಿ ಕಾರ್ಯಸೂಚಿ ಮತ್ತು 21ನೇ ಶತಮಾನದ ಅಗತ್ಯಗಳಿಗೆ ಪೂರಕವಾದ ಹಾಗೂ ಪ್ರತಿ ವಿದ್ಯಾರ್ಥಿಯ ವಿಶಿಷ್ಟ ಸಾಮರ್ಥ್ಯವನ್ನು ಹೊರತರಬಲ್ಲ ಗುರಿ ಹೊಂದಿದೆಯೆಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಮಾಹಿತಿ ಹಂಚಿಕೊಂಡಿದ್ದಾರೆ.
ಪದವಿ ಕೋರ್ಸ್​ಗಳಿಗೆ ಬಹು ಪ್ರವೇಶ/ನಿರ್ಗಮನದ ಆಯ್ಕೆಗಳು, ಎಂ.ಫಿಲ್. ಪದವಿ ರದ್ದು, ವಿಶ್ವವಿದ್ಯಾಲಯಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆಗಳು… ಹೀಗೆ ಹತ್ತು ಹಲವು ಹೊಸ ಅಂಶಗಳು ಹೊಸ ಶಿಕ್ಷಣ ನೀತಿಯಲ್ಲಿದೆ.
ಈ ಕಾಲಘಟ್ಟಕ್ಕೆ ಅನುಕೂಲವೆನಿಸುವ ಶಿಕ್ಷಣ ಮಾದರಿಯನ್ನು ಜಾರಿಗೊಳಿಸಲು ಮೋದಿ ಸರ್ಕಾರ ಮುಂದಾಗಿದೆ. ವಿಸõತ ಚರ್ಚೆ, ಸಂವಾದ, ಸಮಾಲೋಚನೆ ಹಾಗೂ ಚಿಂತನ-ಮಂಥನ ಬಳಿಕ ಈ ನೀತಿ ಸಿದ್ಧಪಡಿಸಲಾಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಲವು ಮುಖಂಡರೂ ಈ ನೀತಿ ರಚನೆ ಹಿಂದೆ ಕೆಲಸ ಮಾಡಿದ್ದಾರೆ.
ಎಚ್​ಇಸಿಐ:ಹೊಸ ಶಿಕ್ಷಣ ನೀತಿ ಪ್ರಕಾರ ಇನ್ನುಮುಂದೆ ದೇಶಾದ್ಯಂತ ಉನ್ನತ ಶಿಕ್ಷಣ ಸಂಸ್ಥೆಗಳ ಮೇಲುಸ್ತುವಾರಿಗಾಗಿ ಎಚ್​ಇಸಿಐ (ಭಾರತೀಯ ಉನ್ನತ ಶಿಕ್ಷಣ ಮಂಡಳಿ) ನಿಯಂತ್ರಕ ವ್ಯವಸ್ಥೆ ರಚಿಸಲಾಗಿದೆ. ತನ್ನ ಕಾರ್ಯನಿರ್ವಹಣೆಗಾಗಿ ಈ ಮಂಡಳಿ ವಿವಿಧ ಉಪ ಸಂಸ್ಥೆಗಳನ್ನು ಹೊಂದಲಿದೆ. ಎಚ್​ಇಸಿಐನ ಮೊದಲ ಉಪ ಸಂಸ್ಥೆಯಾಗಿ ರಾಷ್ಟ್ರೀಯ ಉನ್ನತ ಶಿಕ್ಷಣ ನಿಯಂತ್ರಣ ಮಂಡಳಿ ಅಸ್ತಿತ್ವಕ್ಕೆ ಬರಲಿದೆ. ಇದು ಶಿಕ್ಷಕರ ಶಿಕ್ಷಣ ಸೇರಿದಂತೆ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಏಕರೂಪದ ನಿಯಂತ್ರಕವಾಗಿ ಕಾರ್ಯನಿರ್ವಹಿಸಲಿದೆ. ವೈದ್ಯಕೀಯ ಮತ್ತು ಕಾನೂನು ಶಿಕ್ಷಣ ಮಾತ್ರ ಈ ಮಂಡಳಿ ವ್ಯಾಪ್ತಿಯಿಂದ ಹೊರಗಿರಲಿದೆ.
ರಾಷ್ಟ್ರೀಯ ಮಾನ್ಯತಾ ಮಂಡಳಿ (ಎನ್​ಎಸಿ) ಎಚ್​ಇಸಿಐನ ಎರಡನೇ ಉಪ ಸಂಸ್ಥೆಯಾಗಿರಲಿದ್ದು, ಶಿಕ್ಷಣ ಸಂಸ್ಥೆಗಳಿಗೆ ಮಾನ್ಯತೆ ನೀಡುವ ಬಹುಮುಖ್ಯ ಅಧಿಕಾರವನ್ನು ಇದು ಹೊಂದಿರಲಿದೆ. ಮೂಲಭೂತ ಸೌಕರ್ಯ, ಶೈಕ್ಷಣಿಕ ಆಡಳಿತ ವ್ಯವಸ್ಥೆ, ಫಲಿತಾಂಶಗಳ ಆಧಾರದಲ್ಲಿ ಸಂಸ್ಥೆಗಳಿಗೆ ಇದು ಮಾನ್ಯತೆ ನೀಡಲಿದೆ.
ಎಚ್​ಇಸಿಐನ ಮೂರನೇ ಉಪ ಸಂಸ್ಥೆಯಾಗಿ ಉನ್ನತ ಶಿಕ್ಷಣ ಧನಸಹಾಯ ಮಂಡಳಿ ಕೆಲಸ ಮಾಡಲಿದೆ. ಇದು ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಿಗೆ ಹಣಕಾಸು ನೆರವನ್ನು ಒದಗಿಸಲಿದೆ. ನಾಲ್ಕನೇ ಅಂಗಸಂಸ್ಥೆಯಾಗಿ ಸಾಮಾನ್ಯ ಶಿಕ್ಷಣ ಮಂಡಳಿ (ಜಿಇಸಿ) ಇರಲಿದ್ದು, ಉನ್ನತ ಶಿಕ್ಷಣ ಯೋಜನೆಗಳಿಗೆ ಸಂಬಂಧಿಸಿದಂತೆ ಇದು ಕಲಿಕಾ ವಿಷಯಗಳನ್ನು ರೂಪಿಸಲಿದೆ. ಹಾಗೇ, ಈ ಮಂಡಳಿ ಅಡಿಯಲ್ಲಿ ನ್ಯಾಷನಲ್ ಹೈಯರ್ ಎಜುಕೇಷನ್ ಕ್ವಾಲಿಫಿಕೇಷನ್ ಫ್ರೇಮ್ರ್ಕ್ (ಎನ್​ಎಚ್​ಇಕ್ಯುಎಫ್) ಸ್ಥಾಪಿಸುವ ಉದ್ದೇಶ ಹೊಂದಿದೆ.
ಪ್ರಸ್ತುತ, ಉನ್ನತ ಶಿಕ್ಷಣ ಸಂಸ್ಥೆಗಳ ನಿಯಂತ್ರಣ ಅಧಿಕಾರ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ), ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಮತ್ತು ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ (ಎನ್​ಸಿಟಿಇ) ವ್ಯಾಪ್ತಿಯಲ್ಲಿತ್ತು.
ಡಾ. ಕಸ್ತೂರಿ ರಂಗನ್ ಸಮಿತಿ ವರದಿ:ಮಾಜಿ ಸಂಪುಟ ಕಾಯರ್åದರ್ಶಿ ಟಿ.ಎಸ್.ಆರ್. ಸುಬ್ರಹ್ಮಣಿಯನ್ ಅಧ್ಯಕ್ಷತೆಯಲ್ಲಿ 2016ರ ಮೇ ತಿಂಗಳಲ್ಲಿ ಹೊಸ ಶಿಕ್ಷಣ ನೀತಿ ಸಮಿತಿ ತನ್ನ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಿತ್ತು. ಇದರ ಆಧಾರದ ಮೇಲೆ ಸಚಿವಾಲಯವು ಕೆಲವೊಂದಿಷ್ಟು ಅಂಶಗಳನ್ನು ಸೇರಿಸಿ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಪ್ರತಿ ಸಿದ್ಧಪಡಿಸಿತು. ನಂತರ ಭಾರತೀಯ ಬಾಹ್ಯಾಕಾಶ ಸಂಸ್ಥೆಯ (ಇಸ್ರೋ) ಮಾಜಿ ಅಧ್ಯಕ್ಷ ಕೆ. ಕಸ್ತೂರಿ ರಂಗನ್ ನೇತೃತ್ವದ ಸಮಿತಿ ಹೊಸ ರಾಷ್ಟ್ರೀಯ ನೀತಿಯನ್ನು ಕಳೆದ ವರ್ಷ ಮಾನವ ಸಂಪನ್ಮೂಲ ಸಚಿವ ರಮೇಶ್ ನಿಷಾಂಕ್ ಪೋಖ್ರಿಯಾಲ್ ಅವರಿಗೆ ಸಲ್ಲಿಸಿತ್ತು. ಇದಾಗಿ, ವರದಿ ಬಗ್ಗೆ ಸಾರ್ವಜನಿಕ ಅಭಿಪ್ರಾಯವನ್ನೂ ಕೇಳಲಾಯಿತು ಮತ್ತು 2 ಲಕ್ಷಕ್ಕೂ ಹೆಚ್ಚು ಸಲಹೆಗಳು ಸಚಿವಾಲಯಕ್ಕೆ ಬಂದಿದ್ದವು.
ಹೊಸ ಶಿಕ್ಷಣ ನೀತಿಯನ್ನು ಹೃತ್ಪೂರ್ವಕವಾಗಿ ಸ್ವಾಗತಿಸುವೆ. ಭಾರತದ ಶಿಕ್ಷಣ ವಲಯದ ಸುಧಾರಣೆ ಬಹುದಿನಗಳಿಂದ ಬಾಕಿ ಉಳಿದಿತ್ತು. ಹೊಸ ನೀತಿ ಭಾರತವನ್ನು ಜ್ಞಾನಕೇಂದ್ರವಾಗಿ ರೂಪಾಂತರ ಮಾಡಲಿದೆ.
ನರೇಂದ್ರ ಮೋದಿ ಪ್ರಧಾನಿ
ಇದು ಕೇವಲ ಪಠ್ಯದ ಬದಲಾವಣೆ ಅಲ್ಲ. ಪ್ರಿ ಸ್ಕೂಲ್​ನಿಂದ ಸಂಶೋಧನೆ, ಪಿಎಚ್​ಡಿವರೆಗೆ ವಿವಿಧ ಹಂತಗಳಲ್ಲಿ ದೇಶದಲ್ಲಿ ಶಿಕ್ಷಣ ನೀಡುವ ಸಂಪೂರ್ಣ ವ್ಯವಸ್ಥೆಯೇ ಬದಲಾವಣೆ ಆಗುತ್ತದೆ. ಇದರ ಫಲಸ್ವರೂಪದಲ್ಲಿ ವಿಶ್ವದಲ್ಲೇ ಅತ್ಯುತ್ತಮ ಎನ್ನಬಹುದಾದ ಶಿಕ್ಷಣ ವ್ಯವಸ್ಥೆಯನ್ನು ನಾವು ಹೊಂದುತ್ತೇವೆ.
ಡಾ.ಕಸ್ತೂರಿ ರಂಗನ್ ನೀತಿ ರಚನೆ ಸಮಿತಿ ಅಧ್ಯಕ್ಷ
ಇದೊಂದು ಅತ್ಯಂತ ಪ್ರಗತಿಪರವಾದ ಶಿಕ್ಷಣ ನೀತಿ. ಇದರ ಜಾರಿಯಿಂದ ದೇಶದ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆಯಾಗುವುದರಲ್ಲಿ ಸಂಶಯವಿಲ್ಲ. ತುಳಿತಕ್ಕೆ ಒಳಗಾದವರು, ಮಹಿಳೆಯರು, ತೃತೀಯ ಲಿಂಗಿಗಳು, ಪರಿಶಿಷ್ಟರಿಗೆ ಹೊಸತನದ ಶಿಕ್ಷಣ ನೀಡಬೇಕೆಂಬ ಆಶಯವನ್ನುಒಳಗೊಂಡಿದೆ. ಗುಡ್ಡಗಾಡು ಜನರಿಗೆ ಅಲ್ಲಲ್ಲಿಯೇ ಸುಸಜ್ಜಿತ ಶಾಲೆ, ವಿಜ್ಞಾನ ಪ್ರಯೋಗಾಲಯ, ಇಂಗ್ಲಿಷ್ ಬೋಧನೆಯ ತರಗತಿಗಳನ್ನು ಮಾಡುವ ಅಂಶಗಳು ಇದರಲ್ಲಿ ಸೇರಿವೆ.
-ಪ್ರೊ. ತೇಜಸ್ವಿ ಕಟ್ಟೀಮನಿ, ಸದಸ್ಯರು, ರಾಷ್ಟ್ರೀಯ ಶಿಕ್ಷಣ ನೀತಿ ಕರಡು ಸಮಿತಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × three =
Remember me
