ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ (ಕುನೋ ನ್ಯಾಷನಲ್ ಪಾರ್ಕ್- ಕೆಎನ್​ಪಿ) ಈ ವರ್ಷ ಎಂಟು ಚಿರತೆಗಳು ಸಾವನ್ನಪ್ಪಿವೆ. ದೊಡ್ಡ ಬೆಕ್ಕುಗಳ ಚಟುವಟಿಕೆ ಮತ್ತು ಆರೋಗ್ಯದ ಮೇಲೆ ನಿಗಾ ವಹಿಸುವುದಕ್ಕಾಗಿ ಬಳಸುವ ಉಪಗ್ರಹ ಕಾಲರ್​ಗಳಿಂದಾಗಿ (ಸ್ಯಾಟ್​ಲೈಟ್ ಕಾಲರ್) ಇವುಗಳು ರೋಗಕ್ಕೆ ತುತ್ತಾಗಿವೆ ಎಂದು ತಜ್ಞರು ಭಾವಿಸಿದ್ದಾರೆ. ಚೀತಾಗಳ ಸಂಚಾರ, ಚಟುವಟಿಕೆಗಳು ಮತ್ತು ಆರೋಗ್ಯ ಸ್ಥಿತಿಯನ್ನು ನಿಕಟವಾಗಿ ಟ್ರಾ್ಯಕ್ ಮಾಡುವ ಉದ್ದೇಶಕ್ಕಾಗಿ ಇವುಗಳ ಕುತ್ತಿಗೆಗೆ ಸ್ಯಾಟಲೈಟ್ ಕಾಲರ್ ಐಡಿಗಳನ್ನು ಕೆಎನ್​ಪಿ ಅಧಿಕಾರಿಗಳು ಅಳವಡಿಸಿದ್ದಾರೆ.
ಮಧ್ಯಪ್ರದೇಶದ ವನ್ಯಜೀವಿ ಅಧಿಕಾರಿಗಳು ಸೂರಜ್ ಎಂಬ ಹೆಸರಿನ ಚೀತಾವನ್ನು ಜುಲೈ 14ರಂದು ಬೆಳಗ್ಗೆ 6.30 ರ ಸುಮಾರಿಗೆ ಪಾಲ್ಪುರ್ ಪೂರ್ವ ವಲಯದ ಮಸವಾನಿ ಬೀಟ್​ನಲ್ಲಿ ಜಡ ಸ್ಥಿತಿಯಲ್ಲಿ ಗುರುತಿಸಿದ್ದಾರೆ. ಈ ಪ್ರಾಣಿಯ ಕುತ್ತಿಗೆಯಲ್ಲಿ ನೊಣ ಬಿದ್ದಿರುವುದನ್ನು ತಂಡ ಗಮನಿಸಿದೆ. ಆದರೆ, ಈ ತಂಡ ಸಮೀಪ ತೆರಳಲು ಪ್ರಯತ್ನಿಸಿದಾಗ ಚಿರತೆ ಓಡಿಹೋಗಿದೆ. ಆಗ ನಿಗಾ ತಂಡವು ಚೀತಾ ಸ್ಥಿತಿಯ ಬಗ್ಗೆ ತಕ್ಷಣವೇ ವೈರ್​ಲೆಸ್ ಮೂಲಕ ಪಾಲ್ಪುರ ನಿಯಂತ್ರಣ ಕೊಠಡಿಗೆ ಮಾಹಿತಿ ರವಾನಿಸಿದೆ. ವನ್ಯಜೀವಿ ವೈದ್ಯಕೀಯ ತಂಡ ಮತ್ತು ಪ್ರಾದೇಶಿಕ ಅಧಿಕಾರಿಗಳು ಬೆಳಗ್ಗೆ 9 ಗಂಟೆಗೆ ಸ್ಥಳಕ್ಕೆ ದೌಡಾಯಿಸಿದ್ದಾರೆ. ತದನಂತರ ಚೀತಾಔನ್ನು ಪತ್ತೆ ಹಚ್ಚಿದಾಗ ಅದು ಮೃತಪಟ್ಟಿರುವುದು ಕಂಡುಬಂದಿದೆ. ಈ ಮೂಲಕ ಕೆಎನ್​ಪಿಯಲ್ಲಿ ಇತ್ತೀಚಿನ ದಿನಗಳಲ್ಲಿ ಸಾವನ್ನಪ್ಪಿದ ಚೀತಾಗಳ ಸಂಖ್ಯೆ 8ಕ್ಕೆ ಏರಿದೆ.
ಪ್ರಾಥಮಿಕ ತನಿಖೆಯ ಪ್ರಕಾರ ಚೀತಾ ಸಾವಿಗೆ ಕುತ್ತಿಗೆ ಮತ್ತು ಬೆನ್ನಿನ ಗಾಯಗಳು ಕಾರಣ ಎಂದು ತಿಳಿದುಬಂದಿದೆ. ಮರಣೋತ್ತರ ಪರೀಕ್ಷೆಯ ನಂತರ ವನ್ಯಜೀವಿ ವೈದ್ಯರ ತಂಡವು ಸಾವಿನ ಕಾರಣದ ಬಗ್ಗೆ ವಿವರವಾದ ವರದಿ ಸಿದ್ಧಪಡಿಸಲಿದೆ. ಈ ವರದಿ ಆಧಾರದ ಮೇಲೆ ಸಾವಿಗೆ ಕಾರಣ ಸ್ಪಷ್ಟವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೂರಜ್ ಎಂಬ ಹೆಸರಿನ ಈ ಚೀತಾವನ್ನು ದಕ್ಷಿಣ ಆಫ್ರಿಕಾದಿಂದ ಕೆಎನ್​ಪಿಗೆ ಈ ವರ್ಷದ ಫೆಬ್ರವರಿಯಲ್ಲಿ ಸ್ಥಳಾಂತರಿಸಲಾಗಿತ್ತು. ಕಳೆದ ಮಾರ್ಚ್​ನಿಂದ ಈ ಉದ್ಯಾನವನದಲ್ಲಿ ಎಂಟು ಚೀತಾಗಳು ಸಾವನ್ನಪ್ಪಿವೆ. ನಮೀಬಿಯಾದ ಚೀತಾ ಜ್ವಾಲಾಗೆ ಜನಿಸಿದ ಮೂರು ಮರಿಗಳು ಕೂಡ ಇದರಲ್ಲಿ ಸೇರಿವೆ. ಕತ್ತು ಮತ್ತು ಬೆನ್ನಿನ ಭಾಗಕ್ಕೆ ಗಾಯಗಳಾಗಿದ್ದ ತೇಜಸ್ ಎಂಬ ಗಂಡು ಚೀತಾವನ್ನು ಪತ್ತೆ ಹಚ್ಚಿದ ಕೆಲವೇ ದಿನಗಳಲ್ಲಿ ಸೂರಜ್ ಸಾವನ್ನಪ್ಪಿದ್ದಾನೆ.
ಚೀತಾಗಳ ಕುತ್ತಿಗೆಯ ಕೊರಳಪಟ್ಟಿಗಳ ಸಮಸ್ಯೆ ಅನಿರೀಕ್ಷಿತ ಎಂದು ಕೆಲ ವನ್ಯಜೀವಿ ತಜ್ಞರು ಭಾವಿಸುತ್ತಾರೆ. ಏಕೆಂದರೆ, ದೇಶದಲ್ಲಿನ ಆರ್ದ್ರ ವಾತಾವರಣವು ಉರಿಯೂತ, ಬ್ಯಾಕ್ಟೀರಿಯಾದ ಸೋಂಕುಗಳು ಮತ್ತು ಸೆಪ್ಟಿಸೆಮಿಯಾವನ್ನು (ರಕ್ತಪ್ರವಾಹದಲ್ಲಿ ಬ್ಯಾಕ್ಟೀರಿಯಾ ಮತ್ತು ಅವುಗಳ ಜೀವಾಣುಗಳ ಹರಡುವಿಕೆಯಿಂದ ಉಂಟಾಗುವ ರೋಗ. ರಕ್ತ ವಿಷ ಎಂದೂ ಕರೆಯುತ್ತಾರೆ) ಉಂಟು ಮಾಡಬಹುದಾಗಿದೆ. ಭಾರತದ ಚಿರತೆಯ ಮೇಲ್ವಿಚಾರಣೆ ಮಾಡುತ್ತಿರುವ ದಕ್ಷಿಣ ಆಫ್ರಿಕಾದ ತಜ್ಞರು ಕೂಡ, ಉಪಗ್ರಹ ಕಾಲರ್ ಐಡಿಗಳು ತಂದ ರೋಗಗಳಿಂದಾಗಿ ಚಿರತೆಗಳು ಸಾವನ್ನಪ್ಪಿವೆ ಎಂದು ನಂಬುತ್ತಾರೆ.
ಚೀತಾ ಯೋಜನೆಯಡಿ ಚಿರತೆಗಳ ಕೊರಳಪಟ್ಟಿಗೆ ಜೋಡಿಸಲಾದ ಉಪಗ್ರಹ ಟ್ರಾನ್ಸ್​ಮೀಟರ್​ಗಳನ್ನು ಬಳಸಿಕೊಂಡು ಅವುಗಳ ಚಲನವಲನ ಟ್ರಾ್ಯಕ್ ಮಾಡಲಾಗುತ್ತದೆ. ಚೀತಾಗಳ ಕುತ್ತಿಗೆಯ ಸುತ್ತ ಇರಿಸಲಾದ ಉಪಗ್ರಹ ಕಾಲರ್ ಐಡಿಗಳ ಸಹಾಯದಿಂದ, ಕೆಎನ್​ಪಿ ಅಧಿಕಾರಿಗಳು ಚೀತಾ ಸಂಚಾರ, ಚಟುವಟಿಕೆಗಳು ಮತ್ತು ಆರೋಗ್ಯ ಸ್ಥಿತಿಯನ್ನು ನಿಕಟವಾಗಿ ಟ್ರಾ್ಯಕ್ ಮಾಡುತ್ತಾರೆ. ಈ ಚಟುವಟಿಕೆಯನ್ನು ಪ್ರಾಣಿ ವಲಸೆ ಟ್ರಾ್ಯಕಿಂಗ್ ಎಂದು ಉಲ್ಲೇಖಿಸಲಾಗಿದೆ. ಈ ಟ್ರಾ್ಯಕಿಂಗ್ ಉಪಕರಣಗಳಲ್ಲಿ ಸೆಲ್​ಫೋನ್​ಗಳ ರೀತಿಯಲ್ಲಿನ ಜಿಪಿಎಸ್ ವ್ಯವಸ್ಥೆ ಇರುತ್ತದೆ. ಜಿಪಿಎಸ್ ಚಿಪ್​ಗಳಿಂದ ರವಾನೆಯಾಗುವ ಎಲೆಕ್ಟ್ರಾನಿಕ್ ಸಿಗ್ನಲ್​ಗಳನ್ನು ಉಪಗ್ರಹಗಳು ಸುಲಭವಾಗಿ ಪತ್ತೆ ಮಾಡುತ್ತವೆ. ಪ್ರಾಣಿಗಳ ಚಲನೆಯ ಪರಿಣಾಮವಾಗಿ ಆಗಬಹುದಾದ ಹಾನಿ ಅಥವಾ ವಿನಾಶವನ್ನು ತಡೆಯಲು ಈ ಕಾಲರ್ ಐಡಿ ರೂಪಿಸಲಾಗಿದೆ. ಪ್ರಾಣಿಗಳ ಸ್ಥಳ ಮತ್ತು ಅದರ ದೈಹಿಕ ಸ್ಥಿತಿಯ ಬಗ್ಗೆ ತಿಳಿದುಕೊಳ್ಳಲು ಕೂಡ ಈ ಉಪಕರಣ ಬಳಸಲಾಗುತ್ತದೆ. ಈ ಉಪಕರಣವು ಆರೋಗ್ಯ ಸಂಬಂಧಿತ ಮಾಹಿತಿಯನ್ನೂ ರವಾನಿಸುತ್ತದೆ. ಇದರ ಮೂಲಕ ಪ್ರಾಣಿಗಳಿಗೆ ಚಿಕಿತ್ಸೆ ನೀಡುವ ಹಾಗೂ ರಕ್ಷಿಸುವ ಕಾರ್ಯವನ್ನು ಕೈಗೊಳ್ಳಲಾಗುತ್ತದೆ.
ಕುನೋದಲ್ಲಿ ಸಾವನ್ನಪ್ಪಿದ ಎರಡು ಚಿರತೆಗಳಲ್ಲಿನ ಗಾಯಗಳು ಮತ್ತೊಂದು ಪ್ರಾಣಿಯಿಂದ ಉಂಟಾಗಿಲ್ಲ. ಆದರೆ, ಕೊರಳಪಟ್ಟಿಗಳನ್ನು ಹಾಕಿದ್ದರಿಂದ ಅನಿರೀಕ್ಷಿತ ಸಮಸ್ಯೆಯಾಗಿದೆ ಎಂದು ದಕ್ಷಿಣ ಆಫ್ರಿಕಾ ಪ್ರಿಟೋರಿಯಾ ವಿಶ್ವವಿದ್ಯಾಲಯದ ಅಸೋಸಿಯೇಟ್ ಪೊ›ಫೆಸರ್ ಟಾರ್ಡಿಫ್ ಹೇಳುತ್ತಾರೆ. ಬಹುಶಃ ತೇವಾಂಶವುಳ್ಳ ವಾತಾವರಣದ ಕಾರಣದಿಂದ ಕುತ್ತಿಗೆಯ ಅಡಿಯಲ್ಲಿ ನೀರು ಸಂಗ್ರಹವಾಗುತ್ತದೆ ಮತ್ತು ಚರ್ಮ ನಿರಂತರವಾಗಿ ತೇವವಾಗಿರುತ್ತದೆ. ಇದು ಚರ್ಮದ ಸೋಂಕನ್ನು ಉಂಟು ಮಾಡುತ್ತದೆ. ನಂತರ ನೊಣಗಳು ಈ ಪ್ರದೇಶಕ್ಕೆ ಬಂದು ಮೊಟ್ಟೆಗಳನ್ನು ಇಡತೊಡಗುತ್ತವೆ. ನೊಣಗಳ ಲಾರ್ವಾಗಳು ಅಥವಾ ಹುಳುಗಳು ಅಂಗಾಂಶವನ್ನು ತಿನ್ನುತ್ತವೆ ಮತ್ತು ಸೋಂಕಿಗೆ ಒಳಗಾಗುವಂತೆ ಗಾಯಗಳನ್ನು ಸೃಷ್ಟಿಸುತ್ತವೆ. ಇಂತಹ ಗಾಯಗಳು ಕುತ್ತಿಗೆಯ ಬಳಿ ಪ್ರಾರಂಭವಾಗುತ್ತವೆ. ಲಾರ್ವಾಗಳು ಚೀತಾ ಬೆನ್ನಿನ ಉದ್ದಕ್ಕೂ ತೆವಳುತ್ತಿದ್ದಂತೆ ಗಾಯಗಳು ಬೆನ್ನಿನ ಇತರ ಭಾಗಗಳಿಗೆ ಹರಡಬಹುದಾಗಿದೆ. ಚೀತಾಗಳು ಲಾರ್ವಾಗಳನ್ನು ಸ್ವಚ್ಛಗೊಳಿಸಲು ಮತ್ತು ನೆಕ್ಕಲು ಸಾಧ್ಯವಾಗದ ಪ್ರದೇಶ ಬೆನ್ನು ಎಂದು ಟಾರ್ಡಿಫ್ ವಿವರಿಸುತ್ತಾರೆ.
ಜಿಪಿಎಸ್ ಕಾಲರ್ ಐಡಿ ಕಾರಣದಿಂದಾಗಿಯೇ ಕೆಎನ್​ಪಿಯಲ್ಲಿ ಮತ್ತೆ ಮೂರು ಚೀತಾಗಳಿಗೆ ಗಾಯಗಳಾಗಿವೆ ಎಂಬ ವರದಿಗಳು ಕೇಳಿಬರತೊಡಗಿವೆ. ಪವನ್ (ಹಿಂದೆ ಓಬನ್ ಎಂದು ಕರೆಯಲಾಗುತ್ತಿತ್ತು) ಎಂಬ ಚೀತಾವೊಂದರ ಕುತ್ತಿಗೆ ಬಳಿ ನೊಣಗಳು ಮೊಟ್ಟೆ ಇಟ್ಟಿರುವುದನ್ನು ವೈದ್ಯರ ತಂಡ ಗುರುತಿಸಿದೆ. ಈ ಚಿರತೆಯನ್ನು ಪ್ರಜ್ಞಾಹೀನಗೊಳಿಸಿದ ನಂತರ ವೈದ್ಯರು ಅದರ ಕುತ್ತಿಗೆಗೆ ಜೋಡಿಸಿದ್ದ ಕಾಲರ್ ಐಡಿಯನ್ನು ತೆಗೆದುಹಾಕಿದ್ದಾರೆ. ವೈದ್ಯರ ಸಮಯೋಚಿತ ಕ್ರಮದಿಂದಾಗಿ ಪವನ್ ಜೀವಾಪಾಯದಿಂದ ಪಾರಾಗಿದೆ ಎಂದು ಹೇಳಲಾಗಿದೆ.
ಭಾರತದಲ್ಲಿ ಚೀತಾಗಳನ್ನು ಅಳಿವಿನಂಚಿನಲ್ಲಿರುವ ಪ್ರಭೇದಗಳು ಎಂದು 1952ರಲ್ಲಿ ಘೋಷಿಸಲಾಗಿದೆ. ಭಾರತದಲ್ಲಿ ಆಫ್ರಿಕಾದ ಚೀತಾಗಳನ್ನು ಪರಿಚಯಿಸುವ ಚೀತಾ ಯೋಜನೆಯನ್ನು 2009ರಲ್ಲಿ ರೂಪಿಸಲಾಯಿತು. ಆಫ್ರಿಕಾ ದೇಶಗಳಿಂದ 20 ಚಿರತೆಗಳನ್ನು ಭಾರತ ಪಡೆದುಕೊಂಡಿದೆ. ನಮೀಬಿಯಾದಿಂದ ಬಂದ ಚೀತಾಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು 2022ರ ಸೆಪ್ಟೆಂಬರ್ 17ರಂದು ತಮ್ಮ ಜನ್ಮ ದಿನದ ಸಂದರ್ಭದಲ್ಲಿ ಕೆಎನ್​ಪಿಯ ಆವರಣಕ್ಕೆ ಬಿಡುಗಡೆ ಮಾಡಿದ್ದರು. ಚೀತಾಗಳ ಕೆಲವು ಚಿತ್ರಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದ್ದರು. ಚೀತಾ ಮರುಪರಿಚಯ ಕಾರ್ಯಕ್ರಮದ ಅಂಗವಾಗಿ ವಿಶೇಷ ವಿಮಾನದಲ್ಲಿ ಎಂಟು ಚಿರತೆಗಳನ್ನು ನಮೀಬಿಯಾದಿಂದ ಗ್ವಾಲಿಯರ್​ಗೆ ತರಲಾಗಿತ್ತು. ತದನಂತರ ಭಾರತೀಯ ವಾಯುಪಡೆಯ ಎರಡು ಹೆಲಿಕಾಪ್ಟರ್​ಗಳಲ್ಲಿ ಶಿಯೋಪುರ ಜಿಲ್ಲೆಯಲ್ಲಿನ ಕೆನ್​ಪಿಗೆ ಸಾಗಿಸಲಾಗಿತ್ತು. ಆದರೆ, ಈಗ ಹೆಚ್ಚುತ್ತಿರುವ ಚೀತಾ ಸಾವಿನ ಪ್ರಮಾಣದಿಂದ ಚೀತಾ ಯೋಜನೆಗೆ ಹಿನ್ನಡೆಯಾಗಿದೆ. ಈ ಸಾವುಗಳನ್ನು ಅಕಾಲಿಕವೆಂದು ದಾಖಲಿಸಲಾಗಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 8 =
Remember me
