| ಸಿದ್ದು ಕಾಳೋಜಿ
ಜಗತ್ತಿನ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತ. ನಾವೆಲ್ಲ ಗಣತಂತ್ರದ ಅಮೃತ ಕಾಲದಲ್ಲಿದ್ದೇವೆ. ಭಾರತೀಯ ಗಣತಂತ್ರಕ್ಕೆ 2025ರ ಜನವರಿ 26ಕ್ಕೆ 75 ವರ್ಷಗಳು ತುಂಬಲಿವೆ. ಡಾ. ಬಾಬಾಸಾಹೇಬ ಅಂಬೇಡ್ಕರ್ ರಚಿತ ಸಂವಿಧಾನವನ್ನು ಅಳವಡಿಸಿಕೊಂಡು ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಸಿದ್ಧಾಂತಕ್ಕೆ ಬದ್ಧವಾಗಿ ಹಲವು ಮೈಲಿಗಲ್ಲುಗಳನ್ನು ಭಾರತ ಸ್ಥಾಪಿಸಿದೆ. ಇಡೀ ಜಗತ್ತು ಇಂದು ಭಾರತದತ್ತ ದೃಷ್ಟಿ ನೆಟ್ಟಿದೆ, ಬೆರಗುಗಣ್ಣಿನಿಂದ ನೋಡುತ್ತಿದೆ.
ಮೂರು ಟ್ರಿಲಿಯನ್ ಎಕಾನಮಿ ಹೊಸ್ತಿಲಲ್ಲಿರುವ ಭಾರತ, 5 ಟ್ರಿಲಿಯನ್ ಎಕಾನಮಿ ಆಗುವತ್ತ ದಾಪುಗಾಲಿಟ್ಟಿದೆ. ಚಂದ್ರನ ಅಂಗಳಕ್ಕೂ ಕಾಲಿಟ್ಟಿರುವ ಭಾರತ, ಬಾಹ್ಯಾಕಾಶ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆ ಮಾಡಿದ್ದು, ಮತ್ತೊಂದು ಮೈಲಿಗಲ್ಲಿಗೆ ಸಜ್ಜಾಗಿದೆ. ಬಾಹ್ಯಾಕಾಶಕ್ಕೆ ಮಾನವರನ್ನು ಕಳಿಸಲು ಸರ್ವಸನ್ನದ್ಧಗೊಂಡಿದೆ. ಈ 75 ವರ್ಷಗಳಲ್ಲಿ ಆರೋಗ್ಯ, ಶಿಕ್ಷಣ, ವಿಜ್ಞಾನ-ತಂತ್ರಜ್ಞಾನ, ಮೂಲಸೌಕರ್ಯ, ಕ್ರೀಡೆ ಮೊದಲಾದ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆಯನ್ನು ಮಾಡಿದೆ. ಆದರೆ ಇನ್ನೂ ಆಗಬೇಕಾದ ಕೆಲಸಗಳು ಬೆಟ್ಟದಷ್ಟಿವೆ. ದೇಶವೀಗ ಮತ್ತೊಂದು ಸಾರ್ವತ್ರಿಕ ಚುನಾವಣೆಯ ಹೊಸ್ತಿಲಲ್ಲಿದ್ದು, ಇತಿಹಾಸ ಬರೆಯಲು 100 ಕೋಟಿ ಮತದಾರರು ಸಜ್ಜಾಗಿದ್ದಾರೆ.
ನೆರೆಯ ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶಕ್ಕೆ ಹೋಲಿಸಿದರೆ ಹಲವು ವೈವಿಧ್ಯ ಹಾಗೂ ವೈರುಧ್ಯಗಳ ನಡುವೆಯೂ ಭಾರತದಲ್ಲಿ ಗಣತಂತ್ರ ಅತ್ಯಂತ ಯಶಸ್ವಿಯಾಗಿದೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೂ ಇನ್ನೂ ಸುಧಾರಣೆ ಅಗತ್ಯ. ಚುನಾವಣೆಗಳಲ್ಲಿ ಭ್ರಷ್ಟಾಚಾರ, ಜಾತಿ ರಾಜಕಾರಣ, ಕೋಮು ಧ್ರುವೀಕರಣ, ಹಣ ಬಲ-ತೋಳ್ಬಲದ ಪ್ರಭಾವ ವ್ಯಾಪಕವಾಗಿದೆ. ಚುನಾವಣಾ ಆಯೋಗವು ಎಷ್ಟೇ ಜಾಗೃತಿ ಮೂಡಿಸಿದರೂ ಮತದಾನ ಪ್ರಮಾಣ ಏರುತ್ತಿಲ್ಲ. ಮತದಾರರಲ್ಲಿ ರಾಜಕೀಯ ಪ್ರಜ್ಞೆ ಇನ್ನೂ ಜಾಗೃತವಾಗಿಲ್ಲ, ಪ್ರಜಾಪ್ರಭುತ್ವದ ನಿಜವಾದ ಆಶಯ ಈಡೇರಬೇಕಿದ್ದಲ್ಲಿ ಇನ್ನೂ ಅನೇಕ ಪ್ರಗತಿಪರ ಸುಧಾರಣೆಗಳು ಆಗಬೇಕಿದೆ. ಈ ಕುರಿತು ಒಂದು ವಿಸõತ ವಿಶ್ಲೇಷಣೆ ಇಲ್ಲಿದೆ.
ಗ್ರಾಮ ಪಂಚಾಯಿತಿ ಚುನಾವಣೆಯಿಂದ ಹಿಡಿದು ಲೋಕಸಭೆ ಚುನಾವಣೆಗಳವರೆಗೆ ಎಲ್ಲ ಎಲೆಕ್ಷನ್​ಗಳಲ್ಲೂ ಕುರುಡು ಕಾಂಚಾಣದ್ದೇ ಕಾರುಬಾರು. ಈಗ ಚುನಾವಣೆಗಳಲ್ಲಿ ಭ್ರಷ್ಟಾಚಾರ ಹಾಸುಹೊಕ್ಕಾಗಿದೆ. ಮತದಾರರಿಗೆ ಅನೇಕ ಆಸೆ-ಆಮಿಷಗಳನ್ನು ಒಡ್ಡಿ ಮತ ಪಡೆಯಲಾಗುತ್ತಿದೆ. ನೂರಾರು ಕೋಟಿ ರೂ. ಕಪ್ಪು ಹಣವನ್ನು ಖರ್ಚು ಮಾಡಿ ಜನಪ್ರತಿನಿಧಿಗಳಾಗಿ ಆಯ್ಕೆಯಾಗುವವರಿಂದ ನಾವು ಏನನ್ನು ನಿರೀಕ್ಷಿಸಲು ಸಾಧ್ಯ? ಆಯ್ಕೆಯಾದ ಮೇಲೆ ಸಾರ್ವಜನಿಕರಿಂದ ಸಾವಿರಾರು ಕೋಟಿ ರೂಪಾಯಿ ಕೊಳ್ಳೆ ಹೊಡೆಯುವುದೊಂದೇ ಅವರಿಗಿರುವ ಗುರಿ. ಒಬ್ಬ ಅಭ್ಯರ್ಥಿಗೆ ಇಂತಿಷ್ಟು ಅಂತ ಖರ್ಚಿನ ನಿರ್ದಿಷ್ಟ ಮೊತ್ತವನ್ನು ಚುನಾವಣಾ ಆಯೋಗ ನಿಗದಿಪಡಿಸಿದ್ದರೂ ಅಭ್ಯರ್ಥಿಗಳು ಸುಳ್ಳು ಲೆಕ್ಕ ಕೊಟ್ಟು ಕೋಟ್ಯಂತರ ರೂ. ಕಪ್ಪು ಹಣವನ್ನು ಚುನಾವಣೆಗೆ ಸುರಿಯುತ್ತಿದ್ದಾರೆ. ಚುನಾವಣೆಯಿಂದ ಚುನಾವಣೆಗೆ ಆಭ್ಯರ್ಥಿಗಳ ಖರ್ಚು ವೆಚ್ಚ ದುಪ್ಪಟ್ಟಾಗುತ್ತಿದೆ. ಒಂದು ಅಂದಾಜಿನ ಪ್ರಕಾರ, 2024ರ ಲೋಕಸಭೆ ಚುನಾವಣೆಗೆ ಅನಧಿಕೃತವಾಗಿ 80 ಸಾವಿರ ಕೋಟಿ ರೂ. ಖರ್ಚಾಗಲಿದೆ. ಇದರರ್ಥ ಕಪ್ಪು ಹಣ ವ್ಯಾಪಕವಾಗಿ ಚುನಾವಣೆಗೆ ಹರಿದು ಬರುತ್ತಿದೆ. ಅಭ್ಯರ್ಥಿಗಳ ಖರ್ಚು ವೆಚ್ಚವನ್ನು ಚುನಾವಣಾ ಆಯೋಗಕ್ಕೆ ಅಭ್ಯರ್ಥಿಗಳು ಸಲ್ಲಿಸಬೇಕಾಗುತ್ತದೆ. ಚುನಾವಣೆಗೆ ನಾಮಪತ್ರ ಸಲ್ಲಿಸುವ ವೇಳೆ ತಮ್ಮ ಆಸ್ತಿಪಾಸ್ತಿಯ ಲೆಕ್ಕವನ್ನು ಅಫಿಡವಿಟ್ ಮೂಲಕ ಘೊಷಿಸುವುದು ಕಡ್ಡಾಯ. ಆದರೆ, ಎಲ್ಲ ಸುಳ್ಳು ಲೆಕ್ಕ ಕೊಟ್ಟು ಆಯೋಗವನ್ನು ಯಾಮಾರಿಸುವುದು ಸರ್ವೆಸಾಮಾನ್ಯವಾಗಿ ಬಿಟ್ಟಿದೆ. ಇದಕ್ಕೆ ಕಡಿವಾಣ ಹಾಕುವಲ್ಲಿ ಚುನಾವಣಾ ಆಯೋಗ ಕೂಡ ವಿಫಲವಾಗಿದೆ. ಈ ನಿಟ್ಟಿನಲ್ಲಿ ಇನ್ನೂ ಕಠಿಣ ಕಾನೂನುಗಳು ಬರಬೇಕಿವೆ. ಸ್ವತಃ ಚುನಾವಣಾ ಆಯೋಗವೇ ಪ್ರಚಾರ ಸಭೆಗಳನ್ನು ನಿಗದಿಪಡಿಸಿದರೆ ಹಾಗೂ ಅಭ್ಯರ್ಥಿಗಳ ಪ್ರಚಾರದ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಂಡರೆ ಇದಕ್ಕೆ ಕಡಿವಾಣ ಹಾಕಬಹುದು ಎಂಬ ಚರ್ಚೆಗಳು ಕೂಡ ನಡೆದಿವೆ.
ರಾಜಕೀಯ ಅಪರಾಧೀಕರಣ:ಎಲ್ಲೂ ಸಲ್ಲದವರು ರಾಜಕಾರಣದಲ್ಲಿ ಸಲ್ಲುತ್ತಾರೆ ಎಂಬ ಮಾತು ಚಾಲ್ತಿಯಲ್ಲಿದೆ. ಅಪರಾಧ ಹಿನ್ನೆಲೆಯುಳ್ಳವರು, ಕೊಲೆಪಾತಕಿಗಳು, ಭ್ರಷ್ಟರು ಶಾಸನಸಭೆಗಳನ್ನು ಪ್ರವೇಶಿಸುವ ಮೂಲಕ ತಮ್ಮ ಕಪ್ಪು ದಂಧೆಗೆ ರಕ್ಷಣೆ ಪಡೆದುಕೊಳ್ಳುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕೆಂದರೆ, ರಾಜಕೀಯ ಪ್ರವೇಶಕ್ಕೂ ಕನಿಷ್ಠ ವಿದ್ಯಾರ್ಹತೆ ಕಡ್ಡಾಯಗೊಳಿಸುವುದು ಅತ್ಯಗತ್ಯ. ಅಂದಾಗ ಮಾತ್ರ ಸೇವಾಮನೋಭಾವ ಹೊಂದಿದ ಸುಶಿಕ್ಷಿತ ವ್ಯಕ್ತಿಗಳು ರಾಜಕಾರಣಕ್ಕೆ ಬರಲು ಸಾಧ್ಯ. ಹಣವಂತರು, ಅಪರಾಧ ಹಿನ್ನೆಲೆಯುಳ್ಳವರು, ರಾಜಕಾರಣವನ್ನು ಒಂದು ಉದ್ಯೋಗ ಮಾಡಿಕೊಂಡಿದ್ದಾರೆ. ಚುನಾವಣಾ ರಾಜಕಾರಣದಿಂದ ಸುಶಿಕ್ಷಿತರು ದೂರ ಉಳಿಯುತ್ತಿರುವುದು ಕಳವಳಕಾರಿಯಾಗಿದೆ.
ನೈತಿಕ ಅಧಃಪತನ:ಬಹುತೇಕ ಎಲ್ಲ ರಾಜಕೀಯ ಪಕ್ಷಗಳು ನೈತಿಕ ಅಧಃಪತನ ತಲುಪಿವೆ. ಚುನಾವಣಾ ಸಂದರ್ಭದಲ್ಲಿ ಹಾಗೂ ನಂತರದ ದಿನಗಳಲ್ಲಿ ಆಡಳಿತ ಪಕ್ಷಗಳು, ಸರ್ಕಾರಿ ಯಂತ್ರವನ್ನು ತಮ್ಮ ಲಾಭಕ್ಕೆ ದುರುಪಯೋಗ ಮಾಡಿಕೊಂಡ ಅನೇಕ ಪ್ರಕರಣಗಳನ್ನು ನಾವು ನೋಡಿದ್ದೇವೆ. ಯಾವ ರಾಜಕೀಯ ಪಕ್ಷವೂ ಇದಕ್ಕೆ ಹೊರತಾಗಿಲ್ಲ. ಚುನಾವಣಾ ಆಯೋಗ, ಸಿಬಿಐ, ಇ.ಡಿ., ಆದಾಯ ತೆರಿಗೆ, ಪೊಲೀಸ್ ಇಲಾಖೆ ಮೊದಲಾದ ಸಂಸ್ಥೆಗಳು ಆಳುವ ಪಕ್ಷದ ಅಡಿಯಾಳಾದರೆ ಮುಕ್ತ ಚುನಾವಣೆ ಎಲ್ಲಿಂದ ಸಾಧ್ಯ? ಪಾರದರ್ಶಕ, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯ ಉತ್ತರದಾಯಿತ್ವ ಹೊಂದಿರುವ ಸ್ವತಃ ಚುನಾವಣಾ ಆಯೋಗವೇ ಆಡಳಿತ ಪಕ್ಷದ ಕೈಗೊಂಬೆಯಾಗಿ ನಡೆದುಕೊಂಡ ಅನೇಕ ನಿದರ್ಶನಗಳಿವೆ. ಇಂದು ನಮಗೆ ಟಿ.ಎನ್. ಶೇಷನ್ ಅವರಂಥ ದಿಟ್ಟ ಚುನಾವಣಾ ಆಯುಕ್ತರ ಅವಶ್ಯಕತೆ ಇದೆ. ಯಾವುದೇ ರಾಜಕೀಯ ಪಕ್ಷದ ಒತ್ತಡಕ್ಕೆ ಮಣಿಯದೇ ನಿಯಮಗಳ ಪ್ರಕಾರ ನಡೆದುಕೊಳ್ಳುವ ಅಧಿಕಾರಿಗಳು ಆಯೋಗದಲ್ಲಿರಬೇಕು. ಆತ್ಮಸಾಕ್ಷಿಗೆ ಅನುಗುಣವಾಗಿ ಕಾನೂನು ಪ್ರಕಾರ ನಡೆದುಕೊಳ್ಳುವ ಎದೆಗಾರಿಕೆಯನ್ನು ಅಧಿಕಾರಿಗಳು ಬೆಳೆಸಿಕೊಳ್ಳಬೇಕಿದೆ. ಇಲ್ಲವಾದರೆ, ಬೇಲಿಯೇ ಎದ್ದು ಹೊಲ ಮೇಯ್ದಂತಾಗುತ್ತದೆ. ವಿವಿಧ ಸ್ತರದ ಅಧಿಕಾರಿಗಳು ತಮ್ಮ ಕರ್ತವ್ಯ ಅರಿತು ಕೆಲಸ ಮಾಡಿದರೆ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸಾಧ್ಯ. ರಾಜಕೀಯ ಪಕ್ಷಗಳು ಕೂಡ ಚುನಾವಣಾ ರಾಜಕೀಯದಿಂದ ಆಚೆ ಬಂದು ಯೋಚಿಸುವ ಹೃದಯವಂತಿಕೆ ಬೆಳೆಸಿಕೊಂಡಾಗ ಮಾತ್ರ ನೈತಿಕತೆಯನ್ನು ನಿರೀಕ್ಷಿಸಬಹುದು.
ಚುನಾವಣಾ ಬಾಂಡ್ ರದ್ದು:ಚುನಾವಣಾ ಸುಧಾರಣೆಯ ನಿಟ್ಟಿನಲ್ಲಿ ಸಂವಿಧಾನ ತಿದ್ದುಪಡಿ ಹಾಗೂ ಸುಪ್ರೀಂಕೋರ್ಟ್​ನ ಕೆಲವು ಐತಿಹಾಸಿಕ ತೀರ್ಪಗಳು ಪ್ರಮುಖ ಪಾತ್ರ ವಹಿಸಿವೆ. ಈಗಲೂ ವಹಿಸುತ್ತಿವೆ ಕೂಡ. ಇದಕ್ಕೆ ತಾಜಾ ಉದಾಹರಣೆ ಎಂದರೆ ಚುನಾವಣಾ ಬಾಂಡ್​ಗಳನ್ನು ರದ್ದುಪಡಿಸಿ ಇತ್ತೀಚೆೆಗೆ ಸುಪ್ರೀಂಕೋರ್ಟ್ ನೀಡಿರುವ ಚರಿತ್ರಾರ್ಹ ತೀರ್ಪ. ಯಾವ್ಯಾವ ಉದ್ಯಮ ಸಂಸ್ಥೆಗಳು, ಉದ್ಯಮಿಗಳು ಹಾಗೂ ಪ್ರಭಾವಿ ವ್ಯಕ್ತಿಗಳಿಂದ ದೇಣಿಗೆ ಪಡೆದಿದ್ದೀರಿ, ಅವರ ಹೆಸರು, ವಿವರಗಳೇನು, ದೇಣಿಗೆ ಮೊತ್ತವೇನು ಎಂಬುದನ್ನು ಗೌಪ್ಯವಾಗಿಡುವ ಚುನಾವಣಾ ಬಾಂಡ್ ಕಾನೂನು ಬಾಹಿರ ಹಾಗೂ ದೇಣಿಗೆ ಕೊಟ್ಟವರ ಹೆಸರನ್ನು ಸಾರ್ವಜನಿಕಗೊಳಿಸದೇ ಇರುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಇದುವರೆಗೆ ದೇಣಿಗೆ ನೀಡಿದವರ ಹೆಸರು, ಮೊತ್ತ ಹಾಗೂ ಯಾವ ಪಕ್ಷಕ್ಕೆ ನೀಡಿದ್ದಾರೆ ಮತ್ತಿತರ ವಿವರಗಳನ್ನು ಬಹಿರಂಗಪಡಿಸುವಂತೆಯೂ ಚುನಾವಣಾ ಆಯೋಗ ಹಾಗೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. ಇದು ಸ್ವಾಗತಾರ್ಹ ತೀರ್ಪಾಗಿದ್ದು, ರಾಜಕೀಯ ಪಕ್ಷಗಳಿಗೆ ಗೌಪ್ಯವಾಗಿ ದೇಣಿಗೆ ನೀಡಿ ತಮಗೆ ಬೇಕಾದ ಕೆಲಸಗಳನ್ನು ಮಾಡಿಸಿಕೊಳ್ಳುವ ರಾಜಕೀಯ ಪಕ್ಷಗಳು ಹಾಗೂ ಉದ್ಯಮಿಗಳ ನಡುವಿನ ಅಪವಿತ್ರ ಮೈತ್ರಿಗೆ ಬ್ರೇಕ್ ಬೀಳಲಿದೆ. ಆದರೆ, ಮತ್ತೆ ಬೇರಾವುದಾದರೂ ದಾರಿ ಕಂಡುಕೊಳ್ಳುವುದಂತೂ ಗ್ಯಾರಂಟಿ. ಹಾಗಾದರೆ, ರಾಜಕೀಯ ಪಕ್ಷಗಳು ತಮ್ಮ ಖರ್ಚು-ವೆಚ್ಚವನ್ನು ನಿಭಾಯಿಸಲು ದೇಣಿಗೆ ಹೇಗೆ ಹೊಂದಿಸುವುದು ಎನ್ನುವ ಬಹು ದೊಡ್ಡ ಪ್ರಶ್ನೆಯನ್ನು ಕೂಡ ಈ ತೀರ್ಪು ಹುಟ್ಟು ಹಾಕಿದೆ. ಐರೋಪ್ಯ ಒಕ್ಕೂಟದ ಅನೇಕ ರಾಷ್ಟ್ರಗಳಲ್ಲಿ ಸರ್ಕಾರಿ ಪ್ರಾಯೋಜಿತ ಫಂಡಿಂಗ್ ವ್ಯವಸ್ಥೆ ಜಾರಿಯಲ್ಲಿದೆ. ಅಮೆರಿಕದಲ್ಲಿ ಸ್ವತಃ ಆಲ್ಲಿನ ಇನ್​ಕಮ್ ಟ್ಯಾಕ್ಸ್ ಡಿಪಾರ್ಟ್​ವೆುಂಟ್ ಸಾರ್ವಜನಿಕರಿಂದ ಅಧ್ಯಕ್ಷೀಯ ಚುನಾವಣೆ ಫಂಡಿಂಗ್ ಸಂಗ್ರಹಿಸುತ್ತದೆ. ತೆರಿಗೆದಾರರ ಒಪ್ಪಿಗೆ ಪಡೆದು ತಲಾ 3 ಡಾಲರ್ ಸಂಗ್ರಹಿಸಲಾಗುತ್ತದೆ. ಆದರೆ, ಈ ಪ್ರಮಾಣ ತೀರ ಕಡಿಮೆ. 4 ಪ್ರತಿಶತ ಜನರು ಮಾತ್ರ ಇದಕ್ಕೆ ಒಪ್ಪಿಗೆ ಸೂಚಿಸುತ್ತಾರೆ. ಆದರೆ, ಅಮೆರಿಕದಲ್ಲೂ ಪೊಲಿಟಿಕಲ್ ಲಾಬಿದಾರರು, ಸಂಘ, ಸಂಸ್ಥೆಗಳಿಂದ ಹರಿದು ಬರುವ ಚುನಾವಣಾ ನಿಧಿಯೇ ರಾಜಕೀಯ ಪಕ್ಷಗಳ ಪ್ರಮುಖ ಆದಾಯದ ಮೂಲ.
ಜರ್ಮನಿಯಲ್ಲಿ ಅತ್ಯಂತ ಪಾರದರ್ಶಕ ಸರ್ಕಾರಿ ಪ್ರಾಯೋಜಿತ ಫಂಡಿಂಗ್ ವ್ಯವಸ್ಥೆ ಜಾರಿಯಲ್ಲಿದೆ. ಸರ್ಕಾರವೇ ರಾಜಕೀಯ ಪಕ್ಷಗಳ ಆದಾಯದ ಶೇಕಡ 50ರಷ್ಟು ಮ್ಯಾಚಿಂಗ್ ಗ್ರಾ್ಯಂಟ್ ನೀಡುತ್ತದೆ. ಇದು ಆಯಾ ರಾಜಕೀಯ ಪಕ್ಷಗಳು ಹಿಂದಿನ ಚುನಾವಣೆಯಲ್ಲಿ ಪಡೆದ ಶೇಕಡವಾರು ಮತಗಳನ್ನು ಆಧರಿಸುತ್ತದೆ. ಕನಿಷ್ಠ ಶೇಕಡ 5 ಮತ ಪಡೆದ ಸಣ್ಣ ಪಕ್ಷಗಳು ಕೂಡ ದೇಣಿಗೆಗೆ ಅರ್ಹವಾಗಿರುತ್ತವೆ. ಅದೇ ರೀತಿ, ದೊಡ್ಡ ಮೊತ್ತದ ಖಾಸಗಿ ದೇಣಿಗೆಗಳನ್ನು ಸ್ವೀಕರಿಸಿದ ತಕ್ಷಣ ಗಮನಕ್ಕೆ ತರಬೇಕಾಗುತ್ತದೆ. ಆದರೆ, ಈ ಮಾದರಿಯನ್ನು ಭಾರತದಲ್ಲಿ ಜಾರಿಗೆ ತರಲು ಹಲವು ಸವಾಲುಗಳಿವೆ.
ಪಕ್ಷಾಂತರ ನಿಷೇಧ ಕಾನೂನು:ಪ್ರಜಾಪ್ರತಿನಿಧಿ ಕಾಯ್ದೆ ಜಾರಿಗೆ ಬಂದ ನಂತರ ‘ಆಯಾ ರಾಮ್ ಗಯಾ ರಾಮ್ ಸಂಸ್ಕೃತಿಗೆ ಅಲ್ಪಮಟ್ಟಿಗೆ ಬ್ರೇಕ್ ಬಿದ್ದಿದೆ. ಅಧಿಕಾರ ಹಾಗೂ ಹಣಕಾಸಿನ ಆಮಿಷಕ್ಕೆ ಒಳಗಾಗಿ ತಾವು ಆಯ್ಕೆಯಾದ ಪಕ್ಷಕ್ಕೆ ಬದ್ಧತೆ ತೋರದೆ ಪಕ್ಷಾಂತರ ಮಾಡುವ ಶಾಸಕರು ಹಾಗೂ ಸಂಸದರಿಗೆ ಈ ಕಾಯ್ದೆಯಿಂದ ಕಡಿವಾಣ ಬಿದ್ದಿದೆ. ಯಾವುದೇ ರೀತಿಯ ಆಮಿಷಕ್ಕೆ ಒಳಗಾಗಿ ಪಕ್ಷಾಂತರ ಮಾಡಿದರೆ ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಶಾಸಕತ್ವ ಅನರ್ಹಗೊಳ್ಳಲಿದೆ. ಈ ಕಾಯ್ದೆಯನ್ನು 1985ರಲ್ಲಿ ಸಂವಿಧಾನದ 10ನೇ ಷೆಡ್ಯೂಲ್​ಗೆ ಸೇರಿಸಲಾಗಿದೆ. ಆದರೂ ರಾಜಕಾರಣಿಗಳು ಆಯ್ಕೆಯಾದ ಕೆಲವೇ ತಿಂಗಳುಗಳಲ್ಲಿ ಅಥವಾ ವರ್ಷಗಳಲ್ಲಿ ಶಾಸಕ/ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ಬೇರೆ ಪಕ್ಷ ಸೇರಿ ಅಧಿಕಾರ ಸವಿಯುವ ಮತ್ತೊಂದು ಕೆಟ್ಟ ಪರಂಪರೆಗೆ ನಾಂದಿ ಹಾಡಿದ್ದು ದುರಂತವೇ ಸರಿ.
ಬೊಮ್ಮಾಯಿ ಪ್ರಕರಣ:1989ರಲ್ಲಿ ಎಸ್.ಆರ್. ಬೊಮ್ಮಾಯಿ ನೇತೃತ್ವದ ಜನತಾದಳ ಸರ್ಕಾರವನ್ನು ಅಂದಿನ ಕೇಂದ್ರ ಸರ್ಕಾರ ಆರ್ಟಿಕಲ್ 356 ಪ್ರಯೋಗಿಸಿ ವಜಾಗೊಳಿಸಿದ್ದಾಗ ಈ ಬಗ್ಗೆ ಸುದೀರ್ಘ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ 1994ರಲ್ಲಿ ಮಹತ್ವದ ತೀರ್ಪು ನೀಡಿತ್ತು. ‘ಚುನಾಯಿತ ಸರ್ಕಾರದ ಬಹುಮತವು ಶಾಸನಸಭೆಯೊಳಗೆ ಸಾಬೀತಾಗಬೇಕು’ ಎಂದು ಹೇಳಿತ್ತು. ಅನಗತ್ಯವಾಗಿ ರಾಜಕೀಯ ದುರುದ್ದೇಶದಿಂದ ಚುನಾಯಿತ ಸರ್ಕಾರವನ್ನು ವಜಾಗೊಳಿಸುವ ಕೇಂದ್ರದ ಚಾಳಿಗೆ ಫುಲ್ ಸ್ಟಾಪ್ ಹಾಕಿದ ಈ ಆದೇಶ ಭಾರತದಲ್ಲಿ ಚುನಾವಣಾ ಸುಧಾರಣೆಯ ನಿಟ್ಟಿನಲ್ಲಿ ಹೊರಬಂದ ಐತಿಹಾಸಿಕ ತೀರ್ಪ.
ರೈಟ್ ಟು ರಿಕಾಲ್:ಚುನಾವಣಾ ಪ್ರಚಾರದ ವೇಳೆ ಅಭ್ಯರ್ಥಿಗಳು ಅನೇಕ ಸುಳ್ಳು, ಪೊಳ್ಳು ಭರವಸೆ, ವಾಗ್ದಾನಗಳನ್ನು ನೀಡಿ ಶಾಸನಸಭೆಗಳಿಗೆ ಆಯ್ಕೆಯಾಗುತ್ತಾರೆ. ಆದರೆ, ಒಮ್ಮೆ ಆಯ್ಕೆಯಾದ ಬಳಿಕ ಈ ಯಾವುದೇ ಭರವಸೆಗಳನ್ನು ಅನುಷ್ಠಾನಗೊಳಿಸುವ ಗೋಜಿಗೆ ಹೋಗುವುದಿಲ್ಲ. ಆದ್ದರಿಂದ ಇಂಗ್ಲೆಂಡ್, ಅರ್ಜೆಂಟೀನಾ, ಸ್ವಿಜರ್ಲೆಂಡ್ ಮೊದಲಾದ ದೇಶಗಳಲ್ಲಿ ಜಾರಿಯಲ್ಲಿರುವಂತೆ ರೈಟ್ ಟು ರಿಕಾಲ್ (ಚುನಾಯಿತ ಜನಪ್ರತಿನಿಧಿಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಪದ್ಧತಿ) ಜಾರಿಗೆ ತರಬೇಕೆಂಬ ಚರ್ಚೆ ದಶಕಗಳಿಂದ ಭಾರತದಲ್ಲಿ ನಡೆಯುತ್ತಿದೆ. ಅಂದರೆ, ಮತದಾರರಿಗೆ ತಾವು ಆಯ್ಕೆ ಮಾಡಿದ ವ್ಯಕ್ತಿ ಚುನಾವಣಾಪೂರ್ವದಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸುತ್ತಿಲ್ಲ ಅನ್ನಿಸಿದರೆ ಜನಮತಗಣನೆ ಮೂಲಕ ಉಳಿದ ಅವಧಿಗೆ ಅಭ್ಯರ್ಥಿಯನ್ನು ಬದಲಿಸುವ ಅವಕಾಶ ಇದೆ. ಭಾರತದಲ್ಲೂ ಈ ಪದ್ಧತಿ ಜಾರಿಗೆ ಬರಬೇಕು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಆದರೆ, ಅನಕ್ಷರತೆ ಹೆಚ್ಚಿರುವ ಭಾರತದಲ್ಲಿ ಇದು ಕಷ್ಟ ಸಾಧ್ಯ ಮತ್ತು ಅನಗತ್ಯ ಖರ್ಚಿಗೆ ದಾರಿ ಎಂದು ವಿಶ್ಲೇಷಿಸಲಾಗುತ್ತಿದೆ. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಆನ್​ಲೈನ್ ವೋಟಿಂಗ್ ವ್ಯವಸ್ಥೆ ಮೂಲಕ ಜಾರಿಗೆ ಯಾಕೆ ತರಬಾರದು ಎಂಬ ವಾದ ಕೂಡ ಕೇಳಿಬರುತ್ತಿದೆ. ಹುಸಿ ಭರವಸೆಗಳ ಆಮಿಷ ನೀಡಿ 5 ವರ್ಷ ಅಧಿಕಾರ ಅನುಭವಿಸುವ ರಾಜಕಾರಣಿಗಳಿಗೆ ಬುದ್ಧಿ ಕಲಿಸಲು ರೈಟ್ ಕು ರಿಕಾಲ್ ಪದ್ಧತಿ ಸರಿ ಎಂಬ ವಾದವೂ ಬಲವಾಗಿದೆ.
ಮಹಿಳಾ ಮೀಸಲಾತಿ:ಪುರುಷ ಪ್ರಧಾನ ಭಾರತೀಯ ಸಮಾಜದಲ್ಲಿ ಮಹಿಳೆಯರು ಅನೇಕ ಹಕ್ಕುಗಳಿಂದ ವಂಚಿತರಾಗಿದ್ದಾರೆ. ಪ್ರಮುಖ ನೀತಿ-ನಿರ್ಧಾರಗಳನ್ನು ಕೈಗೊಳ್ಳುವ ಶಾಸನಸಭೆಗಳಲ್ಲೂ ಮಹಿಳೆಯರಿಗೆ ಸಮಾನ ಸ್ಥಾನಮಾನ ಸಿಕ್ಕಿಲ್ಲ. 2024ರ ಲೋಕಸಭೆ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸುವ 100 ಕೋಟಿ ಅರ್ಹ ಮತದಾರರ ಪೈಕಿ ಶೇಕಡ 50ರಷ್ಟು ಮಹಿಳಾ ಮತದಾರರಿದ್ದಾರೆ. ಆದರೂ ಶಾಸನಸಭೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಮಾತ್ರ ನಗಣ್ಯ. ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಮಹಿಳೆಯರಿಗೆ ಶೇಕಡ 33ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆ, ಮೊದಲ ಬಾರಿ ಲೋಕಸಭೆಯಲ್ಲಿ ಮಂಡನೆಯಾಗಿ 27 ಸುದೀರ್ಘ ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. 2023ರ ಸೆ. 20ರಂದು ಮೋದಿ ಸರ್ಕಾರ ಉಭಯ ಸದನಗಳಲ್ಲಿ ಆ ಮಸೂದೆಯನ್ನು ಮತ್ತೆ ಮಂಡಿಸಿ, ರಾಷ್ಟ್ರಪತಿಗಳ ಅಂಕಿತ ಪಡೆದುಕೊಂಡಿದೆ. ಆದರೆ, ಇದು 2026 ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಬಳಿಕವಷ್ಟೇ ಜಾರಿಗೆ ಬರಲಿದೆ. ಇದು ಕೂಡ ಚುನಾವಣಾ ಸುಧಾರಣೆ ಹಾಗೂ ಮಹಿಳೆಯರ ಕೈಗೆ ಅಧಿಕಾರ ಕೊಡುವ ನಿಟ್ಟಿನಲ್ಲಿ ಪ್ರಮುಖ ನಿರ್ಧಾರ.
ಒಂದು ರಾಷ್ಟ್ರ, ಒಂದು ಚುನಾವಣೆ:ಚುನಾವಣಾ ವೆಚ್ಚವನ್ನು ತಗ್ಗಿಸುವ ನಿಟ್ಟಿನಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸಬೇಕೆನ್ನುವುದು ಬಿಜೆಪಿಯ ಪ್ರಮುಖ ಅಜೆಂಡಾಗಳಲ್ಲಿ ಒಂದು. ಏಕಕಾಲಕ್ಕೆ ಚುನಾವಣೆ ನಡೆಸುವುದರ ಸಾಧಕ ಬಾಧಕಗಳನ್ನು ಅರಿಯಲು ಈಗಾಗಲೇ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ಕೇಂದ್ರ ಸರ್ಕಾರ ನೇಮಿಸಿತ್ತು. ಈಗಾಗಲೇ ಈ ಸಮಿತಿ ಆಧ್ಯಯನ ನಡೆಸಿ ವರದಿಯೊಂದನ್ನು ಸಿದ್ಧಪಡಿಸಿ, ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ. 2029ಕ್ಕೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸುವಂತೆ ಸಮಿತಿಯು ಶಿಫಾರಸು ಮಾಡಿದ್ದು, ಈ ಸಂಬಂಧ ಅಗತ್ಯ ಸಂವಿಧಾನಿಕ ತಿದ್ದುಪಡಿಗೆ ಮತ್ತು ಪ್ರಜಾಪ್ರತಿನಿಧಿ ಕಾಯ್ದೆ ತಿದ್ದುಪಡಿಗೆ ಸೂಚಿಸಿದೆ. ಪ್ರಮುಖವಾಗಿ ಈ ಸಮಿತಿ, ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗದೇ ಅತಂತ್ರ ಪರಿಸ್ಥಿತಿ ನಿರ್ವಣವಾದರೆ, ವಿಶ್ವಾಸಮತ ಅಥವಾ ಅವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಸರ್ಕಾರ ಬಿದ್ದುಹೋದರೆ ಮುಂದೇನು ಮಾಡಬೇಕು? ಶಾಸಕರು, ಸಂಸದರು ಪಕ್ಷಾಂತರ ಮಾಡಿದ ಸಂದರ್ಭದಲ್ಲಿ ಸರ್ಕಾರ ಉರುಳಿದರೆ ಅಥವಾ ಅಲ್ಪಮತಕ್ಕೆ ಕುಸಿದರೆ ಏನು ಮಾಡಬೇಕು ಎಂಬ ಬಗ್ಗೆ ಪರ್ಯಾಯ ಮಾರ್ಗಗಳ ಕುರಿತು ಶಿಫಾರಸುಗಳನ್ನು ಒಳಗೊಂಡಿದೆ. 1967ರವರೆಗೂ ಭಾರತದಲ್ಲಿ ವಿಧಾನಸಭೆ ಮತ್ತು ಲೋಕಸಭೆಗೆ ಏಕಕಾಲಕ್ಕೆ ಚುನಾವಣೆಗಳು ನಡಯುತ್ತಿದ್ದವು. ಆದರೆ, ಕೆಲವು ರಾಜ್ಯಗಳಲ್ಲಿ ಮೈತ್ರಿ ಸರ್ಕಾರಗಳು ಉರುಳಿದ ಪರಿಣಾಮ ಏಕಕಾಲಕ್ಕೆ ಚುನಾವಣೆ ನಡೆಯುವ ಸಂಪ್ರದಾಯಕ್ಕೆ 1967ರಲ್ಲಿ ಬ್ರೇಕ್ ಬಿದ್ದಿತು. 1980ರಿಂದಲೂ ಬಿಜೆಪಿ ಏಕಕಾಲಕ್ಕೆ ಚುನಾವಣೆ ನಡೆಸುವ ಪರ ವಕಾಲತ್ತು ವಹಿಸುತ್ತ ಬಂದಿದೆ. ಆದರೆ, ಕಾಂಗ್ರೆಸ್ ಮತ್ತಿತರ ಪಕ್ಷಗಳು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತ ಬಂದಿವೆ. ಅಷ್ಟೇ ಅಲ್ಲದೆ, ಚುನಾವಣಾ ಆಯೋಗ ಕೂಡ ಎಲೆಕ್ಟ್ರಾನಿಕ್ ಮತಯಂತ್ರಗಳು ಹಾಗೂ ವಿವಿಪ್ಯಾಟ್​ಗಳನ್ನು ಮತ್ತು ಅಗತ್ಯ ತಂತ್ರಜ್ಞಾನವನ್ನು ಸಿದ್ಧಪಡಿಸಿಕೊಂಡಿದ್ದಲ್ಲಿ ಮತ್ತು ಈ ಮೇಲಿನ ಎಲ್ಲ ಪ್ರಶ್ನೆಗಳಿಗೆ ಸೂಕ್ತ ಉತ್ತರ ಕಂಡುಕೊಂಡಲ್ಲಿ ಏಕಕಾಲ ಚುನಾವಣೆ ನಡೆಸುವುದರಿಂದ ಗಣನೀಯವಾಗಿ ಚುನಾವಣಾ ವೆಚ್ಚವನ್ನು ತಗ್ಗಿಸಬಹುದು ಎನ್ನುವದಂತೂ ಸತ್ಯ.
ರಾಜಕೀಯ ಪ್ರಜ್ಞೆ:ಅನೇಕ ದಶಕಗಳಿಂದ ಭಾರತದ ಮತದಾರರನ್ನು ತರಹೇವಾರಿ ಆಮಿಷಗಳಿಂದ ಹಾಗೂ ಉಚಿತ ಉಡುಗೊರೆಗಳಿಂದ (ಫ್ರೀ ಬೀ) ರಾಜಕೀಯ ಪಕ್ಷಗಳು ಹಾಗೂ ಮುಖಂಡರು ತಮ್ಮ ಬುಟ್ಟಿಗೆ ಹಾಕಿಕೊಳ್ಳುತ್ತ ಬಂದಿದ್ದಾರೆ. ಅನಕ್ಷರಸ್ಥ ರಾಜಕೀಯ ಅರಿವು ಇರದ ಮತದಾರರೇ ಹೆಚ್ಚಿರುವ ಭಾರತದಲ್ಲಿ ಸುಲಭವಾಗಿ ಯಾಮಾರಿಸಿ ಮತ ಕಿತ್ತುಕೊಂಡು ಮೂರ್ಖರನ್ನಾಗಿ ಮಾಡಲಾಗುತ್ತಿದೆ. ಚುನಾವಣಾ ಸಂದರ್ಭದಲ್ಲಿ ಸಿಗುವ ನೂರು, ಐನೂರು, ಸಾವಿರ ರೂಪಾಯಿ ನಗದು ಹಣ, ಹೆಂಡ, ಬಾಡೂಟ, ಪೊಳ್ಳು ಭರವಸೆಗಳಿಗೆ ತಮ್ಮ ಮತವನ್ನು ಕೆಲವು ಮತದಾರರು ಮಾರಿಕೊಳ್ಳುತ್ತಿದ್ದಾರೆ. ಇನ್ನೊಂದು ಕಡೆ, ಸುಶಿಕ್ಷಿತರು ಮತದಾನದಿಂದ ದೂರ ಉಳಿದು ತಮ್ಮ ಅಮೂಲ್ಯ ಮತವನ್ನು ವ್ಯರ್ಥ ಮಾಡುತ್ತಿದ್ದಾರೆ. ಶೇಕಡ 35ರಿಂದ 45ರಷ್ಟು ಅರ್ಹ ಮತದಾರರು ಗಣತಂತ್ರ ಪ್ರಕ್ರಿಯೆಯಿಂದಲೇ ದೂರ ಉಳಿಯುತ್ತಿದ್ದಾರೆ. ಹೀಗಾದಲ್ಲಿ ಪ್ರಜಾಪ್ರಭುತ್ವ ಯಶಸ್ವಿ ಹೇಗಾದೀತು? ಮತದಾನವನ್ನು ಕಡ್ಡಾಯಗೊಳಿಸಬೇಕು. ಯಾರು ಮತದಾನ ಮಾಡುವುದಿಲ್ಲವೊ ಅಂಥವರಿಗೆ ಸರ್ಕಾರಿ ಸೇವೆಗಳನ್ನು ನೀಡಬಾರದು ಎಂಬ ಚರ್ಚೆ ಕೂಡ ಅನೇಕ ವರ್ಷಗಳಿಂದ ನಡೆಯುತ್ತಿದೆ. ಪ್ರಜೆಗಳಿಂದ, ಪ್ರಜೆಗಳಿಗೋಸ್ಕರ ಪ್ರಜಾಪ್ರಭುತ್ವ ಆಗಿರುವುದರಿಂದ ಸಮಾಜದ ಕಟ್ಟ ಕಡೆಯ ವ್ಯಕ್ತಿ ಕೂಡ ಪಾಲ್ಗೊಂಡಲ್ಲಿ ಮಾತ್ರ ಗಣತಂತ್ರ ಮತ್ತಷ್ಟು ಬಲಿಷ್ಠಗೊಳ್ಳಬಲ್ಲದು. ಈ ನಿಟ್ಟಿನಲ್ಲಿ ಮೊಬೈಲ್ ಒಟಿಪಿ, ಕ್ಯೂಆರ್ ಕೋಡ್ ಮೊದಲಾದ ತಂತ್ರಜ್ಞಾನವನ್ನು ಬಳಸಿಕೊಂಡು ಪ್ರತಿಯೊಬ್ಬರೂ ವೋಟ್ ಮಾಡುವಂತೆ ನೋಡಿಕೊಳ್ಳಬೇಕು. ಅಲ್ಲದೆ, ಚುನಾವಣಾ ಆಯೋಗವೇ ಅಭ್ಯರ್ಥಿಗಳ ಸಂಪೂರ್ಣ ಜಾತಕವನ್ನು ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವ ಮೂಲಕ ವ್ಯಾಪಕ ಪ್ರಚಾರ ನೀಡುವುದರಿಂದ ಮತದಾರರು, ಅಭ್ಯರ್ಥಿಯ ಹಿನ್ನೆಲೆಯನ್ನು ಸಂಪೂರ್ಣ ತಿಳಿದುಕೊಂಡು ಮತ ನೀಡಬಹುದು. ಜೊತೆಗೆ ಡೀಪ್ ಫೇಕ್ ಮತ್ತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದ ದುರ್ಬಳಕೆಯನ್ನು ಸಮರ್ಥವಾಗಿ ಎದುರಿಸಬೇಕಾಗಿರುವುದು ತುರ್ತು ಅಗತ್ಯವಾಗಿದೆ. ಅಸಲಿ ಯಾವುದು, ನಕಲಿ ಯಾವುದು ಎಂಬುದನ್ನು ಸ್ಪಷ್ಟವಾಗಿ ಗುರುತಿಸುವ ತಂತ್ರಜ್ಞಾನ ಬೇಕು. ಇಲ್ಲವಾದರೆ ಸಾಮಾಜಿಕ ಮಾಧ್ಯಮಗಳಲ್ಲಿ ಕ್ಷಣಮಾತ್ರದಲ್ಲಿ ಹರಿದಾಡುವ ಮಾಹಿತಿಗಳೇ ಸತ್ಯವೆಂದು ನಂಬಿ ಮತದಾರರು ಮೋಸ ಹೋಗುವ ಸಾಧ್ಯತೆ ಹೆಚ್ಚು. ಒಟ್ಟಾರೆಯಾಗಿ ಜಗತ್ತಿನ ಅತ್ಯುತ್ತಮ ಚುನಾವಣಾ ಮಾದರಿಗಳನ್ನು ಅಧ್ಯಯನ ಮಾಡಿ ಭಾರತಕ್ಕೆ ಸೂಕ್ತವಾದ ತನ್ನದೇ ಆದ ಮಾದರಿಯನ್ನು ಸಿದ್ಧಪಡಿಸಿ ಜಾರಿಗೊಳಿಸಿದರೆ ಭಾರತದ ಗಣತಂತ್ರ ಮತ್ತಷ್ಟು ಶಕ್ತಿಶಾಲಿ ಆಗುವುದರಲ್ಲಿ ಸಂದೇಹವೇ ಇಲ್ಲ.


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 4 =
Remember me
