ನವದೆಹಲಿ:ದೇಶದಲ್ಲಿ ಕರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಔಷಧ ತಯಾರಿಕೆಯತ್ತ ಹೆಚ್ಚಿನ ಗಮನ ನೀಡಲಾಗುವುದು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ.
ಕರೊನಾ ಔಷಧಕ್ಕೆ ಕೇಂದ್ರ ಸರ್ಕಾರವು ತುರ್ತು ಬಳಕೆಯ ಅಧಿಕಾರವನ್ನು ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ. ದೇಶದಲ್ಲಿ ತಯಾರಿಸಲಾಗುತ್ತಿರುವ ಕರೊನಾ ಔಷಧಗಳಿಗೆ ತುರ್ತು ಬಳಕೆಯ ಅಧಿಕಾರ (ಇಯುಎ) ನೀಡುವ ಚಿಂತನೆ ಮಾಡಲಾಗುತ್ತಿದೆ. ಈ ಕುರಿತಾಗಿ ಸಂಸದರ ಜತೆ ಐಸಿಎಂಆರ್ ಚರ್ಚೆ ಆರಂಭಿಸಿದೆ. ಈ ಅಧಿಕಾರ ನೀಡಿದರೆ, ಔಷಧಗಳ ಕ್ಲಿನಿಕಲ್ ಟ್ರಯಲ್ ಮುಗಿಯುವುದಕ್ಕೂ ಮೊದಲೇ ಔಷಧ ಬಳಕೆ ಮಾಡಬಹುದು. ದೇಶದಲ್ಲಿ ಪ್ರಸ್ತುತ ಮೂರು ಔಷಧಗಳು ಕ್ಲಿನಿಕಲ್ ಟ್ರಯಲ್​ನ ವಿವಿಧ ಹಂತದಲ್ಲಿವೆ. ಭಾರತ್ ಬಯೋಟೆಕ್ ಸಂಸ್ಥೆ ತಯಾರಿಸಿರುವ ಕೊವಾಕ್ಸಿನ್ ಔಷಧ ಮತ್ತು ಜೈಡಸ್ ಕ್ಯಾಡಿಲ ಸಂಸ್ಥೆ ತಯಾರಿಸಿರುವ ಔಷಧ 2ನೇ ಹಂತದ ಪ್ರಯೋಗದಲ್ಲಿವೆ. ಆಕ್ಸ್​ಫರ್ಡ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಸೇರಂ ಇನ್​ಸ್ಟಿಟ್ಯೂಟ್ ತಯಾರಿಸಿರುವ ಔಷಧವು 2 ಮತ್ತು 3ನೇ ಹಂತದ ಪ್ರಯೋಗ ಆರಂಭಿಸಿದೆ. ಸಾಮಾನ್ಯವಾಗಿ ಈ ಎರಡು ಹಂತದ ಪ್ರಯೋಗಕ್ಕೆ ಕನಿಷ್ಠ 6-9 ತಿಂಗಳ ಕಾಲಾವಕಾಶ ಬೇಕಾಗುತ್ತದೆ. ಆದರೆ ಇಎಯು ಜಾರಿಯಾದರೆ ಅತಿ ಶೀಘ್ರದಲ್ಲಿ ಔಷಧ ಬಳಕೆ ಮಾಡಲಾಗುವುದು ಎಂದು ಐಸಿಎಂಆರ್ ಮುಖ್ಯಸ್ಥ ಬಲರಾಮ್ ಭಗವಾನ್ ತಿಳಿಸಿದ್ದಾರೆ.
26 ಸ್ವಯಂಸೇವಕರಿಗೆ ಕರೊನಾ: ಆಗಸ್ಟ್ 7ರಂದು ಕೇರಳದಲ್ಲಿ ನಡೆದ ವಿಮಾನ ದುರಂತದಲ್ಲಿ ರಕ್ಷಣಾ ಕಾರ್ಯ ನಡೆಸಲು ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಿದ 26 ಜನರಿಗೆ ಕರೊನಾ ಸೋಂಕು ದೃಢವಾಗಿದೆ. ಈ ಸ್ವಯಂ ಸೇವಕರು ತಿರುವನಂತಪುರಂನಿಂದ ರಕ್ಷಣಾ ಕಾರ್ಯಕ್ಕಾಗಿ ತೆರಳಿದ್ದರು ಎನ್ನಲಾಗಿದೆ. ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಜಿಲ್ಲಾಧಿಕಾರಿ ಕೆ.ಗೋಪಾಲಕೃಷ್ಣನ್, ಪೊಲೀಸ್ ಅಧಿಕಾರಿ ಯು.ಅಬ್ದುಲ್ ಕರೀಮ್ ಸೇರಿ 21 ಅಧಿಕಾರಿಗಳಿಗೆ ಈ ಹಿಂದೆಯೇ ಸೋಂಕು ದೃಢಪಟ್ಟಿದೆ.
ದೆಹಲಿಯ ಶೇ. 29 ಮಂದಿಗೆ ಕರೊನಾ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶೇ. 29.1 ಮಂದಿ ಕರೊನಾ ಸೋಂಕಿಗೆ ತುತ್ತಾಗಿದ್ದಾರೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ರಾಜ್ಯ ಸರ್ಕಾರ, ಮೌಲಾನಾ ಆಜಾದ್ ಮೆಡಿಕಲ್ ಕಾಲೇಜಿನ ಸಹಯೋಗದೊಂದಿಗೆ ನಡೆಸಿದ ಸಮೀಕ್ಷೆಯಲ್ಲಿ ಈ ಮಾಹಿತಿ ಲಭ್ಯವಾಗಿದೆ. ಆಗಸ್ಟ್ 1ರಿಂದ 7ವರೆಗೆ ರಾಜ್ಯದ ವಿವಿಧ ಭಾಗಗಳ 15 ಸಾವಿರ ಜನರ ಪರೀಕ್ಷೆ ನಡೆಸಲಾಗಿದೆ. ದೆಹಲಿಯ ಆಗ್ನೇಯ ಜಿಲ್ಲೆಗಳಲ್ಲಿ ಶೇ. 33.2, ಉತ್ತರ ಜಿಲ್ಲೆಗಳಲ್ಲಿ ಶೇ. 31.6, ಕೇಂದ್ರ ಜಿಲ್ಲೆಯಲ್ಲಿ ಶೇ. 31.4, ಈಶಾನ್ಯ ಜಿಲ್ಲೆಗಳಲ್ಲಿ ಶೇ. 29.6, ವಾಯವ್ಯ ಜಿಲ್ಲೆಗಳಲ್ಲಿ ಶೇ. 29.6, ಪೂರ್ವ ಜಿಲ್ಲೆಗಳಲ್ಲಿ ಶೇ. 28.9 ಮತ್ತು ನೈಋತ್ಯ ಜಿಲ್ಲೆಗಳಲ್ಲಿ ಶೇ. 16.3 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆಯಾಗಿ ರಾಜ್ಯಾದ್ಯಂತ 60 ಲಕ್ಷದಷ್ಟು ಜನರು ಸೋಂಕಿಗೆ ತುತ್ತಾಗಿದ್ದಾರೆ. ಅವರಲ್ಲಿ ಬಹುತೇಕರು ರೋಗ ಲಕ್ಷಣ ಹೊಂದಿಲ್ಲ ಎಂದು ವರದಿ ತಿಳಿಸಿದೆ. ಈ ಹಿಂದೆ ಜೂನ್ ಕೊನೆಯ ವಾರ ಮತ್ತು ಜುಲೈ ಮೊದಲನೇ ವಾರದಲ್ಲಿ ಇಂಥದ್ದೇ ಸಮೀಕ್ಷೆ ಮಾಡಲಾಗಿತ್ತು. ಅದರಲ್ಲಿ ಶೇ. 23.48 ಜನರು ಸೋಂಕಿಗೆ ತುತ್ತಾಗಿರುವುದು ತಿಳಿದುಬಂದಿತ್ತು. ಅಕ್ಟೋಬರ್ ಮತ್ತು ಸೆಪ್ಟೆಂಬರ್​ನಲ್ಲಿ ಮುಂದಿನ ಹಂತದ ಸಮೀಕ್ಷೆಯನ್ನು ಮಾಡುವುದಾಗಿ ತಿಳಿಸಲಾಗಿದೆ.
ಪಂಜಾಬ್​ನಲ್ಲಿ ಮತ್ತೆ ಲಾಕ್​ಡೌನ್
ದೇಶಾದ್ಯಂತ ಲಾಕ್​ಡೌನ್ ಸಡಿಲಿಕೆ ಮಾಡಲಾಗುತ್ತಿರುವ ಸಮಯದಲ್ಲಿ ಪಂಜಾಬ್​ನಲ್ಲಿ ಮತ್ತೊಮ್ಮೆ ಲಾಕ್​ಡೌನ್ ಮಾಡುವುದಾಗಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ತಿಳಿಸಿದ್ದಾರೆ. ಪ್ರತಿದಿನ ರಾತ್ರಿ 7ರಿಂದ ಬೆಳಗ್ಗೆ 5ರವರೆಗೆ ಕಠಿಣ ಲಾಕ್​ಡೌನ್ ಜಾರಿಯಲ್ಲಿರಲಿದೆ. ವಾರಾಂತ್ಯದಲ್ಲಿ ಸಂಪೂರ್ಣ ಲಾಕ್​ಡೌನ್ ಮಾಡಲಾಗುವುದು. ರಾಜ್ಯದ 167 ನಗರಗಳಿಗೂ ಈ ನಿಯಮ ಅನ್ವಯವಾಗುತ್ತದೆ. ಆಗಸ್ಟ್ 31ರವರೆಗೆ ಎಲ್ಲ ಸಾರ್ವಜನಿಕ ಕಾರ್ಯಕ್ರಮಗಳು ನಿಷಿದ್ಧ, ಶೇ. 50 ಅಂಗಡಿಗಳು ಮಾತ್ರ ಬಾಗಿಲು ತೆರೆಯಬಹುದು, ಸಾರ್ವಜನಿಕ ಸಾರಿಗೆ ಕಾರ್ಯನಿರ್ವಹಿಸುವುದಿಲ್ಲ ಎಂದು ತಿಳಿಸಲಾಗಿದೆ. ಕರೊನಾ ವಿಚಾರದಲ್ಲಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಅವಶ್ಯಕತೆ ಇದೆ ಎಂದು ಅವರು ತಿಳಿಸಿದ್ದಾರೆ.
ಇನ್ನೆರಡು ವಾರದಲ್ಲಿ ಕರೊನಾ ಗರಿಷ್ಠ ಮಟ್ಟಕ್ಕೆ
ದೇಶದಲ್ಲಿ ಕರೊನಾ ಸೋಂಕಿನ ಗರಿಷ್ಠ ಮಟ್ಟ ಇನ್ನೆರಡು ವಾರಗಳಲ್ಲಿ ಕಾಣಿಸಬಹುದು ಎಂದು ಟೈಮ್್ಸ ಫ್ಯಾಕ್ಸ್ ಇಂಡಿಯಾ ವರದಿಯಲ್ಲಿ ತಿಳಿಸಲಾಗಿದೆ. ಈ ವರದಿಯ ಪ್ರಕಾರ ಸೆಪ್ಟೆಂಬರ್ 2ಕ್ಕೆ ಕರೊನಾ ಗರಿಷ್ಠ ಮಟ್ಟ ತಲುಪಲಿದೆ. ಆ ಅವಧಿಗೆ 7.87 ಲಕ್ಷ ಸಕ್ರಿಯ ಪ್ರಕರಣಗಳು ಬಾಕಿಯಿರಲಿವೆ. ಅದಾದ ನಂತರ ಸೋಂಕು ಕಡಿಮೆಯಾಗಲಿದ್ದು, ಡಿಸೆಂಬರ್ 3ಕ್ಕೆ ಅಂತ್ಯವಾಗಲಿದೆ ಎನ್ನಲಾಗಿದೆ. ಚೀನಾದಲ್ಲಿ ಆಹಾರ ಪದಾರ್ಥಗಳಿಂದ ಕರೊನಾ ಹರಡುತ್ತಿರುವ ಅನುಮಾನ ಹೆಚ್ಚಾಗಿದೆ. ಆಮದು ಮಾಡಿಕೊಳ್ಳಲಾಗುತ್ತಿರುವ ಆಹಾರದಲ್ಲಿ ಸೋಂಕು ಇರುವುದನ್ನು ಚೀನಾ ಪತ್ತೆ ಹಚ್ಚಿದೆ ಎನ್ನಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − thirteen =
Remember me
