ಅಂತಾರಾಷ್ಟ್ರೀಯ ವ್ಯಾಪಾರ ವಹಿವಾಟಿನಲ್ಲಿ ಅಮೆರಿಕದ ಕರೆನ್ಸಿ ಡಾಲರ್ ಪ್ರಮುಖ ಪಾತ್ರ ವಹಿಸುತ್ತದೆ. ಯಾವುದೇ ಎರಡು ರಾಷ್ಟ್ರಗಳ ನಡುವೆ ವಸ್ತುಗಳ ಖರೀದಿ- ಮಾರಾಟ ನಡೆದರೆ ಅದಕ್ಕೆ ಡಾಲರ್ ಮೂಲಕ ಹಣ ಪಾವತಿಸುವ ಪರಿಪಾಠ ಇದೆ. ಆದರೆ, ವಿದೇಶಿ ವ್ಯಾಪಾರ ವಹಿವಾಟುಗಳಲ್ಲಿ ಡಾಲರ್ ಅವಲಂಬನೆ ತಗ್ಗಿಸಲು ಭಾರತ ತನ್ನದೇ ಕರೆನ್ಸಿ, ಅಂದರೆ ರೂಪಾಯಿ ಹಾಗೂ ವಹಿವಾಟು ನಡೆಸುವ ದೇಶದ ಕರೆನ್ಸಿಗಳ ಮೂಲಕ ಪಾವತಿಸುವುದಕ್ಕೆ ಇತ್ತೀಚಿನ ದಿನಗಳಲ್ಲಿ ಒತ್ತು ನೀಡುತ್ತಿದೆ. ಈ ನಿಟ್ಟಿನಲ್ಲಿ ಕೆಲ ದಿನಗಳ ಹಿಂದೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಜತೆಗೆ ಒಪ್ಪಂದಕ್ಕೆ ಸಹಿ ಹಾಕಿದೆ.
ಭಾರತ- ಯುಎಇ ನಡುವಿನ ದ್ವಿಪಕ್ಷೀಯ ವ್ಯಾಪಾರ- ವಹಿವಾಟುಗಳನ್ನು ಇತ್ಯರ್ಥಗೊಳಿಸಲು ರೂಪಾಯಿ-ದಿರ್ಹಮ್ ವ್ಯಾಪಾರ ಕಾರ್ಯವಿಧಾನವನ್ನು ಸ್ಥಾಪಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಯುಎಇಯ ಸೆಂಟ್ರಲ್ ಬ್ಯಾಂಕ್ ಉಭಯ ದೇಶಗಳ ವೇಗದ ಪಾವತಿ ವ್ಯವಸ್ಥೆಗಳಾದ ಭಾರತದ ಯುಪಿಐ ಮತ್ತು ಯುಎಇಯ ತತ್​ಕ್ಷಣ ಪಾವತಿ ವೇದಿಕೆಯನ್ನು ಬೆಸೆಯುವ ತಿಳಿವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿವೆ.
ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಮತ್ತು ಸೆಂಟ್ರಲ್ ಬ್ಯಾಂಕ್ ಆಫ್ ಯುಎಇ (ಸಿಬಿಯುಎಇ) ಗವರ್ನರ್ ಖಲೀದ್ ಮೊಹಮದ್ ಬಾಲಾಮಾ ಅವರು ಗಡಿಯಾಚೆಗಿನ ವಹಿವಾಟುಗಳಿಗೆ ಸ್ಥಳೀಯ ಕರೆನ್ಸಿಗಳ ಬಳಕೆಯನ್ನು ಬಲಪಡಿಸಲು ಮತ್ತು ಅವುಗಳ ಪಾವತಿ ಮತ್ತು ಸಂದೇಶ ಕಳುಹಿಸಲು ಎರಡು ತಿಳಿವಳಿಕೆ ಪತ್ರಗಳಿಗೆ ಕಳೆದ ವಾರ ಸಹಿ ಹಾಕಿದ್ದಾರೆ.
ಭಾರತ ಮತ್ತು ಯುಎಇ ನಡುವಿನ ವ್ಯಾಪಾರು ವಹಿವಾಟುಗಳಿಗೆ ಹಣ ಪಾವತಿಸುವುದಕ್ಕಾಗಿ ಸ್ಥಳೀಯ ಕರೆನ್ಸಿಗಳ ಬಳಕೆಗೆ ಕಾರ್ಯವಿಧಾನವೊಂದನ್ನು ರೂಪಿಸುವ ಈ ಒಪ್ಪಂದವು ಉಭಯ ದೇಶಗಳ ನಡುವೆ ಭಾರತೀಯ ರೂಪಾಯಿ ಮತ್ತು ಯುಎಇಯ ದಿರ್ಹಮ್ ಕರೆನ್ಸಿ ಬಳಕೆಯನ್ನು ಉತ್ತೇಜಿಸಲು ವ್ಯವಸ್ಥೆಯೊಂದನ್ನು ರೂಪಿಸುವ ಗುರಿ ಹೊಂದಿದೆ ಎಂದು ಆರ್​ಬಿಐ ತಿಳಿಸಿದೆ.
ಈ ಒಪ್ಪಂದವು ಎಲ್ಲ ಚಾಲ್ತಿ ಖಾತೆ ವಹಿವಾಟುಗಳು ಮತ್ತು ಅನುಮತಿಸಲಾದ ಬಂಡವಾಳ ಖಾತೆ ವಹಿವಾಟುಗಳನ್ನು ಒಳಗೊಂಡಿದೆ ಎಂದೂ ಆರ್​ಬಿಐ ತಿಳಿಸಿದೆ.
ಅಂತಾರಾಷ್ಟ್ರೀಯ ವಹಿವಾಟುಗಳನ್ನು ಇತ್ಯರ್ಥಗೊಳಿಸಲು ರೂಪಾಯಿಯ ಬಳಕೆಯನ್ನು ಹೆಚ್ಚಿಸುವ ಭಾರತದ ಇತ್ತೀಚಿನ ಕ್ರಮಗಳ ಹಿನ್ನೆಲೆಯಲ್ಲಿಯೇ ಈ ಒಪ್ಪಂದ ಮಾಡಿಕೊಳ್ಳಲಾಗಿದೆ. ಇತರ ದೇಶಗಳೊಂದಿಗೆ ಕೂಡ ಇದೇ ರೀತಿಯ ಸ್ಥಳೀಯ ಕರೆನ್ಸಿ ವ್ಯವಸ್ಥೆಗಳನ್ನು ರೂಪಿಸಲು ಭಾರತವು ಉತ್ಸುಕವಾಗಿದೆ.
ಯುಎಇಯಿಂದ ತೈಲ ಪಡೆದುಕೊಳ್ಳುವುದಕ್ಕಾಗಿ ಭಾರತವು ಅಬುದಾಬಿ ನ್ಯಾಷನಲ್ ಆಯಿಲ್ ಕಂಪನಿಗೆ ರೂಪಾಯಿಯ ಮೂಲಕ ತನ್ನ ಮೊದಲ ಪಾವತಿ ಮಾಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಲವು ಸಮಸ್ಯೆಗಳನ್ನು ಪರಿಹರಿಸಿದ ನಂತರ ಭಾರತೀಯ ರಿಸರ್ವ್ ಬ್ಯಾಂಕ್ ಕೆಲವು ದಿನಗಳಲ್ಲಿ ರೂಪಾಯಿ ವಹಿವಾಟಿನ ಕುರಿತು ಬ್ಯಾಂಕ್​ಗಳಿಗೆ ಮಾರ್ಗದರ್ಶಿ ವಿವರಗಳನ್ನು ಬಿಡುಗಡೆ ಮಾಡುತ್ತದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.
ಜಾಗತಿಕ ವ್ಯಾಪಾರವನ್ನು ರೂಪಾಯಿಗಳಲ್ಲಿ ಇತ್ಯರ್ಥಗೊಳಿಸಲು ಕಾರ್ಯವಿಧಾನವನ್ನು ರಚಿಸುವುದಾಗಿ 2022ರ ಜುಲೈನಲ್ಲಿ ಆರ್​ಬಿಐ ಘೊಷಿಸಿದ ನಂತರ ಕಳೆದ ಒಂದು ವರ್ಷದಲ್ಲಿ ಭಾರತೀಯ ಅಧಿಕಾರಿಗಳು ಜಾಗತಿಕ ವಾಗಿ ರೂಪಾಯಿಯ ಬಳಕೆ ಯನ್ನು ಹೆಚ್ಚಿಸಲು ಪರಿಶ್ರಮಪಡುತ್ತಿದ್ದಾರೆ. ಹೀಗಿದ್ದರೂ ಭಾರತವು ರಷ್ಯಾದಿಂದ ಮಾಡಿಕೊಂಡ ತನ್ನ ಬಹುಪಾಲು ತೈಲ ಆಮದುಗಳಿಗೆ ಹಣವನ್ನು ಪಾವತಿಸಲು ಅಮೆರಿಕ ಡಾಲರ್​ಗಳನ್ನು ಬಳಸುವುದು ಮುಂದುವರಿದಿದೆ. ಆದರೂ ಒಂದಿಷ್ಟು ಹಣವನ್ನು ಮಾತ್ರ ದಿರ್ಹಾಮ್ ಚೀನಾದ ಯುವಾನ್ ಸೇರಿದಂತೆ ಇತರ ಕರೆನ್ಸಿಗಳ ರೂಪದಲ್ಲಿ ಪಾವತಿಸುವ ಮೂಲಕ ಡಾಲರ್ ಅವಲಂಬನೆಯನ್ನು ತಗ್ಗಿಸಲು ಹೆಜ್ಜೆ ಹಾಕಿದೆ.
ಭಾರತ ಮತ್ತು ಯುಎಇ ನಡುವಿನ ದ್ವಿಪಕ್ಷೀಯ ವ್ಯಾಪಾರವು 2022-23ನೇ ಹಣಕಾಸು ವರ್ಷದಲ್ಲಿ 84.5 ಶತಕೋಟಿ ಡಾಲರ್ (6,93,225 ಕೋಟಿ ರೂಪಾಯಿ) ತಲುಪಿದೆ. ತೈಲ ಸಮೃದ್ಧ ಕೊಲ್ಲಿ ರಾಷ್ಟ್ರಗಳು ತಮಗೆ ಅವಶ್ಯವಿರುವ ಆಹಾರದ ಪೈಕಿ ಶೇಕಡಾ 80-90ರಷ್ಟು ಆಮದು ಮಾಡಿಕೊಳ್ಳುತ್ತಿದ್ದು, ಆಹಾರ ಪೂರೈಕೆ ಸರಪಳಿಯನ್ನು ಭದ್ರಪಡಿಸಲು ಗಮನ ನೀಡುತ್ತವೆ. ಇದೇ ರೀತಿ ಯುಎಇ ತನ್ನ ಆಹಾರ ಅಭದ್ರತೆ ನಿಭಾಯಿಸುವ ನಿಟ್ಟಿನಲ್ಲಿ ಭಾರತದಲ್ಲಿ ಫುಡ್ ಪಾರ್ಕ್​ಗಳನ್ನು ಅಭಿವೃದ್ಧಿಪಡಿಸಲು 2 ಶತಕೋಟಿ ಡಾಲರ್ (16,407 ಕೋಟಿ ರೂಪಾಯಿ) ಹೂಡಿಕೆಯ ವಾಗ್ದಾನ ಮಾಡಿದೆ. 2030ರ ವೇಳೆಗೆ ಪೆಟ್ರೋಲಿಯಂ ಹೊರತುಪಡಿಸಿದ ದ್ವಿಪಕ್ಷೀಯ ವ್ಯಾಪಾರವನ್ನು 100 ಶತಕೋಟಿ ಡಾಲರ್​ಗೆ (8,20,385 ಕೋಟಿ ರೂಪಾಯಿ) ಹೆಚ್ಚಿಸಲು ಉಭಯ ದೇಶಗಳು ಪರಸ್ಪರ ಒಪ್ಪಿಕೊಂಡಿವೆ ಎಂದು ಭಾರತದ ವ್ಯಾಪಾರ ಸಚಿವರು ಕಳೆದ ತಿಂಗಳು ಪ್ರಕಟಿಸಿದ್ದಾರೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಶನಿವಾರ ಯುಎಇಗೆ ಒಂದು ದಿನದ ಭೇಟಿ ನೀಡಿದ ಸಂದರ್ಭದಲ್ಲಿ ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ಮಾತುಕತೆ ನಡೆಸಿದರು. ಆಗ ಗಡಿಯಾಚೆಗಿನ ಹಣ ವರ್ಗಾವಣೆಯನ್ನು ಸುಲಭಗೊಳಿಸಲು ನೈಜ-ಸಮಯದ ಪಾವತಿ ಸಂಪರ್ಕ ಸ್ಥಾಪಿಸಲು ಉಭಯ ದೇಶಗಳು ಒಪ್ಪಿಕೊಂಡಿವೆ.
ರಷ್ಯಾ-ಯೂಕ್ರೇನ್ ಯುದ್ಧ ಶುರುವಾದ ನಂತರದಲ್ಲಿ ಭಾರತವು ರಷ್ಯಾದಿಂದ ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ತೈಲ ಖರೀದಿಸುತ್ತಿದೆ. ಇದಕ್ಕೆ ಬಹುತೇಕವಾಗಿ ಡಾಲರ್ ಹೊರತುಪಡಿಸಿದ ಕರೆನ್ಸಿಗಳಲ್ಲಿ ಪಾವತಿ ಮಾಡತೊಡಗಿದೆ. ಆದರೆ, ಒಂದಿಷ್ಟು ಪ್ರಮಾಣದಲ್ಲಿ ಯುಎಇ ಕರೆನ್ಸಿಯಾಗಿರುವ ದಿರ್ಹಮ್ ಮತ್ತು ರಷ್ಯಾದ ಕರೆನ್ಸಿಯಾಗಿರುವ ರೂಬಲ್​ಗಳಲ್ಲಿ ಕೂಡ ಈ ಪಾವತಿಗಳನ್ನು ಮಾಡಿದೆ. ದುಬೈ ಮೂಲದ ಕೆಲವು ವರ್ತಕರು ಹಾಗೂ ರಷ್ಯಾದ ತೈಲ ಮಾರಾಟ ಕಂಪನಿಗಳು ಡಾಲರ್ ಹೊರತುಪಡಿಸಿದ ಬೇರೆ ಕರೆನ್ಸಿಗಳಲ್ಲಿ ಹಣ ಪಾವತಿಸುವಂತೆ ಕೇಳಿಕೊಳ್ಳುತ್ತಿರುವುದು ಇತ್ತೀಚಿನ ವಿಶಿಷ್ಟ ಬೆಳವಣಿಗೆಯಾಗಿದೆ. ಭಾರತ ಮಾತ್ರವಲ್ಲದೆ, ಬ್ರೆಜಿಲ್, ಚೀನಾ, ದಕ್ಷಿಣ ಆಫ್ರಿಕಾ ಸೇರಿದಂತೆ ಅನೇಕ ದೇಶಗಳು ಕೂಡ ರಷ್ಯಾದೊಂದಿಗಿನ ವಹಿವಾಟಿನಲ್ಲಿ ಇತರೆ ಕರೆನ್ಸಿಗಳನ್ನು ಬಳಕೆ ಮಾಡುವ ಮೂಲಕ ಡಾಲರ್ ಪ್ರಭಾವವನ್ನು ಒಂದಿಷ್ಟು ತಗ್ಗಿಸಲು ಯತ್ನಿಸುತ್ತಿವೆ.
ಮಕ್ಕಳನ್ನು ಡೌನ್​ಲೋಡ್ ಮಾಡಿಕೊಳ್ಳುವ ಕಾಲ ಬರಬಹುದಾ?; ಇದೇನಿದು ಅಪ್ಪ-ಅಮ್ಮ ಇಲ್ಲದೆ ಮಗು ಹುಟ್ಟಿಸೋ ಪ್ರಯತ್ನ!

ಎದೆಹಾಲಿನಿಂದಲೇ ಗಿನ್ನೆಸ್ ದಾಖಲೆ ಮಾಡಿದ ಮಹಾತಾಯಿ!; ಇಷ್ಟೊಂದು ಎದೆಹಾಲು ಇದುವರೆಗೆ ಯಾರೂ ಕೊಟ್ಟಿಲ್ಲ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 2 =
Remember me
