| ರಾಘವ ಶರ್ಮ ನಿಡ್ಲೆ, ನವದೆಹಲಿ
ದೆಹಲಿಯ ಏಳೂ ಲೋಕಸಭೆ ಸೀಟುಗಳನ್ನು 2014 ಮತ್ತು 2019ರ ಚುನಾವಣೆಗಳಲ್ಲಿ ಗೆದ್ದು ಕ್ಲೀನ್​ಸ್ವೀಪ್ ಮಾಡಿದ್ದ ಬಿಜೆಪಿ, ಈ ಬಾರಿ ಹ್ಯಾಟ್ರಿಕ್ ಸಾಧನೆಯ ಗುರಿ ಇಟ್ಟುಕೊಂಡಿದೆ. 2015 ಮತ್ತು 2020ರ ವಿಧಾನಸಭೆ ಚುನಾವಣೆಯಲ್ಲಿ ದೆಹಲಿ ಮತದಾರರು ಬಿಜೆಪಿ, ಕಾಂಗ್ರೆಸ್ ಎರಡೂ ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಿ ಹೊಸ ಭರವಸೆ ಮೂಡಿಸಿದ್ದ ಆಮ್ ಆದ್ಮಿ ಪಾರ್ಟಿಯನ್ನು ಆಯ್ಕೆ ಮಾಡಿದ್ದರು. ಕೇಂದ್ರಕ್ಕೆ ಬಿಜೆಪಿ, ರಾಜ್ಯಕ್ಕೆ ಆಮ್ ಆದ್ಮಿ ಎಂಬ ಮನಸ್ಥಿತಿ ಈಗಲೂ ಬಹುತೇಕ ದೆಹಲಿ ವಾಸಿಗಳಲ್ಲಿ ಇದ್ದಂತಿದೆ. ಆದರೆ, ಈಗ ಆಪ್ ಸರ್ಕಾರದ ಸಚಿವರು ಭ್ರಷ್ಟಾಚಾರ ಆರೋಪಕ್ಕೆ ಸಿಲುಕಿ ಜೈಲು ಪಾಲಾಗಿರುವುದು, ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದ ಪಕ್ಷಕ್ಕೆ ರಾಜಕೀಯ ಆಘಾತ ಉಂಟು ಮಾಡಿರುವ ಜತೆಗೆ ಸಂಘಟನೆ ಮೇಲೂ ದುಷ್ಪರಿಣಾಮ ಬೀರಿದೆ.
ದೆಹಲಿ ಅಬಕಾರಿ ಹಗರಣದಲ್ಲಿ ಈಗಾಗಲೇ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ರಾಜ್ಯಸಭೆ ಸಂಸದ ಸಂಜಯ್ ಸಿಂಗ್ ಜೈಲು ಸೇರಿದ್ದಾರೆ. ಲೋಕಸಭೆ ಚುನಾವಣೆ ಮುನ್ನ ಇಬ್ಬರಿಗೂ ಜಾಮೀನು ಸಿಗುವ ಲಕ್ಷಣಗಳಿಲ್ಲ. ಇವರಿಬ್ಬರಿಗಿಂತ ಮೊದಲು ಹಣಕಾಸು ಅವ್ಯವಹಾರ ಪ್ರಕರಣದಲ್ಲಿ ಮಾಜಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಜೈಲು ಸೇರಿದ್ದರು. ಒಟ್ಟಿನಲ್ಲಿ, ದೇಶದಲ್ಲಿ ಭ್ರಷ್ಟಾಚಾರ ಕಿತ್ತು ಹಾಕುತ್ತೇವೆ ಎಂದು ಅಧಿಕಾರಕ್ಕೆ ಬಂದ ಪಕ್ಷದ ನಾಯಕರು ಒಬ್ಬೊಬ್ಬರಾಗಿಯೇ ಹಗರಣ, ಭ್ರಷ್ಟಾಚಾರಗಳಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ. ಕೇಂದ್ರ ಸರ್ಕಾರದ ತನಿಖಾ ಏಜೆನ್ಸಿಗಳೂ ವಿಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲೇ ಹೆಚ್ಚು ಸಕ್ರಿಯತೆ ತೋರುತ್ತಿರುವುದೂ ಸಾರ್ವಜನಿಕ ಚರ್ಚೆಗೆ ಗ್ರಾಸವಾಗುತ್ತಿದೆ.
ಅಬಕಾರಿ ಹಗರಣದಲ್ಲಿ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯ ಸಿಎಂ ಅರವಿಂದ ಕೇಜ್ರಿವಾಲ್​ಗೆ 8 ಬಾರಿ ಸಮನ್ಸ್ ನೀಡಿದ್ದರೂ, ವಿಚಾರಣೆಗೆ ಕೇಜ್ರಿವಾಲ್ ಹಾಜರಾಗಿಲ್ಲ. ಬಹುಶಃ ತಮ್ಮನ್ನು ಇ.ಡಿ. ಬಂಧಿಸುವ ಸಾಧ್ಯತೆ ಮನಗಂಡೇ ಅವರು ವಿಚಾರಣೆಗೆ ತೆರಳುತ್ತಿಲ್ಲ ಎನ್ನಲಾಗಿದೆ. ಸಮನ್ಸ್ ಉಲ್ಲಂಘಿಸಿರುವುದು ಕೋರ್ಟ್ ಮೆಟ್ಟಿಲೇರಿದ್ದು, ಕೇಜ್ರಿವಾಲ್ ಯಾವಾಗ ಬೇಕಾದರೂ ಬಂಧನಕ್ಕೀಡಾಗಬಹುದು. ಲೋಕಸಭೆ ಚುನಾವಣೆಯಲ್ಲಿ 3-4 ಸೀಟುಗಳನ್ನಾದರೂ ಗೆಲ್ಲಬೇಕೆಂದಿದ್ದ ಆಮ್ ಆದ್ಮಿ ಪಾರ್ಟಿಗೆ, ಪಕ್ಷದ ಮುಖ್ಯಸ್ಥರೇ ಜೈಲು ಪಾಲಾಗುವುದು ಚುನಾವಣೆ ಪ್ರಚಾರ ಕಾರ್ಯಕ್ಕೆ ಹಾನಿ ಮಾಡಲಿದೆ. ದೆಹಲಿ ಜತೆಗೆ ಹರಿಯಾಣ, ಗೋವಾ, ಪಂಜಾಬ್ ಸೇರಿ ಹಲವು ರಾಜ್ಯಗಳಲ್ಲಿ ಕೇಜ್ರಿವಾಲ್ ಪ್ರಚಾರ ಮಾಡಬೇಕು. ಆದರೆ, ಅಬಕಾರಿ ಹಗರಣ ಆಪ್ ನಾಯಕರನ್ನು ಅಹರ್ನಿಶಿ ಕಾಡುತ್ತಿರುವುದರಿಂದ, ಆಪ್​ಗೆ ಕಾಂಗ್ರೆಸ್ ಜತೆ ಕೈಜೋಡಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಮೇಲಾಗಿ, ದೆಹಲಿಯಲ್ಲಿ ಕಾಂಗ್ರೆಸ್, ಆಮ್ ಆದ್ಮಿ ಪಾರ್ಟಿ ಪ್ರತ್ಯೇಕವಾಗಿ ಸ್ಪರ್ಧಿಸಿದರೆ, ಮತ ವಿಭಜನೆಯಿಂದ ಬಿಜೆಪಿಗೆ ಲಾಭವಾಗಿ, ಏಳಕ್ಕೆ ಏಳೂ ಸೀಟುಗಳನ್ನು ಗೆಲ್ಲಬಹುದು. ಹೀಗಾಗಿ, ಹಾವು-ಮುಂಗುಸಿಗಳಂತೆ ಕಚ್ಚಾಡುತ್ತಿದ್ದ ಆಪ್-ಕಾಂಗ್ರೆಸ್, ಮೊದಲ ಬಾರಿ ದೋಸ್ತಿಗಳಂತೆ ಚುನಾವಣಾ ಕಣಕ್ಕೆ ಧುಮುಕುತ್ತಿದ್ದಾರೆ. ದೆಹಲಿಯ 4 ಕ್ಷೇತ್ರಗಳಲ್ಲಿ ಆಪ್ ಮತ್ತು ಉಳಿದ ಮೂರರಲ್ಲಿ ಕಾಂಗ್ರೆಸ್ ಸ್ಪರ್ಧಿಸಲು ತೀರ್ವನವಾಗಿದೆ. ಬಿಜೆಪಿಗೆ ಕಡಿವಾಣ ಹಾಕಲು ವೈರತ್ವ ಮರೆತು ಒಗ್ಗೂಡಬೇಕು ಎಂಬುದನ್ನು ಎರಡೂ ಪಕ್ಷಗಳು ಒಪ್ಪಿಕೊಂಡಿವೆ.
ನಾವಿಕನಿಲ್ಲದ ದೋಣಿ…: 2014ರ ಲೋಕಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಬಳಿಕ ದೆಹಲಿಯಲ್ಲಿ ಕಾಂಗ್ರೆಸ್ ಸಂಪೂರ್ಣ ಪತನ ಕಂಡಿದೆ. ಬಲವಿಲ್ಲದ ಸಂಘಟನೆ, ದಕ್ಷ, ವರ್ಚಸ್ವೀ ನಾಯಕತ್ವದ ಕೊರತೆ ಮತ್ತು ಆಮ್ ಆದ್ಮಿ ಪಾರ್ಟಿಯ ರಾಜಕೀಯ ನಾಗಾಲೋಟದಿಂದಾಗಿ ಕಾಂಗ್ರೆಸ್ ಗತವೈಭವ ಕಳೆದುಹೋಗಿದೆ. 10 ವರ್ಷ ಕಳೆದರೂ ರಾಜಧಾನಿಯಲ್ಲಿ ತೆವಳುತ್ತ ಹೆಜ್ಜೆ ಹಾಕುತ್ತಿರುವ ಪಕ್ಷಕ್ಕೆ ರಾಷ್ಟ್ರಮಟ್ಟದಲ್ಲೂ ಜನಮನ ಗೆಲ್ಲುವ ನಾಯಕನಿಲ್ಲ. 1998, 2003 ಮತ್ತು 2008ರ ವಿಧಾನಸಭೆ ಚುನಾವಣೆಗಳಲ್ಲಿ ಗೆಲುವು ಸಾಧಿಸಿ ಹ್ಯಾಟ್ರಿಕ್ ಸಾಧನೆ ಮಾಡಿದ್ದ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಈಗಿಲ್ಲ. ದೆಹಲಿಯ ಚಹರೆಯನ್ನೇ ಬದಲಿಸಿದ್ದ ಶೀಲಾ, ರಾಜಧಾನಿಗೆ ಹೊಸ ಮೆರುಗನ್ನು ತಂದಿದ್ದರು. ಆದರೆ ಶೀಲಾ ಎದುರಿಸಿದ ಜನವಿರೋಧಿ ಅಲೆ ಮತ್ತು ಕಾಂಗ್ರೆಸ್ ಮೈಗಂಟಿದ್ದ ಭ್ರಷ್ಟಾಚಾರದ ಕಳಂಕಗಳು, ಆಮ್ ಆದ್ಮಿ ಪಾರ್ಟಿಯ ಹುಟ್ಟಿಗೆ ಕಾರಣವಾಯಿತು. ಬಹುಶಃ ಬಿಜೆಪಿ, ಕಾಂಗ್ರೆಸ್ ಹೊರತುಪಡಿಸಿದ ಪಕ್ಷವೊಂದು ದೆಹಲಿಯಲ್ಲಿ ಹುಟ್ಟಿಕೊಳ್ಳುವ ಕುರಿತ ಕಲ್ಪನೆ ಎರಡೂ ಪಕ್ಷಗಳಿಗಿರಲಿಲ್ಲ. ಆದರೆ, 2013, 2015ರಲ್ಲಿ ನಡೆದದ್ದು ಬೇರೆಯೇ. 2013ರ ಸೋಲಿನ ಬಳಿಕವೂ ದೀಕ್ಷಿತ್, ಅಜಯ್ ಮಾಕೇನ್ ದೆಹಲಿ ಕಾಂಗ್ರೆಸ್ ಮರುಸಂಘಟಿಸುವ ಸಾಹಸ ಮಾಡಿದ್ದರು. ಆದರೆ, ಹೆಚ್ಚಿನ ಪ್ರಯೋಜನಗಳಾಗಲಿಲ್ಲ. 2015ರಲ್ಲಿ ಕೇಜ್ರಿವಾಲ್ 67 ಸೀಟುಗಳನ್ನು ಗೆದ್ದು ದಿಗ್ವಿಜಯ ಸಾಧಿಸಿ 5 ವರ್ಷಗಳ ಜನಸ್ನೇಹಿ ಸರ್ಕಾರ ನೀಡಿದರು. ಇದಾಗಿ, 5 ವರ್ಷಗಳ ಬಳಿಕವೂ ದೆಹಲಿ, ಆಮ್ ಆದ್ಮಿಯನ್ನೇ ಆಯ್ಕೆ ಮಾಡಿ, 62 ಸೀಟು ಗೆಲ್ಲುವಂತೆ ಮಾಡಿತು. ಬಿಜೆಪಿ, 8 ಸೀಟುಗಳನ್ನು ಗೆದ್ದು ಸುಧಾರಿತ ನಿರ್ವಹಣೆ ತೋರಿತು. 2015ರಲ್ಲಿ ವಿಪಕ್ಷದಲ್ಲಿ ಕೂರಲೂ ಅರ್ಹತೆ ಪಡೆಯದ ಕಾಂಗ್ರೆಸ್ಸಿಗರು, 2020ರಲ್ಲಿ ಮಾಜಿ ಸಿಎಂ ಶೀಲಾ ದೀಕ್ಷಿತ್ ಬಳುವಳಿ ಹೆಸರಲ್ಲಿ ಮತ ಕೇಳಿದರು. ಲೋಕಸಭೆಗೆ ರಾಹುಲ್ ಗಾಂಧಿ ನಾಯಕತ್ವ ದೆಹಲಿ ವಾಸಿಗರ ವಿಶ್ವಾಸಕ್ಕೆ ಪಾತ್ರವಾಗಲಿಲ್ಲ.
2019ರಲ್ಲಿ ಮತಗಳಿಕೆ ಹೆಚ್ಚಳ:2014ರ ಲೋಕಸಭೆ ಫಲಿತಾಂಶಕ್ಕೆ ಹೋಲಿಸಿದರೆ 2019ರಲ್ಲಿ ಕಾಂಗ್ರೆಸ್, ತನ್ನ ಮತಗಳಿಕೆ ಪ್ರಮಾಣ ಹೆಚ್ಚಿಸಿಕೊಂಡಿತು. ಅಂದರೆ, ದೆಹಲಿ ಮತದಾರರು ಲೋಕಸಭೆಗೆ ಆಪ್​ಗಿಂತ ಕಾಂಗ್ರೆಸ್​ನ್ನು ನೆಚ್ಚಿಕೊಳ್ಳುತ್ತಾರೆ ಎನ್ನುವುದನ್ನು 2019ರ ಫಲಿತಾಂಶ ತೋರಿಸಿತು. ಆದರೆ, ವಿಧಾನಸಭೆಗೆ ಮಾತ್ರ ಸದ್ಯಕ್ಕೆ ಆಮ್ ಆದ್ಮಿಯೇ ಮೊದಲ ಆಯ್ಕೆ.
ಮೋದಿ ಮೇಲೆ ಅವಲಂಬಿತ:ಹಾಗೆ ನೋಡಿದರೆ ದೆಹಲಿ ಬಿಜೆಪಿಯಲ್ಲೂ ಸಮರ್ಥ ನಾಯಕನಿಲ್ಲ. ಬಿಹಾರ, ಪೂರ್ವ ಉತ್ತರಪ್ರದೇಶದ ವಲಸಿಗ ಮತಗಳನ್ನು ಗಮನದಲ್ಲಿಟ್ಟುಕೊಂಡು ಹಿಂದೆ ಸಂಸದ ಮನೋಜ್ ತಿವಾರಿಗೆ ಅಧ್ಯಕ್ಷ ಹುದ್ದೆ ನೀಡಲಾಗಿತ್ತಾದರೂ, ಹೆಚ್ಚು ಪರಿಣಾಮ ಬೀರಲಿಲ್ಲ. ಈಗ ದೆಹಲಿ ಬಿಜೆಪಿ ಮುಖಂಡ ವೀರೇಂದ್ರ ಸಚ್​ದೇವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಕಳೆದೆರಡು ಲೋಕಸಭೆಗಳಲ್ಲಿ ಬಿಜೆಪಿಗೆ 7 ಸೀಟು ಬಂದಿರುವುದು ಮೋದಿ ಜನಪ್ರಿಯತೆಯ ಬಲದಿಂದಲೇ. ಈ ಬಾರಿಯೂ ದೆಹಲಿ ಘಟಕ ಮೋದಿ ನಾಯಕತ್ವವನ್ನೇ ಅವಲಂಬಿಸಿದೆ. ದೆಹಲಿಯ ಬಹುಪಾಲು ಮುಸ್ಲಿಂ ಮತದಾರರು ಕಳೆದೆರೆಡು ವಿಧಾನಸಭೆ ಚುನಾವಣೆಯಲ್ಲಿ ಆಪ್​ನ್ನು ಬೆಂಬಲಿಸಿದ್ದಾರೆ. ಆದರೆ, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಿರುವುದರಿಂದ ಆಪ್​ಗೆ ಖಾತೆ ತೆರೆಯಲು ಸಾಧ್ಯವಾಗಿಲ್ಲ. ಈ ಚುನಾವಣೆಯಲ್ಲಿ ಆಪ್-ಕಾಂಗ್ರೆಸ್ ಮೈತ್ರಿ ಪರಿಣಾಮ ಮುಸ್ಲಿಂ ಮತಗಳು ನಿರ್ಣಾಯಕ ಪಾತ್ರವಹಿಸಲಿದ್ದು, ಬಿಜೆಪಿಗೆ ಕೆಲವು ಸೀಟುಗಳಲ್ಲಿ ಪ್ರಬಲ ಸವಾಲು ಎದುರಾಗುವ ಲಕ್ಷಣಗಳಿವೆ.
ಲವ್ಲಿ ಅಧ್ಯಕ್ಷ:ಲೋಕಸಭೆ ಚುನಾವಣೆ ಮುನ್ನ ಸಂಘಟನೆ ಬಲಗೊಳಿಸುವ ಸಲುವಾಗಿ ಶೀಲಾ ಸರ್ಕಾರದಲ್ಲಿ ಸಚಿವರಾಗಿದ್ದ ಅರವಿಂದರ್ ಸಿಂಗ್ ಲವ್ಲಿಯವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಕಳೆದ ವರ್ಷ ನೇಮಿಸಲಾಯಿತು. ಆಂತರಿಕ ಗುಂಪುಗಾರಿಕೆಯಿಂದ ಬೇಸತ್ತಿದ್ದ ಲವ್ಲಿ, 2017ರಲ್ಲಿ ಬಿಜೆಪಿ ಸೇರಿದ್ದರು. ಆದರೆ, ಬಿಜೆಪಿ ಸೇರಿದ ಒಂದೇ ವರ್ಷದಲ್ಲಿ ಮತ್ತೆ ಮಾತೃಪಕ್ಷಕ್ಕೆ ವಾಪಸಾದರು. ಆಪ್-ಕಾಂಗ್ರೆಸ್ ಮೈತ್ರಿ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಒಮ್ಮತವಿಲ್ಲದಿದ್ದರೂ, ದೊಡ್ಡ ಶತ್ರುವನ್ನು ಮಟ್ಟಹಾಕಲು ಹಳೆಯ ಶತ್ರುಗಳು ಒಂದಾಗ ಬೇಕಾದ್ದು ರಾಜಕೀಯ ಅನಿವಾರ್ಯತೆ. ಹೀಗಾಗಿ, ಕಾರ್ಯಕರ್ತರನ್ನು ಮಾನಸಿಕವಾಗಿ ಸಿದ್ಧಗೊಳಿಸುವ ಕೆಲಸಕ್ಕೆ ಲವ್ಲಿ ಈಗಾಗಲೇ ಚಾಲನೆ ನೀಡಿದ್ದಾರೆ.
ಹಿಮಾಚಲದಲ್ಲಿ ಕಾಂಗ್ರೆಸ್​ ಶಾಸಕರಿಂದ ಅಡ್ಡಮತದಾನ ಮಾಡಿದ್ದೇಕೆ? ಅಸಲಿ ಕಾರಣ ಹೇಳಿದ ಕೇಂದ್ರ ಸಚಿವ ಅನುರಾಗ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 7 =
Remember me
