ನವದೆಹಲಿ:ಭಾರಿ ಭದ್ರತಾ ಲೋಪದಿಂದಾಗಿ ದೇಶದ ಕರಾಳ ಇತಿಹಾಸಕ್ಕೆ ಹೊಸ ಸಂಸತ್​ ಭವನವೂ ಕೂಡ ಸೇರಿಕೊಂಡಿದೆ. ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ ನಿನ್ನೆ (ಡಿ.13) ಇಬ್ಬರು ಆಗಂತುಕರು ಸಂಸತ್ತಿನ ಒಳಗೆ ನುಗ್ಗಿ, ಹೊಗೆ ಡಬ್ಬಿಗಳನ್ನು ಸಿಡಿಸಿ, ಅಲ್ಲೋಲ-ಕಲ್ಲೋಲವನ್ನೇ ಸೃಷ್ಟಿಸಿದರು. ಈ ಪ್ರಕರಣದಲ್ಲಿ ಪ್ರಮುಖ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಇಂದು ಕೋರ್ಟ್​ ಮುಂದೆ ಹಾಜರುಪಡಿಸಲಾಗುತ್ತದೆ.
ಬಂಧಿತ ನಾಲ್ವರಲ್ಲಿ ಸಾಗರ್​ ಶರ್ಮ ಮತ್ತು ಮನೋರಂಜನ್​ ಡಿ ಹಳದಿ ಬಣ್ಣ ಹೊರ ಸೂಸುವ ಹೊಗೆ ಡಬ್ಬಿ ಅಥವಾ ಕ್ಯಾನಿಸ್ಟರ್​ಗಳನ್ನು ಸಿಡಿಸಿ, ಸಂಸತ್ತಿನ ಒಳಗೆ ಗದ್ದಲ ಉಂಟು ಮಾಡುವ ಮೂಲಕ ಆತಂಕವನ್ನು ಸೃಷ್ಟಿಸಿದರು. ಅದೇ ಸಮಯದಲ್ಲಿ ಇನ್ನಿಬ್ಬರು ಆರೋಪಿಗಳಾದ ನೀಲಂ ದೇವಿ ಮತ್ತು ಅಮೋಲ್​ ಶಿಂಧೆ ಸಂಸತ್ತಿನ ಹೊರಭಾಗದಲ್ಲಿ ಹಳದಿ ಮತ್ತು ಕೆಂಪು ಬಣ್ಣದ ಕ್ಯಾನಿಸ್ಟರ್​ಗಳನ್ನು ಸ್ಫೋಟಿಸಿ, ಸರ್ಕಾರಿ ವಿರೋಧಿ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದರು. ಇದೀಗ ಎಲ್ಲರ ಆರೋಪಿಗಳ ಸಂಪೂರ್ಣ ಜಾತಕ ಬಯಲಾಗಿದೆ. ಇನ್ನು ಈ ಪ್ರಕರಣದಲ್ಲಿ ವಿಕ್ಕಿ ಶರ್ಮ ಮತ್ತು ಲಲಿತ್​ ಜಾ ಕೂಡ ಭಾಗಿಯಾಗಿದ್ದಾರೆ. ಆದರೆ, ಕೃತ್ಯ ಎಸಗಿದ್ದು ಮಾತ್ರ ಈ ನಾಲ್ವರು.
ಎಲ್ಲ ಆರೋಪಿಗಳು 20 ರಿಂದ 30 ವಯಸ್ಸಿನ ನಡುವಿನವರು. ಸಾಗರ್ ಶರ್ಮಾ, ನೀಲಂ ಆಜಾದ್, ಮನೋರಂಜನ್ ಡಿ, ಅಮೋಲ್ ಶಿಂಧೆ, ವಿಕ್ಕಿ ಶರ್ಮಾ ಮತ್ತು ಲಲಿತ್ ಜಾ ನಡುವೆ ಯಾವುದೇ ಕಾಮನ್​ ಥ್ರೆಡ್​ ಇಲ್ಲ ಎಂದು ತೋರುತ್ತದೆ. ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿರುವ ತನಿಖಾ ಸಂಸ್ಥೆಗಳು ಹೆಚ್ಚೆಚ್ಚು ಮಾಹಿತಿಗಳನ್ನು ಕಲೆಹಾಕುತ್ತಿವೆ. ಭಗತ್​ ಸಿಂಗ್​ ಫ್ಯಾನ್​ ಕ್ಲಬ್​ ಹೆಸರಿನಲ್ಲಿ ಎಲ್ಲ ಆರೋಪಿಗಳು ಸಾಮಾಜಿಕ ಜಾಲತಾಣ ಮೂಲಕ ಸಂಪರ್ಕ ಹೊಂದಿದ್ದರು ಎಂದು ತಿಳಿದುಬಂದಿದೆ. ಸಾಕಷ್ಟು ಪ್ರಯತ್ನಗಳನ್ನು ಮಾಡಿಯೂ ಕೆಲಸ ಪಡೆಯುವಲ್ಲಿ ನೀಲಂ ಅಜಾದ್​ ಮತ್ತು ಅಮೋಲ್​ ಶಿಂಧೆ ವಿಫಲರಾಗಿದ್ದರು ಎಂದು ತಿಳಿದುಬಂದಿದೆ.
ಆರೋಪಿಗಳ ಉದ್ದೇಶವೇನು?ದೇಶದಲ್ಲಿನ ನಿರುದ್ಯೋಗ, ಹಣದುಬ್ಬರ ಮತ್ತು ಮಣಿಪುರದ ಹಿಂಸಾಚಾರದಂತಹ ಸಮಸ್ಯೆಗಳನ್ನು ಎತ್ತಿ ತೋರಿಸಲು ಮತ್ತು ಅವುಗಳನ್ನು ಸಂಸತ್ತಿನಲ್ಲಿ ಚರ್ಚಿಸುವುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ನಾವೆಲ್ಲರೂ ಸೇರಿ ಸಂಸತ್ತಿನ ಒಳಗೆ ನುಗ್ಗುವ ಸಂಚು ರೂಪಿಸಿದೆವು ಎಂದು ಆರೋಪಿಗಳು ತನಿಖಾಧಿಕಾರಿಗಳ ಮುಂದೆ ಹೇಳಿಕೊಂಡಿದ್ದಾರೆ.
ರಿಕ್ಷಾ ಚಾಲಕನಿನ್ನೆ ಸಂದರ್ಶಕರ ಗ್ಯಾಲರಿಯಿಂದ ಲೋಕಸಭೆಯ ಚೇಂಬರ್‌ಗೆ ಜಿಗಿದ ಇಬ್ಬರು ಆಗಂತುಕರಲ್ಲಿ 27 ವರ್ಷದ ಸಾಗರ್ ಶರ್ಮಾ ದೆಹಲಿಯಲ್ಲಿ ಜನಿಸಿ, ತನ್ನ ಹೆತ್ತವರು ಮತ್ತು ತಂಗಿಯೊಂದಿಗೆ ಲಖನೌದಲ್ಲಿ ವಾಸಿಸುತ್ತಿದ್ದನು. ವರದಿಗಳ ಪ್ರಕಾರ ಸಾಗರ್​ ಶರ್ಮ ತನ್ನ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಮತ್ತು ಮಾರ್ಕ್ಸ್‌ವಾದಿ ಕ್ರಾಂತಿಕಾರಿ ಚೆಗುವೇರಾ ಅವರನ್ನು ಸಾಕಷ್ಟು ಬಾರಿ ಉಲ್ಲೇಖಿಸಿದ್ದಾರೆ. ನಿನ್ನೆ ನಡೆದ ಘಟನೆಗೆ ಸಂಬಂಧಿಸಿ ವಿಡಿಯೋಗಳಲ್ಲಿ ಶರ್ಮಾ, ಡೆಸ್ಕ್‌ಗಳ ಮೇಲೆ ಜಿಗಿಯುವುದನ್ನು ಕಾಣಬಹುದು. ಶೂನಲ್ಲಿ ಅಡಗಿಸಿಟ್ಟಿದ್ದ ಹಳದಿ ಹೊಗೆಯ ಡಬ್ಬಿಯನ್ನು ತೆಗೆದು ಅದನ್ನು ಸ್ಫೋಟಿಸಿ ಸ್ಪೀಕರ್ ಕುರ್ಚಿಯತ್ತ ಓಡಲು ಪ್ರಯತ್ನಿಸಿದನು. ಆದರೆ, ಕೆಲ ಸಂಸದರು ಆತನನ್ನು ಹಿಡಿದು, ಹಿಗ್ಗಾಮುಗ್ಗಾ ಥಳಿಸಿ, ಭದ್ರತಾ ಸಿಬ್ಬಂದಿಗೆ ಹಸ್ತಾಂತರಿಸಿದರು. ಆರೋಪಿ ಶರ್ಮ ಭಾನುವಾರ ದೆಹಲಿಗೆ ತಲುಪುವ ಮೊದಲು, ಪ್ರತಿಭಟನೆ ಒಂದರಲ್ಲಿ ಭಾಗವಹಿಸಲು ರಾಜಧಾನಿಗೆ ಹೋಗುತ್ತಿರುವುದಾಗಿ ತಮ್ಮ ಕುಟುಂಬ ಸದಸ್ಯರಿಗೆ ತಿಳಿಸಿದ್ದರು ಎಂದು ಹೇಳಲಾಗಿದೆ.
ಇಂಜಿನಿಯರ್​ ಮನೋರಂಜನ್​ಮತ್ತೊಬ್ಬ ಆರೋಪಿಯ ಹೆಸರು ಮನೋರಂಜನ್​. ಈತ ಮೈಸೂರು ಮೂಲದವನು. ಕಂಪ್ಯೂಟರ್​ ಸೈನ್ಸ್​ನಲ್ಲಿ ಬ್ಯಾಚುಲರ್​ ಡಿಗ್ರಿ ಮಾಡಿದ್ದಾರೆ. 34 ವರ್ಷದ ಮನೋರಂಜನ್​ ಕೂಡ ಶರ್ಮಾ ಬಳಿಕ ಹಳದಿ ಬಣ್ಣದ ಡಬ್ಬಿ ಹಿಡಿದು ಲೋಕಸಭಾ ಸ್ಪೀಕರ್​ ಕುರ್ಚಿಯ ಕಡೆಗೆ ಓಡಲು ಯತ್ನಿಸಿದನು. ವಿದ್ಯಾಭ್ಯಾಸ ಮುಗಿಸಿದ ಬಳಿಕ ಇಂಜಿನಿಯರ್​ ಆಗಿ ಕೆಲಸ ಮಾಡುತ್ತಿದ್ದನು. ಆತನ ತಂದೆ ದೇವರಾಜೆ ಗೌಡ, ಮಗನ ಕೃತ್ಯವನ್ನು ಖಂಡಿಸಿದ್ದಾರೆ. ಅಲ್ಲದೆ, ಆತ ಏನಾದರೂ ತಪ್ಪು ಮಾಡಿದ್ದರೆ ಗಲ್ಲಿಗೇರಿಸಿ ಎಂದು ಹೇಳಿದ್ದಾರೆ. ಸಂಸತ್ತು ನಮ್ಮದು. ಮಹಾತ್ಮ ಗಾಂಧಿಯವರಿಂದ ಹಿಡಿದು ಜವಾಹರಲಾಲ್ ನೆಹರೂವರೆಗೆ ಅನೇಕ ಜನರು ಆ ಮಂದಿರವನ್ನು ಕಟ್ಟಿದ್ದಾರೆ. ನನ್ನ ಮಗನಾದರೂ ಸರಿ ಪವಿತ್ರ ಸ್ಥಳದ ವಿಚಾರಲ್ಲಿ ಯಾರೂ ಕೂಡ ಈ ರೀತಿ ವರ್ತಿಸುವುದು ಸ್ವೀಕಾರಾರ್ಹವಲ್ಲ ಎಂದಿದ್ದಾರೆ.
ಅಂದಹಾಗೆ ಮನೋರಂಜನ್ ಮತ್ತು ಸಾಗರ್​ ಶರ್ಮಾ ಅವರ ಬಳಿಯಿರುವ ಪಾಸ್‌ಗಳನ್ನು ಮೈಸೂರಿನ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ಕಚೇರಿಯಿಂದ ನೀಡಲಾಗಿದೆ.
ಶಿಕ್ಷಕಿಯಿಂದ ಪ್ರತಿಭಟನೆಸಂಸತ್ತಿನ ಹೊರಗಡೆ ಕಲರ್​ ಗ್ಯಾಸ್​ ಸಿಂಪಡಿಸಿ ಸರ್ಕಾರಿ ವಿರೋಧಿ ಘೋಷಣೆ ಕೂಗುತ್ತಿದ್ದ ನೀಲಂ ಅಜಾದ್​ ಎಂಬಾಕೆ, ಹರಿಯಾಣದ ಹಿಸರ್​ನಲ್ಲಿ ಪಿಜಿಯಲ್ಲಿ ವಾಸವಿದ್ದಳು. ಎಂ.ಫಿಲ್​ ಡಿಗ್ರಿ ಮುಗಿಸಿರುವ ನೀಲಂ, ಬೋಧಕ ಹುದ್ದೆ ಪಡೆಯಲು ಅಗತ್ಯವಿರುವ ರಾಷ್ಟ್ರೀಯ ಅರ್ಹತಾ ಪರೀಕ್ಷೆಯನ್ನೂ ತೇರ್ಗಡೆ ಹೊಂದಿದ್ದರು. ಸಂಸತ್ತಿನ ಹೊರಗೆ ಹಳದಿ ಬಣ್ಣದ ಕ್ಯಾನಿಸ್ಟರ್​ ಸಿಡಿಸಿ, ಸರ್ವಾಧಿಕಾರ ಮತ್ತು ಮಹಿಳೆಯರ ಮೇಲಿನ ಅಪರಾಧಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದರು.
ಇನ್ನೂ 2021ರಲ್ಲಿ ರದ್ದುಪಡಿಸಲಾದ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರು ವರ್ಷವಿಡೀ ನಡೆಸಿದ ಪ್ರತಿಭಟನೆ ಮತ್ತು ಈ ವರ್ಷ ನಡೆದ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಸ್ಥಾನಮಾನಕ್ಕೆ ಒತ್ತಾಯಿಸುವ ಪ್ರತಿಭಟನೆಯಲ್ಲಿಯೂ ನೀಲಂ ಅಜಾದ್​ ಭಾಗವಹಿಸಿದ್ದರು. ಇಷ್ಟೇ ಅಲ್ಲದೆ, ಈ ವರ್ಷದ ಆರಂಭದಲ್ಲಿ ಆಗಿನ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ಆರೋಪ ಮಾಡಿ ಅವರು ವಿರುದ್ಧ ಕುಸ್ತಿಪಟುಗಳು ನಡೆಸಿದ ಪ್ರತಿಭಟನೆಯಲ್ಲಿಯೂ ನೀಲಂ ಭಾಗವಾಗಿದ್ದರು ಎಂದು ವರದಿಯಾಗಿದೆ.
ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದ ನೀಲಂ ಉದ್ಯೋಗಕ್ಕೆ ತುಂಬಾ ಅರ್ಹಳಾಗಿದ್ದಳು. ಆದರೆ, ಕೆಲಸ ಸಿಗುತ್ತಿರಲಿಲ್ಲ. ಇದರಿಂದಾಗಿ ತುಂಬಾ ಒತ್ತಡಕ್ಕೆ ಒಳಗಾಗಿದ್ದಳು. ತುಂಬಾ ಓದಿದರೂ ಎರಡು ಹೊತ್ತಿನ ಊಟಕ್ಕೆ ಸಾಕಾಗುವಷ್ಟು ಸಂಪಾದಿಸಲು ಸಾಧ್ಯವಾಗದ ಕಾರಣ ಸಾಯಬೇಕು ಎಂದು ಆಗಾಗ ಹೇಳುತ್ತಿದ್ದಳು ಎಂದು ಅವರ ತಾಯಿ ಸರಸ್ವತಿ ಸುದ್ದಿಗಾರರಿಗೆ ತಿಳಿಸಿದರು. ಬಿಎ, ಎಂಎ ಮತ್ತು ಎಂಫಿಲ್ ಮುಗಿಸಿ ಎನ್​ಇಟಿ ತೇರ್ಗಡೆ ಹೊಂದಿದ್ದರೂ ಇನ್ನೂ ನಿರುದ್ಯೋಗಿಯಾಗಿದ್ದ ಆಕೆ ಆರು ತಿಂಗಳ ಹಿಂದೆ ಜಿಂದ್‌ಗೆ ತೆರಳಿ ಮಾಧ್ಯಮಿಕ ಶಿಕ್ಷಕರ ಅರ್ಹತಾ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಳು ಎಂದು ಆಕೆಯ ಸಹೋದರ ಹೇಳಿದ್ದಾರೆ.
ಸೇನಾ ಆಕಾಂಕ್ಷಿಮತ್ತೊಬ್ಬ ಆರೋಪಿ ಅಮೋಲ್ ಶಿಂಧೆ, ನೀಲಂ ಆಜಾದ್ ಜತೆ ಸೇರಿ ಸಂಸತ್ತಿನ ಹೊರಗೆ ಹಳದಿ ಬಣ್ಣದ ಡಬ್ಬಿಗಳನ್ನು ಸಿಡಿಸಿ, ಘೋಷಣೆಗಳನ್ನು ಕೂಗಿದರು. ಈತ ಮಹಾರಾಷ್ಟ್ರದ ಲಾತೂರ್‌ನ ಹಳ್ಳಿಯೊಂದರ ನಿವಾಸಿ. 25 ವರ್ಷದ ಅಮೋಲ್​, ರೈತನ ಮಗನಾಗಿದ್ದು, ಸಾಕಷ್ಟು ಪ್ರಯತ್ನಗಳ ಹೊರತಾಗಿಯೂ ಪೊಲೀಸ್ ಮತ್ತು ಸೇನಾ ನೇಮಕಾತಿ ಪರೀಕ್ಷೆಗಳಲ್ಲಿ ತೇರ್ಗಡೆಯಾಗಲು ವಿಫಲನಾಗಿದ್ದ. ಡಿಸೆಂಬರ್ 9ರಂದು ಪೊಲೀಸ್ ನೇಮಕಾತಿ ಪರೀಕ್ಷೆಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟು ಬಂದಿದ್ದ. ಅಮೋಲ್​, ಚೆನ್ನಾಗಿ ಓಡುತ್ತಿದ್ದ ಮತ್ತು ಪೊಲೀಸ್ ಅಥವಾ ಸೈನ್ಯಕ್ಕೆ ಸೇರಲು ಬಯಸಿದ್ದ. ಅವನು ಸಂಸತ್ತಿನಲ್ಲಿ ಏನು ಮಾಡಿದ್ದಾನೆಂದು ನಮಗೆ ತಿಳಿದಿಲ್ಲ. ನಾವು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಪೊಲೀಸರು ಸಹ ನಮ್ಮೊಂದಿಗೆ ಮಾತನಾಡಿದ್ದಾರೆ. ಆದರೆ, ನಮಗೆ ಏನೂ ತಿಳಿದಿಲ್ಲ ಎಂದು ಹೇಳಿದ್ದೇವೆ ಎಂದು ಅಮೋಲ್​ ತಂದೆ ತಿಳಿಸಿದ್ದಾರೆ.
ನಾಲ್ವರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್​ಗಳನ್ನು ಹೊರತುಪಡಿಸಿ, ಭಯೋತ್ಪಾದನಾ ವಿರೋಧಿ ಕಾನೂನು, ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಇಂದು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ. ಈ ನಾಲ್ವರಲ್ಲದೆ, ಇನ್ನಿಬ್ಬರು ಆರೋಪಿಗಳಾದ ಲಲಿತ್​ ಜಾ ಮತ್ತು ವಿಕ್ಕಿ ಶರ್ಮ ಕೂಡ ಸಂಚಿನ ಭಾಗವಾಗಿದ್ದಾರೆ. ಈ ಇಬ್ಬರು ಗುರುಂಗಾವ್​ ಮೂಲದವರು. ಆರೋಪಿಗಳು ಕ್ಯಾನಿಸ್ಟರ್​ಗಳನ್ನು ಸ್ಫೋಟಿಸುವ ವಿಡಿಯೋವನ್ನು ಚಿತ್ರೀಕರಿಸುತ್ತಿದ್ದ ಆರೋಪಿ ಲಲಿತ್​ ಜಾ, ಎಲ್ಲರ ಸೆಲ್‌ಫೋನ್‌ಗಳೊಂದಿಗೆ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ. ಸದ್ಯ ಇನ್ನೂ ಈತನ ಪತ್ತೆಯಾಗಿಲ್ಲ. ಆರೋಪಿಗಳಿಗೆ ತಮ್ಮ ಮನೆಯಲ್ಲಿ ಆಶ್ರಯ ನೀಡಿದ್ದ ವಿಕ್ಕಿ ಶರ್ಮ ಮತ್ತು ಆತನ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಕ್ಕಿ ರಫ್ತು ಕಂಪನಿಯೊಂದರಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ.
ಆರೋಪಿ ಲಲಿತ್​ ಜಾ ಬಿಹಾರ ಮೂಲದವನಾಗಿದ್ದು, ಸದ್ಯ ಪರಾರಿಯಾಗಿದ್ದಾನೆ. ನೀಲಂ ಆಜಾದ್ ಮತ್ತು ಅಮೋಲ್ ಶಿಂಧೆ ಹಳದಿ ಮತ್ತು ಕೆಂಪು ಹೊಗೆಯನ್ನು ಹೊಂದಿರುವ ಡಬ್ಬಿಗಳನ್ನು ಸಿಡಿಸುವ ವಿಡಿಯೋಗಳನ್ನು ಚಿತ್ರೀಕರಿಸಿದ್ದರ. ನಂತರ, ತನ್ನ ಎಲ್ಲ ಸಹಚರರ ಸೆಲ್‌ಫೋನ್‌ಗಳೊಂದಿಗೆ ಪರಾರಿಯಾಗಿದ್ದಾನೆ. ಆತ ವಿಡಿಯೋಗಳಲ್ಲಿ ಒಂದನ್ನು ಎನ್‌ಜಿಒ ಮಾಲೀಕರ ಸಂಸ್ಥಾಪಕರಿಗೆ ಫಾರ್ವರ್ಡ್ ಮಾಡಿದ್ದು, ಸುರಕ್ಷಿತವಾಗಿ ಇರಿಸಿಕೊಳ್ಳಲು ಮತ್ತು ಮಾಧ್ಯಮ ಪ್ರಸಾರವನ್ನು ಮಾಡುವಂತೆ ಹೇಳಿದ್ದಾನೆ ಎಂದು ತಿಳಿದುಬಂದಿದೆ.
ನಡೆದಿದ್ದೇನು?ನಿನ್ನೆ (ಡಿ.13) ಲೋಕಸಭಾ ಕಲಾಪದ ಶೂನ್ಯ ವೇಳೆಯಲ್ಲಿ ಆರೋಪಿ ಸಾಗರ್ ಶರ್ಮಾ, ಸಂದರ್ಶಕರ ಗ್ಯಾಲರಿಯಿಂದ ಚೇಂಬರ್‌ಗೆ ಜಿಗಿದ ಆಘಾತಕಾರಿ ದೃಶ್ಯಗಳಿಗೆ ಸಾಕ್ಷಿಯಾಯಿತು. ಹಳದಿ ಹೊಗೆ ಹೊರಸೂಸುವ ಡಬ್ಬಿಯನ್ನು ತೆರೆದು ಸ್ಪೀಕರ್ ಕುರ್ಚಿಯನ್ನು ತಲುಪುವ ಪ್ರಯತ್ನದಲ್ಲಿ ಸಾಗರ್​ ಶರ್ಮ ಡೆಸ್ಕ್‌ನಿಂದ ಡೆಸ್ಕ್‌ಗೆ ಜಿಗಿದರು. ಆದರೆ, ಕೆಲ ಸಂಸದರು ಆತನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸುತ್ತಿದ್ದಂತೆ, ಅಲ್ಲಿಯೇ ಇದ್ದ ಮನೋರಂಜನ್ ಕೂಡ ಹೊಗೆ ಡಬ್ಬಿ ತೆರೆದು ಓಡಲು ಆರಂಭಿಸಿದರು. ಆದರೆ, ಆತನನ್ನು ಕೂಡ ಶೀಘ್ರದಲ್ಲೇ ವಶಕ್ಕೆ ಪಡೆಯಲಾಯಿತು. ಲೋಕಸಭೆಯ ಒಳಗೆ ನಡೆದ ಈ ಆಘಾತಕಾರಿ ಘಟನೆಗೂ ಮುನ್ನ ನೀಲಂ ದೇವಿ ಮತ್ತು ಅಮೋಲ್ ಶಿಂಧೆ ಸಂಸತ್ತಿನ ಹೊರಗೆ ಹೊಗೆ ಡಬ್ಬಿಗಳನ್ನು ಸಿಡಿಸಿದರು ಮತ್ತು “ಸರ್ವಾಧಿಕಾರ”ದ ವಿರುದ್ಧ ಘೋಷಣೆಗಳನ್ನು ಕೂಗಿದರು.
ದೆಹಲಿ ಪೊಲೀಸರ ಭಯೋತ್ಪಾದನಾ ನಿಗ್ರಹ ದಳ ಎಲ್ಲ ಆರು ಆರೋಪಿಗಳನ್ನು ವಿಚಾರಣೆ ನಡೆಸುತ್ತಿದೆ. ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಸಂಸದರಿಗೆ ಸುರಕ್ಷತೆಯ ಬಗ್ಗೆ ಭರವಸೆ ನೀಡಿದ್ದು, ಸಮಗ್ರ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ. 2001ರ ಸಂಸತ್ ದಾಳಿಯ ವಾರ್ಷಿಕೋತ್ಸವದಂದೇ ಈ ಭಾರಿ ಭದ್ರತಾ ಲೋಪ ಸಂಭವಿಸಿತ್ತು. ಆರೋಪಿಗಳ ವಿರುದ್ಧ ಕ್ರಿಮಿನಲ್ ಪಿತೂರಿ, ದ್ವೇಷವನ್ನು ಉತ್ತೇಜಿಸುವುದು ಮತ್ತು ಸಾರ್ವಜನಿಕ ಸೇವಕರು ಕರ್ತವ್ಯ ನಿರ್ವಹಿಸುವುದನ್ನು ತಡೆಯಲು ಬಲವನ್ನು ಬಳಸುವುದು ಸೇರಿ ಐಪಿಸಿ ಸೆಕ್ಷನ್​ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.(ಏಜೆನ್ಸೀಸ್​)

ಆಗಂತುಕರ ವಿರುದ್ಧ ಭಯೋತ್ಪಾದನಾ ವಿರೋಧಿ ಕಾನೂನು ಅಡಿ ಕೇಸು ದಾಖಲು: ಇಂದು ಕೋರ್ಟ್​ಗೆ ಹಾಜರು

ಸಂಸತ್​ನಲ್ಲಿ ಭದ್ರತಾ ಲೋಪಕ್ಕೆ ಕ್ರಮ; ಸದನದ ಗದ್ದಲದ ನಡುವೆಯೇ 8 ಸಿಬ್ಬಂದಿ ಅಮಾನತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 4 =
Remember me
