ನವದೆಹಲಿ:ವಿಶ್ವಾದ್ಯಂತ ಮರಣಮೃದಂಗ ಬಾರಿಸುತ್ತಿರುವ ಕರೊನಾ ಮಹಾಮಾರಿಯನ್ನು ಭಾರತ ಮಟ್ಟ ಹಾಕುವುದು ನಿಶ್ಚಿತ ಎಂದಿರುವ ಪ್ರಧಾನಿ ನರೇಂದ್ರ ಮೋದಿ, ದೇಶದ ಪ್ರತಿ ಪ್ರಜೆಗೂ ಲಸಿಕೆ ವಿತರಿಸುವ ಗುರಿ ಈಡೇರಲು ಎಲ್ಲ ರಾಜ್ಯಗಳು ಚುನಾವಣೆ ರೀತಿ ಸಜ್ಜಾಗಬೇಕೆಂದು ಕರೆ ನೀಡಿದ್ದಾರೆ.
ಕರೊನಾದಿಂದ ಅತಿ ಹೆಚ್ಚು ಬಾಧಿತವಾಗಿರುವ ಪ್ರಮುಖ 8 ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಮಂಗಳವಾರ ವಿಡಿಯೋ ಸಂವಾದ ನಡೆಸಿದ ಮೋದಿ ಪಾಸಿಟಿವ್ ಪ್ರಮಾಣವನ್ನು ಶೇ.5ಕ್ಕಿಂತ ಕೆಳಗಿಳಿಸಿದರಷ್ಟೇ ಕರೊನಾ ವಿರುದ್ಧ ಗೆಲುವು ಸಾಧ್ಯ ಎಂದರು.
ದೇಶದ ಪ್ರತಿಯೊಬ್ಬರಿಗೂ ಲಸಿಕೆ ವಿತರಿಸುವುದು ಸರ್ಕಾರದ ಆದ್ಯತೆಯಾಗಿದೆ. ಈ ಅಭಿಯಾನವು ಬೃಹತ್ ಹಾಗೂ ದೀರ್ಘಕಾಲದ್ದಾಗಿರುತ್ತದೆ. ಈ ಕಾರ್ಯಕ್ಕೆ ಎಲ್ಲ ರಾಜ್ಯಗಳು ಸಜ್ಜಾದರೆ ನಾವೆಲ್ಲ ಒಂದು ತಂಡವಾಗಿ ಕೆಲಸ ಮಾಡಬಹುದೆಂದು ಮೋದಿ ಕರೆ ನೀಡಿದರು. ಇದಕ್ಕೂ ಮೊದಲು ಆಯಾ ರಾಜ್ಯಗಳ ಪ್ರತಿನಿಧಿಗಳಿಂದ ಕರೊನಾ ಸ್ಥಿತಿಗತಿಯ ಮಾಹಿತಿ ಪಡೆದ ಅವರು, ಸೋಂಕು ಪಸರಿಸುವಿಕೆ ತಡೆಯುವುದು, ಲಸಿಕೆ ವಿತರಣೆ ಸೇರಿ ಹಲವು ಪ್ರಮುಖ ವಿಷಯಗಳ ಕುರಿತು ರ್ಚಚಿಸಿದರು.
9ನೇ ಸಂವಾದ:ಕರೊನಾ ಬಿಕ್ಕಟ್ಟಿನ ಕುರಿತು ಕಳೆದ ಮಾ.20ರಿಂದ ಇಂದಿನವರೆಗೆ ಮುಖ್ಯಮಂತ್ರಿಗಳ ಜತೆಗೆ ಪ್ರಧಾನಿ 9 ಬಾರಿ ವಿಡಿಯೋ ಕಾನ್ಪರೆನ್ಸ್ ಮೂಲಕ ಸಭೆ ನಡೆಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಷಾ, ಆರೋಗ್ಯ ಸಚಿವ ಡಾ. ಹರ್ಷವರ್ಧನ್, ಮಹಾರಾಷ್ಟ್ರ, ಕೇರಳ, ದೆಹಲಿ, ಪಶ್ಚಿಮ ಬಂಗಾಳ, ಕರ್ನಾಟಕ, ಉತ್ತರಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಢದ ಮುಖ್ಯಮಂತ್ರಿಗಳು ಹಾಗೂ ಪ್ರತಿನಿಧಿಗಳು ಸಭೆಯಲ್ಲಿ ಭಾಗಿಯಾಗಿದ್ದರು.
ಗಮನಿಸಲಿದೆ ಕೇಂದ್ರ:ರಾಜ್ಯಗಳೊಂದಿಗಿನ ಸಾಮೂಹಿಕ ಸಮನ್ವಯದೊಂದಿಗೆ ಲಸಿಕೆ ವಿತರಣಾ ಕಾರ್ಯತಂತ್ರ ನಡೆಯಲಿದೆ. ಕೋಲ್ಡ್ ಸ್ಟೋರೇಜ್ ವ್ಯವಸ್ಥೆ ಬಗ್ಗೆ ರಾಜ್ಯಗಳೂ ತಕ್ಷಣದಿಂದ ಕೆಲಸ ಪ್ರಾರಂಭಿಸಿ ತಮ್ಮ ಯೋಜನೆಗಳನ್ನು ಕೇಂದ್ರದ ಮುಂದಿಡಬೇಕು. ಲಸಿಕೆ ಅಭಿವೃದ್ಧಿ ಕುರಿತಾದ ಪ್ರತಿ ಬೆಳವಣಿಗೆಯನ್ನು ಕೇಂದ್ರ ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದೆ. ದೇಶಿಯವಾಗಿ ಲಸಿಕೆ ಅಭಿವೃದ್ಧಿಪಡಿಸುವವರು ಮತ್ತು ತಯಾರಕರ ಜತೆ ಸಂಪರ್ಕದಲ್ಲಿದ್ದೇವೆ. ಜಾಗತಿಕ ನಿಯಂತ್ರಕರು, ಇತರ ದೇಶಗಳ ಸರ್ಕಾರಗಳು, ಬಹುರಾಷ್ಟ್ರೀಯ ಸಂಸ್ಥೆಗಳು ಮತ್ತು ಅಂತಾರಾಷ್ಟ್ರೀಯ ಕಂಪನಿಗಳ ಜತೆಯಲ್ಲೂ ಮಾತುಕತೆ ನಡೆಸುತ್ತಿದ್ದೇವೆ. ಲಸಿಕೆ ಎಷ್ಟು ಡೋಸ್ ಇರಲಿದೆ ಹಾಗೂ ಅದರ ಬೆಲೆ ಎಷ್ಟು ಎಂದು ಇನ್ನೂ ನಿರ್ಧರಿಸಲಾಗಿಲ್ಲ. ಸದ್ಯಕ್ಕೆ ಈ ಪ್ರಶ್ನೆಗಳಿಗೆ ನಮ್ಮಲ್ಲಿ ಉತ್ತರಗಳಿಲ್ಲ ಎಂದು ಮೋದಿ ಹೇಳಿದರು.
ಸೋಂಕು ಪರೀಕ್ಷೆ ಹೆಚ್ಚಿಸಿ:ಆರ್​ಟಿ-ಪಿಸಿಆರ್ ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸಿ, ಪಾಸಿಟಿವಿಟಿ ದರ ಇಳಿಸಿ ಎಂದು ಸೋಂಕು ಹೆಚ್ಚಳ ಕಾಣುತ್ತಿರುವ ರಾಜ್ಯಗಳಿಗೆ ಮೋದಿ ಸೂಚಿಸಿದರು. ಸೋಂಕಿತರ ಚೇತರಿಕೆ ಮತ್ತು ಮರಣ ಪ್ರಮಾಣದಲ್ಲಿ ಭಾರತವು ಇತರ ದೇಶಗಳಿಗಿಂತ ಉತ್ತಮವಾಗಿದೆ. ಆದಾಗ್ಯೂ ಸಕಾರಾತ್ಮಕ ದರವನ್ನು ಸುಮಾರು ಶೇ.5 ಕ್ಕೆ ಮತ್ತು ಸಾವಿನ ಪ್ರಮಾಣವನ್ನು ಶೇ.1ಕ್ಕಿಂತ ಕಡಿಮೆಗೊಳಿಸುವಲ್ಲಿ ರಾಜ್ಯಗಳು ಕೆಲಸ ಮಾಡಬೇಕೆಂದು ಪ್ರಧಾನಿ ಕರೆ ನೀಡಿದರು.
ಮೊದಲ ಹಂತ:ಒಂದು ಕೋಟಿ ಆರೋಗ್ಯ ಕಾರ್ಯಕರ್ತರು, 2 ಕೋಟಿ ಕರೊನಾ ವಾರಿಯರ್ಸ್ ಮತ್ತು 50 ವರ್ಷದ ದಾಟಿದ 26 ಕೋಟಿ ಜನರಿಗೆ ಮೊದಲ ಹಂತದಲ್ಲಿ ಲಸಿಕೆ ವಿತರಣೆ.
ಟಾಸ್ಕ್​ಫೋರ್ಸ್ ರಚನೆ:ಲಸಿಕೆ ವಿತರಣೆಗಾಗಿ ರಾಜ್ಯಗಳು ಜಿಲ್ಲಾ ಅಥವಾ ಬ್ಲಾಕ್ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ರಚಿಸಬೇಕು. ನಾಗರಿಕರಿಗೆ ವಿತರಿಸುವ ಮುನ್ನ ಲಸಿಕೆ ಅಗತ್ಯವಿರುವ ಎಲ್ಲ ವೈಜ್ಞಾನಿಕ ಮಾನದಂಡ ಪೂರೈಸುತ್ತದೆ ಎಂದು ಖಚಿತ ಪಡಿಸಿಕೊಳ್ಳಲಾಗುತ್ತದೆ. ಲಸಿಕೆಗಳ ಬಗ್ಗೆ ಭಾರತಕ್ಕಿರುವ ಅನುಭವ ಇತರ ದೊಡ್ಡ ದೇಶಗಳಿಗಿಲ್ಲ. ಭಾರತವು ಯಾವುದೇ ಲಸಿಕೆಯನ್ನು ತನ್ನ ನಾಗರಿಕರಿಗೆ ನೀಡಲಿ, ಅದು ವೈಜ್ಞಾನಿಕ ಮಾನದಂಡಗಳೊಂದಿಗೆ ತುಂಬಾ ಸುರಕ್ಷಿತವಾಗಿರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
ಸೋಂಕಿತರಿಗೆ ಆಮ್ಲಜನಕ, ವೆಂಟಿಲೇಟರ್ ಸಕಾಲಕ್ಕೆ ದೊರೆಯುವಂತೆ ಮಾಡಲು ಹೆಚ್ಚು ಗಮನ ವಹಿಸಲಾಗಿದೆ. ಇದಕ್ಕಾಗಿ ಪಿಎಂ-ಕೇರ್ಸ್ ನಿಧಿಯಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ. ಆಮ್ಲಜನಕ ವಿಚಾರದಲ್ಲಿ ಮೆಡಿಕಲ್ ಕಾಲೇಜು ಮತ್ತು ಜಿಲ್ಲಾಸ್ಪತ್ರೆಗಳು ಸ್ವಾವಲಂಬಿಯನ್ನಾಗಿಸಲು ಪ್ರಯತ್ನಿಸುತ್ತಿದ್ದೇವೆ. ದೇಶದಲ್ಲಿ 160 ಆಕ್ಸಿಜನ್ ಜನರೇಷನ್ ಪ್ಲಾಂಟ್ ಸ್ಥಾಪಿಸುವ ಪ್ರಯತ್ನ ನಡೆಯುತ್ತಿದೆ ಎಂದು ಮೋದಿ ತಿಳಿಸಿದರು.
ಬೆಂಗಳೂರು:ಪ್ರಧಾನಿ ಸೂಚನೆ ಹಿನ್ನೆಲೆಯಲ್ಲಿ ಕರೊನಾ ಲಸಿಕೆ ವಿತರಣೆ ಸಂಬಂಧ ರಾಜ್ಯದಲ್ಲಿ ರಾಜ್ಯ, ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಚಾಲನಾ ಸಮಿತಿಗಳ ರಚನೆಗೆ ನಿರ್ಧರಿಸಲಾಗಿದೆ. ಲಸಿಕೆ ಹಂಚಿಕೆಗೆ ಚುನಾವಣಾ ಬೂತ್​ಗಳ ಮಾದರಿಯಲ್ಲಿ ಬೂತ್​ಗಳನ್ನು ರಚನೆ ಮಾಡಲಾಗುತ್ತಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಜತೆಗಿನ ವಿಡಿಯೋ ಸಂವಾದದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕರೊನಾ ಲಸಿಕೆ ಕೊಟ್ಟ ಬಳಿಕ ಪ್ರಧಾನಿ ಸೂಚನೆ ಹಿನ್ನೆಲೆಯಲ್ಲಿ ಟ್ರ್ಯಾಕ್​ ರಿಪೋರ್ಟ್ ಸಂಗ್ರಹಕ್ಕೂ ಸೂಚಿಸಲಾಗುತ್ತದೆ ಎಂದರು.
ಸಭೆಯಲ್ಲಿ ಭಾಗವಹಿಸಿದ್ದ ನೀತಿ ಆಯೋಗದ ಸದಸ್ಯ ಡಾ.ವಿ.ಕೆ.ಪೌಲ್ ಮಾತನಾಡಿ ಯಾವ್ಯಾವ ದೇಶಗಳಲ್ಲಿ ಲಸಿಕೆ ತಯಾರಿ ಸ್ಥಿತಿ ಯಾವ ಹಂತದಲ್ಲಿದೆ ಎಂಬುದರ ಬಗ್ಗೆ ಮಾಹಿತಿ ನೀಡಿದರು. ಜಗತ್ತಿನ ಬೇರೆ ಬೇರೆ ಕಡೆಗಳಲ್ಲಿ ಲಸಿಕೆ ತಯಾರಿಕೆ ವಿವಿಧ ಹಂತಗಳಲ್ಲಿವೆ. 50 ಕ್ಲಿನಿಕಲ್ ರೀಸರ್ಚ್​ನಲ್ಲಿದ್ದು, 25 ಮುಂದುವರಿದ ಟ್ರಯಲ್​ನಲ್ಲಿವೆ. ಭಾರತದಲ್ಲೇ 5 ಲಸಿಕೆಗಳ ಕ್ಲಿನಿಕಲ್ ಟ್ರಯಲ್ ನಡೆದಿವೆ. ದೇಶದಲ್ಲಿ 24 ಕಂಪನಿಗಳು ಲಸಿಕೆಗಳನ್ನು ತಯಾರಿಸುವ ಸಾಮರ್ಥ್ಯವನ್ನು ಹೊಂದಿವೆ ಎಂಬ ವಿವರಿಸಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕಂದಾಯ ಸಚಿವ ಆರ್.ಅಶೋಕ್, ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು, ಮುಖ್ಯಕಾರ್ಯದರ್ಶಿ ವಿಜಯಭಾಸ್ಕರ್ ಸೇರಿ ಹಿರಿಯ ಅಧಿಕಾರಿಗಳು ವಿಡಿಯೋ ಸಂವಾದದಲ್ಲಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + 12 =
Remember me
