| ರವೀಂದ್ರ ಎಸ್.ದೇಶಮುಖ್ಚುನಾವಣೆಯ ಪ್ರಚಾರ ಮತ್ತು ಪ್ರಣಾಳಿಕೆಗಳ ಸ್ವರೂಪ ಬದಲಾಗಿಹೋಗಿದೆ. ಮೊದಲೆಲ್ಲ, ಮತದಾನಕ್ಕೆ ಎರಡು ದಿನ ಮುಂಚೆ ಪಕ್ಷಗಳು ರಹಸ್ಯವಾಗಿ ಮತದಾರರಿಗೆ ಹಣ ಹಂಚುತ್ತಿದ್ದವು. ಈಗ ಹಾಗೇನಿಲ್ಲ, ಗೆದ್ದರೆ ಇಷ್ಟು ಹಣ ನಿಮ್ಮ ಖಾತೆಗೇ ಎಂದು ಹೇಳುತ್ತಿವೆ. ಮೊದಲಿಗೆ, ಈ ಉಚಿತ ಕೊಡುಗೆಗಳ ವಿರುದ್ಧ ಹರಿಹಾಯ್ದಿದ್ದ ಬಿಜೆಪಿ, ಈಗ ಅನಿವಾರ್ಯವಾಗಿ ಅದೇ ಹಾದಿಯಲ್ಲಿ ಸಾಗತೊಡಗಿದೆ. ಕರ್ನಾಟಕದಲ್ಲಿ ದಾರುಣ ಸೋಲಿಗೆ ಕಾಂಗ್ರೆಸ್ಸಿನ ಗ್ಯಾರಂಟಿಗಳೇ ಕಾರಣ ಎಂದು ಬಿಜೆಪಿ ನಾಯಕರು ಬಹಿರಂಗವಾಗಿ ಹೇಳಿದ್ದರಿಂದ, ಕೇಂದ್ರ ನಾಯಕತ್ವ ಎಚ್ಚೆತ್ತುಕೊಂಡಂತಿದೆ. ಪರಿಣಾಮ, ಕಾಂಗ್ರೆಸ್ ಹಾಗೂ ಇತರ ಪ್ರಾದೇಶಿಕ ಪಕ್ಷಗಳ ವಿರುದ್ಧ ಸ್ಪರ್ಧೆಗೆ ಬಿದ್ದು ಉಚಿತ ಗ್ಯಾರಂಟಿಗಳನ್ನು ಘೋಷಿಸುತ್ತಿದೆ. ಆದರೆ, ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ, ಇವುಗಳ ಜಾರಿ ಸುಲಭವೇನಲ್ಲ. ಸದ್ಯಕ್ಕೆ, ರಾಜಕೀಯ ಪಕ್ಷಗಳು ಅದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಈ ಬದಲಾದ ರಾಜಕೀಯ ಟ್ರೆಂಡ್ ಹಲವು ಅಡ್ಡಪರಿಣಾಮಗಳನ್ನು ಉಂಟುಮಾಡಬಹುದು, ದೀರ್ಘಾವಧಿಗೆ ಇಂಥ ಯೋಜನೆಗಳು ಸೂಕ್ತವಲ್ಲ ಎಂಬುದು ತಜ್ಞರ ಅಂಬೋಣ. ಈ ನಡುವೆ, ಮತದಾರ ಕೂಡ ಗೊಂದಲಕ್ಕೆ ಬಿದ್ದಿದ್ದಾನೆ. ಮಹಿಳೆಯರಿಗೆ ಯಾವ ಪಕ್ಷ ಎಷ್ಟು ಹಣ ನೀಡಲಿದೆ, ಎಲ್​ಪಿಜಿ ಸಿಲೆಂಡರ್ ಯಾರು ಅಗ್ಗದ ದರದಲ್ಲಿ ಕೊಡುತ್ತಾರೆ… ಹೀಗೆ ಹಲವು ಸಂಗತಿಗಳನ್ನು ಅಳೆದುತೂಗಿಯೇ ಮತದಾನ ಮಾಡುವ ಅನಿವಾರ್ಯತೆ. ಇಂಥ ಯೋಜನೆಗಳಿಂದ ಮತಬ್ಯಾಂಕ್​ಗಳನ್ನು ಸೃಷ್ಟಿಸಿಕೊಳ್ಳುವ ರಾಜಕೀಯ ಪಕ್ಷಗಳ ಸ್ಪರ್ಧೆ ನಡುವೆ ಆರ್ಥಿಕತೆಯ ಆರೋಗ್ಯ ಮಾತ್ರ ಕಡೆಗಣಿಸಲ್ಪಟ್ಟಿರುವುದು ಸ್ಪಷ್ಟ.
ರಾಷ್ಟ್ರೀಯ ಪಕ್ಷಗಳು, ಪ್ರಾದೇಶಿಕ ಪಕ್ಷಗಳು ಸ್ಪರ್ಧೆಗೆ ಬಿದ್ದವರಂತೆ ಉಚಿತ ಘೋಷಣೆ/ಕೊಡುಗೆಗಳನ್ನು ಪ್ರಕಟಿಸುತ್ತಿವೆ. ಆದರೆ, ಇವುಗಳಿಗೆ ಬೇಕಾದ ದೊಡ್ಡ ಪ್ರಮಾಣದ ಆರ್ಥಿಕ ಸಂಪನ್ಮೂಲವನ್ನು ಹೇಗೆ ಹೊಂದಿಸಲಾಗುತ್ತದೆ, ಆದಾಯದ ಮೂಲಗಳು ಯಾವವು, ಈ ಯೋಜನೆಗಳಿಂದ ಬೊಕ್ಕಸದ ಮೇಲಾಗುವ ಪರಿಣಾಮವೇನು?, ಉಳಿದ ಅಭಿವೃದ್ಧಿ ಕಾರ್ಯಗಳ, ವಿವಿಧ ಇಲಾಖೆ, ವಿಭಾಗಗಳ ಅನುದಾನದ ಕಥೆಯೇನು? ಈ ಬಗ್ಗೆ ಯಾವುದೇ ಪಕ್ಷದ ನಾಯಕರು ಮಾತನಾಡುತ್ತಿಲ್ಲ, ಸ್ಪಷ್ಟನೆ ಕೊಡುತ್ತಿಲ್ಲ. ಉಚಿತಗಳ ಭರಾಟೆಯಲ್ಲಿ ಆರ್ಥಿಕತೆ ನಲುಗದಿದ್ದರೆ ಸಾಕು ಎಂಬ ಅನಿಸಿಕೆ ವಿತ್ತೀಯ ತಜ್ಞರದ್ದು.
‘ನಮಗೆ ದುಡ್ಡು ಬೇಡ. ಮೊದಲಿನಂತೆಯೇ ಆಹಾರಧಾನ್ಯ ನೀಡಿ ಸಾಕು’ ಎನ್ನುತ್ತಿದ್ದಾರೆ ಹಳ್ಳಿಗರು. ಈ ಸಂಬಂಧ 2021ರಲ್ಲಿ ದ್ರೇಜ್ ಎಂಬ ಸಂಸ್ಥೆಯೊಂದಿಗೆ ಸೇರಿ ಕೆಲ ಸಾಮಾಜಿಕ ಕಾರ್ಯಕರ್ತರು ದೇಶದ 10ಕ್ಕೂ ಹೆಚ್ಚು ರಾಜ್ಯಗಳಲ್ಲಿ ಸಮೀಕ್ಷೆ ನಡೆಸಿದಾಗ ನಗದು ಹಣಕ್ಕಿಂತ ಪಡಿತರ ಮೂಲಕ ಅಗ್ಗದ ದರದಲ್ಲಿ ಆಹಾರ ಸಿಗಲಿ ಎಂದೇ ಬಹುತೇಕರು ಅಭಿಪ್ರಾಯಪಟ್ಟಿದ್ದಾರೆ. ‘ಸರ್ಕಾರ ಜನರ ಭಾವನೆಗಳನ್ನು ಗಮನಿಸಿ ಆಹಾರಧಾನ್ಯ ಪೂರೈಕೆಯನ್ನೇ ಮುಂದುವರಿಸಬೇಕು’ ಎನ್ನುತ್ತಾರೆ ಸಮೀಕ್ಷೆ ಕೈಗೊಂಡ ಸಂಪ ನ್ಮೂಲ ವ್ಯಕ್ತಿಗಳು. ನಗದು ಹಣ ಸಿಗುವುದರಿಂದ ದುರ್ಬಳಕೆಯ ಸಾಧ್ಯತೆಗಳು ಹೆಚ್ಚು. ಈ ಹಣ ಕುಟುಂಬದ ಹೊಟ್ಟೆ ತುಂಬಿಸುವ ಬದಲು ಹೆಂಡ, ಜೂಜಿಗೆ ಸುರಿಯುವ ಗಂಡಸರಿಗೆ ನಮ್ಮಲ್ಲೇನೂ ಕೊರತೆಯಿಲ್ಲ. ಕಡೆಯ ಪಕ್ಷ ಪಡಿತರ ಮೂಲಕ ದೊರೆಯುವ ಆಹಾರಧಾನ್ಯದಿಂದ ಬಡ ಮಹಿಳೆಯೊಬ್ಬಳು ತನ್ನ ಕುಟುಂಬದ ತುತ್ತಿನ ಚೀಲವನ್ನಾದರೂ ತುಂಬಿಸಬಹುದು ಎನ್ನುತ್ತಾರೆ.
ಇಂಥ ಉಚಿತ ಕೊಡುಗೆ ಅಥವಾ ಯೋಜನೆಗಳು ದುರುಪಯೋಗ ಪಡಿಸಿಕೊಂಡ ನಿದರ್ಶನಗಳಿಗೆ ಕೊರತೆಯಿಲ್ಲ. ವಾರ್ಷಿಕ 2-3 ಲಕ್ಷ ರೂಪಾಯಿ ಆದಾಯವಿದ್ದವರೂ ತಮಿಳುನಾಡಿನಲ್ಲಿ ‘ಬಡವ’ರೆಂದು ಬಿಂಬಿಸಿಕೊಂಡು ಮನೆಗಳಿಗೆ ಸರ್ಕಾರದ ಬಣ್ಣದ ಟಿವಿಗಳನ್ನು ತಂದಿತ್ತರು. ಇನ್ನು ಕೆಲವರಂತೂ. ಟಿ.ವಿ, ಗ್ಯಾಸ್​ಸ್ಟೋವ್​ನ್ನು ಉಚಿತವಾಗಿ ಪಡೆದು ಅದನ್ನು ಪಕ್ಕದ ರಾಜ್ಯಗಳಿಗೆ ಮಾರುಕಟ್ಟೆ ದರದಲ್ಲಿ ಮಾರಾಟ ಮಾಡಿ ದುಡ್ಡು ಮಾಡಿಕೊಂಡರು. ಉತ್ತರಪ್ರದೇಶದಲ್ಲಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್​ಟಾಪ್ ನೀಡಿದಾಗ, ಸಾಕಷ್ಟು ಜನರು ಆ ಲ್ಯಾಪ್​ಟಾಪ್​ಗಳನ್ನು ಒಎಲ್​ಎಕ್ಸ್​ನಲ್ಲಿ ಮಾರಾಟಕ್ಕೆ ಇಟ್ಟರು!
80 ಕೋಟಿ ಜನರಿಗೆ ಉಚಿತ ಪಡಿತರ:ಕರೊನಾ ಸಂದರ್ಭದಲ್ಲಿ ಬಡವರಿಗೆ ನೆರವಾಗಲೆಂದು ಪ್ರಧಾನಿ ಮೋದಿ ಉಚಿತ ಆಹಾರಧಾನ್ಯ ವಿತರಿಸುವುದಾಗಿ ಪ್ರಕಟಿಸಿದರು. ದೇಶದ 80 ಕೋಟಿ ಬಡವರಿಗೆ ಇನ್ನೂ 5 ವರ್ಷಗಳ ಕಾಲ ಉಚಿತವಾಗಿ ಪಡಿತರ ವಿತರಿಸಲಾಗುವುದು ಎಂದು ಮೋದಿ ಘೋಷಿಸಿದ್ದಾರೆ.
ವಾಸ್ತವ ಅರಿಯಬೇಕಿದೆ:ಜನರೆಂದರೆ ಬರೀ ವೋಟ್​ಬ್ಯಾಂಕ್​ಗಳಲ್ಲ. ಅವರನ್ನು ಮಾನವ ಸಂಪನ್ಮೂಲವನ್ನಾಗಿಸಿ ಜನಬಲವನ್ನು ಸಕಾರಾತ್ಮಕ ಶಕ್ತಿಯಾಗಿ ಪರಿವರ್ತಿಸುವ ಸಂಕಲ್ಪ ಅಗತ್ಯ. ಅಲ್ಲದೆ, ಶ್ರಮಶಕ್ತಿಯನ್ನೇ ನಂಬಿಕೊಂಡು ಬದುಕು ರೂಪಿಸಿಕೊಂಡಿರುವ ಸಮಾಜ ನಮ್ಮದು. ಈ ಶ್ರಮಸಂಸ್ಕೃತಿಗೆ ಧಕ್ಕೆ ಆಗುವಂಥ ವಾತಾವರಣ ಸೃಷ್ಟಿಯಾಗಬಾರದು. ಜನರನ್ನು ಹೆಚ್ಚೆಚ್ಚು ಸ್ವಾವಲಂಬಿಯಾಗಿಸುವುದು ಸರ್ಕಾರಗಳ ಧ್ಯೇಯ, ಗುರಿ ಆಗಿರಬೇಕೆ ಹೊರತು ಪರಾವಲಂಬಿಯನ್ನಾಗಿಸಬಾರದು. ಸಾಮಾಜಿಕ ಕಲ್ಯಾಣ ಯೋಜನೆಗಳ ಆಶಯ ಒಳ್ಳೆಯದೇ. ಸ್ವಾತಂತ್ರ್ಯ ಬಂದಾಗಿನಿಂದಲೂ ಈ ಬಗೆಯ ಯೋಜನೆಗಳು ಚಾಲ್ತಿಯಲ್ಲಿವೆ. ಬಡತನವನ್ನು ದೂರ ಮಾಡಲು ಮತ್ತು ಸಾಮಾಜಿಕ ನ್ಯಾಯ ಕಲ್ಪಿಸಲು ಇಂಥ ಯೋಜನೆಗಳು ಅಗತ್ಯವೂ ಹೌದು. ಆದರೆ, ಸಾಮಾಜಿಕ ಕಲ್ಯಾಣದ ವ್ಯಾಪ್ತಿಯನ್ನು ಮೀರಿ ಮತಬೆಟೆಯ ಉದ್ದೇಶಕ್ಕಾಗಿ ಉಚಿತಗಳ ಆಮಿಷ ಸಲ್ಲದು.


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + five =
Remember me
