ನವದೆಹಲಿ:ಮಾರಕ ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಜನವರಿ 15ರ ನಂತರ ಚೀನಾ ನಾಗರಿಕರಿಗೆ ಮಂಜೂರು ಮಾಡಿರುವ ಎಲ್ಲ ವೀಸಾಗಳನ್ನು ಕೇಂದ್ರ ಸರ್ಕಾರ ರದ್ದು ಮಾಡಿದೆ. ಅಲ್ಲದೇ ಚಾಲ್ತಿಯಲ್ಲಿರುವ ವೀಸಾಗಳನ್ನೂ ಅಮಾನ್ಯಗೊಳಿಸಲಾಗಿದೆ ಎಂದು ಹೇಳಿದೆ. ಚೀನಾದ ನಾಗರಿಕರು ಭಾರತದ ವೀಸಾಗೆ ಹೊಸದಾಗಿ ಅರ್ಜಿ ಸಲ್ಲಿಸಲು ಬೀಜಿಂಗ್​ನಲ್ಲಿರುವ ರಾಯಭಾರ ಕಚೇರಿ ಅಥವಾ ಶಾಂಘೈ, ಗುವಾಂಗ್​ಜುನಲ್ಲಿನ ದೂತಾವಾಸಗಳನ್ನು ಸಂಪರ್ಕಿಸಬಹುದು ಎಂದುು ಬೀಜಿಂಗ್​ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಟ್ವಿಟ್ ಮಾಡಿದೆ.
ಜನವರಿ 15ರ ಬಳಿಕ ಭಾರತಕ್ಕೆ ಬಂದಿರುವ ಮತ್ತು ಭಾರತದಲ್ಲಿ ಉಳಿದಿರುವ ಚೀನಾದ ನಾಗರಿಕರು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನೀಡಲಾಗಿರುವ ಹಾಟ್​ಲೈನ್ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬೇಕು. ಚೀನಾದ ಪ್ರವಾಸಿಗರು ಭಾರತ ಭೇಟಿಗೆ ಮುಂದಾಗುವ ಮೊದಲು ಈ ಸಂಖ್ಯೆಗೆ ಕರೆ ಮಾಡಿ ತಮ್ಮ ವೀಸಾದ ಮಾನ್ಯತೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದೆ. ಜತೆಗೆ ಅನ್ಯ ದೇಶಗಳ ಪ್ರಜೆಗಳಿಗೆ ಚೀನಾದಿಂದ ಭಾರತಕ್ಕೆ ಪ್ರಯಾಣಿಸಲು ಅನುಮತಿ ನೀಡಬಾರದು ಎಂದು ಭಾರತದ ಎಲ್ಲ ವಿಮಾನಯಾನ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ.
ಸಾಂಕ್ರಾಮಿಕವಲ್ಲ:ಚೀನಾದಿಂದ ಎರಡು ಡಜನ್​ಗಳಿಗೂ ಹೆಚ್ಚು ದೇಶಗಳಿಗೆ ಹರಡಿರುವ ಮಾರಣಾಂತಿಕ ಕರೊನಾ ವೈರಸ್ ಇನ್ನೂ ಸಾಂಕ್ರಾಮಿಕವಾಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಇಬ್ಬರು ವಿದೇಶಕ್ಕೆ ಪರಾರಿ
ಕರೊನಾ ವೈರಸ್ ಕಾಣಿಸಿಕೊಂಡಿದ್ದ ಚೀನಾದ ವುಹಾನ್ ನಗರದಿಂದ ಕೇರಳಕ್ಕೆ ಆಗಮಿಸಿದ್ದ ಇಬ್ಬರು ಸರ್ಕಾರದ ಸೂಚನೆಯನ್ನು ಧಿಕ್ಕರಿಸಿ ವಿದೇಶಕ್ಕೆ ಪರಾರಿಯಾಗಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಚೀನಾದಿಂದ 2 ಸಾವಿರದಷ್ಟು ಮಂದಿ ಕೇರಳೀಯರು ಇತ್ತೀಚಿನ ದಿನಗಳಲ್ಲಿ ವಾಪಸ್ಸಾಗಿದ್ದಾರೆ. ಕೋಯಿಕ್ಕೋಡು ಆಸುಪಾಸಿನ 60 ಮಂದಿ ಇದರಲ್ಲಿ ಸೇರಿದ್ದಾರೆ. ಇವರಲ್ಲಿ ಇಬ್ಬರು ವಿದೇಶಕ್ಕೆ ತೆರಳಿದ್ದು, ಇತರ 58 ಮಂದಿಯನ್ನು ಅವರವರ ಮನೆಗಳಲ್ಲಿ ಇರಿಸಿ ನಿಗಾ ವಹಿಸಲಾಗುತ್ತಿದೆ. ವಿದೇಶಕ್ಕೆ ತೆರಳಿರುವ ಇಬ್ಬರನ್ನು ಪತ್ತೆ ಹಚ್ಚಿ ಅವರ ಬಗ್ಗೆ ತೀವ್ರ ನಿಗಾ ವಹಿಸಲು ಇಲಾಖೆ ತೀರ್ವನಿಸಿದೆ.
ಆಯುಷ್ ಇಲಾಖೆ ಸ್ಪಷ್ಟನೆ
ಹೋಮಿಯೋಪಥಿ ಮತ್ತು ಯುನಾನಿ ಔಷಧಗಳು ಕರೊನಾ ಸೋಂಕನ್ನು ನಿಯಂತ್ರಿಸಬಲ್ಲ ಖಚಿತ ಔಷಧವೆಂದು ಹೇಳಿಲ್ಲ ಎಂದು ಆಯುಷ್ ಸಚಿವಾಲಯ ಸ್ಪಷ್ಟನೆ ನೀಡಿದೆ. ಕರೊನಾದಂತಹ ಸಾಂಕ್ರಾಮಿಕ ಸೋಂಕುಗಳನ್ನು ತಡೆಗಟ್ಟಲು ಅನುಸರಿಸಬೇಕಾದ ಸಾಮಾನ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಮಾತ್ರ ನಾವು ಸೂಚಿಸಿದ್ದೇವೆ. ಇಂತಹ ಸೋಂಕುಗಳಿಗೆ ಆಯಾ ವೈದ್ಯಕೀಯ ವ್ಯವಸ್ಥೆಯಲ್ಲಿನ ವಿಧಾನದ ತತ್ವಗಳ ಆಧಾರದ ಮೇಲೆ ಮುನ್ನೆಚ್ಚರಿಕಾ ಕ್ರಮಗಳನ್ನು ಸೂಚಿಸಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ. ಕಳೆದ ಜ.29ರಂದು ಸಚಿವಾಲಯ ಕರೊನಾ ಸೋಂಕು ತಡೆಗಟ್ಟುವ ಹಿನ್ನೆಲೆ ಹೋಮಿಯೋಪಥಿ ಮತ್ತು ಯುನಾನಿ ಔಷಧಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ ಎಂದಿತ್ತು.
ಚೀನಾದಲ್ಲಿ ಸಾವಿನ ಸಂಖ್ಯೆ ಹೆಚ್ಚಳ
ಕರೊನಾ ಸೋಂಕಿನಿಂದ ಚೀನಾದಲ್ಲಿ ಸೋಮವಾರ ರಾತ್ರಿ ಮತ್ತೆ 64 ಜನರು ಮೃತಪಟ್ಟಿದ್ದು, ಸಾವಿನ ಸಂಖ್ಯೆ ಮಂಗಳವಾರ 425ಕ್ಕೆ ಏರಿಕೆಯಾಗಿದೆ. ಸುಮಾರು 20,438 ಜನರಲ್ಲಿ ಕರೊನಾ ಸೋಂಕು ಇರುವುದು ಧೃಢಪಟ್ಟಿದೆ. ಒಂದೇ ದಿನದಲ್ಲಿ 3 ಸಾವಿರ ಜನರಿಗೆ ಸೋಂಕು ತಗುಲಿದೆ.
ಹಾಂಕಾಂಗ್​ನಲ್ಲಿ ಮೊದಲ ಬಲಿ
ಹಾಂಕಾಂಗ್​ನಲ್ಲಿ ಕರೊನಾ ವೈರಸ್​ಗೆ ಓರ್ವ ಸಾವನ್ನಪ್ಪಿದ್ದಾನೆ. ಚೀನಾದ ವುಹಾನ್​ನಿಂದ ಮರಳಿದ್ದ 39 ವರ್ಷದ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ಈ ಹಿನ್ನೆಲೆ ಏರ್ ಇಂಡಿಯಾ ಫೆ.8ರಿಂದ ಹಾಂಕಾಂಗ್​ಗೆ ತೆರಳುವ ವಿಮಾನದ ಸಂಚಾರವನ್ನು ಸ್ಥಗಿತಗೊಳಿಸುವುದಾಗಿ ಹೇಳಿದೆ. ಈ ಸೋಂಕಿಗೆ ಕಳೆದ ಭಾನುವಾರ ಫಿಲಿಪ್ಪೀನ್ಸ್​ನಲ್ಲಿ ಒಬ್ಬ ಮರಣಿಸಿದ್ದ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 2 =
Remember me
