ಅರುಣಾಚಲ ಪ್ರದೇಶವನ್ನು ಭಾರತದ ಅವಿಭಾಜ್ಯ ಅಂಗವೆಂದು ಪರಿಗಣಿಸುವ ನಿರ್ಣಯವನ್ನು ಅಮೆರಿಕದ ಸೆನೆಟ್ ಮಂಗಳವಾರ ಸ್ವೀಕರಿಸಿದೆ. ಮೆಕ್ ಮಹೊನ್ ರೇಖೆಯನ್ನು ಚೀನಾ ಮತ್ತು ಅರುಣಾಚಲ ಪ್ರದೇಶದ ನಡುವಿನ ಅಂತಾರಾಷ್ಟ್ರೀಯ ಗಡಿ ಎಂದು ಅಮೆರಿಕ ಗುರುತಿಸುತ್ತದೆ ಎಂದೂ ನಿರ್ಣಯದಲ್ಲಿ ಹೇಳಲಾಗಿದೆ.
‘ಇಂಡೋ- ಪೆಸಿಫಿಕ್ ಪ್ರದೇಶದಲ್ಲಿ (ಹಿಂದೂ ಮಹಾಸಾಗರ ಮತ್ತು ಪೆಸಿಫಿಕ್ ಮಹಾಸಾಗರ ವ್ಯಾಪ್ತಿಯಲ್ಲಿನ ಅಂದಾಜು 40 ದೇಶಗಳಿರುವ ಪ್ರದೇಶ) ಚೀನಾ ಗಂಭೀರವಾದ ಬೆದರಿಕೆಗಳನ್ನು ಒಡ್ಡುತ್ತಿರುವ ಸಮಯದಲ್ಲಿ, ಈ ಪ್ರದೇಶದಲ್ಲಿನ ನಮ್ಮ ಕಾರ್ಯತಂತ್ರದ ಪಾಲುದಾರರೊಂದಿಗೆ, ವಿಶೇಷವಾಗಿ ಭಾರತದೊಂದಿಗೆ ಅಮೆರಿಕವು ಭುಜಕ್ಕೆ ಭುಜ ಕೊಟ್ಟು ನಿಲ್ಲುವುದು ನಿರ್ಣಾಯಕವಾಗಿದೆ’ ಎಂದು ಸೆನೆಟ್ ಸದಸ್ಯ ಬಿಲ್ ಹ್ಯಾಗರ್ಟಿ ಹೇಳಿದ್ದಾರೆ. ಅವರು ಇನ್ನೊಬ್ಬ ಸೆನೆಟ್ ಸದಸ್ಯ ಜೆಫ್ ಮರ್ಕ್ಲಿ ಅವರೊಂದಿಗೆ ಸೇರಿ ಸೆನೆಟ್​ನಲ್ಲಿ ಉಭಯಪಕ್ಷಗಳ ಈ ನಿರ್ಣಯ ಮಂಡಿಸಿದ್ದಾರೆ.
‘ಈ ಉಭಯ ಪಕ್ಷಗಳ ನಿರ್ಣಯವು ಅರುಣಾಚಲ ಪ್ರದೇಶವನ್ನು ಭಾರತದ ಅವಿಭಾಜ್ಯ ಅಂಗವೆಂದು ನಿಸ್ಸಂದಿಗ್ಧವಾಗಿ ಗುರುತಿಸಲು ಸೆನೆಟ್​ನ ಬೆಂಬಲವನ್ನು ವ್ಯಕ್ತಪಡಿಸುತ್ತದೆ. ವಾಸ್ತವಿಕ ನಿಯಂತ್ರಣ ರೇಖೆಯ (ಎಲ್​ಎಸಿ) ಉದ್ದಕ್ಕೂ ಯಥಾಸ್ಥಿತಿ ಬದಲಾಯಿಸಲು ಚೀನಾದ ಮಿಲಿಟರಿ ಆಕ್ರಮಣವನ್ನು ಖಂಡಿಸುತ್ತದೆ. ಅಲ್ಲದೆ, ಅಮೆರಿಕ-ಭಾರತ ಕಾರ್ಯತಂತ್ರದ ಪಾಲುದಾರಿಕೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ’ ಎಂದು ಹ್ಯಾಗರ್ಟಿ ಹೇಳಿದ್ದಾರೆ.
ಬೆಂಬಲ-ನೆರವು: ಕಳೆದ ಆರು ವರ್ಷಗಳಲ್ಲಿ ಎಲ್​ಎಸಿ ಉದ್ದಕ್ಕೂ ಪೂರ್ವ ವಲಯದಲ್ಲಿ ಭಾರತ ಮತ್ತು ಚೀನಾ ನಡುವಿನ ಅತಿದೊಡ್ಡ ಘರ್ಷಣೆಯ ನಂತರ ಕೈಗೊಳ್ಳಲಾಗಿರುವ ಈ ನಿರ್ಣಯವು, ಚೀನಾ ಮತ್ತು ಭಾರತದ ರಾಜ್ಯವಾದ ಅರುಣಾಚಲ ಪ್ರದೇಶ ನಡುವಿನ ಅಂತಾರಾಷ್ಟ್ರೀಯ ಗಡಿಯಾಗಿ ಮೆಕ್ ಮಹೊನ್ ರೇಖೆಯನ್ನು ಅಮೆರಿಕ ಗುರುತಿಸುತ್ತದೆ ಎಂದು ಪುನರುಚ್ಚರಿಸಿದೆ.
ಅರುಣಾಚಲ ಪ್ರದೇಶವನ್ನು ಭಾರತ ಗಣರಾಜ್ಯದ ಭಾಗವೆಂದು ಅಮೆರಿಕ ಪರಿಗಣಿಸುತ್ತದೆ; ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಭಾಗವಾಗಿ ಅಲ್ಲ ಎಂದು ಈ ನಿರ್ಣಯವು ಸ್ಪಷ್ಟಪಡಿಸುತ್ತದೆ. ಸಮಾನ ಮನಸ್ಕ ಅಂತಾರಾಷ್ಟ್ರೀಯ ಪಾಲುದಾರರೊಂದಿಗೆ ಜತೆಗೂಡಿ ಈ ಪ್ರದೇಶಕ್ಕೆ ಬೆಂಬಲ ಹಾಗೂ ನೆರವನ್ನು ನೀಡಲು ಬದ್ಧತೆ ವ್ಯಕ್ತಪಡಿಸುತ್ತದೆ ಎಂದು ಮರ್ಕ್ಲಿ ಹೇಳಿದರು.
ಚೀನಾ ಪ್ರಚೋದನೆಗಳಿಗೆ ಖಂಡನೆ:ಎಲ್​ಎಸಿ ಉದ್ದಕ್ಕೂ ಯಥಾಸ್ಥಿತಿ ಬದಲಾಯಿಸಲು ಚೀನಾದ ಮಿಲಿಟರಿ ಬಲ ಬಳಕೆ, ವಿವಾದಾತ್ಮಕ ಪ್ರದೇಶಗಳಲ್ಲಿ ಹಳ್ಳಿಗಳ ನಿರ್ವಣ, ಅರುಣಾಚಲ ಪ್ರದೇಶದ ವೈಶಿಷ್ಟ್ಯಗಳಿರುವ ನಗರಗಳಿಗೆ ಮ್ಯಾಂಡರಿನ್ ಭಾಷೆಯ ಹೆಸರುಗಳೊಂದಿಗೆ ನಕ್ಷೆಗಳ ಪ್ರಕಟಣೆ ಮತ್ತು ಭೂತಾನ್​ನಲ್ಲಿ ಚೀನಾದ ಪ್ರಾದೇಶಿಕ ಹಕ್ಕುಗಳ ವಿಸ್ತರಣೆ ಸೇರಿದಂತೆ ಚೀನಾದ ಹೆಚ್ಚುತ್ತಿರುವ ಪ್ರಚೋದನೆಗಳನ್ನು ಕೂಡ ಈ ನಿರ್ಣಯವು ಖಂಡಿಸಿದೆ.
ಭಾರತದ ಕ್ರಮಕ್ಕೆ ಶ್ಲಾಘನೆ:ಚೀನಾ ಆಕ್ರಮಣಶೀಲತೆ ಮತ್ತು ಭದ್ರತಾ ಬೆದರಿಕೆಗಳ ವಿರುದ್ಧ ರಕ್ಷಿಸಿಕೊಳ್ಳಲು ಭಾರತ ಸರ್ಕಾರ ತೆಗೆದುಕೊಂಡಿರುವ ಕ್ರಮಗಳನ್ನು ಈ ನಿರ್ಣಯ ಶ್ಲಾಘಿಸಿದೆ. ಭಾರತದ ಈ ಕ್ರಮಗಳಲ್ಲಿ ದೂರಸಂಪರ್ಕ ಮೂಲಸೌಕರ್ಯ ಬಲಪಡಿಸುವುದು ಹಾಗೂ ಸಾರ್ವಜನಿಕ ಆರೋಗ್ಯ ಮತ್ತು ಇತರ ಕ್ಷೇತ್ರಗಳಲ್ಲಿ ತೈವಾನ್​ನೊಂದಿಗೆ ಸಹಕಾರವನ್ನು ವಿಸ್ತರಿಸುವುದು ಸೇರಿವೆ. ಈ ನಿರ್ಣಯವು ಅಮೆರಿಕ-ಭಾರತದ ದ್ವಿಪಕ್ಷೀಯ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಸಹಾಯವಾಗಲಿದೆ. ಅಲ್ಲದೆ, ಕ್ವಾಡ್ (ಭಾರತ, ಅಮೆರಿಕ, ಜಪಾನ್, ಆಸ್ಟ್ರೇಲಿಯಾ ಸೇರಿ 2017ರಲ್ಲಿ ರಚಿಸಿಕೊಂಡ ಒಕ್ಕೂಟ)ಮತ್ತು ಪೂರ್ವ ಏಷ್ಯಾ ಶೃಂಗ ಮೂಲಕ ಹಾಗೂ ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟದಲ್ಲಿನ ನಮ್ಮ ಪಾಲುದಾರರೊಂದಿಗೆ ಜತೆಗೂಡಿ ಭಾರತದೊಂದಿಗೆ ನಮ್ಮ ಬಹುಪಕ್ಷೀಯ ಸಹಕಾರವನ್ನು ಉತ್ತೇಜಿಸಲಾಗುವುದು ಎಂದೂ ಅಮೆರಿಕದ ಸೆನೆಟ್ ನಿರ್ಣಯದಲ್ಲಿ ಹೇಳಲಾಗಿದೆ.
ಇದನ್ನೂ ಓದಿ:ಒಕ್ಕಲಿಗರಿಗೆ ಮೀಸಲಾತಿ ನೀಡದಿದ್ದಲ್ಲಿ ಹೋರಾಟ: ಶ್ರೀ ನಂಜಾವಧೂತ ಸ್ವಾಮೀಜಿ ಎಚ್ಚರಿಕೆ
ತವಾಂಗ್ ಮೇಲೆ ಡ್ರ್ಯಾಗನ್ ಕಣ್ಣು:ಮೆಕ್ ಮಹೊನ್ ರೇಖೆಯು ಭಾರತ ಮತ್ತು ಚೀನಾ ನಡುವಿನ ಸ್ಪಷ್ಟವಾದ ಗಡಿಯನ್ನು ವ್ಯಾಖ್ಯಾನಿಸುತ್ತದೆ. ಈ ರೇಖೆಯನ್ನು ಭಾರತದಲ್ಲಿ ಬ್ರಿಟಿಷ್ ಸರ್ಕಾರದ ಆಡಳಿತವಿದ್ದ ಸಂದರ್ಭದಲ್ಲಿ ಆಗಿನ ವಿದೇಶಾಂಗ ಕಾರ್ಯದರ್ಶಿ ಸರ್ ಹೆನ್ರಿ ಮೆಕ್ ಮಹೊನ್ ನಿರ್ಧರಿಸಿದ್ದರಿಂದ ಅವರ ಹೆಸರನ್ನೇ ಇಡಲಾಗಿದೆ. ಶಿಮ್ಲಾ ಒಪ್ಪಂದದ ಅನುಸಾರ 1914ರಲ್ಲಿ ಟಿಬೆಟ್ ಮತ್ತು ಬ್ರಿಟನ್ ನಡುವೆ ಮಾತುಕತೆ ನಡೆಸಿ 890 ಕಿಲೋಮೀಟರ್ ಉದ್ದದ ಗಡಿ ರೇಖೆ ನಿರ್ಧರಿಸಲಾಗಿತ್ತು. ಈ ಒಪ್ಪಂದದ ಅನುಸಾರ ಅರುಣಾಚಲ ಪ್ರದೇಶದ ತವಾಂಗ್ ಮತ್ತು ಟಿಬೆಟ್​ನ ದಕ್ಷಿಣ ಭಾಗವನ್ನು ಭಾರತದ ಭಾಗವೆಂದು ಪರಿಗಣಿಸಲಾಯಿತು. ಟಿಬೆಟಿಯನ್ನರು ಸಹ ಇದನ್ನು ಒಪ್ಪಿಕೊಂಡರು. ನಂತರ 1950ರಲ್ಲಿ ಟಿಬೆಟನ್ನು ಚೀನಾ ಆಕ್ರಮಿಸಿತು. ಶಿಮ್ಲಾ ಒಪ್ಪಂದದಲ್ಲಿ ತಾನು ಪಾಲ್ಗೊಂಡಿಲ್ಲವಾದ್ದರಿಂದ ಮೆಕ್ ಮಹೊನ್ ಗಡಿರೇಖೆಯನ್ನು ಒಪ್ಪುವುದಿಲ್ಲ; ತವಾಂಗ್ ಭಾಗವು ದಕ್ಷಿಣ ಟಿಬೆಟ್ ಆಗಿದ್ದು, ಅದು ತನಗೆ ಸೇರಬೇಕು ಎಂದು ಚೀನಾ ವಾದಿಸುತ್ತದೆ. ಆದರೆ, ಶಿಮ್ಲಾ ಒಪ್ಪಂದ ಏರ್ಪಟ್ಟಾಗ ಟಿಬೆಟ್ ಸ್ವತಂತ್ರ ರಾಷ್ಟ್ರವಾಗಿದ್ದು, ಚೀನಾದ ಆಡಳಿತ ಅಲ್ಲಿರಲಿಲ್ಲ. ಹೀಗಾಗಿ, ಮೆಕ್ ಮಹೊನ್ ರೇಖೆಯೇ ಚೀನಾ-ಭಾರತದ ನಡುವಿನ ಅಧಿಕೃತ ಗಡಿಯಾಗಿದೆ. ಇದೇ ವಾಸ್ತವ ನಿಯಂತ್ರಣ ರೇಖೆ (ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ -ಎಲ್​ಎಸಿ) ಎಂದು ಭಾರತ ಪ್ರತಿಪಾದಿಸುತ್ತದೆ. ಈಗ ಅಮೆರಿಕದ ಸೆನೆಟ್ ಕೈಗೊಂಡಿರುವ ನಿರ್ಣಯವೂ ಭಾರತದ ಪ್ರತಿಪಾದನೆಗೆ ಮನ್ನಣೆ ನೀಡಿದೆ.
ಮೂಲಸೌಕರ್ಯ ವೃದ್ಧಿಗೆ ಪೈಪೋಟಿ:ಭಾರತ-ಚೀನಾ ಗಡಿಯಲ್ಲಿ ಮೆಕ್ ಮಹೊನ್ ರೇಖೆಗೆ ಹೊಂದಿಕೊಂಡಂತೆ 2,000-ಕಿಮೀ ಉದ್ದದ ರಸ್ತೆ ನಿರ್ವಿುಸುವ ಫ್ರಾಂಟಿಯರ್ ಹೈವೇ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಇದಕ್ಕೆ ಚೀನಾ ಆಕ್ಷೇಪ ವ್ಯಕ್ತಪಡಿಸಿದೆ. ಈ ರಸ್ತೆಯು ಭೂತಾನ್ ದೇಶದ ಪಕ್ಕದಲ್ಲಿರುವ ಅರುಣಾಚಲ ಪ್ರದೇಶದ ಮಾಗೊದಿಂದ ಆರಂಭಗೊಂಡು ತವಾಂಗ್, ಅಪ್ಪರ್ ಸುಬಾನ್ಸಿರಿ, ಟ್ಯೂಟಿಂಗ್, ಮೆಚುಕಾ, ಅಪ್ಪರ್ ಸಿಯಾಂಗ್, ದೇಬಾಂಗ್ ಕಣಿವೆ, ದೇಸಾಲಿ, ಚಗ್ಲಗಾಮ್ ಕಿಬಿತು,ಡಾಂಗ್ ಮೂಲಕ ಹಾದು ಮ್ಯಾನ್ಮಾರ್ ದೇಶದ ಗಡಿ ಬಳಿಯ ವಿಜಯನಗರದಲ್ಲಿ ಕೊನೆಗೊಳ್ಳುತ್ತದೆ. ಇದರೊಂದಿಗೆ ಈಗಾಗಲೇ ಇರುವ ಎರಡು ಹೆದ್ದಾರಿಗಳ ನಡುವೆ ಅಂತರ್ ಸಂಪರ್ಕ ಕೂಡ ಕಲ್ಪಿಸಲಾಗುತ್ತಿದೆ. ದುರ್ಗಮ ಪ್ರದೇಶದಲ್ಲಿ ವರ್ಷವಿಡೀ ಸಂಚರಿಸಲು ಸಾಧ್ಯವಾಗುವಂತಹ ಈ ಹೆದ್ದಾರಿಗಳು ತಂಟೆಕೋರ ಚೀನಾದ ವಿರುದ್ಧ ಪಾರಮ್ಯ ಸಾಧಿಸಲು ಭಾರತೀಯ ಸೇನೆಗೆ ರಹದಾರಿಯಾಗಲಿವೆ. ಚೀನಿಯರು ಕೂಡ ತಮ್ಮ ಬದಿಯಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಲು ತ್ವರಿತಗತಿಯಲ್ಲಿ ಕಾಮಗಾರಿಗಳನ್ನು ಕೈಗೊಂಡಿದ್ದಾರೆ.
ಇತ್ತೀಚಿನ ಗಡಿ ಸಂಘರ್ಷಗಳು:ಸಿಕ್ಕಿಂನ ಡೋಕ್ಲಾಂ ಗಡಿ ಪ್ರದೇಶದಲ್ಲಿ 2017ರ ಜೂನ್​ನಲ್ಲಿ ಚೀನಾ ಸೈನಿಕರು ರಸ್ತೆ ನಿರ್ವಿುಸಲು ಮುಂದಾದಾಗ ಭಾರತೀಯ ಸೈನಿಕರು ತಡೆದಿದ್ದರು. 2020ರ ಜೂನ್ 15ರಂದು ಲಡಾಖ್​ನ ಗಲ್ವಾನ್ ಕಣಿವೆಯಲ್ಲಿ ಭಾರತೀಯ ಸೈನಿಕರ ಮೇಲೆ ಚೀನಾ ಸೈನಿಕರು ಹಲ್ಲೆ ನಡೆಸಿದ್ದರು. ಇದರಿಂದಾಗಿ ಭಾರತದ 20 ಸೈನಿಕರು ಸಾವನ್ನಪ್ಪಿದರು. ಅರುಣಾಚಲದ ತವಾಂಗ್ ಬಳಿ ಎಲ್​ಎಸಿ ದಾಟಿ ಭಾರತದ ಪ್ರದೇಶದೊಳಗೆ ನುಗ್ಗಲು ಚೀನಾ ಸೈನಿಕರು ಪ್ರಯತ್ನಿಸಿದ ಘಟನೆ 2022ರ ಡಿಸೆಂಬರ್ 9ರಂದು ನಡೆದಿತ್ತು.
1962ರ ಯುದ್ಧ:ಅಕ್ಸಾಯ್ ಚಿನ್ ಮತ್ತು ಅರುಣಾಚಲ ಪ್ರದೇಶದ ಗಡಿ ಕುರಿತ ವಿವಾದವೇ 1962ರಲ್ಲಿನ ಭಾರತ- ಚೀನಾ ಯುದ್ಧಕ್ಕೆ ಮೂಲ ಕಾರಣ. ಅಕ್ಸಾಯ್ ಚಿನ್ ಪ್ರದೇಶವು ಕಾಶ್ಮೀರಕ್ಕೆ ಸೇರಿದೆ ಎಂದು ಭಾರತ ಪ್ರತಿಪಾದಿಸಿದರೆ, ಚೀನಾವು ತನ್ನ ಕ್ಸಿನ್ಜಿಯಾಂಗ್​ನ ಭಾಗವೆಂದು ಹೇಳುತ್ತದೆ. 1962ರ ಅಕ್ಟೋಬರ್ 20ರಂದು ಲಡಾಖ್​ನ ಅಕ್ಸಾಯ್ ಚಿನ್ ಮತ್ತು ಅರುಣಾಚಲ ಪ್ರದೇಶದ ತವಾಂಗ್ ಪ್ರದೇಶಗಳಲ್ಲಿ ಮೆಕ್ ಮಹೊನ್ ರೇಖೆಗುಂಟ ಚೀನಿಯರು ದಾಳಿಗಳನ್ನು ಆರಂಭಿಸಿದರು. 1962ರಲ್ಲಿ ನವೆಂಬರ್​ನಲ್ಲಿ ಚೀನಾ ಏಕಪಕ್ಷೀಯವಾಗಿ ಕದನವಿರಾಮ ಘೊಷಿಸಿತು. ಏಕೆಂದರೆ, ಆಗ ಭಾರತದ ನೆರವಿಗೆ ಬರಲು ಅಮೆರಿಕ ಸಜ್ಜಾಗಿತ್ತು. ಆದರೆ, ತಾನು ವಶಪಡಿಸಿಕೊಂಡಿದ್ದ ಅರುಣಾಚಲಪ್ರದೇಶದ ಭಾಗದಿಂದ ಚೀನಾ ಹಿಂದೆ ಸರಿದರೂ ಅಕ್ಸಾಯ್ ಚಿನ್ ಭಾಗವನ್ನು ತನ್ನಲ್ಲೇ ಉಳಿಸಿಕೊಂಡಿತು.
ಇಬ್ರಿಗೂ ಒಬ್ನೇ ಪತಿ, ಶಿಫ್ಟ್​ನಲ್ಲಿ ಸಂಸಾರ: ವಾರದಲ್ಲಿ 3 ದಿನ ಆ ಪತ್ನಿಗೆ, ಇನ್ನು 3 ದಿನ ಈ ಪತ್ನಿಗೆ; ಭಾನುವಾರ ಮಾತ್ರ ಗಂಡ ಫ್ರೀ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 4 =
Remember me
