ವಾಷಿಂಗ್ಟನ್:ಸಾಮಾಜಿಕ ಜಾಲತಾಣ ಫೇಸ್​ಬುಕ್ ವಿರುದ್ಧ ಅಮೆರಿಕದಲ್ಲಿ ಹಲವು ಮೊಕದ್ದಮೆಗಳು ದಾಖಲಾಗಿದ್ದು, ಕಂಪನಿಗೆ ಆತಂಕ ಎದುರಾಗಿದೆ. ಫೇಸ್​ಬುಕ್ ಈ ಹಿಂದೆ ಖರೀದಿಸಿದ್ದ ಇನ್​ಸ್ಟಾಗ್ರಾಂ ಮತ್ತು ವಾಟ್ಸ್ ಆ್ಯಪ್​ಗಳನ್ನು ಮಾರಾಟ ಮಾಡಬೇಕಾದ ಸಂದರ್ಭ ಎದುರಾಗುವ ಸಾಧ್ಯತೆ ಇದೆ. ಹೀಗಾದಲ್ಲಿ ಫೇಸ್​ಬುಕ್ ಮುಖ್ಯಸ್ಥ ಮಾರ್ಕ್ ಜುಗರ್​ಬರ್ಗ್​ರ ಸಾಮ್ರಾಜ್ಯ ಕುಸಿದು ಬೀಳಲಿದೆ. ಫೆಡರಲ್ ವಾಣಿಜ್ಯ ಆಯೋಗ (ಎಫ್​ಟಿಸಿ) ಮತ್ತು 46 ರಾಜ್ಯಗಳು ಎರಡು ಪ್ರತ್ಯೇಕ ಮೊಕದ್ದಮೆ ಗಳನ್ನು ಹೂಡಿವೆ. ಒಂದು ಪ್ರಕರಣ ಎಫ್​ಟಿಸಿಯದ್ದಾದರೆ ಇನ್ನೊಂದನ್ನು 48 ರಾಜ್ಯಗಳ ಅಟಾರ್ನಿ ಜನರಲ್​ಗಳು ಒಟ್ಟಾಗಿ ಹೂಡಿದ್ದಾರೆ.
ಆರೋಪ ಏನು?:ಇನ್​ಸ್ಟಾಗ್ರಾಂ ಮತ್ತು ವಾಟ್ಸ್​ಆ್ಯಪ್​ ಫೇಸ್​ಬುಕ್ ಖರೀದಿಸಿದ್ದರಲ್ಲಿ ಏಕಸ್ವಾಮ್ಯ ಕಾನೂನಿನ ಉಲ್ಲಂಘನೆಯಾಗಿದೆ ಎಂಬುದು ಎರಡೂ ಮೊಕದ್ದಮೆಗಳ ಆರೋಪದ ಸಾರಾಂಶವಾಗಿದೆ. ಫೇಸ್​ಬುಕ್ ವಿಶ್ವಾಸದ್ರೋಹ ಎಸಗಿದೆ. ಸ್ಪರ್ಧೆಯನ್ನು ಇಲ್ಲವಾಗಿಸಲು ಏಕಸ್ವಾಮ್ಯ ಅಧಿಕಾರವನ್ನು ಫೇಸ್​ಬುಕ್ ದುರುಪಯೋಗಪಡಿಸಿಕೊಂಡಿದೆ ಎನ್ನಲಾಗಿದೆ. ಎರಡೂ ಕಂಪನಿಗಳನ್ನು ಫೇಸ್​ಬುಕ್ ಖರೀದಿಸಿದ್ದಕ್ಕೆ ಕಾನೂನಾತ್ಮಕ ಅನುಮೋದನೆ ಪಡೆಯಲಾಗಿತ್ತು. ಆದರೆ, ಈ ವ್ಯವಹಾರಗಳನ್ನು ಇತ್ತೀಚೆಗೆ ಹೆಚ್ಚಿನ ಪರಿಶೀಲನೆಗೆ ಒಳಪಡಿಸಿದಾಗ ಫೇಸ್​ಬುಕ್ ಸಮಸ್ಯೆಯ ಸುಳಿಗೆ ಸಿಕ್ಕಿ ಹಾಕಿಕೊಂಡಿದೆ.
ಫೇಸ್​ಬುಕ್ ತೀವ್ರ ಅಸಮಾಧಾನ:ದೂರಿನ ಕುರಿತು ಫೇಸ್​ಬುಕ್ ಅಸಮಾಧಾನ ವ್ಯಕ್ತಪಡಿಸಿದೆ. ವ್ಯವಹಾರಕ್ಕೆ ಎಫ್​ಟಿಸಿ ಅನುಮೋದನೆ ನೀಡಿದ ಹಲವು ವರ್ಷಗಳ ನಂತರ ಸರ್ಕಾರ ಮರುಪರಿಶೀಲನೆಗೆ ಮುಂದಾಗಿದೆ. ಒಟ್ಟಾರೆಯಾಗಿ ವ್ಯಾಪಾರ ವ್ಯವಹಾರದ ಮೇಲೆ ಮತ್ತು ಪ್ರತಿದಿನ ನಮ್ಮ ಉತ್ಪನ್ನಗಳನ್ನು ಆಯ್ಕೆ ಮಾಡುವ ಗ್ರಾಹಕರ ಮೇಲೆ ಬೀರಬಹುದಾದ ಪರಿಣಾಮವನ್ನು ಪರಿಗಣಿಸದೆ ಅದು ಹೀಗೆ ಮಾಡಲು ಹೊರಟಿದೆ. ಇದೊಂದು ಕೆಟ್ಟ ಉದಾಹರಣೆ ಆಗಲಿದೆ’ ಎಂದು ಕಂಪನಿ ಅಭಿಪ್ರಾಯಪಟ್ಟಿದೆ.
ನಾವು ಕಷ್ಟಪಟ್ಟು ಮೇಲೆ ಬಂದಿದ್ದೇವೆ. ನ್ಯಾಯಸಮ್ಮತವಾಗಿ ಸ್ಪರ್ಧಿಸಿದ್ದೇವೆ. ಆ ಕುರಿತು ನನಗೆ ಹೆಮ್ಮೆ ಇದೆ.
|ಮಾರ್ಕ್ ಜುಕರ್​ಬರ್ಗ್ಫೇಸ್​ಬುಕ್ ಸಿಇಒ
2019ರಲ್ಲಿ ತನಿಖೆ ಆರಂಭ:ಅಟಾರ್ನಿ ಜನರಲ್​ಗಳ ಒಕ್ಕೂಟ 2019ರ ಸೆಪ್ಟೆಂಬರ್​ನಲ್ಲಿ ಫೇಸ್​ಬುಕ್ ವಿರುದ್ಧ ತನಿಖೆ ಆರಂಭಿಸಿತ್ತು. ಎಫ್​ಟಿಸಿ ನಂತರ ಸಾಥ್ ನೀಡಿತ್ತು. ನ್ಯೂಯಾಕ್ ಅಟಾರ್ನಿ ಜನರಲ್ ಲೆಟಿಟಿಯಾ ಒಕ್ಕೂಟದ ಮುಖ್ಯಸ್ಥರು. 46 ರಾಜ್ಯಗಳಲ್ಲದೆ ವಾಷಿಂಗ್ಟನ್ ಡಿಸಿ ಮತ್ತು ಗುವಾನ ಅಟಾರ್ನಿ ಜನರಲ್​ಗಳು ದೂರಿಗೆ ಸಹಿ ಹಾಕಿದ್ದಾರೆ. ಅಲಬಾಮಾ, ಜಾರ್ಜಿಯಾ, ದಕ್ಷಿಣ ಕರೊಲಿನಾ ಮತ್ತು ದಕ್ಷಿಣ ಡಕೋಟಾದ ಅಟಾರ್ನಿ ಜನರಲ್​ಗಳು ಮಾತ್ರ ದೂರಿನಲ್ಲಿ ಭಾಗಿಯಾಗಿಲ್ಲ.
ದೂರುದಾರರ ಬೇಡಿಕೆ:ಇನ್​ಸ್ಟಾಗ್ರಾಂ ಮತ್ತು ವಾಟ್ಸ್​ಆಪ್ ವೇದಿಕೆಗಳನ್ನು ಫೇಸ್​ಬುಕ್​ನಿಂದ ಬೇರ್ಪಡಿಸಬೇಕು. ಭವಿಷ್ಯದಲ್ಲೂ ಯಾವುದೇ ಸಂಸ್ಥೆಯನ್ನು ವಿಲೀನಗೊಳಿಸಿಕೊಳ್ಳಲು ಅಥವಾ ಖರೀದಿಸಲು ಸರ್ಕಾರದ ಅನುಮತಿ ಪಡೆಯುವಂತೆ ಷರತ್ತು ವಿಧಿಸಬೇಕು ಎಂದು ದೂರುದಾರರು ಕೋರಿದ್ದಾರೆ.

ಪ್ರತಿಸ್ಪರ್ಧಿಗಳನ್ನು ತಟಸ್ಥಗೊಳಿಸುವ ತಂತ್ರ:ಸಾಮಾಜಿಕ ಮಾಧ್ಯಮ ಮಾರುಕಟ್ಟೆಯಲ್ಲಿ ಫೇಸ್​ಬುಕ್ ಹೊಂದಿದ್ದ ಪಾರಮ್ಯಕ್ಕೆ ಸವಾಲೆಸೆಯುವ ಪ್ರತಿಸ್ಪರ್ಧಿಗಳನ್ನು ತಟಸ್ಥಗೊಳಿಸುವ ತಂತ್ರವನ್ನು ಫೇಸ್​ಬುಕ್ ಬಳಸಿತ್ತು ಎಂದು ಆರೋಪಿಸಲಾಗಿದೆ. ಸ್ಪರ್ಧೆಯನ್ನು ಇಲ್ಲವಾಗಿಸಲು ಇನ್​ಸ್ಟಾಗ್ರಾಂ, ವಾಟ್ಸ್​ಆ್ಯಪ್​ಗಳನ್ನು ಖರೀದಿಸಿತ್ತು. ಸಾಫ್ಟ್​ವೇರ್ ಅಭಿವೃದ್ಧಿದಾರರ ಮೇಲೆ ‘ಸ್ಪರ್ಧೆ-ವಿರೋಧಿ ಸನ್ನಿವೇಶಗಳನ್ನು ಹೇರಿತ್ತು’ ಎಂದು ದೂರುದಾರರು ಆಪಾದಿಸಿದ್ದಾರೆ. 2012ರಲ್ಲಿ 715 ಮಿಲಿಯನ್ ಡಾಲರ್​ಗೆ ಇನ್​ಸ್ಟಾಗ್ರಾಂ ಮತ್ತು 2014ರಲ್ಲಿ 22 ಬಿಲಿಯನ್ ಡಾಲರ್​ಗೆ ವಾಟ್ಸ್​ಆ್ಯಪ್​ಅನ್ನು ಫೇಸ್​ಬುಕ್ ಖರೀದಿಸಿತ್ತು.
ಆದಾಯದ ಪ್ರಮುಖ ಮೂಲ:ಫೇಸ್​ಬುಕ್ ಕಂಪನಿಯ ಬಹಳಷ್ಟು ಆದಾಯ ಇನ್​ಸ್ಟಾಗ್ರಾಂನಿಂದಲೇ ಬರುತ್ತಿದೆ. ಫೇಸ್​ಬುಕ್​ನ ಡಿಜಿಟಲ್ ವ್ಯವಹಾರ ವಾಟ್ಸ್​ ಆ್ಯಪ್​ಅನ್ನು ಅವಲಂಬಿಸಿದೆ. ಹೀಗಾಗಿ, ಬೆನ್ನೆಲುಬಿನಂತಿರುವ ಈ ಎರಡೂ ವೇದಿಕೆಗಳು ಕೈ ತಪ್ಪಿದರೆ ಮಾರ್ಕ್ ಜುಕರ್​ಬರ್ಗ್ ಕಟ್ಟಿರುವ ತಂತ್ರಜ್ಞಾನ ಸಾಮ್ರಾಜ್ಯ ಕುಸಿದು ಬೀಳಲಿದೆ. 2020ರಲ್ಲಿ ಫೇಸ್​ಬುಕ್ ಷೇರು ಮೌಲ್ಯ ಶೇಕಡ 35ಕ್ಕಿಂತ ಅಧಿಕವಾಗಿ ಏರಿಕೆಯಾಗಿತ್ತು. ಆದರೆ, ಕಾನೂನು ಸಮರ ಆರಂಭವಾದ ಬುಧವಾರ ಶೇಕಡ 4ರಷ್ಟು ಕುಸಿತವಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + 3 =
Remember me
