ನವದೆಹಲಿ:ಕೃಷಿಗೆ ಸಂಬಂಧಿಸಿದ ಮೂರು ನೂತನ ಕಾಯ್ದೆಗಳ ಕುರಿತಂತೆ ಕೇಂದ್ರ ಸರ್ಕಾರ ನೀಡಿದ್ದ ಏಳು ಅಂಶದ ಲಿಖಿತ ಭರವಸೆಯನ್ನು ತಿರಸ್ಕರಿಸಿರುವ ರೈತರು ಡಿ.14ರಿಂದ ಪ್ರತಿಭಟನೆಯನ್ನು ರಾಷ್ಟ್ರವ್ಯಾಪಿ ವಿಸ್ತರಿಸುವ ನಿರ್ಧಾರ ಕೈಗೊಂಡಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಜತೆ ಬುಧವಾರ ನಡೆಯಬೇಕಿದ್ದ 6ನೇ ಸುತ್ತಿನ ಮಾತುಕತೆ ರದ್ದಾಗಿರುವುದರಿಂದ ಬಿಕ್ಕಟ್ಟು ತಾರಕಕ್ಕೇರಿದಂತಾಗಿದೆ.
30ಕ್ಕೂ ಹೆಚ್ಚು ರೈತ ಸಂಘಟನೆಗಳ ಪ್ರತಿನಿಧಿಗಳು ಮತ್ತು ಕೇಂದ್ರ ಸರ್ಕಾರದ ಮಧ್ಯೆ ಈ ಹಿಂದೆ ನಡೆದ ಐದು ಸಭೆಗಳಲ್ಲಿ ಯಾವುದೇ ನಿರ್ಧಾರ ಹೊರಬಿದ್ದಿರಲಿಲ್ಲ. ಹೀಗಾಗಿ ಬುಧವಾರದ ಮಾತುಕತೆ ಮಹತ್ವ ಪಡೆದಿತ್ತು. ಭಾರತ್ ಬಂದ್ ಬಳಿಕ ಮಂಗಳವಾರ ರಾತ್ರಿ 13 ರೈತ ಮುಖಂಡರ ಜತೆ ಮಾತುಕತೆ ನಡೆಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಷಾ ಕಾಯ್ದೆ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದರು. ಕಾಯ್ದೆಯಲ್ಲಿನ ಬದಲಾವಣೆಗೆ ಸರ್ಕಾರ ಸಿದ್ಧವಿದೆ ಎಂದು ಘೋಷಿಸಿದ ಕರಡಿನ ಪ್ರಸ್ತಾವನೆ ಸಲ್ಲಿಸುವ ವಿಚಾರ ಪ್ರಕಟಿಸಿದ್ದರು. ಬುಧವಾರ ಆಂತರಿಕ ಸಭೆ ನಡೆಸಿದ ರೈತರು ತಿದ್ದುಪಡಿ ಬೇಡವೇ ಬೇಡ, ಕಾಯ್ದೆ ರದ್ದು ಮಾಡುವವರೆಗೂ ಪ್ರತಿಭಟನೆ ಹಿಂಪಡೆಯಬಾರದೆಂಬ ತೀರ್ವನಕ್ಕೆ ಬಂದಿದ್ದಾರೆ. ದೆಹಲಿ ಮತ್ತು ಸಿಂಘು ಮತ್ತು ಟಿಕ್ರಿ ಗಡಿಯಲ್ಲಿ ರೈತರು 14 ದಿನಗಳಿಂದ ಪ್ರತಿಭಟನೆ ನಡೆಸಿದ್ದು, ಚಳಿ ಮತ್ತು ಅನಾರೋಗ್ಯದ ಕಾರಣ ಈವರೆಗೆ ಐವರು ರೈತರು ಸಾವನ್ನಪ್ಪಿದ್ದಾರೆ. ಈ ಮಧ್ಯೆ, ಪ್ರತಿಭಟನಾ ಸ್ಥಳಕ್ಕೆ ಬರುತ್ತಿರುವ ರೈತರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.
ಲಿಖಿತ ಭರವಸೆಯಲ್ಲೇನಿತ್ತು?
*ಕನಿಷ್ಠ ಬೆಂಬಲ ಬೆಲೆ (ಎಂಎಸ್​ಪಿ) ಮುಂದುವರಿಯಲಿದೆ*ವಿವಾದಾತ್ಮಕ ನಿಯಮ ಸಂಬಂಧ ರೈತರು ಉಪವಿಭಾಗಾಧಿಕಾರಿ ಕೋರ್ಟ್ ಹೊರತಾಗಿ ಸಿವಿಲ್ ಕೋರ್ಟ್ ಮೊರೆ ಹೋಗಲು ಅವಕಾಶ*ರೈತರು ಆಕ್ಷೇಪಿಸಿರುವ ವಿದ್ಯುಚ್ಛಕ್ತಿ ತಿದ್ದುಪಡಿ ಮಸೂದೆಯನ್ನು ಕೈಬಿಡಲಾಗುವುದು*ಕೃಷಿ ಜಮೀನು ಕಾರ್ಪೆರೇಟ್ ಕಂಪನಿಗಳ ಪಾಲಾಗುವುದಿಲ್ಲ. ಗುತ್ತಿಗೆ ಪಡೆಯುವವರು ಕೃಷಿ ಭೂಮಿ ಮೇಲೆ ಸಾಲ ಪಡೆಯುವಂತಿಲ್ಲ*ಎಪಿಎಂಸಿಯಲ್ಲಿ ಹೊರಗೆ ಕಾರ್ಯನಿರ್ವಹಿಸುವ ವರ್ತಕರನ್ನೂ ರಾಜ್ಯಸರ್ಕಾರಗಳು ನೋಂದಣಿ ವ್ಯಾಪ್ತಿಗೆ ತರಬಹುದು ಮತ್ತು ಎಂಪಿಎಂಸಿ ತೆರಿಗೆ ಮತ್ತು ಹೆಚ್ಚುವರಿ ತೆರಿಗೆಯನ್ನು ಇಂಥ ವರ್ತಕರಿಂದ ವಸೂಲು ಮಾಡಬಹುದು* ರೈತರ ಶೋಷಣೆ ತಪ್ಪಿಸಲು ಸ್ಥಳೀಯವಾಗಿ ಅಗತ್ಯವೆನ್ನುವ ನಿಯಮವನ್ನು ರಾಜ್ಯ ಸರ್ಕಾರಗಳು ರೂಪಿಸಬಹುದು* ರೈತರು ಕಳವಳ ವ್ಯಕ್ತಪಡಿಸಿರುವ ಕೆಲವು ಅಂಶಗಳನ್ನು ತಿದ್ದುಪಡಿ ಮಾಡಲಾಗುವುದು.
ಕೇಂದ್ರ ಸರ್ಕಾರ ಸ್ಪಷ್ಟನೆದೆಹಲಿ ಎನ್​ಸಿಆರ್​ನಲ್ಲಿ ವಾಯುಮಾಲಿನ್ಯ ತಡೆಯಲು ದೊಡ್ಡ ಮೊತ್ತದ ದಂಡ ವಿಧಿಸಲು ಜಾರಿಗೆ ತಂದಿರುವ ಸುಗ್ರೀವಾಜ್ಞೆ ರದ್ದುಮಾಡಬೇಕು ಎಂಬ ರೈತರ ಬೇಡಿಕೆಗೆ ಸ್ಪಷ್ಟನೆ ನೀಡಿರುವ ಸರ್ಕಾರ, ಕೂಳೆ ಸುಡುವುದನ್ನು ತಪ್ಪಿಸಲು ಸೂಕ್ತ ಮಾಗೋಪಾಯ ಹುಡುಕಲಾಗುವುದು ಎಂದಿದೆ. ರೈತರ ಬೇಡಿಕೆಗಳ ಬಗ್ಗೆ ಸರ್ಕಾರ ಮುಕ್ತವಾಗಿ ಮತ್ತು ಹೃತ್ಪೂರ್ವಕವಾಗಿ ಸ್ಪಂದಿಸುತ್ತದೆ. ಆದ್ದರಿಂದ ಪ್ರತಿಭಟನೆಯನ್ನು ಕೈಬಿಡಬೇಕು ಎಂದು ಕೃಷಿ ಸಚಿವಾಲಯದ ಜಂಟಿ ಕಾರ್ಯದರ್ಶಿ ವಿವೇಕ್ ಅಗರವಾಲ್ ಮೂಲಕ ರೈತರ 13 ಸಂಘಟನೆಗಳಿಗೆ ಕಳುಹಿಸಿರುವ ಪ್ರಸ್ತಾವನೆಯಲ್ಲಿ ಸರ್ಕಾರ ಹೇಳಿದೆ. ಈ ಪ್ರಸ್ತಾವನೆಯನ್ನು ಸಿಂಘು ಗಡಿಯ ಧರಣಿ ಸ್ಥಳದಲ್ಲಿ ಓದಿದ ರೈತ ಮುಖಂಡರು, ತಿರಸ್ಕರಿಸುವ ಒಕ್ಕೊರಲ ತೀರ್ಮಾನ ಕೈಗೊಂಡರು.
ರಾಷ್ಟ್ರಪತಿ ಭೇಟಿರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳ ಐವರು ನಾಯಕರ ನಿಯೋಗ ರಾಷ್ಟ್ರಪತಿ ರಾಮನಾಥ ಕೋವಿಂದ ಅವರನ್ನು ಬುಧವಾರ ಸಂಜೆ ಭೇಟಿಯಾಗಿತ್ತು. ವಿವಾದಾತ್ಮಕ ಕಾಯ್ದೆ ಹಿಂಪಡೆಯುವಂತೆ ಸರ್ಕಾರಕ್ಕೆ ಸೂಚಿಸಬೇಕೆಂದು ನಿಯೋಗ ಮನವಿ ಮಾಡಿಕೊಂಡಿತು. ನಿಯೋಗದಲ್ಲಿ ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ.ರಾಜಾ, ಡಿಎಂಕೆ ನಾಯಕ ಟಿಕೆಎಸ್ ಇಳಂಗೋವನ್ ಇದ್ದರು.
ಚಳಿಗೆ ರೈತ ಸಾವುಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ 32 ವರ್ಷದ ಯುವ ರೈತನೋರ್ವ ಮಂಗಳವಾರ ಸಾವನ್ನಪ್ಪಿದ್ದಾರೆ. ಎರಡು ವಾರದಿಂದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಹರಿಯಾಣದ ಸೋನಿಪಟ್ ಮೂಲದ ಅಜಯ್ ಚಳಿಯ ಕಾರಣ ಅಸುನೀಗಿದ್ದಾರೆ. ವೃದ್ಧ ಪಾಲಕರು, ಪತ್ನಿ ಮತ್ತು ಮೂವರು ಮಕ್ಕಳನ್ನು ಅವರು ಅಗಲಿದ್ದಾರೆ.
ಪ್ರಶಸ್ತಿ ತೊರೆದ ವಿಜ್ಞಾನಿಪ್ರಶಸ್ತಿ ವಿತರಣಾ ವೇದಿಕೆಯಲ್ಲೇ ಅದನ್ನು ತಿರಸ್ಕರಿಸಿದ ಕೃಷಿ ವಿಜ್ಞಾನಿ ವರಿಂದರ್​ಪಾಲ್ ಸಿಂಗ್ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ. ಸಸ್ಯ ಪೋಷಣೆ ವಿಷಯದಲ್ಲಿನ ಅಧ್ಯಯನಕ್ಕೆ ಅವರನ್ನು ಭಾರತೀಯ ರಸಗೊಬ್ಬರ ಅಸೋಸಿಯೇಷನ್​ನ ಸ್ವರ್ಣ ಮಹೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. -ಠಿ; 2 ಲಕ್ಷ ನಗದು, ಚಿನ್ನದ ಪದಕ ಮತ್ತು ಸ್ಮರಣಿಕೆಯನ್ನು ಈ ಪ್ರಶಸ್ತಿ ಒಳಗೊಂಡಿತ್ತು. ಈ ಪ್ರಶಸ್ತಿ ಸೇರಿ ವಿವಿಧ ವಿಭಾಗಗಳ 34 ಪ್ರಶಸ್ತಿಗಳನ್ನು ಸೋಮವಾರ ನಡೆದ ಅಸೋಸಿಯೇಷನ್​ನ ವಾರ್ಷಿಕ ಸಮಾರಂಭದಲ್ಲಿ ವಿತರಿಸಲು ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಮನ್​ಸುಖ್ ಲಾಲ್ ಮಾಂಡವಿಯಾ ಆಗಮಿಸಿದ್ದರು. ಪ್ರಶಸ್ತಿ ತಿರಸ್ಕರಿಸುವ ನಿರ್ಧಾರ ಅವರಿಗೆ (ವರಿಂದರ್​ಪಾಲ್ ಸಿಂಗ್) ಇದ್ದ ಮೇಲೆ ಸಮಾರಂಭಕ್ಕೆ ಆಗಮಿಸಿದ್ದು ಸೂಕ್ತವಲ್ಲ ಎಂದು ಅಸೋಸಿಯೇಷನ್​ನ ಮಹಾನಿರ್ದೇಶಕ ಸತೀಶ್ ಚಂದರ್ ಹೇಳಿದ್ದಾರೆ.
https://www.vijayavani.net/flat-purchase-stamp-duty-reduced-bill-passed-in-karnataka-assembly/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + five =
Remember me
